July 8, 2025

ಗುರುಪೂರ್ಣಿಮೆಯಂದೇ ಶಿಕ್ಷಕರ ದಿನವನ್ನು ಆಚರಿಸಿದರೆ...

ವಾಸ್ತವದಲ್ಲಿ ಶಿಕ್ಷಕರ ದಿನವನ್ನು ಗುರುಪೂರ್ಣಿಮೆಯಂದೇ ಆಚರಿಸಬೇಕಿತ್ತು. ಆದರೆ ಹಾಗಾಗಲೇ ಇಲ್ಲ !

ಹಿಂದೆ ಚೇದಿ ಎನ್ನುವ ಹೆಸರಿನ ರಾಜನೊಬ್ಬನಿದ್ದ. ಆತನಿಗೆ ಕುಶು ಅಥವಾ ಕಶು ಎನ್ನುವ ಮಗನಿದ್ದ. ಚೇದಿ ತನ್ನ ಕಾಲದಲ್ಲಿ ಧಾರ್ಮಿಕನಾಗಿ ಅನೇಕ ಯಾಗಗಳನ್ನು ಮಾಡಿ ಪ್ರಸಿದ್ಧನಾಗಿದ್ದ. ಆತನ ಮಗನೂ ಸಹ ತಂದೆಯಂತೆಯೇ ಧಾರ್ಮಿಕ ಮನೋಭಾವದವನಾಗಿ ಯಜ್ಞವೊಂದನ್ನು ನೆರವೇರಿಸುವ ಸಲುವಾಗಿ ಕಾಣ್ವ ಗೋತ್ರದ ಬ್ರಹ್ಮಾತಿಥಿ ಎನ್ನುವ ಮಹರ್ಷಿಯನ್ನು ಸಂಪರ್ಕಿಸಿ ಯಜ್ಞವನ್ನು ನೆರವೇರಿಸಿಕೊಡಲು ಕೇಳಿಕೊಳ್ಳುತ್ತಾನೆ. ಬ್ರಹ್ಮಾತಿಥಿ ಅದಕ್ಕೆ ಸಮ್ಮತಿಸಿ ರಾಜನಲ್ಲಿ ಬಂದಾಗ, ರಾಜನಲ್ಲಿ ಸಂಪತ್ತುಗಳ ಕೊರತೆ ಕಾಣಿಸುತ್ತದೆ. ಸಂಪತ್ತಿಲ್ಲದೇ ಯಾಗ ಮಾಡಲು ಸಾಧ್ಯವಿಲ್ಲ. ಆಲೋಚಿಸುತ್ತಾನೆ. ಆದರೆ, ರಾಜನಿಗೆ ಧಾರ್ಮಿಕವಾದ ಹುಮ್ಮಸ್ಸು ಮತ್ತು ಮನಸ್ಸಿದೆ. ಆಗ ಬ್ರಹ್ಮಾತಿಥಿ ಇಂದ್ರನನ್ನು ಸ್ತುತಿಸಿ ಕೆಲವು ಋಕ್ಕುಗಳನ್ನು ಸಾಕ್ಷಾತ್ಕರಿಸಿಕೊಂಡು ಇಂದ್ರನಿಂದ ಗೋ ಸಂಪತ್ತನ್ನು ಪಡೆದು ರಾಜನಿಗೆ ಕೊಡುತ್ತಾನೆ. ಯಜ್ಞ ಸಂದರ್ಭದಲ್ಲಿ ದಾನಕ್ಕಾಗಿ ಅಶ್ವಿನೀ ದೇವತೆಗಳನ್ನು ದಾನ ಸ್ವೀಕರಿಸಲು ಬರಬೇಕೆಂದು ಕೇಳಿಕೊಳ್ಳುವ ಭಾಗದಲ್ಲಿ ಅಂದರೆ ಋಗ್ವೇದದ ಎಂಟನೇ ಮಂಡಲದ ೫ನೇ ಸೂಕ್ತದಲ್ಲಿ ಈ ಋಕ್ಕನ್ನು ಮನುಷ್ಯನ ತಿಳುವಳಿಕೆಯ ಸಲುವಾಗಿಯೇ ಹೇಳುತ್ತಾನೆ.
ತಾ ಮೇ ಅಶ್ವಿನಾ ಸನೀನಾಂ ವಿದ್ಯಾತಂ ನವಾನಾಂ |
ಅಂದರೆ ಇಲ್ಲಿ ’ವಿದ್ಯಾತಂ’ ಎನ್ನುವುದು ತಿಳುವಳಿಕೆ ಅಥವಾ ಜ್ಞಾನದ ಕುರಿತಾಗಿ ಹೇಳಿರುವುದು. ವಿದ್ಯೆ ಎನ್ನುವುದು ನಮಗೆ ಕೊಡುವ ಜ್ಞಾನ. ಈ ಜ್ಞಾನವನ್ನು ಕೊಡುವ ವ್ಯವಸ್ಥೆಯೇ ಶಿಕ್ಷಣ. ಈ ಶಿಕ್ಷಣದ ಕುರಿತಾಗಿ ಗಮನಿಸುತ್ತಾ ಸಾಗಿದರೆ ನಮಗೆ ಸಿಗುವುದು ಶಿಷ್ಟ ಎನ್ನುವ ಮೂಲ ಪದ. ನಿಗದಿತವಾದ ಕ್ರಮದಲ್ಲಿ ನಾವು ಏನನ್ನು ಗುರುವಿನಿಂದ ಸ್ವೀಕರಿಸಿ ಕಲಿಯುತ್ತೇವೆಯೋ ಅದು ಶಿಕ್ಷಣ. ಅದು ಒಂದು ಕ್ರಮಬದ್ಧವಾದ ವ್ಯವಸ್ಥೆ. ಅಲ್ಲಿ ಯಾರು ನಮ್ಮ ಜ್ಞಾನದ ಅಭಿವೃದ್ಧಿಗೆ ಕಾರಣರಾಗುತ್ತಾರೋ ಅವರು ಗುರು ಅಥವಾ ನಿರ್ದೇಶಕ ಎನ್ನಿಸಿಕೊಳ್ಳುತ್ತಾರ. ಹೀಗೆ ಶಿಕ್ಷಣ ಎನ್ನುವುದು ಜ್ಞಾನದ ವ್ಯವಸ್ಥಿತವಾದ ಜೋಡಣೆಯಾಗಿದೆ. ಇದೊಂದು ವ್ಯವಸ್ಥೆ ಅಥವಾ ಪದ್ಧತಿ ಅಂತ ಸಹ ಹೇಳಬಹುದು.
ಅದೇನೇ ಇರಲಿ, ಶಿಕ್ಷಣ ಪದ್ಧತಿಯು ಪ್ರಾಚೀನಕಾಲದಿಂದ ಬದಲಾಗುತ್ತ ಬಂದಿದೆ. ಮೊದಲಿಗೆ ಮೌಖಿಕ ಪಾಠಗಳಿದ್ದವು ಗುರುಕುಲದಲ್ಲಿದ್ದು ಸ್ನಾತಕನಾಗಿ ತಾನು ಸಮಾವರ್ತನವನ್ನು ಪೂರೈಸುವ ಹೊತ್ತಿಗೆ ಅಗಾಧವಾದ ಜ್ಞಾನ ಸಂಪಾದನೆ ಮಾಡಿರುತ್ತಿದ್ದ ಎನ್ನುವುದು ಋಗ್ವೇದದ ಹತ್ತನೇ ಮಂಡಲದಿಂದ ತಿಳಿದು ಬರುತ್ತದೆ.
ಇನ್ನು ಪುರಾಣಕ್ಕೆ ಬಂದಾಗ ಗುರುವಿನ ಪ್ರತಿಬಿಂಬದೆದುರು ಅಭ್ಯಾಸ ಮಾಡಿದ ಏಕಲವ್ಯನ ಕಥೆ ಸ್ಪಷ್ಟವಾಗಿ ಗುರುವಿನ ಅವಶ್ಯಕತೆ ಮತ್ತು ಶಿಸ್ತುಬದ್ಧ ಶಿಕ್ಷಣಬೇಕು ಅನ್ನುವುದನ್ನು ತೊರಿಸಿಕೊಡುತ್ತದೆ. ಮಹಾಭಾರತದಲ್ಲಿ ಬರುವ ದೌಮ್ಯರ ಪ್ರಸಂಗದಲ್ಲಿ ಅವರು ಮೂವರು ಶಿಷ್ಯರನ್ನು ಪರೀಕ್ಷಿಸಿ ಅವರಿಗೆ ವಿದ್ಯೆಯನ್ನು ಕೊಡುವುದು ಗಮನಿಸಿದರೆ ಇಂದು ಅನೇಕ ವಿದ್ಯಾ ಸಂಸ್ಥೆಗಳಲ್ಲಿರುವ ಪ್ರವೇಶ ಪರೀಕ್ಷೆ ನೆನಪಿಗೆ ಬರುತ್ತದೆ. ದೌಮ್ಯರಲ್ಲಿದ್ದ ಒಬ್ಬ ಬಾಲಕ ನೀರಿನ ಬದುವನ್ನು ಕಟ್ಟಿ ನೀರಾವರಿ ವ್ಯವಸ್ಥೆಗೆ ಕಾಯಕಲ್ಪ ಮಾಡಿದ. ಆತನೇ ನೀರಾವರಿ ವ್ಯವಸ್ಥೆ ಕಲ್ಪಿಸಿಕೊಟ್ಟ ಮೊದಲಿಗನಾಗಿದ್ದರಿಂದ ಅವನಿಗೆ ಉದ್ದಾಲಕ ಎನ್ನುವ ಹೆಸರು ಹಾಗೇ ಸ್ಥಾಯಿಯಾಗುತ್ತದೆ. ಹೀಗೇ ಋಷಿಗಳೆಲ್ಲ ಹಿಂದೆ ಸ್ವಾಧ್ಯಾಯ ಮತ್ತು ಅಧ್ಯಾಪನಗಳೆರಡರಲ್ಲೂ ತೊಡಗಿಸಿಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ಅಧ್ಯಯನದ ಅವಶ್ಯಕತೆಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಶಿಕ್ಷಣವೆಂದರೆ ಜೀವನ ಧರ್ಮ ತಿಳಿಸಿಕೊಡುವುದಾಗಿತ್ತು. ಇವೆಲ್ಲವೂ ಪುರಾಣ ಮತ್ತು ವೇದಗಳ ವಿಷಯವಾದರೆ ಇನ್ನು ಇತಿಹಾಸಕ್ಕೆ ಬಂದರೆ . . . . .
ನಾಲಂದಾ ಮತ್ತು ತಕ್ಷಶಿಲಾ ಹೆಸರನ್ನು ಮಾತ್ರ ಉಳಿಸಿಕೊಂಡಿದೆ. ಆದರೆ ಕಾಶಿ ಮತ್ತು ಉಜ್ಜಯಿನಿ ಇಂದಿಗೂ ಜ್ಞಾನ ಮತ್ತು ಶ್ರದ್ಧೆಯ ಕೇಂದ್ರವಾಗಿವೆ. ಇದೆಲ್ಲವನ್ನೂ ಗಮನಿಸಿದರೆ ನಾವು ಈ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕಿತ್ತು !!!
ತಸ್ಮೈ ಶ್ರೀ_ಗುರವೇ ನಮಃ
ಮೂಲ: ಸದ್ಯೋಜಾತ ಭಟ್

No comments:

Post a Comment

If you have any doubts. please let me know...