ಸಾಮಾನ್ಯವಾಗಿ ತೃತೀಯ ತಿಥಿ ವಿಶೇಷವಾಗಿ ಮಹಾ ಗೌರಿಗೆ ಸಂಬಂಧಪಟ್ಟಂತಹುದು ಹಾಗು ಆರ್ದ್ರಾ ನಂದಕರಿ ಎಂಬ ಮತ್ತೊಂದು ಹೆಸರಿನಿಂದ ಉಮಾ ಮಹೇಶ್ವರರನ್ನು ಪೂಜಿಸುವ ದಿನ. ಉಮಾಮಹೇಶ್ವರರನ್ನು ಪಾದಾದಿ ಕೇಶಾಂತ್ಯವಾಗಿ ಶುಕ್ಲಪಕ್ಷದ ತೃತೀಯದಲ್ಲಿ ಪ್ರಾರಂಭಿಸಿ ವರ್ಷಾಂತ್ಯದವರೆಗೆ ಪೂಜೆ ಮಾಡುತ್ತಾ ನಾಲ್ಕು ತಿಂಗಳು ಅನ್ನೋದಕ, ಮತ್ತೆ ನಾಲ್ಕು ತಿಂಗಳು ಹುರಿಟ್ಟಿನ ಪದಾರ್ಥ, ಮತ್ತೆ ನಾಲ್ಕು ತಿಂಗಳು ಎಳ್ಳನ್ನು ದಾನ ಕೊಡುವುದು. ಹನ್ನೆರಡು ತಿಂಗಳು ಈ ವ್ರತವನ್ನು ಮಾಡಿದ ನಂತರ ಗಂಧೋದಕ, ಪುಷ್ಪೋದಕ, ಶ್ರೀಗಂಧ, ಕೇಸರಿ ತೀರ್ಥ, ಹಸಿಯ ಹಾಲಿನ ಮೊಸರು, ಹಾಲು, ಗೋ ಶೃಂಗತೀರ್ಥ, ಹಿಟ್ಟು ಕಲಿಸಿದ ನೀರು, ಚಂಗಲಕೋಷ್ಟ ಚೂರ್ಣದ ನೀರು, ಲಾವಂಚದ ನೀರು, ಇವುಗಳನ್ನು ಪ್ರತಿ ತಿಂಗಳಿನ ಎರಡು ಪಕ್ಷದ ತೃತೀಯದಲ್ಲಿ ಸೇವಿಸಿ ವ್ರತ ಮಾಡುವುದು. ಸಂವತ್ಸರದ ಕೊನೆಯಲ್ಲಿ ಉಪ್ಪು, ಬೆಲ್ಲ ತುಂಬಿದ ಪಾತ್ರೆ, ಜೇನುತುಪ್ಪ, ಶ್ರೀಗಂಧ, ನವಿರಾದ ಪಂಚೆ, ಚಿನ್ನದ ತಾವರೆಯ ಇವೆಲ್ಲವನ್ನು ಉಮಾಮಹೇಶ್ವರ ಚಿನ್ನದ ಪ್ರತಿಮೆಯೊಂದಿಗೆ ಕಬ್ಬು ಮತ್ತು ಹಣ್ಣುಗಳ ಸಮೇತ ದಾನ ಮಾಡಬೇಕು.
ಮತ್ತೊಂದು ಪುರಾಣದಲ್ಲಿ ಮಹಾಗೌರಿ ಪ್ರೀತ್ಯರ್ಥವಾಗಿ ತೃತೀಯ ತಿಥಿಯಲ್ಲಿ ವ್ರತವನ್ನು ಮಾಡಿ ಉಪ್ಪು ಹಾಕದ ಪದಾರ್ಥವನ್ನು ಆಹಾರವಾಗಿ ಸ್ವೀಕಾರ ಮಾಡುವುದು. ಜೀವನ ಪರ್ಯಂತ ಈ ವ್ರತ ಮಾಡಿದವರಿಗೆ ಮಹಾಗೌರಿಯು ಸೌಂದರ್ಯ, ಸೌಭಾಗ್ಯ, ಲಾವಣ್ಯ ಎಲ್ಲವನ್ನೂ ಕೊಡುತ್ತಾಳೆ. ವ್ರತದ ನಂತರ ಉಪ್ಪು ಹಾಕದ ಆಹಾರವನ್ನು ತೆಗೆದುಕೊಳ್ಳುವ ಪುರುಷರಿಗೆ ಮನೋಹರಿಯಾದ ಸ್ತ್ರೀಯು, ಸ್ತ್ರೀಗೆ ಮನೋಹರನಾದ ಪುರುಷ ಲಭಿಸಿ, ಮನುಷ್ಯರಿಗೆ ಸೌಭಾಗ್ಯವನ್ನುಂಟು ಮಾಡುವುದು. ಯುವತಿಯರಿಗೆ ಶೀಘ್ರ ವಿವಾಹ ಆಗುವುದು. ಸುವರ್ಣಮಯವಾದ ಗೌರಿ ಪ್ರತಿಮೆ ಇಟ್ಟುಕೊಂಡು ವಸ್ತ್ರಾಭರಣಗಳು, ಗಂಧಪುಷ್ಪಾದಿಗಳು, ಮಂಗಳ ದ್ರವ್ಯಗಳಿಂದ, ಪುಷ್ಪ ಮಾಲೆಗಳಿಂದ ಅಲಂಕರಿಸಿ ಪೂಜಿಸಿ ಉಪ್ಪು, ಬೆಲ್ಲ, ತುಪ್ಪ, ಎಣ್ಣೆ, ಇವುಗಳನ್ನು ಶಕ್ತಾನುಸಾರ ಕಲ್ಲುಸಕ್ಕರೆ, ಜೀರಿಕಾರಸ, ಸೊಪ್ಪಿನ ಪಲ್ಯಗಳು, ಬೆಲ್ಲ ಸೇರಿಸಿ ಅರೆದು ಬೇಯಿಸಿದ ಭಕ್ಷ್ಯ, ಹೋಳಿಗೆ, ಕರಿಗಡುಬು ಮುಂತಾದವುಗಳನ್ನು ಪೂಜ್ಯರಿಗೆ ದಾನ ಮಾಡಬೇಕು. ದಾನ ಕೊಡುವ ವಸ್ತುಗಳಲ್ಲದೆ, ಸುವರ್ಣ ಗೌರಿ ಪ್ರತಿಮೆಯನ್ನು ಪೂಜ್ಯರಿಗೆ ದಾನ ಮಾಡಬೇಕು.ಶಕ್ತಿ ಇಲ್ಲದಿದ್ದವರು ಬೆಲ್ಲದ ಅಚ್ಚಿನ ಮೇಲೆ ಅರಿಷಿಣ ಗೌರಿಯನ್ನು ಇಟ್ಟು ದಾನ ಮಾಡಬೇಕು. ಬೆಲ್ಲದ ಅಚ್ಚಿನಲ್ಲಿ ಯಾವಾಗಲೂ ಗೌರಿಯ ಸಾನ್ನಿಧ್ಯ ಇರುವುದರಿಂದ ಅದರಲ್ಲಿ ಆಕೆಯನ್ನು ಪೂಜಿಸಬೇಕು.ಹೀಗೆಯೇ ತೃತೀಯ ವ್ರತವನ್ನು ಮಾಡಿದ ಕನ್ಯೆಗೆ ಉತ್ತಮ ವರ ದೊರಕುತ್ತಾನೆ. ಸ್ತ್ರೀಗೆ ಪತಿ, ಪುತ್ರ ಸೌಖ್ಯ ದೊರೆಯುತ್ತದೆ. ವ್ರತ ಮಾಡಿದಂಥ ಸ್ತ್ರೀಯು ಪ್ರಾರಬ್ಧ ಕರ್ಮದಿಂದ ಒಂದು ವೇಳೆ ವಿಧವೆಯಾದರೂ ಮುಂದಿನ ಜನ್ಮದಲ್ಲಿ ಸಿಗುವ ಪತಿಯೂ ಚಿರಾಯುವಾಗುತ್ತಾನೆಂಬ ಉಲ್ಲೇಖಗಳಿವೆ.
ವೈಶಾಖ ಮಾಸದಲ್ಲಿ ಬರುವ ಶುಕ್ಲ ತದಿಗೆ(ತೃತೀಯ) ವಿಶೇಷ ಪುಣ್ಯ ಕರವಾದ ಅಕ್ಷಯ ತೃತೀಯ. ಭಾದ್ರಪದ ಶುದ್ಧ ತದಿಗೆ(ತೃತೀಯ) ಸ್ವರ್ಣಗೌರೀವ್ರತ, ಮಾಘಶುದ್ಧ ತೃತೀಯದಲ್ಲಿ ಮೌನಗೌರಿ ವ್ರತ. ಒಟ್ಟಾರೆ ತದಿಗೆ(ತೃತೀಯ) ತಿಥಿ ಮಹಾಗೌರಿಗೆ ಸಂಬಂಧಿಸಿದ್ದಾಗಿದೆ. ಮಾಘಮಾಸ ತೃತೀಯದಲ್ಲಿ ಬೆಲ್ಲ ದಾನ, ಉಪ್ಪು ದಾನ ಮಾಡಿದ ಸ್ತ್ರೀ ಪುರುಷರಿಗೆ ಸಕಲ ಇಷ್ಟಾರ್ಥಗಳು ಲಭಿಸುವುವು. ಬೆಲ್ಲ ದಾನದಿಂದ ದತ್ತಾತ್ರೇಯನು, ಉಪ್ಪು ದಾನದಿಂದ ಸೃಷ್ಟಿಕರ್ತನು ಸುಪ್ರೀತರಾಗುವರು. ಭಾದ್ರಪದ ಮಾಸದಲ್ಲಿ ಬೆಲ್ಲ ಹಾಕಿ ಮಾಡಿದ ಒಬ್ಬಟ್ಟು ಮುಂತಾದ ಭಕ್ಷ್ಯಗಳನ್ನು ದಾನ ಮಾಡಬೇಕು. ಮಾಘಶುದ್ಧ ತೃತೀಯದಲ್ಲಿ ವಾಮದೇವ ಪ್ರೀತಿಗಾಗಿ ಉದಕುಂಭ, ಮೋದಕ ದಾನಕ್ಕೆ ಪ್ರಶಸ್ತವು. ವೈಶಾಖ ಶುದ್ಧ ತೃತೀಯಾ ಅಂದರೆ ಅಕ್ಷಯ ತೃತೀಯದಲ್ಲಿ ಗಂಧೋದಕ ದಾನ ಮಾಡುವುದರಿಂದ ಬ್ರಹ್ಮ ಸುಪ್ರೀತನಾಗುವನು, ಮೋದಕ ದಾನದಿಂದ ಶಿವ ತೃಪ್ತನಾಗುವನು, ನೀರಿನಿಂದಲೂ, ಕಾಳಿನಿಂದ ಕೂಡಿದ ಕರಗವೆಂಬ ಪಾತ್ರೆ ದಾನದಿಂದ ವಿಷ್ಣು ತೃಪ್ತಿಯಾಗುವನು.
ವೈಶಾಖ ಶುದ್ಧ ತೃತೀಯ (ಅಕ್ಷಯ ತೃತೀಯ)ದಂದು ಸ್ವಲ್ಪ ದಾನ ಮಾಡಿದರೂ ಅಕ್ಷಯವಾಗುವುದರಿಂದ, ಇದಕ್ಕೆ ಅಕ್ಷಯ ತೃತೀಯವೆಂದು ಹೆಸರು ಬಂತು. ಅಕ್ಷಯ ತೃತೀಯದಂದು ಮಹಾ ಗೌರಿಯನ್ನು ಪೂಜಿಸಿ ಚಿನ್ನ, ತುಪ್ಪ, ಅನ್ನ ಹಾಗೂ ಮೇಲೆ ತಿಳಿಸಿದ ಪದಾರ್ಥಗಳನ್ನು ದಾನ ಮಾಡಬೇಕು. ಹೀಗೆ ಅನೇಕ ಉಲ್ಲೇಖಗಳನ್ನು ನೋಡಿದಾಗ ದಾನ ಪದಾರ್ಥಗಳೊಂದಿಗೆ ಚಿನ್ನದಗೌರಿ ಅಥವಾ ಚಿನ್ನ ದಾನದಿಂದ ಪುಣ್ಯಫಲ ಅಕ್ಷಯವಾಗುವುದೆಂದು ಉಲ್ಲೇಖವಿದೆ. ವ್ರತ ಸಂದರ್ಭದಲ್ಲಿ ಅನೇಕ ಪದಾರ್ಥಗಳು ಹಾಗು ಚಿನ್ನದಾನ ಕೊಡುವುದು ದುಬಾರಿಯಾದ ಕಾರಣ ಈ ವ್ರತವನ್ನು ಭೂಮಿಯಲ್ಲಿ ಭೂರಿಚಂದ್ರನೆಂಬ ಸಿರಿವಂತನು ಮೊದಲು ಆರಂಭಿಸಿದನು. ಸಾಮಾನ್ಯರು ಅವರವರ ಶಕ್ತ್ಯಾನುಸಾರ ವ್ರತ ಮಾಡಿ ಕೈಲಾದ ದಾನ ಮಾಡುತ್ತಿದ್ದರು. ಶಕ್ತಿ ಇದ್ದವರು ಚಿನ್ನದಾನ ಕೊಡುತ್ತಿದ್ದರು. ಒಟ್ಟಾರೆ ಅಕ್ಷಯ ತೃತೀಯದಂದು ದಾನ ಮಾಡಿದರೆ ಅದರ ಫಲ ಅಕ್ಷಯ ವಾಗುವುದೆಂಬ ಉಲ್ಲೇಖಗಳನ್ನು ನೋಡಬಹುದು. ಹಾಗಾಗಿ ಅಕ್ಷಯ ತೃತೀಯದಂದು ಶಕ್ತಿ ಇದ್ದವರು ವ್ರತಮಾಡಿ ಚಿನ್ನ ಇನ್ನಿತರ ವಸ್ತುಗಳನ್ನು ದಾನ ಕೊಡುವುದು ಫಲಪ್ರದಾಗಿದೆ. ಆದರೆ ಕೆಲವೊಬ್ಬರು ಹೇಳುವಂತೆ ಶಕ್ತಿ ಇರಲಿ ಇಲ್ಲದಿರಲಿ ಸಾಲ ಮಾಡಿಯಾದರೂ ಚಿನ್ನ ಕೊಂಡುಕೊಳ್ಳಲು ಶುಭ ದಿನವೆಂದು ಉಲ್ಲೇಖವಿದ್ದಂತೆ ಕಾಣುವುದಿಲ್ಲ .
(ಅಕ್ಷಯ ತೃತೀಯ ವಿಶೇಷತೆ ಬಗ್ಗೆ ಸಾಕಷ್ಟು ಉಲ್ಲೇಖಗಳು, ಕಥೆಗಳು ಇದ್ದಾಗ್ಯೂ ಲೇಖನ ವಿಸ್ತಾರ ಭಯದಿಂದ ಕೆಲವು ಅಂಶಗಳನ್ನು ಮಾತ್ರ ಹಂಚಿಕೊಳ್ಳಲಾಗಿದೆ.)
ಅಕ್ಷಯ ತೃತೀಯ ತಿಥಿಯು ಮೂರೂವರೆ ಮಹಾ ಮುಹೂರ್ತಗಳಲ್ಲಿ ಒಂದಾಗಿದ್ದು, ಅಂದು ಸರ್ವ ಕಾರ್ಯಗಳಿಗೂ ಅತ್ಯಂತ ಶುಭಕರವಾದ ದಿನವಾಗಿದೆ.
- 🖋 ಎಡತೊರೆ ಶ್ರೀ ಗಣೇಶ ಶಾಸ್ತ್ರಿಗಳು.ಕೆ.ಆರ್.ನಗರ