ನಕ್ಷತ್ರಗಳ ಕುರಿತು ನನಗೆ ಮಾಹಿತಿಗಳು ಕಡಿಮೆ. ಆದರೂ ಕೆಲವೊಮ್ಮೆ ಕುತೂಹಲ ಕೆರಳುತ್ತದೆ. ಮಹಾಭಾರತದ ಒಂದು ಸನ್ನಿವೇಶವನ್ನು ನೋಡುವೆ. ವನಪರ್ವದ 230ನೇ ಅಧ್ಯಾಯದಲ್ಲಿ ನಕ್ಷತ್ರಗಳ ಕುರಿತಾಗಿ ವಿವರ ಸಿಗುತ್ತದೆ. ವೇದದಲ್ಲಿ ತೈತ್ತಿರೀಯ ಸಂಹಿತೆ ಮತ್ತು ಕಾಠಕ ಸಂಹಿತೆಯಲ್ಲಿ ಒಂದು ನಕ್ಷತ್ರ ಕಡಿಮೆಯಾಗಿ 27 ನಕ್ಷತ್ರಗಳ ಹೆಸರು ಉಲ್ಲೇಖವಾಗಿದ್ದರೆ ಮೈತ್ರಾಯಣೀ ಸಂಹಿತೆಯಲ್ಲಿ 20ನೇ ನಕ್ಷತ್ರವಾಗಿ ಒಂದು ನಕ್ಷತ್ರ ಕಾಣಿಸಿಕೊಳ್ಳುತ್ತದೆ. ಅದರ ಕುರಿತಾಗಿಯೇ ನೋಡುವೆ.
ಸ್ಕಂದನು ಅಥವಾ ಕಾರ್ತಿಕೇಯನು ವಿವರಿಸುವ ವಿಷಯ ಇದು. ಕಾರ್ತಿಕೇಯನು ದೇವ ಸೇನಾಧಿಪತಿಯಾಗಿದ್ದನ್ನು ಕೇಳಿ ಸಪ್ತರ್ಷಿಗಳ ಪತ್ನಿಯರಲ್ಲಿ ಅರುಂಧತಿಯನ್ನು ಬಿಟ್ಟು ಉಳಿದ ಆರು ಮಂದಿ ಬರುತ್ತಾರೆ. ಸ್ಕಂದನಲ್ಲಿ ಹೇಳಿಕೊಳ್ಳುತ್ತಾರೆ. ನಾವು ನಮ್ಮ ಪತಿಗಳಿಂದ ಪರಿತ್ಯಕ್ತರಾಗಿದ್ದೇವೆ. ಯಾವುದೊಂದು ಕಾರಣವೂ ಇಲ್ಲದೇ ಅವರ ಕೋಪಕ್ಕೆ ತುತ್ತಾಗಿ ನಾವು ಅವರಿಂದ ದೂರ ಆಗಿದ್ದೇವೆ. ನೀನು ಅಗ್ನಿಯಿಂದ ಹುಟ್ಟಿದೆಯೆಂದು ಯಾರೋ ಕೆಲವರು ಸುಳ್ಳುಸುದ್ದಿಯನ್ನು ಹಬ್ಟಿಸಿದ್ದೇ ಇದಕ್ಕೆ ಕಾರಣ. ಅದನ್ನೇ ಸತ್ಯವೆಂದು ನಂಬಿದ ನಮ್ಮ ಪತಿಗಳು ನಮ್ಮನ್ನು ದೂರ ಅಟ್ಟಿಬಿಟ್ಟರು. ಈ ಸಮಯದಲ್ಲಿ ನಮ್ಮನ್ನು ಈ ಅಪವಾದದಿಂದ ಪಾರುಮಾಡಲು ನೀನೇ ಸಮರ್ಥ. ಆದರೆ, ನಮ್ಮ ಮೇಲೆ ಬಂದಿರುವ ಅಪವಾದವನ್ನು ಕಳೆದುಕೊಳ್ಳಲೂ ನಮಗೆ ಇಷ್ಟವಿಲ್ಲ. ಆದರೂ ನಾವು ನಿನ್ನ ಜನ್ಮಕ್ಕೆ ಕಾರಣರಾಗದಿದ್ದರೂ ಈಗ ನಾವು ನಿನ್ನನ್ನು ನಮ್ಮ ಪುತ್ರನೆಂದೇ ಭಾವಿಸುತ್ತೇವೆ. ನಿನ್ನ ಅನುಗ್ರಹದಿಂದ ನಮಗೆ ಸ್ವರ್ಗ ಸಿಗಲಿ. ಈ ವರ ಕೊಟ್ಟು ಮಾತೃಋಣದಿಂದ ನೀನು ವಿಮುಕ್ತನಾಗು. ನಿಮ್ಮ ಇಚ್ಛೆಯಂತೆಯೇ ನೀವು ನನ್ನ ತಾಯಂದಿರಾಗಿರಿ. ನಾನು ನಿಮ್ಮ ಮಗನಾಗುವೆನು. ನೀವು ಯಾವುದನ್ನು ಇಚ್ಛಿಸುವಿರೋ ಅವೆಲ್ಲವೂ ನಿಮಗೆ ಸಿಗುವುದು ಎಂದು ಸ್ಕಂದನು ಹೇಳುತ್ತಾನೆ. ಇಲ್ಲಿ ನಕ್ಷತ್ರಗಳ ಮಾಹಿತಿ ಬರುತ್ತದೆ.
ಅಭಿಜಿತ್ ನಕ್ಷತ್ರವು ರೋಹಿಣಿಯ ತಂಗಿ. ಆದರೆ ರೋಹಿಣಿಗಿಂತಲೂ ಉನ್ನತಸ್ಥಾನ ತನಗೆ ಸಿಗಬೇಕೆಂಬುದು ಅಭಿಜಿತಳ ಆಶಯವಾಗಿತ್ತು. ಅವಳಿಗಾಗಿ ನೀಡಲ್ಪಟ್ಟ ಸ್ಥಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಹಾಗಿರುವಾಗ ಬಹಳ ಬೇಸರಗೊಳ್ಳುತ್ತಾಳೆ. ಆಕೆ ಇದರಿಂದ ಖತಿಗೊಂಡ ಅಭಿಜಿತಳು ನಕ್ಷತ್ರಾಧಿದೇವತೆಯ ಜ್ಯೇಷ್ಠತ್ವವನ್ನು ಪಡೆಯುವ ಸಲುವಾಗಿ ಅಂತರಿಕ್ಷದಿಂದ ಭೂಮಿಗಿಳಿದು ತಪಸ್ಸು ಮಾಡಲು ಕಾಡಿಗೆ ಹೊರಟು ಹೋದಳು. ಈಗ ಅಭಿಜಿತಳ ಸ್ಥಾನ ಖಾಲಿಯಾಗಿದೆ. ಅವಳ ಸ್ಥಾನವನ್ನು ನಾವು ತುಂಬಲೇಬೇಕು. ಈ ವಿಷಯವನ್ನು ನೀನು ಬ್ರಹ್ಮನೊಡನೆ ಚರ್ಚಿಸಬೇಕು. ಧನಿಷ್ಠವೇ ಮೊದಲಾದ ನಕ್ಷತ್ರಗಳನ್ನೊಳಗೊಂಡ ಕಾಲವು ಹಿಂದೆ ಬ್ರಹ್ಮನಿಂದಲೇ ಸೃಷ್ಟಿಯಾಗಿತ್ತು. ಆ ಸಮಯದಲ್ಲಿ ರೋಹಿಣಿನಕ್ಷತ್ರವೂ ಆ ನಕ್ಷತ್ರಮಾಲೆ ಯಲ್ಲಿದ್ದಳು. ನಕ್ಷತ್ರಸಂಖ್ಯೆಯು ಪೂರ್ಣವಾಗಿತ್ತು. ಈಗ ಅಭಿಜಿತಳು ಹೊರಟುಹೋಗಿರುವುದರಿಂದ ಅವಳ ಸ್ಥಾನಕ್ಕೆ ಬೇರೊಂದು ನಕ್ಷತ್ರವನ್ನು ತುಂಬಬೇಕಾಗಿದೆ. ಇಲ್ಲದಿದ್ದರೆ ಕಾಲದಲ್ಲಿ ವ್ಯತ್ಯಯವಾಗುತ್ತದೆ. ಇಂದ್ರನು ಕಾರ್ತಿಕೇಯನಿಗೆ ಹೇಳುತ್ತಾನೆ. ಸ್ಕಂದ ಮತ್ತು ಬ್ರಹ್ಮನ ಮನಸ್ಸಿನ ಆಶಯವನ್ನು ತಿಳಿದ ಕೃತ್ತಿಕಾ ನಕ್ಷತ್ರಾಧಿದೇವತೆಗಳು ತಾರಾಮಂಡಲವನ್ನು ಸೇರಿಕೊಳ್ಳುತ್ತಾರೆ. ಆ ಕೃತ್ತಿಕಾ ನಕ್ಷತ್ರವು ಏಳು ತಲೆಗಳ ಹಾಗೇ ಈಗಲೂ ಪ್ರಕಾಶಿಸುತ್ತಿದೆ. ಮತ್ತು ಆ ನಕ್ಷತ್ರಗಳ ಅಧಿದೇವತೆ ಅಗ್ನಿಯೇ. ಸಪ್ತ ಋಷಯಃ ಪ್ರಥಮಾಂ ಕೃತ್ತಿಕಾನಾಮರುನ್ಧತೀಂ ಎನ್ನುವ ಮಂತ್ರದಂತೆ ಕೃತ್ತಿಕೆಯರು ಆರು ಜನ. ಧ್ರುವ ಅಥವಾ ಧ್ರುವೆ ಅರುಂಧತಿಯು ಏಳನೆಯವಳು. ನವ ವಿವಾಹಿತರಿಗೆ ತೋರಿಸುವ ನಕ್ಷತ್ರ ಎಂದರೆ ವಿವಾಹಿತಳಾದ ವಧುವು ಎಂಟನೆಯವಳಾಗಿ ಅವರಂತೆ ಪತಿವ್ರತೆಯಾಗಲಿ ಎಂದು ಇದರ ಅರ್ಥ. ಪೂರ್ವಾಷಾಢಾ ಮತ್ತು ಉತ್ತರಾಷಾಢಾ ನಕ್ಷತ್ರದ ನಂತರ ಹಾಗೂ ಶ್ರವಣಾ ನಕ್ಷತ್ರಕ್ಕೂ ಮೊದಲು ಈ ಅಭಿಜಿತ್ ನಕ್ಷತ್ರವಿತ್ತು.
ಅಭಿಜಿತ್ ನಕ್ಷತ್ರ ಅತ್ಯಂತ ಬುದ್ಧಿವಂತೆಯಾದ ನಕ್ಷತ್ರ. ಅಭಿಜಿತ್ ಎನ್ನುವ ಸೋಮಯಾಗವೂ ಇದೆ. ಅವುಗಳೆಂದರೆ ಅಭಿಜಿತ್ ಮತ್ತು ವಿಶ್ವಜಿತ್. ಹರಿವಂಶದಲ್ಲಿ ಯಾದವ ರಾಜ ಪುನರ್ವಸುವಿನ ತಂದೆ ಎಂದು ಹೇಳಲಾಗಿದೆ. ದಿನದ ಎಂಟನೇ ಮುಹೂರ್ತವನ್ನು ಅಭಿಜಿತ್ ಎನ್ನಲಾಗುತ್ತದೆ. ಮಧ್ಯಾಹ್ನದ 24 ನಿಮಿಷ ಮೊದಲು ಹಾಗೂ ನಂತರದ 24 ನಿಮಿಷಗಳು ಅಭಿಜಿನ್ ಮುಹೂರ್ತ ಎಂದು ಕರೆಯಲಾಗುತ್ತದೆ.
ಅಪರಾಹ್ನೇ ತು ಸಂಪ್ರಾಪ್ತೇ ಅಭಿಜಿದ್ರೌಹಿಣೋದಯೇ |
ಯದತ್ರ ದೀಯತೇ ಜಂತೋ ತದಕ್ಷಯಮುದಾಹೃತಮ್|| ಎಂದು ಹರಿವಂಶ ಹೇಳುತ್ತದೆ. ಇಪ್ಪತ್ತೆಂಟಿದ್ದ ನಕ್ಷತ್ರದಲ್ಲಿ ಒಂದು ನಕ್ಷತ್ರದ ಸ್ಥಾನ ಪಲ್ಲಟವೋ ಅಥವಾ ಕಣ್ಮರೆಯೋ ಆಗಿದೆ. ಆದರೆ ನಕ್ಷತ್ರಗಳ ಸ್ಥಾನಪಲ್ಲಟ ಅಥವಾ ಕಣ್ಮರೆಯಿಂದ ಕಾಲ ವ್ಯತ್ಯಾಸವಾಗುತ್ತದೆ ಎನ್ನುವುದು ನಕ್ಷತ್ರಗಳಿಗೂ ಕಾಲಕ್ಕೂ ಸಂಬಂಧವನ್ನು ಸೂಚಿಸುತ್ತದೆ. ಅಂದರೆ ನಕ್ಷತ್ರಗಳಿಗೆ ಹೆಸರು ಬಂದದ್ದು ಯಜುರ್ವೇದದಲ್ಲಿಯೇ.
ಇನ್ನು ಅಭಿಜಿನ್ನಾಮ ನಕ್ಷತ್ರಮ್ ಉಪರಿಷ್ಟಾದಷಾಢಾನಾಮ್ ಅಧಸ್ತಾಚ್ಛ್ರೋಣಾಯೈ ದೇವಾಸುರಾಸ್ಸಂಯತ್ತಾ ಆಸನ್| ಎಂದು ತೈತ್ತಿರೀಯಬ್ರಾಹ್ಮಣದಲ್ಲಿದೆ.
ಇತ್ತೀಚಿನ ದಿನಗಳಲ್ಲಿ ವೇಗ(vega) ಎಂಬ ಉಜ್ವಲವಾಗಿ ಹೊಳೆಯುತ್ತಾ ಕಂಗೊಳಿಸುವ ಮಕರ ರಾಶಿಯಲ್ಲಿರುವ ನಕ್ಷತ್ರವನ್ನು ಅಭಿಜಿತ್ ಎಂದು ಹೇಳಲಾಗುತ್ತಿದೆ.
#ಧ್ರುವಾರುಂಧತೀ_ಅಭಿಜಿತ್
ಸದ್ಯೋಜಾತರು
No comments:
Post a Comment
If you have any doubts. please let me know...