February 16, 2022

ಸ ಚಿತ್ರ ಚಿತ್ರಂ ಚಿತಯಂತಮಸ್ಮೇ

ನವಗ್ರಹಗಳಲ್ಲಿ ಒಬ್ಬನಾದ ಚಂದ್ರ ಸ್ವಾಯಂಭುವ ಮನ್ವಂತರದವನಂತೆ. ಈತ ಅತ್ರಿ ಮಹರ್ಷಿಯ ಮಗ ಎನ್ನುವುದಾಗಿ ಭಾಗವತ ಪುರಾಣ ಹೇಳುತ್ತದೆ. ಬ್ರಹ್ಮನು ಒಮ್ಮೆ ಅತ್ರಿ ಮುನಿಯನ್ನು ಸೃಷ್ಟಿ ಕಾರ್ಯದಲ್ಲಿ ನಿಯಮಿಸಿದ. ಅತ್ರಿ ತಪೋನಿರತನಾಗಿದ್ದ ಸಮಯದಲ್ಲಿ ಆತನ ಕಣ್ಣಿನಿಂದ ದಿವ್ಯವಾದ ತೇಜಸ್ಸೊಂದು ಹೊರ ಹೊಮ್ಮುತ್ತದೆ. ಆ ತೇಜಸ್ಸನ್ನು ಹತ್ತು ದಿಕ್ಕುಗಳು ಸ್ವೀಕರಿಸಿದವು ಆದರೆ ಆ ತೇಜಸ್ಸಿನ ವೇಗವನ್ನು ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ಆಗ ಅದನ್ನು ಕ್ಷೀರ ಸಾಗರದಲ್ಲಿ ಬಿಟ್ಟವು. ಬ್ರಹ್ಮ ಆ ತೇಜಸ್ಸನ್ನೆಲ್ಲಾ ಒಟ್ಟು ಗೂಡಿಸಿ ಪುರುಷಾಕಾರ ಕೊಟ್ಟು ಒಬ್ಬ ವ್ಯಕ್ತಿಯಾಗುವಂತೆ ಮಾಡಿ ಆತನಿಗೆ ಚಂದ್ರ ಎನ್ನುವ ಹೆಸರಿಡುತ್ತಾನೆ. ಆತನನ್ನು ಗ್ರಹಮಂಡಲದಲ್ಲಿ ಒಬ್ಬನಾಗಿರುವಂತೆ ನಿಯಮಿಸುತ್ತಾನೆ. ಆಮೇಲೆ ಕ್ರಮೇಣ ಈತನನ್ನು ಸೋಮನೆನ್ನುವ ಹೆಸರಿನಿಂದ ಸಹ ಕರೆಯಲಾರಂಭಿಸುತ್ತಾರೆ. ಇದು ಬ್ರಹ್ಮಾಂಡ ಪುರಾಣದಲ್ಲಿ ಬರುವ ಕಥೆ.

ಚಂದ್ರನನ್ನು ಇಷ್ಟಪಡದ ಜೀವಿ ಇದ್ದಿರಲಿಕ್ಕಿಲ್ಲ. ಜಗತ್ತಿನ ಪ್ರತಿಯೊಂದು ಜೀವಿಯ ಮೇಲೂ ಚಂದ್ರ ಅಗಾಧವಾದ ಪ್ರಭಾವವನ್ನು ಬೀರುತ್ತಾನೆ. ಚಿಕ್ಕ ಮಗುವನ್ನು ಸಮಾಧಾನ ಪಡಿಸಲೂ ಉಪಯೋಗಿಸುವುದು ಚಂದ್ರನನ್ನೇ. ಚಂದಮಾಮಾ ಎಂದು ಸಂಬಂಧವಾಚಕನಾಗಿ ಕರೆಸಿಕೊಳ್ಳುವ ಈತ ಮನಸ್ಸಿನ ಮೇಲೆ ಪರಿಣಾಮ ಬೀರುವವನು. ಸಾಂದ್ರ ಬೆಳಕನ್ನು ಕರುಣಿಸುವ ಚಂದ್ರ ಜ್ಯೋತಿಷ್ಯದಲ್ಲೂ ಸಹ ಮನುಷ್ಯನ ಹುಟ್ಟಿನ ರಾಶಿಯನ್ನು ನಿರ್ಧರಿಸುತ್ತಾನೆ.

ಚಂದ್ರನು ಶಿವನ ತಲೆಯಲ್ಲಿ ಕೆಲವೊಮ್ಮೆ ಬಲಕ್ಕೂ ಕೆಲವೊಮ್ಮೆ ಎಡಕ್ಕೂ ಇರುವುದು ಗಮನಕ್ಕೆ ಬರುತ್ತದೆ. ಈತನನ್ನು ಅಗ್ನಿಯ ಸ್ಥಾನದಲ್ಲಿ ವೇದ ನಮಗೆ ದೊರಕಿಸಿಕೊಡುತ್ತದೆ. ಇಲ್ಲಿ ಅಗ್ನಿ ಎನ್ನುವುದು ಶಕ್ತಿಗೆ.  ಇಂತಹ ಶಕ್ತಿಯ ಪರಿಭ್ರಮಣವನ್ನು ಆ ಕಾಲದಲ್ಲಿಯೇ ಹೇಳಲಾಗಿತ್ತು. ಯಾವ ಇಂದಿನ ಸಾಧನವೂ ಇಲ್ಲದೇ ಅಂದು ಚಂದ್ರ ಚಲನಶೀಲ ಮತ್ತು ದ್ಯಾವಾ ಪೃಥಿವಿಗಳಿಗೆ ಆತನ ಸಂಪರ್ಕವನ್ನು ಹೇಳಲಾಗಿರುವುದು ಆಶ್ಚರ್ಯವನ್ನು ತರುತ್ತದೆ.

ಸ ಚಂದ್ರೋ ವಿಪ್ರಮರ್ತ್ಯೋ ಮಹೋ ವ್ರಾಧ ನ್ತಮೋ ದಿವಿ |
ಪ್ರಪ್ರೇತ್ತೇ ಅಗ್ನೇ ವನುಷಃ ಸ್ಯಾಮ || ಇದು ಋಗ್ವೇದ ಒಂದನೇ ಮಂಡಲದ ಇಪ್ಪತ್ತೊಂದನೇ ಸೂಕ್ತ.
ಮೇಧಾವಿಯಾದ ಎಲೈ ಅಗ್ನಿಯೇ, ಯಾವ ಮಾನವನು ನಿನ್ನನ್ನು ಯಜ್ಞಾದಿಗಳಿಂದ ಪೂಜಿಸುತ್ತಾನೆಯೋ ಆ ಮಾನವನು ಸ್ವರ್ಗಲೋಕದಲ್ಲಿ ಮನೋಹ್ಲಾದಕರ ಚಂದ್ರನ ಸ್ಥಾನವನ್ನು ಪಡೆಯುತ್ತಾನೆ. ದೇವತೆಗಳಿಗಿಂತಲೂ ಹೆಚ್ಚಿನ ಸ್ಥಾನ ಹೊಂದುತ್ತಾನೆ. ಆದುದರಿಂದ ಅಗ್ನಿಯೇ ನಾವೂ ಸಹ ನಿನ್ನನ್ನು ಆರಾಧಿಸುತ್ತೇವೆ ನೀನೂ ನಮ್ಮನ್ನು ಅದೇ ರೀತಿ ಅನುಗ್ರಹಿಸು ಎನ್ನಲಾಗಿದೆ. ಇಲ್ಲಿ ಚಂದ್ರನನ್ನು ಅಗ್ನಿಯನ್ನಾಗಿ ಹೇಳಲಾಗಿದೆ.

‘ಚಂದ್ರಃ’ ನನ್ನು ಎರಡು ರೀತಿಯಲ್ಲಿ ಅರ್ಥೈಸಲಾಗಿದೆ. ಒಂದು ಅಗ್ನಿಯನ್ನು ಆರಾಧಿಸುವವನು“ಸರ್ವೇಷಾಂ ಆಹ್ಲಾದಕಃ ಚಂದ್ರಃ ಎಂದಾಗಿ ಎಲ್ಲರಿಗೂ ಆಹ್ಲಾದವನ್ನುಂಟು ಮಾಡುವ ಚಂದ್ರನ ಕಾಂತಿಯಂತೆ ಕಾಂತಿಯನ್ನುಂಟುಮಾಡುವವನು. ಮತ್ತೊಂದು ಚಂದ್ರಸ್ಚಂದತೇಃ ಚಂದಃ ಕಾಂತಿಕರ್ಮಣಃ ಕಾಂತಿಯುತವಾದುದೂ ನೋಡಲು ರಮ್ಯವಾದುದು ಎಂಬ ಅರ್ಥವನ್ನು ಕೊಡುತ್ತದೆ ಎನ್ನುವುದು ನಿರುಕ್ತಕಾರರ ಅಭಿಮತ. ಚಂದ್ ಎನ್ನುವ ಧಾತುವಿನಿಂದ ಚಂದ್ರ ಪದ ಹುಟ್ಟಿದೆ ಎಂದು ಹೇಳಿ ಅಗ್ನಿಯ ಆರಾಧಕನು ಕಾಂತಿಯುಕ್ತನಾಗುತ್ತಾನೆ. ಹಾಗೂ ಯಜಮಾನಾನಾಂ ಚಂದ್ರತ್ವ ಪ್ರಾಪ್ತಿಃ ಎನ್ನುವುದು ಛಾಂದೋಗ್ಯ ಉಪನಿಷತ್ತಿನ ಮಾತು. ಯಜಮಾನನಿಗೆ ಚಂದ್ರತ್ವ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ.

ಸಂಚಕ್ಷ್ಯಾ ಮರುತಶ್ಚಂದ್ರವರ್ಣಾ ಅಚ್ಚಾಂತ ಮೇ ಛಧಯಾಥಾ ಚ ನೂನಂ || ಇದು ಒಂದನೇ ಮಂಡಲದ ಇಪ್ಪತ್ತಮೂರನೇ ಸೂಕ್ತದಲ್ಲಿ ಬರುವ ಋಕ್ಕು. ಇಲ್ಲಿ ಮರುತಶ್ಚಂದ್ರವರ್ಣಾಃ ಎಂದು ಬಂದಿದೆ, ಚಿನ್ನದಂತೆ ಅತ್ಯಂತ ರಮಣೀಯವಾದ ಬಣ್ಣವನ್ನು ಹೊಂದಿರುವವನು ಎಂದು ಅರ್ಥೈಸಲಾಗಿದೆ.

ಸ ಚಿತ್ರ ಚಿತ್ರಂ ಚಿತಯಂತಮಸ್ಮೇ ಚಿತ್ರಕ್ಷತ್ರ ಚಿತ್ರತಮಂ ವಯೋಧಾಂ |
ಚಂದ್ರಂ ರಯಿಂ ಪುರುವೀರಂ ಬೃಹಂತಂ ಚಂದ್ರ ಚಂದ್ರಾಭಿರ್ಗೃಣತೇ ಯುವಸ್ವ || ಇದು ಋಗ್ವೇದದ ಆರನೇ ಮಂಡಲದ ಋಕ್ಕು.
ಆಕರ್ಷಕನೂ, ವಿಚಿತ್ರವಾದ ಬಲವುಳ್ಳವನೂ, ಆಹ್ಲಾದಕರ ರೂಪವುಳ್ಳವನೂ ಆದ ಎಲೈ ಅಗ್ನಿಯೇ ಪ್ರಸಿದ್ಧನಾದ ನೀನು ಆಹ್ಲಾದವನ್ನುಂಟುಮಾಡುವ ಸ್ತುತಿಗಳಿಂದ ನಿನ್ನನ್ನು ಸ್ತುತಿಸುವ ನಮಗೆಲ್ಲಾ ಆಕರ್ಷಕವಾದುದೂ, ನಮ್ಮ ಕರ್ತವ್ಯವನ್ನು ಜ್ಞಾಪಿಸತಕ್ಕದ್ದೂ, ಆಶ್ಚರ್ಯಕಾರಕವಾದುದೂ, ಅನ್ನವನ್ನು ಕೊಡತಕ್ಕದ್ದೂ, ವೀರ ಪುತ್ರಾದಿಗಳಿಂದ ಕೂಡಿದುದೂ, ಪ್ರಭೂತವಾದುದೂ ಆದ ಸಂಪತ್ತನ್ನು ವಿಭಾಗಮಾಡಿ ಕೊಡು. ಎಂದು ಈ ಸೂಕ್ತ ದೃಷ್ಟಾರ ಋಷಿ ಹೇಳುತ್ತಾನೆ.

ಚಂದ್ರಮಾ ಅಪ್ಸ್ವನ್ತತರಾ ಸುಪರ್ಣೋ ಧಾವತೇ ದಿವಿ|
ಇದು ಒಂದನೇ ಮಂಡಲದ ೧೦೫ನೇ ಸೂಕ್ತದ ಋಕ್ಕು. ಅಂತರಿಕ್ಷದಲ್ಲಿರುವ ಮಂಜಿನಿಂದಾವೃತವಾದ(ಉದಕಮಯ)ಮಂಡಲದ ಮಧ್ಯದಲ್ಲಿ ಮನೋಹರವಾಗಿ ಸಂಚರಿಸುತ್ತಿರುವ ಚಂದ್ರನು ಒಂದೇ ವೇಗದಲ್ಲಿ(ನಿರ್ದಿಷ್ಟವಾದ ವೇಗದಲ್ಲಿ) ಸ್ವರ್ಗಲೋಕದಲ್ಲಿ ಸಂಚರಿಸುತ್ತಿರುತ್ತಾನೆ. ಹೊಂಬಣ್ಣದ ಅಂಚಿನೊಂದಿಗೆ ಪ್ರಕಾಶಮಾನವಾದ ಎಲೈ ಚಂದ್ರಕಿರಣಗಳೇ ನಾನು ಬಾವಿಯಲ್ಲಿ ಬಿದ್ದಿರುವುದರಿಂದ ನಿಮ್ಮ ಪ್ರಕಾಶ ಯಾವುದು ಎನ್ನುವುದನ್ನು ನಾನು ತಿಳಿದುಕೊಳ್ಳಲು ಅಶಕ್ತನಾಗಿದ್ದೇನೆ. ನನ್ನ ಕಣ್ಣುಗಳು ಅದನ್ನು ಅರಿಯಲಾರವು. ಎಲೈ ದ್ಯಾವಾಪೃಥಿವಿಗಳೇ ನನ್ನನ್ನು ಈ ಬಾವಿಯಿಂದ ಮೇಲಕ್ಕೆತ್ತಿ ನನ್ನನ್ನು ಪಾರುಮಾಡಿ ಎಂದು ತ್ರಿತನು ಬೇಡಿಕೊಳ್ಳುತ್ತಾನೆ. 

ತಮುಕ್ಷಮಾಣಂ ರಜಸಿ ಸ್ವ ಆ ದಮೇ ಚಂದ್ರಮಿವ ಸುರುಚಂ ಹ್ವಾರ ಆ ದಧುಃ |
ಇದು ಎರಡನೇ ಮಂಡಲದ ಎರಡನೇ ಸೂಕ್ತ. ಚಿನ್ನದಂತೆ ಹೊಳೆಯುವ ಕಾಂತಿಯುಳ್ಳವನೂ, ಅಂತರಿಕ್ಷದಲ್ಲಿ ಸಂಚರಿಸುವವನೂ, ತನ್ನ ಜ್ವಾಲಾರೂಪದ ಅವಯವಗಳಿಂದ ಚೈತನ್ಯವನ್ನುಂಟು ಮಾಡುವವನೂ, ಉದಕದಂತೆ ರಕ್ಷಕನೂ, ದ್ಯಾವಾ ಪೃಥಿವಿಗಳೆರಡನ್ನೂ ವ್ಯಾಪಿಸಿರುವವನೂ, ಅಂತರಿಕ್ಷದಲ್ಲಿ ಎಲ್ಲೆಡೆ ಮಳೆ ಸುರಿಸುವವನೂ, ಪೂಜ್ಯನೂ ಆದ ಚಂದ್ರನಂತಿರುವ ಅಗ್ನಿಯನ್ನು ಸ್ವಕೀಯವೂ ನಿರ್ಜನವೂ ಆದ ಯಾಗ ಗೃಹದಲ್ಲಿ ಸ್ಥಾಪಿಸುತ್ತಾರೆ.
ಚಂದ್ರಮಾ ಮನಸೋ ಜಾತಶ್ಚಕ್ಷೋ ಸೂರ್ಯೋ ಅಜಾಯತ |
ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯುರಜಾಯತ || ಋಗ್ವೇದ ೧೦ : ೯೦
ಈ ವಿರಾಟ್ ಪುರುಷನ ಮನಸ್ಸಿನಿಂದ ಚಂದ್ರನೂ, ಕಣ್ಣಿನಿಂದ ಸೂರ್ಯನೂ, ಮುಖದಿಂದ ಇಂದ್ರ ಮತ್ತು ಅಗ್ನಿಯರೂ, ಪ್ರಾಣದಿಂದ ವಾಯುವೂ ಹುಟ್ಟಿದನು. ಚಂದ್ರಮಾಶ್ಚಾಯನ್ ದ್ರಮತಿ ಎನ್ನುವುದು ನಿರುಕ್ತದ ಮಾತು. ಚಂದ್ರ ಅವನ ಪಥದಲ್ಲಿ ಪ್ರಕಾಶಮಾನನಾಗಿ ಸುತ್ತುತ್ತಾನಂತೆ ಅದಕ್ಕಾಗಿಯೇ ಆತನಿಗೆ ಚಂದ್ರ ಎಂದು ಕರೆಯಲಾಗುತ್ತದೆ. ಭೂಮಿ ಮತ್ತು ಆಕಾಶಗಳೆರಡರಲ್ಲೂ ಪ್ರಕಾಶವನ್ನು ಕೊಡುವವನು. ಮನಸ್ಸಿಗೆ ಅತ್ಯಂತ ಮುದವನ್ನು ಕೊಡುವವನು ಎಂದು ಹೇಳುವುದರೊಂದಿಗೆ ಚಂದ್ರ ಮನಸ್ಸಿನಂತೆ ಮೃದು ಎನ್ನುವುದನ್ನೂ ಸೂಚಿಸಲಾಗಿದೆ. ಚಂದ್ರಮಾ ಮನಸೋ ಜಾತಃ ವಿರಾಟ್ ಪುರುಷನ ಮನಸ್ಸಿನಿಂದಲೇ ಜನಿಸಿದವನು ಚಂದ್ರ.

ಪರಮ ಪುರುಷನ ಕಣ್ಣುಗಳಿಂದ ಸೂರ್ಯನ ಜನವಾಯಿತು ಎನ್ನುವಲ್ಲಿ ಕಣ್ಣಿಗೂ ಬೆಳಕಿಗೂ ಸಂಬಂಧವನ್ನು ಚಕ್ಷೋಃ ಸೂರ್ಯೋ ಅಜಾಯತ ಎನ್ನಲಾಗಿದ್ದು, ಸೂರ್ಯನೇ ಜಗತ್ತಿನ ಜೀವಿಗಳಿಗೆ ಕಾರಣನು ಎನ್ನುವುದು ಸೂಕ್ಷ್ಮವಾದ ಅರ್ಥ. ಮನಸ್ಸು ಸದಾ ಪ್ರಶಾಂತವಾದ ಆಹ್ಲಾದವಾದ ವಾತಾವರಣ ಇಷ್ಟ ಪಡುತ್ತದೆ ಎನ್ನುವುದನ್ನೇ ಚಂದ್ರಮಾ ಮನಸೋ ಜಾತಃ ಎನ್ನಲಾಗಿದೆ. ಜೀವಿಗಳ ದೇಹದ ಒಳಗಿರುವ ವಾಯುವಿಗೆ ಪ್ರಾಣ ಎಂದು ಕರೆಯುವುದಾದರೆದೇಹದಿಂದ ಹೊರತಾಗಿ ಪ್ರಕೃತಿಯಲ್ಲಿ ಇರುವ ವಾಯುವು ವಾಯು ಎಂದು ಕರೆಯಲಾಗುತ್ತದೆ. ಅಂದರೆ ವಾಯುವಿನ ಗುರುತು ಹಚ್ಚುವುದೇ ಪ್ರಾಣ. ಹೀಗೇ ಪ್ರಕೃತಿ ಮತ್ತು ಜೀವಿಗಳ ಅವಿನಾಭಾವ ಸಂಬಂಧವನ್ನು ಹೇಳಲಾಗಿದೆ.

#ಚಂದ್ರಮಾ_ಅಪ್ಸ್ವನ್ತತರಾ 
Sadyojatha 

No comments:

Post a Comment

If you have any doubts. please let me know...