ತೈತ್ತಿರೀಯ ಬ್ರಾಹ್ಮಣದಲ್ಲಿ ಒಂದು ಸನ್ನಿವೇಶ ಬರುತ್ತದೆ. ಇಂದ್ರ ವೃತ್ರಾಸುರನನ್ನು ಸಂಹರಿಸಿದ ನಂತರ ಬರುವ ಘಟನೆ ಇದು. ನಮುಚಿ ಎನ್ನುವ ಅಸುರನೊಬ್ಬ ಪ್ರಬಲನಾಗಿದ್ದ. ಈತ ಪದೇ ಪದೇ ಇಂದ್ರನಿಗೆ ಉಪಟಳ ಕೊಡುವುದು, ಯುದ್ಧಕ್ಕೆ ಬರುವುದನ್ನೇ ತನ್ನ ಕಾಯಕ ಮಾಡಿಕೊಂಡಿದ್ದ. "ಇಂದ್ರೇಣ ಸಹ ಯುದ್ಧಂ ನ ಮುಂಚತೀತಿ ನಮುಚಿಃ" ಅಂದರೆ ಇಂದ್ರನೊಡನೆ ಈತನ ಯುದ್ಧ ಕೊನೆಯಾಗುತ್ತಲೇ ಇರಲಿಲ್ಲವಂತೆ. ಇಂದ್ರನ ಯಾವ ವಿಧವಾದ ಆಯುಧಗಳಿಗೂ ಈತ ಜಗ್ಗುತ್ತಿರಲಿಲ್ಲ.
ಇಂದ್ರ ಆಲೋಚಿಸಿದ, ಈತ ನನ್ನ ಯಾವುದೇ ಅಸ್ತ್ರಕ್ಕೂ ಮಣಿಯುವವನಲ್ಲ ಈತನನ್ನು ನನ್ನ ಶರೀರ ಬಲದಿಂದಲೇ ಬಗ್ಗಿಸ ಬೇಕೆಂದು ಮಲ್ಲ ಯುದ್ಧವನ್ನು ಆರಂಭಿಸಿದ. ಈಗ ನಮುಚಿಯ ಹಿಡಿತವೇ ಬಲವಾಗುತ್ತಾ ಸಾಗಿತು ನಮುಚಿಯಿಂದ ಬಿಡಿಸಿಕೊಳ್ಳಲು ಅಸಾಧ್ಯವಾಗುತ್ತಾ ಬಂತು. ಆಗ ನಮುಚಿಯು ಇಂದ್ರನನ್ನು ಕುರಿತು ತಾನು ಹೇಳಿದಂತೆ ಕೇಳುವುದಾದರೆ ಮಾತ್ರ ಬಿಡುವೆನು ಎಂದು ಹೇಳುತ್ತಾನೆ. ಅದಕ್ಕೆ ಇಂದ್ರನು ಒಪ್ಪಿಕೊಂಡು ಅವನ ಹಿಡಿತದಿಂದ ಬಿಡುವಂತೆ ಹೇಳುತ್ತಾನೆ. ಆಗ ಇಬ್ಬರಲ್ಲೂ ಒಂದು ಒಪ್ಪಂದವಾಗುತ್ತದೆ. ಇಂದ್ರ ! ನೀನು ಪುನಃ ನನ್ನೊಂದಿಗೆ ಯಾವುದಾದರೂ ಉಪಾಯ ಹೂಡಿ ನನ್ನನ್ನು ಕೊಲ್ಲಬೇಕೆಂದು ಬರಬಹುದು ಆದರೆ ನನ್ನನ್ನು ಕೊಲ್ಲಬೇಕೆನ್ನುವ ಉದ್ದೇಶ ಈಡೇರಬೇಕಿದ್ದರೆ ನಿನ್ನ ಆಯುಧ ಹಸಿಯಾಗಿರಕೂಡದು ಒಣಗಿರಕೂಡದು. ಹಗಲಿನಲ್ಲಿಯೂ ಹಾಗೂ ರಾತ್ರಿಯಲ್ಲಿಯೂ ನನ್ನನ್ನು ಕೊಲ್ಲಕೂಡದು. ಈ ನಿಯಮಗಳಿಗೆ ನೀನು ಒಪ್ಪುವೆಯಾದರೆ ಬಿಡುತ್ತೇನೆ ಎನ್ನುತ್ತಾನೆ. ಕೂಡಲೇ ಇಂದ್ರ ಒಪ್ಪಿಕೊಳ್ಳುತ್ತಾನೆ. ತಕ್ಷಣ ನಮುಚಿ ಇಂದ್ರನನ್ನು ಬಿಡುತ್ತಾನೆ.
ಹೀಗೇ ಕೆಲವು ಸಮಯ ಕಳೆಯುತ್ತದೆ. ಇಂದ್ರನಿಗೆ ಅವನನ್ನು ಹೇಗೆ ಮುಗಿಸಬೇಕು ಎನ್ನುವ ಚಿಂತೆಯಾಗುತ್ತದೆ. ಹೀಗೇ ಆಲೋಚಿಸುತ್ತಿರುವಾಗ ಇಂದ್ರನಿಗೆ ತನ್ನೆದುರಿಗೆ ಇದ್ದ ಸಮುದ್ರದ ಅಲೆ ಕಾಣಿಸುತ್ತದೆ. ತಟ್ಟನೆ ಆಲೋಚಿಸುತ್ತಾನೆ. ಇದೇ ಸೂಕ್ತ. ಸಮುದ್ರದ ನೊರೆ ಹಸಿಯೂ ಅಲ್ಲ ಒಣಗಿಯೂ ಇಲ್ಲ ಎಂದು ನಿರ್ಧರಿಸಿ ಅದನ್ನೇ ಆಯುಧವನ್ನಾಗಿ ಪರಿವರ್ತಿಸಿಕೊಂಡು ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಉಷಃಕಾಲ ಹೇಗೂ ಸೂರ್ಯೋದಯವೂ ಆಗುವುದಿಲ್ಲ. ರಾತ್ರಿಯಂತೂ ಅಲ್ಲ. ಆದುದರಿಂದ ಅಂತಹ ಕಾಲದಲ್ಲಿ ನಮುಚಿಯನ್ನು ಕೊಲ್ಲಲು ಹೋಗುತ್ತಾನೆ. ನಮುಚಿಯನ್ನು ಆಯುಧದಿಂದ ಕತ್ತರಿಸುತ್ತಾನೆ. ಆಗ ನಮುಚಿ ಸಾಯದೇ ಇಂದ್ರನಿಗೆ ಮಿತ್ರದ್ರೋಹೀ ಎಂದು ಅಟ್ಟಿಸಿಕೊಂಡು ಬರುತ್ತಾನೆ. ಇಂದ್ರ ಭಯಗ್ರಸ್ತನಾಗುತ್ತಾನೆ. ಇಂದ್ರ ಆಗ ಅಪಾಮಾರ್ಗವೆನ್ನುವ ಸಸ್ಯವನ್ನು ಸೃಷ್ಟಿಸಿ ಅದರ ಸಮಿತ್ತಿನಿಂದಲೇ ತನ್ನ ವೀರ್ಯವೃದ್ಧಿಗಾಗಿ ಹೋಮಮಾಡಿ ಬಲ ಹೆಚ್ಚಿಸಿಕೊಂಡು ನಮುಚಿಯನ್ನು ಸಂಹರಿಸುತ್ತಾನೆ. ಇಂದಿಗೂ ವಿರೋಧಿಗಳ ಉಪಟಳದಿಂದ ಪಾರಾಗುವ ಸಲುವಾಗಿ ಅಪಾಮಾರ್ಗದಿಂದ ಸಮಿತ್ತುಗಳನ್ನು ತಯಾರಿಸಿ ಹೋಮಮಾಡುತ್ತಾರೆ. ಈ ನಮುಚಿ ದಸ್ಯುವಾಗಿದ್ದ.
#ಅಪಾಮಾರ್ಗ_ನಮುಚಿ
ಸದ್ಯೋಜಾತ
No comments:
Post a Comment
If you have any doubts. please let me know...