*ಬ್ರಾಹ್ಮಣ* ಅಂದರೆ ಏನು ಎಂಬುದನ್ನು ಪರೀಕ್ಷಿಸೋಣ..
*ಅದು ಒಂದು ಜೀವವೆ?* *ಅಥವಾ ಅದು ಶರೀರವೆ?*
ಇಲ್ಲಾ
*ಅದೊಂದು ವರ್ಗವೆ? ಜ್ಞಾನವೆ? ಕರ್ಮವೆ? ಅಥವಾ ಅದೊಂದು ಧಾರ್ಮಿಕ ಕ್ರಿಯೆಯೆ?* *ಯಾವುದನ್ನು ಬ್ರಾಹ್ಮಣ ಎನ್ನುತ್ತೇವೆ ??* ನೋಡೋಣ...
*ಜೀವವು ಬ್ರಾಹ್ಮಣವೆ?*
ಎಂದು ಪ್ರಾರಂಭಿಸಿದರೆ ಉತ್ತರ ಅಲ್ಲ ಎಂದಾಗುತ್ತದೆ.
ಯಾಕೆಂದರೆ ಪೂರ್ವಜನ್ಮ ಹಾಗೂ ಪುನರ್ಜನ್ಮಗಳಲ್ಲಿ ಅದೇ ಜೀವ ಮುಂದುವರಿಯುತ್ತದೆ. ಪ್ರಾರಬ್ಧ ಕರ್ಮದಿಂದ ಕೆಲವೊಮ್ಮೆ ವಿಭಿನ್ನ ಪ್ರಾಣಿ ಪಕ್ಷಿಗಳಾಗಿಯೂ ಅದೇ ಜೀವ ಮುಂದುವರಿಯುವುದರಿಂದ ಜೀವ ಎಂಬುದು ಬ್ರಾಹ್ಮಣ ಅಲ್ಲ.
*ಹಾಗಾದರೆ ದೇಹ ಬ್ರಾಹ್ಮಣವೆ?*
ಅಲ್ಲ, ಅದು ಪಂಚಭೂತಗಳಿಂದ ಮಾಡಲ್ಪಟ್ಟು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಎಲ್ಲ ಮಾನವರಿಗೂ ಅದು ಸಮಾನವಾಗಿರುವುದರಿಂದ ದೇಹ ಬ್ರಾಹ್ಮಣ ಅಲ್ಲ.
*ಹಾಗಾದರೆ ಜಾತಿ ಬ್ರಾಹ್ಮಣವೆ?* ಅಲ್ಲ,
ಏಕೆಂದರೆ ಅನೇಕ ಋಷಿಗಳು ಬೇರೆ ಬೇರೆ ಜಾತಿಯಿಂದ ಹುಟ್ಟಿದವರಾಗಿದ್ದಾರೆ. ಋಷ್ಯಶೃಂಗನು ಜಿಂಕೆಯಿಂದ, ಕೌಶಿಕನು ಕುಶ (ಗರಿಕೆ) ಹುಲ್ಲಿನಿಂದ, ಜಂಬೂಕನು ನರಿಯಿಂದ ವಾಲ್ಮೀಕಿಯು ಹುತ್ತದಿಂದ, ವ್ಯಾಸನು ಮೀನುಗಾರನ ಮಗಳಿಂದ, ಗೌತಮನು ಮೊಲದಿಂದ ವಸಿಷ್ಠನು ಊರ್ವಶಿಯಿಂದ, ಅಗಸ್ತ್ಯನು ನೀರಿನ ಕುಂಭದಿಂದ ಹೀಗೆ ಅನೇಕ ಋಷಿಗಳು ಎಲ್ಲೆಲ್ಲೊ ಹೇಗೋ ಜನಿಸಿದರು. ಆದರೆ ಅವರು ತಮ್ಮ ಆಧ್ಯಾತ್ಮಿಕ ಸಾಧನೆಗಳಿಂದ ಮಹಾಜ್ಞಾನಿಗಳಾಗಿ ದಿವ್ಯೋಪದೇಶ ಮಾಡುವ ಸಂತರಾದರು. ಆದ್ದರಿಂದ ಜಾತಿ ಬ್ರಾಹ್ಮಣವಲ್ಲ.
*ಜ್ಞಾನ ಬ್ರಾಹ್ಮಣವೆ?*
ಅಲ್ಲ ಎಷ್ಟೋ ಕ್ಷತ್ರಿಯರೂ ಕೂಡ ದಿವ್ಯಜ್ಞಾನ ಪಾರಂಗತರಾಗಿದ್ದಾರೆ. ಉದಾಹರಣೆಗೆ *ಜನಕಾದಿ ರಾಜರು* ಆದ್ದರಿಂದ ಜ್ಞಾನವೂ ಬ್ರಾಹ್ಮಣವಲ್ಲ.
*ಹಾಗಾದರೆ ಕರ್ಮ ಬ್ರಾಹ್ಮಣವೆ?*
ಅಲ್ಲ, ಏಕೆಂದರೆ ಹಿಂದಿನ ಜನ್ಮದ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತೇವೆ. ಅದನ್ನು ಪ್ರಾರಬ್ಧ ಕರ್ಮ ಎನ್ನಲಾಗುತ್ತದೆ. ಹಿಂದಿನ, ಈಗಿನ ಕರ್ಮಫಲಗಳು ಮುಂದಿನ ಜನ್ಮಕ್ಕೆ ಸಾಗಿಬರುತ್ತವೆ. ಅವನ್ನು ಸಂಚಿತ ಎನ್ನುತ್ತೇವೆ. ಎಲ್ಲರಿಗೂ ಕರ್ಮ ಒಂದೇ ಆಗಿರುತ್ತದೆ. ಅವರು ಇಂದು ಮಾಡುವ ಕಾರ್ಯ ಪ್ರಾರಾಬ್ಧ ಹಾಗೂ ಸಂಚಿತ ಕರ್ಮಗಳ ಫಲವಾಗಿರುತ್ತದೆ. ಅದ್ದರಿಂದ ಕರ್ಮ ಬ್ರಾಹ್ಮಣವಲ್ಲ.
ಹಾಗಾದರೆ, *ಧಾರ್ಮಿಕ ಕಾರ್ಯಗಳನ್ನು ಮಾಡುವವನು ಬ್ರಾಹ್ಮಣನೆ?* ಅಲ್ಲ, ಎಷ್ಟೋ ಕ್ಷತ್ರಿಯರು ಚಿನ್ನವನ್ನು ದಾನವಾಗಿ ನೀಡುತ್ತಾರೆ. ಆದ್ದರಿಂದ ಅವರು ಸತ್ಕಾರ್ಯ ಮಾಡಿದಂತಾಗುತ್ತದೆ. ಅ ಸತ್ಕಾರ್ಯವೇ ಬ್ರಾಹ್ಮಣ ವಾಗುವುದಿಲ್ಲವಲ್ಲವೇ..
ಹಾಗಾದರೆ *ನಿಜವಾಗಿಯೂ ಬ್ರಾಹ್ಮಣನಾರು?*
ಯಾರು ತನ್ನ ಆತ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾನೋ ಅವನೇ *ಬ್ರಾಹ್ಮಣ.*
*ಯಾರು ತನ್ನ ಆತ್ಮವನ್ನು ಅಂಗೈಯೊಳಗಣ ಅಂಜೂರವನ್ನು ಕಾಣುವಂತೆ ಕಾಣುವನೋ, ಯಾರಿಗೆ ಹಸಿವು, ನೀರಡಿಕೆ, ದುಃಖ, ಗೊಂದಲ, ವೃದ್ಧಾಪ್ಯ ಮತ್ತು ಸಾವಿನ ಭೀತಿ ಇರುವುದಿಲ್ಲವೊ, ಯಾರಿಗೆ ಸತ್ಯ, ಜ್ಞಾನ, ಆನಂದ ಮತ್ತು ಚಿರಂತನ ಭಾವಗಳ ಅರಿವಿದೆಯೋ, ಯಾರಿಗೆ ಜಡ ಮತ್ತು ಸೂಕ್ಷ್ಮ ವಸ್ತುಗಳ ಒಳಗೆ ಮತ್ತು ಹೊರಗೆ ವ್ಯಾಪಿಸಿರುವ ಆಕಾಶವನ್ನು ಮತ್ತು ತರ್ಕಾತೀತವಾದ ಸತ್ಯವನ್ನು ತನ್ನ ಅಂತಃ ಶಕ್ತಿಯಿಂದ ಕಾಣುವನೋ ಅವನು ಬ್ರಾಹ್ಮಣ*
*ಯಾರು ಭೌತಿಕ ಜಗತ್ತಿನ ಆಸೆ ಆಮಿಷಗಳನ್ನು ಶಮ, ದಮ, ಉಪ್ರತಿ, ತಿತಿಕ್ಷ, ಸಮಾಧಾನ ಮತ್ತು ಶ್ರದ್ಧೆಗಳ ಮೂಲಕ ಗೆದ್ದಿರುವನೋ ಅವನು ಬ್ರಾಹ್ಮಣ*
ವೇದಗಳು, ಸ್ಮೃತಿಗಳು, ಇತಿಹಾಸ ಮತ್ತು ಪುರಾಣಗಳು ಅದನ್ನೇ ಹೇಳುತ್ತವೆ. ಮಾನವನು ತನ್ನ ಆತ್ಮವನ್ನು ಸತ್ – ಚಿತ್ – ಆನಂದ ಸ್ಥಿತಿಯಲ್ಲಿ ಧ್ಯಾನಿಸಬೇಕು.
ಅದೇ ಅದ್ವೈತ ಸಿದ್ಧಾಂತ ಎಂದು ವಜ್ರಸೂಚಿಕೋಪನಿಷತ್ತು ಹೇಳುತ್ತದೆ.
ಸಂಗ್ರಹ 👉ಧರ್ಮಭಾರತಿ ಪತ್ರಿಕೆ.
No comments:
Post a Comment
If you have any doubts. please let me know...