ನಮ್ಮ ಪ್ರತಿಯೊಂದು ಆಗುಹೋಗುಗಳು ಗಣಿತಾಧಾರಿತ. ಅದು ಸನಾತನ ಭಾರತೀಯ ಪರಂಪರೆ. ನಾವು ಗಣಿತವನ್ನೇ ಇಂದು ದೇವರೆಂದು ಆರಾಧಿಸುವುದು ಲೆಕ್ಕ ಮಾಡಿದರೆ ಅದರಲ್ಲಿ ತಪ್ಪು ಸಾಧ್ಯವಿಲ್ಲ. ಲೆಕ್ಕವೇ ಸಾದೃಷ್ಯ. ಅದೇ ಅಲ್ಲವೇ ಖಗೋಲ ವಿಜ್ಞಾನ. ಅದುವೇ ಜ್ಯೋತಿಷ್ಯ ಶಾಸ್ತ್ರ. ಜ್ಯೋತಿಷ್ಯದಲ್ಲೂ ಗಣನೆಯೇ ಮುಖ್ಯ. ಅಲ್ಲಿ ಸಂದೇಹವೂ ಇಲ್ಲ. ಅನುಮಾನಗಳೂ ಇಲ್ಲ. ಹೀಗಾಗಬಹುದು ಎನ್ನುವುದಿಲ್ಲ. ಹೀಗೇ ಆಗುತ್ತದೆ ಎನ್ನುವುದೇ ಜ್ಯೋತಿಷ್ಯ. ಅದನ್ನೇ ನಾವು ದೇವರೆನ್ನುವುದು. ಸಾಕಾರಕ್ಕಿಂತ ನಿರಾಕಾರವಾದ ನಿತ್ಯಸತ್ಯವಾದ ಶುದ್ಧ ವಾಣಿಯೂ ದೇವರೇ ಅಲ್ವಾ. ಅದನ್ನೇ ಸ್ವಲ್ಪ ಗಮನಿಸೋಣ.
ಪುಣ್ಯಂ ಪೂರ್ವಾ ಫಲ್ಗುನ್ಯೌ ಚಾತ್ರ ಹಸ್ತಶ್ಚಿತ್ರಾ ಶಿವಾ ಸ್ವಾತಿ ಸುಖೋ ಮೇ ಅಸ್ತು |
ರಾಧೇ ವಿಶಾಖೇ ಸುಹವಾನುರಾಧಾ ಜ್ಯೇಷ್ಠಾ ಸುನಕ್ಷತ್ರಮರಿಷ್ಠ ಮೂಲಮ್ || ಅಥರ್ವ ೧೯:೭:೩
ಈ ಜಗತ್ತಿನಲ್ಲಿ ಪೂರ್ವಫಲ್ಗುಣೀ ಮತ್ತು ಉತ್ತರಫಲ್ಗುಣೀ (ಹುಬ್ಬಾ ಮತ್ತು ಉತ್ತರಾ)ನಕ್ಷತ್ರಗಳೆರಡರ ಸಮೂಹ ಇವೆ. ಈ ಎರಡೂ ನಕ್ಷತ್ರಗಳು ಪುಣ್ಯ ಸಂಪಾದಿಸಿ ಕೊಡುತ್ತವೆ. ಹಸ್ತಾ ಮತ್ತು ಚಿತ್ರಾ ನಕ್ಷತ್ರಗಳು ಮನಸ್ಸಿಗೆ ಶಾಂತಿ ಕೊಡುತ್ತವೆ. ಸ್ವಾತಿ ನಕ್ಷತ್ರ ಸಂತೋಷವನ್ನು ನೀಡುತ್ತದೆ. ವಿಶಾಖಾ ಅಭಿವೃದ್ಧಿಯನ್ನು (ಯಶಸ್ಸು) ಕೊಡುತ್ತದೆ. ಸಂಪರ್ಕ ಅಥವಾ ಸಂವಹನಕ್ಕೆ ನೆರವಾಗುವುದು ಅನುರಾಧಾ ನಕ್ಷತ್ರದಿಂದ. ಜ್ಯೇಷ್ಠಾ ನನಗೆ ಅನೇಕ ಜನರ ಜೊತೆಗೆ ಬೆರೆಯುವ ಅಥವಾ (ನಕ್ಷತ್ರಪುಂಜಗಳ) ಜೊತೆಗೆ ಸೇರುವಂತೆ ಮಾಡುತ್ತದೆ. ಮೂಲಾ ನಕ್ಷತ್ರ ಅರಿಷ್ಠ ಕಾರಕವಾಗಿದ್ದು, ಅತಿಮಾನುಷ ಅಥವಾ ಅಮಾನವೀಯ ಗುಣದೊಂದಿಗೆ ರೋಗವನ್ನು ತರಬಲ್ಲದ್ದು ಎಂದು ಹೇಳಲ್ಪಟ್ಟಿದೆ. ಆದರೂ ಈ ಮೂಲಾ ನಕ್ಷತ್ರದ ಕೊನೆಯ ಪಾದ ಬಹಳ ಒಳ್ಳೆಯ ಫಲವನ್ನೇ ಕೊಡುತ್ತದೆ. ಇದಕ್ಕೆ ವ್ತತಿರಿಕ್ತವಾದದ್ದು ಆಶ್ಲೇಷಾ ನಕ್ಷತ್ರ ಎನ್ನುವುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅಂದರೆ ಆಶ್ವಯುಜ ಮಾಸದ ಶುಕ್ಲಪಕ್ಷದಲ್ಲಿ ಜ್ಯೇಷ್ಠಾ ನಕ್ಷತ್ರ ಕಳೆದು ಮೂಲ ನಕ್ಷತ್ರ ಬಂದಾಗ ಸರಸ್ವತಿಯ ಆರಾಧನೆಗೆ ಪ್ರಶಸ್ತವಾದ ದಿನ ಮತ್ತು ಅದು ಪವಿತ್ರವೂ ಹೌದು. ಆದಿನ ಶಾರದಾ ಪೂಜೆಗೆ ಸೂಕ್ತವಾದ ದಿನ.
ಸಾಮಾನ್ಯವಾಗಿ ನವರಾತ್ರಿಯಲ್ಲಿ ಮೂಲಾನಕ್ಷತ್ರದ ದಿನದಿಂದ ಅಥವಾ ಮೂಲಾ ನಕ್ಷತ್ರದಲ್ಲಿ ಸರಸ್ವತೀ ಪೂಜೆಯನ್ನು ಮಾಡಲಾಗುತ್ತದೆ. ಸರಸ್ವತೀ ವಾಗಾಭಿಮಾನಿ ದೇವತೆ. ನಮ್ಮ ಮಾತಿಗೆಲ್ಲ ಮೂಲವಾಗಿರುವ ಈ ದೇವತೆ ವಿದ್ಯೆಯನ್ನೂ ಕೊಡುವವಳು. ಪುರಾಣಗಳಲ್ಲಿ ಈ ದೇವತೆಯನ್ನು ಹೊಗಳಿದಷ್ಟು ವೇದದಲ್ಲಿ ಹೊಗಳಿಲ್ಲ. ಇಲ್ಲಿ ನದೀ ದೇವತೆಯಾಗಿ ನದಿಯ ಅಭಿಮಾನಿದೇವತೆಯಾಗಿಯೇ ಹೆಚ್ಚು ಗುರುತಿಸಲ್ಪಟ್ಟಿದ್ದಾಳೆ. ಸೃ ಎನ್ನುವ ಧಾತುವಿನಿಂದ ಹುಟ್ಟಿದ ಸರಸ್ವತೀ ಎನ್ನುವುದರ ಮೂಲ ಸರಃ ಎನ್ನುವ ಶಬ್ದಕ್ಕೆ ಸೃ, ಸರಿ, ಸಂಚರಿಸು ಮುಂತಾದ ಅರ್ಥವಿದೆ. ತೇಜಸ್ಸಿನ ರೂಪದಿಂದ ಎಲ್ಲಾ ಕಡೆ ಪ್ರಕಾಶಿಸುವವಳಾದುದರಿಂದ ಆಕೆ ಸರಸ್ವತೀ.
ಇನ್ನು ಪ್ರಾತರ್ವಾಚಾಂ ಪ್ರವರ್ತಿಕಾ. . .ರಾತ್ರಿ ಕಾಲದಲ್ಲಿ ನಿಸ್ತೇಜವಾಗಿ ಸುಪ್ತವಾಗಿ ಮಲಗಿರುವ ಜೀವಿಗಳೆಲ್ಲ ಉಷಕಾಲವಾದೊಡನೆಯೇ ತಮ್ಮ ತಮ್ಮ ನಿತ್ಯಕರ್ಮಗಳಲ್ಲಿ ತೊಡಗಿ ತೇಜಸ್ಸಿನೀಮದ ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಾ ಪ್ರಜ್ಞೆಯಿಂದ ವ್ಯವಹರಿಸುವುದನ್ನು ಮಾಡುವವಳು ವಾಗಾಭಿಮಾನಿ ದೇವತೆಯಾಗಿರುವುದರಿಂದ ಆಕೆ ಯನ್ನು ಸರಸ್ವತೀ ಎನ್ನುವ ಹೆಸರಿನಿಂದ ಗುರುತಿಸಿ ಸ್ತುತಿಸುತ್ತೇವೆ. ಅಂದರೆ ಪ್ರಾಪಂಚಿಕ ವ್ಯವಹಾರಗಳ ಪರಿವರ್ತನೆಗೆ ಕಾರಣೀಭೂತಳು. ಸೂನೃತಾ, ಸೂನೃತಾವರೀ, ಸೂನೃತಾವತಿ ಮುಂತಾದ ಶಬ್ದಗಳ ಜೊತೆಗೆ ವಾಗ್ದೇವಿಯನ್ನು ಸೇರಿಸಿಕೊಳ್ಳುವುದರಿಂದ ಸರಸ್ವತೀ ದೇವಿಯು ಉಷೋದೇವತೆಯೂ ಹೌದು.
ಚೋದಯಿತ್ರೀ ಸೂನೃತಾನಾಂ ಚೇತಂತೀ ಸುಮತೀನಾಂ |
ಯಜ್ಞಂ ದಧೇ ಸರಸ್ವತೀ || ಎನ್ನುವ ಋಗ್ವೇದ ಒಂದನೇ ಮಂಡಲದ ಮೂರನೇ ಸೂಕ್ತದಲ್ಲಿ ಸರಸ್ವತಿಯನ್ನು ವಾಗ್ದೇವಿಯಾಗಿ ಉಷಸ್ಸುಗಳ ಜೊತೆಯಾಗಿ ಸ್ತುತಿಸಿರುವುದು ವಿಶ್ವಾಮಿತ್ರ ವಂಶೀಯನಾದ ಮಧುಚ್ಛಂದ ಮಹರ್ಷಿ. ಈ ಋಕ್ಕನ್ನು ವಾಗ್ದೇವತೆಯನ್ನೇ ಕುರಿತಾಗಿ ಹೇಳಲಾಗಿದೆ ಎಂದು ಸಾಯಣಾಚಾರ್ಯರು ತಮ್ಮ ಭಾಷ್ಯದಲ್ಲಿ ಹೇಳಿದ್ದಾರೆ. ’ಸೂನೃತಾನಾಂ ಪ್ರಿಯಾಣಾಂ ಸತ್ಯವಾಕ್ಯಂ ಚೋದಯಿತ್ರೀ ಪ್ರೇರಯಿತ್ರೀ ಎನ್ನುತ್ತಾ ಇದು ಮನುಷ್ಯರನ್ನು ಪ್ರಿಯವಾದ ಮತ್ತು ಸತ್ಯವಾದ ಮಾತುಗಳಿಂದ ಪ್ರೇರೇಪಿಸುವವಳು, ಸತ್ಯವಾದ ಮಾತುಗಳನ್ನಾಡುವ ಜನರಿಗೆ ಒಳ್ಳೆಯ ಕೆಲಸ ಮಾಡುವಂತೆಯೂ ಪರೇರಣೆ ನೀಡುವವಳು ಎನ್ನುವುದು ಈ ಋಕ್ಕಿನ ಅರ್ಥ ಎಂದಿದ್ದಾರೆ.
#ಜ್ಯೇಷ್ಠಾನಕ್ಷತ್ರದ_ಚಿಂತನೆ
Sadyojath
No comments:
Post a Comment
If you have any doubts. please let me know...