March 11, 2025

ಅಮೂಲ್ಯ ನಾಣ್ಯ

ರವಿ ಆವತ್ತು‌ ಕೆಲಸಕ್ಕೆ ಹೊರಡುವ ವೇಳೆಯಲ್ಲಿ ಜೇಬಿನಿಂದ ರೂಪಾಯಿಯ ಬಿಲ್ಲೆಯೊಂದು ನೆಲಕ್ಕೆ ಬಿದ್ದು ಠಣ್ಣನೆ ಸದ್ದು ಮಾಡಿ ಚಪ್ಪಲಿ ಸ್ಟಾಂಡಿನ ಅಡಿಗೆ ಸೇರಿಕೊಂಡಿತು . ಜೇಬಿನಲ್ಲಿ ನೋಟುಗಳ ಕಂತೆ ಇದ್ದುದರಿಂದ ಅದಕ್ಕಾಗಿ ಹುಡುಕಾಡುವುದು ತುರ್ತಿನ ಕೆಲಸವಲ್ಲ ಎಂದು ಭಾವಿಸಿ ಬೈಕು ಹತ್ತಿದ. 

ಕೆಲವೊಮ್ಮೆ ಬಿಲ್ಲೆಗಳು ಜೇಬಿಗೆ ಭಾರವೆನಿಸಿದಾಗ ಅವುಗಳನ್ನು  ಮೇಜಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಪುಸ್ತಕಗಳು , ನ್ಯೂಸ್ ಪೇಪರುಗಳ ನಡುವೆ ಸುರಿದು ಎಂದಿನಂತೆ ಕೆಲಸಕ್ಕೆ  ಹೊರಟುಬಿಡುತ್ತಿದ್ದ‌ .

ಕೆಲವು ಬಿಲ್ಲೆಗಳು ಟೀವಿ ಸ್ಟಾಂಡಿನ ಅಡಿಯಲ್ಲಿ , ಮಂಚದ ಕೆಳಗೆ , ಸೋಫಾದ ಸಂದಿಯಲ್ಲಿ ಬೆಳಕಿನ ಭಾಗ್ಯ ಕಾಣದೇ ತಿಂಗಳುಗಟ್ಟಲೆ ಜೀವ ಹಿಡಿದುಕೊಂಡಿರುತ್ತಿದ್ದವು .

ಹೀಗೆ ಕೊಠಡಿಯ ಹಲವೆಡೆಗಳಲ್ಲಿ ಎಷ್ಟೋ ನಾಣ್ಯಗಳು ರವಿಯ ಸ್ಪರ್ಶಕ್ಕಾಗಿ ಪರಿತಪಿಸುತ್ತಾ ಧೂಳು ತಿನ್ನುತ್ತಾ ಬಿದ್ದಿರುತ್ತಿದ್ದವು . ಆದರೆ ರವಿ ಅವುಗಳನ್ನು ಮರೆತು ಶತಮಾನಗಳಾಯಿತೇನೋ ಎಂಬಂತೆ ವರ್ತಿಸುತ್ತಿದ್ದ . ಗಾಳಿಗೆ  ಹಾರಿ ಹೋಗುವ ವಸ್ತುಗಳಂತೂ ಅಲ್ಲ , ಕೈಕಾಲುಗಳಂತೂ ಇಲ್ಲ . ಅವು ಯಾವತ್ತಿದ್ದರೂ ತನ್ನವೇ ಎಂಬ ಭಾವನೆ ರವಿಗೆ . ಕೈಯಲ್ಲಿ ದುಡ್ಡು ಯಾವತ್ತೂ ಓಡಾಡುತ್ತಿದ್ದರಿಂದ ಆ ಬಿಲ್ಲೆಗಳ ಅವಶ್ಯಕತೆಯೂ ಅವನಿಗೆ ಬಂದಿರಲಿಲ್ಲ .

ಆದರೆ ಎಲ್ಲಾ ವಾರವೂ ಶುಕ್ರವಾರ ಅಲ್ವಲ್ಲ . ಆವತ್ತು ರವಿಗೆ ಆಘಾತ ಕಾದಿತ್ತು . ಹಿಂದಿನ ರಾತ್ರಿ ಸಿನೆಮಾ ಹಾಲಿನ ನೂಕುನುಗ್ಗಲಿನಲ್ಲಿ ಯಾರೋ ಪರ್ಸ್ ಎಗರಿಸಿಬಿಟ್ಟಿದ್ದರು . ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ ಎನ್ನುವ ಹಾಗೆ ಏಟಿಎಮ್ ಕಾರ್ಡ್ , ಕ್ರೆಡಿಟ್ ಕಾರ್ಡುಗಳೆಲ್ಲ ಪರ್ಸಿನ ಜೊತೆ ಹೋಗಿಬಿಟ್ಟಿದ್ದವು . ಅಂಗಿಯ ಜೇಬಿನಲ್ಲಿ ನಯಾಪೈಸೆಯಿರಲಿಲ್ಲ ‌ . ತಿಂಗಳ ಸಂಬಳವೂ ಅಕೌಂಟಿಗೆ ಬಿದ್ದಿರಲಿಲ್ಲ . 

ಹೊಟ್ಟೆ ತಾಳ ಹಾಕಲು ಶುರು ಮಾಡಿತ್ತು . ಹಸಿವಿಗಿಂತ ದೊಡ್ಡ ಗುರು ಇನ್ನೊಂದಿಲ್ಲ . ನಿಜದ ಗುರು ಬೆತ್ತದಲ್ಲಿ ಬಡಿದು ಅರಿವು ಮೂಡಿಸಿದರೆ ಹಸಿವು  ಆತ್ಮವನ್ನೇ ಬಡಿದು ಮಂಡಿಯೂರಿಸುತ್ತದೆ . ಅಹಮ್ಮನ್ನು ಮಟ್ಟು ಮಾಡುತ್ತದೆ . ರವಿಗೂ ಹಾಗೆಯೇ ಆಯಿತು . 

ಬಿಸಾಡಿ ಮರೆತಿದ್ದ ನಾಣ್ಯಗಳೆಲ್ಲ ಒಮ್ಮೆಗೇ ನೆನಪಾದವು . 
ಯಾವ್ಯಾವುದೋ ಸಂದಿಗೆ ಸೇರಿಕೊಂಡಿದ್ದ ನಾಣ್ಯಗಳನ್ನು ಧಾವಂತದಿಂದ ಹೆಕ್ಕತೊಡಗಿದ . ಪ್ರತಿ ನಾಣ್ಯ ಸಿಕ್ಕಾಗಲೂ ಅವನ ಕಣ್ಣುಗಳು ವಜ್ರದ ನಿಧಿಯೇ ಸಿಕ್ಕಂತೆ ಪ್ರಜ್ವಲಿಸುತ್ತಿದ್ದವು ‌. ಕೊನೆಗೆ ಚಪ್ಪಲಿಗಳ ಸಂದಿಗೆ ಸೇರಿಕೊಂಡಿದ್ದ ನಾಣ್ಯವನ್ನೂ ಬಿಡದೇ ಹೆಕ್ಕಿ ಕಣ್ಣಿಗೊತ್ತಿ ಅಂಗೈ ಮುಷ್ಟಿಗೆ ಸೇರಿಸಿಕೊಂಡ . 

ನೋಡನೋಡುತ್ತಿದ್ದಂತೆಯೇ ಒಂದು ತೆಂಗಿನ ಹೋಳಿಗೆ ತುಂಬುವಷ್ಟು ನಾಣ್ಯಗಳನ್ನು ಗಣಿಗಾರಿಕೆ ಮಾಡಿದ.
ಅವನ ಹೊಟ್ಟೆಗೆ ಮಾತ್ರವಲ್ಲ , ಬೈಕಿನ ಹೊಟ್ಟೆಗೂ ಸಾಕಾಗುವಷ್ಟು ಬಿಲ್ಲೆಗಳು ಸಿಕ್ಕಿದವು . ಅರಿವಿಲ್ಲದಂತೆ ಆನಂದಭಾಷ್ಪ ಜಿನುಗಿತು . 

ನಾಣ್ಯಗಳನ್ನು ರವಿ ನಿರ್ಲಕ್ಷಿಸಿರೂ ಅವು ಅವನಿಂದ ದೂರಾಗಲಿಲ್ಲ , ಹತ್ತಿರವಿದ್ದುಕೊಂಡೇ ವಿಷಮ ಸ್ಥಿತಿಯಲ್ಲಿ ಅವನ ಕೈ ಹಿಡಿದವು .. ವಾಸ್ತವದಲ್ಲೂ ಅಷ್ಟೇ .. ನಾವು ಅಂತಸ್ತಿನ ಅಹಮ್ಮಿನಿಂದ , ಸ್ಥಾನಮಾನದ ಬಿಗುಮಾನದಿಂದ ದೂರವಿಡುವ ಅತಿ ಸಾಮಾನ್ಯ ಜನರೇ ನಮಗೆ ಕಷ್ಟ ಕಾಲದಲ್ಲಿ ಆಸರೆಯಾಗುವವರು ಅನ್ನಿಸಿತು . ಒಂದು ದೊಡ್ಡ ಪಾಠವನ್ನೇ ಕಲಿತಂತಾಯಿತು.

No comments:

Post a Comment

If you have any doubts. please let me know...