April 29, 2022

ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ

ಸುಭಾಷಿತಮ್
🔹🔹🔹🔹🔹
*ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ*
*ಮಾತಾಸಮಂ ‌ನಾಸ್ತಿ ಶರೀರಪೋಷಣಂ |* 
*ನಿದ್ರಾಸಮಂ ನಾಸ್ತಿ ಶರೀರತೋಷಣಂ*
*ಚಿಂತಾಸಮಂ ನಾಸ್ತಿ ಶರೀರಶೋಷಣಮ್ ||*

*ವಿದ್ಯಾಸಮಂ‌ ನಾಸ್ತಿ ಶರೀರಭೂಷಣಂ* : ಭೂಷಣ ಅಂದರೆ "ಅಲಂಕಾರ".... ಒಬ್ಬ ವ್ಯಕ್ತಿಗೆ ನಿಜವಾಗಿ ಯಾವುದು "ಅಲಂಕಾರ" ? ಅದಕ್ಕಂದರು ವಿದ್ಯೆಗೆ ಸಮನಾದ ಅಲಂಕಾರ ಮತ್ತೊಂದಿಲ್ಲ...‌ *"ವಾಗ್ಭೂಷಣಂ ಭೂಷಣಂ"* ಈ ಭೂಮಿಯ ಮೇಲೆ ಬದುಕುವ ಜೀವಿಗಳಲ್ಲಿ, ಭಗವಂತ ಮನುಷ್ಯನಿಗೆ ಮಾತ್ರ ಮಾತನಾಡುವ ಬಾಯಿ ಕೊಟ್ಟ... ಮಿಕ್ಕೆಲ್ಲ ಪ್ರಾಣಿಗಳಲ್ಲಿ ಅದು ಕೇವಲ ಆಹಾರ ಸ್ವೀಕರಿಸುವ ಕರ್ಮೇಂದ್ರಿಯವಾಗಿ ಮಾತ್ರ ಉಳಿದಿದೆ... ಅಂತಹ‌ *"ವಾಕ್"* ಮಾತನಾಡುವ ಕಲೆ ಬರುವುದು ವಿದ್ಯೆಯಿಂದ/ಜ್ಞಾನದಿಂದ... ಅದರಿಂದ ಈ ಶರೀರದಲ್ಲಿರುವ ವ್ಯಕ್ತಿ ಗುರುತಿಸಲ್ಪಡುವುದು ವಿದ್ಯೆಯಿಂದ/ಜ್ಞಾನದಿಂದ...

*ಮಾತಾಸಮಂ ‌ನಾಸ್ತಿ ಶರೀರಪೋಷಣಂ* : ನಮ್ಮ ಈ ಶರೀರದ ಪೋಷಣೆ ಆಹಾರದಿಂದ... ತಾಯಿಗೆ ಮಾತ್ರ ಗೊತ್ತು ತನ್ನ ಮಗವಿಗೆ ಹಸಿವಾಗದಂತೆ ನೋಡಿಕೊಂಡು ಮಕ್ಕಳನ್ನು ಬೆಳೆಸುವ ಕಲೆ..‌. ಅದರಿಂದ ಈ ಶರೀರ ಪೋಷಣೆಯಲ್ಲಿ ತಾಯಿಗೆ ಸಮನಾದ ವ್ಯಕ್ತಿ ಮತ್ತೊಬ್ಬರಿಲ್ಲ... 

*ನಿದ್ರಾಸಮಂ ನಾಸ್ತಿ ಶರೀರತೋಷಣಂ* - ಈ ಶರೀರದ ಸೌಖ್ಯಕ್ಕೆ ಮೂಲ ಕಾರಣವೇ *ನಿದ್ರೆ*... ನಮಗಿರುವ ಅವಸ್ಥೆಗಳು ಮೂರು... ಅವೇ *"ಎಚ್ಚರ-ಕನಸು-ನಿದ್ರೆ"* ಹಗಲಿನಲ್ಲಿ ನಾವು ಎಚ್ಚರವಾಗಿರುತ್ತೇವೆ ಶರೀರ ಚಟುವಟಿಕೆಯಿಂದ ಕೂಡಿರುತ್ತದೆ...  ಹಗಲೆಲ್ಲಾ ನಿರಂತರ ದುಡಿದು ದಣಿದ ಶರೀರಕ್ಕೆ ಆಯಾಸವಾಯಿತು. ರಾತ್ರಿಯಾಯಿತು.  ಮನುಷ್ಯ ಮಲಗಿ ನಿದ್ರಿಸಿದ. ಕನಸಿನ ಪ್ರಪಂಚ ತೆರೆದುಕೊಂಡಿತು. ಕನಸಿನಲ್ಲೂ ಸುಖ-ದುಃಖಗಳ ಅನುಭವವಾಯಿತು... ನಂತರ ಪೂರ್ಣನಿದ್ರೆಗೆ ಜಾರಿದ... Deep Sleep / Sound Sleep...  ಗಾಢನಿದ್ರೆಯಲ್ಲಿ ಯಾವ ಎಚ್ಚರವೂ ಇಲ್ಲ *"ಕೇವಲ‌ ಆನಂದ"*.. ಅದೂ ಕೂಡ ದುಃಖದ ಸ್ಪರ್ಶವೇ ಇಲ್ಲದ ಆನಂದ.. ಯಾರಿಗೂ ನಿದ್ರೆಯಲ್ಲಿ ದುಃಖವಾದ ದಾಖಲೆಯೇ ಇಲ್ಲ..‌.  ಅಂತಹ ಆನಂದ ನಿದ್ರೆಯಲ್ಲಿ ಇತ್ತು. Ofcourse, ಆನಂದ ಇತ್ತು ಅಂತ ಗೊತ್ತಾಗುವುದು ನಮಗೆ ಎಚ್ಚರವಾದ ಮೇಲೆಯೇ... *"ಆನಂದವಾಗಿ ನಿದ್ರೆ ಮಾಡಿದೆ ಅಂತೀವಿ"* ...‌ ಅದರಿಂದ ಶರೀರ ತೋಷಣೆಯಲ್ಲಿ ( ಶರೀರ ಸೌಖ್ಯದಲ್ಲಿ) ನಿದ್ರೆಗೆ ಸಮನಾದ ಸಂಗತಿಯೇ ಮತ್ತೊಂದಿಲ್ಲ... Ofcourse *"ಭಾರ್ಯಾ ಸಮಂ ನಾಸ್ತಿ ಶರೀರತೋಷಣಂ"* ಅಂತಲೂ ಇದೆ... ಅಂದರೆ ಹೆಂಡತಿಯಿಂದ ಪಡೆಯುವ ಆನಂದಕ್ಕೆ ಸಮನಾದ ಶರೀರ ತೋಷಣೆ ಮತ್ತೊಂದಿಲ್ಲ ಅಂತ. ಅದೂ ನಿಜವೇ. ಆದರೆ ಅದು ಕೇವಲ ಗೃಹಸ್ಥರಿಗೆ ಸಂಬಂಧಪಟ್ಟ ವಿಷಯ... ಅದು ಒಂದು ಮುಖದ ಸುಖ. ಆ ಸುಖದ ನಂತರವೂ ನಿದ್ರೆಯಿಂದಲೇ ಪೂರ್ಣ ಸುಖ...  In General ನಿದ್ರೆಗೆ ಸಮನಾದ ಶರೀರಸುಖ ಮತ್ತೊಂದಿಲ್ಲ... ‌
*ಚಿಂತಾಸಮಂ ನಾಸ್ತಿ ಶರೀರಶೋಷಣಮ್* - ಭಗವಂತ ಕೊಟ್ಟ ಈ ಶರೀರವನ್ನು ಹಾಳುಮಾಡಿಕೊಳ್ಳಬೇಕಾದರೆ ಚಿಂತೆ (ಕೊರಗು) ಒಂದೇ ಸಾಕು...‌ ಮನುಷ್ಯ ಚಿಂತೆಗೆ ಸಿಲುಕಿದನೆಂದರೆ, ಅವನ ಅವನತಿ‌ಯ ಕಾಲ ಹತ್ತಿರ ಬಂತು ಅಂತಲೇ ಅರ್ಥ...‌ ಚಿಂತೆ ಮಾಡಿ ಮಾಡಿ ಶರೀರ ಕೃಶವಾಗಿ ಹೋಗುತ್ತದೆ... ‌ಚಿಂತೆ ನಮ್ಮನ್ನು ಹೇಗೆ ಹಾಳು ಮಾಡುತ್ತೆ ಅನ್ನುವುದಕ್ಕೆ ಮತ್ತೊಂದು ಸುಭಾಷಿತವೇ ಇದೆ. ಅದು ಹೀಗಿದೆ : 
*ಚಿತಾಯಾಶ್ಚ ಚಿಂತಾಯಾಶ್ಚ*
*ಬಿಂದು ಮಾತ್ರಂ ವಿಶೇಷತಃ |*
*ಚಿತಾ ದಹತಿ ನಿರ್ಜೀವಂ*
*ಚಿಂತಾ ದಹತಿ ಜೀವಿತಮ್ ||*

*ಚಿತೆಗೂ ಚಿಂತೆಗೂ* ಇರುವ ವ್ಯತ್ಯಾಸ ಕೇವಲ ಒಂದು‌ ಸೊನ್ನೆ ಮಾತ್ರ... ಚಿತೆ ಶರೀರವನ್ನು ಸುಟ್ಟರೆ... ಚಿಂತೆ ಬದುಕಿರುವವರ ಶರೀರವನ್ನೇ ಸುಟ್ಟು ಬಿಡುತ್ತದೆ... ‌

ಅದರಿಂದ ಶರೀರ ಶೋಷಣೆಯಲ್ಲಿ ಚಿಂತೆಗೆ ಸಮನಾದ ಸಂಗತಿಯೇ ಇಲ್ಲ ಅನ್ನುತ್ತದೆ ಈ ಸುಭಾಷಿತ... 

No comments:

Post a Comment

If you have any doubts. please let me know...