ಮುಹೂರ್ತವಿಟ್ಟಂತೆ
ಇಂದಿನ ಸಟ್ಲೇಜ್ ಎನ್ನುವುದು ಹಿಂದೆ ಶತದ್ರು ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅಂದರೆ ನೂರು ಕವಲುಗಳು ಸೇರಿ
ಒಂದಾಗಿ ಹರಿಯುವ ನದಿ ಅದು. ಅಥವಾ ಅನೇಕ ಕವಲುಗಳು ಸೇರಿ ಹರಿಯುವ ನದಿ.
’ಶತಧಾ ವಿದ್ರುತಾ ಯಸ್ಮಾಚ್ಛತದ್ರುರಿತಿ ವಿಶ್ರುತಾ’ ಎಂದು ಮಹಾಭಾರತದ ಆದಿಪರ್ವದಲ್ಲಿ ಬರುತ್ತದೆ. ಅಂದರೆ ನೂರನ್ನು ಅನೇಕ ಎಂದು ತೆಗೆದುಕೊಂಡು ಅನೇಕ ಧಾರೆಗಳಾಗಿ ಪ್ರವಹಿಸುವುದರಿಂದ ಶತದ್ರು ಎಂದು ಪ್ರಸಿದ್ಧವಾಗಿದೆ ಎನ್ನಲಾಗಿದೆ. ಅದಕ್ಕಾಗಿಯೇ ಶತ-ದ್ರು. ಶುತುದ್ರು ಎಂತ ಸಹ ಕರೆದಿರುವುದು ಇದೆ. ಹಿಂದಿನ ವಿಪಾಶಾ ಎನ್ನುವ ನದಿಯನ್ನು ಇಂದು ಬಿಯಾಸ್ ಎಂದು ಕರೆಯಲಾಗುತ್ತಿತ್ತು. ವಿಪಾಶಾ ಮತ್ತು ಶತದ್ರು ಎನ್ನುವ ಈ ಎರಡು ನದಿಗಳ ಸಂಗಮದ ಹತ್ತಿರ ವಿಶ್ವಾಮಿತ್ರ ಮಹರ್ಷಿ ಬರುತ್ತಾರೆ. ಅಲ್ಲಿ ವಿಶ್ವಾಮಿತ್ರ ಮತ್ತು ನದಿಯ ನಡುವೆ ಸಂವಾದ ಏರ್ಪಡುತ್ತದೆ. ಇದು ಋಗ್ವೇದದ 3ನೇ ಮಂಡಲದ 33ನೇ ಸೂಕ್ತದಲ್ಲಿ ಬರುತ್ತದೆ. ವಿಶ್ವಾಮಿತ್ರ ಮತ್ತು ನದಿಗಳೇ ದೃಷ್ಟಾರರಾಗಿಯೂ, ನದೀ ವಿಶ್ವಾಮಿತ್ರ ಮತ್ತು ಇಂದ್ರನೇ ದೇವತೆಗಳಾಗಿರುವ ಸೂಕ್ತ ಇದು.
ಪಿಜವನ ಎನ್ನುವವನ ಮಗನಾದ ಸುದಾಸನಿಗೆ ವಿಶ್ವಾಮಿತ್ರ ಮಹರ್ಷಿಗಳು ಪುರೋಹಿತರಾಗಿದ್ದರು. ಒಮ್ಮೆ ಸುದಾಸ ಒಂದು ಯಾಗವನ್ನು ಮಾಡಿಸುತ್ತಾನೆ. ಯಾಗದ ಪೌರೋಹಿತ್ಯದ ನಿಮಿತ್ತವಾಗಿ ದಕ್ಷಿಣೆಯ ರೂಪವಾಗಿ ಸಂಪತ್ತನ್ನು ವಿಶ್ವಾಮಿತ್ರರಿಗೆ ಕೊಡುತ್ತಾನೆ. ಆ ಸಂಪತ್ತನ್ನು ತೆಗೆದುಕೊಂಡು ತನ್ನ ಆಶ್ರಮಕ್ಕೆ ಹೋಗುವಾಗ ಕಳ್ಳರು ಸಂಪತ್ತನ್ನು ಅಪಹರಿಸುವ ಸಲುವಾಗಿ ಹಿಂದೆಯೇ ಬರುತ್ತಾರೆ. ವಿಶ್ವಾಮಿತ್ರ ಮಹರ್ಷಿಗಳು ವೇಗವಾಗಿ ನದೀ ಸಂಗಮದ ಸ್ಥಳಕ್ಕೆ ಬಂದಾಗ ನದಿ ಉಕ್ಕಿ ಹರಿಯುತ್ತಿತ್ತು. ಅಪಹರಣಕಾರರಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಮಹರ್ಷಿಗಳಿಗಿತ್ತು. ಆಗ ನದಿಯನ್ನು ಪ್ರಾರ್ಥಿಸುತ್ತಾರೆ. ಅದೇ ಇಲ್ಲಿ ಸಂವಾದದ ರೂಪದಲ್ಲಿ ಬಂದಿದೆ. ಅದನ್ನು ನಾನಿಲ್ಲಿ ಬರೆಯುತ್ತಿಲ್ಲ. ಆದರೆ ಈ ಸೂಕ್ತದಲ್ಲಿ ಬರುವ ಒಂದು ಶಬ್ದವನ್ನು ಗಮನಿಸುವೆ.
ಅಲ್ಲಿ ಸೂಕ್ತದಲ್ಲಿ ’ರಮಧ್ವಂ ಮೇ ವಚಸೇ ಸೋಮ್ಯಾಯ ಋತಾವರೀರುಪಮುಹೂರ್ತಮೇವೈಃ’ ಎನ್ನುವುದಾಗಿ ಬರುತ್ತದೆ. ಇಲ್ಲಿ ’ಮುಹೂರ್ತಮೇವೈಃ’ ಎನ್ನುವಲ್ಲಿನ ಮುಹೂರ್ತ ಎನ್ನುವುದನ್ನು ಗಮನಿಸಿದರೆ ಈ ಶಬ್ದವು ಋಗ್ವೇದದಲ್ಲಿ ಎರಡು ಸಲ ಮಾತ್ರವೇ ಬಂದಿದೆ. ತುಂಬಿ ಹರಿಯುತ್ತಿರುವ ಪುಣ್ಯವಾಹಿನಿಗಳಾದ ನದಿಗಳೇ ನಿಮ್ಮ ಪ್ರವಾಹವನ್ನು ಕ್ಷಣಕಾಲ ನಿಲ್ಲಿಸಿ ನಾನು ಕುಶಿಕನ ಮಗನಾದ ವಿಶ್ವಾಮಿತ್ರನಾಗಿದ್ದೇನೆ. ನನ್ನ ಆತ್ಮರಕ್ಷಣೆಗಾಗಿ ನಾನು ನಿಮ್ಮನ್ನು ಸ್ತುತಿಸುತ್ತಿದ್ದೇನೆ ಎನ್ನುವ ಪ್ರಾರ್ಥನೆ ಇದೆ. ಅಂದರೆ ಇಲ್ಲಿ ಮುಹೂರ್ತ ಎನ್ನುವುದು ಕಾಲದ ಸೂಚಕವಾದರೂ ಅದು ಕಾಲದ ಅತ್ಯಂತ ಚಿಕ್ಕ ಅವಧಿ ಎನ್ನುವುದು ತಿಳಿಯುತ್ತದೆ.
ಇನ್ನು ಇಂದ್ರಾಪರ್ವತ ಎನ್ನುವ ಇದೇ ಮಂಡಲದ ೫೩ನೇ ಸೂಕ್ತದಲ್ಲಿ ಇದೇ ವಿಶ್ವಾಮಿತ್ರ ಮಹರ್ಷಿ ಇಂದ್ರಾಪರ್ವತೌ ಎನ್ನುವ ದೇವತೆಯನ್ನು ಸ್ತುತಿಸುವ ಮಂತ್ರದಲ್ಲಿ ತ್ರಿರ್ಯದ್ದಿವಃ ಪರಿ ಮುಹೂರ್ತ ಮಾಗಾತ್ ಎನ್ನುವಲ್ಲಿ ಸಹ ಇಂದ್ರನು ಒಂದೇ ಕಾಲದಲ್ಲಿ ನಡೆಯುವ ಯಜ್ಞಗಳಲ್ಲಿ ಭಾಗಿಯಾಗುತ್ತಾನೆ ಎನ್ನುವ ಅರ್ಥ. ಅಂದರೆ ಇರುವ ಒಂದೇ ಮುಹೂರ್ತದಲ್ಲಿ ಅನೇಕ ಕಡೆ ಇರುತ್ತಾನೆ ಎನ್ನುವುದು. ಈ ಋಕ್ಕನ್ನು ಸೂಕ್ಷ್ಮವಾಗಿ ಗಮನಿಸಿದರೆ. ಇಲ್ಲಿ ಇಂದ್ರ ಒಂದೇ ವಸ್ತುವನ್ನು ಒಡೆದು ವಿಭಾಗಿಸಿ ಅನೇಕವನ್ನಾಗಿ ಮಾಡುತ್ತಾನೆ. ಅದನ್ನೇ ನಾನಾವಿಧವಾದ ಶಕ್ತಿಗಳನ್ನಾಗಿ ಪರಿವರ್ತಿಸುತ್ತಾನೆ ಎನ್ನುವುದನ್ನು ನೋಡಿದರೆ ಅಣುವೊಂದನ್ನು ವಿಭಾಗಿಸಿ ಅನೇಕವನ್ನಾಗಿ ಮಾಡಿ ಪರಮಾಣುಗಳಿಂದ ನಾವು ಶಕ್ತಿಯನ್ನು ಪಡೆಯಬಹುದು ಎನ್ನುವುದಕ್ಕೆ ಹತ್ತಿರವಾಗುತ್ತದೆ. ಇಲ್ಲಿಯೂ ಸಹ ಮುಹೂರ್ತ ಎನ್ನುವುದು ಅತ್ಯಂತ ಚಿಕ್ಕ ಅವಧಿ ಎನ್ನುವುದು ತಿಳಿಯುತ್ತದೆ. ಇನ್ನು ಮುಹೂರ್ತದ ಕುರಿತು ನಿರುಕ್ತದಲ್ಲಿ ೨:೨೫ರಲ್ಲಿ ಮುಹೂರ್ತಮ್ ಏವೈಃ ಅಯನೈಃ ಅವನೈರ್ವಾ | ಮುಹೂರ್ತಃ ಮುಹುಃ ಋತುಃ| ಋತುಃ ಅರ್ತೇಃ ಗತಿಕರ್ಮಣಃ| ಮುಹುಃ ಮೂಢಃ ಇವ ಕಾಲಃ | ಮೂಹೂರ್ತ ಎನ್ನುವುದರ ಅರ್ಥ ಸ್ವಲ್ಪ ಕಾಲ ಅಥವಾ ಕ್ಷಣಕಾಲ. ಮುಹುಃ ಮತ್ತು ಋತುಃ ಎನ್ನುವ ಶಬ್ದಗಳಿಗಿರುವ ಅರ್ಥವೇ ಬೇಗ ಕಳೆಯುವ ಕಾಲ ಎಂದು ಅರ್ಥ.
’ಮುಹೂರ್ತ’ ಶಬ್ದದ ಈ ಅರ್ಥವು ಶತಪಥ ಬ್ರಾಹ್ಮಣದಲ್ಲಿ 1:8:3:17ರಲ್ಲಿ ’ತನ್ ಮುಹೂರ್ತಂ ಧಾರಯಿತ್ವಾ’ ಮತ್ತು 2, 3. 2. 5 ’ಅಥ ಪ್ರಾತಃ ಅನಶಿತ್ವಾ ಮುಹೂರ್ತ ಸಭಾಯಾಮಾಶಿತ್ವಾಪಿ’ ಇತ್ಯಾದಿಗಳಲ್ಲಿಯೂ ಕಾಳಿದಾಸನ ರಘುವಂಶ 5.58ರಲ್ಲಿ ಅಲಂ ಹ್ರಿಯಾ ಯನ್ಮುಹೂರ್ತಂ ದಯಾಪರೋ ಭೂಃ ಪ್ರಹರನ್ನಪಿ ತ್ವಂ ಎಂದು ಮುಹೂರ್ತದ ಕುರಿತಾಗಿ ಹೇಳುವ ಅಭಿಜಾತ ಸಂಸ್ಕೃತ ಸಾಹಿತ್ಯ ಗ್ರಂಥಗಳಲ್ಲಿಯೂ ಕಾಣಬರುತ್ತದೆ.
ಶತಪಥ ಬ್ರಾಹ್ಮಣದ 10. 4. 2. 18 ಮತ್ತು 12, 3, 2, 5ರಲ್ಲಿ ’ಮುಹೂರ್ತ’ ಶಬ್ದದ ಇನ್ನೊಂದು ಅರ್ಥವಿದೆ; ಹಗಲು15 ಮುಹೂರ್ತಗಳೂ ರಾತ್ರಿ 15 ಮುಹೂರ್ತಗಳಾಗುತ್ತವೆ ಇವೆರಡೂ ಒಟ್ಟೂ ಸೇರಿದರೆ ಒಂದು ಅಹೋರಾತ್ರದಲ್ಲಿ 30 ಮುಹೂರ್ತ ಗಳಾಗುತ್ತವೆ ಎಂದು ಅಲ್ಲಿ ಹೇಳಲಾಗಿದೆ; ಒಂದು ಸಂವತ್ಸರದಲ್ಲಿ 10800 ಮುಹೂರ್ತಗಳಿರುತ್ತವೆ. 30ಕ್ಕೆ 360ನ್ನು ಗುಣಿಸಿದರೆ ಸಿಗುವುದೇ 10800. ಇಲ್ಲಿ ’ಮುಹೂರ್ತ’ವೆಂದರೆ ಹಗಲಿನ ಹದಿನೈದರಲ್ಲಿ ಒಂದು ಅಂಶ. ಎಂದರೆ ಸಾಧಾರಣವಾಗಿ ಎರಡು ನಾಡಿಕಾ ಅಥವಾ ಗಳಿಗೆಗಳಷ್ಟು. ಮುಹೂರ್ತದ ಕುರಿತು ಬೇಕಷ್ಟು ಬರೆಯಬಹುದು ಆದರೆ ಪ್ರಾಚೀನತೆಯನ್ನು ಗಮನಿಸಿದೆ. ಕಾಲದ ಅತ್ಯಂತ ಚಿಕ್ಕ ಅವಧಿ ಮುಹೂರ್ತ ಎಂದು ತೆಗೆದುಕೊಂಡಿರುವುದಂತೂ ಸ್ಪಷ್ಟ. ನಮ್ಮಲ್ಲಿ ಸಾಮಾನ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಹೂರ್ತ ಎಂದರೆ ಅದು ಒಂದೇ ಅವಧಿಯನ್ನು ಶುಭ ಸಮಾರಂಭಗಳಿಗೆ ಇಟ್ಟಿರುತ್ತಾರೆ. ಅಂದರೆ10 ರಿಂದ ಹತ್ತೂವರೆಯ ಮಹೂರ್ತದಲ್ಲಿ ಎಂದು ಹೇಳುವುದಿಲ್ಲ ಹತ್ತುಗಂಟೆಯ ಮುಹೂರ್ತ ಎಂದು ಹೇಳುತ್ತಾರೆ. ಅದೇನೇ ಇರಲಿ 48 ನಿಮಿಷಗಳ ಒಂದು ಅವಧಿಯನ್ನೂ ಮುಹೂರ್ತ ಎಂದು ಹೇಳಲಾಗುತ್ತದೆ. ಇದು ಮುಹೂರ್ತದ ಆರಂಭ.
#ಮುಹೂರ್ತ_ಕ್ಷಣಿಕ
Sadyoojath
No comments:
Post a Comment
If you have any doubts. please let me know...