ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎನ್ನುವುದು ವೇದಗಳ ಕಾಲದಿಂದಲೂ ಕೇಳಿ ಬಂದ ಮಾತು. ಈ ಮಾತು ಎಲ್ಲಾ ಕಡೆಗೂ ಅನ್ವಯಿಸುತ್ತದೆ. ಮನೆ, ಕುಟುಂಬ, ಸಮಾಜ ಎಲ್ಲಿಯೇ ಆಗಲಿ ಸ್ತ್ರೀ ಗೌರವಿಸಲ್ಪಡುವಲ್ಲಿ ಸುಖ-ಶಾಂತಿ ಸಮಾಧಾನಗಳು ನೆಲೆಸಿರುತ್ತವೆ.
ಎಲ್ಲಾ ಸ್ಥಾನಗಳಿಗಿಂತಲೂ ಪೂಜನೀಯ ಸ್ಥಾನ ಮಾತೆಯದು. ತಾಯಿ ಎನ್ನುವ ಪದವೇ ಅತ್ಯಂತ
ಆದರಣೀಯವಾದುದು. ತಾಯ್ತನದ ಹಿರಿಮೆಯನ್ನು ತನ್ನ ಮಕ್ಕಳಿಗೆ ಮಾತ್ರ ಸೀಮಿತಗೊಳಿಸದೆ, ಈ ಮಾತೃವಾತ್ಸಲ್ಯವೆಂಬ ಮಹಾಪೂರದ ಕೆಲವು ಹನಿಗಳನ್ನಾದರೂ
ಎಲ್ಲಾ ಮಕ್ಕಳಿಗೂ ಹಂಚುವಂತಾಗಬೇಕು. ತನ್ನ ಮಗುವಿಗೆ ಸ್ವಲ್ಪ ನೋವಾದರೂ ಕಣ್ಣೀರಿಡುವ ತಾಯಿಗೆ ಅದೇ ವಯಸ್ಸಿನ ಇನ್ನೊಂದು ಮಗು ತನ್ನ
ಮನೆಯಲ್ಲಿ ಬೆಳಗ್ಗಿನಿಂದ ಸಾಯಂಕಾಲದವರೆಗೆ ದುಡಿದು ಸ್ವಲ್ಪ ಆರಾಮವಾಗಿ ಕುಳಿತರೆ
ಸಹಿಸಲಾಗುವುದಿಲ್ಲ. ತನ್ನ ಮಗು ಒಂದು ಹೊತ್ತಿನ ಊಟ ಬಿಟ್ಟರೆ ಸಂಕಟಪಡುವ ತಾಯಿ, ಇಡೀ ದಿನ ಉಪವಾಸ ಇದ್ದ ಇನ್ನೊಂದು ಮಗು
ಮನೆ ಬಾಗಿಲಿಗೆ ಬಂದು ಅನ್ನ ಬೇಡಿದರೆ ನೀಡುವಂತಹ ಔದಾರ್ಯ ತೋರುವುದಿಲ್ಲ. ಮಾತೃವಾತ್ಸಲ್ಯ
ಎನ್ನುವುದು ತನ್ನ ಮಕ್ಕಳಿಗೆ ಮಾತ್ರ ಎನ್ನುವ ಸಂಕುಚಿತ ಭಾವನೆಯನ್ನು ಬಿಟ್ಟು ಹೃದಯ ವೈಶಾಲ್ಯ
ಬೆಳೆಸಿಕೊಂಡರೆ ʼಮಾತೆʼ ಎನ್ನುವ ಪದಕ್ಕೆ ಅರ್ಥ ಗೌರವ ನೀಡಿದಂತಾಗುತ್ತದೆ.
ಕುಟುಂಬ ವರ್ಗ, ಬಂಧು ಬಾಂಧವ, ಸ್ನೇಹಿತರ ಜೊತೆಗಿನ ಸಂಬಂಧ
ಸೌಹಾರ್ದಯುತವಾಗಿಸಿಕೊಳ್ಳುವಲ್ಲಿ ಸ್ತ್ರೀಯ ಪಾತ್ರ ಮಹತ್ತರವಾದುದು. ರಕ್ತ ಸಂಬಂಧ, ಭಾವನಾತ್ಮಕ ಸಂಬಂಧ, ವ್ಯಾವಹಾರಿಕ ಸಂಬಂಧಗಳೇ ಆಗಲಿ ಅವುಗಳನ್ನು
ಮಧುರವಾಗಿಸಿಕೊಳ್ಳುವಲ್ಲಿ ಹೆಣ್ಣಿನ ಹೊಣೆಗಾರಿಕೆ ಹೆಚ್ಚಿನದಾಗಿರುತ್ತದೆ. ಯಾವುದೇ ಮನೆಗೆ ಹೋಗಿ, ಅಲ್ಲಿನ ಗೃಹಿಣಿ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ ನಮ್ಮ ಮನಸ್ಸಿಗೆ ಆನಂದವಾಗುತ್ತದೆ.
ಇನ್ನೊಮ್ಮೆ ಅವರಲ್ಲಿಗೆ ಹೋಗೋಣ, ಅವರ ಜೊತೆ ಬಾಂಧವ್ಯ ಇರಿಸಿಕೊಳ್ಳೋಣ ಎನಿಸುತ್ತದೆ. ನಮ್ಮ ನ್ಯೂಕ್ಲಿಯಸ್
ಫ್ಯಾಮಿಲಿ ಬಿಟ್ಟರೆ ಬೇರೆ ಯಾರ ಅಗತ್ಯವೂ ನಮಗಿಲ್ಲ ಎನ್ನುವ ಭಾವನೆ ಪ್ರಧಾನವಾಗಿ, ನಮಗೆ ಔಪಚಾರಿಕ ಸ್ವಾಗತ .ದೊರೆತರೆ, ಇನ್ನೊಮ್ಮೆ ಅಲ್ಲಿಗೆ ಹೋಗುವ ಮನಸ್ಸಾಗದು. ಪರಸ್ತ್ರೀ
ವ್ಯಾಮೋಹ ಕುಡಿತದಂತಹ ಕೆಟ್ಟ ಚಾಳಿಗಳನ್ನು ಬಿಡಿಸಲು ಕಷ್ಟವಾದರೂ ಪುರುಷರ ಇನ್ನಾವುದೇ
ಅವಗುಣಗಳನ್ನು ತಿದ್ದಬಹುದು. ಪ್ರತಿಯೊಬ್ಬ
ಪುರುಷನ ಯಶಸ್ಸಿನ ಹಿಂದೆ ಸ್ತ್ರೀಯಿದ್ದಾಳೆ
ಎನ್ನುವ ಹಾಗೆ ಪುರುಷರ ದೌರ್ಬಲ್ಯಗಳ ಹಿಂದೆಯೂ ಸ್ತ್ರೀಯ ಕೈವಾಡವಿದೆ. ಕೈ ಹಿಡಿದವನನ್ನು ಕೇವಲ ತನ್ನ ಸ್ವಾರ್ಥಕ್ಕಾಗಿ
ತನ್ನ ಕೈಗೊಂಬೆಯಂತೆ ಬಳಸಿ ಕೊಳ್ಳದೆ ತನಗೂ ಸಮಾಜಕ್ಕೂ ಬೇಕಾದ ಯೋಗ್ಯ ವ್ಯಕ್ತಿಯನ್ನಾಗಿ
ರೂಪಿಸಬೇಕು.
ಶೋಷಣೆಯ ಬಗ್ಗೆ ಹೇಳುವುದಾದರೆ ಪುರುಷರಿಗಿಂತ ಹೆಚ್ಚಾಗಿ ಹೆಣ್ಣು ಹೆಣ್ಣಿನಿಂದಲೇ
ಶೋಷಿಸಲ್ಪಡುತ್ತಾಳೆ. ಗಂಡ ಕೊಡುವ ಹಿಂಸೆಗಿಂತಲೂ, ಅತ್ತೆ-ನಾದಿನಿಯವರಿಂದ ಕಿರುಕುಳ ಅನುಭವಿಸುವವರ ಸಂಖ್ಯೆ ಅಧಿಕವಾಗಿರುತ್ತದೆ. ತನ್ನ ಮಗಳ
ವಯಸ್ಸಿನ ಕೆಲವೊಮ್ಮೆ ಅದಕ್ಕಿಂತಲೂ ಚಿಕ್ಕ ವಯಸ್ಸಿನ ಹುಡುಗಿ ಮನೆಗೆ ಸೊಸೆಯಾಗಿ ಬಂದಾಗ ಅವಳಿಗೆ ಆ
ಮನೆಯಲ್ಲಿ ಸಿಗುವ ಸ್ಥಾನ ಮಾತ್ರ ಎರಡನೇ ದರ್ಜೆಯದು. ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ
ಅಳಿಯನನ್ನು 'ದೇವರಂತವನು''
ಎಂದು ಹೊಗಳುವ ತಾಯಿ ಅದೇ ಅನುರಾಗವನ್ನು ತನ್ನ ಮಗ
ವ್ಯಕ್ತಪಡಿಸಿದರೆ ''ಹೆಂಡತಿಯ ಗುಲಾಮ'"
ಎಂದು ಜರೆಯುತ್ತಾಳೆ. ಇಂತಹ ಮನೋಭಾವನೆ ಖಂಡಿತ ಬದಲಾವಣೆಯಾಗಬೇಕು.
ಬಸ್ಸಿನಲ್ಲಿ ಪ್ರಯಾಣ ಮಾಡುವಾಗ, ಎಳೆಯ
ಕಂದಮ್ಮಗಳನ್ನು ಎತ್ತಿಕೊಂಡ ತಾಯಂದಿರೋ, ತುಂಬು ಗರ್ಭಿಣಿಯರೋ,
ಕೈಕಾಲು ನಡುಗುವ ಮುದುಕಿಯರೋ ನಿಲ್ಲಲಾರದೆ ಕಷ್ಟಪಡುತ್ತಿರುವಾಗ ಆರಾಮವಾಗಿ ಸೀಟಿನಲ್ಲಿ
ಕುಳಿತ ಹೆಂಗಳೆಯರ ಹೆಂಗರುಳಿಗೆ ಥಟ್ಟನೇ ಸೀಟು ಬಿಟ್ಟು ಕೊಡುವ ಮನಸ್ಸಾಗುವುದಿಲ್ಲ. ನೂರಕ್ಕೆ
ಎಪ್ಪತ್ತೈದರಷ್ಟು ಪುರುಷರೇ ಎದ್ದು ಸೀಟು ಬಿಟ್ಟು ಕೊಡುತ್ತಾರೆ.
ಭಾರತ ಸುಂದರಿ, ಲೋಕ ಸುಂದರಿ, ವಿಶ್ವ ಸುಂದರಿ ಕಿರೀಟಗಳನ್ನು
ತಮ್ಮದಾಗಿಸಿಕೊಳ್ಳಲು ಉನ್ನತ ಮೌಲ್ಯಗಳ ಬಗ್ಗೆ ಮಧುರವಾಗಿ ಉಲಿಯುವ ಸುಂದರಿಯರಿಗಿಂತ, ತನ್ನ ಪ್ರಾಣವನ್ನು ಲೆಕ್ಕಿಸದೆ ಸಮಯ ಪ್ರಜ್ಞೆಯಿಂದ ಅನೇಕರ ಪ್ರಾಣ ರಕ್ಷಿಸಿದ ಗಗನ ಸಖಿ, ಎರಡು ವರ್ಷಗಳ ಹಿಂದಿನ ಗಂಗಾನದಿಯ ದೋಣಿ ದುರಂತದಲ್ಲಿ ತನ್ನ ಜೀವದ ಹಂಗು ತೊರೆದು ತನ್ನ
ಸೆರಗು ಹಾಸಿ ಐದಾರು ಜನರನ್ನು ದಡಕ್ಕೆಳೆದು ಬದುಕಿಸಿದ ಕರ್ನಾಟಕದ ಮಹಿಳೆ ಅಭಿನಂದನೀಯರು.
ಮೌಲ್ಯಗಳನ್ನು ಮೆಚ್ಚಿಕೊಳ್ಳುವ ಬದಲು ಕಿಂಚಿತ್ತಾದರೂ ಆಚರಣೆಯಲ್ಲಿ ತರುವ ಪ್ರಯತ್ನವಾಗಬೇಕು.
ಪ್ರೀತಿ ಹೆಣ್ಣಿನಿಂದ ಹುಟ್ಟುತ್ತದೆ. ಕರುಣೆಯು ಹೆಣ್ಣಿನಲ್ಲಿ ಮನೆ ಮಾಡಿರುತ್ತದೆ. ತ್ಯಾಗವೇ
ಹೆಣ್ಣಿನ ಉಸಿರು. ಅದಕ್ಕಾಗಿ ಓ ಹೆಣ್ಣೆ ನಿನ್ನ ಜನನಕ್ಕಾಗಿ ಹೆಮ್ಮೆ ಪಡು" ಎಂದು ಒಂದು
ಸುಭಾಷಿತದಲ್ಲಿದೆ. ಪ್ರೀತಿ, ದಯೆ, ಕರುಣೆ, ಅನುಕಂಪ ಎನ್ನುವ ಎಲ್ಲಾ ಉದಾತ್ತ ಗುಣಗಳನ್ನು ತನಗೆ ಮತ್ತು ತನ್ನ ಕುಟುಂಬಕ್ಕೆ ಮಾತ್ರ
ಮೀಸಲಾಗಿಟ್ಟು ಇತರರ ಜೊತೆಗೆ ತದ್ವಿರುದ್ದವಾಗಿ ವರ್ತಿಸುವವರಿದ್ದಾರೆ.
ಸ್ತ್ರೀ ತನ್ನ ಈ ಸ್ವಾರ್ಥದ ಪರಿಧಿಯಿಂದ ಹೊರಬಂದು ವೇದಗಳ ಕಾಲದಿಂದಲೂ ತನಗೆ ನೀಡಿದ ಪೂಜನೀಯ
ಸ್ಥಾನವನ್ನು ಉಳಿಸಿಕೊಳ್ಳುವಂತಾಗಲಿ.
ಅನಸೂಯ ಜೆ. ರೈ
No comments:
Post a Comment
If you have any doubts. please let me know...