October 12, 2021

ಹಲ್ಲು ಮತ್ತು ನಾಲಗೆಯ ಕಥೆ

ಒಮ್ಮೆ ಹಲ್ಲು ಮತ್ತು ನಾಲಗೆಗೆ ವಿಪರೀತ ಜಗಳವಾಯಿತಂತೆ. ಹಲ್ಲುಗಳು ನಾಲಗೆಗೆ ಹೇಳಿದವು "ನಾವು 32 ಜನ ಇದೀವಿ. ನಮ್ಮ ಮಧ್ಯೆ ಒಬ್ಬಂಟಿಯಾಗಿರೋ ನಿನ್ನನ್ನು ಇರೋದಕ್ಕೆ ಬಿಟ್ಟಿರೋದೇ ದೊಡ್ಡ ಮಾತು. ಯಾಕೆಂದ್ರೆ ನಮ್ಮ ದಾರಿಗೆ ಅಡ್ಡ ಬಂದಾಗ ನಿನ್ನನ್ನು ಕಚಕ್ ಅಂತಾ ಕಚ್ಚಿ ಬಿಸಾಡಿದ್ರೆ ಬಿಡಿಸ್ಕಳಕ್ಕೆ ಯಾರಿದಾರೆ? ಅಂತ ಹೇಳಿ ಹಲ್ಲುಗಳು ನಾಲಿಗೆಗೆ ಜೋರ್ ಜೋರ್ ಮಾಡಿದವು.  ಒಂದು ಹಲ್ಲು ಪ್ರತಾಪ ಕೊಚ್ಚಿ ಕೊಂಡಿತು: "ಎಷ್ಟೇ ಕಟುಕಲು ರೊಟ್ಟಿ ಚಕ್ಕುಲಿ ಆಗಿರಲಿ, ಕಟಂ ಅಂತಾ ಕಟಾರಿಸಿ ಅಗಿದು ತಿಂತೇವೆ! ನಿನಕೈಲಿ ಏನಾದೀತು!" ಹೀಗೆ ಹಲ್ಲುಗಳು ನಾಲಗೆಯನ್ನು ಹಂಗಿಸಿ ಹೀಯಾಳಿಸಿದವು.  ನಾಲಿಗೆಯು ಎಲ್ಲಾ ಹಲ್ಲುಗಳ  ಮಾತುಗಳನ್ನು ಕೇಳಿಸ್ಕೊಂಡು ನಿಧಾನವಾಗಿ ಹೇಳಿತು...  "ತಮ್ಮಗಳಿರಾ..  ನಿಮ್ಮನ್ನು ತಮ್ಮಗಳಿರಾ ಅಂತೀನಿ. ಯಾಕೆ  ಅಂದರೆ  ನೀವೆಲ್ಲರೂ ನಾನು ಹುಟ್ಟೋದಕ್ಕಿಂತ ಮುಂಚೆ ಏನ್ ಹುಟ್ಟಿದವರಲ್ಲ; ನಾನು ಹುಟ್ಟಿದ ಒಂದೆರಡು ವರ್ಷ ಆದ್ಮೇಲೆ ಹುಟ್ಟಿದ್ದೀರಿ. ಅಷ್ಟೇ ಆಲ್ಲ,  ನಾನ್ ಬದುಕಿರುವಷ್ಟು ಕಾಲ ನೀವೇನ್ ಬದುಕಿರಲ್ಲ. ನನ್ ಕಣ್ಮುಂದೆ ಎಲ್ಲರೂ ಬಿದ್ ಹೋಗ್ತೀರಿ.  ನಾನೇ ಕೊನೆ ತನಕ ಇರೋನು!  ಇನ್ನೊಂದ್ ಮಾತು ನಾನು ಒಳ್ಳೆಯವನಾಗಿದ್ದರೆ ಮಾತ್ರ ನಿಮಗೆ ಆಯಸ್ಸು ಗಟ್ಟಿ. ನಾನೇನಾದ್ರೂ ಕೆಟ್ಟವನಾದರೆ ನಿಮ್ಮ ಆಯಸ್ಸು  ಮುಗಿಯಿತು. ನಾನು ಯಾರಿಗಾದ್ರೂ ಕೆಟ್ ಮಾತಾಡ್ದೆ, ಬೈದೆ ಅಂದ್ರೆ ಆ ಕಡೆ ಕೆನ್ನೆಗೆ ನಾಲ್ಕು, ಈ ಕಡೆ ಕೆನ್ನೆಗೆ ನಾಲ್ಕು ಬಿಗೀತಾರೆ. ನೀವೆಲ್ಲರೂ ನನ್ನ ಕಣ್ಮುಂದೆ ಉದುರಿ ನೆಲಕ್ಕೆ ಬೀಳ್ತೀರಿ.. ಹುಷಾರ್!"  

ಈ ಕಥೆಯ ನೀತಿ ಏನು?   ನಾಲಗೆ  ಚೆನ್ನಾಗಿದ್ರೆ ಹಲ್ಲುಗಳು ಕ್ಷೇಮ!

ನಾಲಗೆ ಮಾಡೋ ತಪ್ಪು ನಿಜವಾಗಿ ನಾಲಿಗೇದಾ?  ನಾಲಗೆ ಏನ್ ಮಾತಾಡಿದ್ರೂ ಕೂಡ ಆದರೆ ಹಿಂದೆ ಇರೋದೇನು? ನಮ್ಮ ಮನಸ್ಸು! ನಮ್ಮ ಮನಸ್ಸು ಸರಿಯಾದ ದಿಕ್ಕಿನಲ್ಲಿ ಆಲೋಚನೆ ಮಾಡಿದರೆ ನಾಲಗೆ ಖಂಡಿತ ಕೆಟ್ಟ ಮಾತಾಡಲಾರದು! ಆದ್ದರಿಂದ ನಾವು ಆಡುವ ಮಾತು  ನಾಲಿಗೆಯ ಸ್ವಂತದ್ದಲ್ಲ. ಅದು ಮನಸ್ಸಿನದು. ಮನಸ್ಸಿನಲ್ಲಿ ನಡೆದಂಥ ಮಂಥನವೇ ನಾಲಗೆಯ ಮೂಲಕ ಮಾತಾಗಿ ಬರುತ್ತದೆ.  ಆದ್ದರಿಂದ ತಪ್ಪು ನಾಲಿಗೆಯದಂತೂ ಅಲ್ಲ. ಮನಸ್ಸು ಮಾಡಿದ ತಪ್ಪಿಗೆ ಶಿಕ್ಷೆ ಕೊಡೋಕೆ ಮನಸ್ಸು ಕೈಗೆ ಸಿಗುತ್ತದೆಯೆ? ಮನಸ್ಸು ಮಾಡುವ ತಪ್ಪಿಗೆ ಶಿಕ್ಷೆ ಸಿಗುವುದು ಏನೂ ತಪ್ಪು ಮಾಡದ ಹಲ್ಲುಗಳಿಗೋ ಕೈಗಳಿಗೋ ಕಾಲುಗಳಿಗೋ  ತಲೆಗೋ  ಕಣ್ಣುಗಳಿಗೋ! 

ನಮ್ಮ ಮನಸ್ಸು ಶುದ್ಧವಾಗಿದ್ದರೆ ನಾಲಗೆ ಶುದ್ಧವಾಗಿರುತ್ತದೆ. ಮಾತು ಶುಚಿಯಾಗಿರುತ್ತದೆ. 

ಮನಸ್ಸು ಮತ್ತು ಮನಸ್ಸಿನ ಶುದ್ಧತೆ ಬಹಳ ಮುಖ್ಯ.

ನಮ್ಮ ಮನಸ್ಸಿನಲ್ಲೇ ಇರುವಂತಹ ಶತ್ರುಗಳ ಮೇಲೆ - ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳ ಮೇಲೆ  ದಿಗ್ವಿಜಯ ಮಾಡೋಣ. ಇಂಥ ದಿಗ್ವಿಜಯ ಮಾಡುವ ಸಂದರ್ಭಕ್ಕೆ ನಾವೆಲ್ಲಾ ಅಣಿಯಾಗೋಣ.  (ಸಂಗ್ರಹ )

No comments:

Post a Comment

If you have any doubts. please let me know...