December 6, 2021

ಕರ್ಣನನ್ನೇ ಏಕೆ ದಾನಶೂರ ಎಂದು ಕರೆಯುತ್ತಾರೆ

 ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ?
 ಮಹಾಭಾರತದ ಒಂದು ಸಣ್ಣ ಮಾಹಿತಿ !

 ಕೃಷ್ಣಾ,....ಎಲ್ಲರೂ ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ? ನಾನೇಕೆ ದಾನಶೂರನಲ್ಲ” ಎಂದ ಅರ್ಜುನನಿಗೆ ಸಿಕ್ಕ ಉತ್ತರ ಇದು !

ಒಮ್ಮೆ ಕೃಷ್ಣ ಹಾಗೂ ಅರ್ಜುನ ವಾಯುವಿಹಾರಕ್ಕೆಂದು ಹೊರಟಿದ್ದರು. ಹಳ್ಳಿಗಾಡಿನ ಪ್ರದೇಶದಲ್ಲಿ ಹೀಗೇ ಓಡಾಡುತ್ತಾ ಅಲ್ಲೇ ಮರವೊಂದರ ನೆರಳಿನಲ್ಲಿ ವಿಶ್ರಮಿಸಲು ಕುಳಿತರು. ಆಗ ಕೃಷ್ಣನಿಗೆ ಅರ್ಜುನನು ಕೇಳುತ್ತಾನೆ, “ಕೃಷ್ಣಾ, ಎಲ್ಲರೂ ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ? ನಾನೇಕೆ ದಾನಶೂರನಲ್ಲ? ನಾನೂ ಸಹ ಬಡವರಿಗೆ, ಅಸಹಾಯಕರಿಗೆ ದಾನ ಧರ್ಮ ಮಾಡಿದ್ದೇನಲ್ಲ!!”. ಆಗ ಕೃಷ್ಣನು, “ಸಮಯ ಬಂದಾಗ ನಿನಗೆ ಸೂಕ್ತ ರೀತಿಯಲ್ಲಿ ಉತ್ತರಿಸುತ್ತೇನೆ” ಎಂದು ನಸುನಕ್ಕು ಸುಮ್ಮನಾಗುತ್ತಾನೆ.

ಕೃಷ್ಣನು ದ್ವಾರಕೆಯಲ್ಲಿ ಒಮ್ಮೆ ಔತಣ ಕೂಟವನ್ನು ಏರ್ಪಡಿಸಿರುತ್ತಾನೆ. ಕೌರವರು, ಪಾಂಡವರು, ಕರ್ಣ ಎಲ್ಲರನ್ನೂ ಆಹ್ವಾನಿಸಿರುತ್ತಾನೆ. ಅರ್ಜುನ ಅಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಸೂಕ್ತ ಸಮಯ ಇದೇ ಎಂದು ನಿರ್ಧರಿಸಿರುತ್ತಾನೆ. ಒಂದು ಭಾರೀ ಗಾತ್ರದ ಪರ್ವತದಷ್ಟು ಎತ್ತರದ ಚಿನ್ನದ ಒಂದೊಂದು ಗಟ್ಟಿಯನ್ನು ಅರ್ಜುನ ಹಾಗೂ ಕರ್ಣ ಇಬ್ಬರಿಗೂ ಕಾಣಿಕೆ ಕೊಡುತ್ತಾನೆ. ಇಬ್ಬರಿಗೂ ಉದ್ದೇಶಿಸಿ ಹೇಳುತ್ತಾನೆ, ನೀವಿಬ್ಬರೂ ಈ ಗಟ್ಟಿಯ ಕೊನೆಯ ಕಣವು ಉಳಿಯುವವರೆಗೂ ದಾನ ಮಾಡಬೇಕು. ಆಗ ನಾನು ನಿಮಗೆ ಕೊಟ್ಟ ಕೊಡುಗೆ ಸದುಪಯೋಗವಾಗುತ್ತದೆ ಎಂದು ಹೇಳಿ ಕಳುಹಿಸುತ್ತಾನೆ. ಸಮಾರಂಭದ ನಂತರ ಪಾಂಡವರು ಇಂದ್ರಪ್ರಸ್ಥಕ್ಕೂ, ಕೌರವರು ಹಸ್ತಿನಾವತಿಗೂ, ಕರ್ಣನು ಅಂಗದೇಶಕ್ಕೂ ಹೀಗೆ ಅವರವರ ರಾಜ್ಯಗಳಿಗೆ ಹಿಂತಿರುಗುತ್ತಾರೆ.

ಇತ್ತ ಇಂದ್ರಪ್ರಸ್ಥಕ್ಕೆ ಮರಳಿದ ಅರ್ಜುನನು ರಾಜ್ಯಾದ್ಯಂತ ಡಂಗುರ ಸಾರಿಸುತ್ತನೆ. ತಾನು ಚಿನ್ನದ ಗಟ್ಟಿಯನ್ನು ದಾನ ಮಾಡಲು ಹೊರಟಿದ್ದು, ಅವಶ್ಯವಿದ್ದವರು ಬಂದು ಸ್ವೀಕರಿಸಬಹುದೆಂದು ಪ್ರಜೆಗಳಿಗೆ ತಿಳಿಸುತ್ತಾನೆ. ಮಾರನೇ ದಿನ ಅರಮನೆಯ ಮುಂದೆ ಭಾರೀ ಜನಸ್ತೋಮ ನೆರೆದಿರುತ್ತದೆ. ಎಲ್ಲರೂ ಅರ್ಜುನನನ್ನು ಹೊಗಳುವವರೇ. ಇತ್ತ ಅರ್ಜುನನು ಬಂದ ಆಕಾಂಕ್ಷಿಗಳೆಲ್ಲರಿಗೂ ಕೃಷ್ಣನು ಕೊಟ್ಟ ಭಾರೀ ಚಿನ್ನದ ಗಟ್ಟಿಯನ್ನು ಅಗೆದೂ ಅಗೆದೂ ಇಷ್ಟಿಷ್ಟನ್ನು ತೆಗೆದು ಕೊಡುತ್ತಿರುತ್ತಾನೆ. ಎರಡು ದಿನವೂ ಹೀಗೇ ಮುಂದುವರೆಯುತ್ತದೆ. ಮೂರನೆಯ ದಿನ ಅರ್ಜುನನಿಗೆ ಸಾಕಾಗಿ ಹೋಗಿರುತ್ತದೆ. ಚಿನ್ನದ ಗಟ್ಟಿ ಅರ್ಧದಷ್ಟೂ ಸಹ ಕರಗಿರುವುದಿಲ್ಲ. ಹೀಗೇ ಎಷ್ಟು ದಿನ ಮುಂದುವರೆಸುವುದು? ಕೃಷ್ಣ ನೋಡಿದರೆ ಕೊನೆಯ ಕಣವೂ ದಾನ ಮಾಡಬೇಕೆಂದು ಹೇಳಿದ್ದಾನೆ ಎಂದು ಚಿಂತಿತನಾಗುತ್ತಾನೆ.

ಆ ಸಮಯದಲ್ಲಿ ಕೃಷ್ಣನು ತಾನು ಒಪ್ಪಿಸಿದ್ದ ಕೆಲಸವಾಯಿತೇ ಎಂದು ತಿಳಿಯಲು ಇಂದ್ರಪ್ರಸ್ಥಕ್ಕೆ ಬರುತ್ತಾನೆ. ಅರ್ಜುನನು ಇದ್ದ ವಿಷಯ ತಿಳಿಸುತ್ತಾನೆ. ಮೂರು ದಿನದಿಂದ ಸತತವಾಗಿ ದಾನ ಮಾಡುತ್ತಿದ್ದೇನೆ, ಇದು ಇನ್ನೂ ಅರ್ಧದಷ್ಟೂ ಕರಗಿಲ್ಲ ಎಂದು ತಿಳಿಸುತ್ತಾನೆ. ಕೃಷ್ಣನು ಆಶ್ಚರ್ಯ ನಟಿಸಿ, “ಓಹೋ, ಬಹಳೇ ಕೆಲಸವಾಯಿತು ನಿನಗೆ, ಬಾ ಕರ್ಣನು ಏನು ಮಾಡಿದ್ದಾನೋ ನೋಡೋಣ” ಎಂದು ಅರ್ಜುನನನ್ನು ಅಂಗ ರಾಜ್ಯಕ್ಕೆ ಕರೆದೊಯ್ಯುತ್ತಾನೆ.

ಕರ್ಣನಲ್ಲಿಗೆ ಬಂದ ಕೃಷ್ಣಾರ್ಜುನರು, ಚಿನ್ನದ ಗಟ್ಟಿಯ ಬಗ್ಗೆ ವಿಚಾರಿಸುತ್ತಾರೆ. ಕರ್ಣನು “ನಾನು ಅದನ್ನು ಅಂದೇ ದಾನ ಮಾಡಿದೆನಲ್ಲ!” ಎಂದು ತಿಳಿಸುತ್ತಾನೆ. 

 
ಅರ್ಜುನನು ಆಶ್ಚರ್ಯದಿಂದ “ಅದು ಹೇಗೆ ಮಾಡಿದೆ? ಕೃಷ್ಣನು ಪ್ರತಿ ಕೊನೆಯ ಕಣವಿರುವವರೆಗೂ ಅದನ್ನು ದಾನ ಮಾಡಬೇಕು ಎಂದಿದ್ದನಲ್ಲ! ನಾನು ಸತತ ಮೂರು ದಿನದಿಂದ ಮಾಡುತ್ತಿದ್ದೇನೆ, ಇನ್ನೂ ಕರಗಿಲ್ಲ” ಎನ್ನುತ್ತಾನೆ.
ಕರ್ಣನು ಹೇಳುತ್ತಾನೆ, 

ನಾನು ದ್ವಾರಕೆಯಿಂದ ಮರಳುತ್ತಿದ್ದಾಗಲೇ ಮಾರ್ಗ ಮಧ್ಯೆಯಲ್ಲಿ ಇಬ್ಬರು ಹಳ್ಳಿಗರನ್ನು ಭೇಟಿ ಮಾಡಿದೆ. ಅವರು ತಮ್ಮ ಹಳ್ಳಿಯಲ್ಲಿ ಗುರುಕುಲವೊಂದನ್ನು ಹಾಗೂ ಅನ್ನಛತ್ರವನ್ನು ತೆರೆಯಬೇಕೆಂದು ತಿಳಿಸಿದರು. ತಕ್ಷಣವೇ ನಾನು ಕೃಷ್ಣನು ಕೊಟ್ಟಿದ್ದ ಚಿನ್ನದ ಗಟ್ಟಿಯನ್ನು ಅವರಿಗೆ ಒಪ್ಪಿಸಿ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿ ಹೊರಟುಬಿಟ್ಟೆ ಎಂದನು. ಅದನ್ನು ಕೇಳಿದ ಅರ್ಜುನ ಮೂಕವಿಸ್ಮಿತನಾಗಿ ನೋಡುತ್ತಾ ಇಂತಹ ಉಪಾಯ ನನಗೇಕೆ ಹೊಳೆಯಲಿಲ್ಲ ಎಂದುಕೊಂಡನು.

ಆಗ ಕೃಷ್ಣನು ನಗುತ್ತಾ ” ನೋಡಿದೆಯಾ ಅರ್ಜುನಾ! ನೀನು ಅಂದು ಕರ್ಣನೇ ಏಕೆ ದಾನಶೂರ ಎಂದು ನನ್ನಲ್ಲಿ ಕೇಳಿದ್ದೆ. ಈಗ ತಿಳಿಯಿತೇ? ನಾನು ಚಿನ್ನದ ಗಟ್ಟಿ ನಿನಗೆ ಕೊಟ್ಟಾಗ, ನಿನಗೆ ಅರಿವಿಲ್ಲದಂತೆಯೇ ಅದರ ಮೇಲೆ ಮೋಹ ಬೆಳೆದಿತ್ತು. ದಾನ ಮಾಡು ಎಂದಾಗ, ಜನರೆಲ್ಲರೂ ನಿನ್ನನ್ನು ದಾನಶ್ರೇಷ್ಠನೆಂದು ಹೊಗಳಬೇಕು ಎಂಬ ಆಸೆಯಿಂದ ಡಂಗುರ ಹೊಡೆಸಿ ೩ ದಿನಗಳಿಂದಲೂ ಬಿಡುವಿಲ್ಲದೇ ಕೊಂಚ ಕೊಂಚ ಮಾತ್ರವೇ ಕೊಡುತ್ತಾ ಬಂದೆ. ಆದರೆ ಕರ್ಣನಿಗೆ ಆ ಮೋಹವಿಲ್ಲ. ದ್ವಾರಕೆಯಿಂದ ಹೊರಡುವಾಗಲೇ ಅವಶ್ಯವಿದ್ದವರಿಗೆ ಕೈ ತುಂಬಾ ಕೊಟ್ಟು ಹೊರಟು ಹೋದ, ಕನಿಷ್ಟ ಧನ್ಯವಾದ ಸಹ ಅವನು ಬಯಸಿಲ್ಲ. ಆದ್ದರಿಂದ ನಿನಗೆ ಈಗ ವ್ಯತ್ಯಾಸ ಅರಿವಾದಂತಿರಬೇಕಲ್ಲ!” ಎಂದನು...ಆಗ ಅರ್ಜುನನು ದಂಗು ಬಡಿದವನಂತೆ ನೋಡುತ್ತಾ ಮನದಲ್ಲಿಯೇ ಕರ್ಣನನ್ನು ಕೊಂಡಾಡಿ, ತನ್ನ ಸೋಲೊಪ್ಪಿಕೊಂಡ.

No comments:

Post a Comment

If you have any doubts. please let me know...