ಯಾಃ ಫಲಿನೀರ್ಯಾ ಅಫಲಾ ಅಪುಷ್ಪಾ . . . .
ಅಥರ್ವನ್, ನಲ್ಲಿರುವ ಅಥರ್ ಎನ್ನುವ ಶಬ್ದ ಅಗ್ನಿಯನ್ನು ಕುರಿತಾದದ್ದು. ಸೋಮವನ್ನು ಅಥವಾ ಸೋಮಯಾಗವನ್ನು ಮಾಡುವ ಪುರೋಹಿತನನ್ನು ಅಥರ್ವನ್ ಎಂದು ಕರೆಯುವ ರೂಢಿ ಇದೆ. ಬ್ರಹ್ಮ ವಿದ್ಯೆಯನ್ನು ಮೊದಲು ಕೊಟ್ಟವನು. ಬ್ರಹ್ಮನ ಹಿರಿಯ ಮಗ ಅಥರ್ವ. ಇಲ್ಲಿ ಅಥರ್ವಾಣ ಎನ್ನುವುದಾಗಿ ನೋಡಿದರೆ ಅದು ಶಿವನಿಗೆ ಇರುವ ಹೆಸರು. ಅದೇನೇ ಇರಲಿ ಇಲ್ಲಿ ನಾನು ಅಥರ್ವ ಮತ್ತು ಅಥರ್ವಾಣನ ಕುರಿತಾಗಿ ಹೇಳುತ್ತಿಲ್ಲ ಬದಲಾಗಿ ಭಿಷಗಾಥರ್ವಾಣ ಓಷಧೀ ಸ್ತುತಿಯ ಕುರಿತಾಗಿ ಹೇಳಲು ಬಯಸುವೆ.
ಯಾಃ ಫಲಿನೀರ್ಯಾ ಅಫಲಾ ಅಪುಷ್ಪಾ ಯಾಶ್ಚ ಪುಷ್ಪಿಣೀಃ |
ಬೃಹಸ್ಪತಿಪ್ರಸೂತಾಸ್ತಾ ನೋ ಮುಂಚಂತ್ವಂ ಹಸಃ || ಋಗ್ವೇದ ಹತ್ತನೇ ಮಂಡಲದಲ್ಲಿ ಬರುತ್ತದೆ.
ಈ ಓಷಧೀಯ ಸಸ್ಯಗಳಲ್ಲಿ ಬೇರೆ ಬೇರೆ ಜಾತಿಯ ಪ್ರಸಿದ್ಧ ಸಸ್ಯಗಳಿವೆ. ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಈ ಸಸ್ಯಗಳಲ್ಲಿ ಕೆಲವು ಫಲಗಳನ್ನು (ಹಣ್ಣನ್ನು)ಕೊಡುವಂತವುಗಳು ಇನ್ನು ಕೆಲವು ಹಣ್ಣನ್ನು ಕೊಡುವುದಿಲ್ಲ, ಇನ್ನು ಕೆಲವು ಹೂವು ಕೊಡುತ್ತವೆ ಮತ್ತೆ ಕೆಲವು ಹೂವು ಕೊಡುವುದಿಲ್ಲ. ಆದರೆ ಇವೆಲ್ಲವೂ ಬೃಹಸ್ಪತಿಯ ಅನುಗ್ರಹಕ್ಕೆ ಪಾತ್ರವಾಗುವುದರಿಂದ ನಮಗೆ ಒದಗಿರುವ ರೋಗಗಳನ್ನೆಲ್ಲಾ ನಿನ್ನ ಔಷಧೀಯ ಗುಣಗಳಿಂದ ಪಾರು ಮಾಡು ಎನ್ನುವುದು ಈ ಋಕ್ಕಿನ ಅಭಿಪ್ರಾಯ.
ಅಂದರೆ ’ಫಲಿನೀರ್ಯಾ ಅಫಲಾ ಅಪುಷ್ಪಾ ಯಾಶ್ಚ ಪುಷ್ಪಿಣೀಃ’ ಎನ್ನುವಲ್ಲಿ ಅದು ಫಲವುಳ್ಳದ್ದಾಗಿರಲೀ ಅಥವಾ ಫಲಕೊಡದೇ ಅವುಗಳ ಬಳ್ಳಿ ಮತ್ತು ತೊಗಟೆಗಳಿಂದಾಗಲೀ, ಇನ್ನು ಕೆಲವು ಹೂವು ಬಿಡಲಿ ಬಿಡದೇ ಇರಲಿ ಅವೆಲ್ಲವೂ ಸಹ ರೋಗ ನಿರೋಧಕಗಳು ಎನ್ನುವುದು ಅಥರ್ವಾಣನ ನಿಲುವು.
ಇನ್ನು ಇದೇ ಮಂತ್ರ ಯಜುರ್ವೇದದ ತೈತ್ತಿರೀಯ ಸಂಹಿತೆಯ ೪ : ೨ : ೬ ರಲ್ಲಿ ಬಂದಿದ್ದು ಅಲ್ಲಿ ಫಲಯುಕ್ತವಾಗಿರುವ ಅಥವಾ ಫಲರಹಿತವಾದ ಮತ್ತು ಯಾವುದು ಹೂವು ಬಿಡುವಂತವುಗಳೋ ಅಥವಾ ಹೂವು ಬಿಡದೇ ಇರುವಂತಹ ಯಾವ ಓಷಧಿಗಳು ಇವೆಯೋ ಅವೆಲ್ಲಾ ಬೃಹಸ್ಪತಿಯಿಂದ ಜನ್ಮ ಪಡೆದಿವೆ. ಇವುಗಲೆಲ್ಲ ನಮ್ಮಿಂದ ಹುಟ್ಟಿದವಲ್ಲ ಆದರೆ ನಮಗೆ ಯಾವುದೋ ಪಾಪದ ಫಲವಾಗಿ ಬಂದ ರೋಗಗಳನ್ನು ಗುಣಪಡಿಸಲಿ ಎನ್ನುವ ಕೋರಿಕೆ ಕಂಡು ಬರುತ್ತದೆ.
ಓಷಧೀ ಎನ್ನುವುದೇ ’ದೋಷಂ ನಾಶಯತಿ’ ಎಂದು. ಅಂದರೆ ನಮ್ಮ ದೈಹಿಕ ಮತ್ತ ಮಾನಸಿಕ ದೋಷಗಳನ್ನು ಸರಿಪಡಿಸುತ್ತದೆ ಎಂದು.
ಯಾ ಓಷಧೀಃ ಪೂರ್ವಾ ಜಾತಾ ದೇವೇಭ್ಯಸ್ತ್ರಿಯುಗಂ ಪುರಾ |
ಮನೈ ನು ಬಭ್ರೂಣಾಮಹಂ ಶತಂ ಧಾಮಾನಿ ಸಪ್ತ ಚ ||
ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಮೊದಲನೆಯದಾಗಿ ಮೂರು ಯುಗ ಎನ್ನುವುದು ಇಲ್ಲಿ ಯುಗ ಎನ್ನುವುದು ಕೃತ ತ್ರೇತಾ ಮತ್ತು ದ್ವಾಪರ ಎನ್ನುವುದಕ್ಕಿಂತ ವಸಂತ, ವರ್ಷ ಮತ್ತು ಶರದೃತು ಎಂದು ತೆಗೆದು ಈ ಮೂರು ಋತುಗಳ ಹಿಂದೆ ಉತ್ಪನ್ನವಾದ ಮತ್ತು ಅತ್ಯಂತ ಪ್ರಾಚೀನವಾದ ಯಾವ ಔಷಧಯುಕ್ತ ಗುಣಗಳಿಂದ ಇರುವ ಯಾವ ಸಸ್ಯಗಳಿವೆಯೋ ಅವು ಹೊಂಬಣ್ಣದಿಂದ ಕಂಗೊಳಿಸುವ ಸೋಮದಂತಿದ್ದವು ಎನ್ನುವುದಾದರೆ, ಇನ್ನೊಂದು ಅರ್ಥ ದೇವತೆಗಳ ಸೃಷ್ಟಿಗೂ ಪೂರ್ವದಲ್ಲಿ ಮೂರು ಯುಗಗಳ ಮೊದಲು ಈ ಓಷಧಿಗಳು ಹುಟ್ಟಿದವು ಎನ್ನಬಹುದಾಗಿದೆ. ಇನ್ನೊಂದು ವಿಷಯ ಇಂತಹ ಸೋಮಗಳಿಂದ ನೂರ ಏಳು ವಿಧದ ಔಷದಗಳನ್ನು ತಯಾರಿಸ ಬಹುದು ಎನ್ನುವುದು. ಅಂದರೆ ಆಕಾಲಕ್ಕಾಗಲೇ ಸುಮಾರು ನೂರ ಏಳು ವಿಧದ ವಿವಿಧ ಔಷಧಗಳು ಈ ಭೂಮಿಯಲ್ಲಿ ತಯಾರಾಗುತ್ತಿದ್ದಿರಬಹುದು. ಅಥವಾ ನೂರು ಎನ್ನುವುದಕ್ಕೆ ಅನೇಕ ಎನ್ನುವ ಅರ್ಥಕೊಟ್ಟು ಆಯ್ದ ಸಸ್ಯಗಳಿಂದ ಬೇರೆ ಬೇರೆ ಉಪಯೋಗವನ್ನು ಪಡೆದುಕೊಳ್ಳಲಾಗುತ್ತಿತ್ತು ಎನ್ನುವುದು ತಿಳಿಯುತ್ತ್ತದೆ. ಇಲ್ಲಿ ಇನ್ನೊಂದು ರೀತಿಯಲ್ಲಿ ಹೇಳಿದರೆ ಮನುಷ್ಯನ ಶರೀರದಲ್ಲಿರುವ ಏಳುನೂರು ಸಂಧಿಸ್ಥಳಗಳಲ್ಲಿ ಚಿಕಿತ್ಸೆಯನ್ನು ಕೊಡುವುದನ್ನು ಸೂಚಿಸಲೂ ಬಹುದು. ಅಂದರೆ ಅಂದು ಆ ಕಾಲದಲ್ಲಿ ಅಷ್ಟು ಸ್ಥಳಗಳಲ್ಲಿ ಚಿಕಿತ್ಸೆ ಕೊಡಬಹುದು ಎನ್ನುವುದನ್ನು ಕಂಡುಕೊಂಡಿದ್ದರು.
ಮನೈ ನು ಬಭ್ರೂಣಾಮಹಂ ಶತಂ ಧಾಮಾನಿ ಸಪ್ತ ಚ ಎನ್ನುವಲ್ಲಿನ ಬಭ್ರೂಣ ಬೂದು ಬಣ್ಣ ಅಥವಾ ಕೆಂಬಣ್ಣವನ್ನು ಸೂಚಿಸುತ್ತವೆ. ಸೋಮಲತೆಯ ರೀತಿಯಲ್ಲೆ ಈ ಬಣ್ಣದ ಸಸ್ಯಗಳು ಔಷಧಯುಕ್ತವಾಗಿದ್ದು ಮಾನವರ ರೋಗ ರುಜಿನಗಳನ್ನು ಓಡಿಸಿ ನೂರಾರು ವರ್ಷ ದೀರ್ಘಾಯುಷಿಗಳಾಗಿ ಬದುಕುವ ಚೈತನ್ಯವನ್ನು ಕೊಡುತ್ತವೆ.
ಅಶ್ವತ್ಥೇ ವೋ ನಿಷದನಂ ಪರ್ಣೇ ವೋ ವಸತಿಷ್ಕೃತಾ ಎಂದು ಔಷಧಗಳಿಗೆಲ್ಲಾ ರಾಜನಂತಿರುವುದು ಅಶ್ವತ್ಥ ಮತ್ತು ಪಲಾಶ ಎನ್ನಲಾಗಿದೆ. ಓಷಧೀ ದೇವತೆಗಳು ಇರುವುದೇ ಈ ಎರಡು ವೃಕ್ಷಗಳಲ್ಲಿ ಎನ್ನುತ್ತಾನೆ ಅಥರ್ವಾನ. ವೈದೈ ಶಾಸ್ತ್ರ ತಿಳಿದ ವೈದ್ಯನೊಬ್ಬ ನಿನ್ನನ್ನು ಆಶ್ರಯಿಸಿದರೆ ಆತ ಎಲ್ಲಾ ಕಾಯಿಲೆಗಳನ್ನು ಗುಣ ಪಡಿಸಬಹುದು ಮತ್ತು ಹೇರಳವಾದ ಗೋ ಸಂಪತ್ತನ್ನು ಹೊಂದಿ ಆತ ನಿನಗೂ ಸಹ ಗೋವನ್ನು ಕೊಡಬಹುದು ಎಂದು ಹೇಳಿದ್ದಾನೆ. ಈ ಪಲಾಶ ಎಂದರೆ ಮುತ್ತುಗ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ. ಈ ಎರಡೂ ವೃಕ್ಷಗಳು ನಮ್ಮ ಊರಿನಲ್ಲಿ ಇರಲೇಬೇಕು ಎನ್ನುತ್ತಾನೆ. ಅಂದರೆ ಋಗ್ವೇದದ ಕಾಲ ಎನ್ನುವ ಸಮಯದಲ್ಲಿಯೇ ಈ ಭೂಮಿಯಲ್ಲಿ ಕಾಯಿಲೆಗೆ ಔಷಧವನ್ನು ಕಂಡುಕೊಂಡಾಗಿತ್ತು. ಮತ್ತು ಈ ಔಷಧಗಳಿಂದ ಗುಣಮುಖರಾಗುತ್ತಿದ್ದರು ಎನ್ನುವುದು ಸಹ ಬೇರೆ ಬೇರೆ ಸೂಕ್ತಗಳಿಂದ ತಿಳಿಯುತ್ತದೆ.
ತೈತ್ತಿರೀಯ ಸಂಹಿತೆಯ ಯಾ ಜಾತಾ ಓಷಧಯೋ ದೇವೇಭ್ಯಸ್ತ್ರಿಯುಗಂ ಪುರಾ | ಮಂದಾಮಿ ಬಭ್ರೂಣಾಮಹ ಗ್ಂ ಶತಂ ಧಾಮಾನಿ ಸಪ್ತಚ || ಎನ್ನುವ ಮಂತ್ರವನ್ನು ಗಮನಿಸಿದರೆ ಈ ಸೃಷ್ಟಿಯ ಆರಂಭದಲ್ಲಿ ನೀರಿನ ನಂತರ ಸೂರ್ಯ, ದಿಕ್ಕುಗಳ ಸೃಷ್ಟಿಯ ನಂತರ ಸಸ್ಯಗಳ ಸೃಷ್ಟಿಯಾಗುತ್ತದೆ. ಈ ಸಸ್ಯಗಳೆಂದರೆ ಓಷಧಿಗಳೂ ಸಹ. ಅಂದರೆ ಮಾನವನ ಜೀವಿತಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ ಆನಂತರದಲ್ಲಿ ಜೀವ ಸಂಕುಲಗಳ ಸೃಷ್ಟಿಯಾಗಿದೆ. ಆದುದರಿಂದ ಈಗ ಬಂದಿರುವ ಜಾಗತಿಕ ರೋಗಕ್ಕೆ ಖಂಡಿತಾ ಔಷಧಗಳು ಸಿಗಬಹುದು ಎನ್ನುವ ಆಶಾಭಾವನೆ ಇದೆ.
#sadyojath bhat
No comments:
Post a Comment
If you have any doubts. please let me know...