ರುದ್ರಾಭಿಷೇಕವನ್ನು ಯಾವಾಗ ಮಾಡಬೇಕು?
ರುದ್ರಾಭಿಷೇಕವನ್ನು ಶಿವವಾಸವನ್ನು ನೋಡಿಕೊಂಡು ಮಾಡಬೇಕು.
ರುದ್ರಾಭಿಷೇಕ, ಶಿವಪೂಜೆ/ಅರ್ಚನೆ, ಅನುಷ್ಠಾನ, ಮಹಾಮೃತ್ಯುಂಜಯ ಪೂಜೆ ಹೀಗೆ ಶಿವನಿಗೆ ಸಂಬಂಧಿಸಿದ ಪೂಜೆಗಳನ್ನು ಶಿವವಾಸವಿರುವ ದಿವಸ ಮಾಡಿದರೆ, ಅದು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕಾಗಿಯೇ ಹೆಚ್ಚಿನ ಲಾಭ ಪಡೆಯಬೇಕಾದರೆ ಪೂಜೆ ಮಾಡುವ ದಿನದಂದು ಶಿವನು ವಾಸಿಸುವ ಸ್ಥಳವನ್ನು ನೋಡಬೇಕು. ಶಿವವಾಸವನ್ನು ಪಂಚಾಂಗದಲ್ಲಿ ಗಣಿತಕ್ರಮದಿಂದ ತಿಳಿದುಕೊಳ್ಳಬಹುದು. ಆ ದಿನದಂದು ಮಾಡಿದಾಗ ಭಗವಂತನು ನಿಮ್ಮ ಸಂಕಲ್ಪವನ್ನು ಈಡೇರಿಸುತ್ತಾನೆ.
ಕೈಲಾಸೇ ಲಭತೇ ಸೌಖ್ಯಂ ಗೌರ್ಯಾ ಚ ಸುಖ ಸಂಪದಃ|
ವೃಷಭೇsಭೀಷ್ಟ ಸಿದ್ಧಿಃಸ್ಯಾತ್ ಸಭಾಯಾಮ್ ಸಂತಾಪಕಾರಿಣಿ||
ಭೋಜನೇ ಚ ಭವೇತ್ ಪೀಡಾ ಕ್ರೀಡಾಯಾಂ ಕಷ್ಟಮೇವಚ |
ಶ್ಮಶಾನೇ ಮರಣಂ ಜ್ಞೇಯಂ ಫಲವೇವಂ ವಿಚಾರಯೇತ್||
• _ಯಾವ ಸಮಯದಲ್ಲಿ ಮಾಡಬೇಕು?_
ಶಿವನು ಕೈಲಾಸದಲ್ಲಿರುವ ದಿನ, ಶಿವನು ಗೌರಿಯ ಪಕ್ಕದಲ್ಲಿರುವಾಗ, ಶಿವನು ನಂದಿಯ ಮೇಲೆ ಕುಳಿತಿರುವ ಸಮಯದಲ್ಲಿ ಮಾಡುವುದರಿಂದ ಶುಭ ಫಲ ದೊರೆಯುವುದು.
• _ಯಾವ ಸಮಯದಲ್ಲಿ ಮಾಡಬಾರದು?_
ಶಿವನು ಭೋಜನ ಮಾಡುತ್ತಿರುವಾಗ, ಕ್ರೀಡೆಯಲ್ಲಿರುವಾಗ, ಸ್ಮಶಾನದಲ್ಲಿರುವಾಗ, ಶಿವನು ಕೈಲಾಸದಲ್ಲಿ ಶಿವಗಣ ಸಭೆಯಲ್ಲಿರುವಾಗ ಮಾಡಿದರೆ ಅಶುಭ ಫಲ ದೊರೆಯುವುದು.
• _ಈ ಕೆಳಗಿನ ಸಮಯದಲ್ಲಿ ಶಿವವಾಸವನ್ನು ಗಣನೆಗೆ ತೆಗೆದುಕೊಳ್ಳಬಾರದು._
1. ಯಾವುದೇ ಜ್ಯೋತಿರ್ಲಿಂಗದಲ್ಲಿ ಮಾಡುವ ರುದ್ರಾಭಿಷೇಕಕ್ಕಾಗಿ ಮುಹೂರ್ತ/ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
2. ಶ್ರಾವಣ ಮಾಸದಲ್ಲಿ ರುದ್ರಾಭಿಷೇಕಕ್ಕಾಗಿ ಮುಹೂರ್ತ/ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
3. ಸೋಮವಾರ, ಪ್ರದೋಷ, ಶಿವರಾತ್ರಿಯಂದು ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
4. ಜ್ಯೋತಿರ್ಲಿಂಗ ಪ್ರದೇಶದಲ್ಲಿ ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
5. ಮಾನಸ ಪೂಜೆಯಲ್ಲಿ ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
6. ಸಾರ್ವಜನಿಕ ಕಲ್ಯಾಣಕ್ಕಾಗಿ ಮಾಡುವ ವಿಶೇಷ ಶಿವಸಾಧನೆಗಳಲ್ಲಿಯೂ ಶಿವವಾಸಗಳ ಅಗತ್ಯವಿಲ್ಲ.
7. ಪ್ರತಿನಿತ್ಯ ಅಭಿಷೇಕವಾಗುವ ದೇವರಿಗೆ ಶಿವವಾಸ ನೋಡುವ ಅಗತ್ಯವಿಲ್ಲ.
ಸಂ: ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ ಹಿರೇಕೆರೂರ(ಹೊಸಹಳ್ಳಿ)
No comments:
Post a Comment
If you have any doubts. please let me know...