ವಿದರ್ಭರಾಜನ ಮಗಳಾದ ಲೋಪಮುದ್ರೆಯನ್ನು ವಿವಾಹವಾಗಿ ಹಣದ ಅವಶ್ಯಕತೆ ಉಂಟಾಗಿ ಶ್ರುತರ್ವಾಣ, ಬ್ರಧ್ನಶ್ವ ಮತ್ತು ತ್ರಸದಸ್ಯುವನ್ನು ಕೇಳಿಕೊಳ್ಳುತ್ತಾರೆ. ಆದರೆ ಅವರಲ್ಲಿ ಸಿಗದಾಗ ಅವರೆಲ್ಲರನ್ನೂ ಕೂಡಿಕೊಂಡು ಮಹರ್ಷಿಗಳಾದ ಅಗಸ್ತ್ಯರು ಇಲ್ವಲನ ಬಳಿ ಹೋಗುತ್ತಾರೆ. ಅಗಸ್ತ್ಯರ ಆಗಮನದ ವಿಷಯ ಇಲ್ವಲನಿಗೆ ಗೊತ್ತಾಗಿ, ತನ್ನ ರಾಜಧಾನಿಯ ಕಡೆಗೇ ಬರುತ್ತಿರುವರೆಂಬ ವಾರ್ತೆಯನ್ನು ಕೇಳಿ ಇಲ್ವಲನು ತನ್ನ ಮಂತ್ರಿಗಳನ್ನು ಕೂಡಿಕೊಂಡು ತನ್ನ ರಾಜಧಾನಿಯ ಎಲ್ಲೆಯ ಬಳಿಗೆ ಹೋಗಿ, ಮಹರ್ಷಿಗಳಿಗೂ ರಾಜರಿಗೂ ಆದರದ ಸ್ವಾಗತವನ್ನಿತ್ತು ರಥದಲ್ಲಿ ಕುಳ್ಳಿರಿಸಿ ತನ್ನ ಅರಮನೆಗೆ ಕರೆದುಕೊಂಡು ಬಂದು, ಅತಿಥಿಗಳನ್ನು ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿ, ಸುಖಾಸನದಲ್ಲಿ ಕುಳ್ಳಿರಿಸಿದನು. ಯಥಾಪೂರ್ವವಾಗಿ ವಾತಾಪಿಯು ಆಡಾಗಿ ಪರಿವರ್ತಿತನಾದನು. ಆಡಾಗಿದ್ದ ವಾತಾಪಿಯನ್ನು ಕತ್ತರಿಸಿ ಇಲ್ವಲನು ಅದರ ಮಾಂಸವನ್ನು ರಾಜರ ಮತ್ತು ಅಗಸ್ತ್ಯರ ಭೋಜನಕ್ಕೆ ಸಿದ್ಧಪಡಿಸಿದನು. ಆ ಭೋಜನದ ರಹಸ್ಯವನ್ನು ಮೊದಲೇ ತಿಳಿದಿದ್ದರೂ ಅಗಸ್ತ್ಯರನ್ನೂ ತಮ್ಮನ್ನೂ ಇಲ್ವಲನು ಬೇರೆಯವರಂತೆಯೇ ಕೊಲ್ಲಲು ಯತ್ನಿಸುವನೆಂದು ರಾಜರು ಭಾವಿಸಿರಲಿಲ್ಲ. ಆದುದರಿಂದ ಇಲ್ವಲನ ಪ್ರಯತ್ನವನ್ನು ಗಮನಿಸಿದ ಆ ರಾಜರು ಬೇಸರಗೊಳ್ಳುತ್ತಾರೆ. ತಮ್ಮ ಸಾವು ಸನ್ನಿಹಿತವಾಯಿತೆಂದೇ ಭಾವಿಸುತ್ತಾರೆ. ಅವರ ಮುಖಭಾವಗಳಿಂದಲೇ ಅವರ ಹೃದಯಗಳಲ್ಲಿದ್ದ ಸಂಕಟವನ್ನು ತಿಳಿದು, ಅಗಸ್ತ್ಯರು ಹೇಳಿದರು. “ರಾಜರೇ! ನೀವು ದುಃಖಪಡುವ ಕಾರಣವಿಲ್ಲ. ಆಡಿನ ರೂಪನಾದ ವಾತಾಪಿಯ ಮಾಂಸವೆಲ್ಲವನ್ನೂ ನಾನೊಬ್ಬನೇ ತಿನ್ನುತ್ತೇನೆ. ಆದುದರಿಂದ ನೀವು ಈ ವಿಷಯದಲ್ಲಿ ಸ್ವಲ್ಪವೂ ಭೀತರಾಗಬೇಡಿ” ಎನ್ನುತ್ತಾರೆ. ಅನಂತರದಲ್ಲಿ ಅಗಸ್ತ್ಯರಿಗೆ ಇಲ್ವಲನು ನಗು ನಗುತ್ತಾ ಪಕ್ವಮಾಡಿದ ಮಾಂಸವನ್ನು ಬಡಿಸುತ್ತಾನೆ.
ಬಡಿಸಿದ ಮಾಂಸವೆಲ್ಲವನ್ನೂ ಅಗಸ್ತ್ಯರೊಬ್ಬರೇ ತಿಂದುಬಿಟ್ಟರು. ಅಗಸ್ತ್ಯರ ಭೋಜನವು ಮುಗಿದನಂತರ ಇಲ್ವಲನು ಯಥಾಪೂರ್ವವಾಗಿ ‘ವಾತಾಪೇ! ಅತ್ರಾಗಚ್ಛ!’ ಎಂದು ಗಟ್ಟಿಯಾಗಿ ಕೂಗಿದನು. ಇಲ್ವಲನು ಹೀಗೆ ಹೇಳಿದೊಡನೆಯೇ ಅಗಸ್ತ್ಯರು ‘ವಾತಾಪೇ! ಜೀರ್ಣೋಭವ’ ಎಂದು ಹೇಳುತ್ತಾ ಹೊರಗೆ ಬಿಟ್ಟ ಅಪಾನವಾಯುವಿನ ಶಬ್ದವು ಗುಡುಗಿನ ಶಬ್ದವನ್ನೂ ಮೀರಿಸುವುದಾಗಿದ್ದಿತು. ತನ್ನ ತಮ್ಮನು ಎಷ್ಟು ಹೊತ್ತಾದರೂ ಅಗಸ್ತ್ಯರ ಹೊಟ್ಟೆಯನ್ನು ಸೀಳಿ ಹೊರಗೆ ಬಾರದಿರಲು ಇಲ್ವಲನು ಪುನಃ ಪುನಃ ‘ವಾತಾಪೇ! ಅತ್ರಾಗಚ್ಛ!’ ಎಂದು ಕೂಗಿಕೊಂಡನು. ಅವನ ಕೂಗನ್ನು ಕೇಳಿ ಅಗಸ್ತ್ಯರು ಒಮ್ಮೆ ಗಟ್ಟಿಯಾಗಿ ನಕ್ಕು ಹೇಳಿದರು “ಇಲ್ವಲ! ವಾತಾಪಿಯು ಹೇಗೆ ಹೊರಗೆ ಬಂದಾನು? ನಾನಾಗಲೇ ಅವನನ್ನು ಜೀರ್ಣಿಸಿಕೊಂಡಿದ್ದೇನೆ!”
ಇದರ ಮುಂದಿನಭಾಗ ನನಗೆ ಬೇಡ. ಆದರೆ ವೃಥಾ ಇದೊಂದು ಪುರಾಣದಲ್ಲಿ ಬರುವ ಉಪಕಥೆಯನ್ನು ಹಿಡಿದುಕೊಂಡು ಹಿಂದಿನ ಬ್ರಾಹ್ಮಣರು ಮುನಿಗಳೆಲ್ಲರೂ ಮಾಂಸಾಹಾರಿಗಳಾಗಿದ್ದರು ಜೈನ ಮತ್ತು ಬೌದ್ಧ ಮತ ಪ್ರಾಬಲ್ಯಕ್ಕೆ ಬಂದು ಆಮೇಲೆ ಮಾಂಸಾಹಾರ ವರ್ಜ್ಯವಾಯಿತೆಂದು ಬೊಬ್ಬಿಡುವವರಿಗೆ ಈ ಮುಂದಿನ ಇದೇ ಕಥೆ ಉತ್ತರಿಸಬಲ್ಲದು.
ಇದು ಋಗ್ವೇದದ ಒಂದನೇ ಮಂಡಲದಲ್ಲಿನ ೧೮೭ನೇ ಸೂಕ್ತದ ವಿಷಯ.
ಅಗಸ್ತ್ಯ ಮಹರ್ಷಿ ವಿದರ್ಭದ ರಾಜಕುಮಾರಿಯನ್ನು ಮದುವೆಯಾಗುತ್ತಾರೆ. ಆಗ ಅವರಿಗೆ ಹಣದ ಅವಶ್ಯಕತೆ ಉಂಟಾಗುತ್ತದೆ. ಆಗ ಆತ ಸುದಾಸನೇ ಮೊದಲಾದವರಲ್ಲಿ ಹೋದ ನಂತರ ಇಲ್ವಲನಲ್ಲಿ ಹೋಗುತ್ತಾರೆ. ಇಲ್ವಲ ಮೃತ ಸಂಜೀವಿನಿ ವಿದ್ಯೆ ಪಡೆದವನಾಗಿದ್ದ. ಮೊದಲೆಲ್ಲಾ ಧಾರ್ಮಿಕನೂ ಆಗಿದ್ದ. ಆದರೆ ಸಂಜೀವಿನಿ ವಿದ್ಯೆ ಸಿಕ್ಕಿದ ನಂತರ ಅಹಂಕಾರದಿಂದ ಮೆರೆಯುತ್ತಿದ್ದ. ಈ ಇಲ್ವಲನನ್ನು ಸರಿದಾರಿಗೆ ತರುವುದು ಅಗಸ್ತ್ಯರ ಉದ್ದೇಶವಾಗಿತ್ತು. ಇಲ್ವಲನಿಗೆ ವಾತಾಪಿ ಎನ್ನುವ ತಮ್ಮನಿದ್ದ. ಅಗಸ್ತ್ಯರು ಇಲ್ವಲನ ಅರಮನೆಗೆ ಬಂದಾಗ ಇಲ್ವಲ ಬರಮಾಡಿಕೊಳ್ಳುತ್ತಾನೆ. ಹೇಗಾದರೂ ಅಗಸ್ತ್ಯರನ್ನು ಮುಗಿಸಬೇಕೆನ್ನುವುದು ಆತನ ಹವಣಿಕೆಯಾಗಿತ್ತು. ಇಲ್ವಲ ಅಗಸ್ತ್ಯರಲ್ಲಿ ಇಂದು ತನ್ನ ಮನೆಯಲ್ಲಿ ಶ್ರಾದ್ಧ ಆದುದರಿಂದ ಪಿತೃಸ್ಥಾನದಲ್ಲಿದ್ದು ನಮ್ಮನ್ನು ಅನುಗ್ರಹಿಸಿ ಎನ್ನುತ್ತಾನೆ. ಅಗಸ್ತ್ಯರು ಕೆಲವು ಷರತ್ತು ವಿಧಿಸುತ್ತಾರೆ. ಶ್ರಾದ್ಧದಲ್ಲಿ ತಾನು ಏನು ಬಯಸುತ್ತೇನೆಯೋ ಅದನ್ನು ತನಗೆ ತೃಪ್ತಿಯಾಗುವ ತನಕ ಬಡಿಸಬೇಕು ಎನ್ನುತ್ತಾರೆ ಅದಕ್ಕೆ ಇಲ್ವಲ ಒಪ್ಪಿಕೊಂಡು ತನ್ನ ಷರತ್ತು ಮುಂದಿಡುತ್ತಾನೆ. ಶ್ರಾದ್ಧದಲ್ಲಿ ತಮ್ಮ ಹಿಂದಿನವರ ನಿಯಮದಂತೆ ತಾನು ಮಾಂಸಾಹಾರ ಮಾಡಿಸುತ್ತೇನೆ ತಾವು ತಿನ್ನಬೇಕು ಎನ್ನುತ್ತಾನೆ. ಎಲ್ಲವಕ್ಕೂ ಒಪ್ಪಿಕೊಂಡು ಅಗಸ್ತ್ಯರು ಸ್ನಾನಕ್ಕೆ ತೆರಳುತ್ತಾರೆ. ಇತ್ತ ಇಲ್ವಲ ವಾತಾಪಿಯನ್ನು ಕಡಿದು ಕೊಂದು (ವಾತಾಪಿಯನ್ನು ಆಡಿನ ರೂಪತಳೆಯುವಂತೆ ಪರಿವರ್ತಿಸಿ ಅದರಿಂದ ಬೇಯಿಸಲಾಗುತ್ತಿತ್ತು) ಅವನ ಮಾಂಸದಿಂದ ಅಡುಗೆ ತಯಾರಾಗುತ್ತದೆ. ಅಗಸ್ತ್ಯರು ಊಟಕ್ಕೆ ಬಂದಾಗ ಅವರ ಪರಿವಾರವೂ ಊಟಕ್ಕೆ ಬರುತ್ತದೆ. ಊಟಕ್ಕೆ ಕುಳಿತಾಗ ಅವರ ಎದುರು ವಾತಾಪಿಯನ್ನು ಕಡಿದು ಮಾಡಿದ ಮಾಂಸದ ಭಕ್ಷ್ಯವನ್ನು ಇಡುತ್ತಾನೆ. ಆಗ ಅಗಸ್ತ್ಯರು ಅದನ್ನು ಬೇರೊಂದು ಉಪಾಯದಿಂದ ತಿಳಿದು ನರಮಾಂಸ ವಾತಾಪಿಯದ್ದೇ ಎಂದು ತಿಳಿಯುತ್ತಲೇ ಇದನ್ನು ಬೇರೆಯವರು ತಿನ್ನುವಂತಿಲ್ಲ ತಾನು ಮಾತ್ರವೇ ತಿನ್ನುತ್ತೇನೆ ಅನ್ನುತ್ತಾರೆ. ಅದಕ್ಕೆ ಇಲ್ವಲ ಆಕ್ಷೇಪಿಸಿದಾಗ ತಾನು ಆಪೋಷನ ತೆಗೆದುಕೊಂಡು ಏಳುತ್ತೇನೆ ಎನ್ನುತ್ತಾರೆ. ಅಂತೂ ಇಲ್ವಲ ಒಪ್ಪಿಕೊಳ್ಳುತ್ತಾನೆ. ಆಗ ಅಗಸ್ತ್ಯರು
ಯದದೋ ಪಿತೋ ಅಜಗನ್ವಿವಸ್ವ ಪರ್ವತಾನಾಂ |
ಅತ್ರಾಚಿನ್ನೋ ಮಧೋ ಪಿತೋ ರಂ ಭಕ್ಷಾಯ ಗಮ್ಯಾಃ || ಮಾಧುರ್ಯೋಪೇತವಾದ ಎಲೈ ಅನ್ನವೇ ನಮಗೆ ಪುಷ್ಕಲವಾದ ಭೋಜನಕ್ಕೆ ಯೋಗ್ಯವಾಗಿರುವಂತೆ ಮಾಡು ಎಂದು ಬೇಡಿಕೊಳ್ಳುತ್ತಾರೆ. ಆಗ ಮಾಂಸವಿದ್ದದ್ದು ಮಾಷವಾಗಿ ಅದು ಉದ್ದಿನ ವಡೆಯಾಗುತ್ತದೆ. ಯಥೇಷ್ಟವಾಗಿ ಒಂದೂ ಬಿಡದೇ ತಿನ್ನುತ್ತಾರೆ. ಹೀಗೆ ಮಾಂಸವನ್ನು ತಿನ್ನದೇ ಶುದ್ಧ ಶಾಖಾಹಾರಿ ಭೋಜವಾಗಿಯೇ ಎಲ್ಲವೂ ಪರಿವರ್ತಿತವಾಗುತ್ತವೆ. ಎಲ್ಲರ ಭೋಜನವಾದ ಮೇಲೆ ಇಲ್ವಲನಲ್ಲಿ ವಾತಾಪಿಯನ್ನು ಕರೆ ಮಂತ್ರಾಕ್ಷತೆಯನ್ನು ಕೊಡುತ್ತೇನೆ ಎಂದರೆ ವಾತಾಪಿ ಬರಲು ಇವನಲ್ಲಿ ಸಂಜೀವಿನೀ ವಿದ್ಯೆ ಮರೆತಿರುತ್ತದೆ. ಮಾಂಸವೂ ಮಾಷವಾಗಿ ದೇಹ ಸೇರಿದೆ. ಆಗ ಅಗಸ್ತ್ಯರು ಹೇಳುವ ಮಂತ್ರ ಈಗ ನಾನು ಬರೆಯುತ್ತಿರುವ ವಿಷಯಕ್ಕೆ ಅತಿಮುಖ್ಯದ್ದು. . . .
ಯದಪಾಮೋಷಧೀನಾಂ ಪರಿಂಶ ಮಾರಿಷಾಮಹೇ |
ವಾತಾಪೇ ಪೀವ ಇದ್ಭವ ||
ಎಲೈ ಶರೀರವೇ ನೀರು ಮತ್ತು ಸಸ್ಯಗಳಿಗೂ ಸಂಬಂಧಿಸಿದ ಅನ್ನ (ಆಹಾರ) ಸಂಪೂರ್ಣವಾಗಿ ಸುಖವನ್ನು ಕೊಡತಕ್ಕದ್ದು ಇಂತಹ ಅನ್ನವು ನನ್ನ ಜಠರದಲ್ಲಿ ಪಚನವಾಗಿ ನನ್ನ ಆರೋಗ್ಯವನ್ನು ಸುಸ್ಥಿರವಾಗಿಡು ಎನ್ನುವುದು ಭಾವಾರ್ಥ. ತಿಂದ ಆಹಾರಗಳು ಪಚನವಾಗಿ ಜೀರ್ಣವಾಗಲಿ ಎನ್ನುವರು. ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಅಗಸ್ತ್ಯರು ಮಾಂಸಾಹಾರ ಮಾಡಿಲ್ಲ ಎನ್ನುವುದು.
ಯದಪಾಮೋಷಧೀನಾಂ - ಯತ್ ಅಪಾಂ ಓಷಧೀನಾಂ ಓಷಧಿಗಳು ಎಂದರೆ ಸಸ್ಯಗಳು. ಸಸ್ಯಗಳು ಬೆಳೆಯಲು ನೀರಿನ ಅವಶ್ಯಕತೆ ಇರುವುದು ನೀರು ಮತ್ತು ಸಸ್ಯಗಳಿಂದ ನಮ್ಮ ಅನ್ನ ಆಹಾರ ಬೆಳೆಯುತ್ತದೆ.
ವಾತಾಪೇ ಎಂದರೆ ವಾತೇನ ಪ್ರಾಣೇನಾಪ್ನೋತಿ ಸ್ವನಿರ್ವಾಹಮಿತಿ ವಾತೇನಾಪ್ಯಾಯತ ಇತಿ ವಾ ವಾತಾಪಿ ಶರೀರಂ.
ಎಂದರೆ ಪ್ರಾಣವಾಯುವಿನಿಂದ ನಮ್ಮ ಇಡೀ ಶರೀರದ ಸಮತೋಲನ ನಿರ್ವಹಿಸಲ್ಪಡುವುದರಿಂದ ವಾತಾಪಿ ಎಂದರೆ ಶರೀರ ಎನ್ನುವ ಅರ್ಥ ಕೊಡುತ್ತದೆ.
ಪೀವ ಎನ್ನುವುದನ್ನು ಸಾಯಣರು ತೃಪ್ತಿಹೊಂದಿದ ಅನ್ನುವಂತೆ ಹೇಳಿದ್ದಾರೆ, ಪೀವ ಎನ್ನುವುದು ಸ್ಥೂಲಕಾಯವನ್ನೂ ಹೇಳುವುದರಿಂದ ಎರಡೂ ಸಮಂಜಸವೇ. ಆಹಾರ ತಿಂದ ಬಳಿಕ ಸ್ಥೂಲ ಶರೀರವಾಗುವುದು ಅನ್ನುವುದೂ ಅರ್ಥವಾಗುತ್ತದೆ. ಆಮೇಲಿನ ಎರಡು ಋಕ್ಕುಗಳೂ ವಾತಾಪೇ ಪೀವ ಇದ್ಭವ ಎನ್ನುತ್ತವೆ ಅಂದರೆ ವಾತ ಸಂಬಂಧಿ (ವಾಯುವಿಗೆ ಸಂಬಂಧಿಸಿದ) ಎಲ್ಲಾ ತೊಂದರೆಗಳಿಂದ ಪಾರುಮಾಡಿ ನನ್ನ ದೇಹ ಪುಷ್ಟಿಯಾಗುವಂತೆ ಮಾಡು ಎನ್ನುವುದು ಅರ್ಥ. ಹಾಗದರೆ ಬ್ರಾಹ್ಮಣ ಮಾಂಸಾಹಾರ ಮಾಡಿದ ಎನ್ನುವುದು ಎಲ್ಲಿಂದ ? ಯಾಕಾಗಿ ? ಮಾಷ ಎನ್ನುವುದು ಮಾಂಸಾಹಾರವಾಗಿರಬಹುದಲ್ಲವೇ ಪುರಾಣದ ಕಥೆಗಳಿಂದ ಎಲ್ಲೆಲ್ಲಿಯೋ ಏನೇನೋ ಆಗಿರಬಹುದಲ್ಲ.
#ವಾತಾಪಿ_ಇಲ್ವಲ_ಪುನಃ
ಸದ್ಯೋಜಾತ ಭಟ್
No comments:
Post a Comment
If you have any doubts. please let me know...