ಕುಜದೋಷದ ಬಗ್ಗೆ ಮಾಹಿತಿ ನೀಡುವ ಅಗತ್ಯವು ಇಂದು ಎದ್ದು ಕಾಣುತ್ತಲಿದೆ.ಸರಿಯಾಗಿ ವಿಮರ್ಶಿಸದೆ ಮೇಲ್ನೋಟಕ್ಕೆ ಕಾಣುವ ಕುಜದೋಷವನ್ನು ಅರುಹಿ ಜನರನ್ನು ಭೀತಿಗೊಳಪಡಿಸುವ ಪ್ರವೃತ್ತಿ ಅಲ್ಲಲ್ಲಿ ಕಂಡುಬರುತ್ತಿದೆ.
ಕನ್ಯಾ-ವರರ ಜಾತಕ ಹೊಂದಾಣಿಕೆಯಲ್ಲಿ ಕುಜದೋಷವನ್ನು ಪರಿಶೀಲಿಸುವುದು ಸಂಪ್ರದಾಯ.ಜನ್ಮ ಕುಂಡಲಿಯಲ್ಲಿ ಲಗ್ನ,ಶುಕ್ರ, ಚಂದ್ರ ಸ್ಥಿತ ಸ್ಥಾನಗಳಿಂದ ೧,೨,೪,೫,೭,೮,೧೨ ನೇ ಸ್ಥಾನಗಳಲ್ಲಿ ಕುಜನು ಇದ್ದರೆ ಕುಜ ದೋಷ ಇದೆ ಎಂಬುದಾಗಿ ಮೇಲ್ನೋಟದ ತೀರ್ಮಾನಕ್ಕೆ ಬರುವುದು ಬಹುತೇಕ ಅನುಸರಿಸುವ ಕ್ರಮ .ಆದರೆ ಈ ರೀತಿಯಾಗಿ ತೀರ್ಮಾನಕ್ಕೆ ಬಂದರೂ ಅಂತಹಾ ದೋಷಗಳಿಗೆ ಅಪವಾದಗಳು ಕೂಡಾ ಇವೆ ಅಂದರೆ ಪರಿಹಾರಗಳೂ ಇವೆ ಎಂಬುದನ್ನು ಗಮನಿಸುವುದು ಅಗತ್ಯ ಇದೆ.ಕುಜದೋಷಕ್ಕೆ ೨೨ ರೀತಿಯಲ್ಲಿ ಅಪವಾದಗಳು ಇವೆ.ಆ ೨೨ ರೀತಿಯ ಪರಿಹಾರಗಳನ್ನು ಕುಂಡಲಿಯಲ್ಲಿಯೇ ಪರಿಶೀಲಿಸಬೇಕಾಗಿದೆ. ಅವುಗಳನ್ನು ಅನ್ವಯಿಸಿ ಪರಿಶೀಲನೆ ಮಾಡಿದಾಗ ಹೆಚ್ಚಿನ ಜಾತಕಗಳಲ್ಲಿ ಕುಜ ದೋಷ ಜಾತಕದಲ್ಲಿಯೇ ಪರಿಹಾರ ಆಗಿರುತ್ತದೆ.ಆ ಬಗ್ಗೆ ವಿವರಿಸುವುದು ಈ ಬರಹದ ಗುರಿ.
.[೧] ಕರ್ಕಾಟಕ ಮತ್ತು ಸಿಂಹ ಲಗ್ನ ಸಂಜಾತರಿಗೆ ಕುಜದೋಷ ಇಲ್ಲ.
[೨] ೭ ನೇ ರಾಶಿಯಲ್ಲಿರುವ ಕುಜನನ್ನು ಗುರು ನೋಡಿದಲ್ಲಿ ದೋಷ ಪರಿಹಾರ.
[೩] ಕನ್ಯಾ ಜಾತಕದಲ್ಲಿ ಜನ್ಮ ಲಗ್ನದಿಂದ ೭ ನೇ ರಾಶಿಯಲ್ಲಿ ಆ ರಾಶಿಯ ಅಧಿಪತಿ ಅಥವಾ ಯಾವುದಾದರೂ ಶುಭ ಗ್ರಹ ಇದ್ದರೆ ಸಂತಾನ ದೋಷ, ವೈಧವ್ಯ ದೋಷ, ಕುಜ ದೋಷ ಪರಿಹಾರ.
[೪] ೭ ನೇ ಸ್ಥಾನದ ಅಧಿಪತಿ ೭ ನೇ ಮನೆಯಲ್ಲಿ ಇದ್ದರೆ ಕುಜ ದೋಷ ಇಲ್ಲ.
[೫] ಕನ್ಯಾ- ವರರ ಜಾತಕಗಳಲ್ಲಿ ಸಮಾನವಾದ ಕುಜ ದೋಶ ಇದ್ದಲ್ಲಿ ಅಥವಾ ಕುಜದೋಶಕ್ಕೆ ಸಮಾನವಾದ ಪಾಪ ಗ್ರಹ ದೋಷ ಇದ್ದಲ್ಲಿ[ರವಿ,ಶನಿ,ಕೇತು,ರಾಹು, ಕುಜ-ಇವುಗಳು ಪಾಪ ಗ್ರಹರು]ಕುಜ ದೋಷ ಪರಿಹಾರ.
[೬]ಜನ್ಮ ಲಗ್ನದಿಂದ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.
[೭]ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜದೋಶ ಇದ್ದು ಮತ್ತೊಂದರಲ್ಲಿ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.
[೮]ಲಗ್ನದಿಂದ೨,೪,೭,೮,೧೨ರಲ್ಲಿರುವ ಕುಜನು ಗುರುವಿನೊಟ್ಟಿಗೆ ಇದ್ದರೆ ಅಥವಾ ಬುಧ,ಗುರು ಗಳಿಂದ ನೋಡಲ್ಪಟ್ಟರೆ ಕುಜದೋಷ ಪರಿಹಾರ.
[೯]ಕುಜನು ಗುರು ಅಥವಾ ಚಂದ್ರನ ಒಟ್ಟಿಗೆ ಇದ್ದರೆ ಅಥವಾ ಅವರಿಂದ ನೋಡಲ್ಪಟ್ಟರೆ ಕುಜ ದೋಷ ಪರಿಹಾರ.
[೧೦]ಮೇಷ,ವೃಶ್ಚಿಕ,ಮಕರ,ಕರ್ಕಟಕ,ಸಿಂಹ,ಧನುಸ್ಸು,ಮೀನ ಈ ರಾಶಿಗಳಲ್ಲಿ ಕುಜ ಇದ್ದರೆ ಕುಜ ದೋಷ ಇಲ್ಲ.
[೧೧]ಕುಜನು, ರವಿ, ಚಂದ್ರ,ಗುರು ನವಾಂಶದಲ್ಲಿ ಇದ್ದರೆ ಕುಜದೋಷ ಇಲ್ಲ.
[೧೨]ಕುಜನು ಕರ್ಕಾಟಕ,ಮಿಥುನ,ಕನ್ಯಾ ರಾಶಿಗಳಲ್ಲಿ ಇದ್ದರೆ ಅಥವಾ ಅಸ್ತನಾಗಿ ಇದ್ದರೆ ಶುಭಾಶುಭ ಫಲ ಇಲ್ಲವಾದ ಕಾರಣ ಕುಜ ದೋಷ ಇಲ್ಲ.
[೧೩]ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜ ದೋಷವಿದ್ದು ಮತ್ತೊಂದರಲ್ಲಿ ಅದೆ ರಾಶಿಯಲ್ಲಿ ಶನಿ,ಕುಜ,ಅಥವಾ ಯಾವುದಾದರೂ ಪಾಪಗ್ರಹ ಇದ್ದಲ್ಲಿ ಕುಜ ದೋಷ ಇಲ್ಲ.
[೧೪]ಜಾತಕದಲ್ಲಿ ಯಾವ ರಾಶಿಯಲ್ಲಿ ಕುಜನು ಇದ್ದಾನೋ ಆ ರಾಶಿಯ ಅಧಿಪತಿ ೧,೪,೭,೧೦,೫,೯ರಲ್ಲಿ ಇದ್ದರೆ ಕುಜ ದೋಷ ಪರಿಹಾರ.
[೧೫]ಮೇಷ ಲಗ್ನವಾಗಿ ಅಲ್ಲಿ ಕುಜನು ಇದ್ದರೆ,ಮಕರ ಲಗ್ನವಾಗಿ ಧನು ರಾಶಿಯಲ್ಲಿ ಕುಜನು ಇದ್ದರೆ,ಸಿಂಹ ಲಗ್ನವಾಗಿ ವೃಶ್ಚಿಕದಲ್ಲಿ ಕುಜನು ಇದ್ದರೆ,ಕರ್ಕಾಟಕ ಲಗ್ನವಾಗಿ ಮಕರದಲ್ಲಿ ಕುಜನು ಇದ್ದರೆ, ಧನುರ್ಲಗ್ನವಾಗಿ ಕರ್ಕಾಟಕದಲ್ಲಿ ಕುಜನು ಇದ್ದರೆ ಆಯಾಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ.
.
[೧೬]ಅಶ್ವಿನಿ,ಮೃಗಶಿರೆ,ಪುನರ್ವಸು,ಪುಷ್ಯ,ಆಶ್ಲೇಶಾ,ಉತ್ತರಾ,ಸ್ವಾತಿ,ಅನುರಾಧ,ಪೂರ್ವಾಷಾಢ, ಉತ್ತರಾಷಾಢ,ಶ್ರವಣ,ಉತ್ತರಾಭಾದ್ರ,ರೇವತಿ--ಈ ನಕ್ಷತ್ರದವರಿಗೆ ಕುಜದೋಷ ಇಲ್ಲ.
[೧೭]ಮಿಥುನ-ಕನ್ಯಾ ಲಗ್ನಗಳಲ್ಲಿ ಹುಟ್ಟಿದವರಿಗೆ ಕರ್ಕಟಕ-ತುಲಾ ರಾಶಿಗಳಲ್ಲಿ ಕುಜನು ಇದ್ದರೆ,ವೃಷಭ-ಸಿಂಹ ಲಗ್ನದವರಿಗೆ ಮಿಥುನ- ಕನ್ಯಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.
[೧೮]ಮೇಷ-ವೃಶ್ಚಿಕ ಲಗ್ನದವರಿಗೆ ಕರ್ಕಟಕ- ಕುಂಭ ರಾಶಿಗಳಲ್ಲಿ, ಮಕರ- ಸಿಂಹ ಲಗ್ನದವರಿಗೆ ಮೇಷ- ವೃಶ್ಚಿಕ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.
[೧೯]ಮಕರ-ಕರ್ಕಟಕ ಲಗ್ನದವರಿಗೆ ಕರ್ಕಟಕ-ಮಕರ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ ಮತ್ತು ಕರ್ಕಟಕ-ಮಕರ ಲಗ್ನದವರಿಗೆ ಮಕರ-ಕರ್ಕಟಕ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.
[೨೦]ಧನು-ಮೀನ ಲಗ್ನದವರಿಗೆ ಕರ್ಕಟಕ-ತುಲಾರಾಶಿಗಳಲ್ಲಿ,ವೃಷಭ-ಸಿಂಹ ಲಗ್ನದವರಿಗೆ ಧನು-ಮೀನ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.
[೨೧]ವೃಷಭ-ತುಲಾ ಲಗ್ನದವರಿಗೆ ಮೇಷ-ಕನ್ಯಾ ರಾಶಿಗಳಲ್ಲಿ,ವೃಶ್ಚಿಕ-ಮಿಥುನ ಲಗ್ನದವರಿಗೆ ವೃಷಭ- ತುಲಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.
[೨೨]ಕುಂಭ-ಸಿಂಹ ಲಗ್ನದವರಿಗೆ ಕುಜನು ಯಾವರಾಶಿಯಲ್ಲಿ ಇದ್ದರೂ ದೋಷ ಇಲ್ಲ. ಕುಂಭ-ಸಿಂಹ ರಾಶಿಗಳು ಲಗ್ನದಿಂದ ೧-೨-೪-೫-೭-೮-೧೨ ನೇ ರಾಶಿಗಳಾಗಿದ್ದು ಅಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.
ಈ ರೀತಿಯಾಗಿ ಕುಜದೋಷಗಳಿಗೆ ಅಪವಾದ ಅಥವಾ ಪರಿಹಾರಗಳನ್ನು ಶಾಸ್ತ್ರಕಾರರು ತಿಳಿಸಿರುವ ಕಾರಣ ಕೆಲವೇ ಕೆಲವು ಜಾತಕಗಳಲ್ಲಿ ಮಾತ್ರಾ ಕುಜ ದೋಷ ಇರಬಹುದಾಗಿದೆ. (ಈ ವಿಚಾರವನ್ನು ಜ್ಯೋತಿಷಿಗಳು ಗಮನದಲ್ಲಿರಿಸಿಕೊಂಡು ಕುಜದೋಷದ ಬಗ್ಗೆ ಪರಿಶೀಲಿಸ ಬೇಕೆಂಬುದು ಶಾಸ್ತ್ರಕಾರರ ಮತ.)
ಸಂಗ್ರಹ