ಪುಷ್ಯ ಯೋಗ: ಈ ದಿನ ಯಾವೆಲ್ಲ ಕೆಲಸ ಕಾರ್ಯಗಳಿಗೆ ಶುಭದಿನ
ಭಾರತೀಯ ಜ್ಯೋತಿಷ್ಯದ ಪ್ರಕಾರ ಕೆಲವು ತಿಥಿ, ನಕ್ಷತ್ರ ಹಾಗೂ ದಿನಗಳ ಸಂಯೋಜನೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಶುಭ ದಿನದಂದು ಕೆಲವು ಕಾರ್ಯಗಳನ್ನು ಕೈಗೊಂಡರೆ ಅಥವಾ ಹೊಸದನ್ನು ಪ್ರಾರಂಭಿಸಿದರೆ ಶುಭವೆಂದು ಹೇಳಲಾಗುತ್ತದೆ. ಈ ಶುಭ ಸಮಯ ಅಥವಾ ಶುಭ ಮುಹೂರ್ತವು ಅನುಕೂಲಕರ ಫಲಿತಾಂಶಗಳನ್ನು ನೀಡುತ್ತವೆ. ಅಂತಹ ಶುಭ ದಿನದಲ್ಲಿ ಗುರು ಪುಷ್ಯ ಯೋಗವೂ ಒಂದು. ಪುಷ್ಯಾ ನಕ್ಷತ್ರವು ಗುರುವಾರದಂದು ಬಂದರೆ ಅದನ್ನು ಗುರು ಪುಷ್ಯ ಯೋಗವೆಂದು ಕರೆಯಲಾಗುತ್ತದೆ. ಈ ಯೋಗದ ಮಹತ್ವ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.
ಗುರು ಪುಷ್ಯ ಯೋಗ ಎಂದರೆ ಏನು?
ಪುಷ್ಯಾ ನಕ್ಷತ್ರವು ಕರ್ಕ ರಾಶಿಯಲ್ಲಿ ಬರುವುದು. ಕರ್ಕರಾಶಿ ಗುರುವಿಗೆ ಉಚ್ಛರಾಶಿ. ಯಾವಾಗ ಪುಷ್ಯಾ ನಕ್ಷತ್ರವು ಗುರುವಾರದ ದಿನ ಬೀಳುತ್ತದೆಯೋ ಆ ಶುಭ ಯೋಗವನ್ನು ಗುರು ಪುಷ್ಯ ಯೋಗವೆಂದು ಕರೆಯುತ್ತಾರೆ. ಈ ಯೋಗವನ್ನು ಗುರು ಪುಷ್ಯ ಅಮೃತ ಯೋಗವೆಂದೂ ಕರೆಯುತ್ತಾರೆ. ಗುರುಗ್ರಹವು ಜ್ಞಾನದ ಸಂಕೇತವಾಗಿದೆ. ಇದಲ್ಲದೇ ಗುರುವನ್ನು ಅತ್ಯಂತ ಶುಭಗ್ರಹವೆಂದು ಕರೆಯುತ್ತಾರೆ. ಈ ನಕ್ಷತ್ರವನ್ನು ಮೃದು ಹಾಗೂ ಶುಭವೆಂದು ಪರಿಗಣಿಸಲಾಗಿದೆ. ಇದನ್ನು ಮಹಾನಕ್ಷತ್ರವೆಂದೂ ಕರೆಯುತ್ತಾರೆ. ಈ ಗುರು ಗ್ರಹ ಹಾಗೂ ಪುಷ್ಯಾ ನಕ್ಷತ್ರ ಸೇರಿದಾಗ ಉತ್ತಮ ಅವಧಿ ಪ್ರಾರಂಭಗೊಳ್ಳುತ್ತದೆ. ಈ ಅವಧಿಯಲ್ಲಿ ಕೈಗೊಂಡ ಯಾವುದೇ ಚಟುವಟಿಕೆಯು ಶುಭವಾಗಿ ಪರಿಣಮಿಸುತ್ತದೆ. ಇದೇ ಪುಷ್ಯಾ ನಕ್ಷತ್ರವು ಭಾನುವಾರ ಬಂದರೆ ಅದನ್ನು ರವಿಪುಷ್ಯ ಯೋಗವೆಂದು ಕರೆಯುತ್ತಾರೆ.
ದೀರ್ಘಾವಧಿಯ ಫಲ ನೀಡುವ ಈ ಯೋಗ
ಯಾವುದೇ ಶುಭ ಕಾರ್ಯವನ್ನು ಈ ದಿನ ಪ್ರಾರಂಭಿಸಬಹುದು. ಆದರೆ ಈ ಶುಭ ಯೋಗದಲ್ಲಿ ಮದುವೆಯ ಆಚರಣೆಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ಯೋಗವು ಮದುವೆಯ ವಿಚಾರದಲ್ಲಿ ಶಾಪಗ್ರಸ್ತ ಯೋಗವಾಗಿದೆ. ವಿಶೇಷ ಲಾಭವನ್ನು ಪಡೆಯಲು ಮಾಡುವಂತಹ ಹವನಗಳಿಗೆ ಈ ದಿನ ಅತ್ಯಂತ ಶುಭ ಹಾಗೂ ಫಲದಾಯಕ. ಗುರು ಪುಷ್ಯ ಯೋಗದಂದು ಗುರು ಮಂತ್ರವನ್ನು ಪಠಿಸಬಹುದು. ವ್ಯವಹಾರಕ್ಕೆ ಸಂಬಂಧಪಟ್ಟ ಮಾತುಕತೆಗೂ ಇದು ಶುಭದಿನ. ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳುವಂತೆ ಶನಿ ಮತ್ತು ಗುರು ಇಬ್ಬರೂ ಈ ಯೋಗದ ಮೇಲೆ ಶುಭ ಪರಿಣಾಮವನ್ನು ಬೀರುತ್ತಾರೆ. ಆದ್ದರಿಂದ ದೀರ್ಘಕಾಲದವರೆಗೆ ಪ್ರಯೋಜನ ಪಡೆಯುವಂತಹ ಕೆಲಸಗಳನ್ನು ಈ ಯೋಗದಲ್ಲಿ ಪ್ರಾರಂಭಿಸಬೇಕು.
ಈ ಯೋಗದಲ್ಲಿ ಯಾವಯಾವ ಕಾರ್ಯಗಳನ್ನು ಮಾಡಬಹುದು ನೋಡೋಣ..
ಗುರುಪುಷ್ಯಯೋಗವು ಈ ಕೆಳಗೆ ಹೇಳಿರುವಂತಹ ಕಾರ್ಯಗಳ ಆರಂಭಕ್ಕೆ ಅತ್ಯಂತ ಶುಭದಿನವಾಗಿದೆ.
- ಹೊಸ ಕಟ್ಟಡ ನಿರ್ಮಾಣಕ್ಕೆ ಶಿಲಾಕಲ್ಲು ಹಾಕಲು
- ಮಂತ್ರ-ತಂತ್ರವನ್ನು ಕಲಿಯಲು ಹಾಗೂ ತಂದೆ, ಅಜ್ಜ, ಗುರುವು ಕಲಿತ ಜ್ಞಾನವನ್ನು ಸಂಪಾದಿಸಲು
- ಹೊಸ ಅಂಗಡಿ-ಕಚೇರಿಯ ಉದ್ಘಾಟನೆಗೆ
- ಚಿನ್ನ ಮತ್ತು ಆಭರಣಗಳ ಖರೀದಿಗೆ
- ಹೊಸ ಮನೆ ಖರೀದಿಗೆ ಅಥವಾ ಹೊಸ ಮನೆ ಸ್ಥಳಾಂತರಕ್ಕೆ
- ದೊಡ್ಡ ವ್ಯವಹಾರಗಳನ್ನು ಆರಂಭಿಸಲೂ ಗುರು ಪುಷ್ಯ ಯೋಗವು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
ಗುರು ಪುಷ್ಯ ಯೋಗದಲ್ಲಿ ಮದುವೆಯು ಅಶುಭ !
ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮನು ತನ್ನ ಪುತ್ರಿಯಾದ ಸರಸ್ವತಿಯ ಮದುವೆ ಮಾಡಲು ನಿರ್ಧರಿಸುತ್ತಾನೆ. ಮದುವೆ ದಿನ ಬ್ರಹ್ಮನು ತನ್ನ ಮಗಳ ಅಪ್ರತಿಮ ಸೌಂದರ್ಯವನ್ನು ನೋಡಿ ಆಕರ್ಷಿತನಾಗುತ್ತಾನೆ. ಮನಸ್ಸು ಗೊಂದಲಕ್ಕೊಳಗಾಗುತ್ತದೆ. ತಾನೇ ತನ್ನ ಸ್ವಂತ ಪುತ್ರಿಯನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ಆದರೆ ಬ್ರಹ್ಮನ ಈ ಮೋಹವು ಭಂಗವಾಗುತ್ತದೆ. ಇದರಿಂದ ಕೋಪಿಷ್ಠನಾದ ಬ್ರಹ್ಮನು ಪುಷ್ಯಾ ನಕ್ಷತ್ರವನ್ನು ಶಾಪಕ್ಕೀಡು ಮಾಡುತ್ತಾನೆ. ಅದೇನೆಂದರೆ ಯಾರು ಪುಷ್ಯಾ ನಕ್ಷತ್ರದಲ್ಲಿ ಮದುವೆಯಾಗುತ್ತಾರೋ ಅವರ ವೈವಾಹಿಕ ಜೀವನವು ವಿಫಲವಾಗಲಿ ಎಂದು ಈ ನಕ್ಷತ್ರಪುಂಜವನ್ನು ಶಪಿಸಿದನು. ಅಂದಿನಿಂದ ಪುಷ್ಯಾ ನಕ್ಷತ್ರದಲ್ಲಿ ವಿವಾಹ ವಿಧಿಗಳನ್ನು ನೆರವೇರಿಸಲಾಗುವುದಿಲ್ಲ.
No comments:
Post a Comment
If you have any doubts. please let me know...