January 24, 2025

ಪ್ರಜೆಗಳ ನೆಮ್ಮದಿಯೇ ಸುಭಿಕ್ಷ ರಾಷ್ಟ್ರದ ಮೂಲ

ಪ್ರಜೆಗಳಿಗೆ ಒಳಿತು ಮಾಡದೇ ರಾಜನು ದೇವತಾಕಾರ್ಯಗಳನ್ನು ನಡೆಸಿ ಪ್ರಯೋಜನವೇನು?

ಕಿಂ ದೇವಕಾರ್ಯಾಣಿ ನರಾಧಿಪಸ್ಯ ಕೃತ್ವಾ ವಿರೋಧಂ ವಿಷಯಸ್ಥಿತಾನಾಮ್। 
ತದ್ದೇವಕಾರ್ಯಂ ಜಪಯಜ್ಞಹೋಮಾಃ ಯಸ್ಯಾಶ್ರುಪಾತಾ ನ ಪತಂತಿ ರಾಷ್ಟ್ರೇ॥

ಯಾವನ ರಾಜ್ಯದಲ್ಲಿ ಪ್ರಜೆಗಳು ಕಣ್ಣೀರು ಸುರಿಸುವುದಿಲ್ಲವೋ ಅದೇ ದೇವಕಾರ್ಯ. ಅದೇ ಯಜ್ಞ, ಅದೇ ಹೋಮ. ಪ್ರಜೆಗಳನ್ನು ತನ್ನ ಮಕ್ಕಳಂತೆ ಸಂರಕ್ಷಿಸುವುದು ರಾಜನ ಕರ್ತವ್ಯ. ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅವರ ಬೇಕು, ಬೇಡಗಳ ಕಡೆ ಗಮನಹರಿಸಬೇಕು. ಈ ಕಾರ್ಯ ಸುಗಮವಾಗಿ ಸಾಗಲು ಧಾರ್ಮಿಕ, ಆಧ್ಯಾತ್ಮಿಕ ಬದುಕಿನ ಸ್ಪರ್ಶವಿದ್ದರೆ ಒಳಿತು. ಧಾರ್ಮಿಕ ಕಾರ್ಯವೆಲ್ಲವೂ ಲೋಕ ಕಲ್ಯಾಣಾರ್ಥವಾಗಿರಬೇಕು. ಆದರೆ ರಾಜನಾದವನು ಪ್ರಜೆಗಳ, ದೇಶದ ಹಿತಕಾರ್ಯ ನಿರ್ಲಕ್ಷಿಸಿ ಕೇವಲ ಹೋಮ, ಹವನ, ಪೂಜೆ ಮುಂತಾದ ದೇವತಾಕಾರ್ಯ ಮಾಡುತ್ತಾ, ಪ್ರಜೆಗಳು ಕಣ್ಣೀರಿಡುವಂತೆ ಮಾಡಿದರೆ, ರಾಜನು ಕರ್ತವ್ಯಲೋಪ ಮಾಡಿದಂತಾಗುವುದು.

Dr̤ Ganapathi Hegade

January 23, 2025

ಒಳ್ಳೆಯ ಮಾತುಗಳನ್ನೇ ಆಡೋಣ

ನಮಗೆ ಮಾತಾಡುವ ಸಾಮರ್ಥ್ಯವಿದೆ, ಅವಕಾಶವಿದೆ ಎಂದ ಮಾತ್ರಕ್ಕೆ ಏನೇನೋ ಮಾತನಾಡಬಾರದು. ಒಳ್ಳೆಯ ಮಾತುಗಳನ್ನೇ ಆಡಬೇಕು.

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ।
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ|

ಮಾತಾಡುವ ಶಕ್ತಿಯನ್ನು ಭಗವಂತ ಮನುಷ್ಯನಿಗೆ ದಯಪಾಲಿಸಿದ್ದಾನೆ. ಇಂತಹ ಅಪೂರ್ವ ಅವಕಾಶ ಅನ್ಯ ಜೀವಿಗಳಿಗಿಲ್ಲ.
ದೈವದತ್ತವಾದ ಈ ಅವಕಾಶವನ್ನು ಅಷ್ಟೇ ಗೌರವದಿಂದ ಬಳಸಿಕೊಳ್ಳಬೇಕು.
ಆಡುವ ಮಾತುಗಳು ಸುಲಲಿತವಾಗಿ, ಚೆನ್ನಾಗಿರಬೇಕು, ಹೃದ್ಯವಾಗಿರಬೇಕು, ಇತರರಿಗೆ ಬೇಗ ಅರ್ಥವಾಗುವಂತಿರಬೇಕು. ಮೃದುವಾಗಿರಬೇಕು, ಸತ್ಯವಾದ ಮಾತುಗಳನ್ನೇ ಆಡಬೇಕು.
ನಮ್ಮ ಮಾತು ಇತರರಿಗೆ ಆತ್ಮೀಯತೆಯನ್ನು ಹುಟ್ಟಿಸುವಂತಿರಬೇಕು.
ಯಾಕೆಂದರೆ ಒಳ್ಳೆಯ ಮಾತನ್ನಾಡುವುದರಿಂದ ಎಲ್ಲರೂ ಸಂತಸಪಡುತ್ತಾರೆ.
ಆದ್ದರಿಂದ ಒಳ್ಳೆಯ ಮಾತುಗಳನ್ನೇ ಆಡಬೇಕು. ನಮಗೆ ಮಾತಿಗೇನೂ ಬಡತನವಿಲ್ಲವಲ್ಲ! 

January 16, 2025

ಶ್ರೀ ಜಗದ್ಗುರು ಪಂಚಾಚಾರ್ಯರು ಲಿಂಗೋದ್ಭವರು

    ಚತುರ್ಯುಗಗಳಲ್ಲಿಯೂ ಶ್ರೀ ಜಗದಾಚಾರ್ಯರು ಲಿಂಗೋದ್ಭವರಾಗಿಯೇ ಅವತರಿಸಿದರು. ಇವರಲ್ಲಿ ಶ್ರೀ ಜ. ರೇವಣಸಿದ್ಧೇಶ್ವರರು ಕೊನಲುಪಾಕ (ಕೊಲ್ಲಿಪಾಕಿ) ಶ್ರೀ ಸೋಮೇಶ್ವರದಿಂದ, ಶ್ರೀ ಜಗದ್ಗುರು ಮರುಳಾರಾಧ್ಯರು ವಟಕ್ಷೇತ್ರ ಶ್ರೀ ಸಿದ್ಧೇಶ್ವರಲಿಂಗದಿಂದ, ಶ್ರೀ ಜಗದ್ಗುರು ಪಂಡಿತಾರಾಧ್ಯರು ಶ್ರೀಶೈಲ ಮಲ್ಲಿಕಾರ್ಜುನ ಲಿಂಗದಿಂದ, ಶ್ರೀ ಜಗದ್ಗುರು ಏಕೋರಾಮಾರಾಧ್ಯರು ಶ್ರೀ ಹಿಮವತ್ಕೇದಾರ ರಾಮನಾಥಲಿಂಗದಿಂದ ಶ್ರೀ ಜಗದ್ಗುರು ವಿಶ್ವಾರಾಧ್ಯರು ಶ್ರೀ ಕಾಶೀ ವಿಶ್ವೇಶ್ವರ ಲಿಂಗದಿಂದ ಉದ್ಭವಿಸಿದ್ದಲ್ಲದೇ ಆಯಾಯ ಲಿಂಗಗಳಲ್ಲಿಯೇ ಅಡಗಿದರು. 
ಪಂಚತತ್ವ ಹಾಗೂ ಪಂಚಪೀಠಗಳು.
    ಭೂಮಿ, ಜಲ, ಅಗ್ನಿ, ವಾಯು, ಆಕಾಶ ಈ ಪಂಚತತ್ವಗಳಿಂದಲೇ ಮಾನವನನ್ನು ಈಶ್ವರನು ನಿರ್ಮಿಸಿರುವನು. ಮಾನವರ ಉದ್ಧಾರಕ್ಕಾಗಿ ಅವತರಿಸಿದ ಶ್ರೀ ಪಂಚಾಚಾರ್ಯರಿಗೆ ಈ ಪಂಚತತ್ವಗಳೇ ಪಂಚಪೀಠಗಳಾಗಿ ಪರಿಣಮಿಸಿದವು. ಈ ತತ್ವಗಳಲ್ಲಿ ಪೃಥ್ವಿತತ್ವವೇ ರಂಭಾಪುರೀ ವೀರಪೀಠವಾಗಿಯೂ, ಜಲತತ್ವವೇ ಉಜ್ಜಯಿನಿ ಸದ್ಧರ್ಮಪೀಠವಾಗಿಯೂ, ಅಗ್ನಿ ತತ್ವವೇ ಕೇದಾರ ವೈರಾಗ್ಯ ಪೀಠವಾಗಿಯೂ ವಾಯು ತತ್ವವೇ ಶ್ರೀಶೈಲ ಸೂರ್ಯಪೀಠವಾಗಿಯೂ, ಆಕಾಶ ತತ್ವವೇ ಕಾಶೀ ಜ್ಞಾನಪೀಠವಾಗಿಯೂ ಪರಿಣಮಿಸಿವೆ.
    ಆದುದರಿಂದ ಈ ಐದು ತತ್ವಗಳು ಪೀಠಾಚಾರ್ಯರಿಗೆ ಪಂಚಪೀಠಗಳೆನಿಸಿ ಇಂದಿನವರೆಗೂ ಐದು ಭಾಗಗಳಲ್ಲಿ ಸುಶೋಭಿಸುತ್ತಿವೆ. ಇವುಗಳಲ್ಲಿ ವೀರ ಪೀಠವು ರಂಭಾಪುರಿ ಕ್ಷೇತ್ರದಲ್ಲಿಯೂ, ಸದ್ಧರ್ಮ ಪೀಠವು ಉಜ್ಜಯಿನಿ ಕ್ಷೇತ್ರದಲ್ಲಿಯೂ, ಸೂರ್ಯಪೀಠವು ಶ್ರೀಶೈಲ ಕ್ಷೇತ್ರದಲ್ಲಿಯೂ, ವೈರಾಗ್ಯ ಪೀಠವು ಕೇದಾರ ಕ್ಷೇತ್ರದಲ್ಲಿಯೂ, ಜ್ಞಾನ ಪೀಠವು ಕಾಶೀ ಕ್ಷೇತ್ರದಲ್ಲಿಯೂ ವಿರಾಜಮಾನಗಳಾಗಿವೆ. 
ಐದು ಬಗೆಯ ವರ್ತನೆ 
    ಶ್ರೀ ಜಗದ್ಗುರು ಪಂಚಾಚಾರ್ಯರು ಇಹಪರದಲ್ಲಿ ಮನುಷ್ಯನಿಗೆ ಸುಖಶಾಂತಿಯನ್ನು ಕೊಡುವ ಐದು ಬಗೆಯ ವರ್ತನೆಯನ್ನು ಅನುಗ್ರಹಿಸಿರುವರು. ಮಾನವನು ಈ ಐದು ಬಗೆಯ ವರ್ತನೆಗಳಿಂದಲೇ ತನ್ನ ಕಲ್ಯಾಣವನ್ನೇ ಸಾಧಿಸುತ್ತ ಬಂದಿರುವನು. 
    ವೀರವೃತ್ತಿಧಾರ್ಮಿಕ ವರ್ತನೆವೈರಾಗ್ಯಸಮದೃಷ್ಟಿ (ವಿವೇಕ)ಜ್ಞಾನ ಇವೇ ಐದು ಬಗೆಯ ವರ್ತನೆಗಳು. ಇವು ಪೀಠಾಚಾರ್ಯರಿಂದ ದೊರೆಯುವ ದಿವ್ಯ ಪ್ರಸಾದಗಳು ಮತ್ತು ಮುಕ್ತಿಯನ್ನು ಪಡೆಯುವ ಸಾಧನಗಳು.
    ಸದ್ವರ್ತನೆಗೆ ವೀರವೃತ್ತಿ ಬೇಕು. ಆ ವೀರವೃತ್ತಿಯನ್ನು ರಂಭಾಪುರಿ ವೀರ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ರೇಣುಕಾಚಾರ್ಯರಿಂದಲೂ, ಆ ಸದ್ವರ್ತನೆ ನೆಲೆಗೊಳ್ಳಬೇಕಾದರೆ ಧರ್ಮವೃತ್ತಿಬೇಕು ಆ ಧಾರ್ಮಿಕ ವರ್ತನೆಯನ್ನು ಉಜ್ಜಯಿನಿ ಸದ್ಧರ್ಮ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ದಾರುಕಾಚಾರ್ಯರಿಂದಲೂ, ಕ್ಷಣಿಕ ಸುಖಭೋಗಕ್ಕೆ ಮಾರುಹೋಗದೆ ಜಗತ್ತನ್ನು ಶಿವಮಯವಾದದ್ದೆಂದು ತಿಳಿದು ಪರಮಾತ್ಮನ ಕಡೆಗೆ ಏಕಾಗ್ರತೆಯಿಂದ ಮನಸ್ಸನ್ನು ಹರಿಸಲು ವೈರಾಗ್ಯವೃತ್ತಿ ಬೇಕು. ಈ ವೈರಾಗ್ಯ ವೃತ್ತಿಯನ್ನು ಕೇದಾರ ವೈರಾಗ್ಯ ಸಿಂಹಾಸನ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಏಕೋರಾಮಾರಾಧ್ಯರಿಂದಲೂ, ಈ ಮೂರರ ಪ್ರಭಾವದಿಂದ ವಿವೇಕವುಂಟಾಗಿ ಸೂರ್ಯನಂಥ ಸಮದೃಷ್ಟಿವುಂಟಾಗುವುದು. ಈ ಸಮದೃಷ್ಟಿಯನ್ನು ಶ್ರೀಶೈಲ ಸೂರ್ಯಸಿಂಹಾಸನ ಪೀಠಾಧಿಪತಿಗಳಾದ ಶ್ರೀ ಜಗದ್ಗುರು ಪಂಡಿತಾರಾಧ್ಯರಿಂದಲೂ, ಮೇಲ್ಕಂಡ ನಾಲ್ಕರ ಪ್ರಭಾವದಿಂದಲೇ ಪರಿಪೂರ್ಣ ಅರಿವು, ದಿವ್ಯ ಜ್ಞಾನವುಂಟಾಗುವುದು ಈ ಜ್ಞಾನವನ್ನು ಶ್ರೀ ಜಗದ್ಗುರು ಕಾಶೀ ಜ್ಞಾನ ಪೀಠಾಧಿಪತಿಗಳಾದ ವಿಶ್ವಾರಾಧ್ಯರಿಂದಲೂ ಪಡೆಯಬೇಕಾಗಿದೆ. ಈ ಐದುಬಗೆಯ ವರ್ತನೆಗಳು ನಮ್ಮಲ್ಲಿ ಸದಾಕಾಲವೂ ಸ್ಥಿರ ಸ್ಥಿರವಾಗಿ ನೆಲಿಸಲೆಂಬ ಸದಾಶಯದಿಂದಲೇ ಪಂಚ ಪೀಠಾಧಿಪತಿಗಳನ್ನು ಜಗದ್ಗುರುಗಳೆಂದು ನಾವು ಆರಾಧಿಸುತ್ತ ಗೌರವಿಸುತ್ತ ಬಂದಿರುವೆವು.
    ಈ ಮಹಾಚಾರ್ಯರ ಗುರುಪೀಠಗಳ ಗುರುಪರಂಪರೆಯು ಕೃತಯುಗದ ಆರಂಭದಿಂದ ಇಂದಿನವರೆಗೂ ಓತಪ್ರೋತವಾಗಿ ಸಾಗಿಬಂದಿರುವುದುಸರ್ವರಿಗೂ ಪ್ರತ್ಯಕ್ಷವೇ ಇದೆ.
    ಶಿವಾಜ್ಞೆಯಂತೆ, ಈ ಪೂಜ್ಯಪಾದರು ಭೂಲೋಕದಲ್ಲಿ ಅವತರಿಸಿ ಭೂಮಂಡಲವನ್ನು ಶಿವಮಯವನ್ನಾಗಿ ಮಾಡಿದವರು ಈ ಮಹಾಚಾರ್ಯರು ನಾಸ್ತಿಕ ಮತಗಳನ್ನು ಖಂಡಿಸುತ್ತ ಶಿವನೇ ಸರ್ವೋತ್ತಮನೆಂದೂ, ಶಿವನಿಗಿಂತ ಶ್ರೇಷ್ಠವಾದ ವಸ್ತು ಈ ಜಗತ್ತಿನಲ್ಲಿ ಬೇರೊಂದಿಲ್ಲವೆಂದೂ, ಈ ಆಗಾಧ ಪ್ರಪಂಚವು ಶಿವನಿಂದಲೇ ಉತ್ಪನ್ನವಾಯಿತೆಂದೂ, ಪ್ರತಿಯೊಬ್ಬರೂ ಶಿವನ ಪೂಜಾ ಧ್ಯಾನಾದಿಗಳಿಂದ ಕೈವಲ್ಯ ಪದವಿಯನ್ನು ಪಡೆಯಬೇಕೆಂದೂ ಬೋಧಿಸುತ್ತ ಜಗತ್ತಿನಲ್ಲಿ ಶಿವಭಕ್ತಿ ಬೀಜವನ್ನು ಬಿತ್ತಿದವರು. ಭರತ ಖಂಡದಲ್ಲಿರುವ ಪ್ರತಿಯೊಂದು ಗ್ರಾಮ ಪಟ್ಟಣಗಳಲ್ಲಿಯ ಶಿವಮಂದಿರಗಳೇ ಕಾಣುತ್ತಿವೆ. ಆದುದರಿಂದಲೇ ಶೃತಿಗಳೂ ಸಹ ಭಸ್ಮವಿಲ್ಲದ ಹಣೆಗೂ, ಶಿವಾಲಯವಿಲ್ಲದ ಗ್ರಾಮಕ್ಕೂ ಧಿಕ್ಕಾರವಿರಲೆಂದು ಸಾರಿರುವವು.
ಮೂ: ಶ್ರೀ ಪಂ, ವಿರೂಪಾಕ್ಷಶಾಸ್ತ್ರಿಗಳು ಆರಾಧ್ಯಮಠ. ಸುಣಕಲ್ಲಬಿದರಿ


ವೀರಶೈವ ಸಿದ್ಧಾಂತದ ನೆಲೆ ಹಾಗೂ ಹಿನ್ನೆಲೆ

       ನಮ್ಮ ಭಾರತ ದೇಶದಲ್ಲಿ ವೇದೋಪನಿಷತ್ತುಗಳ ತರುವಾಯ ಪಡ್ಡದರ್ಶನಗಳು ಜನ್ಮ ತಾಳಿದವು. ಸಾಂಖ್ಯವು ಕಪಿಲ ಮುನಿಯಿಂದಲೂ, ಯೋಗವು ಪತಂಜಲಿಯಿಂದಲೂ, ನ್ಯಾಯವು ಗೌತಮನಿಂದಲೂ, ವೈಶೇಷಿಕವು ಕಣಾದ ಮುನಿಯಿಂದಲೂ, ಪೂರ್ವ ಮೀಮಾಂಸೆಯು ಜೈಮಿನಿಯಿಂದಲೂ, ಉತ್ತರ ಮೀಮಾಂಸೆಯು ವ್ಯಾಸ ಮುನಿಯಿಂದಲೂ ರಚಿತವಾದವು. ಇವುಗಳಲ್ಲಿ ಉತ್ತರ ಮೀಮಾಂಸೆಯನ್ನು ಆಧರಿಸಿ ಅನೇಕ ಆಚಾರ್ಯರು ತಮ್ಮ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಶಂಕರಾಚಾರ್ಯರು ಆದ್ವೈತ ಸಿದ್ಧಾಂತವನ್ನೂ, ರಾಮಾನುಜರು ವಿಶಿಷ್ಟಾದ್ವೈತ ಸಿದ್ಧಾಂತವನ್ನೂ, ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನೂ ಸ್ಥಾಪಿಸಿದ್ದಾರೆ. ಅಂತೆಯೇ, ಈ ಎಲ್ಲ ಆಚಾರ್ಯರಿಗಿಂತಲೂ ಪೂರ್ವದಲ್ಲಿಯೇ ರೇಣುಕಾದಿ ಪಂಚಾಚಾರ್ಯರು ಶಿವಾದ್ವೈತ ಸಿದ್ಧಾಂತವನ್ನು ಸ್ಥಾಪಿಸಿ, ಆ ತತ್ವವನ್ನು ಪ್ರಚಾರ ಮಾಡಲು ಭಾರತದ ನಾನಾ ಭಾಗಗಳಲ್ಲಿ ಅಂದರೆ ಕೇದಾರ, ಕಾಶೀ, ಉಜ್ಜಯನಿ, ಶ್ರೀಶೈಲ, ರಂಭಾಪುರಿ ಸ್ಥಳಗಳಲ್ಲಿ ಪಂಚ ಆಮ್ನಾಯ ಪೀಠಗಳನ್ನು ಸ್ಥಾಪಿಸಿ, ನಾಸ್ತಿಕ ಮತವನ್ನು ಖಂಡಿಸಿ, ಅಂದಿನ ಜೀವನದಲ್ಲಿ ಆಸ್ತಿಕ ಭಾವನೆಯನ್ನು ನೆಲೆಗೊಳಿಸಿ ಉದ್ಧರಿಸಿದ್ದಾರೆ. ಈ ಪಂಚ ಮಹಾಪೀಠಗಳೂ, ಆ ಪರಂಪರೆಯ ಮಹಾನ್ ಗುರುಗಳೂ ಇಂದಿಗೂ ಇದ್ದಾರೆ.

    ವೀರಶೈವ ಸಿದ್ಧಾಂತಕ್ಕೆ-ಶಿವಾದ್ವೈತ, ಶಾಂಭವ ಮತ, ಶಕ್ತಿ ವಿಶಿಷ್ಟಾದ್ವೈತ, ಭೇದಾ-ಭೇದ ಮತ, ಸಮನ್ವಯ ದರ್ಶನ ಇತ್ಯಾದಿ ಪಾರಿಭಾಷಿಕ ಶಬ್ದಗಳನ್ನು ಪ್ರಯೋಗಿಸುತ್ತಾರೆ. ವೀರಶೈವ ಮತ ಸ್ಥಾಪನಾಚಾರ್ಯರ ಹಾಗೂ ಅವರ ಸಿದ್ಧಾಂತದ ವಿಷಯವು ಆಗಮಗಳಲ್ಲಿಯೇ ನಮಗೆ ದೊರೆಯುತ್ತದೆ.

    ವೀರಶೈವರಿಗೆ ಆಗಮಗಳೇ ಪ್ರಮಾಣ ಗ್ರಂಥಗಳಾಗಿವೆ. ವಾತುಲಾಗಮ, ಸ್ವಯಂಭುವ, ಸುಪ್ರಭೇದ, ಪರಮೇಶ್ವರ, ವೀರಾಗಮಗಳಲ್ಲಿ ವೀರಶೈವ ಮತವು ಹೃದಯಂಗಮವಾಗಿ ಪ್ರತಿಪಾದಿತವಾಗಿದೆ.

    ವಾತುಲಾಗಮದ ಉತ್ತರ ಭಾಗದಲ್ಲಿ ಷಟಸ್ಥಲ ತತ್ವವು ವಿಸ್ತಾರವಾಗಿ ಪ್ರತಿಪಾದಿಸಲ್ಪಟ್ಟಿದೆ. ಆಗಮಗಳ ಪ್ರಕಾರ, ಸಪ್ತ ಶೈವಗಳಲ್ಲಿ ವೀರಶೈವವೂ ಒಂದಾಗಿದೆ. ಪ್ರಾಚೀನ ಕಾಲದಲ್ಲಿ ಶೈವ ಧರ್ಮದ ಪ್ರಭೇದಗಳಾಗಿದ್ದ ಕಾಳಾಮುಖ, ಲಕುಲೀಶ, ಪಾಶುಪತ ಮೊದಲಾದವುಗಳು ಕಾಲಕ್ರಮದಲ್ಲಿ ವೀರಶೈವದಲ್ಲಿಯೇ ವಿಲೀನವಾದವು. ವೀರಶೈವವು ಶೈವಧರ್ಮದ ಪರಿಪೂರ್ಣ ವಿಕಾಸದ ಫಲವಾಗಿದೆ.

    "ಪರಮೇಶ್ವರನು ವೇದಗಳನ್ನು ಬ್ರಹ್ಮನಿಗೂ ಆ ವೇದಾರ್ಥವನ್ನೇ ಆಗಮರೂಪವಾಗಿ ಪಾರ್ವತೀದೇವಿಗೂ ಉಪದೇಶಿಸಿದ್ದಾನೆ” ಎನ್ನುವ ಮಾತಿನ ಅರ್ಥವು ವೇದಗಳ ವ್ಯಾಖ್ಯಾನವೇ ಆಗಮಗಳು ಎಂದಾಗುತ್ತದೆ. ಅಲ್ಲದೆ ವೇದದಷ್ಟೇ ಆಗಮಗಳೂ ಪೂಜ್ಯವಾದವುಗಳಾಗಿವೆ.

    ವೇದಗಳಲ್ಲಿ ಕಂಡು ಬರುವ ಕೆಲವು ವಿಷಯಗಳು ಆಗಮದಲ್ಲಿಯೂ ಕಂಡು ಬರುತ್ತವೆ. ಉದಾಹರಣೆಗಾಗಿ “ಭೂತೈನ ಪ್ರಮದಿತಂ” “ಅಗ್ನಿರಿತಿ ಭಸ್ಮ'' ಇತ್ಯಾದಿ ಯಜುರಥರ್ವಣ, ಶ್ರುತಿಗಳಲ್ಲಿ ಹೇಳಿದ ವಿಭೂತಿ ರುದ್ರಾಕ್ಷ ಧಾರಣವನ್ನು ಆಗಮಗಳೂ ಪ್ರತಿಪಾದಿಸುತ್ತವೆ. ಯಜುರಾರಣ್ಯದೊಳಗಿನ ಸದ್ಯೋಜಾತಾದಿ ಪಂಚ ಬ್ರಹ್ಮ ಮಂತ್ರಗಳನ್ನು ಕೆಲವು ಶಿವಾಗಮಗಳು ನಿರೂಪಿಸುತ್ತವೆ. ವೇದಗಳಲ್ಲಿ ಬರುವ ವರ್ಣ, ಪದ, ಮಂತ್ರ, ಕಲಾ, ಭುವನ, ತತ್ವರೂಪವಾದ ಷಡತ್ತ್ವಗಳನ್ನು ಕೆಲವು ಆಗಮಗಳು ಪ್ರತಿಪಾದಿಸುತ್ತವೆ. ''ಯಾತೇರುದ್ರಶಿವಾ ತನೂ.... ಪವಿತ್ರಂತೆ....” ಇತ್ಯಾದಿ ಶೃತಿಗಳಲ್ಲಿ ಹೇಳಲ್ಪಟ್ಟ ಶಿವಲಿಂಗ ಧಾರಣವನ್ನೂ ಶೃತಿಗಳಲ್ಲಿ ಉಕ್ತವಾದ ಪಶು-ಪತಿ-ಪಾಶ ಎಂಬ ವಿಷಯಗಳನ್ನೂ ಕ್ರಿಯಾ-ಚರ್ಯಾ-ಯೋಗ-ಜ್ಞಾನವೆಂಬ ನಾಲ್ಕು ಪಾದಗಳನ್ನೂ ಶಿವಾಗಮಗಳು ಪ್ರತಿಪಾದಿಸುತ್ತವೆ. ಶಿವಲಿಂಗ ಪ್ರತಿಷ್ಠಾಪನ-ಅಷ್ಟಾವರಣ ಪಂಚಾಚಾರ-ಷಟಸ್ಥಲ, ಲಿಂಗಾಂಗ ಸಾಮರಸ್ಯಾದಿ ವಿಷಯಗಳನ್ನೂ ಆಗಮಗಳಲ್ಲಿ ಕಾಣುತ್ತೇವೆ. ಆದುದರಿಂದ ವೇದಾಗಮಗಳ ವ್ಯವಹಾರ ಸ್ವಲ್ಪು ಹೆಚ್ಚು ಕಡಿಮೆ ಒಂದೇ ಆಗಿದೆ. ಮಹಾನ್ ಸಂಶೋಧಕರೂ ಪಂಡಿತರೂ ಆದ ಶ್ರೀಮಾನ್ ಶಂ. ಬಾ. ಜೋಷಿ ಅವರು ತಮ್ಮ 'ಶಿವರಹಸ್ಯ' ಗ್ರಂಥದಲ್ಲಿ “ವೇದಗಳಲ್ಲಿಯೇ-ವೀರಶೈವ ಧರ್ಮದ ಬೇರುಗಳಿವೆ'' ಎಂದು ಪ್ರತಿಪಾದಿಸಿದ್ದಾರೆ.

    ಹೀಗೆ, ವೇದಾಗಮಗಳ ಹಿನ್ನೆಲೆ ಪಡೆದು ಬಂದ ಸನಾತನ ತತ್ವಗಳನ್ನು ಪಂಚಾಚಾರ್ಯರು ಶಿವಾದ್ವೈತ ಸಿದ್ಧಾಂತದಲ್ಲಿ ನೆಲೆಗೊಳಿಸಿದರು-ಎನ್ನುವ ವಿಷಯವು ನಮಗೆ ದೊರೆತ ಭಾಷ್ಯಗಳಿಂದ ಚನ್ನಾಗಿ ವ್ಯಕ್ತವಾಗುತ್ತದೆ.

    ಶಿವಾದ್ವೈತ ಸಿದ್ಧಾಂತ ಪ್ರತಿಪಾದನೆಗಾಗಿಯೇ ಅಚಾರ್ಯರಿಂದ ಭಾಷ್ಯಗಳು ಬರೆಯಲ್ಪಟ್ಟಿವೆ. 'ರೇಣುಕ ಭಾಷ್ಯ' 'ದಾರುಕ ಭಾಷ್ಯ' 'ಪಂಡಿತಾರಾಧ್ಯ ಭಾಷ್ಯ' 'ವಿಶ್ವಾರಾಧ್ಯ ಭಾಷ್ಯ' 'ವೇದ ಭಾಷ್ಯ' 'ನೀಲಕಂಠ ಭಾಷ್ಯ' 'ಶ್ರೀಕರ ಭಾಷ್ಯ' ಶ್ರುತಿ ಸಾರ ಭಾಷ್ಯಗಳು ಇತ್ಯಾದಿ ಭಾಷ್ಯಗಳಲ್ಲಿ ಶಂಕರ, ಮಧ್ವ, ರಾಮಾನುಜ ಭಾಷ್ಯಗಳಿಗಿಂತ ಪೂರ್ವವೇ ವೀರಶೈವ ಭಾಷ್ಯಗಳು ರಚಿಸಲ್ಪಟ್ಟವು-ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಆದರೆ ಪರಮತೀಯರ ದಾಳಿಯಿಂದಲೋ, ನಮ್ಮವರ ಅಸಡ್ಡೆ, ಅಜ್ಞಾನದಿಂದಲೋ, ವೀರಶೈವ ಧರ್ಮದ ದೌರ್ಭಾಗ್ಯದಿಂದಲೋ ಮೇಲ್ಕಂಡ ಎಲ್ಲ ಭಾಷ್ಯಗಳೂ ನಮಗೆ ದೊರೆಯುವದಿಲ್ಲವೆಂಬುದು ವಿಷಾದದ ಸಂಗತಿಯಾಗಿದೆ.

    ಶ್ರೀ ಜ. ರೇಣುಕ ಭಗವತ್ಪಾದರಿಂದ ಶಿವಾದ್ವೈತ ಸಿದ್ಧಾಂತದ ಉಪದೇಶವನ್ನು ಪಡೆದವರು ಆಗಸ್ತ್ಯ ಮಹರ್ಷಿಗಳು. ಇವರೇ ಪಟ್ಟದ ಶಿಷ್ಯರು. ಗುರು-ಶಿಷ್ಯರ ಸಂವಾದ ರೂಪದಲ್ಲಿರುವ 'ರೇಣುಕ ಗೀತೆ' ಅಥವಾ 'ಸಿದ್ಧಾಂತ ಶಿಖಾಮಣಿ'ಯು ಶಿವಾದ್ವೈತ ಸಿದ್ಧಾಂತದ ಸಾರ ಸಂಗ್ರಹವಾಗಿದೆ. ಇದು 'ಭಗವದ್ಗೀತೆಗೆ ಸರಿ ಸಮವಾದ ಧರ್ಮ ಗ್ರಂಥವಾಗಿದೆ. ಹಿಂದೂ ಧರ್ಮವನ್ನು ಅರಿಯಲು 'ಭಗವದ್ಗೀತೆ' ಹೇಗೆ ಆಧಾರವೋ ಹಾಗೆ, ವೀರಶೈವ ಧರ್ಮದ ಅಂತರಂಗವನ್ನರಿಯಲು ಸಿದ್ಧಾಂತ ಶಿಖಾಮಣಿ ಒಂದೇ ಸಾಕು. ವೀರಶೈವ ದರ್ಶನವನ್ನು ಕಾವ್ಯರೂಪದಲ್ಲಿ ಕಲಾತ್ಮಕವಾಗಿ ವಿವರಿಸುವ ಏಕೈಕ ಕೃತಿ ಸಿದ್ಧಾಂತ ಶಿಖಾಮಣಿ.

    ಅಗಸ್ಯ ಮಹರ್ಷಿಗಳು ಬ್ರಹ್ಮ ಸೂತ್ರಗಳ ಮೇಲೆ ವೀರಶೈವ ಸಿದ್ಧಾಂತ ಪರವಾಗಿ ವೃತ್ತಿಯನ್ನೂ ಬರೆದಿದ್ದಾರೆ. ಈ ಸೂತ್ರ ವೃತ್ತಿಯು ಕುಂಭಕೋಣದಲ್ಲಿ ಮುದ್ರಣವಾಗಿದೆ. ಈ ಸೂತ್ರ ವೃತ್ತಿಯ ವಿಷಯವಾಗಿ ಶ್ರೀಪತಿ ಪಂಡಿತರು ತಾವು ರಚಿಸಿರುವ ಶ್ರೀಕರ ಭಾಷ್ಯದ ಆರಂಭದಲ್ಲಿ 'ಅಗಸ್ತ್ಯಮುನಿ ಚಂದ್ರೇಣ ಕೃತಾಂ ವೈಯಾಸಿಕೀಂ ಶುಭಾಂ | ಸೂತ್ರ ವೃತ್ತಿಂ ಸಮಾಲೋಕ್ಯ, ಕೃತಂ, ಭಾಷ್ಯಂ ಶಿವಂ ಕರಂ' ಎಂದು ಅಪ್ಪಣೆ ಕೊಡಿಸಿದ್ದಾರೆ. ಅಂದರೆ, ಅಗಸ್ತ್ಯ ಮಹರ್ಷಿಗಳ ಬ್ರಹ್ಮ ಸೂತ್ರ ವೃತ್ತಿಯೇ ತಮ್ಮ ಭಾಷ್ಯಕ್ಕೆ ಆಧಾರವೆಂದು ಅವರ ಅಭಿಪ್ರಾಯ, ಬಸವ ಪಂಡಿತಾರಾಧ್ಯರು ಶಿಕ್ಷಾವಲ್ಲೀ - ಭೃಗುವಲ್ಲೀ ಈ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆಯುವ ಪ್ರಾರಂಭದಲ್ಲಿ "ವೇದವ್ಯಾಸಂ ಸೂತ್ರಕಾರಂ ದೂರ್ವಾಸಂ ವೃತ್ತಿ ಕಾರಕಂ | ಭಾಷ್ಯ ಕೃತ್ ಪಂಡಿತಾರಾಧ್ಯಂ ಪ್ರಪದ್ಯೇ ಪಾಶ ಮುಕ್ತಯೇ ||” ಅಂದರೆ ಬ್ರಹ್ಮ ಸೂತ್ರಗಳನ್ನು ರಚಿಸಿದ ವ್ಯಾಸರನ್ನೂ, ಈ ಸೂತ್ರಗಳಿಗೆ ಭಾಷ್ಯವನ್ನು ಬರೆದ ಪಂಡಿತಾರಾಧ್ಯರನ್ನೂ, ವೃತ್ತಿಯನ್ನು ಬರೆದ ದೂರ್ವಾಸ 'ಮಹರ್ಷಿಗಳನ್ನೂ ಪಾಶಬಂಧ ವಿಮೋಚನೆಗಾಗಿ ಆಶ್ರಯಿಸುತ್ತೇನೆಂದು ಮಂಗಲವನ್ನು ಮಾಡಿದ್ದಾರೆ. ದೂರ್ವಾಸ ಮಹರ್ಷಿಗಳು ವೀರಶೈವ ಸಿದ್ಧಾಂತ ಪರವಾಗಿ ಸೂತ್ರ ವೃತ್ತಿಯನ್ನು ರಚಿಸಿದ್ದಲ್ಲದೆ ಉಪನಿಷತ್ತುಗಳಿಗೂ ಭಾಷ್ಯವನ್ನು ಬರೆದಂತೆ ಕಂಡು ಬರುತ್ತದೆ. ಉಪಮನ್ಯು ಶಿವಾಚಾರ್ಯರು, ಶಿವನ ಡಮರುಗದಿಂದ ಉದಿಸಿದ ಅ. ಇ. ಎಣ್ ಮೊದಲಾದ ಹದಿನಾಲ್ಕು ಸೂತ್ರಗಳ ಮೇಲೆ ಶಿವಾದ್ವೈತ ಸಿದ್ಧಾಂತ ಪರವಾದ ವೃತ್ತಿಯನ್ನು ರಚಿಸಿದ್ದಾರೆ. ಉಪಮನ್ಯು ಶಿವಾಚಾರ್ಯರು "ರಚಿಸಿದ ಶಿವಾದ್ವೈತ ವೃತ್ತಿಗೆ ಶ್ರೀ ನಂದಿಕೇಶ್ವರ ಶಿವಾಚಾರ್ಯರು ಟೀಕೆಯನ್ನು ಬರೆದಿದ್ದಾರೆ. ಈ ಗ್ರಂಥವು 'ನಂದಿಕೇಶ್ವರ ಕಾರಿಕಾ' ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಕಾಳಹಸ್ತಿ ಶಿವಾಚಾರ್ಯರು ದಶೋಪನಿಷತ್ತುಗಳ ಮೇಲೆ ಲಿಂಗಧಾರಣ ಪರವಾದ ಭಾಷ್ಯವನ್ನು ರಚಿಸಿದ್ದಾರೆ.

    ಶ್ರೀ ವೆಂಕಟಲಕ್ಷ್ಮಣರಾವ್ ಎಂ.ಎ., ಅವರು ರಚಿಸಿದ 'ಹಿಂದೂದೇಶ ಕಥಾ ಸಂಗ್ರಹ' 'ಹಿಂದೂ ಮಹಾಯುಗ' ಎನ್ನುವ ಗ್ರಂಥದ ೮೨ ನೇ ಪುಟದಲ್ಲಿ ಶಂಕರ, ರಾಮಾನುಜ, ಮಧ್ವರು ರಚಿಸಿದ ಭಾಷ್ಯಗಳಿಗೆ ಪೂರ್ವದಲ್ಲಿ ನೀಲಕಂಠ ಶಿವಾಚಾರ್ಯರು ಹಾಗೂ ವೀರಶೈವ ಪೂರ್ವಾಚಾರರು ಭಾಷ್ಯವನ್ನು ರಚಿಸಿದ್ದರು ಎಂದು ಅಭಿಪ್ರಾಯ ಪಡುತ್ತಾರೆ. ಚತುರ್ವೇದ ಪಾರಂಗತನಾದ ಶಿವಪೂಜಾ ಶಿವಯೋಗೀಂದ್ರರು ಪ್ರಾಚೀನ ವಿದ್ವಾಂಸರು, ತನ್ನ 'ಶ್ರುತಿಸಾರ ಭಾಷ್ಯಂ' ಎಂಬ ಗ್ರಂಥದಲ್ಲಿ ನಾಲ್ಕು ವೇದಗಳಲ್ಲಿನ ೭೫ ಮಹಾಮಂತ್ರಗಳಿಗೆ ವೀರಶೈವ ಸಿದ್ಧಾಂತದ ಪರವಾಗಿ ವ್ಯಾಖ್ಯಾನವನ್ನು ಬರೆದಿದ್ದಾರೆ. ವೀರಶೈವವು ವೇದ ಪ್ರತಿಪಾದಿತವೆಂದೂ ಸಿದ್ಧಮಾಡಿದ್ದಾರೆ. ನಂದಿಕೇಶ್ವರ ಶಿವಾಚಾರ್ಯರು ತಮ್ಮ ಲಿಂಗಧಾರಣ ಚಂದ್ರಿಕೆ'ಯಲ್ಲಿ ವೇದ, ಆಗಮ, ಪುರಾಣ ಸ್ಮೃತಿಗಳಿಂದ ಆಧಾರ ಪಡೆದು ಲಿಂಗಧಾರಣದ ಪ್ರಾಚೀನತೆ ಹಾಗೂ ಅದರ ಹಿರಿಮೆ-ಗರಿಮೆಗಳನ್ನು ಪ್ರತಿಪಾದಿಸುತ್ತಾರೆ. ಹರದತ್ತಾಚಾರನ “ಚತುರ್ವೇದ ಸಾರ ಸಂಗ್ರಹ” 'ವೀರಶೈವಾನಂದ ಚಂದ್ರಿಕೆ' ಇತ್ಯಾದಿ ಗ್ರಂಥಗಳಲ್ಲೂ ವೀರಶೈವದ ಪ್ರಾಚೀನ ಹಿನ್ನೆಲೆಯನ್ನು ಕಾಣುತ್ತೇವೆ. ಗುಬ್ಬಿ ಮಲ್ಲಣಾರ್ಯನ "ವಾತುಲಾಗಮ" ವೀರಶೈವ ವ್ಯಾಖ್ಯಾನವೂ, ವೃಷಭ ಪಂಡಿತನ 'ಮಹಾನಾರಾಯಣೋಪನಿಷತ್' ಭಾಷ್ಯವೂ, ವೀರಶೈವ ಸಿದ್ಧಾಂತವನ್ನು ಪ್ರತಿಪಾದಿಸುತ್ತವೆ. ಅಲ್ಲದೆ ಸಿದ್ಧಾಂತ ಶಿಖೋಪನಿಷತ್, ವೀರಲೈಂಗ್ಯೋಪನಿಷತ್, ಲಿಂಗಧಾರಣೋಪನಿಷತ್ತುಗಳಲ್ಲಿಯೂ ವೀರಶೈವ ಸಿದ್ಧಾಂತವು ಪ್ರತಿ ಪಾದಿತವಾಗಿದೆ.

    ಅಸಂಖ್ಯಾತ ಋಷಿಗಳು ವೀರಶೈವ ದೀಕ್ಷೆಯನ್ನು ಪಡೆದು ಮೋಕ್ಷಗಾಮಿಗಳಾದರು ಎಂದು ವ್ಯಾಸರು ತಮ್ಮ ಪುರಾಣಗಳಲ್ಲಿ ಹೇಳುತ್ತಾರೆ. ವ್ಯಾಸ - ಮಹರ್ಷಿಗಳು ಕಾಶೀ ಜಗದ್ಗುರು ಪೀಠಾಧಿಪತಿಗಳಾಗಿದ್ದ ಘಂಟಾಕರ್ಣ ಶಿವಾಚಾರ್ಯರಿಂದಲೂ ಧರ್ಮೋಪದೇಶವನ್ನು ಹೊಂದಿದ ವಿಷಯ ಕಾಶೀ ಖಂಡದಲ್ಲಿ ವ್ಯಾಸ ಕಾಶಿಯಲ್ಲಿರುವ ಶಿಲಾ ವಿಗ್ರಹಗಳಿಂದ ಸ್ಪಷ್ಟವಾಗುತ್ತದೆ. ಶಂಕರಾಚಾರ್ಯರು ಶ್ರೀ ರೇಣುಕ ಭಗವತ್ಪಾದರಿಂದ ಚಂದ್ರ ಮೌಳೀಶ್ವರ ಲಿಂಗವನ್ನು ಪಡೆದು ಹಿಮಾಚಲಕ್ಕೆ ಹೋಗಿ ನಿಶ್ಚಲ ಮನಸ್ಕರಾಗಿ, ಶಿವಾರ್ಚನೆ ಮಾಡಿ ಶಿವ ಸಾಯುಜ್ಯವನ್ನು ಪಡೆದ ವಿಷಯ 'ಗುರುವಂಶ ಕಾವ್ಯ', 'ನಾದಚಿಂತಾಮಣಿ', 'ಶಂಕರ ವಿಜಯ'ದಲ್ಲಿ ಪ್ರಸ್ತಾಪಿಸಲ್ಪಟ್ಟಿದೆ. ಅಲ್ಲದೆ ಶೃಂಗೇರಿ ಮತ್ತು ರಂಭಾಪುರಿಯ ನಡುವಿನ ಪ್ರದೇಶದಲ್ಲಿ ಶ್ರೀ ರೇಣುಕ ಭಗವತ್ಪಾದರು ಶ್ರೀ ಶಂಕರಾಚಾರರಿಗೆ ಚಂದ್ರಮೌಳೀಶ್ವರ ಲಿಂಗವನ್ನಿತ್ತು ತತ್ತ್ವೋಪದೇಶ ಮಾಡಿದ ಪುಣ್ಯಸ್ಥಾನವೆಂದು ಒಂದು ದೇವಾಲಯದಲ್ಲಿ ಶಾಸನವಿದೆಯೆಂದೂ ಗುರು - ಶಿಷ್ಯ ಭಾವವನ್ನು ಸೂಚಿಸುವ ಎರಡು ಶಿಲಾಮೂರ್ತಿಗಳಿವೆ ಎಂದೂ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ವಿದ್ಯಾರಣ್ಯ ಸ್ವಾಮಿಗಳೂ ರೇಣುಕಾಚಾರ್ಯ ಪರಂಪರೆಯ ಗುರುಗಳಿಂದ ಒಂದು ಶಿವಲಿಂಗವನ್ನು ಪಡೆದರೆಂದು 'ಕೆಳದಿ ನೃಪವಿಜಯ'ದಲ್ಲಿ ಹೇಳಿದೆ. ಹೀಗೆ ಪಂಚಾಚಾರ್ಯರಿಂದ ಪ್ರವರ್ತಕವಾದ ಈ ವೀರಶೈವ ಸಿದ್ಧಾಂತವನ್ನು ಅನೇಕ ಅನ್ಯಮತಾಚಾರ್ಯರೂ ಋಷಿಗಳೂ ಶಿವಶರಣರೂ ಅನುಷ್ಠಾನ ಮಾಡಿ ಧನ್ಯರಾಗಿದ್ದಾರೆ.

    ವೀರಶೈವ ತತ್ವದ ಹಿನ್ನೆಲೆಯನ್ನು ಇನ್ನೂ ವಿವಿಧ ಆಧಾರಗಳಿಂದ ಸ್ಪಷ್ಟಪಡಿಸಬಹುದು. ಉದಾಹರಣೆಗಾಗಿ

ಕಿರಣಾಗಮದಲ್ಲಿ
“ಸ್ಥೂಲಾಂಗೇ ತ್ವಿಷ್ಟಲಿಂಗಂತು ಯೋ ನಧಾರಯತೇ ದ್ವಿಜಃ |”

ವಾತುಲಾಗಮದಲ್ಲಿ
“ಯಃ ಪೂಜಯತಿ ಲಿಂಗಾಂಗ ಧ್ಯಾನ್ಯಾಸಕ್ತ ಧಿಯಂ ದ್ವಿಜಂ ।
ಪುನರ್ಭವೋ ನತಸ್ಯಾಪ್ತಿ ಸತ್ಯಂ ಸತ್ಯಂ ಮಯೋದಿತಂ ||"

ಮನುಸ್ಮೃತಿಯಲ್ಲಿ
“ಶಿವಧ್ಯಾನ ರತೋ ಭೂತ್ವಾ ಶಿವಲಿಂಗಾಂಗ ಸಂಯುತಃ !”

ಗೌತಮ ಸ್ಮೃತಿಯಲ್ಲಿ
“ಮುಖೇ ಮಂತ್ರೋಹೃದಿ ಧ್ಯಾನಂ ಮಸ್ತಕೇ ಲಿಂಗಧಾರಣಂ!”

ಪದ್ಮ ಪುರಾಣದಲ್ಲಿ
“ಸರ್ವದಾ ಶಿವಲಿಂಗಂತು ಧಾರಯಂತಿ ಯಜಂತಿಚ "

ಲಿಂಗಪುರಾಣದಲ್ಲಿ
“ಧಾರಯಂತಿ ಅಲಕಾಗ್ರೇಷು ಶಿವಲಿಂಗಮಹರ್ನಿಶಂ |

ಸ್ಕಾಂದ ಪುರಾಣದಲ್ಲಿ
“ಬ್ರಹ್ಮ ವಿಷ್ಣ್ವಾದಯೋ ದೇವಾ ಮುನಯೋ ಗೌತಮಾದಯಃ |
ಧಾರಯಂತಿ ಸದಾಲಿಂಗಮುತ್ತ ಮಾಂಗೇ ವಿಶೇಷತಃ ||”

ಮಹಾಭಾರತದಲ್ಲಿ
“ಕಿಮಾಹ್ರ ಭಕರತ ಶ್ರೇಷ್ಠಾ ವಿಪ್ರಾಃ ಪಾತ್ರಂ ಸನಾತನಂ |
ಲಿಂಗಿನಂ ಬ್ರಾಹ್ಮಣಂ ಚೈವ ಬ್ರಾಹ್ಮಣಂ ಚಾಪ್ಯಲಿಂಗಿನಂ ||"

ಇತ್ಯಾದಿ

    ವೀರಶೈವ ಸಿದ್ಧಾಂತವನ್ನು ವೇದಾಗಮಗಳ ಹಿನ್ನೆಲೆಯಲ್ಲಿ ಪ್ರತಿಪಾದಿಸುವ ದರ್ಶನ ಗ್ರಂಥಗಳಲ್ಲಿ ಶ್ರೀಕರ ಭಾಷ್ಯ, ಕ್ರಿಯಾಸಾರ, ಶಿವಾದ್ವೈತ ಮಂಜರೀ, ಸಿದ್ಧಾಂತ ಶಿಖಾಮಣಿ, ಅನುಭವ ಸೂತ್ರಂ, 'ಲಿಂಗಧಾರಣ ಚಂದ್ರಿಕೆ' 'ಶಿವಾಧಿಕ್ಯ ಶಿಖಾಮಣಿ', 'ವೇದಾಂತ ಸಾರ' ವೀರಶೈವ ಚಿಂತಾಮಣಿ, 'ವೀರಶೈವಾನಂದ ಚಂದ್ರಿಕೆ' 'ಶಿವಾದ್ವೈತ ಪರಿಭಾಷಾ' ಕೇನೋಪನಿಷತ್, ಸಿದ್ಧಾಂತ ಶಿಖೋಪನಿಷತ್ (ಶಾಂಕರೀ ವ್ಯಾಖ್ಯಾ), ಕೈವಲ್ಯೋಪನಿಷತ್ (ಸದಾಶಿವಭಾಷ್ಯ), ಶೃತಿಸಾರ ಭಾಷ್ಯ ಇವುಗಳು ಪ್ರಸಿದ್ಧ ಹಾಗೂ ಪ್ರಮಾಣ ಗ್ರಂಥಗಳಾಗಿವೆ. ಈ ಎಲ್ಲ ಧಾರ್ಮಿಕ ಗ್ರಂಥಗಳನ್ನು ಅಭ್ಯಸಿಸಿದಾಗ ವೀರಶೈವ ಸಿದ್ಧಾಂತದ-ನೆಲೆ-ಹಿನ್ನೆಲೆ ಹಾಗೂ ಅದರ ಬೆಲೆ ಅರಿವಾಗುತ್ತದೆ. ಈ ದಿಶೆಯಲ್ಲಿ ಇನ್ನೂ ಪ್ರಾಮಾಣಿಕ ವಿದ್ವಾಂಸರು ಸಾಕಷ್ಟು ಸಂಶೋಧನೆ ನಡೆಸಬೇಕಾಗಿದೆ.

ಮೂಲ: ಪಂ. ವೇ, ಷಣ್ಮುಖಯ್ಯ ಅಕ್ಕೂರಮಠ,

January 4, 2025

ಸಹಂ ಎಂದರೇನು

ಸಹಂ ಎಂದರೆ ಎಂದರೆ *ಭಾಗ್ಯ ಅಥವಾ ಅದೃಷ್ಟ ಎಂದರ್ಥ* ಕೆಲವೊಮ್ಮೆ ಅದೃಷ್ಟ ಎನ್ನುವುದು ಒಳ್ಲೆಯದಕ್ಕು ಬರಬಹುದು ಕೆಟ್ಟದ್ದಕ್ಕು ಬರಬಹುದು.ಹಾಗಾಗಿ ಸಹಂ ಎಂದರೆ ಒಳ್ಲೆಯ ಭಾಗ್ಯ (ಅದೃಷ್ಟ )ಅಥವಾ ಕೆಟ್ಟಭಾಗ್ಯಗಳನ್ನು (ದುರಾದೃಷ್ಟ ) ಯಾವುದನ್ನು ಬೇಕಾದರು ಸೂಚಿಸುತ್ತದೆ .

ಸಹಂ ಅನ್ನು‌ ವರ್ಷಫಲ‌ ಪದ್ದತಿಯ ವಿಶ್ಲೇಷಣೆಯಲ್ಲಿ ಹೆಚ್ಚು ಬಳಸಲಾಗುತ್ತದೆ‌...ತಾಜಕಿ‌ ಪದ್ದತಿಯಲ್ಲಿಯು ಹೆಚ್ಚು ಪ್ರಚಲಿತವಿದೆ .

ಸಹಂ ಇಂದ ನಮ್ಮ ಜೀವನದಲ್ಲಿ ಪ್ರತಿವರ್ಷ ನಡೆಯುವ ಪ್ರಮುಖ ಘಟನೆಗಳನ್ನು ಕರಾರುವಕ್ಕಾಗಿ ಅರಿಯಬಹುದಾಗಿದೆ ಹಾಗು ಅದು ಖಚಿತವಾಗಿರುತ್ತದೆ

ವರ್ಷಫಲ ಕುಂಡಲಿ ಎನ್ನುವುದು ಒಂದು ರೀತಿ‌ *ಪ್ರೊಗ್ರೇಷನ್ ಚಾರ್ಟ* ಇದ್ದ ಹಾಗೆ .ಅದರ ಪ್ರಕಾರ ನಮ್ಮ ಜಾತಕ‌ದ ಕುಂಡಲಿಯು ಪ್ರತಿವರ್ಷವು ಬದಲಾಗುತ್ತದೆ‌

ಸಹಂ ಪದದ ನಿಜವಾದ ಅರ್ಥ  ಏನೆಂದರೆ - *ನಮ್ಮ ಜೀವನದಲ್ಲಿ ನಡೆಯುವ ಮುಖ್ಯ ಘಟನೆಗಳ ಮೇಲೆ ಬೀಳುವ ಬೆಳಕಿನ‌ ಕಿರಣ* 

ಅಲ್ಲಿಗೆ ಸಹಂಗಳು ನಮ್ಮ ಜೀವನದ  ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ರಾಶಿಚಕ್ರದ ಪ್ರಮುಖ ಅಂಶಗಳಾಗಿವೆ. 

ಉದಾಹರಣೆಗೆ-  “ರಾಜ್ಯ” ಎಂದರೆ  ಹಕ್ಕಿನ‌ ಪ್ರದೇಶ ಹಾಗೆಯೆ  “ರಾಜ್ಯ ಸಹಂ* ಎಂದರೆ ರಾಜ್ಯವನ್ನು ನಾವು ಪಡೆಯಲು ಸಂಬಂಧಿಸಿದ ರಾಶಿಚಕ್ರದ ಒಂದು ಮಹತ್ವದ ಅಂಶವಾಗಿರುತ್ತದೆ. 

ಹಾಗೆಯೆ "ಪರದೇಶ" ಎಂದರೆ ವಿದೇಶಿ ದೇಶ‌ 
  "ಪರದೇಶ ಸಹಂ‌" ಎಂದರೆ  ವಿದೇಶಕ್ಕೆ ಪ್ರಯಾಣಕ್ಕೆ ಹೋಗುವ ರಾಶಿಚಕ್ರದ ಗಮನಾರ್ಹ ಅಂಶವಾಗಿದೆ. 

ಆದರೆ ಇವೆಲ್ಲಾ ಯಾವಾಗ ಸಂಭವಿಸುತ್ತದೆ .ಕಂಡು ಹಿಡಿಯಲು ಹಲವು ಸೂತ್ರವಿದೆ ... 

ಉದಾಹರಣೆಗೆ ಹಗಲಿನಲ್ಲಿ‌ ಹುಟ್ಟಿರುವ ಚಾರ್ಟಗಳಿಗೆ   
*A - B + C   ಎಂದು ಸೂತ್ರವಾದರೆ*

ರಾತ್ರಿಯ ಚಾರ್ಟ್‌ಗಳಿಗಾಗಿ  
*(B - A + C ‌ಎಂದು ಸೂತ್ರವಾಗುತ್ತದೆ* 

ಇದರ ಅರ್ಥವೇನೆಂದರೆ ನಾವು A ಗ್ರಹ‌  B ಗ್ರಹ‌ದ ಮತ್ತು C ನ ರೇಖಾಂಶಗಳನ್ನು ತೆಗೆದುಕೊಂಡು (A - B + C) ಅನ್ನು ಕಂಡುಹಿಡಿಯುತ್ತೇವೆ. 
ಇದು B ಯಿಂದ A ಎಷ್ಟು ದೂರದಲ್ಲಿದೆ ಮತ್ತು ನಂತರ C ನಿಂದ ಅದೇ ದೂರವನ್ನು ತೆಗೆದುಕೊಳ್ಳುವುದು ದೂರವು ಸಮಾನವಾಗಿ ಇಲ್ಲದಿದ್ದರೆ‌  B ನಿಂದ ಪ್ರಾರಂಭಿಸಿ ಮತ್ತು ನಾವು A ಅನ್ನು   ರಾಶಿಚಕ್ರದ ಮುಖಾಂತರ ಹಾದು ಹೋಗಬೇಕು.ಹಾಗು ಮೌಲ್ಯಮಾಪನ ಮಾಡಿದ ಮೌಲ್ಯಕ್ಕೆ 30º ಅನ್ನು ಸೇರಿಸುತ್ತೇವೆ.

ಜೀವನದ ಪ್ರತಿಯೊಂದು ಕೆಲವು  ಮುಖ್ಯ ಅಂಶಗಳಿಗೆ  ಸೂತ್ರ ನೀಡಿದ್ದೇನೆ

1 ಪುಣ್ಯ ಭಾಗ್ಯದ ಫಲಕ್ಕೆ ಪುಣ್ಯ ಸಹಂ -  ಚಂದ್ರ– ರವಿ + ಲಗ್ನ‌ 
2 ವಿದ್ಯೆಗೆ ( Education) - ರವಿ – ಚಂದ್ರ + ಲಗ್ನ
3 ಯಶಸ್ಸಿಗೆ  ‌ಗುರು – ಪುಣ್ಯ ಸಹಂ + ಲಗ್ನ 
4 ಮಿತ್ರ ಸಹಂ ‌- ‌ಗುರು – ಪುಣ್ಯಸ‌ಹಂ  + ಶುಕ್ರ
5 ಮಹಾತ್ಮ ಅತ್ಯತ್ತಮ  - ಪುಣ್ಯ ಸಹಂ – ಕುಜ +ಲಗ್ನ 
6 ಆಸೆಗಳು Desires  ಶನಿ – ಕುಜ‌  +‌ಲಗ್ನ 
7 ಸಮರ್ಥತೆ ability ಕುಜ‌ – ಲಗ್ನಾಧಿಪತಿ + ಲಗ್ನ‌
ಒಂದುವೇಳೆ ಕುಜ‌ ಲಗ್ನದಲ್ಲಿ ಇದ್ದರೆ -  ಗುರು –ಕುಜ‌ + ಲಗ್ನ  
8 ಭಾತೃವಿಗೆ ಗುರು -ಶನಿ + ಲಗ್ನ 
ಹಗಲು ರಾತ್ರಿ ಎರಡಕ್ಕು ಸೇರಿ
9 ಗೌರವ ಮನ್ನಣೆ ಸನ್ಮಾನ ಗುರು - ಚಂದ್ರ + ರವಿ 
10 ಪಿತೃ ತಂದೆ  ಶನಿ - ರವಿ+ ಲಗ್ನ 
11 ರಾಜ್ಯ ಅಧಿಕಾರ  ಶನಿ – ರವಿ  + ಲಗ್ನ‌

ಹೀಗೆ ಈ ಸೂತ್ರಗಳನ್ನು ಅಳವಡಿಸಿ ನೋಡಿದರೆ ಒಳ್ಲೆಯ ಅಥವಾ ಕೆಟ್ಡ ಘಟನೆ ಈ ವರ್ಷ ಯಾವಾಗ ನಡೆಯುತ್ತದೆ ಎನ್ನುವುದು ತಿಳಿಯುತ್ತದೆ.

ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ *ಅಭೀಂದ್ರ* 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻