ಮಾರ್ಕಂಡೇಯ ಮುನಿಗಳು ದೀರ್ಘಾಯುಷಿ ಯಾದುದರ ಬಗೆಗಿನ ಹಲವು ಕಥೆಗಳಲ್ಲಿ ಇದು ಒಂದು.
ಮೃಕಂಡು ಮನಿಗಳ ಮಗನಿಗೆ 9 ವರ್ಷಕ್ಕೆ ಮರಣ ಯೋಗ ಇತ್ತು. ಏಳನೇ ವರ್ಷಕ್ಕೆ ಉಪನಯನ ಮಾಡಿದ ಮುನಿಗಳು ಮಗನಿಗೆ ಹೀಗೆಂದರು.
"ಮಗು ಸಾತ್ವಿಕರು ಹಿರಿಯರು ಕಂಡಲ್ಲಿ ನಮಸ್ಕಾರ ಮಾಡು ಅವರ ಆಶೀರ್ವಾದವನ್ನು ಪಡೆದುಕೋ."
*ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ| ಚತ್ವಾರಿ ತಸ್ಯ ವರ್ಧಂತೇ ಆಯುಃ ಪ್ರಜ್ಞಾ ಯಶೋ ಬಲಂ*॥
ನಮಸ್ಕಾರ ಮಾಡುವುದರಿಂದ; ಜ್ಞಾನ ವೃದ್ಧರ ಸೇವೆಯಲ್ಲಿ ನಿರತರಾದವರಿಗೆ ಆಯುಷ್ಯ ಪ್ರಜ್ಞೆ ಯಶಸ್ಸು ಬಲಗಳು ವೃದ್ಧಿಯಾಗುತ್ತವೆ.
ಬಾಲಕ ಮಾರ್ಕಂಡೇಯ ಹಾಗೆಯೇ ಮಾಡಿದ.
ತನ್ನ ಆಶ್ರಮದ ಮಾರ್ಗದಲ್ಲಿ ಬಂದ ಎಲ್ಲಾ ಹಿರಿಯ ಜ್ಞಾನಿಗಳ ಪಾದಕ್ಕೆ ಅಭಿವಾದನ ಮಾಡಿ ನಮಿಸುತ್ತಿದ್ದ. ದೀರ್ಘಾಯುಷ್ಮಾನ್ ಭವ ಎಂಬ ಆಶೀರ್ವಾದಗಳನ್ನು ಪಡೆದು ಹಿಂತಿರುಗುತ್ತಿದ್ದ.
ಆಶ್ರಮದ ಮಾರ್ಗದಲ್ಲಿ ಬಂದಂತಹ ಸಪ್ತಋಷಿ ಗಳಿಗೂ ಕೂಡ ಬಾಲಕನು ಅಭಿವಾದನ ಮಾಡಿದ. ದೈವ ಸಂಕಲ್ಪದಂತೆ ಪೂರ್ವಾಪರಗಳನ್ನು ಆಲೋಚನೆ ಮಾಡದೆ ಸಪ್ತಋಷಿಗಳು ಬಾಲಕ ಮಾರ್ಕಂಡೇಯನಿಗೆ ದೀರ್ಘಾಯುಷ್ಯ ದ ವರವನ್ನಿತ್ತರು.
ಜ್ಞಾನಿಗಳ ಸಜ್ಜನರ ಮುಖದಿಂದ ಹೊರಟ ಮಾತುಗಳು ಕೂಡ ಸುಳ್ಳಾಗಲು ಪರಮಾತ್ಮ ಬಿಡುವುದಿಲ್ಲ.
ಕಾಲ ಕಳೆಯಿತು.
ನಿತ್ಯ ನಿರಂತರ ಪರಮ ಶಿವನನ್ನು ಆರಾಧಿಸುತ್ತಿದ್ದ ಬಾಲಕ ಮಾರ್ಕಂಡೇಯನ ಜೀವ ಒಯ್ಯಲು ಯಮದೂತರು ಬಂದರು ಅವರಿಗೆ ಬಾಲಕನನ್ನು ಸ್ಪರ್ಶಿಸಲು ಆಗಲಿಲ್ಲ. ಮಹಿಷ ವಾಹನ ನಾಗಿ ಯಮನೇ ಬಂದರೂ ಕೂಡ ಪ್ರಯೋಜನವಾಗಲಿಲ್ಲ. ಬಾಲಕನ ಸುತ್ತ ಆವರಿಸಿದ್ದ ಆಶೀರ್ವಾದದ ಕವಚವನ್ನು ಛೇದಿಸಲು ಸಾಧ್ಯವಾಗಲಿಲ್ಲ. ಶಿವ ಭಕ್ತ ಮಾರ್ಕಂಡೇಯನ ಆಯುಷ್ಯವನ್ನು ಸಪ್ತ ಕಲ್ಪದ ತನಕ ತಿದ್ದಿ ಬಿಡುವಂತೆ ಯಮಧರ್ಮರಾಜನಿಗೆ ಪರಶಿವನು ಸೂಚಿಸುತ್ತಾನೆ.
ಮಾರ್ಕಂಡೇಯ ಋಷಿಗಳನ್ನು ಸ್ಮರಿಸುವವನಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ.
ಹಿರಿಯರು ಬಂದಾಗ ಎದ್ದು ನಿಲ್ಲುವುದು ಕರ್ತವ್ಯ ದೊಡ್ಡವರು ಸನಿಹದಿಂದ ಸಾಗುತ್ತಿದ್ದಾಗಲೂ ಎದ್ದು ನಿಲ್ಲದವನ ಆಯುಷ್ಯಕ್ಕೆ ಪೆಟ್ಟಿದೆ.
*ಊರ್ದ್ವಂ ಪ್ರಾಣ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ*
ಹಿರಿಯರು ಸನಿಹದಿಂದ ಸಾಗುತ್ತಿದ್ದಾಗ ಕಿರಿಯರ ಪ್ರಾಣಶಕ್ತಿ ತಾನಾಗಿ ಮೇಲಕ್ಕೆ ಚಿಮ್ಮುತ್ತದೆ. ಆಗ ಎದ್ದು ನಿಂತಲ್ಲಿ ಅದು ಶಾಂತವಾಗಿ ಶರೀರದಲ್ಲಿಯೇ ನೆಲೆಯಾಗುತ್ತದೆ ಇಲ್ಲವಾದರೆ ಆಯುಷ್ಯ ಕ್ಷೀಣ ವಾಗುತ್ತದೆ.
ಗುರು-ಹಿರಿಯರನ್ನು ತಂದೆತಾಯಿಗಳನ್ನು ಜ್ಞಾನಿಗಳನ್ನು ಗೌರವಿಸುವುದರಿಂದ ; ನಮಸ್ಕರಿಸುವುದರಿಂದ ನಮಗೆ ಸರ್ವ ಸೌಭಾಗ್ಯಗಳು ಲಭಿಸುತ್ತವೆ.
ನಮಸ್ಕಾರ ಮಾಡುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ.
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ
No comments:
Post a Comment
If you have any doubts. please let me know...