December 26, 2021

ವೇದಗಳಲ್ಲಿ ಸತಿಸಹಗಮನ ಪದ್ಧತಿ

ಇಲ್ಲದುದನ್ನು ಇತ್ತೆನ್ನುವ ಸಂಪ್ರದಾಯ.

ನಮ್ಮಲ್ಲೊಂದು ಸಂಪ್ರದಾಯ ಇದೆ ಯಾವುದೇ ವಿಷಯ ಮಂಡಿಸಲಿ, ಅದಕ್ಕೆ ಆಧಾರ ಕೇಳುವುದು. ಇದು ಈ ಆಧಾರ ಕೇಳುವ ಸಂಪ್ರದಾಯ ನಮ್ಮದಲ್ಲ. ಅದು ವಿದೇಶೀ ಆಕ್ರಮಣಕಾರರು ದಯಪಾಲಿಸಿದ ಕೊಡುಗೆ ನಮಗೆ. ಅದಿರಲಿ, ಕೇಳಲಿ ದಾಖಲೆಗಳನ್ನು ಕೊಡಬಹುದಾದುದಕ್ಕೆ ಕೊಡೋಣ. ಆದರೆ ಇಲ್ಲದೇ ಇರುವುದನ್ನು ಇತ್ತು ಮತ್ತು ಇದು ಹೀಗೇ ಎಂದು ಎದೆಯುಬ್ಬಿಸಿ ನಮ್ಮ ಹಿಂದಿನವರ ಆಚರಣೆ ಸಂಪ್ರದಾಯಗಳು ಅರ್ಥಹೀನ ಎನ್ನುವ ಮಟ್ಟಕ್ಕೆ ಇಳಿಯುವುದು ಅಸಹ್ಯ. ಅಂತಹ ಒಂದು ನಿದರ್ಶನ ಇಲ್ಲಿದೆ. 

ಉದೀರ್ಷ್ವ ನಾರ್ಯಭಿ ಜೀವಲೋಕಂ ಗತಾಸುಮೇತಮುಪ ಶೇಷ ಏಹಿ |
ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ || ಇದು ಋಗ್ವೇದದ ಹತ್ತನೇ ಮಂಡಲದ ಹದಿನೆಂಟನೇ ಸೂಕ್ತ. ಇಲ್ಲಿ ಈ ಋಕ್ಕನ್ನು ಗಮನಿಸಿದರೆ ಈಗಿನ ಬೊಗಳೆಗಳೆಲ್ಲಾ ಅರ್ಥವಾಗುತ್ತವೆ. ಇಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿರುತ್ತಾನೆ. ಮರಣ ಹೊಂದಿದ ವ್ಯಕ್ತಿಯ ಶವವನ್ನು ಬಲವಾಗಿ ತಬ್ಬಿಕೊಂಡು ತಾನೂ ಸಹಗಮನ ಮಾಡುತ್ತೇನೆಂದು ಬಯಸುತ್ತಾಳೆ. ಆಗ ಅವಳ ಮನೆಯ ಹಿರಿಯರು ಅವಳನ್ನು ತಡೆದು. ನೀನು ಅವನೊಡನೆ ಹೋಗುವುದರಿಂದ ಆತನಿಗೆ ಪುನಃ ಜೀವ ಬರುವುದಿಲ್ಲ ಒಮ್ಮೆ ಹೋದ ಪ್ರಾಣ ಪುನಃ ಬರುವುದಿಲ್ಲ. ನೀನು ನಿನ್ನ ದುಃಖವನ್ನು ಸಹಿಸಿಕೊಂಡು ಮನೆಗೆ ಬಾ ಎಂದು ವಿನಂತಿಸಲಾಗಿದೆ. "ಉದೀರ್ಷ್ವ ನಾರ್ಯಭಿ ಜೀವಲೋಕಂ ಗತಾಸುಮೇತಮುಪ ಶೇಷ ಏಹಿ" ಎನ್ನುವಲ್ಲಿ ಮೃತ ಶರೀರದಲ್ಲಿ ಏನಿದೆ ? ಪ್ರಾಣ ಹೊರಟಮೇಲೆ ಅದರಲ್ಲಿ ಏನೂ ಉಳಿಯುವುದಿಲ್ಲ. ಪ್ರಾಣವು ಈ ದೇಹದಿಂದ ಬೇರೆ ಲೋಕಕ್ಕೆ ಹೋಗಿಯಾಗಿದೆ, ನಿನ್ನ ಭಾವನೆಗಳು ಮೃತ ಶರೀರಕ್ಕೆ ಅರ್ಥವಾಗುವುದಿಲ್ಲ. "ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ" ಜೀವದಿಂದಿರುವ ನಿನ್ನ ಕುಟುಂಬದವರು ಬಾಂಧವರು ಇರುವ ಕಡೆ ಬಂದು ಬಿಡು. ಮೃತ ಶರೀರದಿಂದ ಎದ್ದು ಬಾ ಎಂದು ಹೇಳುವುದು ಕಂಡುಬರುತ್ತದೆ. "ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ" ನಿನ್ನ ವಿವಾಹಕಾಲದಲ್ಲಿ ಮನೆಯನ್ನು ಬೆಳಗುವ ಮಕ್ಕಳನ್ನು ಆಶಿಸಲಾಗಿದೆ. ಆದರೆ ಈಗ ಅದ್ಯಾವುದಕ್ಕೂ ದುಃಖಿಸಬೇಡ ಎನ್ನುವುದು ಈ ಋಕ್ಕಿನ ಆಶಯ. ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಬಲವಂತದ ಸತಿ ಗಮನ ಇರಲೇ ಇಲ್ಲ. ತನ್ನ ಪತಿಯ ಮೇಲಿನ ಪ್ರೀತಿಯಿಂದ ತಾನೂ ಸಾಯಲು ಉದ್ಯುಕ್ತಳಾಗುತ್ತಿದ್ದಳು. ಆದರೆ ಹತ್ತನೇ ಶತಮಾನದ ನಂತರ ಪರಕೀಯ ಆಕ್ರಮಣ ಜಾಸ್ತಿಯಾದಾಗ ಅಲ್ಲಿಂದ ಬಂದ ಕೊಡುಗೆ ಅಷ್ಟೇ. ಹಾಗೆ ನೋಡಿದರೆ ಸತಿ ಸಹಗಮನಕ್ಕಿಂತಲೂ ಕ್ರೂರವಾದ ಇನ್ನೊಂದು ಪದ್ಧತಿ ಇತ್ತು. ಅದನ್ನು ನಮ್ಮ ಯಾವ ಇತಿಹಾಸಕಾರನೂ ಹೇಳುವುದಿಲ್ಲ. ಅದರ ಕುರಿತು ಇಲ್ಲಿ ಬೇಡವೇ ಬೇಡ. ಎಲ್ಲೂ ಇಲ್ಲದುದು ನಮ್ಮಲ್ಲಿನ ಪಿಡುಗು ಎಂದು ಬೊಬ್ಬೆ ಹೊಡೆಯುವವರು ಈ ದೃಷ್ಟಿಯಲ್ಲೂ ಒಮ್ಮೆ ಗಮನಿಸಬೇಕಲ್ಲವೆ. ಇಲ್ಲದುದನ್ನು ಇತ್ತು ಎನ್ನುವವರು ಇರುವುದನ್ನು ವಿಕೃತವಾಗಿ ಬಣ್ಣಿಸುವವರು ಒಮ್ಮೆ ಆಲೋಚಿಸಬೇಕು. 

#ಇರುವುದೆಲ್ಲವ_ಬಿಟ್ಟು 
ಸದ್ಯೋಜಾತರು

No comments:

Post a Comment

If you have any doubts. please let me know...