November 5, 2021

ಗೋವು ಮತ್ತು ಗೋವಧೆ

ಗೋವನ್ನು ಪ್ರೀತಿಸದವರಾರು ? 

ಗೋವಧೆಯನ್ನು ವಾಜಸನೇಯ ಸಂಹಿತೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಖಂಡಿಸಿದ್ದು ಸಿಗುತ್ತದೆ. ಅಘ್ನಾ ಎಂದು ಕರೆದು(ಅಘ್ನಾ ಎಂದರೆ ಗೋವು ಎಂದು ಹೇಳಬಹುದು ಅಥವಾ ಗೋವನ್ನು ವಧಿಸಿ ಕಾನೂನು ಉಲ್ಲಘಿಂಸಿದವನ್ನೂ ಹೇಳಬಹುದು.) ಗೋವನ್ನು ವಧಿಸುವುದು ನಿಷೇಧ ಎಂದು ಹೇಳಿರುವುದಲ್ಲದೇ, ಗೋವನ್ನು ವಧಿಸಿ ತಿಂದರೆ ಆತ ಸಮಾಜದಲ್ಲಿ ಬಹಿಷ್ಕಾರಕ್ಕೆ ಒಳಗಾಗುತ್ತಾನೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲ ಗೋವಧೆಯು ಮಹಾಪಾಪ ಎಂದು ಹೇಳಿದ್ದಲ್ಲದೇ ವಧಾಕಾರರೇ ಅಸುರರು ಎಂದಿರುವುದು ಸಿಗುತ್ತದೆ. ಇನ್ನು ಅಥರ್ವವೇದದ ೧೨ನೇ ಕಾಂಡದ ನಾಲ್ಕನೇ ಸೂಕ್ತ ಕಶ್ಯಪನು ದೃಷ್ಟಾರನಾಗಿರುವ ವಶಾ ಗೋ ಸೂಕ್ತದಲ್ಲಿ ಗೋವಿನಿಂದ ಸಿಗುವ ವಿವಿಧ ಬಗೆಯ ಔಷಧೀಯ ಉಪಯೋಗವನ್ನು ತಿಳಿಸುತ್ತ, ಗೋವನ್ನು ವಧಿಸುವುದು ಪರಮಪಾಪ ಮತ್ತು ಪವಿತ್ರವಾದ ಪ್ರಾಣಿ ಪೂಜಾರ್ಹವಾದುದು ಎಂದಿರುವುದು ತಿಳಿಯುತ್ತದೆ. ಗೋವಧೆ ಎನ್ನುವುದು ವೇದಮತ ಅಥವಾ ವೈದಿಕ ಧರ್ಮಕ್ಕೆ ಅನುಸರಣೀಯ ಮಾರ್ಗವಲ್ಲ. ವೈದಿಕ ಧರ್ಮವನ್ನೇ ಆಚರಿಸುವ ಹಿಂದು ಧರ್ಮಕ್ಕೂ ನಿಷಿದ್ಧವೇ ಸರಿ. ಹಾಗೆ ನೋಡಿದರೆ, ಪ್ರಪಂಚದ ಎಲ್ಲಾ ದೇಶಗಳಲ್ಲಿಯೂ ಗೋವನ್ನು ಸಾಕುತ್ತಾರೆ. ಎಲ್ಲಾ ಕಡೆಯೂ ಅದರ ವಿವಿಧ ಉಪಯೋಗವನ್ನು ಕಂಡುಕೊಂಡಿದ್ದರೂ ಹಾಲು ಮತ್ತು ತುಪ್ಪ ಬೆಣ್ಣೆಗಳು ಹೆಚ್ಚು ಉಪಯೋಗವಾಗುತ್ತವೆ. 
ಸೂರ್ಯೋದಯದ ಕಾಲದಲ್ಲಿ ಬರುವ ಹೊಂಗಿರಣವನ್ನು ಮತ್ತು ಉಷೋದೇವತೆಯ ರಥವನ್ನು ಗೋವುಗಳು ಎಳೆದೊಯ್ಯುತ್ತವೆ ಎನ್ನುವುದು ಋಗ್ವೇದ ಮತ್ತು ಯಜುರ್ವೇದದಲ್ಲಿ ಉಲ್ಲೇಖಿಸಿದ್ದು ನೋಡಬಹುದು. ಮಳೆಯನ್ನು ಸುರಿಸುವ ಮೋಡವನ್ನೂ ಸಹ ಗೋವುಗಳೆಂದು ಕರೆಯುವುದು ರೂಢಿಯಲ್ಲಿತ್ತು. ಆ ಮೋಡದಿಂದ ಉಂಟಾಗುವ ಸಿಡಿಲು ಕರು ಋಗ್ವೇದದಲ್ಲಿ ಹೇಳಿದೆ. ಮಳೆಯೇ ಆ ಗೋವಿನ ಹಾಲು. ಈ ಗೋವಿಗೆ ಪ್ರಶ್ನಿ ಎಂದು ಸಹ ಕರೆಯಲಾಗಿದೆ. ಈ ಭೂಮಿಯನ್ನೇ ಗೋಮಾತೆ ಎಂದು ನಾವು ನಂಬಿರುವುದೂ ಇದೆ. 

ಕಕ್ಷೀವಾನ್ ಮಹರ್ಷಿಯ ವಂಶದ ಶಬರ ಎನ್ನುವ ಮಹರ್ಷಿ ಗೋವುಗಳಿಗಾಗಿಯೇ ಸೂಕ್ತವನ್ನು ಕಂಡುಕೊಂಡದ್ದು ಋಗ್ವೇದದ ಹತ್ತನೇ ಮಂಡಲದಲ್ಲಿ ಸಿಗುತ್ತದೆ. ಈ ಭೂಮಿಯ ಮೇಲಿರುವ ನಿರುಪದ್ರವಿ ಜೀವಿಗಳಲ್ಲಿ ಗೋವು ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎನ್ನುವುದು ಋಷಿಯ ಅಭಿಪ್ರಾಯ. ಗೋವು ಯಾರಿಗೂ ತೊಂದರೆ ಕೊಡುವುದಿಲ್ಲ ಮತ್ತು ಗೋವಿನ ಕಣಕಣವೂ ಪರೋಪಕಾರಕ್ಕೆ ಮೀಸಲಾಗಿದೆ ಎನ್ನುವುದು ಶಬರನ ಅಭಿಪ್ರಾಯ. ಗೋವಿನ ಹಾಲು, ಮೊಸರು ಮತ್ತು ತುಪ್ಪಗಳು ಅತ್ಯುತ್ಕೃಷ್ಟ ಎನ್ನುತ್ತಾನೆ. ನಾವು ಇಂದು ಪಂಚಾಮೃತಗಳ ಸಾಲಿಗೆ ಸೇರಿಸಿದ್ದೇವೆ. ಪಂಚಗವ್ಯಗಳೂ ಅಷ್ಟೇ ಪವಿತ್ರ ಎನ್ನುವುದು ಋಷಿಯ ಅಭಿಪ್ರಾಯ. ಜೊತೆಗೆ ಈತನೇ ಗೋ ಹತ್ಯೆಯನ್ನು ಅತ್ಯಂತ ಪ್ರಬಲವಾಗಿ ಖಂಡಿಸಿದ್ದಾನೆ. ಇನ್ನು ಶಬರ ಮಹರ್ಷಿ ಗೋವಿನ ಕುರಿತಾಗಿಯೇ ಅಧ್ಯಯನ ಮಾಡಿ ಈ ರೀತಿಯಾಗಿ ಸ್ತುತಿಸಿದ್ದಾನೆ.

ಯಾಃ ಸರೂಪಾ ವಿರೂಪಾ ಏಕರೂಪಾ ಯಾ ಸಾಮಗ್ನಿರಿಷ್ಟ್ಯಾ ನಾಮಾನಿ ವೇದ |
ಯಾ ಅಂಗಿರಸಸ್ತಪಸೇಹ ಚಕ್ರುಸ್ತಾಭ್ಯಃ ಪರ್ಜನ್ಯ ಮಹಿ ಶರ್ಮ ಯಚ್ಛ || 
ಗೋವುಗಳು ಎಲ್ಲವೂ ಒಂದೇ ರೂಪದಲ್ಲಿ ಇರುವುದಿಲ್ಲ. ಅವುಗಳ ಆಕಾರದಲ್ಲಿಯೂ ಸಹ ಸಮಾನತೆ ಇಲ್ಲ. ಕೆಲವು ಚಿಕ್ಕವಾಗಿದ್ದರೆ ಇನ್ನು ಕೆಲವು ದೊಡ್ಡದಾಗಿರುತ್ತವೆ. ಇನ್ನು ಕೆಲವು ದೇಹದಲ್ಲಿ ಬಡಕಲಾಗಿರುತ್ತವೆ. ಇನ್ನು ಕೆಲವು ಗೋವುಗಳು ಒಂದು ಬಣ್ಣದಲ್ಲಿದ್ದರೆ ಇನ್ನು ಕೆಲವು ಬೇರೆ ಬೇರೆ ಬಣ್ಣದ್ದಾಗಿರುತ್ತವೆ. ಆದರೆ ಯಾವುವು ಆಕಾರದಲ್ಲಿಯೂ ದೇಹದಲ್ಲಿಯೂ ಮತ್ತು ಬಣ್ಣದಲ್ಲಿಯೂ ಒಂದೇ ರೀತಿಯಾಗಿರುತ್ತವೆಯೋ ಅವಗಳ ಗುಣದರ್ಮಗಳು ಸಹ ಒಂದೇ ರೀತಿಯಾಗಿರುವ ಸಾಧ್ಯತೆ ಜಾಸ್ತಿ ಇರುತ್ತದೆ ಎನ್ನುತ್ತಾನೆ. ಅಂಥವುಗಳನ್ನು ಅಗ್ನಿಯು ಗುರುತಿಸುತ್ತಾನೆ ಎಂದು ಶಬರ ಮಹರ್ಷಿ ಹೇಳುವುದು ತಿಳಿಯುತ್ತದೆ. ಅಗ್ನಿ ಮತ್ತು ಅಂಗಿರಸರು ಹತ್ತಿರದವರು. ಈ ಅಂಗಿರಸರು ತಮ್ಮ ತಪಸ್ಸಾಧನೆ ಮತ್ತು ಸಾಮರ್ಥ್ಯದಿಂದ ಗೋವುಗಳ ಹುಟ್ಟಿಗೆ ಕಾರಣರಾದರೆ, ಎಲ್ಲಾ ಗೋವಿನ ಸಂತತಿಗೆ ಪರ್ಜನ್ಯನೇ ಸುಖ ನೆಮ್ಮದಿಯನ್ನು ನೀಡುತ್ತಾನೆ ಎನ್ನುವುದು ಈ ಋಕ್ಕಿನ ಅಭಿಪ್ರಾಯ. 

ಮಯೋಭೂರ್ವಾತೋ ಅಭಿ ವಾತೂಸ್ರಾ ಊರ್ಜಸ್ವತೀರೋಷಧೀರಾ ರಿಶಂತಾಂ |
ಪೀವಸ್ವತೀರ್ಜೀವಧನ್ಯಾಃ ಪಿಬಂತ್ವವಸಾಯ ಪದ್ವತೇ ರುದ್ರ ಮೃಳ ||
ರುದ್ರನನ್ನು ಕುರಿತು ಸ್ತುತಿಸುತ್ತಾ, ಗೋವುಗಳಿರುವಲ್ಲಿ ವಾಯುವು ಹಿತಕರವಾಗಿ ಬೀಸಲಿ, ರಸಭರಿತವಾದ ಮತ್ತು ಶಕ್ತಿಯನ್ನು ಒದಗಿಸುವಂತಹ ಹುಲ್ಲುಗಳು ಗೋವುಗಳಿಗೆ ಸಿಗುವಂತಾಗಲಿ. ಗೋವುಗಳಿಗೆ ನೀರು ಅತ್ಯವಶ್ಯ. ನೀರು ಯಥೇಚ್ಚವಾಗಿ ಸಿಗಲಿ. ನಮಗೆ ಹಾಲಿನ ರೂಪದಲ್ಲಿ ಸಿಗುವ ಅಹಾರವನ್ನು ಅ ರುದ್ರನು ಒದಗಿಸಲಿ. ಗೋವುಗಳಿಗೆ ಯಾವುದೇ ತೊಂದರೆಯಾಗದಂತೆ ಸುಖವನ್ನು ಒದಗಿಸು ಎನ್ನುವ ಪ್ರಾರ್ಥನೆ ಇಲ್ಲಿ ದೊರಕುತ್ತಿದೆ. 

ಶಿವಾಃ ಸತೀರುಪ ನೋ ಗೋಷ್ಠಮಾಕಸ್ತಾಸಾಂ ಎನ್ನುವಲ್ಲಿ ಈ ಗೋವುಗಳೆಲ್ಲ ನಮಗೆ ಸುಖ ಸಂತೋಷಗಳಲ್ಲದೇ ನಮ್ಮ ದೇಹಕ್ಕೆ ಆರೋಗ್ಯವನ್ನು ಕರುಣಿಸಿ ನಮಗೆ ಮಂಗಳವನ್ನುಂಟುಮಾಡಬಲ್ಲವು. ಅಂತಹ ಗೋವುಗಳನ್ನು ನಮ್ಮ ಕೊಟ್ಟಿಗೆಯ ಸಮೀಪಕ್ಕೆ ತಂದು ಕೊಡು ಎನ್ನುವದಾಗಿ ಇಂದ್ರನನ್ನು ಪ್ರಾರ್ಥಿಸುವುದು ಕಾಣುತ್ತದೆ. ಹೀಗೇ ಋಗ್ವೇದವಿರಲಿ ಮಿಕ್ಕ ವೇದಗಳಿರಲಿ ಗೋವನ್ನು ಮಾತೆಯ ಸ್ಥಾನದಲ್ಲಿಟ್ಟು ಪೂಜಿಸಿವೆಯೇ ಹೊರತು ಅದೊಂದು ವಧಾರ್ಹ ಪ್ರಾಣಿಯಾಗಲ್ಲ. ಗೋವಿನಷ್ಟು ಸಾಧು ಪ್ರಾಣಿ ವಿರಳಾತಿವಿರಳ.

ಸದ್ಯೋಜಾತರು

No comments:

Post a Comment

If you have any doubts. please let me know...