December 30, 2021

ಕೇಶವನ ರೂಪಗಳನ್ನು ಹೇಗೆ ಗುರುತಿಸುವುದು?

ಕೇಶವನ 24 ರೂಪಗಳನ್ನು ಅವನ ಆಯುಧಗಳಿಂದ ಹೇಗೆ ಗುರುತಿಸುವುದು.
ಕೆಳಗೆ ಕೊಟ್ಟಿರುವ ಅವನ ಆಯುಧಗಳನ್ನು ಮೊದಲು ಹಿಂಬದಿಯ ಬಲಗೈ ನಂತರ ಹಿಂಬದಿಯ ಎಡಗೈ ನಂತರ ಮುಂಬದಿಯ ಎಡಗೈ ನಂತರ ಮುಂಬದಿಯ ಬಲಗೈ ನಲ್ಲಿ ಇದೆಯೆಂದು ತಿಳಿಯಬೇಕು.
 
1)  ಕೇಶವ (ಶಂಕು, ಚಕ್ರ, ಗಧ, ಪದ್ಮ)
2)  ನಾರಾಯಣ (ಪದ್ಮ, ಗಧ, ಚಕ್ರ, ಶಂಕು)
3)  ಮಾಧವ (ಚಕ್ರ, ಶಂಕು, ಪದ್ಮ, ಗಧ)
4)  ಗೋವಿಂದ (ಗಧ, ಪದ್ಮ, ಶಂಕು, ಚಕ್ರ)
5)  ವಿಷ್ಣು (ಪದ್ಮ, ಶಂಕು, ಚಕ್ರ, ಗಧ)
6)  ಮಧುಸೂದನ (ಶಂಕು, ಪದ್ಮ, ಗಧ, ಚಕ್ರ)
7)  ತ್ರಿವಿಕ್ರಮ (ಗಧ, ಚಕ್ರ, ಶಂಕು, ಪದ್ಮ)
8)  ವಾಮನ (ಚಕ್ರ, ಗಧ, ಪದ್ಮ, ಶಂಕು)
9)  ಶ್ರೀಧರ (ಚಕ್ರ, ಗಧ, ಶಂಕು, ಪದ್ಮ)
10) ಹೃಶೀಕೇಶ (ಚಕ್ರ, ಪದ್ಮ, ಶಂಕು, ಗಧ)
11) ಪದ್ಮನಾಭ (ಪದ್ಮ, ಚಕ್ರ, ಗಧ, ಶಂಕು)
12) ದಾಮೋದರ (ಶಂಕು, ಗಧ, ಚಕ್ರ, ಪದ್ಮ)
13) ಸಂಕರ್ಷಣ (ಶಂಕು, ಪದ್ಮ, ಚಕ್ರ, ಗಧ)
14) ವಾಸುದೇವ (ಶಂಕು, ಚಕ್ರ, ಪದ್ಮ,ಗಧ)
15) ಪ್ರದ್ಯುಮ್ನ (ಶಂಕು, ಗಧ, ಪದ್ಮ, ಚಕ್ರ)
16) ಅನಿರುದ್ಧ (ಗಧ, ಶಂಕು, ಪದ್ಮ, ಚಕ್ರ)
17) ಪುರುಷೋತ್ತಮ (ಪದ್ಮ, ಶಂಕು, ಗಧ, ಚಕ್ರ)
18) ಅಧೋಕ್ಷಜ (ಗಧ, ಶಂಕು, ಚಕ್ರ, ಪದ್ಮ)
19) ನರಸಿಂಹ (ಪದ್ಮ, ಗಧ, ಶಂಕು, ಚಕ್ರ)
20) ಅಚ್ಯುತ (ಪದ್ಮ, ಚಕ್ರ, ಶಂಕು, ಗಧ)
21)  ಜನಾರ್ಧನ (ಚಕ್ರ, ಶಂಕು, ಗಧ, ಪದ್ಮ)
22)  ಉಪೇಂದ್ರ (ಗಧ, ಚಕ್ರ, ಪದ್ಮ, ಶಂಕು)
23)  ಹರಿ (ಚಕ್ರ, ಪದ್ಮ, ಗಧ, ಶಂಕು)
24)  ಶ್ರೀಕೃಷ್ಣ (ಗಧ, ಪದ್ಮ, ಚಕ್ರ, ಶಂಕು)
(ಗಾಯಿತ್ರಿ ಮಂತ್ರದ 24 ಅಕ್ಷರಗಳೇ ಈ 24 ಕೇಶವನಾಮಗಳು)
  
ಗಾಯಿತ್ರಿಯ ಮಂತ್ರದ ಪ್ರಕಾರ:
ತತ್ =  ಕೇಶವ -----------ಸ್ಯ = ವಾಸುದೇವ            
ಸ = ನಾರಾಯಣ---------ಧೀ = ಸಂಕರ್ಷಣ
ವಿ = ಮಾಧವ-------------ಮ = ಪ್ರದ್ಯುಮ್ನ
ತು: =   ಗೋವಿಂದ-----------ಹಿ = ಅನಿರುದ್ಧ 
ವ = ವಿಷ್ಣು----------------ಧಿ = ಪುರುಷೋತ್ತಮ
ರೇ = ಮಧುಸೂಧನ------ಯೊ =  ಅಧೋಕ್ಷಜ
ಣಿ = ತ್ರಿವಿಕ್ರಮ------------ಯೋ=   ನಾರಸಿಂಹ
ಯಮ್= ವಾಮನ-------------ನ: = ಅಚ್ಯುತ
ಭರ್ =  ಶ್ರೀಧರ--------------ಪ್ರ  = ಜನಾರ್ಧನ
ಗ: = ಹೃಶೀಕೇಶ-----------ಚೋ =  ಉಪೇಂದ್ರ
ದೇ =   ಪದ್ಮನಾಭ-----------ದ  = ಹರಿ
ವ = ದಾಮೋಧರ--------ಯಾತ್ = ಕೃಷ್ಣ

ತ್ರಿವಿಕ್ರಮ ಹಾಗು ವಾಮನ ರೂಪ ಒಂದೇ ಆಗಿರುವುದರಿಂದ ಉಚ್ಚಾರಣೆ ಮಾಡುವಾಗ ಣ್ಯಿಮ್  ೨೪ ಅಕ್ಷರಗಳು ಬರುವ ಹಾಗೆ ಉಚ್ಚಾರಣೆ ಮಾಡಬೇಕು 
ಭಗವಂತನದು 77ಅಂತರ್ಯಾಮಿ ರೂಪಗಳು, ಅಕ್ಷರಗಳಿಂದ ಕರೆಯಿಸಿಕೊಳ್ಳುವ 51 ನಾಮಾತ್ಮಕ ರೂಪಗಳು, ಹಾಗು ಮೇಲೆ ಹೇಳಿರುವ 24 ರೂಪಾತ್ಮಕ ರೂಪಗಳು ಮತ್ತು ಇವೆಲ್ಲಕ್ಕಿಂತಲೂ, ಲಕ್ಷ್ಮಿಯಲ್ಲಿರುವ಻ ರೂಪ ,ಮ಻ತ್ತು ನಾರಾಯಣನಲ್ಲಿ  ಲಕ್ಷ್ಮಿ ಇರುವ ರೂಪ

December 26, 2021

ವೇದಗಳಲ್ಲಿ ಸತಿಸಹಗಮನ ಪದ್ಧತಿ

ಇಲ್ಲದುದನ್ನು ಇತ್ತೆನ್ನುವ ಸಂಪ್ರದಾಯ.

ನಮ್ಮಲ್ಲೊಂದು ಸಂಪ್ರದಾಯ ಇದೆ ಯಾವುದೇ ವಿಷಯ ಮಂಡಿಸಲಿ, ಅದಕ್ಕೆ ಆಧಾರ ಕೇಳುವುದು. ಇದು ಈ ಆಧಾರ ಕೇಳುವ ಸಂಪ್ರದಾಯ ನಮ್ಮದಲ್ಲ. ಅದು ವಿದೇಶೀ ಆಕ್ರಮಣಕಾರರು ದಯಪಾಲಿಸಿದ ಕೊಡುಗೆ ನಮಗೆ. ಅದಿರಲಿ, ಕೇಳಲಿ ದಾಖಲೆಗಳನ್ನು ಕೊಡಬಹುದಾದುದಕ್ಕೆ ಕೊಡೋಣ. ಆದರೆ ಇಲ್ಲದೇ ಇರುವುದನ್ನು ಇತ್ತು ಮತ್ತು ಇದು ಹೀಗೇ ಎಂದು ಎದೆಯುಬ್ಬಿಸಿ ನಮ್ಮ ಹಿಂದಿನವರ ಆಚರಣೆ ಸಂಪ್ರದಾಯಗಳು ಅರ್ಥಹೀನ ಎನ್ನುವ ಮಟ್ಟಕ್ಕೆ ಇಳಿಯುವುದು ಅಸಹ್ಯ. ಅಂತಹ ಒಂದು ನಿದರ್ಶನ ಇಲ್ಲಿದೆ. 

ಉದೀರ್ಷ್ವ ನಾರ್ಯಭಿ ಜೀವಲೋಕಂ ಗತಾಸುಮೇತಮುಪ ಶೇಷ ಏಹಿ |
ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ || ಇದು ಋಗ್ವೇದದ ಹತ್ತನೇ ಮಂಡಲದ ಹದಿನೆಂಟನೇ ಸೂಕ್ತ. ಇಲ್ಲಿ ಈ ಋಕ್ಕನ್ನು ಗಮನಿಸಿದರೆ ಈಗಿನ ಬೊಗಳೆಗಳೆಲ್ಲಾ ಅರ್ಥವಾಗುತ್ತವೆ. ಇಲ್ಲಿ ಒಬ್ಬ ವ್ಯಕ್ತಿ ಮರಣ ಹೊಂದಿರುತ್ತಾನೆ. ಮರಣ ಹೊಂದಿದ ವ್ಯಕ್ತಿಯ ಶವವನ್ನು ಬಲವಾಗಿ ತಬ್ಬಿಕೊಂಡು ತಾನೂ ಸಹಗಮನ ಮಾಡುತ್ತೇನೆಂದು ಬಯಸುತ್ತಾಳೆ. ಆಗ ಅವಳ ಮನೆಯ ಹಿರಿಯರು ಅವಳನ್ನು ತಡೆದು. ನೀನು ಅವನೊಡನೆ ಹೋಗುವುದರಿಂದ ಆತನಿಗೆ ಪುನಃ ಜೀವ ಬರುವುದಿಲ್ಲ ಒಮ್ಮೆ ಹೋದ ಪ್ರಾಣ ಪುನಃ ಬರುವುದಿಲ್ಲ. ನೀನು ನಿನ್ನ ದುಃಖವನ್ನು ಸಹಿಸಿಕೊಂಡು ಮನೆಗೆ ಬಾ ಎಂದು ವಿನಂತಿಸಲಾಗಿದೆ. "ಉದೀರ್ಷ್ವ ನಾರ್ಯಭಿ ಜೀವಲೋಕಂ ಗತಾಸುಮೇತಮುಪ ಶೇಷ ಏಹಿ" ಎನ್ನುವಲ್ಲಿ ಮೃತ ಶರೀರದಲ್ಲಿ ಏನಿದೆ ? ಪ್ರಾಣ ಹೊರಟಮೇಲೆ ಅದರಲ್ಲಿ ಏನೂ ಉಳಿಯುವುದಿಲ್ಲ. ಪ್ರಾಣವು ಈ ದೇಹದಿಂದ ಬೇರೆ ಲೋಕಕ್ಕೆ ಹೋಗಿಯಾಗಿದೆ, ನಿನ್ನ ಭಾವನೆಗಳು ಮೃತ ಶರೀರಕ್ಕೆ ಅರ್ಥವಾಗುವುದಿಲ್ಲ. "ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ ಪತ್ಯುರ್ಜನಿತ್ವಮಭಿ ಸಂ ಬಭೂಥ" ಜೀವದಿಂದಿರುವ ನಿನ್ನ ಕುಟುಂಬದವರು ಬಾಂಧವರು ಇರುವ ಕಡೆ ಬಂದು ಬಿಡು. ಮೃತ ಶರೀರದಿಂದ ಎದ್ದು ಬಾ ಎಂದು ಹೇಳುವುದು ಕಂಡುಬರುತ್ತದೆ. "ಹಸ್ತಗ್ರಾಭಸ್ಯ ದಿಧಿಷೋಸ್ತವೇದಂ" ನಿನ್ನ ವಿವಾಹಕಾಲದಲ್ಲಿ ಮನೆಯನ್ನು ಬೆಳಗುವ ಮಕ್ಕಳನ್ನು ಆಶಿಸಲಾಗಿದೆ. ಆದರೆ ಈಗ ಅದ್ಯಾವುದಕ್ಕೂ ದುಃಖಿಸಬೇಡ ಎನ್ನುವುದು ಈ ಋಕ್ಕಿನ ಆಶಯ. ಇಲ್ಲಿ ನಾವು ಗಮನಿಸಬೇಕಾದ ಅಂಶ ಎಂದರೆ ಬಲವಂತದ ಸತಿ ಗಮನ ಇರಲೇ ಇಲ್ಲ. ತನ್ನ ಪತಿಯ ಮೇಲಿನ ಪ್ರೀತಿಯಿಂದ ತಾನೂ ಸಾಯಲು ಉದ್ಯುಕ್ತಳಾಗುತ್ತಿದ್ದಳು. ಆದರೆ ಹತ್ತನೇ ಶತಮಾನದ ನಂತರ ಪರಕೀಯ ಆಕ್ರಮಣ ಜಾಸ್ತಿಯಾದಾಗ ಅಲ್ಲಿಂದ ಬಂದ ಕೊಡುಗೆ ಅಷ್ಟೇ. ಹಾಗೆ ನೋಡಿದರೆ ಸತಿ ಸಹಗಮನಕ್ಕಿಂತಲೂ ಕ್ರೂರವಾದ ಇನ್ನೊಂದು ಪದ್ಧತಿ ಇತ್ತು. ಅದನ್ನು ನಮ್ಮ ಯಾವ ಇತಿಹಾಸಕಾರನೂ ಹೇಳುವುದಿಲ್ಲ. ಅದರ ಕುರಿತು ಇಲ್ಲಿ ಬೇಡವೇ ಬೇಡ. ಎಲ್ಲೂ ಇಲ್ಲದುದು ನಮ್ಮಲ್ಲಿನ ಪಿಡುಗು ಎಂದು ಬೊಬ್ಬೆ ಹೊಡೆಯುವವರು ಈ ದೃಷ್ಟಿಯಲ್ಲೂ ಒಮ್ಮೆ ಗಮನಿಸಬೇಕಲ್ಲವೆ. ಇಲ್ಲದುದನ್ನು ಇತ್ತು ಎನ್ನುವವರು ಇರುವುದನ್ನು ವಿಕೃತವಾಗಿ ಬಣ್ಣಿಸುವವರು ಒಮ್ಮೆ ಆಲೋಚಿಸಬೇಕು. 

#ಇರುವುದೆಲ್ಲವ_ಬಿಟ್ಟು 
ಸದ್ಯೋಜಾತರು

December 23, 2021

ಅಪಾಮಾರ್ಗ

ತೈತ್ತಿರೀಯ ಬ್ರಾಹ್ಮಣದಲ್ಲಿ ಒಂದು ಸನ್ನಿವೇಶ ಬರುತ್ತದೆ. ಇಂದ್ರ ವೃತ್ರಾಸುರನನ್ನು ಸಂಹರಿಸಿದ ನಂತರ ಬರುವ ಘಟನೆ ಇದು. ನಮುಚಿ ಎನ್ನುವ ಅಸುರನೊಬ್ಬ ಪ್ರಬಲನಾಗಿದ್ದ. ಈತ ಪದೇ ಪದೇ ಇಂದ್ರನಿಗೆ ಉಪಟಳ ಕೊಡುವುದು, ಯುದ್ಧಕ್ಕೆ ಬರುವುದನ್ನೇ ತನ್ನ ಕಾಯಕ ಮಾಡಿಕೊಂಡಿದ್ದ. "ಇಂದ್ರೇಣ ಸಹ ಯುದ್ಧಂ ನ ಮುಂಚತೀತಿ ನಮುಚಿಃ" ಅಂದರೆ ಇಂದ್ರನೊಡನೆ ಈತನ ಯುದ್ಧ ಕೊನೆಯಾಗುತ್ತಲೇ ಇರಲಿಲ್ಲವಂತೆ. ಇಂದ್ರನ ಯಾವ ವಿಧವಾದ ಆಯುಧಗಳಿಗೂ ಈತ ಜಗ್ಗುತ್ತಿರಲಿಲ್ಲ.
ಇಂದ್ರ ಆಲೋಚಿಸಿದ, ಈತ ನನ್ನ ಯಾವುದೇ ಅಸ್ತ್ರಕ್ಕೂ ಮಣಿಯುವವನಲ್ಲ ಈತನನ್ನು ನನ್ನ ಶರೀರ ಬಲದಿಂದಲೇ ಬಗ್ಗಿಸ ಬೇಕೆಂದು ಮಲ್ಲ ಯುದ್ಧವನ್ನು ಆರಂಭಿಸಿದ. ಈಗ ನಮುಚಿಯ ಹಿಡಿತವೇ ಬಲವಾಗುತ್ತಾ ಸಾಗಿತು ನಮುಚಿಯಿಂದ ಬಿಡಿಸಿಕೊಳ್ಳಲು ಅಸಾಧ್ಯವಾಗುತ್ತಾ ಬಂತು. ಆಗ ನಮುಚಿಯು ಇಂದ್ರನನ್ನು ಕುರಿತು ತಾನು ಹೇಳಿದಂತೆ ಕೇಳುವುದಾದರೆ ಮಾತ್ರ ಬಿಡುವೆನು ಎಂದು ಹೇಳುತ್ತಾನೆ. ಅದಕ್ಕೆ ಇಂದ್ರನು ಒಪ್ಪಿಕೊಂಡು ಅವನ ಹಿಡಿತದಿಂದ ಬಿಡುವಂತೆ ಹೇಳುತ್ತಾನೆ. ಆಗ ಇಬ್ಬರಲ್ಲೂ ಒಂದು ಒಪ್ಪಂದವಾಗುತ್ತದೆ. ಇಂದ್ರ ! ನೀನು ಪುನಃ ನನ್ನೊಂದಿಗೆ ಯಾವುದಾದರೂ ಉಪಾಯ ಹೂಡಿ ನನ್ನನ್ನು ಕೊಲ್ಲಬೇಕೆಂದು ಬರಬಹುದು ಆದರೆ ನನ್ನನ್ನು ಕೊಲ್ಲಬೇಕೆನ್ನುವ ಉದ್ದೇಶ ಈಡೇರಬೇಕಿದ್ದರೆ ನಿನ್ನ ಆಯುಧ ಹಸಿಯಾಗಿರಕೂಡದು ಒಣಗಿರಕೂಡದು. ಹಗಲಿನಲ್ಲಿಯೂ ಹಾಗೂ ರಾತ್ರಿಯಲ್ಲಿಯೂ ನನ್ನನ್ನು ಕೊಲ್ಲಕೂಡದು. ಈ ನಿಯಮಗಳಿಗೆ ನೀನು ಒಪ್ಪುವೆಯಾದರೆ ಬಿಡುತ್ತೇನೆ ಎನ್ನುತ್ತಾನೆ. ಕೂಡಲೇ ಇಂದ್ರ ಒಪ್ಪಿಕೊಳ್ಳುತ್ತಾನೆ. ತಕ್ಷಣ ನಮುಚಿ ಇಂದ್ರನನ್ನು ಬಿಡುತ್ತಾನೆ.
ಹೀಗೇ ಕೆಲವು ಸಮಯ ಕಳೆಯುತ್ತದೆ. ಇಂದ್ರನಿಗೆ ಅವನನ್ನು ಹೇಗೆ ಮುಗಿಸಬೇಕು ಎನ್ನುವ ಚಿಂತೆಯಾಗುತ್ತದೆ. ಹೀಗೇ ಆಲೋಚಿಸುತ್ತಿರುವಾಗ ಇಂದ್ರನಿಗೆ ತನ್ನೆದುರಿಗೆ ಇದ್ದ ಸಮುದ್ರದ ಅಲೆ ಕಾಣಿಸುತ್ತದೆ. ತಟ್ಟನೆ ಆಲೋಚಿಸುತ್ತಾನೆ. ಇದೇ ಸೂಕ್ತ. ಸಮುದ್ರದ ನೊರೆ ಹಸಿಯೂ ಅಲ್ಲ ಒಣಗಿಯೂ ಇಲ್ಲ ಎಂದು ನಿರ್ಧರಿಸಿ ಅದನ್ನೇ ಆಯುಧವನ್ನಾಗಿ ಪರಿವರ್ತಿಸಿಕೊಂಡು ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಉಷಃಕಾಲ ಹೇಗೂ ಸೂರ್ಯೋದಯವೂ ಆಗುವುದಿಲ್ಲ. ರಾತ್ರಿಯಂತೂ ಅಲ್ಲ. ಆದುದರಿಂದ ಅಂತಹ ಕಾಲದಲ್ಲಿ ನಮುಚಿಯನ್ನು ಕೊಲ್ಲಲು ಹೋಗುತ್ತಾನೆ. ನಮುಚಿಯನ್ನು ಆಯುಧದಿಂದ ಕತ್ತರಿಸುತ್ತಾನೆ. ಆಗ ನಮುಚಿ ಸಾಯದೇ ಇಂದ್ರನಿಗೆ ಮಿತ್ರದ್ರೋಹೀ ಎಂದು ಅಟ್ಟಿಸಿಕೊಂಡು ಬರುತ್ತಾನೆ. ಇಂದ್ರ ಭಯಗ್ರಸ್ತನಾಗುತ್ತಾನೆ. ಇಂದ್ರ ಆಗ ಅಪಾಮಾರ್ಗವೆನ್ನುವ ಸಸ್ಯವನ್ನು ಸೃಷ್ಟಿಸಿ ಅದರ ಸಮಿತ್ತಿನಿಂದಲೇ ತನ್ನ ವೀರ್ಯವೃದ್ಧಿಗಾಗಿ ಹೋಮಮಾಡಿ ಬಲ ಹೆಚ್ಚಿಸಿಕೊಂಡು ನಮುಚಿಯನ್ನು ಸಂಹರಿಸುತ್ತಾನೆ. ಇಂದಿಗೂ ವಿರೋಧಿಗಳ ಉಪಟಳದಿಂದ ಪಾರಾಗುವ ಸಲುವಾಗಿ ಅಪಾಮಾರ್ಗದಿಂದ ಸಮಿತ್ತುಗಳನ್ನು ತಯಾರಿಸಿ ಹೋಮಮಾಡುತ್ತಾರೆ. ಈ ನಮುಚಿ ದಸ್ಯುವಾಗಿದ್ದ.
#ಅಪಾಮಾರ್ಗ_ನಮುಚಿ
ಸದ್ಯೋಜಾತ
2

December 22, 2021

ಸಪ್ತ ಋಷಿಗಳ ರಾಜ್ಯಾಡಳಿತ

 ಈ ಭೂಭಾಗವನ್ನು ಯಾರ್ಯಾರೋ ಆಳಿದ್ದಾರೆ ಆದರೆ ಪಾವಿತ್ರ್ಯವನ್ನು ಉಳಿಸಿಕೊಂಡ ಋಷಿಗಳೂ ಆಳಿದ್ದರು, ರಾಜನಾಗಿದ್ದು ಋಷಿಚರ್ಯೆ ಹೊಂದಿದವರೂ ಆಳಿದ್ದರು. ಅವರೇ ರಾಜರ್ಷಿ ಎನ್ನಿಸಿಕೊಂಡಿದ್ದರು. ಅದರ ಕುರಿತು ಚಿಕ್ಕದಾಗಿ ಒಂದಷ್ಟು . . . 

ಮಮದ್ವಿತಾ ಇದು ಋಗ್ವೇದದ ನಾಲ್ಕನೇ ಮಂಡಲದ 42 ನೇ ಸೂಕ್ತ. ಪುರುಕುತ್ಸ ಎನ್ನುವವನ ಮಗನಾದ ತ್ರಸದಸ್ಯು ಎನ್ನುವವನು ಈ ಸೂಕ್ತದ ದ್ರಷ್ಟಾರ. ಈತ ಕೇವಲ ರಾಜನಾಗಿರಲಿಲ್ಲ ರಾಜರ್ಷಿ ಎನ್ನಿಸಿಕೊಂಡಿದ್ದ. ತನ್ನನ್ನೇ ಸ್ತುತಿಸಿಕೊಂಡ ಆರು ಋಕ್ಕಿಗಳಿ ಆತ್ಮವೇ ದೇವತೆ ಮಿಕ್ಕವು ಇಂದ್ರಾವರುಣ ಮಮದ್ವಿತಾ ರಾಷ್ಟ್ರಂ ಕ್ಷತ್ರಿಯಸ್ಯ ಎಂದು ಆರಂಭವಾಗುವ ಮೊದಲ ಋಕ್ಕಿನಲ್ಲಿ. ನಾನು ಋಷಿಯಾಗಿದ್ದೇನೆ ನನ್ನ ಈ ರಾಷ್ಟ್ರದಲ್ಲಿ ಎರಡು ವಿಧದ ಆಡಳಿತಗಳಿವೆ. ಒಂದು ಈ ಭೂಮಿಯ ಆಡಳಿತವಾದರೆ ಇನ್ನೊಂದು ಸ್ವರ್ಗದ್ದು ಎಂದು ಹೇಳುತ್ತಾನೆ. ನಾನೇ ವರುಣನಾಗಿದ್ದು, ಜನರಿಗೆ ಅತೀ ಸಮೀಪಸ್ಥನಾಗಿದ್ದೇನೆ ಎನ್ನುವ ಈತ ನಾನು ಮಾಡಿದ ಕರ್ಮವನ್ನು ದೇವತೆಗಳೆಲ್ಲಾ ಸ್ವೀಕರಿಸುತ್ತಾರೆ ಎನ್ನುತ್ತಾ ತನ್ನ ಪ್ರಭುತ್ವವನ್ನು ಅತ್ಯಂತ ಹೆಮ್ಮೆಯಿಂದ ಹೇಳುವುದು ಸಿಗುತ್ತದೆ. ಇದನ್ನೇ ಕ್ಷಿತಿಸ್ವರ್ಗಭೇದೇನ ಎನ್ನುವುದು ಸಾಯಣಾಚಾರ್ಯರು. ಅಂದರೆ ಸ್ವರ್ಗಕ್ಕೂ ಭೂಮಿಗೂ ಎನ್ನುವ ಅರ್ಥವಾದರೂ ತ್ರಸದಸ್ಯು ಸ್ವರ್ಗಾಧಿಕಾರ ಹಿಡಿದಿದ್ದನೇ ಎನ್ನುವ ಸಂಶಯ ಕಾಡುತ್ತದೆ. ಆದರೆ ಸ್ವರ್ಗ ಸದೃಶ ಆಡಳಿತವನ್ನಂತೂ ಕೊಟ್ಟಿರಬಹುದು. ಇನ್ನು ಅದೇ ಮಂಡಲದ ೩೮ನೇ ಸೂಕ್ತದ ದ್ರಷ್ಟಾರ ವಾಮದೇವ ಮಹರ್ಷಿ. ದ್ಯಾವಾ ಪೃಥಿವಿ ಮತ್ತು ದಧಿಕ್ರಾವನ್ನು ಕುರಿತಾಗಿ ಸ್ತುತಿಸುವ ಈ ಸೂಕ್ತದಲ್ಲಿ ತ್ರಸದಸ್ಯುವಿನ ತಂದೆಯ ವಿಷಯ ಸಿಗುತ್ತದೆ. ಈ ತ್ರಸದಸ್ಯುವಿನ ತಂದೆ ಪುರುಕುತ್ಸ, ತಾಯಿ ಪುರುಕುತ್ಸಾನಿ. ಈ ಪುರುಕುತ್ಸ ಪೂರು ಎನ್ನುವ ವಂಶೀಯನಾಗಿದ್ದ ಎಂದು ಅಲ್ಲಲ್ಲಿ ಹೇಳಲ್ಪಟ್ಟಿದೆ.

ಪುರುಕುತ್ಸನ ಸಮಕಾಲೀನನಾಗಿ ಸುದಾಸ ಎನ್ನುವವನಿದ್ದ. ಈ ಪುರುಕುತ್ಸ ರಾಜನೂ ಹೌದು ಋಷಿಯೂ ಸಹ ಹೌದು. ಋಗ್ವೇದದ ಒಂದನೇ ಮಂಡಲದ 63ನೇ ಸೂಕ್ತದಲ್ಲಿ ಬರುವ ಯತ್ಸುದಾಸೇ ವೃಥ ವರ್ಗಂಹೋ ರಾಜನ್ ಎನ್ನುವುದನ್ನು ಗಮನಿಸಿದರೆ ಸುದಾಸ ಮತ್ತು ಪುರುಕುತ್ಸ ಸಮಕಾಲೀನರು. ಇಂದ್ರನು ಯುದ್ಧಗಳಲ್ಲಿ ಇವರಿಬ್ಬರಿಗೂ ಸಹಾಯ ಮಾಡಿದ ಎನ್ನುವುದು ಈ ಋಕ್ಕಿನಿಂದ ತಿಳಿಯುತ್ತದೆ. ಆದರೆ ಇವರಿಬ್ಬರಲ್ಲಿಯೂ ಸಹ ಆಗಾಗ ಯುದ್ಧ ನಡೆಯುತ್ತಾ ಇರುತ್ತದೆ.

ಅಸ್ಮಾಕಮತ್ರ ಪಿತರಸ್ತ ಆಸನ್ ಸಪ್ತ ಋಷಯೋ ದೌರ್ಗಹೇ ಬಧ್ಯಮಾನೇ ಎನ್ನುವುದು ಋಗ್ವೇದದ 4ನೇ ಮಂಡಲದ 42ನೇ ಸೂಕ್ತದಲ್ಲಿ ಬರುತ್ತ್ತದೆ. ಪುರುಕುತ್ಸನು ಬಂಧಿತನಾದುದರಿಂದ ಅರಾಜಕವಾದ ಈ ದೇಶದಲ್ಲಿ ಪ್ರಸಿದ್ಧರಾದ ಸಪ್ತ ಋಷಿಗಳೂ ಸಹ ಪಾಲಕರಾದರು, ಪುರುಕುತ್ಸನು ಬಂಧಿತನಾದಾಗ ಅದೇ ಋಷಿಗಳು ಇಂದ್ರಾವರುಣರ ಅನುಗ್ರಹದಿಂದ ಪುರುಕುತ್ಸನ ಪತ್ನಿಯಲ್ಲಿ ಇಂದ್ರನಿಗೆ ಸಮಾನನಾದ ಶತ್ರುನಾಶಕನೂ, ದೇವತೆಗಳ ಸಾನ್ನಿಧ್ಯವುಳ್ಳವನೂ ಆದ ತ್ರಸದಸ್ಯವು ಜನಿಸುವಂತೆ ಮಾಡಿದರು. ಎನ್ನುವಲ್ಲಿ ಗಮನಿಸ ಬೇಕಾದ್ದು ಈ ದೇಶ ಸಪ್ತರ್ಷಿಗಳಿಂದ ಸಹ ಆಳಲ್ಪಟ್ಟಿತ್ತು ಎನ್ನುವುದು. 

ಈ ಋಕ್ಕಿನಲ್ಲಿ ಈ ಸೂಕ್ತದ್ರಷ್ಟಾರನಾದ ತ್ರಿಸದಸ್ಯುವು ಹೇಗೆ ಜನಿಸಿದ ಎನ್ನುವುದು ಹೇಳಲ್ಪಟ್ಟಿದೆ. ತ್ರಸದಸ್ಯುವಿನ ಹುಟ್ಟಿನ ಕುರಿತಾಗಿ ಭಾಷ್ಯಕಾರರು ಒಂದು ಸನ್ನಿವೇಶ ಹೇಳುತ್ತಾರೆ.
ಪುರುಕುತ್ಸಸ್ಯ ಮಹಿಷಿ ದೌರ್ಗಹೇ ಬಂಧನಸ್ಥಿತೇ ಎನ್ನುವಲ್ಲಿ ಪ್ರಾಚೀನ ಕಾಲದಲ್ಲಿ ದುರ್ಗಹಪುತ್ರನಾದ ಪುರುಕುತ್ಸನೆಂಬ ರಾಜನು ಯುದ್ಧ ಮಾಡುತ್ತಿರುವಾಗ ಶತ್ರುಗಳಿಂದ ಸೆರೆಹಿಡಿಯಲ್ಪಟ್ಟು ಬಂಧನಕ್ಕೊಳಗಾಗುತ್ತಾನೆ. ಆಗ ಪುರುಕುತ್ಸನನ್ನು ಸೆರೆಯಿಂದ ಬಿಡಿಸಲು ಸಾಧ್ಯವಾಗುವುದಿಲ್ಲ. ಪುರುಕುತ್ಸ ರಾಜನಿಗೆ ಮಕ್ಕಳಿಲ್ಲದ್ದರಿಂದ ಅವನ ಮಡದಿ ಪುರುಕುತ್ಸಾನೀ ಎಂಬ ರಾಜ ಪತ್ನಿಯು ತಮ್ಮ ರಾಜ್ಯವು ಅರಾಜಕವಾಗಿ ನಾಯಕನಿಲ್ಲದೇ ಶತ್ರುಗಳ ಪಾಲಾಗುತ್ತದೆ ಎಂದು ಚಿಂತಿಸುತ್ತಾಳೆ. ಆ ಸಮಯದಲ್ಲಿ ಅಲ್ಲಿಗೆ ಯಾವುದೋ ಕಾರಣಕ್ಕಾಗಿ ಸಪ್ತ ಋಷಿಗಳು ಬರುತ್ತಾರೆ. ಪುರುಕುತ್ಸಾನಿಯು ಅವರನ್ನು ಆದರಾತಿಥ್ಯಗಳಿಂದ ಸತ್ಕರಿಸಿ ಪೂಜಿಸಿ ತನ್ನ ಮತ್ತು ತನ್ನ ಗಂಡನಿಗೊದಗಿದ ದುರವಸ್ಥೆಯ ಕಥೆಯನ್ನು ಹೇಳಿಕೊಳ್ಳುತ್ತಾಳೆ. ಆಗ ಸಪ್ತ ಋಷಿಗಳು ಆವಳ ಪೂಜಾ ಸತ್ಕಾರಗಳಿಂದ ಸಂತುಷ್ಟರಾಗಿ ಭಕ್ತಿಯಿಂದ ಇಂದ್ರಾವರುಣರನ್ನು ಸ್ತುತಿಸು ಎಂದು ಉಪದೇಶಮಾಡುತ್ತಾರೆ. ಅದರಂತೆ ಪುರುಕುತ್ಸಾನಿಯು ಇಂದ್ರಾವರುಣರನ್ನು ಬೇಡಿಕೊಳ್ಳುತ್ತಾಳೆ. ಅವರಿಂದ ತ್ರಸದಸ್ಯು ಎನ್ನುವ ಪುತ್ರನು ಹುಟ್ಟುತ್ತಾನೆ. ಇದು ಆತನ ಜನ್ಮ ವೃತ್ತಾಂತವಾದರೆ, ತನ್ನ ಜನ್ಮ ವೃತ್ತಾಂತವನ್ನು ತನ್ನ ತಾಯಿಯಿಂದ ತಿಳಿದು ತ್ರಸದಸ್ಯುವು ಈ ಅಸ್ಮಾಕಮತ್ರ ಪಿತರಸ್ತ ಎನ್ನುವ ಋಕ್ಕೂ ಮತ್ತು ಮುಂದಿನ ಪುರುಕುತ್ಸಾನೀ ಹಿ ವಾಮದಾಶದ್ದವ್ಯೇಭಿರಿಂದ್ರಾ ವರುಣಾ ನಮೋಭಿಃ ಎನ್ನುವಲ್ಲಿ ಸಹ ಹೇಳಿಕೊಂಡಿದ್ದಾನೆ. ಇಲ್ಲಿ ಗಮನಿಸಬೇಕಾದ ಹಲವು ಅಂಶಗಳಲ್ಲಿ ಪುರುಕುತ್ಸನೂ ಸಹ ದುರ್ಗಹ ಮತ್ತು ಗಿರಿಕ್ಷಿತ್ ಎನ್ನುವ ವಂಶದವನು. ಇನ್ನು ೮ನೇ ಮಂಡಲದ 22ನೇ ಸೂಕ್ತದಲ್ಲಿ ಯೇಭಿಸ್ತೃಕ್ಷಿಂ ಎಂದು ಬಂದಿರುವುದರಿಂದ ತೃಕ್ಷಿ ಅಥವಾ ತೃಕ್ಷ, ತಾರ್ಕ್ಷ್ಯ ಎನ್ನುವವನೂ ಸಹ ಇದೇ ವಂಶದಲ್ಲಿದ್ದ ಎನ್ನುವುದು ಸಹ ತಿಳಿಯುತ್ತದೆ. ಇನ್ನು 6ನೇ ಮಂಡಲದ 46ನೇ ಸೂಕ್ತದಲ್ಲಿ ಯತ್ಪೂರೌ ಕಚ್ಚ ವೃಷ್ಣ್ಯಂ ಎನ್ನುವಲ್ಲಿ ಪುರುಕುತ್ಸ ಪೂರು ಎನ್ನುವ ವಂಶದವನು ಎಂದೂ ಸಹ ಹೇಳಿದೆ. ಈ ಪೂರು ಎನ್ನುವ ಜನಾಂಗ ನೆಲೆಸಿದ್ದು ಸರಸ್ವತೀ ನದೀಯ ತೀರದಲ್ಲಿ ಎಂದು ವಶಿಷ್ಠ ಮಹರ್ಷಿಯ ಪ್ರ ಕ್ಷೋದಸಾ ಎನ್ನುವ 7ನೇ ಮಂಡಲದ 95 ಮತ್ತು ವಶಿಷ್ಠ ಮಹರ್ಷಿಯ ಬೃಹದುಗಾಯಿಷೇ ಎನ್ನುವ 96ನೇ ಸೂಕ್ತದಿಂದ ತಿಳಿದುಬರುತ್ತದೆ. ಮಿತ್ರಾತಿಥಿಯ ಮಗನಾದ ಕುರುಶ್ರವಣನೆನ್ನುವ ಕುರುವಂಶಸ್ಥ ರಾಜನೂ ಸಹ ಇದೇ ತ್ರಸದಸ್ಯುವಿನ ವಂಶಸ್ಥ ಎನ್ನುವುದು ಹತ್ತನೇ ಮಂಡಲದಲ್ಲಿ ಕವಷ ಐಲೂಷನ 33ನೇ ಸೂಕ್ತದ 4 ಮತ್ತು 5ನೇ ಋಕ್ಕಿನಲ್ಲಿ ಕುರುಶ್ರವಣ ಮತ್ತು ತ್ರಸದಸ್ಯುವನ್ನು ದೇವತೆಯನ್ನಾಗಿ ಸ್ತುತಿಸುವುದು ತಿಳಿಯುತ್ತದೆ. 

ಇಲ್ಲಿ ನಾನು ಗಮನಿಸ ಹೊರಟದ್ದು ಈ ದೇಶವನ್ನು ಕೇವಲ ಕ್ಷತ್ರಿಯ ವಂಶದವರು ಆಳಿದ್ದಿಲ್ಲ, ಇಲ್ಲಿ ಋಷಿಪರಂಪರೆಯಿಂದ ರಾಜಕೀಯ ಮತ್ತು ರಾಜಕಾರಣ ಹರಿದು ಬಂದಿದೆ ಎನ್ನುವುದಕ್ಕೆ ಸಿಗುವ ನಿದರ್ಶನಗಳಲ್ಲಿ ಇದೇ ಸಪ್ತರ್ಷಿಗಳು ಪುರುಕುತ್ಸನ ಸಾಮ್ರಾಜ್ಯವನ್ನು ಆಳಿದ ಉಲ್ಲೇಖವನ್ನು. 

ಸದ್ಯೋಜಾತರು

December 20, 2021

ಸಂಸ್ಕೃತ ಕಲಿಯೋಣ


ಬಂಧೂನಾಂ ನಾಮಾನಿ – ಸಂಬಂಧಿಕರ ಹೆಸರುಗಳು

माता – ಮಾತಾ – ತಾಯಿ
पिता – ಪಿತಾ – ತಂದೆ
मातामही – ಮಾತಾಮಹೀ – ತಾಯಿಯ ತಾಯಿ (ಅಜ್ಜಿ)
पितामहः – ಪಿತಾಮಹಃ – ತಂದೆಯ ತಂದೆ  (ಅಜ್ಜ)
पितामही – ಪಿತಾಮಹೀ – ತಂದೆಯ ತಾಯಿ (ಅಜ್ಜಿ)
पतिः – ಪತಿಃ – ಪತಿ
पत्नी – ಪತ್ನೀ – ಪತ್ನಿ
पुत्री – ಪುತ್ರೀ – ಪುತ್ರಿ
पुत्रः – ಪುತ್ರಃ – ಪುತ್ರ
ज्येष्ठभ्राता – ಜ್ಯೇಷ್ಠಭ್ರಾತಾ – ಅಣ್ಣ
कनिष्ठभ्राता – ಕನಿಷ್ಠಭ್ರಾತಾ – ತಮ್ಮ
ज्येष्ठभगिनी – ಜ್ಯೇಷ್ಠಭಗಿನೀ – ಅಕ್ಕ
कनिष्ठभगिनी – ಕನಿಷ್ಠಭಗಿನೀ – ತಂಗಿ
मातुलः – ಮಾತುಲಃ – ಮಾವ (ತಾಯಿಯ ಸಹೋದರ)
पितृव्यः – ಪಿತೃವ್ಯಃ – ಚಿಕ್ಕಪ್ಪ (ತಂದೆಯ ಸಹೋದರ)
मातुलानी – ಮಾತುಲಾನೀ – ಅತ್ತೆ (ತಾಯಿಯ ಸಹೋದರನ ಹೆಂಡತಿ)
पितृव्या – ಚಿಕ್ಕಮ್ಮ (ತಂದೆಯ ಸಹೋದರನ ಹೆಂಡತಿ)
श्वशुरः – ಶ್ವಶುರಃ – ಮಾವ (ಪತ್ನಿಯ ತಂದೆ)
श्वश्रूः – ಶ್ವಶ್ರೂಃ – ಅತ್ತೆ (ಪತ್ನಿಯ ತಾಯಿ)
श्यालः – ಶ್ಯಾಲಃ – ಬಾಮೈದ
श्याली – ಶ್ಯಾಲೀ – ಬಾಮೈದನ ಪತ್ನಿ
देवरः – ದೇವರಃ – ಪತಿಯ ಸಹೋದರ
ननान्दा – ನನಂದಾ – ಪತಿಯ ಸಹೋದರಿ
पौत्रः – ಪೌತ್ರಃ – ಮೊಮ್ಮಗ
पौत्री – ಪೌತ್ರೀ – ಮೊಮ್ಮಗಳು
दौहित्रः – ದೌಹಿತ್ರಃ – ಮಗಳ ಮಗ
दौहित्री – ದೌಹಿತ್ರೀ – ಮಗಳ ಮಗಳು
मित्रम् – ಮಿತ್ರಮ್ – ಗೆಳೆಯ
सखी – ಸಖೀ – ಗೆಳತಿ


ಗೃಹೋಪಕರಣಾನಾಂ ನಾಮಾನಿ

आसन्दः – ಆಸಂದಃ – ಖುರ್ಚಿ
तालः – ತಾಲಃ – ಬೀಗ
दण्डदीपः – ದಂಡದೀಪಃ – ಟ್ಯೂಬ್ ಲೈಟ್
समीरकः – ಸಮೀರಕಃ – ಇಸ್ತ್ರಿಪೆಟ್ಟಿಗೆ
स्यूतः – ಸ್ಯೂತಃ – ಬ್ಯಾಗ್
अग्निपेटिका – ಅಗ್ನಿಪೇಟಿಕಾ – ಕಡ್ದಿಪೆಟ್ಟಿಗೆ
करदीपः – ಕರದೀಪಃ – ಟಾರ್ಚ್
कटः – ಕಟಃ – ಮ್ಯಾಟ್
पिञ्जः – ಪಿಂಜಃ – ಸ್ವಿಚ್
दर्पणः – ದರ್ಪಣಃ – ಕನ್ನಡಿ
नलिका – ನಲಿಕಾ – ನಳ (ಟ್ಯಾಪ್)
कुञ्जिका – ಕುಂಜಿಕಾ – ಬೀಗದ ಕೈ
दूरवाणी – ದೂರವಾಣೀ – ದೂರವಾಣಿ
कपाटिका – ಕಪಾಟಿಕಾ – ಕಪಾಟು
अवकरिका – ಅವಕರಿಕಾ – ಕಸದತೊಟ್ಟಿ
चुल्ली – ಚುಲ್ಲೀ – ಒಲೆ
सम्मार्जनी – ಸಮ್ಮಾರ್ಜನೀ – ಕಸಬರಿಗೆ
कङ्कतं – ಕಂಕತಮ್ – ಬಾಚಣಿಗೆ
शय्या – ಶಯ್ಯಾ – ಬೆಡ್
जवनिका – ಜವನಿಕಾ – ಕರ್ಟನ್
पेटिका – ಪೇಟಿಕಾ – ಬಾಕ್ಸ್
पुष्पाधानी – ಪುಷ್ಪಧಾನೀ – ಹೂಕುಂಡ
उपधानम् – ಉಪಧಾನಮ್ – ದಿಂಬು
व्यजनम् – ವ್ಯಜನಮ್ – ಫ್ಯಾನ್


ವೇಷಭೂಷಣಾನಿ – ವೇಷಭೂಷಣಗಳು

वसनम् – ವಸನಮ್ – ವಸ್ತ್ರ
उष्णीषम् – ಉಷ್ಣೀಷಮ್ – ಮುಂಡಾಸು
शिरस्त्राणम् – ಶಿರಸ್ತ್ರಾಣಮ್ – ಕ್ಯಾಪ್
उत्तरीयः – ಉತ್ತರೀಯಃ – ಉತ್ತರೀಯ
गलवन्धनांशुकम् – ಗಲವಂಧನಾಂಶುಕಮ್ – ಮಫ್ಲರ್
कञ्चुकः, निचोलः – ಕಂಚುಕಃ / ನಿಚೋಲಃ – ಶರ್ಟ್
करवस्त्रम् – ಕರವಸ್ತ್ರಮ್ – ಕರವಸ್ತ್ರ
रल्लकः, कम्बलः – ರಲ್ಲಕಃ / ಕಂಬಲಃ – ಬ್ಲ್ಯಾಂಕೆಟ್
शाटिका – ಶಾಟಿಕಾ – ಸೀರೆ
अधोवस्त्रम् – ಅಧೋವಸ್ತ್ರಮ್ – ಧೋತಿ
जङ्घात्राणम् – ಜಂಘಾತ್ರಾಣಮ್ – ಪ್ಯಾಂಟ್
कटिसूत्रम् – ಕಟಿಸೂತ್ರಮ್ – ಬೆಲ್ಟ್
पादत्राणम् – ಪಾದತ್ರಾಣಮ್ – ಸಾಕ್ಸ್
नीशारः – ನಿಶಾರಃ – ಗಾದಿ


ಛಾತ್ರೋಪಕರಣಾನಾಂ ನಾಮಾನಿ – ವಿದ್ಯಾರ್ಥಿಗಳು ಬಳಸುವ ವಸ್ತುಗಳು.

सुधाखण्डः  – ಸುಧಾಖಂಡಃ – ಚಾಕ್ ಪೀಸ್
निर्यास: – ನಿರ್ಯಾಸಃ – ಗಮ್
पत्रभार: – ಪತ್ರಭಾರಃ – ಪತ್ರದ ಭಾರ
उत्पीठिका – ಉತ್ಪೀಠಿಕಾ – ಟೇಬಲ್
अन्त: पेटिका – ಅಂತಃ ಪೇಟಿಕಾ- ಡ್ರಾಯರ್
रन्ध्रिका – ರಂಧ್ರಿಕಾ – ಪಂಚಿಂಗ್ ಮಶಿನ್
मृदुमुद्रा – ಮೃದುಮುದ್ರಾ – ರಬ್ಬರ್ ಸ್ಟ್ಯಾಂಪ್
मापिका – ಮಾಪಿಕಾ – ಸ್ಕೇಲ್
लेपनपट्टिका – ಲೇಪನಪಟ್ಟಿಕಾ – ಅಂಟುಪಟ್ಟೀ (Adhesive Tape)
लेखनी – ಲೇಖನೀ – ಪೆನ್ನು
अङ्कनी – ಅಂಕನೀ – ಪೆನ್ಸಿಲ್
वर्णलेखनी – ವರ್ಣಲೇಖನೀ – ಸ್ಕೆಚ್ ಪೆನ್
योजिनी – ಯೋಜಿನೀ – ಸ್ಟೇಪ್ಲರ್
पत्रसूची – ಪತ್ರಸೂಚೀ – ಪಿನ್ ಕೋಡ್
मार्जनी – ಮಾರ್ಜನೀ – ಇರೇಸರ್
कर्तरी – ಕರ್ತರೀ – ಕತ್ತರಿ
पुस्तकम् – ಪುಸ್ತಕಮ್ – ಪುಸ್ತಕ
श्वेतपत्रम् – ಶ್ವೇತಪತ್ರಮ್ – ಬಿಳಿಹಾಳೆ
लेखनपीठम् – ಲೇಖನಪೀಠಮ್ – ಡೆಸ್ಕ್
कृष्णफलकम् – ಕೃಷ್ಣಫಲಕಮ್ – ಬ್ಲ್ಯಾಕ್ ಬೋರ್ಡ್


सुभाषितम् – ಸುಭಾಷಿತಮ್

“चिन्तनीया हि विपदाम् आदावेव प्रतिक्रिया । न कूपखननं युक्तम् प्रदीप्ते वह्निना गृहे ॥”
“ಚಿಂತನೀಯಾ ಹಿ ವಿಪದಾಮ್ ಆದಾವೇವ ಪ್ರತಿಕ್ರಿಯಾ | ನ ಕೂಪಖನನಂ ಯುಕ್ತಮ್ ಪ್ರದೀಪ್ತೇ ವಹ್ನಿನಾ ಗೃಹೇ ||”
ಭಾವಾರ್ಥಃ – ಮುಂದೆ ಬರಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನು ಮುಂಚೆಯೇ ಯೋಚಿಸಿಕೊಳ್ಳಬೇಕು. ಮನೆಗೆ ಬೆಂಕಿ ಆವರಿಸಿದಾಗ ನೀರಿಗಾಗಿ ಬಾವಿಯನ್ನು ತೋಡುವುದು ಯುಕ್ತವಲ್ಲ.

“ಪುನಃ ಮಿಲಾಮಃ” “ಶುಭಂ ಭೂಯಾತ್”


December 13, 2021

ಹನುಮಂತನ ವಾಹನ

 ವಾಯುಪುತ್ರ ಆಂಜನೇಯನಿಗೆ ಗಾಳಿಯಲ್ಲಿ ಸ್ವತಃ ತಾನೇ ನೂರಾರು ಯೋಜನಗಳಷ್ಟು ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದ ಮತ್ತು ಅದನ್ನು ಸೀತಾನ್ವೇಷಣೆಯ ಸಂದರ್ಭದಲ್ಲಿ ಸಮುದ್ರ ಲಂಘನದ ಸಮಯದಲ್ಲಿ ನಿರೂಪಿಸಿಯೂ ಇದ್ದ ಆದರೂ, ಆಂಜನೇಯಯನ ಅನೇಕ ದೇವಾಲಯಗಳಲ್ಲಿ ಅಂಜನೇಯಯನ ವಿಗ್ರಹದ ಮುಂದೆ ಒಂಟೆಯನ್ನು ಇಟ್ಟಿರುತ್ತಾರಲ್ಲದೇ ಅವರನ್ನು ಉಷ್ಟ್ರಾರೂಢಾ ಎಂದೂ ಕರೆಯಲಾಗುತ್ತದೆ.

🌷🌷 ರಾಮಾಯಣ ಮತ್ತು ಪರಾಶರ ಸಂಹಿತೆಯಲ್ಲಿಯೂ ಹನುಮಂತ ಗಾಳಿಯ ವೇಗದಲ್ಲಿ ಹಾರಬಲ್ಲ ಎಂಬುವ ಅನೇಕ ಉದಾಹರಣೆಗಳನ್ನು ವಿವರಿಸುತ್ತಾರೆ ಮತ್ತು ಲಂಕೆಯನ್ನು ತಲುಪಲು ಸಾಗರದಾದ್ಯಂತ ಹಾರಾಟ, ಸಂಜೀವೀನಿಯನ್ನು ತರುವ ಸಲುವಾಗಿ ಲಂಕೆಯಿಂದ ಹಿಮಾಲಯಕ್ಕೆ ಹಾರಾಟ, ಪಾತಾಳ ಲೋಕಕ್ಕೆ ಹಾರುವುದು ಹೀಗೆ ಶರವೇಗದಲ್ಲಿ ಎಲ್ಲಾ ಕಡೆಯೂ ಹಾರುವುದನ್ನೇ ಬಿಂಬಿಸಿರುವಾಗ ಒಂಟೆಯಂತಹ ನಿಧಾನವಾಗಿ ಚಲಿಸುವ ಪ್ರಾಣಿಯೇಕೆ ಹನುಮಂತನ ವಾಹನ? ಎಂಬ ಜಿಜ್ಞಾಸೆ ಬಹಳವಾಗಿ ಕಾಡಿದ ಕಾರಣ ಅದರ ಬಗ್ಗೆ ಸೂಕ್ಷ್ಮವಾಗಿ ಜಾಲಾಡಿದಾಗ ದೊರೆತ ಕೆಲವೊಂದು ಮಾಹಿತಿಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.


🌷🌷 ಎಲ್ಲರಿಗೂ ತಿಳಿದಂತೆ ಹನುಮಂತ ಆಜನ್ಮ ಬ್ರಹ್ಮಚಾರಿಯಾಗಿ ಅತ್ಯಂತ ಶ್ರದ್ಧೆಯಿಂದ ಬ್ರಹ್ಮಚರ್ಯವನ್ನು ಪಾಲಿಸಿದವನು. ನಮ್ಮ ಪುರಾಣಗಳ ಪ್ರಕಾರ ಈ ರೀತಿಯಾಗಿ ಕಠೋರ ಬ್ರಹ್ಮಚರ್ಯ ಪಾಲಿಸಿದವರೆಂದರೆ ಭೀಷ್ಮಾಚಾರ್ಯರು ಮತ್ತು ಹನುಮಂತ ಇಬ್ಬರೇ. ಇಂತಹ ಹನುಮಂತನಿಗೆ ನವ ವೈಕರ್ಣವನ್ನು (ಒಂಬತ್ತು ವ್ಯಾಕರಣ ನಿಯಮಗಳು) ಕಲಿಯಲು ಬಯಸಿದರಂತೆ. ಆದರೆ ಕೇವಲ ಗೃಹಸ್ಥರಾಗಿದ್ದವರು ಮಾತ್ರವೇ ಇದನ್ನು ಅಧ್ಯಯನ ಮಾಡಬಹುದು ಎಂಬ ನಿಯಮವಿದ್ದ ಕಾರಣ, ಆಜನ್ಮ ಬ್ರಹ್ಮಚಾರಿ ಹನುಮಂತ ಇದನ್ನು ಕಲಿಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಹನುಮಂತನಿಗೆ ಬಹಳ ದುಃಖವಾಗಿತ್ತು.

🌷🌷 ಇದನ್ನು ಕಂಡ ಸೂರ್ಯ ದೇವರು, ಇಂತಹ ಸಮರ್ಥನೊಬ್ಬನು ಕಲಿಕೆಯಿಂದ ದೂರವಾಗಬಾರದೆಂದು ಬಯಸಿ ತನ್ನ ಮಗಳಾದ ಸುವರ್ಚಲೆಯನ್ನು ಮದುವೆ ಮಾಡಿಕೊಟ್ಟು ಅವನಿಗೆ ಪ್ರಜಾಪತ್ಯ ಬ್ರಹ್ಮಚಾರಿ ಎಂಬ ವರವನ್ನು ಕರುಣಿಸುತ್ತಾನೆ. ಈ ವರದ ಪ್ರಕಾರ ಆಂಜನೇಯನು ಮದುವೆಯಾದ ನಂತರವೂ ತನ್ನ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳುತ್ತಾನೆ. ಆಂಜನೇಯನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡ ಕುರುಹಿಗಾಗಿ ಅವರಿಬ್ಬರಿಗೂ ಒಂಟೆಯೊಂದನ್ನು ಬಹುಮಾನವಾಗಿ ಕೊಟ್ಟ ಕಾರಣದಿಂದಾಗಿ ಇಂದಿಗೂ ಸಹಾ ಅನೇಕ ದೇವಾಲಯಗಳಲ್ಲಿ ಆಂಜನೇಯನ ಪತ್ನಿ ಸಮೇತವಿರುವ ವಿಗ್ರಹಗಳ ಮುಂದೆ ಒಂಟೆಯ ಪ್ರತಿಮೆ ಇರುತ್ತದೆ ಎಂಬ ಪ್ರತೀತಿ ಇದೆ.

🌷🌷 ನಿಜವಾಗಿಯೂ ಸುವರ್ಚಲ ದೇವಿ ಎಂಬುವರು ಹೆಣ್ಣಾಗಿರದೆ ಅದೊಂದು ದೈವಿಕ ಶಕ್ತಿಯಾಗಿದ್ದು, ಸೂರ್ಯ ದೇವರ ಅನುಗ್ರಹದಿಂದ, ಹನುಮಂತನ ಜ್ಞಾನಾರ್ಜನೆಗಾಗಿ ಮತ್ತು ಧಾರ್ಮಿಕ ಪೂಜೆಯ ಉದ್ದೇಶಕ್ಕಾಗಿ ಹನುಮನೊಂದಿಗೆ ಅವಳನ್ನು ವಿವಾಹ ಮಾಡಿಕೊಡಲಾಗಿದೆ. ಸಾಮಾನ್ಯವಾಗಿ ಎಲ್ಲಾ ದೇವರುಗಳಿಗೂ ಶಕ್ತಿ (ಹೆಂಡತಿ), ವಾಹಕ (ವಾಹನ) ಮತ್ತು ಆಯುಧ (ಶಸ್ತ್ರಾಸ್ತ್ರ)ಗಳು ಇರಬೇಕೆಂಬ ನಿಯಮವಿರುವುದರಿಂದ ಹನುಮಂತನಿಗೆ ಸುವರ್ಚಲಾ ದೇವಿ ಹೆಂಡತಿ, ಒಂಟೆ ವಾಹನವಾಗಿ ಮತ್ತು ಗದೆ ಆಯುಧವಾಗಿದೆ ಎನ್ನುತ್ತಾರೆ ತಿಳಿದವರು. 

🌷🌷 ಇನ್ನು ವೈಜ್ಞಾನಿಕವಾಗಿರುವ ಮತ್ತೊಂದು ದೃಷ್ಟಾಂತದ ಪ್ರಕಾರ, ಎಲ್ಲಾ ವಾನರರು ಪಂಪಾ ಸರೋವರದ ತಟದಲ್ಲಿದ್ದ ಕಿಷ್ಕಿಂದೆಯಲ್ಲಿ ವಾಸಿಸುತ್ತಿದ್ದರು. ಪಂಪಾ ಸರೋವರದ ತಟ ಬಹಳಷ್ಟು ಮರಳುಗಳಿಂದ ತುಂಬಿರುವ ಕಾರಣ ವಾನರರಿಗೆ ನಡೆಯಲು ಬಹಳ ಕಷ್ಟವಾಗಿತ್ತು , ನೀಳ ಕಾಲ್ಗಳ ಒಂಟೆಗಳು ಮರಳುಗಾಡಿನಲ್ಲಿ ಸರಾಗವಾಗಿ ನಡೆಯಲು ಸಾಧ್ಯವಿದ್ದ ಕಾರಣ ಈ ಮಾರ್ಗದಲ್ಲಿ ಒಂಟೆಗಳನ್ನು ಪ್ರಯಾಣಿಸುವ ಮಾಧ್ಯಮವಾಗಿ ಬಳಸುತ್ತಿದ್ದರು. ಹನುಮಂತನೂ ಸಹಾ ಕಿಷ್ಕಿಂದೆಯಲ್ಲಿಯೇ ವಾಸಿಸುತ್ತಿದ್ದ ಕಾರಣ ಆ ಭೂಭಾಗದಲ್ಲಿ ಸುಲಭವಾಗಿ ಓಡಾಡುವ ಸಲುವಾಗಿ ಒಂಟೆಯನ್ನು ತನ್ನ ವಾಹನವಾಗಿ ಬಳಸುತ್ತಿದ್ದನು ಎಂಬ ಉದಾಹರಣೆಯು ವಾಸ್ತವಕ್ಕೆ ಸ್ವಲ್ಪ ಹತ್ತಿರವಾದಂತಿದೆ. 

🌷🌷 ಇನ್ನೊಂದು ಕತೆಯ ಪ್ರಕಾರ, ಹನುಮಂತನ ಪರಮ ಭಕ್ತರೊಬ್ಬರು, ಹನುಮಂತನ ದರ್ಶನಕ್ಕಾಗಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದರು. ತನ್ನ ಭಕ್ತರ ಅಭೀಷ್ಟೆಯನ್ನು ಈಡೇರಿಸುವ ಸಲುವಾಗಿ ಹನುಮಂತನು ಅವರಿಗೆ ತನ್ನ ದರ್ಶನದ ಪ್ರಾಪ್ತಿಯನ್ನು ಕರುಣಿಸಿ ಆಶೀರ್ವದಿಸಿದನು. ಹೀಗೆ ಬಂದು ಹಾಗೆ ಹೋದ ಹನುಮಂತನ ದರ್ಶನದಿಂದ ತೃಪ್ತರಾಗದ ಆ ಭಕ್ತರು, ಮತ್ತೊಮ್ಮೆ ಹನುಮಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ಅಯ್ಯಾ ಭಗವಂತ, ನೀನು ವಾಯು ವೇಗ, ಮನೋ ವೇಗದ ಸ್ವಭಾವ ಹೊಂದಿರುವ ಕಾರಣ ನೀನು ಕ್ಷಣಾರ್ಧದಲ್ಲಿ ಬಂದು ನಿನ್ನ ದರ್ಶನ ಕರುಣಿಸಿದೆ.

🌷🌷 ಹಲವಾರು ಸಮಯದಿಂದ ನಿನ್ನ ದರ್ಶನಕ್ಕಾಗಿ ಕಾದಿದ್ದ ನಾನು, ನನ್ನ ಕಣ್ಣುಗಳನ್ನು ತೆರೆಯುವ ಮೊದಲೇ ನೀನು ಮಾಯವಾಗಿ ಹೋದೆ. ಹಾಗಾಗಿ ನಿಧಾನವಾಗಿ ಚಲಿಸುವ ಒಂಟೆಯ ಮೇಲೆ ಬಂದು ನಿನ್ನ ದರ್ಶನ ಕರುಣಿಸಿದರೆ, ಆನಂದದಿಂದ ನಿನ್ನನ್ನು ಕಣ್ತುಂಬಿಸಿಕೊಂಡು ಸಂತೋಷ ಪಡುತ್ತೇನೆ ಎಂದು ಕೋರಿಕೊಂಡರಂತೆ. ಭಕ್ತನ ಭಕ್ತಿಯಿಂದ ಬಂಧಿಸಲ್ಪಟ್ಟ ಹನುಮಂತ ತನ್ನ ಭಕ್ತನ ಆಶೆಯಂತೆಯೇ ಉಷ್ಟ್ರಾರೂಢನಾಗಿ ಒಂಟೆಯ ಮೇಲೆ ನಿಧಾನವಾಗಿ ಬಂದು ತನ್ನ ಭಕ್ತನ ಮನಸ್ಸಿಗೆ ತೃಪ್ತಿಯಾಗುವಷ್ಟು ಹೊತ್ತು ದರ್ಶನವನ್ನು ನೀಡಿ ಸಂತೃಷ್ಟಗೊಳಿಸಿದನಂತೆ. 

December 10, 2021

ಮಾತೆಯ ಹಿರಿಮೆ

   ಒಬ್ಬ ವರದಿಗಾರ ಒಬ್ಬ ತಾಯಿಯನ್ನು ಸಂದರ್ಶಿಸುತ್ತಾನೆ. ಸಂದರ್ಶನ ಹೀಗೆ ನೆಡೆಯುತ್ತದೆ. 
ವ.. ತಾವು ಯಾವ ಜಾತಿಗೆ ಸೇರಿದವರು? 
ತಾ.. ಒಬ್ಬ ತಾಯಿಯಾಗಿಯೋ ಅಥವಾ ಒಬ್ಬ ಸ್ತ್ರೀ ಆಗಿಯೋ? 
ವ.. ಎರಡು ಬಗೆಯಾಗಿಯೂ ಹೇಳಿ. 
ತುಂಬು ವಿಶ್ವಾಸದಿಂದ ತಾಯಿ ಹೇಳಲು ಪ್ರಾರಂಭಿಸುತ್ತಾಳೆ. 
ತಾ...  ಒಬ್ಬ ಸ್ತ್ರೀ ತಾಯಿಯಾದಾಗ ಅವಳು ಯಾವ ಜಾತಿಗೂ ಸೇರುವುದಿಲ್ಲ. ಕಾಲ ಕಳೆದಂತೆ ಅವಳ ಜಾತಿ ಬದಲಾಗುತ್ತಾ ಹೋಗುತ್ತದೆ. 
ಆಶ್ಚರ್ಯಚಕಿತನಾಗಿ ವರದಿಗಾರ ಕೇಳುತ್ತಾನೆ "ಅದು ಹೇಗೆ? "
ತಾಯಿ ಹೇಳುತ್ತಾಳೆ.. ಒಬ್ಬ ತಾಯಿ ತನ್ನ ಶಿಶುವಿನ ಮಲಮೂತ್ರಗಳನ್ನು ಶುದ್ಧಿ ಮಾಡುವಾಗ ಅವಳು ಶೂದ್ರ ಜಾತಿಗೆ ಸೇರಿದವಳಾಗುತ್ತಾಳೆ. ಮಗುವು ಬೆಳೆದಂತೆಲ್ಲ ಆ ಮಗುವನ್ನು ರಕ್ಷಿಸಲು ಅವಳು ಕ್ಷತ್ರಿಯಳಾಗುತ್ತಾಳೆ. ಮಗು ಇನ್ನೂ ಬೆಳೆದಂತೆ ಆ ಮಗುವಿಗೆ ಜೀವನದ ಉತ್ತಮ ಮೌಲ್ಯಗಳು, ಸಂಸ್ಕೃತಿ ಮತ್ತು ಉತ್ತಮ ನೆಡವಳಿಕೆಗಳನ್ನು ಬೋಧಿಸಲು ಅವಳು ಬ್ರಾಹ್ಮಣ ರೂಪ ತಳೆಯುತ್ತಾಳೆ. ಕಡೆಯದಾಗಿ ಮಗು ಬೆಳೆದು ಯವ್ವನಾವಸ್ಥೆಯನ್ನು ಪಡೆದು ದುಡಿಯಲಾರಂಭಿಸಿದಾಗ ದುಡ್ಡಿನ ಬೆಲೆ, ಖರ್ಚು ವೆಚ್ಚ ನಿಭಾಯಿಸುವ ಬಗೆ ಮತ್ತು ಕೂಡಿಡುವ ಆವಶ್ಯಕತೆಯನ್ನು ತಿಳಿಸಲು ಅವಳು ವೈಶ್ಯ ಧರ್ಮವನ್ನು ತಳೆಯುತ್ತಾಳೆ.ಆದ್ದರಿಂದ ಒಬ್ಬ ತಾಯಿಗೆ ಒಂದು ಗೊತ್ತಾದ ಜಾತಿಯಿಲ್ಲವೆಂಬ ಹೇಳಿಕೆ ಸರಿಯಾಗಿದೆಯಲ್ಲವೇ?
ಈ ವಿವರಣೆಯನ್ನು ಕೇಳಿ ವರದಿಗಾರ ಸ್ತoಭೀಭೂತನಾಗುತ್ತಾನೆ. 
🙏🏻🙏🏻ಎಲ್ಲಾ ಸ್ತ್ರೀ ಜಾತಿಯ ಬಗ್ಗೆ ಹೆಮ್ಮೆ ಮೂಡುತ್ತದೆ. 🙏🏻🙏🏻

💐💐ಎಲ್ಲಾ ತಾಯಂದರಿಗೂ ಅರ್ಪಿಸಲಾಗಿದೆ💐💐

December 6, 2021

ಕರ್ಣನನ್ನೇ ಏಕೆ ದಾನಶೂರ ಎಂದು ಕರೆಯುತ್ತಾರೆ

 ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ?
 ಮಹಾಭಾರತದ ಒಂದು ಸಣ್ಣ ಮಾಹಿತಿ !

 ಕೃಷ್ಣಾ,....ಎಲ್ಲರೂ ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ? ನಾನೇಕೆ ದಾನಶೂರನಲ್ಲ” ಎಂದ ಅರ್ಜುನನಿಗೆ ಸಿಕ್ಕ ಉತ್ತರ ಇದು !

ಒಮ್ಮೆ ಕೃಷ್ಣ ಹಾಗೂ ಅರ್ಜುನ ವಾಯುವಿಹಾರಕ್ಕೆಂದು ಹೊರಟಿದ್ದರು. ಹಳ್ಳಿಗಾಡಿನ ಪ್ರದೇಶದಲ್ಲಿ ಹೀಗೇ ಓಡಾಡುತ್ತಾ ಅಲ್ಲೇ ಮರವೊಂದರ ನೆರಳಿನಲ್ಲಿ ವಿಶ್ರಮಿಸಲು ಕುಳಿತರು. ಆಗ ಕೃಷ್ಣನಿಗೆ ಅರ್ಜುನನು ಕೇಳುತ್ತಾನೆ, “ಕೃಷ್ಣಾ, ಎಲ್ಲರೂ ಕರ್ಣನನ್ನೇ ಏಕೆ ದಾನಶೂರ ಎಂದು ಹೊಗಳುತ್ತಾರೆ? ನಾನೇಕೆ ದಾನಶೂರನಲ್ಲ? ನಾನೂ ಸಹ ಬಡವರಿಗೆ, ಅಸಹಾಯಕರಿಗೆ ದಾನ ಧರ್ಮ ಮಾಡಿದ್ದೇನಲ್ಲ!!”. ಆಗ ಕೃಷ್ಣನು, “ಸಮಯ ಬಂದಾಗ ನಿನಗೆ ಸೂಕ್ತ ರೀತಿಯಲ್ಲಿ ಉತ್ತರಿಸುತ್ತೇನೆ” ಎಂದು ನಸುನಕ್ಕು ಸುಮ್ಮನಾಗುತ್ತಾನೆ.

ಕೃಷ್ಣನು ದ್ವಾರಕೆಯಲ್ಲಿ ಒಮ್ಮೆ ಔತಣ ಕೂಟವನ್ನು ಏರ್ಪಡಿಸಿರುತ್ತಾನೆ. ಕೌರವರು, ಪಾಂಡವರು, ಕರ್ಣ ಎಲ್ಲರನ್ನೂ ಆಹ್ವಾನಿಸಿರುತ್ತಾನೆ. ಅರ್ಜುನ ಅಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಸೂಕ್ತ ಸಮಯ ಇದೇ ಎಂದು ನಿರ್ಧರಿಸಿರುತ್ತಾನೆ. ಒಂದು ಭಾರೀ ಗಾತ್ರದ ಪರ್ವತದಷ್ಟು ಎತ್ತರದ ಚಿನ್ನದ ಒಂದೊಂದು ಗಟ್ಟಿಯನ್ನು ಅರ್ಜುನ ಹಾಗೂ ಕರ್ಣ ಇಬ್ಬರಿಗೂ ಕಾಣಿಕೆ ಕೊಡುತ್ತಾನೆ. ಇಬ್ಬರಿಗೂ ಉದ್ದೇಶಿಸಿ ಹೇಳುತ್ತಾನೆ, ನೀವಿಬ್ಬರೂ ಈ ಗಟ್ಟಿಯ ಕೊನೆಯ ಕಣವು ಉಳಿಯುವವರೆಗೂ ದಾನ ಮಾಡಬೇಕು. ಆಗ ನಾನು ನಿಮಗೆ ಕೊಟ್ಟ ಕೊಡುಗೆ ಸದುಪಯೋಗವಾಗುತ್ತದೆ ಎಂದು ಹೇಳಿ ಕಳುಹಿಸುತ್ತಾನೆ. ಸಮಾರಂಭದ ನಂತರ ಪಾಂಡವರು ಇಂದ್ರಪ್ರಸ್ಥಕ್ಕೂ, ಕೌರವರು ಹಸ್ತಿನಾವತಿಗೂ, ಕರ್ಣನು ಅಂಗದೇಶಕ್ಕೂ ಹೀಗೆ ಅವರವರ ರಾಜ್ಯಗಳಿಗೆ ಹಿಂತಿರುಗುತ್ತಾರೆ.

ಇತ್ತ ಇಂದ್ರಪ್ರಸ್ಥಕ್ಕೆ ಮರಳಿದ ಅರ್ಜುನನು ರಾಜ್ಯಾದ್ಯಂತ ಡಂಗುರ ಸಾರಿಸುತ್ತನೆ. ತಾನು ಚಿನ್ನದ ಗಟ್ಟಿಯನ್ನು ದಾನ ಮಾಡಲು ಹೊರಟಿದ್ದು, ಅವಶ್ಯವಿದ್ದವರು ಬಂದು ಸ್ವೀಕರಿಸಬಹುದೆಂದು ಪ್ರಜೆಗಳಿಗೆ ತಿಳಿಸುತ್ತಾನೆ. ಮಾರನೇ ದಿನ ಅರಮನೆಯ ಮುಂದೆ ಭಾರೀ ಜನಸ್ತೋಮ ನೆರೆದಿರುತ್ತದೆ. ಎಲ್ಲರೂ ಅರ್ಜುನನನ್ನು ಹೊಗಳುವವರೇ. ಇತ್ತ ಅರ್ಜುನನು ಬಂದ ಆಕಾಂಕ್ಷಿಗಳೆಲ್ಲರಿಗೂ ಕೃಷ್ಣನು ಕೊಟ್ಟ ಭಾರೀ ಚಿನ್ನದ ಗಟ್ಟಿಯನ್ನು ಅಗೆದೂ ಅಗೆದೂ ಇಷ್ಟಿಷ್ಟನ್ನು ತೆಗೆದು ಕೊಡುತ್ತಿರುತ್ತಾನೆ. ಎರಡು ದಿನವೂ ಹೀಗೇ ಮುಂದುವರೆಯುತ್ತದೆ. ಮೂರನೆಯ ದಿನ ಅರ್ಜುನನಿಗೆ ಸಾಕಾಗಿ ಹೋಗಿರುತ್ತದೆ. ಚಿನ್ನದ ಗಟ್ಟಿ ಅರ್ಧದಷ್ಟೂ ಸಹ ಕರಗಿರುವುದಿಲ್ಲ. ಹೀಗೇ ಎಷ್ಟು ದಿನ ಮುಂದುವರೆಸುವುದು? ಕೃಷ್ಣ ನೋಡಿದರೆ ಕೊನೆಯ ಕಣವೂ ದಾನ ಮಾಡಬೇಕೆಂದು ಹೇಳಿದ್ದಾನೆ ಎಂದು ಚಿಂತಿತನಾಗುತ್ತಾನೆ.

ಆ ಸಮಯದಲ್ಲಿ ಕೃಷ್ಣನು ತಾನು ಒಪ್ಪಿಸಿದ್ದ ಕೆಲಸವಾಯಿತೇ ಎಂದು ತಿಳಿಯಲು ಇಂದ್ರಪ್ರಸ್ಥಕ್ಕೆ ಬರುತ್ತಾನೆ. ಅರ್ಜುನನು ಇದ್ದ ವಿಷಯ ತಿಳಿಸುತ್ತಾನೆ. ಮೂರು ದಿನದಿಂದ ಸತತವಾಗಿ ದಾನ ಮಾಡುತ್ತಿದ್ದೇನೆ, ಇದು ಇನ್ನೂ ಅರ್ಧದಷ್ಟೂ ಕರಗಿಲ್ಲ ಎಂದು ತಿಳಿಸುತ್ತಾನೆ. ಕೃಷ್ಣನು ಆಶ್ಚರ್ಯ ನಟಿಸಿ, “ಓಹೋ, ಬಹಳೇ ಕೆಲಸವಾಯಿತು ನಿನಗೆ, ಬಾ ಕರ್ಣನು ಏನು ಮಾಡಿದ್ದಾನೋ ನೋಡೋಣ” ಎಂದು ಅರ್ಜುನನನ್ನು ಅಂಗ ರಾಜ್ಯಕ್ಕೆ ಕರೆದೊಯ್ಯುತ್ತಾನೆ.

ಕರ್ಣನಲ್ಲಿಗೆ ಬಂದ ಕೃಷ್ಣಾರ್ಜುನರು, ಚಿನ್ನದ ಗಟ್ಟಿಯ ಬಗ್ಗೆ ವಿಚಾರಿಸುತ್ತಾರೆ. ಕರ್ಣನು “ನಾನು ಅದನ್ನು ಅಂದೇ ದಾನ ಮಾಡಿದೆನಲ್ಲ!” ಎಂದು ತಿಳಿಸುತ್ತಾನೆ. 

 
ಅರ್ಜುನನು ಆಶ್ಚರ್ಯದಿಂದ “ಅದು ಹೇಗೆ ಮಾಡಿದೆ? ಕೃಷ್ಣನು ಪ್ರತಿ ಕೊನೆಯ ಕಣವಿರುವವರೆಗೂ ಅದನ್ನು ದಾನ ಮಾಡಬೇಕು ಎಂದಿದ್ದನಲ್ಲ! ನಾನು ಸತತ ಮೂರು ದಿನದಿಂದ ಮಾಡುತ್ತಿದ್ದೇನೆ, ಇನ್ನೂ ಕರಗಿಲ್ಲ” ಎನ್ನುತ್ತಾನೆ.
ಕರ್ಣನು ಹೇಳುತ್ತಾನೆ, 

ನಾನು ದ್ವಾರಕೆಯಿಂದ ಮರಳುತ್ತಿದ್ದಾಗಲೇ ಮಾರ್ಗ ಮಧ್ಯೆಯಲ್ಲಿ ಇಬ್ಬರು ಹಳ್ಳಿಗರನ್ನು ಭೇಟಿ ಮಾಡಿದೆ. ಅವರು ತಮ್ಮ ಹಳ್ಳಿಯಲ್ಲಿ ಗುರುಕುಲವೊಂದನ್ನು ಹಾಗೂ ಅನ್ನಛತ್ರವನ್ನು ತೆರೆಯಬೇಕೆಂದು ತಿಳಿಸಿದರು. ತಕ್ಷಣವೇ ನಾನು ಕೃಷ್ಣನು ಕೊಟ್ಟಿದ್ದ ಚಿನ್ನದ ಗಟ್ಟಿಯನ್ನು ಅವರಿಗೆ ಒಪ್ಪಿಸಿ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿ ಹೊರಟುಬಿಟ್ಟೆ ಎಂದನು. ಅದನ್ನು ಕೇಳಿದ ಅರ್ಜುನ ಮೂಕವಿಸ್ಮಿತನಾಗಿ ನೋಡುತ್ತಾ ಇಂತಹ ಉಪಾಯ ನನಗೇಕೆ ಹೊಳೆಯಲಿಲ್ಲ ಎಂದುಕೊಂಡನು.

ಆಗ ಕೃಷ್ಣನು ನಗುತ್ತಾ ” ನೋಡಿದೆಯಾ ಅರ್ಜುನಾ! ನೀನು ಅಂದು ಕರ್ಣನೇ ಏಕೆ ದಾನಶೂರ ಎಂದು ನನ್ನಲ್ಲಿ ಕೇಳಿದ್ದೆ. ಈಗ ತಿಳಿಯಿತೇ? ನಾನು ಚಿನ್ನದ ಗಟ್ಟಿ ನಿನಗೆ ಕೊಟ್ಟಾಗ, ನಿನಗೆ ಅರಿವಿಲ್ಲದಂತೆಯೇ ಅದರ ಮೇಲೆ ಮೋಹ ಬೆಳೆದಿತ್ತು. ದಾನ ಮಾಡು ಎಂದಾಗ, ಜನರೆಲ್ಲರೂ ನಿನ್ನನ್ನು ದಾನಶ್ರೇಷ್ಠನೆಂದು ಹೊಗಳಬೇಕು ಎಂಬ ಆಸೆಯಿಂದ ಡಂಗುರ ಹೊಡೆಸಿ ೩ ದಿನಗಳಿಂದಲೂ ಬಿಡುವಿಲ್ಲದೇ ಕೊಂಚ ಕೊಂಚ ಮಾತ್ರವೇ ಕೊಡುತ್ತಾ ಬಂದೆ. ಆದರೆ ಕರ್ಣನಿಗೆ ಆ ಮೋಹವಿಲ್ಲ. ದ್ವಾರಕೆಯಿಂದ ಹೊರಡುವಾಗಲೇ ಅವಶ್ಯವಿದ್ದವರಿಗೆ ಕೈ ತುಂಬಾ ಕೊಟ್ಟು ಹೊರಟು ಹೋದ, ಕನಿಷ್ಟ ಧನ್ಯವಾದ ಸಹ ಅವನು ಬಯಸಿಲ್ಲ. ಆದ್ದರಿಂದ ನಿನಗೆ ಈಗ ವ್ಯತ್ಯಾಸ ಅರಿವಾದಂತಿರಬೇಕಲ್ಲ!” ಎಂದನು...ಆಗ ಅರ್ಜುನನು ದಂಗು ಬಡಿದವನಂತೆ ನೋಡುತ್ತಾ ಮನದಲ್ಲಿಯೇ ಕರ್ಣನನ್ನು ಕೊಂಡಾಡಿ, ತನ್ನ ಸೋಲೊಪ್ಪಿಕೊಂಡ.

December 1, 2021

ಹನುಮದ್ವ್ರತ



*ಮಾರ್ಗಶೀರ್ಷ ಮಾಸ ಶುಕ್ಲಪಕ್ಷ  ತ್ರಯೋದಶೀ*
ಇದು ಅನಂತ ವ್ರತದಂತೆ ಒಂದು ವ್ರತ. 

ಅನಂತ ವ್ರತದಲ್ಲಿ ಯಮುನಾ ಪೂಜೆ ಮಾಡಿದರೆ ಇದರಲ್ಲಿ ಪಂಪಾ ಪೂಜೆ. 

ಅದರಲ್ಲಿ 14 ಗಂಟುಗಳ ದೋರ ಧರಿಸಿದರೆ ಇದರಲ್ಲಿ 13 ಗಂಟುಗಳ ದೋರ ಧರಿಸಬೇಕು.

 ಅನಂತನ ದೋರ ರಕ್ತವರ್ಣದ್ದಾದರೇ ಹನುಮದ್ವ್ರತದಲ್ಲಿ ಹಳದೀ ದೋರವನ್ನು ಧರಿಸಬೇಕು.

*ಹನುಮ*ನೆಂದರೆ *ಜ್ಞಾನ*. ಅಂತಹ ಜ್ಞಾನವನ್ನು ಹೊಂದಿರುವವನು *ಹನುಮಾನ್*.

 ಋಜುಗಣದ ಅರಸರಾದ  *ಹನುಮ ದೇವರು* ಯತಾರ್ಥ ಜ್ಞಾನಿಗಳು. ಹೀಗೆ ಇವರನ್ನು ಉಪಾಸಿಸುವುದರಿಂದ ಅವರ ಅನುಗ್ರಹವಾಗಿ ನಮಗೂ ಯತಾರ್ಥ ಜ್ಞಾನವನ್ನು ಕರುಣಿಸುವರು. ಮಕ್ತಿಯೋಗ್ಯನಿಗೆ ಇದು ಅವಶ್ಯಕ.

*ಹನುಮದಷ್ಟಕ*

ವನಜಲೋಚನಂ ಬಂಧಮೋಚನಂ ಸೃಷ್ಟಿಪಾಲನಂ ಕಷ್ಟನಾಶನಂ |ಮದನಮೋಹನಂ ಪಿಂಗಳಾನನಂ ಮಾರುತಿಂ ಭಜೇ ವಾಯುನಂದನಮ್ ||1||

ಸ್ಮರ್ಯರಕ್ಷಕಂ ದಃಖಮೋಚನಂ ಕುರುಕಲಾಂತಕಂ ದೈತ್ಯವಂಚಕಂ |
ಧರ್ಮಪಾಲಕಂ ಪಾಪನಾಶಕಂ ಮಾರುತಿಂ ಭಜೇ ರಾಮಸೇವಕಂ ||2||

ವಿಭುದತೋಷಿಣಂ ಮಧುರಭಾಷಿಣಂ ದುಷ್ಟಹಾರಿಣಂ ರಾಮಭಾಷಿಣಂ |
ಮಗಧಹಾರಿಣಂ ಸೂರ್ಯಮೋಕ್ಷಿತಂ ಮಾರುತಿಂ ಭಜೇ ಗುಣವಿಭೂಷಿತಂ ||3||

ಭಾಸಕಪ್ರದಂ ರಾಮಭಕ್ತಿದಂ ಪ್ರಣತಕಾಮದಂ ಸತ್ಯದಪ್ರದಂ |
ಭಕ್ತಿಮುಕ್ತಿದಂ ದೈತ್ಯದುಃಖದಂ ಮಾರುತಿಂ ಭಜೇ ನಿಜಸುಖಪ್ರದಂ ||4||

ನಿಜಜನೋದಯಂ ಸ್ವಜನತಾಪ್ರಿಯಂ ಮೋದಜಿನ್ಮಯಂ ನಿರ್ಜಿತಾಮಯಂ |
ದ್ಯುಮಣಿನಿರ್ಜಯಂ ರಾಘವಪ್ರಿಯಂ ಮಾರುತಿಂ ಭಜೇ ಇಂದ್ರಜಿಜ್ಜಯಂ ||5||

ಸನ್ಮನೋಹರಂ ಭಾನುಭಾಸ್ಕರಂ ಸುಗುಣಸಾಗರಂ ಪಾಲಿತಾಮಯಂ |
ಹರಿಹಯಾರ್ಜಿತಂ ಈಶವಂದಿತಂ ಮಾರುತಿಂ ಭಜೇ ದೀಪ್ತಿರಾಜಿತಂ ||6|

ಪಾರ್ಥಸೇವಿತಂ ರಾಮಯಂತ್ರಿತಂ ಕವಿಗುಣಾನ್ವಿತಂ ಶುಕ್ರವಂದಿತಂ |
ಪದ್ಮಜಾರ್ಚಕಂ ಶ್ರೀಮದಾತತಂ ಮಾರುತಿಂ ಭಜೇ ಭಕ್ತಸೇವಿತಂ ||7||

ಮೋಹನಾಶಕಂ ಜ್ಞಾನದಾಯಕಂ ತಮೋನಾಶಕಂ ಸರ್ವರಕ್ಷಕಂ |
ಭಾಷ್ಯಕಾರಕಂ ಮುಕ್ತಿದಾಯಕಂ ಮಾರುತಿಂ ಭಜೇ ಸೇವಕಂ ಹರೇ ||8||

ಇತಿ ಶ್ರೀಹನುಮದಷ್ಟಕ ಸಂಪೂರ್ಣಂ

ಸಂಗ್ರಹ