October 21, 2020

ಆತ್ಮಾನ್ವೇಷಣೆ

ಒಬ್ಬ ಸನ್ಯಾಸಿಯು ಒಂದು ಮನೆಯ ಮುಂದೆ ಬಂದು ಭಿಕ್ಷೆ ಯಾಚಿಸಿದ. ಆ ಮನೆಯೊಡತಿ ಭಿಕ್ಷೆ ಹಾಕಲು ಮುಂದೆ ಬಂದಾಗ, ಆಶೀರ್ವಾದ ಮಾಡುತ್ತ ಆ ಸನ್ಯಾಸಿಯು, "ತಾಯೆ?! ನಿನ್ನ ವಯಸ್ಸೆಷ್ಟು?' ಎಂದು ಕೇಳಿದ.


ಗೃಹಿಣಿಯು ಸನ್ಯಾಸಿಗೆ ನಮಸ್ಕರಿಸಿ, ಮುಗುಳುನಗುತ್ತಾ, "ನನಗೆ ಕೇವಲ ಒಂದು ವರ್ಷ' ಎಂದಳು. ಈ ನಡುವಯಸ್ಸಿನ ಗೃಹಿಣಿ ಹಾಗೆ ಹೇಳಲು ಸನ್ಯಾಸಿ ಕುತೂಹಲದಿಂದ ಮತ್ತೆ ಕೇಳಿದ"ನಿಮ್ಮ ಯಜಮಾನರ ವಯಸ್ಸೇನು?' "ಅವರಿನ್ನೂ ಆರು ತಿಂಗಳಿನ ಮಗು". ಸನ್ಯಾಸಿ ಪುನಃ ಕೇಳಿದ, "ಅತ್ತೆಮಾವಂದಿರಿದ್ದರೆ ಅವರ ವಯಸ್ಸೆಷ್ಟು?" "ಅವರಿನ್ನೂ ಮೂರು ಮೂರು ತಿಂಗಳ ತೊಟ್ಟಿಲ ಕೂಸುಗಳು".


ಹೀಗೆ ಉತ್ತರವಿತ್ತ ಗೃಹಿಣಿಯನ್ನು ಸನ್ಯಾಸಿಯು "ತಾಯೆ! ನನಗೆ ನಿನ್ನ ಮಾತು ಅರ್ಥವಾಗುತ್ತಿಲ್ಲ. ಸರಿಯಾಗಿ ಬಿಡಿಸಿ ಹೇಳು" ಎನ್ನಲು, ಆ ಗೃಹಿಣಿ ಹೀಗೆ ಹೇಳಿದಳು: "ಸ್ವಾಮೀ! ನನ್ನ ದೇಹಕ್ಕೆ ಮೂವತ್ತೈದು ವರ್ಷಗಳಾದವು. ಆದರೆ, ಇಷ್ಟು ವರ್ಷವೂ ನಾನು ಕೇವಲ ಉಣಿಸು-ತಿನಿಸು, ಉಡಿಗೆತೊಡಿಗೆಗಳಲ್ಲೇ ಕಾಲ ಕಳೆಯುತ್ತಿದ್ದೆ. ಸುಮ್ಮನೇ ವ್ಯರ್ಥವಾಗಿ ಕಳೆದ ವರ್ಷ ಲೆಕ್ಕಕ್ಕಿಟ್ಟು ಏನು ಪ್ರಯೋಜನ? ಆದ್ದರಿಂದ ನನಗೆ ಒಂದೇ ವರ್ಷ ಪ್ರಾಯ" ಎಂದಳು.


"ಇನ್ನು ನಮ್ಮ ಯಜಮಾನರು ದೊಡ್ದ ದೊಡ್ದ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದರು. ಆದರೆ ಇತ್ತೀಚೆಗೆ ಯಾರಿಂದಲೋ ಮೋಸ ಹೋಗಿ ಈಗ ಆರು ತಿಂಗಳಿಂದೀಚೆಗೆ ನನ್ನ ಜೊತೆಯಲ್ಲಿ ಭಜನೆ, ಸತ್ಸಂಗದಲ್ಲಿ ಸಹಕರಿಸುವುದರಿಂದ ಅವರ ವಯಸ್ಸು ಆರು ತಿಂಗಳೆನ್ನಲು ಅಡ್ಡಿ ಇಲ್ಲ. ನಮ್ಮ ಅತ್ತೆ ಮಾವಂದಿರು ಸತ್ಸಂಗ ಭಜನೆಯಲ್ಜಿ ತೊಡಗಿಸಿಕೊಂಡ ನಮ್ಮನ್ನು ಬೈಯುತ್ತಿದ್ದರು. ಮೂರು ತಿಂಗಳಿಂದೀಚೆಗೆ ಅತ್ತೆಗೆ ಲಕ್ವಾ (ಪಾರ್ಶ್ವವಾಯು) ಹೊಡೆದಿದೆ. ಮಾವನವರಿಗೆ ನಡೆಯಲಾಗುವುದಿಲ್ಲ. ಈಗ ಅವರು ನಮ್ಮನ್ನು ಸತ್ಸಂಗ-ಭಜನೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಆದ್ದರಿಂದ ಅವರ ವಯಸ್ಸು ಮೂರೇ ತಿಂಗಳು" ಎಂದಾಗ, ಸನ್ಯಾಸಿಗೆ ಮೈ ಬೆವರಿತು.


ಆತನೆಂದ, "ತಾಯೇ! ನಿನ್ನ ಲೆಕ್ಕದಲ್ಲಿ ನಾನಿನ್ನೂ ಹುಟ್ಟಲೇ ಇಲ್ಲ" ಎಂದ. (ಸನ್ಯಾಸಿ ಸುಮ್ಮನೆ ಭಿಕ್ಷೆ ಬೇಡುತ್ತಾ ತಿರುಗುತ್ತಾ ಇದ್ದನಂತೆ.)


ಆತ್ಮಾನ್ವೇಷಣೆಯ ಹಾದಿಯಲ್ಲಿ ನಮಗೆಷ್ಟು ವಯಸ್ಸಾಗಿದೆ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದು.

No comments:

Post a Comment

If you have any doubts. please let me know...