August 25, 2022

ಭೂಮಿ ಗುಂಡಾಗಿದೆ - ನಕದಾಚನಾಸ್ತಮೇತಿ

 ಈ ಭೂಮಿ ಚಪ್ಪಟೆಯಾಗಿಲ್ಲ ಗುಂಡಾಗಿದೆ. ತನ್ನ ಪಥದಲ್ಲಿ ಸುತ್ತುತ್ತಾ ಇದೆ. ಸೂರ್ಯನಿಗೆ ಒಂದು ಸುತ್ತು ಬರಲು ೩೬೫ ದಿನ ಬೇಕು. ಆ ಒಂದು ಸುತ್ತನ್ನು ಸಂವತ್ಸರ ಎಂದು ಕರೆದು ಜಗತ್ತಿಗೆ ತೋರಿಸಿದ ನಾವು. ಸೂರ್ಯನ ಪಥವನ್ನಾಧರಿಸಿ ಆಯನಗಳನ್ನು ಮಾಡಿಕೊಂಡಿದ್ದೇವೆ. ಮಾಸ ಮತ್ತು ಪಕ್ಷ ತಿಥಿಗಳೊಂದಿಗೆ ಒಂದು ವ್ಯವಸ್ಥೆಯನ್ನು ಮಾಡಿಕೊಂಡವರು ನಾವು ಇದು ಜಗತ್ತಿಗೆ ಕೊಟ್ಟ ಕೊಡುಗೆ ಅನ್ನುವುದು ನನ್ನ ಈ ಬರಹದ ಉದ್ದೇಶವಲ್ಲ. ಆದರೆ, ಬ್ರಾಹ್ಮಣಗಳ ಕಾಲದಲ್ಲಿಯೇ ನಮಗೆ ಭೂಮಿಯ ಚಲನೆ ಮತ್ತು ಆಕಾರದ ಸ್ಪಷ್ಟ ತಿಳಿವು ಇದ್ದದ್ದು ಸ್ಪಷ್ಟವಾಗುವುದು ಐತರೇಯ ಬ್ರಾಹ್ಮಣದ ಈ ಮಂತ್ರದಿಂದ . . .  

ಸವಾ ಏಷ ನಕದಾಚನಾಸ್ತಮೇತಿ ನೋದೇತಿತಂ ಯದಸ್ತಮೇತೀತಿ ಮನ್ಯಂತೇ ಯದಸ್ತಮೇತೀತಿ ಮನ್ಯಂತೇsಹಮೇವ | ತದಂತಮಿತ್ವಾದಾತ್ಮಾನಂ ವಿಪರ್ಯಸ್ಯತೇ ರಾತ್ರೀಮೇವಾವಸ್ತಾತ್ಕುರುತೇಹಃ ಪರಸ್ತಾದಧ ಯದೇನಂ ಪ್ರಾತರುದೇತೀತಿ ಮನ್ಯಂತೇ ರಾತ್ರೇರೇವ ವದಂತಮಿತ್ವಾಧಾಮಾತ್ಮನಂ ವಿಪರ್ಯಸ್ಯತೇsಹರೇ ವಾವಸ್ತಾತ್ಕುರುತೇ ರಾತ್ರೀಂ ಪರಸ್ತಾತ್ ಸವಾ ಏಷ ನ ಕದಾಚನ ನಿಮ್ರೋಚತಿ | ನಹ ವೈ ಕದಾಚನ ನಿಮ್ರೋಚತ್ಯೇ ತಸ್ಯಹ ಸಾಯುಜ್ಯಂ ಸರೂಪತಾಂ ಸಲೋಕತಾಮಶ್ನುತೇ | ಯ ಏವಂ ವೇದ ಯ ಏವಂ ವೇದ || ಐತರೇಯ ಬ್ರಾಹ್ಮಣ ೩:೪:೪೪   

ಸೂರ್ಯ ಯಾವತ್ತೂ ಮುಳುಗಿಲ್ಲ ಮತ್ತು ಮುಳುಗುವುದೂ ಇಲ್ಲ, ಯಾವತ್ತೂ ಉದಯಿಸುವುದೂ ಇಲ್ಲ. ಆದರೆ ಸೂರ್ಯನು ಮರೆಯಾಗುವುದನ್ನೇ ಈ ಜನ ಸೂರ್ಯ ಅಸ್ತಮಿಸಿದ ಎಂದು ತಿಳಿಯುತ್ತಾರೆ. ಆದರೆ ಇದೇ ಸತ್ಯವಲ್ಲ. ಭೂಮಿಯು ತಿರುಗುತ್ತಾ ಒಂದು ಹಂತದ ಕೊನೆಗೆ ಬಂದಾಗ ಈ ಭೂಮಿಯ ಇನ್ನೊಂದು ಪಾರ್ಶದಲ್ಲಿ ಬೆಳಕಾಗಿರುತ್ತದೆ. ಇನ್ನು ಇಲ್ಲಿ ಸಂಪೂರ್ಣ ಕತ್ತಲಾದಾಗ ಅಲ್ಲಿ ಹಗಲಾಗಿರುತ್ತದೆ. ಅದೇ ಇನ್ನೊಂದು ತುದಿಗೆ ಬಂದಾಗ ಇಲ್ಲಿ ಸೂರ್ಯನ ಆಗಮನವಾದಂತೆ ಅನ್ನಿಸಿ ಸೂರ್ಯ ಹುಟ್ಟುತ್ತಾನೆ. ಮತ್ತು ಇನ್ನೊಂದು ತುದಿಯಲ್ಲಿ ಮುಳುಗುತ್ತಾನೆ ಎನ್ನುತ್ತೇವೆ. ಅದೇನೇ ಇರಲಿ ಆ ಕಾಲದ ಜನರಲ್ಲಿದ್ದ ಈ ರೀತಿಯ ಜ್ಞಾನ ನನಗಂತೂ ಆಶ್ಚರ್ಯವೂ ಹೌದು ಹೆಮ್ಮೆಯೂ ಹೌದು. ಐತರೇಯ ಬ್ರಾಹ್ಮಣ ’ನ ಕದಾಚನ ನಿಮ್ರೋಚತಿ’ ಎನ್ನುತ್ತದೆ. ’ಸಾಯುಜ್ಯಂ ಸರೂಪತಾಂ ಸಲೋಕತಾಮಶ್ನುತೇ’ ಎನ್ನುತ್ತಾ ’ಯ ಏವಂ ವೇದ’ ಎಂದು ಸಾರುತ್ತದೆ ಇದುವೆ ಜ್ಞಾನ, ಇದುವೇ ಸತ್ಯ ಎನ್ನುವ ಆ ಮಹರ್ಷಿಯ ಶಕ್ತಿ ಬೆರಗಾಗಿಸುತ್ತದೆ. ಪುರಾಣಗಳು ನವವರ್ಷಗಳ ಕುರಿತಾಗಿ ಪ್ರಸ್ತಾವಿಸುತ್ತವೆ. ಭರತವರ್ಷದಿಂದ ಆರಂಭಿಸಿ ಕಿಂಪುರುಷವರ್ಷ, ಹರಿವರ್ಷ . . . ಕುರುವರ್ಷದ ತನಕದ ಪ್ರಾದೇಶಿಕತೆಯನ್ನು ಹೇಳಲಾಗುತ್ತದೆ. ಇವೆಲ್ಲದರ ಹಿಂದೆ ಇಂತಹ ವೈಜ್ಞಾನಿಕ ಸತ್ಯವನ್ನು ಕಾಣಬಹುದು ನಾವು. ಬ್ರಾಹ್ಮಣಗಳ ಕುರುತಾದ ವಿಷಯ ತಿಳಿದಿರುವುದು ಕಡಿಮೆ ನಾನು. 

#ಬ್ರಾಹ್ಮಣ_ಹಗಲು_ಇರುಳು 
ಸದ್ಯೋಜಾತರು

No comments:

Post a Comment

If you have any doubts. please let me know...