ಭಾಷಾ ಬಳಕೆಯಲ್ಲಿ ನಾವು ತಿಳಿದೋ ತಿಳಿಯದೆಯೋ ಕೆಲವೊಮ್ಮೆ ಸೇರಿಕೊಂಡ ತಪ್ಪುಗಳನ್ನು ನಾವು ಸರಿಪಡಿಸಿಕೊಳ್ಳದಿದ್ದರೆ ಅದರ ರಾಷ್ಟ್ರೀಯತೆಗೊ, ಸೌಂದರ್ಯಕ್ಕೋ ಅಪಚಾರ ಎಸಗಿದಂತೆ. ಇಂದು ಮುದ್ರಣಗೊಳ್ಳುವ ಆಮಂತ್ರಣ ಪತ್ರಿಕೆಗಳಲ್ಲಿ ವಿಳಾಸ ಬರೆಯುವಲ್ಲಿ ಶ್ರೀ/ಶ್ರಿಮತಿ ಅಥವಾ ಶ್ರೀಮತಿ/ಶ್ರೀ ಎಂದು ಮುದ್ರಿಸಲಾಗುತ್ತಿದೆ. ಹೀಗೆ ಮುದ್ರಿಸುವುದರ ಉದ್ದೇಶ ಪುರುಷ ಮತ್ತು ಸ್ತ್ರೀ ಗೌರವ ಸೂಚಿಸಿ ಆಮಂತ್ರಿಸುವದು. ಆದರೆ 'ಶ್ರೀ' ಅನ್ನುವದು ಸ್ತ್ರೀವಾಚಕ. ಅದನ್ನು ಪುರುಷರ ಹೆಸರಿನ ಹಿಂದೆ ಬಳಸುತ್ತೇವೆ ! ಶ್ರೀ ಗಣಪತಿ ಶಾಸ್ತ್ರಿ ಎಂದು. ಇದು ಸರಿಯಲ್ಲ. ಅಂದರೆ, ಶ್ರೀ ಮತ್ತು ಶ್ರೀಮತಿ ಅನ್ನುವ ಎರಡೂ ಸ್ತ್ರೀಯರಿಗೆ ಬಳಸಲ್ಪಡುವ ಗೌರವ ಪದ. ಅಂದರೆ ಸ್ತ್ರೀಯರ ಹೆಸರಿನ ಹಿಂದೆ ಶ್ರೀ ಅಥವ ಶ್ರೀಮತಿ ಯಾವುದನ್ನು ಬೇಕಾದರೂ ಬಳಸಬಹುದು. ಆದರೆ ಪುರುಷರ ಹೆಸರಿನ ಹಿಂದೆ ಶ್ರೀ ಬಳಸುವುದು ಗೌರವ ಪದವಾಗುವ ಬದಲು ಅಗೌರವ ಪದ ಬಳಸಿದಂತಾಗುತ್ತದೆ.
ಹಾಗಿದ್ದರೆ, ಹೇಗೆ ಬಳಸುವುದು ಸರಿ? ಶ್ರೀ ಗೌರಿ, ಶ್ರೀ ಪಾರ್ವತಿ, ಶ್ರೀ ಲಕ್ಷ್ಮಿ ಅಥವಾ ಶ್ರೀಮತಿ ಗೌರಿ, ಶ್ರೀಮತಿ ಪಾರ್ವತಿ, ಶ್ರೀಮತಿ ಲಕ್ಷ್ಮಿ , ಹೀಗೆ ಬಳಸಬೇಕು. ಪುರುಷರಿಗೆ ಶ್ರೀಯುತ ರಾಮಚಂದ್ರ, ಶ್ರೀಯುತ ಗೌರೀಶ, ಶ್ರೀಯುತ ಗಣೇಶ ಅಥವಾ ಶ್ರೀಮಾನ್ ಗೌರೀಶ, ಶ್ರೀಮಾನ್ ರಾಮಚಂದ್ರ, ಶ್ರೀಮಾನ್ ಗಣೇಶ ಎಂದು ಬಳಸಬೇಕು.
ಆದ್ದರಿಂದ ಆಮಂತ್ರಣಾದಿಗಳಲ್ಲಿ ಶ್ರೀ/ಶ್ರೀಯುತ ಇಲ್ಲವೇ ಶ್ರೀಯುತ/ಶ್ರೀ, ಅಥವಾ ಶ್ರೀ/ಶ್ರೀಮಾನ್, ಶ್ರೀಮಾನ್/ಶ್ರೀ ಹೀಗೆ ಬಳಸುವದು ಸರಿಯಾದ ಕ್ರಮ. ಅದೇ ರೀತಿ 'ಸರ್ವರಿಗೂ ಸುಸ್ವಾಗತ ' ಅನ್ನುವುದು ತಪ್ಪು . "ಸರ್ವರಿಗೂ ಸ್ವಾಗತ " ಸರಿಯಾದ ಕ್ರಮ. 'ಸುಸ್ವಾಗತ ' ಅನ್ನುವುದು ಅತಿಥೇಯರು ಬಳಸುವ ಪದವೇ ಅಲ್ಲ. ಅದು ಅತಿಥಿಗಳಾಗಿ ಬರುವವರು ಹೇಳಬೇಕಾದ 'ಸ್ವಾಗತ ಕ್ಕೆ' ಉತ್ತರ 'ಸುಸ್ವಾಗತ ' !
No comments:
Post a Comment
If you have any doubts. please let me know...