July 8, 2025

ವರ್ತಿಕಾ - ಕಲವಿಂಕ - ಗುಬ್ಬಿ

 ಸಂಜೆಯ ಇಳಿ ಹೊತ್ತಿನಲ್ಲಿ ಕೇಳುವ ಹಕ್ಕಿಗಳ ಕಲರವವನ್ನು ಕೇಳಿದೊಡನೆ ಹಿಂದಿನ ಜೀವನಕ್ಕೆ ಕೊಂಡೊಯ್ಯುವುದು ಮಾತ್ರವಲ್ಲ ಪಶು ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವುದು ಕಾಣುವುದೇ ಆನಂದವನ್ನುಂಟು ಮಾಡುತ್ತದೆ. ನನಗೆ ಅತ್ಯಂತ ಪ್ರೀತಿಯ, ಹಾಗೂ ಮಾನವನ ಜೊತೆಗೇ ಜೀವನ ಕಟ್ಟಿಕೊಳ್ಳಲು ಹಂಬಲಿಸುವ ಒಂದು ಪುಟ್ಟ ಹಕ್ಕಿಯ ಕುರಿತಾಗಿ ಈ ಹಿಂದೆ ಬರೆದಿದ್ದರೂ ಪುನಃ ಈ ಸಂದರ್ಭದಲ್ಲಿ ಮೆಲುಕು ಹಾಕುವೆ. . . .

ಗುಬ್ಬಿ ಅತ್ಯಂತ ಪ್ರಾಚೀನ ಪಕ್ಷಿ ಪ್ರಬೇಧ ಎನ್ನಿಸಿಕೊಳ್ಳುತ್ತದೆ. ಗುಬ್ಬಿಯನ್ನು ಇಷ್ಟಪಡದ ಮನುಷ್ಯ ಇಲ್ಲವೇ ಇಲ್ಲವೇನೋ. ಅಷ್ಟು ಮುದ್ದಾದ ಚಿಕ್ಕ ಹಕ್ಕಿ. ಇದು ಒಮ್ಮೆ ಒಂದು ಮನೆಗೆ ಬಂತು ಅಂದರೆ ಅಲ್ಲಿಗೆ ಪುನಃ ಪುನಃ ಬರುವುದು ಅದರ ಗುಣಗಳಲ್ಲೊಂದು. ಇದರ ಪ್ರಾಚೀನತೆಯನ್ನು ಮೊದಲು ಗಮನಿಸೋಣ.
ಋಗ್ವೇದ ೧ನೇ ಮಂಡಲದ ೧೧೬ನೇ ಸೂಕ್ತದಲ್ಲಿ ಇದನ್ನು ವರ್ತಿಕಾ ಎಂದು ಕರೆಯಲಾಗಿದೆ.
ಆಸ್ನೋ ವೃಕಸ್ಯ ವರ್ತಿಕಾಮಭೀಕೇ ಯುವಂ ನರಾ ನಾಸತ್ಯಾ ಮುಮುಕ್ತಂ |
ಉತೋ ಕವಿಂ ಪುರುಭುಜಾ ಯುವಂ ಹ ಕೃಪಮಾಣಮಕೃಣು ತಂ ವಿಚಕ್ಷೇ ||
ಕಣ್ಣುಗಳಾದ ನಾಸತ್ಯರೇ ನೀವಿಬ್ಬರೂ ವೃಕ ವರ್ತಿಕಗಳ ಕಾಳಗದಲ್ಲಿ ವೃಕದ ಬಾಯಿಯಿಂದ ವರ್ತಿಕಾ ಎನ್ನುವ ಹಕ್ಕಿಯನ್ನು ಬಿಡಿಸಿದಿರಿ, ಮತ್ತು ಮಹಾಬಾಹುಗಳಾದ ನೀವೇ ಸ್ತುತಿಸುತ್ತಿರುವ ಕವಿ ಎನ್ನುವ ಅಂಧ ಋಷಿಗೆ ಚೆನ್ನಾಗಿ ನೋಡುವಂತಾಗಲು ಅನುಗ್ರಹಿಸಿದಿರಿ ಎಂದು ಈ ಋಕ್ಕಿನ ಅರ್ಥ.
’ವರ್ತಿಕಾಮಭೀಕೇ’ ಎಂದು ಋಕ್ಕಿನಲ್ಲಿ ಉಕ್ತವಾಗಿದೆ ಇಲ್ಲಿ ಅಭೀಕ ಎನ್ನುವುದು ಸಂಗ್ರಾಮಗಳಲ್ಲಿ ಒಂದನ್ನು ನಿರ್ದೇಶಿಸುತ್ತದೆ. ’ವಿಕರ್ತಕಸ್ಯ ವೃಕಃ’ ಎಂದಾದಾಗ ಅದು ಹಿಂಸಾ ಪ್ರವೃತ್ತಿಯ ನಾಯಿ ಎಂದು ಅರ್ಥೈಸಲಾಗಿದೆ. ’ವಿವಿಧಮಸೌ ಕೃಂತತಿ ತಸ್ಮಾದ್ವೃಕಃ’ ಎಂದು ತನಗೆ ಸಿಕ್ಕಿದ ಆಹಾರವನ್ನು ಕಚ್ಚಿ ಕಚ್ಚಿ ತುಂಡು ತುಂಡು ಮಾಡಿ ತಿನ್ನುವುದರಿಂದ ’ವೃಕ’ ಎಂದರೆ(ವಾಸ್ತವದಲ್ಲಿ ತೋಳ ಎಂದು ಹೇಳಬಹುದಾದರೂ) ಇಲ್ಲಿ ನಾಯಿಯ ಕುರಿತಾಗಿ ಹೇಳಲಾಗಿದೆ.
ಒಂದು ಅರಣ್ಯದಲ್ಲಿ ಒಮ್ಮೆ ನಾಯಿಗೂ ಗುಬ್ಬಚ್ಚಿಗೂ ಜಗಳವಾಗುತ್ತದೆ. ಆಗ ನಾಯಿಯು ಗುಬ್ಬಚ್ಚಿಗಿಂತಲೂ ಬಲಿಷ್ಠನಾಗಿದ್ದರಿಂದ ಗುಬ್ಬಚ್ಚಿಯನ್ನು ತನ್ನ ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಇದನ್ನರಿತ ಅಶ್ವಿನೀ ದೇವತೆಗಳು ಗುಬ್ಬಚ್ಚಿಯನ್ನು ನಾಯಿಯ ಬಾಯಿಯಿಂದ ಬಿಡಿಸುತ್ತಾರೆ ಎನ್ನುವುದಾಗಿ ಹೇಳಲಾಗಿದೆ. ಇಲ್ಲಿ ಬೇರೆ ಬೇರೆ ಅರ್ಥವನ್ನು ಹೀಗೂ ಆಗುತ್ತದೆ ಎಂದು ಕೊಟ್ಟಿದ್ದರೂ ಸಹ ಮುಂದಿನ ಋಕ್ಕುಗಳಲ್ಲಿ ಇದೇ ಅರ್ಥವನ್ನು ಗ್ರಹಿಸಿರುವುದರಿಂದ ಇದನ್ನೇ ಆಯ್ದುಕೊಳ್ಳಲಾಗಿದೆ. ’ಪುನಃ ಪುನಃ ವರ್ತತೇ’ ಎಂದರೆ ಒಮ್ಮೆ ಗುಬ್ಬಿ ಬಂದರೆ ಪುನಃ ಪುನಃ ಅದೇ ಜಾಗದಲ್ಲಿ ಕಾಳುಗಳನ್ನು ಹುಡುಕಲು ಬರುತ್ತದೆ ಎನ್ನುವ ಅರ್ಥವೂ ಸಹ ನೀಡಲಾಗಿದೆ.
ನಾನಿಲ್ಲಿ ಗುಬ್ಬಚ್ಚಿಯನ್ನೇ ಇಟ್ಟುಕೊಂಡಿದ್ದೇನೆ. ಅಂದರೆ ಯಾವುದೋ ಒಂದು ಕಾಲದಿಂದ ಇಂದಿನ ತನಕ ತನ್ನ ಸ್ವಭಾವದಲ್ಲಿ ಕಿಂಚಿತ್ತೂ ಬದಲಾಯಿಸಿಕೊಳ್ಳದೇ ಬಂದ ಚಿಕ್ಕ ಸಾಧುಸ್ವಭಾವದ ಸುಂದರ ಹಕ್ಕಿ ಗುಬ್ಬಚ್ಚಿ.
೧. ಗುಬ್ಬಚ್ಚಿಗಳಿಗೆ ಮತ್ತು ಧಾನ್ಯಗಳನ್ನು ತಿಂದು ಜೀವಿಸುವ ಪಕ್ಷಿಗಳಿಗೆ ಆಕಾಶದಲ್ಲಿ ಮೊದಲನೆಯ ಮಾರ್ಗವಿದೆ.
೨. ಕಾಗೆಗಳಿಗೆ ಮತ್ತು ಹಣ್ಣು-ಹಂಪಲುಗಳನ್ನು ತಿಂದು ಜೀವಿಸುವ ಪಕ್ಷಿ ಗಳಿಗೆ ಆಕಾಶದಲ್ಲಿ ಎರಡನೆಯ ಮಾರ್ಗವಿದೆ.
೩. ಭಾಸಪಕ್ಷಿಗಳು, ನೀರುಕೊಕ್ಕರೆಗಳು, ಕಡಲಹದ್ದುಗಳು?ಕಾಗೆಯೇ ಮುಂತಾದುವು ಹೋಗುವ ಮಾರ್ಗ ಕ್ಕಿಂತಲೂ ಮೇಲಿನ ಮೂರನೆಯದಾದ ಆಕಾಶಮಾರ್ಗದಲ್ಲಿ ಹಾರಾಡಬಲ್ಲುವು.
೪. ಭಾಸ ಕ್ರೌಂಚಗಳೇ ಮೊದಲಾದ ಪಕ್ಷಿಗಳು ಹಾರುವ ಮಾರ್ಗಕ್ಕಿಂತಲೂ ಮೇಲಿನ ನಾಲ್ಕನೆಯದಾದ ಆಕಾಶಮಾರ್ಗದಲ್ಲಿ ಗಿಡಗಗಳು ಹಾರಾಡಬಲ್ಲುವು.
೫. ಅದಕ್ಕಿಂತಲೂ ಎತ್ತರವಾದ ಐದನೆಯ ಆಕಾಶಮಾರ್ಗದಲ್ಲಿ ಹದ್ದುಗಳು ಹಾರಾಡಬಲ್ಲುವು.
೬. ಬಲ ವೀರ್ಯಗಳಿಂದಲೂ ರೂಪ ಯೌವನಗಳಿಂದಲೂ ಕೂಡಿರುವ ಹಂಸಪಕ್ಷಿಗಳದ್ದು?ಹದ್ದುಗಳು ಸಂಚರಿಸುವ ಐದನೆಯ ಆಕಾಶ ಮಾರ್ಗಕ್ಕಿಂತಲೂ ಮೇಲಿನ ಆರನೆಯದಾದ ಆಕಾಶಮಾರ್ಗವಾಗಿರುತ್ತದೆ.
೭. ಗರುಡಪಕ್ಷಿಗಳ ಮಾರ್ಗವು ಹಂಸಪಕ್ಷಿಗಳ ಮಾರ್ಗಕ್ಕಿಂತಲೂ ಮೇಲಿನದು. ಎಲ್ಲ ಪಕ್ಷಿಗಳಿಗಿಂತಲೂ ಗರುಡಪಕ್ಷಿಗಳು ಹೆಚ್ಚು ಎತ್ತರದಲ್ಲಿ ಹಾರಾಡಬಲ್ಲುವು. ವಾನರಶ್ರೇಷ್ಠರೇ ನಾವೆಲ್ಲರೂ ಗರುಡ ಮತ್ತು ಅರುಣರ ವಂಶಜರು. ಹೆಚ್ಚು ಎತ್ತರದಲ್ಲಿರುವ ಏಳನೆಯ ಆಕಾಶಮಾರ್ಗದಲ್ಲಿ ಹಾರುವ ಸಾಮರ್ಥ್ಯವಿರುವವರು. ಅಷ್ಟು ಎತ್ತರಕ್ಕೆ ಹಾರಬಲ್ಲ ನಾವು ಬಹಳ ದೂರದೃಷ್ಟಿಯುಳ್ಳವರೂ ಆಗಿದ್ದೇವೆ. ಎನ್ನುವ ಈ ರೀತಿಯ ವರ್ಗೀಕರಣದಲ್ಲಿ ಗುಬ್ಬಚ್ಚಿಗಳು ಅತ್ಯಂತ ಕೆಳಗೆ ಹಾರಾಡಬಲ್ಲವು ಅನ್ನುವುದನ್ನು ಹೇಳಲಾಗಿದೆ. ಎನ್ನುವುದು ಸುಂದರ ಕಾಂಡದ ವಿವರಣೆ.
ಈ ಗುಬ್ಬಿಗಳನ್ನು ಅಮರಕೋಶದಲ್ಲಿ ಕಲವಿಂಕಃ ಎನ್ನುವುದಾಗಿ ಕರೆಯಲಾಗಿದೆ. ಧಾನ್ಯಗಳನ್ನು ಚಟ್ ಎಂದು ಒಡೆದು ತಿನ್ನುವುದರಿಂದ ಇದನ್ನು ಚಟಕ ಎನ್ನುವುದಾಗಿ ಕರೆಯಲಾಗುತ್ತದೆ ಎನ್ನುವುದು ವಾಚಸ್ಪತ್ಯದ ಅಭಿಪ್ರಾಯ. ಇನ್ನು ಕನ್ನಡ ಸಾಹಿತ್ಯದಲ್ಲಿಯಂತೂ ಗುಬ್ಬಚ್ಚಿಗಳು ಹಾಸುಹೊಕ್ಕಾಗಿವೆ.
ಗುಬ್ಬಚ್ಚಿಗಳ ದೇಹಕ್ಕೆ ಸರಿಯಾದ ಕಾಲುಗಳಿಲ್ಲ. ಕಾಲುಗಳಲ್ಲಿ ದೇಹವನ್ನು ಹೊತ್ತು ಓಡಲಿಕ್ಕೆ ಸಾಮರ್ಥ್ಯ ಸಾಲದು ಆದುದರಿಂದಲೆ ಅವು ನೆಗೆಯುತ್ತಲೇ ಕಾಳುಗಳನ್ನು ತಿನ್ನುತ್ತವೆ. ಒಮ್ಮೆ ಒಂದು ಕಡೆ ಬಂತೆಂದರೆ ಆಗಾಗ ಅಲ್ಲಿ ಬರುವುದು ಅವುಗಳ ಅಭ್ಯಾಸ. ಗುಬ್ಬಚ್ಚಿ ಒಂದೇ ಎಲ್ಲಿಯೂ ಇರುವುದಿಲ್ಲ ಎರಡೆರಡು ಇರುತ್ತವೆ ಗುಬ್ಬಚ್ಚಿ ಮೊಟ್ಟೆ ಇಟ್ಟಾಗ ಗಂಡು ಗುಬ್ಬಿ ಕಾವಲುಗಾರನಾಗಿ ಹೊರಗೆ ಕುಳಿತಿರುತ್ತದೆ. ಇದು ಜನರ ಮಧ್ಯೆ ವಾಸಿಸಬಯಸುತ್ತದೆ.
ಇಂತಹ ಗುಬ್ಬಿ ಅದೆಷ್ಟೋ ಸಹಸ್ರ ವರ್ಷಗಳಷ್ಟು ಹಿಂದೆಯೂ ವರ್ತಿಕ ಎನ್ನುವ ಹೆಸರಿನಿಂದ ಕಲವಿಂಕವಾಗಿತ್ತು ಎಂದರೆ ಆಶ್ಚರ್ಯ ಮತ್ತು ಅದನ್ನು ಉಳಿಸಿಕೊಂಡರೆ ಅದೇ ನಮ್ಮ ಭಾಗ್ಯ.
ಮೂಲ: ಸದ್ಯೋಜಾತ ಭಟ್

No comments:

Post a Comment

If you have any doubts. please let me know...