October 21, 2020

ಆತ್ಮಾನ್ವೇಷಣೆ

ಒಬ್ಬ ಸನ್ಯಾಸಿಯು ಒಂದು ಮನೆಯ ಮುಂದೆ ಬಂದು ಭಿಕ್ಷೆ ಯಾಚಿಸಿದ. ಆ ಮನೆಯೊಡತಿ ಭಿಕ್ಷೆ ಹಾಕಲು ಮುಂದೆ ಬಂದಾಗ, ಆಶೀರ್ವಾದ ಮಾಡುತ್ತ ಆ ಸನ್ಯಾಸಿಯು, "ತಾಯೆ?! ನಿನ್ನ ವಯಸ್ಸೆಷ್ಟು?' ಎಂದು ಕೇಳಿದ.


ಗೃಹಿಣಿಯು ಸನ್ಯಾಸಿಗೆ ನಮಸ್ಕರಿಸಿ, ಮುಗುಳುನಗುತ್ತಾ, "ನನಗೆ ಕೇವಲ ಒಂದು ವರ್ಷ' ಎಂದಳು. ಈ ನಡುವಯಸ್ಸಿನ ಗೃಹಿಣಿ ಹಾಗೆ ಹೇಳಲು ಸನ್ಯಾಸಿ ಕುತೂಹಲದಿಂದ ಮತ್ತೆ ಕೇಳಿದ"ನಿಮ್ಮ ಯಜಮಾನರ ವಯಸ್ಸೇನು?' "ಅವರಿನ್ನೂ ಆರು ತಿಂಗಳಿನ ಮಗು". ಸನ್ಯಾಸಿ ಪುನಃ ಕೇಳಿದ, "ಅತ್ತೆಮಾವಂದಿರಿದ್ದರೆ ಅವರ ವಯಸ್ಸೆಷ್ಟು?" "ಅವರಿನ್ನೂ ಮೂರು ಮೂರು ತಿಂಗಳ ತೊಟ್ಟಿಲ ಕೂಸುಗಳು".


ಹೀಗೆ ಉತ್ತರವಿತ್ತ ಗೃಹಿಣಿಯನ್ನು ಸನ್ಯಾಸಿಯು "ತಾಯೆ! ನನಗೆ ನಿನ್ನ ಮಾತು ಅರ್ಥವಾಗುತ್ತಿಲ್ಲ. ಸರಿಯಾಗಿ ಬಿಡಿಸಿ ಹೇಳು" ಎನ್ನಲು, ಆ ಗೃಹಿಣಿ ಹೀಗೆ ಹೇಳಿದಳು: "ಸ್ವಾಮೀ! ನನ್ನ ದೇಹಕ್ಕೆ ಮೂವತ್ತೈದು ವರ್ಷಗಳಾದವು. ಆದರೆ, ಇಷ್ಟು ವರ್ಷವೂ ನಾನು ಕೇವಲ ಉಣಿಸು-ತಿನಿಸು, ಉಡಿಗೆತೊಡಿಗೆಗಳಲ್ಲೇ ಕಾಲ ಕಳೆಯುತ್ತಿದ್ದೆ. ಸುಮ್ಮನೇ ವ್ಯರ್ಥವಾಗಿ ಕಳೆದ ವರ್ಷ ಲೆಕ್ಕಕ್ಕಿಟ್ಟು ಏನು ಪ್ರಯೋಜನ? ಆದ್ದರಿಂದ ನನಗೆ ಒಂದೇ ವರ್ಷ ಪ್ರಾಯ" ಎಂದಳು.


"ಇನ್ನು ನಮ್ಮ ಯಜಮಾನರು ದೊಡ್ದ ದೊಡ್ದ ವ್ಯಾಪಾರ ವ್ಯವಹಾರದಲ್ಲಿ ತೊಡಗಿದ್ದರು. ಆದರೆ ಇತ್ತೀಚೆಗೆ ಯಾರಿಂದಲೋ ಮೋಸ ಹೋಗಿ ಈಗ ಆರು ತಿಂಗಳಿಂದೀಚೆಗೆ ನನ್ನ ಜೊತೆಯಲ್ಲಿ ಭಜನೆ, ಸತ್ಸಂಗದಲ್ಲಿ ಸಹಕರಿಸುವುದರಿಂದ ಅವರ ವಯಸ್ಸು ಆರು ತಿಂಗಳೆನ್ನಲು ಅಡ್ಡಿ ಇಲ್ಲ. ನಮ್ಮ ಅತ್ತೆ ಮಾವಂದಿರು ಸತ್ಸಂಗ ಭಜನೆಯಲ್ಜಿ ತೊಡಗಿಸಿಕೊಂಡ ನಮ್ಮನ್ನು ಬೈಯುತ್ತಿದ್ದರು. ಮೂರು ತಿಂಗಳಿಂದೀಚೆಗೆ ಅತ್ತೆಗೆ ಲಕ್ವಾ (ಪಾರ್ಶ್ವವಾಯು) ಹೊಡೆದಿದೆ. ಮಾವನವರಿಗೆ ನಡೆಯಲಾಗುವುದಿಲ್ಲ. ಈಗ ಅವರು ನಮ್ಮನ್ನು ಸತ್ಸಂಗ-ಭಜನೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಆದ್ದರಿಂದ ಅವರ ವಯಸ್ಸು ಮೂರೇ ತಿಂಗಳು" ಎಂದಾಗ, ಸನ್ಯಾಸಿಗೆ ಮೈ ಬೆವರಿತು.


ಆತನೆಂದ, "ತಾಯೇ! ನಿನ್ನ ಲೆಕ್ಕದಲ್ಲಿ ನಾನಿನ್ನೂ ಹುಟ್ಟಲೇ ಇಲ್ಲ" ಎಂದ. (ಸನ್ಯಾಸಿ ಸುಮ್ಮನೆ ಭಿಕ್ಷೆ ಬೇಡುತ್ತಾ ತಿರುಗುತ್ತಾ ಇದ್ದನಂತೆ.)


ಆತ್ಮಾನ್ವೇಷಣೆಯ ಹಾದಿಯಲ್ಲಿ ನಮಗೆಷ್ಟು ವಯಸ್ಸಾಗಿದೆ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬಹುದು.

ದ್ರೋಣಪುಷ್ಪಂ (ತುಂಬೆ)

             ದ್ರೋಣಪುಷ್ಪ, ದ್ರೋಣಪುಷ್ಪಿ, ಚಿತ್ರಪತ್ರಿಕಾ, ರುದ್ರಪಾದ, ರುದ್ರಪುಷ್ಪ, ಚಿತ್ರಕ್ಷಪ, ತುಮ್ಮ ಚೆಟ್ಟು, ತುಂಬೈಚಡಿ, ಚೋಟ ಕಲ್ಕುಶ, ಭೂತಮರಿ ಎಂಬ ಹೆಸರುಗಳಿಂದ ಕರೆಯುತ್ತಾರೆ.

    ತುಂಬೆ ಗಿಡವು ಪಾಳುಭೂಮಿ, ತೋಟ ಹೊಲಗಳ ಬದುಗಳ ಮೇಲೆ, ರಸ್ತೆಗಳ ಪಕ್ಕ ಕಳೆಯಂತೆ ತಾನಾಗೆ 2-3 ಅಡಿ ಬೆಳೆಯುವ ಒಂದು ಪುಟ್ಟ ಸಸ್ಯ. ಇದರಲ್ಲಿ ತುಂಬೆ, ಕಾಡು ತುಂಬೆ, ಹೆದ್ದುಂಬೆ ಎಂಬ ಮೂರ್ನಾಲ್ಕು ಪ್ರಭೇದಗಳಿದ್ದುಗಳಿದ್ದರೂ, ಬಿಳಿ ಹೂವುಗಳು ಬಿಡುವ ತುಂಬೆ ಗಿಡವನ್ನೆ ಹೆಚ್ಚಾಗಿ ಔಷಧೀಯವಾಗಿ, ಪುರಾತನ ಕಾಲದಿಂದಲೂ ಪೂರ್ವಿಕರು, ಋಷಿಮುನಿಗಳು, ಆಯುರ್ವೇದ ಪಂಡಿತರು, ವೈದ್ಯರು ಬಳಸುತ್ತಾ ಬಂದಿದ್ದಾರೆ.ಈಗಲೂ ಅನೇಕ ವ್ಯಾಧಿಗಳನ್ನು ಗುಣಪಡಿಸಲು, ಸಮೂಲ ಸಹಿತ ಆಯುರ್ವೇದ, ಯುನಾನಿ, ಸಿದ್ಧ ಔಷಧೀಯ ಪದ್ದತಿಯಲ್ಲಿ ಬಳಸುತ್ತಿದ್ದಾರೆ. ತುಂಬೆ ಗಿಡವನ್ನು ಕಳೆಸಸ್ಯದಂತೆ ತಾತ್ಸಾರದಿಂದ ಕಂಡರೂ, ಇದರಲ್ಲಿ ಅಪಾರ ಔಷಧೀಯ ಭಂಡಾರವೆ ತುಂಬಿದೆ.

    ತುಂಬೆ ಹೂವು ಶಿವನಿಗೆ ತುಂಬಾ ಪ್ರಿಯವಾದದ್ದು, ಶ್ರೇಷ್ಠ ಹಾಗು ಪವಿತ್ರವಾದದ್ದು, ಏಕಾದಶಿ, ಶಿವರಾತ್ರಿ ಹಬ್ಬಗಳಲ್ಲಿ ತುಂಬೆ ಹೂವುಗಳನ್ನು ಅರ್ಚನೆಗೆ ತಪ್ಪದೆ ಬಳಸುತ್ತಾರೆ. ವಿಶೇಷ ಪೂಜೆಗಳಲ್ಲಿ ತುಂಬೆ ಹೂವಿನ ಮಾಲೆ ತಯಾರಿಸಿ ರುದ್ರನನ್ನು ಅಲಂಕರಿಸುತ್ತಾರೆ. 

     ಒಂದು ಮಣ್ಣಿನ ಮಡಿಕೆಯಲ್ಲಿ 30-40 ತುಂಬೆ ಹೂವುಗಳು, ಚಿಟಿಕೆ ಜೀರಿಗೆ, 5-6 ಕಾಳುಮೆಣಸು, ಚಿಟಿಕೆ ಅರಸಿಣ, ಒಂದು ಸಣ್ಣ ಗೋಲಿಗಾತ್ರ ಬೆಲ್ಲ,  200ml ನೀರು ಹಾಕಿ ಚೆನ್ನಾಗಿ ಕುದಿಸಿ,100ml ಆದಾಗ ಕೆಳಗಿಳಿಸಿ, ಊಟಕ್ಕೆ ಅರ್ಧ ಗಂಟೆ ಮೊದಲು 30ml ನಂತೆ, ಬೆಳಿಗ್ಗೆ ಮಧ್ಯಾಹ್ನ ಸಂಜೆ ಸೇವಿಸಿದರೆ, ಜ್ವರ, ನೆಗಡಿ, ಕೆಮ್ಮು,ದಮ್ಮು, ಕಫ, ವಾತ, ಪಿತ್ತ,  ಮೂತ್ರಕೋಶ ಸಮಸ್ಯೆ, ಶ್ವಾಸಕೋಶ ಸಮಸ್ಯೆ ನಿವಾರಣೆಯಾಗುತ್ತೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ರಕ್ತ ಶುದ್ಧಿಯಾಗುತ್ತೆ. 

  ತುಂಬೆ ಎಲೆ ಅಥವಾ ಹೂವುಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸ್ನಾನ ಮಾಡುವ ನೀರಲ್ಲಿ ಕಲಸಿ, ಸ್ನಾನ ಮಾಡುವುದರಿಂದ ಅನೇಕ ರೀತಿಯ ಚರ್ಮವ್ಯಾಧಿಗಳು ನಿವಾರಣೆಯಾಗುತ್ತೆ.

   ಅರ್ಧ ತಲೆನೋವು ಇದ್ದಾಗ, ಎಡಗಡೆ ಇದ್ದರೆ ಬಲಗಡೆ ಮೂಗಿನ ಒಳ್ಳೆಗೆ, ಬಲಗಡೆ ಇದ್ದರೆ ಎಡಗಡೆ ಮೂಗಿನ ಒಳ್ಳೆಗೆ 2-3 ಹನಿ ತುಂಬೆ ರಸವನ್ನು ಹಾಕುವುದರಿಂದ ಬೇಗ ಶಮನವಾಗುತ್ತೆ. ಕಿವಿ ನೋವಿದ್ದಾಗ ಇದೇರೀತಿ 2-3 ಹನಿ ಹಾಕಿದರೆ, ಕಿವಿನೋವು ನಿವಾರಣೆಯಾಗುತ್ತೆ.

    ಚೇಳು, ವಿಷಕ್ರಿಮಿ, ಜೇನುನೊಣ ಕಚ್ಚಿದಾಗ, ತುಂಬೆ ಗಿಡದ ರಸವನ್ನು ಗಾಯದ ಮೇಲೆ ಲೇಪಿಸಿ, 1 ಚಮಚ ರಸವನ್ನು ಅರ್ಧಗಂಟೆಗೊಮ್ಮೆ ಹೊಟ್ಟೆಗೆ ಕೊಟ್ಟರೆ, ವಿಷ ಇಳಿದು ಪ್ರಾಣಾಪಾಯದಿಂದ ಪಾರಾಗುತ್ತಾರೆ.

   ತುಂಬೆ ಎಲೆ ಅಥವಾ ಹೂವಿನ ರಸಕ್ಕೆ ಜೇನುತುಪ್ಪ ಕಲಸಿ ಹೊಟ್ಟೆಗೆ ಸೇವಿಸಿದರೆ, ಹುಳು, ಜಂತುಹುಳು, ಸತ್ತು ಮಲದಲ್ಲಿ ಹೊರ ಬರುತ್ತವೆ.

    ಸ್ತ್ರೀಯರಲ್ಲಿ ಸಂತಾನ ಹಾಗು ಋತಸ್ರಾವ ಸಮಸ್ಯೆಗಳು ಇದ್ದಾಗ, ತುಂಬೆ ಎಲೆ, ಕಾಳುಮೆಣಸು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಒಂದು ಸಣ್ಣ ಗೋಲಿಗಾತ್ರ ಉಗರು ಬೆಚ್ಚಗಿನ ನೀರಲ್ಲಿ ಕಲಸಿ, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು, ಮುಟ್ಟಾದ 3-4 ದಿನ ಹೊಟ್ಟೆಗೆ ತೆಗೆದುಕೊಂಡು, ಸಪ್ಪೆ ಊಟ ತಿಂದರೆ ಮೇಲಿನ ಸಮಸ್ಯೆಗಳು ನಿವಾರಣೆಗುತ್ತೆ. ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆನೋವು, ಗರ್ಭಾಶಯ ಸಮಸ್ಯೆಗಳು ದೂರವಾಗಿ ಸಂತಾನ ಭಾಗ್ಯ ಲಭಿಸುತ್ತೆ.

    ತುಂಬೆ ಎಲೆ ಹಾಗು ಕಾಳುಮೆಣಸು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಬೆಳಿಗ್ಗೆ ಸಂಜೆ ಒಂದು ಸಣ್ಣ ಗೋಲಿಗಾತ್ರ, ಒಂದು ಲೋಟ ಮಜ್ಜಿಗೆಯಲ್ಲಿ ಕಲಸಿ ಹೊಟ್ಟೆಗೆ ಒಂದು ವಾರ ತೆಗೆದುಕೊಂಡರೆ ಕಾಮಾಲೆರೋಗ ಗುಣವಾಗುತ್ತೆ.

    ತುಂಬೆ ಎಲೆ ರಸ ಹಾಗು ಎಳ್ಳೆಣ್ಣೆ ಸಮನಾಗಿ ತೆಗೆದುಕೊಂಡು, ಒಲೆಯಮೇಲಿಟ್ಟು ಚೆನ್ನಾಗಿ ಕುದಿಸಿ, ಎಣ್ಣೆಮಾತ್ರ ಉಳಿದಾಗ ಕೆಳಗಿಳಿಸಿ ಸೋಸಿಕೊಂಡು, ಅದಕ್ಕೆ ಚಿಟಿಕೆ ಗಡ್ಡೆ ಕರ್ಫುರಾ ಮಿಶ್ರಣಮಾಡಿ ಒಂದು ಸೀಸೆಯಲ್ಲಿ ಶೇಖರಿಸಿಟ್ಟುಕೊಂಡು, ಕೀಲುನೋವು, ವಾತನೊವು, ಮಾಂಸಖಂಡಗಳ ನೋವು ಇರುವ ಕಡೆ ಲೇಪಿಸುತ್ತಿದ್ದರೆ ನೋವು ಬೇಗ ವಾಸಿಯಾಗುತ್ತೆ.

    ತುಂಬೆ ಎಲೆ, ಕೊಮ್ಮೆ ಬೇರು, ಕಾಳುಮೆಣಸು ನುಣ್ಣಗೆ ಅರೆದು ಅವರೇಕಾಳು ಪ್ರಮಾಣದಲ್ಲಿ ಬೆಳಿಗ್ಗೆ ಸಂಜೆ ಉಗರು ಬೆಚ್ಚಗಿನ ನೀರಲ್ಲಿ ತೆಗೆದುಕೊಂಡರೆ, ಜೀರ್ಣಶಕ್ತಿ ಹೆಚ್ಚುತ್ತೆ, ಶ್ವಾಸಕೋಶಗಳು ಶುದ್ದಿಯಾಗುತ್ತೆ. 

    ತುಂಬೆ ಎಲೆ, ಶುಂಠಿ, ಬೆಲ್ಲವನ್ನು ಸಮನಾಗಿ ತೆಗೆದುಕೊಂಡು, ನುಣ್ಣಗೆ ಅರೆದು, ಮಕ್ಕಳಿಗೆ 2 ಚಿಟಿಕೆ, ದೊಡ್ಡವರು ಒಂದು ಚಮಚದಂತೆ ಬೆಳಿಗ್ಗೆ ಸಂಜೆ ಸೇವಿಸಿದರೆ, ಕಫ, ಕೆಮ್ಮು, ನೆಗಡಿ, ಗಂಟಲಕೆರೆತ ನಿವಾರಣೆಯಾಗುತ್ತೆ.

    ತುಂಬೆ ಎಲೆಗಳ ರಸಕ್ಕೆ, ನಿಂಬೆರಸ, ಅರಸಿಣ, ಕಲ್ಲುಪ್ಪು ಬೆರಸಿ, ಹುಳುಕಡ್ಡಿ, ಗಜ್ಜಿ, ನವೆ, ಇಸಬು ಗಜಕರ್ಣದ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ಗುಣವಾಗುತ್ತೆ.

    ತುಂಬೆ ಎಲೆಗಳ ರಸಕ್ಕೆ ಬೆಲ್ಲ ಅಥವಾ ಜೇನುತುಪ್ಪ ಕಲಸಿ ಗೌತಲಮ್ಮ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ವಾಸಿಯಾಗುತ್ತೆ.

     ಒಂದು ಚಮಚ ತುಂಬೆ ಎಲೆಯ ರಸಕ್ಕೆ ಚಿಟಿಕೆ ಕಾಳುಮೆಣಸು, ಜೀರಿಗೆ ಸೇರಿಸಿ, ಬೆಳಿಗ್ಗೆ ಸಂಜೆ ಊಟಕ್ಕೆ ಅರ್ಧ ಗಂಟೆ ಮೊದಲು ಸೇವಿಸಿದರೆ ಮಧುಮೇಹ ಹತೋಟಿಗೆ ಬರುತ್ತೆ.

     ತುಂಬೆರಸವನ್ನು ಮೂಲವ್ಯಾಧಿ ಮೇಲೆ ಲೇಪಿಸುತ್ತಿದ್ದರೆ ಶೀಘ್ರ ನಿವಾರಣೆಯಾಗುತ್ತೆ.


"ತುಂಬೆಯ ಉಪಯೋಗಗಳು ಅಪಾರವಾದದ್ದು"

        ಸೂಚನೆ:- ತುಂಬೆ ಉಪಯೋಗಿಸುವ ಮೊದಲು ಆಯುರ್ವೇದ ವೈದ್ಯರ ಸಲಹೆ ಪಡೆದುಕೊಳ್ಳಿ...

 

October 20, 2020

ಲಿಂಗಾಷ್ಟೋತ್ತರಶತನಾಮ

 

ಲಿಂಗಾಷ್ಟೋತ್ತರಶತನಾಮಾವಲಿಃ

.. ಶ್ರೀ ಲಿಂಗೇಭ್ಯೋ ನಮಃ ..

ಲಿಂಗ ಧ್ಯಾನಂ

ಲಿಂಗಮೂರ್ತಿಂ ಶಿವಂ ಸ್ತುತ್ವ ಗಾಯತ್ರ್ಯ ಯೋಗಮಾಪ್ತವಾನ್ . ನಿರ್ವಾಣಂ ಪರಮಂ ಬ್ರಹ್ಮ ವಶಿಷ್ಠೋನ್ಯಶ್ಚ ಶಂಕರಾತ್ ..

ಅಥ ಲಿಂಗಾಷ್ಟೋತ್ತರಶತನಾಮಾವಲಿಃ .

ಓಂ ಲಿಂಗಮೂರ್ತಯೇ ನಮಃ ಓಂ ಶಿವಲಿಂಗಾಯ ನಮಃ ಓಂ ಅದ್ಭುತಲಿಂಗಾಯ ನಮಃ ಓಂ ಅನುಗತಲಿಂಗಾಯ ನಮಃ ಓಂ ಅವ್ಯಕ್ತಲಿಂಗಾಯ ನಮಃ ಓಂ ಅರ್ಥಲಿಂಗಾಯ ನಮಃ ಓಂ ಅಚ್ಯುತಲಿಂಗಾಯ ನಮಃ ಓಂ ಅನಂತಲಿಂಗಾಯ ನಮಃ ಓಂ ಅನೇಕಲಿಂಗಾಯ ನಮಃ (10) ಓಂ ಅನೇಕಸ್ವರೂಪಲಿಂಗಾಯ ನಮಃ ಓಂ ಅನಾದಿಲಿಂಗಾಯ ನಮಃ ಓಂ ಆದಿಲಿಂಗಾಯ ನಮಃ ಓಂ ಆನಂದಲಿಂಗಾಯ ನಮಃ ಓಂ ಆತ್ಮಾನಂದಲಿಂಗಾಯ ನಮಃ ಓಂ ಅರ್ಜಿತಪಾಪವಿನಾಶಲಿಂಗಾಯ ನಮಃ ಓಂ ಆಶ್ರಿತರಕ್ಷಕಲಿಂಗಾಯ ನಮಃ ಓಂ ಇಂದುಲಿಂಗಾಯ ನಮಃ ಓಂ ಇಂದ್ರಿಯಲಿಂಗಾಯ ನಮಃ ಓಂ ಇಂದ್ರಾದಿಪ್ರಿಯಲಿಂಗಾಯ ನಮಃ (20) ಓಂ ಈಶ್ವರಲಿಂಗಾಯ ನಮಃ ಓಂ ಊರ್ಜಿತಲಿಂಗಾಯ ನಮಃ ಓಂ ಋಗ್ವೇದಶ್ರುತಿ ಲಿಂಗಾಯ ಓಂ ಏಕಲಿಂಗಾಯ ನಮಃ ಓಂ ಐಶ್ವರ್ಯಲಿಂಗಾಯ ನಮಃ ಓಂ ಓಂಕಾರಲಿಂಗಾಯ ನಮಃ ಓಂ ಹ್ರೀನ್ಕಾರಲಿಂಗಾಯ ನಮಃ ಓಂ ಕನಕಲಿಂಗಾಯ ನಮಃ ಓಂ ವೇದಲಿಂಗಾಯ ನಮಃ ಓಂ ಪರಮಲಿಂಗಾಯ ನಮಃ (30) ಓಂ ವ್ಯೋಮಲಿಂಗಾಯ ನಮಃ ಓಂ ಸಹಸ್ರಲಿಂಗಾಯ ನಮಃ ಓಂ ಅಮೃತಲಿಂಗಾಯ ನಮಃ ಓಂ ವಹ್ನಿಲಿಂಗಾಯ ನಮಃ ಓಂ ಪುರಾಣಲಿಂಗಾಯ ನಮಃ ಓಂ ಶ್ರುತಿಲಿಂಗಾಯ ನಮಃ ಓಂ ಪಾತಾಲಲಿಂಗಾಯ ನಮಃ ಓಂ ಬ್ರಹ್ಮಲಿಂಗಾಯ ನಮಃ ಓಂ ರಹಸ್ಯಲಿಂಗಾಯ ನಮಃ ಓಂ ಸಪ್ತದ್ವೀಪೋರ್ಧ್ವಲಿಂಗಾಯ ನಮಃ ಓಂ ನಾಗಲಿಂಗಾಯ ನಮಃ (40) ಓಂ ತೇಜೋಲಿಂಗಾಯ ನಮಃ ಓಂ ಊರ್ಧ್ವಲಿಂಗಾಯ ನಮಃ ಓಂ ಅಥರ್ವಲಿಂಗಾಯ ನಮಃ ಓಂ ಸಾಮಲಿಂಗಾಯ ನಮಃ ಓಂ ಯಜ್ಞಾಂಗಲಿಂಗಾಯ ನಮಃ ಓಂ ಯಜ್ಞಲಿಂಗಾಯ ನಮಃ ಓಂ ತತ್ವಲಿಂಗಾಯ ನಮಃ ಓಂ ದೇವಲಿಂಗಾಯ ನಮಃ ಓಂ ವಿಗ್ರಹಲಿಂಗಾಯ ನಮಃ ಓಂ ಭಾವಲಿಂಗಾಯ ನಮಃ (50) ಓಂ ರಜೋಲಿಂಗಾಯ ನಮಃ ಓಂ ಸತ್ವಲಿಂಗಾಯ ನಮಃ ಓಂ ಸ್ವರ್ಣ ಲಿಂಗಾಯ ಓಂ ಸ್ಫಟಿಕಲಿಂಗಾಯ ನಮಃ ಓಂ ಭವಲಿಂಗಾಯ ನಮಃ ಓಂ ತ್ರೈಗುಣ್ಯಲಿಂಗಾಯ ನಮಃ ಓಂ ಮಂತ್ರಲಿಂಗಾಯ ನಮಃ ಓಂ ಪುರುಷಲಿಂಗಾಯ ನಮಃ ಓಂ ಸರ್ವಾತ್ಮಲಿಂಗಾಯ ನಮಃ ಓಂ ಸರ್ವಲೋಕಾಂಗಲಿಂಗಾಯ ನಮಃ (60) ಓಂ ಬುದ್ಧಿಲಿಂಗಾಯ ನಮಃ ಓಂ ಅಹಂಕಾರಲಿಂಗಾಯ ನಮಃ ಓಂ ಭೂತಲಿಂಗಾಯ ನಮಃ ಓಂ ಮಹೇಶ್ವರಲಿಂಗಾಯ ನಮಃ ಓಂ ಸುಂದರಲಿಂಗಾಯ ನಮಃ ಓಂ ಸುರೇಶ್ವರಲಿಂಗಾಯ ನಮಃ ಓಂ ಸುರೇಶಲಿಂಗಾಯ ನಮಃ ಓಂ ಮಹೇಶಲಿಂಗಾಯ ನಮಃ ಓಂ ಶಂಕರಲಿಂಗಾಯ ನಮಃ ಓಂ ದಾನವನಾಶಲಿಂಗಾಯ ನಮಃ (70) ಓಂ ರವಿಚಂದ್ರಲಿಂಗಾಯ ನಮಃ ಓಂ ರೂಪಲಿಂಗಾಯ ನಮಃ ಓಂ ಪ್ರಪಂಚಲಿಂಗಾಯ ನಮಃ ಓಂ ವಿಲಕ್ಷಣಲಿಂಗಾಯ ನಮಃ ಓಂ ತಾಪನಿವಾರಣಲಿಂಗಾಯ ನಮಃ ಓಂ ಸ್ವರೂಪಲಿಂಗಾಯ ನಮಃ ಓಂ ಸರ್ವಲಿಂಗಾಯ ನಮಃ ಓಂ ಪ್ರಿಯಲಿಂಗಾಯ ನಮಃ ಓಂ ರಾಮಲಿಂಗಾಯ ನಮಃ ಓಂ ಮೂರ್ತಿಲಿಂಗಾಯ ನಮಃ (80) ಓಂ ಮಹೋನ್ನತಲಿಂಗಾಯ ನಮಃ ಓಂ ವೇದಾಂತಲಿಂಗಾಯ ನಮಃ ಓಂ ವಿಶ್ವೇಶ್ವರಲಿಂಗಾಯ ನಮಃ ಓಂ ಯೋಗಿಲಿಂಗಾಯ ನಮಃ ಓಂ ಹೃದಯಲಿಂಗಾಯ ನಮಃ ಓಂ ಚಿನ್ಮಯಲಿಂಗಾಯ ನಮಃ ಓಂ ಚಿದ್ಘನಲಿಂಗಾಯ ನಮಃ ಓಂ ಮಹಾದೇವಲಿಂಗಾಯ ನಮಃ ಓಂ ಲಂಕಾಪುರಲಿಂಗಾಯ ನಮಃ ಓಂ ಲಲಿತಲಿಂಗಾಯ ನಮಃ (90) ಓಂ ಚಿದಂಬರಲಿಂಗಾಯ ನಮಃ ಓಂ ನಾರದಸೇವಿತಲಿಂಗಾಯ ನಮಃ ಓಂ ಕಮಲಲಿಂಗಾಯ ನಮಃ ಓಂ ಕೈಲಾಶಲಿಂಗಾಯ ನಮಃ ಓಂ ಕರುಣಾರಸಲಿಂಗಾಯ ನಮಃ ಓಂ ಶಾಂತಲಿಂಗಾಯ ನಮಃ ಓಂ ಗಿರಿಲಿಂಗಾಯ ನಮಃ ಓಂ ವಲ್ಲಭಲಿಂಗಾಯ ನಮಃ ಓಂ ಶಂಕರಾತ್ಮಜಲಿಂಗಾಯ ನಮಃ ಓಂ ಸರ್ವಜನಪೂಜಿತಲಿಂಗಾಯ ನಮಃ (100) ಓಂ ಸರ್ವಪಾತಕನಾಶನಲಿಂಗಾಯ ನಮಃ ಓಂ ಗೌರಿಲಿಂಗಾಯ ನಮಃ ಓಂ ವೇದಸ್ವರೂಪಲಿಂಗಾಯ ನಮಃ ಓಂ ಸಕಲಜನಪ್ರಿಯಲಿಂಗಾಯ ನಮಃ ಓಂ ಸಕಲಜಗದ್ರಕ್ಷಕಲಿಂಗಾಯ ನಮಃ ಓಂ ಇಷ್ಟಕಾಮ್ಯಾರ್ಥಫಲಸಿದ್ಧಿಲಿಂಗಾಯ ನಮಃ ಓಂ ಶೋಭಿತಲಿಂಗಾಯ ನಮಃ ಓಂ ಮಂಗಲಲಿಂಗಾಯ ನಮಃ (108)

ಇತಿ ಲಿಂಗಾಷ್ಟೋತ್ತರ ಶತ ನಾಮಾವಲಿ ಸಮಾಪ್ತಃ


ಶ್ರೀಶಿವಪಂಚಾಕ್ಷರಾಷ್ಟೋತ್ತರಶತನಾಮಾವಲಿಃ

 

ಶ್ರೀಶಿವಪಂಚಾಕ್ಷರಾಷ್ಟೋತ್ತರಶತನಾಮಾವಲಿಃ

ಶ್ರೀಗಣೇಶಾಯ ನಮಃ . ಓಂ ಓಂಕಾರರೂಪಾಯ . ಓಂಕಾರಾಯ . ಓಂಕಾರಪದ್ಮನಿಲಯಾಯ . ಓಂಕಾರನಿಲಯಾಯ . ಓಂಕಾರಬೀಜಾಯ . ಓಂಕಾರಸುಲಕ್ಷಣಾಯ . ಓಂಕಾರಮಂತ್ರಾಯ . ಓಂಕಾರತಂತ್ರಾಯ . ಓಂಕಾರನಿವಾಸಿನೇ . ಓಂಕಾರಯಂತ್ರಾಯ . ಓಂಕಾರಪೀಠಾಯ . ಓಂಕಾರವಿಭೂಷಣಾಯ . ಓಂಕಾರವಾಚ್ಯಾಯ . ಓಂಕಾರಲಕ್ಷ್ಯಾಯ . ಓಂಕಾರಸುಪೂಜಿತಾಯ . ಓಂಕಾರವೇದೋಪನಿಷದೇ . ಓಂಕಾರಪ್ರದಕ್ಷಿಣಾಯ . ಓಂಕಾರವಾಚಾಮುದ್ದಂಡಪಂಡಿತಾಯ . ನಕಾರರೂಪಾಯ . ನದ್ಯಾಯ ನಮಃ . 20 ಓಂ ನಟರಾಜಾಯ ನಮಃ . ನಟೇಶ್ವರಾಯ . ನಾರಾಯಣಸಖ್ಯೇ . ನಾಥಾಯ . ನಗವೇಷಧರಾಯ . ನಟಾಯ . ನಕ್ಷತ್ರಮಾಲಾಭರಣಾಯ . ನಾಮರೂಪವಿವರ್ಜಿತಾಯ . ನಯನಾದೃಶ್ಯರೂಪಾಯ . ನಿರ್ಮಲಾಯ . ನಂದಿವಾಹನಾಯ . ನವಗ್ರಹಸ್ವರೂಪಾಯ . ನವ್ಯಹವ್ಯಾಗ್ರಭೋಜನಾಯ . ನಾದಪ್ರಿಯಾಯ . ನಾದರೂಪಾಯ . ನಾಮಪಾರಾಯಣಪ್ರಿಯಾಯ . ಮಕಾರರೂಪಾಯ . ಮಂತ್ರಜ್ಞಾಯ . ಮಂದಾಯ . ಮನ್ಮಥನಾಶನಾಯ ನಮಃ . 40 ಓಂ ಮಂತ್ರಾಲಯಾಯ ನಮಃ . ಮಹೇಶಾಯ . ಮಯೂರಪುರವಾಸಿನೇ . ಮಹಾದೇವಾಯ . ಮಹಾನಾಥಾಯ . ಮಹಾಭೈರವಪೂಜಿತಾಯ . ಮಹಾಕಾಮೇಶ್ವರಾಯ . ಮತ್ತಾಯ . ಮಾನಸಾಯ . ಮಹೇಶ್ವರಾಯ . ಮಹಾಬಾಹವೇ . ಮಹಾಯಜ್ಞಾಯ . ಮಹಾನಿಧಯೇ . ಶಿಕಾರರೂಪಾಯ . ಶಿಷ್ಟೇಷ್ಟಾಯ . ಶಿತಿಕಂಠಾಯ . ಶಿವಾಲಯಾಯ . ಶಿವರೂಪಾಯ . ಶಿವಾನಂದಾಯ . ಶಿಖಿವಾಹನಜನ್ಮಭುವೇ ನಮಃ . 60 ಓಂ ಶಿವಾಯ ನಮಃ . ಶಿವಮಯಾಯ . ಶಿಷ್ಟಪೂಜಿತಾಯ . ಶಿವದಾಯ . ಶಿವಯೋಗಾಯ . ಶಿವಜ್ಞಾನಿನೇ . ಶಿವಚೈತನ್ಯಮಾನಸಾಯ . ಶಿವಪ್ರದಾಯ . ಶಿವಾರಾಧ್ಯಾಯ . ಶಿವಾಲಾಲಿತವಿಗ್ರಹಾಯ . ವಕಾರರೂಪಾಯ . ವಾಮಾಂಗಸುಂದರಾಯ . ವಾಯುವಂದಿತಾಯ . ವಾಗ್ವಿಭೂತಯೇ . ವಾಮದೇವಾಯ . ವಾಲ್ಮಿಕೀಪರಿಪೂಜಿತಾಯ . ವಾತುಲಾಗಮಸಮ್ಸೇವಿತಾಯ . ವರಿಷ್ಠಾಯ . ವರದಾಯಕಾಯ . ವಾಗ್ವಿಕತ್ಥಚರಿತ್ರಾಯ ನಮಃ . 80 ಓಂ ವಾತ್ಸಲ್ಯಪರಮೇಶ್ವರಾಯ ನಮಃ . ವರದಾಭಯಹಸ್ತಾಯ . ವರೇಣ್ಯಾಯ . ವಸುದಾಯ . ವಸವೇ . ವದಾನ್ಯಾಯ . ವಾಮನಯನಾಯ . ವಾಮದೇವಪ್ರಪೂಜಿತಾಯ . ಯಕಾರರೂಪಾಯ . ಯಂತ್ರಜ್ಞಾಯ . ಯಜ್ಞಕರ್ಮಫಲಪ್ರದಾಯ . ಯಜ್ಞಪ್ರಿಯಾಯ . ಯಜ್ಞರೂಪಾಯಾ . ಯಜ್ಞನಾಥಾಯ . ಯಜಪತಯೇ . ಯಜ್ಞಾಯ . ಯಜ್ಞಪತಯೇ . ಯಜ್ಞಪಾಲನತತ್ಪರಾಯ . ಯಜ್ಞಾಸಕ್ತಾಯ . ಯಜ್ಞಭೋಕ್ತ್ರೇ ನಮಃ . 100 ಓಂ ಯತಿವೇದ್ಯಾಯ ನಮಃ . ಯತೀಶ್ವರಾಯ . ಯಜಮಾನಸ್ವರೂಪಾಯ . ಯಜ್ಞಾನಾಂ ಫಲದಾಯಕಾಯ . ಯಜುರ್ವೇದಸ್ವರೂಪಾಯ . ಯಕ್ಷರಾಜನಿಷೇವಿತಾಯ . ಶ್ರೀಸಾಂಬಪರಮೇಶ್ವರಾಯ . ಸದಾಶಿವಾಯ ನಮಃ . 108 ಇತಿ ಶ್ರೀಶಿವಪಂಚಾಕ್ಷರಾಷ್ಟೋತ್ತರಶತನಾಮಾವಲಿಃ ಸಮಾಪ್ತಾ .

October 13, 2020

ಇಷ್ಟಲಿಂಗದ ಮೇಲೆ ಕಂತೆ

 ಇಷ್ಟಲಿಂಗದ ಮೇಲೆ ಕಂತೆ ಏಕೆ ಕೂಡಿಸಬೇಕು 

****************************



ಇಷ್ಟಲಿಂಗ ಪೂಜೆಯಿಂದ ಅಧ್ಯಾತ್ಮಿಕ ಪ್ರಗತಿಯ ಜೋತೆಗೆ ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವು ಸುಧಾರಣೆಯಾಗಿ ಜೀವನವೆಲ್ಲ ಆನಂದಮಯವಾಗಿರುತ್ತದೆ. 


ಇಷ್ಟಲಿಂಗ ದ ಮೇಲೆ ಚಿದ್ರಸ ಕಂತೆ ಏಕೆ ಎಂಬ ಪ್ರಶ್ನೆ ಬಹಳ ಜನರ ಮನಸಿನಲ್ಲಿ ಬಂದಿರುತ್ತದೆ. ಸಂಪೂರ್ಣ ಮಾಹಿತಿ ಇರಲ್ಲ.

    

ಕಂತೆಯಲ್ಲಿ ಗೇರೆಣ್ಣೆಯನ್ನೆ ಏಕೆ ಬಳಸುತ್ತಾರೆಂಬುದು ಸಹ ವಿಚಾರಯೋಗ್ಯ ಅಂಶವೇ. 


ಇಷ್ಟಲಿಂಗಕ್ಕೆ ಮೇಲೆ ಲೇಪಿಸಲು ನಿರ್ಮಿಸಿದ ಕಂಥೆಯು ಭಲ್ಲಾತಕೀ(ಗೇರೆಣ್ಣೆ)ಯಿಂದ ತಯಾರಿಸಲ್ಪಟ್ಟಿರುತ್ತದೆ. 

 

"ಆಯಸ್ಕಾಂತ ಭಲ್ಲಾತಕೀ....... ಇತ್ಯೇನಾನಿ ರಸಾಯನಿ (ವೈದ್ಯಶತಶ್ಲೋಕಿ ಪುಟ(109) 

ಎಂಬ ಉಕ್ತಿಯಲ್ಲಿ ಆಯಸ್ಕಾಂತ ಹಾಗೂ ಗೇರೆಣ್ಣೆಗಳು ರಸಾಯನ ಔಷಧಗಳೆಂದು ಪ್ರತಿಪಾದಿಸಲ್ಪಟ್ಟಿವೆ.


ಗೇರು ಅಥವಾ ಭಲ್ಲಾತಕಕ್ಕೆ ಆಯುರ್ವೇದ ಶಾಸ್ತ್ರದಲ್ಲಿ ಬಹಳ ಮಹತ್ವವಿದೆ. 

"ಭಲ್ಲಾತಕ ಕ್ಷೀರಂ ತತ್ಪ್ರಯೋಗಾತ್ ವರ್ಷಶತಂ ಅಜರಂ ವಯಸ್ತಿಷ್ಠತೀತಿ ಸಮಾನಂ (ಚರಕ ಸಂಹಿತೆ, ಚಿಕಿತ್ಸಾಧ್ಯಾಯ)


ವಿಶುದ್ದಗೊಳಿಸದೇ ಬಳಸಿದಾಗ ಹಲವಾರು ಬಾರಿ ಸುಡುವ ಗಾಯಗೊಳಿಸುವ ಗೇರು, ನೂರುಕಾಲ ಬಾಳು ನೀಡುವ ಅಮೃತೌಷಧವೆಂದೂ ಪರಿಗಣಿತವಾಗಿದೆ. ಇಂತಹ  ಸುಡುವ ಅಗ್ನಿಯ ತೆರದಿ ಇರುವ ಗೇರು ಯಥೋಚಿತವಾಗಿ ಬಳಸಿದಾಗ ಅಮೃತಸದೃಶವಾಗಿ ಮಾನವ ಶರೀರಕ್ಕೆ ಉಪಕರಿಸುತ್ತದೆ.


ಬಯಲು ಸೀಮೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಕೇರುಮರದ ಔಷಧ ಪ್ರಭಾವ ಮೂರು ಸಾವಿರ ವರ್ಷಗಳಿಂದ ನಮ್ಮ ಜನರಿಗೆ ಚಿರಪರಿಚಿತ.

ಕೇರುಕಾಯಿ (ಕ್ಯಾರು ಅಂತಾರೆ ಹಳ್ಳಿಕಡೆ)  

ಕೇರುಕಾಯಿಯನ್ನು ನೋಡಿದರೆ ತಟ್ಟನೇ ನಮಗೆ ಪಾಣಿಪೀಠದ ಮೇಲಿನ (ಕೈಯಲ್ಲಿ) ಲಿಂಗದ ನೆನಪಾಗುತ್ತದೆ. ದುಂಡನೆಯ ಮಾಂಸಲ ಹಣ್ಣು ಪಾಣಿಪೀಠದಂತಿದೆ.  ನಡುವೆ ಬಾಣದಾಕಾರದ ಲಿಂಗವನ್ನು ಹೋಲುವ ಬೀಜ. ಜನಪದೀಯರಲ್ಲಿ ಒಂದು ಸಾದೃಶ್ಯ ಸಿದ್ದಾಂತ ಬಹಳ ಮಹತ್ವ ಪಡೆದಿದೆ. ಅಥರ್ವ ವೇದದ ಕಾಲದಿಂದಲೂ ಈ ಸಿದ್ದಾಂತವು ಸಾಧಿತವಾಗಿದೆ.  ಲಿಂಗಾಕಾರದ ಕೇರುಹಣ್ಣನ್ನು ಕೇವಲ ಆಕಾರದ ದೃಷ್ಟಿಯಿಂದ ಮಾತ್ರ ಲಿಂಗದ ಕಂತೆಗೆ ಬಳಸಲಾಗಿದೆಯೆಂದರೆ ಅಸಮರ್ಥನೀಯವೆನಿಸುತ್ತದೆ.


ಭಲ್ಲಾತಕ ಅಥವಾ ಕೇರು ಬಹಳ ಶಕ್ತಿಶಾಲಿ ಔಷಧ, ಉತ್ತಮ ರಸಾಯನವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಹದ ಅಕಾಲ ಮುಪ್ಪನ್ನು ನಿವಾರಿಸುತ್ತದೆ. ರೋಗದ ಕ್ಷಮತೆಯನ್ನು ವರ್ಧಿಸುತ್ತದೆ. ಇನ್ನು ಲಿಂಗವನ್ನು ಅಗ್ನಿ, ತೇಜಸ್ಸು ಎಂಬ ವಿಶೇಷಣಗಳಿಂದಲೂ ಕರೆಯಲಾಗುತ್ತದೆ.  

ಭಲ್ಲಾತಕವನ್ನೂ ಅಗ್ನಿ ಎಂಬ ಪರ್ಯಾಯ ನಾಮದಿಂದ ಕರೆಯಲಾಗುತ್ತದೆ.  ಗುಣ, ಕರ್ಮದಲ್ಲಿ ಅದು ಅಗ್ನಿಸಮನಾಗಿಯೇ ಇದೆ.  ಪಾಪರಾಶಿ ಮತ್ತು ರೋಗರಾಶಿಗಳನ್ನು ಅದು ಭಸ್ಮೀಕರಿಸುವುದೆಂದು ಕಂತೆಗೆ ಬಳಸಿದರು. ಕಾಮಾಲೆ ರೋಗದಲ್ಲಿ 'ಚಿತ್ರಮೂಲ' ವೆಂಬ ಹೆಸರಿನ ದ್ರವ್ಯವನ್ನು ಬಳಸಲಾಗುತ್ತದೆ. ಅದೂ ಕೂಡ ಸುಡುವ ಗುಣವುಳ್ಳದ್ದಾಗಿದ್ದರೂ ಅದನ್ನು ಕಂತೆಗೆ ಬಳಸುವುದಿಲ್ಲ.

ಕೇರನ್ನು ಬಳಸಿ ಲಿಂಗದ ಆಯುಷ್ಯ ಮತ್ತು ಆ ಲಿಂಗವನ್ನು ಧರಿಸುವವನ ಆಯುಷ್ಯವನ್ನು ವೃದ್ಧಿಸುವುದು ಪ್ರಾಚೀನರ ಪ್ರಧಾನ ಗುರಿಯಾಗಿತ್ತು. 

ಹೀಗಾಗಿ ಕಂತೆಯಲ್ಲಿ ಗೇರೆಣ್ಣೆಯನ್ನೇ ಆಧ್ಯ ಪದಾರ್ಥವಾಗಿ ಬಳಸಲಾಗುತ್ತದೆ.

     ಗೇರೆಣ್ಣೆಯನ್ನು ಶುದ್ಧಗೊಳಿಸಿ ಶೂಲ, ಮೂಲವ್ಯಾಧಿ ಮತ್ತು ಅತಿಸಾರ ಮುಂತಾದ ರೋಗಗಳಿಗೆ ಉಪಯೋಗಿಸುವ ವಿಧಾನವು "ಗುಣ ಭೂಷಣ" ವೈಧ್ಯನಿಘಂಟುವಿನಿಂದ ತಿಳಿದುಬರುತ್ತದೆ. ಚರಕಸಂಹಿತೆ ಚಿಕಿತ್ಸಾಸ್ಥಾನ 1 ನೇ ಅಧ್ಯಾಯದಲ್ಲಿ ಭಲ್ಲಾತಕೀ ಅಂದರೆ ಗೇರೆಣ್ಣೆಯನ್ನು ಶುದ್ಧಗೊಳಿಸಿ ಯೋಗ್ಯ ರೀತಿಯಿಂದ ಉಪಯೋಗಿಸಿದರೆ ಅಮೃತ ಸದೃಶವಾಗುತ್ತದೆ ಎಂಬುದನ್ನು ತಿಳಿಸಿ, ಅದರಿಂದ ಭಲ್ಲಾತಕಘೃತ, ಭಲ್ಲಾತಕಕ್ಷೀರ, ಭಲ್ಲಾತಕಕ್ಷೌದ್ರ, ಭಲ್ಲಾತಕಗುಡ, ಭಲ್ಲಾತಕಯೂಷ, ಭಲ್ಲಾತಕತೈಲ, ಭಲ್ಲಾತಕಪಲಲ, ಭಲ್ಲಾತಕಸಕ್ತು, ಭಲ್ಲಾತಕ ಲವಣ ಮತ್ತು ಭಲ್ಲಾತಕ ತರ್ಪಣವೆಂಬ ಹತ್ತು ವಿಧವಾದ ಔಷಧವನ್ನು ತಯಾರಿಸಿ ಉಪಯೋಗಿಸುವ ರೀತಿಯನ್ನು ತಿಳಿಸಲಾಗಿದೆ ಎಂಬ ವಿಷಯವನ್ನು ಶ್ರೀ ಜಿ.ಟಿ. ಅಕ್ಕುಲಯ್ಯ ದೀಕ್ಷಿತರು " ಇಷ್ಟಲಿಂಗ ವಿಜ್ಞಾನ" ಪುಸ್ತಕದಲ್ಲಿ ವಿಶದಪಡಿಸಿದ್ದಾರೆ.


ಸಸ್ಯಾಶಾಸ್ತ್ರದನುಸಾರ Semecarpus anacardium Linn ಎಂದು ಕರೆಯಲ್ಪಡುವ ಭಲ್ಲಾತಕವು ಭಲ್ಲಿ, ಅರುಸ್ಕರ, ಅಗ್ನಿಕ, ಅಗ್ನಿಮುಖ, ವೀರವೃಕ್ಷ ಇತ್ಯಾದಿ ಪರ್ಯಾಯವಾದ ನಾಮಗಳಿಂದ ಗುರುತಿಸಲ್ಪಡುವ ಇದು ಆಂಗ್ಲಭಾಷೆಯಲ್ಲಿ Marking Nut ಎಂಬ ನಾಮದಿಂದ ಪ್ರಸಿದ್ಧವಾಗಿದೆ. Anacardiac acid, cardol, Catechol, Anacardol and Bhilwanol oil ಗಳನ್ನು ಹೊಂದಿರುವ ಇದರ ಹಣ್ಣುಗಳು ಕುಷ್ಠ, ಉಪದಂಶ, ಶುಕ್ರದೌರ್ಬಲ್ಯ, ಮಸ್ತಿಷ್ಕ, ನರದೌರ್ಬಲ್ಯ, ಅಪಸ್ಮಾರ, ಅರ್ಶ, ಯಕೃತ್ - ಪ್ಲೀಹ ವಿಕಾರ, ಹೃದ್ರೋಗ, ಗ್ರಹಣಿ, ಸರ್ಪದಂಶ, ವಾತವಿಕಾರ,ಜ್ವರ ಮುಂತಾದ ರೋಗಗಳಲ್ಲಿ ಅತ್ಯುಪಯುಕ್ತವಾಗಿವೆ. ಮಧುರ -ಕಷಾಯ ರಸದ, ಲಘು ಗುಣವುಳ್ಳ ಸ್ನೀಗ್ಯ- ತೀಕ್ಷ್ಣ ವೀರ್ಯದ, ಮಧುರ ವಿಪಾಕದ ಈ ದ್ರವ್ಯವು ಕಫವಾತ ಶಾಮಕವಾಗಿ , ಪಿತ್ತಸಂಶೋಧಕವಾಗಿಯೂ ಕೆಲಸ ಮಾಡುತ್ತದೆ. ಮೂಲವ್ಯಾಧಿ, ಅಜಿರ್ಣದಿಂದ ಬಳಲುವವರಿಗೆ ಇದು ಉತ್ತಮ ಔಷಧಿಯಾಗಿದೆ.  ಮತವ್ಯಾಧಿ ( Rheumatoid Arthritis ಯಲ್ಲಿ, ಉಳುಕುನೋವುಗಳಿಗೆ , ಕೆಮ್ಮು- ದಮ್ಮುಗಳಿಗೆ ಪ್ರಯೋಜನಕಾರಿಯಾಗಿದೆ. Syphilis, Epilepsy ಗಳಂಥ ಕಷ್ಟಸಾಧ್ಯ ರೋಗಗಳಿಗೂ ಇದು ದಿವ್ಯೌಷದವಾಗಿದೆ. 

ಕೆಲವರಿಗೆ ಅಲರ್ಜಿ ಸಮಸ್ಯೆ ಇರುವವರಿಗೆ ಇದರ ರಸ ತಗುಲಿದರೆ ಕೆಲವರಿಗೆ ವಿಪರೀತ ಕೆರೆತ,ಗಂಧೆಗಳುತ್ಪನ್ನವಾಗಬಹುದು ಇಂತಹವರು ವೈದ್ಯರ ಮಾರ್ಗದರ್ಶನದಲ್ಲಿಯೇ ಇದನ್ನು ಉಪಯೋಗಿಸಬೇಕು. ಇದರ ನೇರ ಬಳಕೆ ನಿಷಿದ್ಧ ವಿದ್ದು ಸೂಕ್ತ ಶೋಧನವಿಧಿಯಿಂದ ಸಂಸ್ಕರಿಸಿದ ನಂತರವೇ ಇದನ್ನು ಬಳಸಬೇಕು.


ಕಂಥೆ:-


ಇಷ್ಟಲಿಂಗವನ್ನು ಸಿದ್ದಪಡಿಸಲು, ಶಿಲಾಲಿಂಗದ ಹೊರಗವಚದ ನಿರ್ಮಾಣಕ್ಕೆ ಬೇಕಾಗುವ ವಸ್ತುವನ್ನು ಕಂತೆ, ಕಾಂಥೆ, ಕಂತಿ ಇತ್ಯಾದಿ ಕರೆಯಲಾಗುತ್ತದೆ. ಈ ಕಂಥೆಯನ್ನು ಕೇರು, ಮಣ್ಣಿನ ಗಡಿಗೆ,ಮುಚ್ಚಳ,ಕೊಡ, ಆಕಳ ಬೆರಣಿ,ಹಾಸುಗಲ್ಲು, ರುಬ್ಬುಗಲ್ಲು, ಚಮಟಿಗೆ, ಕಡಾಯಿ ,ಕಡಚಗಿ, ಹಣತೆ, ರಾಳ , ಜಾಲ್ದೋಪ, ಬತ್ತಿ, ಕುಸುಬಿ ಎಣ್ಣೆ, ಆಕಳತುಪ್ಪ, ಕರ್ಪೂರ, ಶುದ್ಧ ಧೋತರ, ಬಟ್ಟೆ ಇತ್ಯಾದಿ ವಸ್ತುಗಳ ಸಹಾಯದಿಂದ ತಯಾರಿಸಲ್ಪಟ್ಟಿರುತ್ತದೆ. 

ಕಂಥೆಗೆ ಕೇರೆಣ್ಣೆ/ ಗೇರೆಣ್ಣೆಯೇ ಮುಖ್ಯವಾದ ಕಚ್ಛಾಸಾಮಗ್ರಿ. ಇದರೊಂದಿಗೆ ಸೇರಿಸುವ ಪದಾರ್ಥಕ್ಕನುಗುಣವಾಗಿ ನಾಲ್ಕು ಪ್ರಕಾರದ ಕಂಥೆಗಳನ್ನು ಹೇಳಲಾಗುತ್ತದೆ.  ಸಾದಾ ಕಂಥೆ, ಎಣ್ಣೆಕಂಥೆ, ತುಪ್ಪದಕಂಥೆ, ಕರ್ಪೂರದ ಕಂಥೆ ಎಂದು ನಾಲ್ಕು ವಿಧದ ಕಂಥೆಗಳು ಬಳಕೆಯಲ್ಲಿವೆ. ಎಣ್ಣೆ, ಕರ್ಪೂರ ,ತುಪ್ಪ, ದಟ್ಟಕಾಡಿಗೆಯ ಮಸಿಯನ್ನು ಮೂಲಕಂಥೆಯೊಡನೆ ಮಿಶ್ರ ಮಾಡಿದಾಗ ಆಯಾ ಮೂಲವಸ್ತುವಿನ ಕಂಥೆಯೆಂಬ ಪರಿಭಾಷೆಯೊಂದಿಗೆ ಗುರುತಿಸಲಾಗುತ್ತದೆ.

    ಇಷ್ಟಲಿಂಗ ಪೂಜೆಯಲ್ಲಿ ಹೇಳಿದ ಪಿಷ್ಠಾದಿ ಲೇಪನಗಳು ,ಪಂಚಾಮೃತಾದಿ ಅಭೀಷೇಕಗಳು ಕಂಥೆಯಲ್ಲಿ ಉಪಯೋಗಿಸಲ್ಪಟ್ಟ ಗೇರೆಣ್ಣೆಯನ್ನು ಆಯುರ್ವೇದ ಪದ್ದತಿಯಂತೆ ಸಹಜವಾಗಿ ಪ್ರತಿದಿವಸ ಶುದ್ಧಗೊಳಿಸುತ್ತವೆ.

ಒಂದು


ಹೀಗೆ ಪೂಜಿಸಲ್ಪಟ್ಟ ಇಷ್ಟಲಿಂಗದ ಅಭಿಷೇಕೋದಕ ಪ್ರೋಕ್ಷಣ ಹಾಗೂ ಲಿಂಗೋದಕವನ್ನು ಪ್ರತಿದಿನ ಪ್ರಾಶನ ಮಾಡುವುದರಿಂದ ಶಾರೀರಿಕ ರೋಗಗಳೆಲ್ಲ ಸಹಜವಾಗಿ ನಿವೃತ್ತಿಯಾಗಿ ಉತ್ತಮ ಆರೋಗ್ಯ ಲಾಭವು ಪ್ರಾಪ್ತವಾಗುವುದು.


ದೇಹದ ಮೇಲೆ ಇಷ್ಟಲಿಂಗ ಧರಿಸಬೇಕೆಕೆ ?

***********************************

 ಆಕಳಿಗೆ ಮೈಮೇಲೆ ಹುಣ್ಣು ಆದಾಗ ಪಶುವೈದ್ಯನು ಬಂದು ಔಷಧ ಕೊಟ್ಟು ಅದನ್ನು ಆಕಳ ತುಪ್ಪದಲ್ಲಿ ಬೆರೆಸಿ ಗಾಯಕ್ಕೆ ಲೇಪಿಸಲು ಹೇಳುತ್ತಾನೆ. ಜಾಣನಾದ ಆಕಳ ಯಜಮಾನನು "ಅದು ಕರೆವ ಹಸು, ಅದರ ಕೆಚ್ಚಲಲ್ಲಿ ಹಾಲಿದೆ, ಆ ಹಾಲಿನಲ್ಲಿ ತುಪ್ಪವಿದ್ದೇ ಇದೆ. ಆದ್ದರಿಂದ ಔಷಧವನ್ನು ಮಾತ್ರ ಹುಣ್ಣಿಗೆ ಹಚ್ಚಿದರೆ ಸಾಕು" ಎಂದು ತಿಳಿದರೆ ಆ ಹುಣ್ಣು ಮಾಯದು. ಅದಕ್ಕಾಗಿ ಹಾಲು ಕರೆದು, ಕಾಯಿಸಿ, ಹೆಪ್ಪು ಹಾಕಿ, ಮೊಸರು ಕಡೆದು, ಬೆಣ್ಣೆ ತೆಗೆದು, ಅದನ್ನು ಕಾಯಿಸಿ ತುಪ್ಪ ಮಾಡಿ ಅದನ್ನು ಔಷಧಕ್ಕೆ ಬೆರೆಸಿ ಗಾಯಕ್ಕೆ ಬಳಿದಾಗಲೇ ಅದು ವಾಸಿಯಾದೀತು! ಅದರಂತೆ ಮಾನವನ ಶರೀರದಲ್ಲಿ ಶಿವಕಲೆ ಇರುವುದು ನಿಜ. ಮಾನವನಿಗೆ ಬಂದಿರುವ ಹುಟ್ಟುಸಾವು ಎಂಬ "ಭವರೋಗ"ವು ವಾಸಿಯಾಗಬೇಕಾದರೆ ಸದ್ಗುರು ಎಂಬ ಭವರೋಗವೈದ್ಯನು ಇಷ್ಟಲಿಂಗವೆಂಬ ಔಷಧಕ್ಕೆ ಅವ(ಆ ಶಿಷ್ಯ)ನಲ್ಲಿಯೇ ಇರುವ ಶಿವಕಲೆಯನ್ನು ಆಕರ್ಷಿಸಿ, ಇಷ್ಟಲಿಂಗದಲ್ಲಿ ಸ್ಥಾಪಿಸಿ, ಅದನ್ನು ಶಿಷ್ಯನಿಗೆ ಧರಿಸಿ, ವಿಧ್ಯುಕ್ತವಾಗಿ ಭಕ್ತಿಯಿಂದ ಆರಾಧಿಸಲು ಹೇಳುತ್ತಾನೆ. ಗುರುವಿನ ಆದೇಶದಂತೆ ಆ ಲಿಂಗವನ್ನು ಪೂಜಿಸಿ, ಅನುಸಂಧಾನ ಮಾಡುವುದರಿಂದ ಮಾನವನು ಭವರೋಗದಿಂದ ಬಿಡಲ್ಪಟ್ಟು ಮುಕ್ತನಾಗುತ್ತಾನೆ. ಆದ್ದರಿಂದ ಇಷ್ಟಲಿಂಗವನ್ನು ದೇಹದ ಮೇಲೆ ಅವಶ್ಯವಾಗಿ ಧರಿಸಬೇಕು.


                            1)ಇಷ್ಟಲಿಂಗದ  ಒಳಗಡೆ ಇರುವ ಚಿಕ್ಕದಾದ ಪೀಠಿಕೆಯು ತುಂಬಾ  ಸೂಕ್ಷ್ಮವಾಗಿ ( ಸೂಕ್ಷ್ಮ ವಸ್ತು ಗ ಳಿಂದ ) ರೂಪಿತವಾಗಿರುತ್ತದೆ..!!              ಇಷ್ಟಲಿಂಗಕ್ಕೆ  ವಿವಿಧ  ಪೂಜಾ ವಿಧಾನದ  ಅಭಿಷೇಕದ ವಸ್ತು ಗಳಿಂದ  ಹಾನಿಯಾಗುವ  ಸಂ ಭವವಿರುತ್ತದೆ  -  ಹಾಗಾಗಿ  ಅದ ರ  ರಕ್ಷಣಾ  ಕವಚವಾಗಿ -  ಗೋ ಳಾಕಾರದಲ್ಲಿ  ಕಂತಿ ( ಕಾಂತಿ)   ಕಟ್ಟಿರುತ್ತಾರೆ  ಹಾಗೂ  ಅದಕ್ಕೆ  ಹೊಳಪು  ನೀಡಲಾಗಿರು ತ್ತದೆ ..!!!


2) ಇಷ್ಟ ಲಿಂಗ ಅಸ್ತ ಧಾತುವಿಂದ ತಯಾರಿಸುತ್ತಾರೆ, ಆಕಳ ತುಪ್ಪವನ್ನು ಸುತ್ತು ಅದರಿಂದ ಬರುವ ಕಾಡಿಗೆ ಇಂದ ತಯಾರಿಸುತ್ತಾರೆ,


      ಇಷ್ಟ ಲಿಂಗ ಎಡ ಕೈಲಿ ಇಟ್ಟುಕೊಂಡೆ ಪೂಜಿಸುತ್ತಾರೆ, ಯಾಕೆ ಅಂದ್ರೆ, ನಮ್ಮ ದೇಹದ ಬಲ ಮೆದುಳು ಎಡ ಹಾಗೂ ಎಡ ಮೆದುಳು ದೇಹದ ಬಲಭಾಗವನ್ನು ನಿಯಂತ್ರಿಸುತ್ತದೆ.

ದೇಹದ ಬಳ ಮೆದುಳು ಪ್ರೀತಿ , ಕರುಣೆ, ಸ್ನೇಹ etc... ಅದರ ಕೆಲಸ.


       ಇಷ್ಟಲಿಂಗ ಕಪ್ಪಾಗಿರುವುದರಿಂದ, ನಮ್ಮ ಕಣ್ಣು ಕಪ್ಪಿರುವುದರಿಂದ ಕಪ್ಪು  ಬೇಗನೆ observing capacity  ಹೊಂದುವುದು.

ಇದರಿಂದ ಮೆದುಳಿನ ಹಿಂಭಾಗದಲ್ಲಿ ಮೇಲಟೋನ್ ರಸ ಉತ್ಪತ್ತಿಯಾಗುತ್ತದೆ, ಮೇಲಟೋನ್ ರಸದಿಂದ  ಮನುಷ್ಯ ಅತ್ಯಂತ ಚೈತ್ಯನ್ಯದಿಂದ ಇರಲು ಸಾಧ್ಯಲಿಂಗಾಯತ ಧರ್ಮದ ವ್ಯೆಶಿಷ್ಟ್ಯ ಪೂರ್ಣ ಉಪಾಸನಾ ಸಾಧನ ಇಷ್ಟಲಿಂಗ.  ಜಗತ್ತಿನ ಮತ್ತಾವ ಧರ್ಮಗಳಲ್ಲಿಯೂ ಇರದ ದೇವನನ್ನು ವಿಶ್ವದ ಆಕಾರದಲ್ಲಿ ತಾತ್ವಿಕವಾಕವಾಗಿ ರೂಪಿಸಿ ಪೂಜಿಸುವ ಪರಿಪೂರ್ಣತೆಯನ್ನ ಇಲ್ಲಿ ಕಾಣಬಹುದು. ನಿರಾಕಾರವನ್ನು ಸಾಕಾರ ಮೂಲಕ ಗ್ರಹಿಸಿಕೊಳ್ಳುವ ಪರಿಪಾಠ ಆಧ್ಯಾತ್ಮಿಕ, ವ್ಯೆವಹಾರಿಕ ಎರಡು ಪ್ರಪಂಚದಲ್ಲಿ ಉಂಟು, ನಿರಕಾರವಾದ ವೇಳೆಯನ್ನ ಅರಿಯಲಿಕ್ಕೆ ಸಾಕಾರವಾದ ಗಡಿಯಾರವು ಸಾಧನಗುವಂತೆ ನಿರಕಾರವಾದ ದೇವನನ್ನ ಅರಿಅಯಲಿಕ್ಕೆ ಇಷ್ಟಲಿಂಗವು ಸಾಕಾರ ಕುರುಹು.  ಗುಡಿಯಲ್ಲಿನ ಲಿಂಗದಂತೆ  ಶಿವನನ್ನು ಸಂಕೇತಿಸುವ ಜಗತ್ತನ್ನೆಲ್ಲ ತುಂಬಿಕೊಂಡಿರುವ ಪರಮಾತ್ಮನ ಶರಿರವವಾದ ಬ್ರಹ್ಮಾಂಡವು ಗೋಲಾಕಾರದಲ್ಲಿ ಇರುವದರಿಂದ ಆ ಆಕಾರದಲ್ಲಿ ರೂಪಿಸಿಕೊಂಡ ಕುರುಹು. 


        ಇಷ್ಟಲಿಂಗಕ್ಕೆ ಕಪ್ಪಾದ ಕಾಂತಿಯುಕ್ತವಾದ ಕಂಥೆಯ ಕವಚವು ಇರುವ ಕಾರಣ  ಕಪ್ಪು- ಕಂಥೆಯ ಕಪ್ಪು ಪರಸ್ಪರ ಆಕರ್ಶಿಸಲ್ಪಟ್ಟು ಬೇಗನೆ ಚಿತ್ತ ಏಕಾಗ್ರತೆಯ ಅನುಭವವಾಗುವುದು.ಆಧ್ಯಾತ್ಮಿಕವಾಗಿ ಇದು ಭಾವಸಾಗರವನ್ನು ದಾಂಟಿಸುವ ಹಡಗಿನಂತೆ. ಹಸುವಿನ ಕೆಚ್ಚಲಿನಲ್ಲಿರುವ ಹಾಲಿನಲ್ಲಿ ತುಪಾವಿರುವುದು ಸತ್ಯಾಂಶ. ಒಂದು ವೇಳೆ ಹಸುವು ಬಿದ್ದು ಪೆಟ್ಟದರೆ, ಬಿಸಿ ತುಪ್ಪವನ್ನ ಹಚ್ಚಿ ಆದ ಗಾಯ ಅಥವಾ ಪೆಟ್ಟನ್ನ ವಾಸಿ ಮಾಡುವುದು ಸರಿಯಾದುದು. ಆದರೆ "ಕೆಚ್ಚಲಿನಲ್ಲಿ ಹಾಲಿದೆ, ಹಾಲಿನಲ್ಲಿ ತುಪ್ಪವಿದೆ" ಎಂದು ಅತಿ ಬುದ್ದಿವಂತರಂತೆ(ಅಹಂ ಬ್ರಹ್ಮಾಸ್ಮಿ) ಕೂತರೆ ಹೇಗೆ ಹಸುವನ್ನ ಪೋಷಿಸಿ, ಕೆಚ್ಚಲಿಂದ ಹಾಲನ್ನ ಕರೆದು, ಹಾಲಿಗೆ ಸಂಸ್ಕಾರಕೊಟ್ಟು ತುಪ್ಪಮಾಡಿದಂತೆ ಇದು ಬಾಹ್ಯ ಲಿಂಗ ಪೂಜೆ ಯಿಂದ ಅಂತರಂಗದ ಪರಮಾತ್ಮನ ಪೂಜೆ ಆಗಿದೆ.

       ಇಷ್ಟಲಿಂಗ ಪೂಜೆಯನ್ನು ಜ್ಞಾನ ಮುದ್ರೆಯಲ್ಲಿ ಮಾಡಬೇಕು. 

ಜ್ಞಾನ ಮುದ್ರೆ

ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ. ಉಳಿದ ಮೂರು ಬೆರಳುಗಳು ನೇರವಾಗಿ ಇರಲಿ. ಒತ್ತಡ ನೀಡಬೇಕಾದ ಅಗತ್ಯ ಇಲ್ಲ. 


#ಪ್ರಯೋಜನ: ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಕಾರಿ. ನಿದ್ರಾಹೀನತೆ, ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ. ಅಧಿಕವಾದ ಸಿಟ್ಟನ್ನು ಶಮನಗೊಳಿಸುವುದರ ಜೊತೆಗೆ ಮನುಷ್ಯ ಸ್ವಭಾವಗಳಾದ ಹಟಮಾರಿತನ, ಆಲಸ್ಯ, ಸಂಶಯ, ಅತಿ ನಿದ್ರೆಯನ್ನು ಹೋಗಲಾಡಿಸುತ್ತದೆ.


        ಅಧ್ಯಾತ್ಮ ಶಕ್ತಿಯ ವೃದ್ಧಿಗೆ ಜ್ಞಾನ ಮುದ್ರೆ ಸಹಾಯಕ. ಪಿಟ್ಯುಟರಿ ಗ್ರಂಥಿಗಳ ಕಾರ್ಯಕ್ಷಮತೆ ಹೆಚ್ಚಿಸುವುದರೊಂದಿಗೆ ದೇಹಕ್ಕೆ ಹೊಸ ಚೈತನ್ಯವನ್ನು ತುಂಬಿಸುತ್ತದೆ. ಎಷ್ಟು ಹೊತ್ತು ಬೇಕಾದರೂ ಮಾಡಬಹುದು.


 ಪಂಚಸೂತ್ರ ಕಿರುಪೀಠಗ ಷಟ್ಕಳೆಹೊಂದಿದ ಪುರ್ಣರಂದ್ರ ರಹಿತ ಭಾನಸ್ಥಾಪಿಸಿದ ಕಾರಣ ಪಂಚಸೂತ್ರ ಶಿವಶಕ್ತಿ ಸಮ್ಮಿಲನ ಹೊಂದಿದ ಪರಿಣಾಮ ಮೆಲೆ (ಚಿದ್ಲೇಪ) ಕಂತೆ ಇರಸಿದೆ ಇದಕ್ಕೆ ಇಷ್ಟಲಿಂಗ ಎಂದು ನಾಮಕರಣ ಮಾಡಿ ಗುರು ಪಾದೋದಕ ಪ್ರಸಾದ ಕ್ರಿಯೆಗೆ ಅನುಮೋದನೆ ಮಾಡಿ ಶಿವ ಶಕ್ತಿಯರಲ್ಲಿ ಹೇಗೆ ಬೇದಬಾವ ವಿಲ್ಲವೊ ಹಾಗೆ ಗುರುಶಿಷ್ಯರಲ್ಲಿಯೋ ಬೇದಬಾವವನ್ನು ಹರನ ಮಾಡಲು ಶಕ್ತಿವಿಶಿಷ್ಟಾದ್ವೈತ ತತ್ವ ನಿರ್ಣಯ ಆದರ್ಶನಿಯ ವಾಗಿದೆ.


ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,

ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,

ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,

ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,

ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.


            


ವೀರಶೈವ ಧರ್ಮದ  ಅಷ್ಟಾವರಣ ಗಳಲ್ಲಿ ಆರೋಗ್ಯ

ಡಾ. ಸಿ. ಎ .ಹೀರೇಮಠ ರ ಕೃತಿಯಿಂದ ಹಾಗೂ ಇತರೆ ಮೂಲಗಳಿಂದ  ಲೇಖನ

October 8, 2020

ಆರೋಗ್ಯ ಜ್ಯೋತಿಷ್ಯ

 ಆರೋಗ್ಯ

ಯಾರೊಬ್ಬರ ಆರೋಗ್ಯದ ವಿಷಯವಾಗಿ ಅವರ ಮೂಲ ಜಾತಕದೊಂದಿಗೆ ಗೋಚಾರೀ ಗ್ರಹಗಳ ಪರಿಭ್ರಮಣದ ಪರಿಣಾಮ ಹಾಗೂ ಮಹರ್ದಶೆ, ಅಂತರ್ದಶೆಗಳ ಪ್ರಭಾವವನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕು. ಏಕೆಂದರೆ ಅವರ ಮೂಲ ಜಾತಕದ ಪ್ರಕಾರ ಆರೋಗ್ಯ ಭಾಗ್ಯವನ್ನು ಪಡೆದುಕೊಂಡು ಬಂದಿರುವರೇ ಹೇಗೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಜಾತಕನು ಯಾವ ಸಂಗತಿಗಳನ್ನು (ಭಾವಗಳು) ಜನ್ಮಾರಭ್ಯ ಸಂಸ್ಕಾರ ರೂಪದಿಂದ ಇಲ್ಲವೋ ಅದು ಗೋಚರಿ ಗ್ರಹಗಳು ಎಷ್ಟೇ ಶುಭದಾಯಕವಾಗಿದ್ದರೂ ಮಹರ್ದಶೆ ಅಂತರ್ದಶೆಗಳು ಶುಭರಿದ್ದಾಗ್ಯೂ ಫಲ ಮಾತ್ರ ದೊರೆಯುವದಿಲ್ಲ. 

ಇದರಂತೆ ಯಾವುದರ ಬಗೆಗೆ ಲವಲೇಶವಾದರೂ ಕಡಿಮೆ ಇಲ್ಲವೋ ಅದು ಗೋಚಾರೀ ಗ್ರಹಗಳು ಎಷ್ಟೇ ಅಶುಭವಿದ್ದರೂ ಹಾಗೂ ಮಹರ್ದಶೆ ಅಂತರ್ದಶೆಗಳು ಅಶುಭವಿದ್ದರೂ ಆ ವಿಷಯದ ಬಗೆಗೆ ಆ ಭಾವಗಳ ಬಗೆಗೆ ಸ್ವಲ್ಪವೂ ಕೂಡ ಕಡಿಮೆ ಆಗಲಾರದು. ಈ ದೃಷ್ಟಿಯಿಂದ ಗೋಚಾರೀ ಗ್ರಹಗಳ ಪರಿಭ್ರಮಣದ ಪರಿಣಾಮ ಹಾಗೂ ಮಹರ್ದಶೆ ಅಂತರ್ದಶೆಗಳ ಪ್ರಭಾವವನ್ನು ತುಲನಾತ್ಮಕವಾಗಿ ಪರಿಶೀಲಿಸಬೇಕು.  ಗಮನಿಸಬೇಕಾದ ವಿಷಯವೆಂದರೆ ಗೋಚಾರೀ ಗ್ರಹಗಳ ಪರಿಭ್ರಮಣದ ಪರಿಣಾಮವಾಗಲಿ ಮಹರ್ದಶೆ ಅಂತರ್ದಶೆಗಳ ಪರಿಣಾಮವಾಗಲಿ ಕೆಲ ಅವಧಿಯವರೆಗೆ ಮಾತ್ರ... ಎಷ್ಟು ಅವಧಿಯವರೆಗೆ ಎನ್ನುವುದನ್ನು ನಮ್ಮ ವೃತ್ತಿ ಬಾಂಧವರಿಗೆ ತಿಳಿಸಿ ಹೇಳಬೇಕಾಗಿಲ್ಲ ಅನ್ಕೋತೀನಿ.. 


ಪ್ರಸ್ತುತಃ ಆರೋಗ್ಯ ದೃಷ್ಟಿಯಿಂದ ಯಾವ ಯಾವ ಗೋಚಾರೀ ಗ್ರಹಗಳು ಅಶುಭ ಫಲ ಕೊಡುವವು ಯಾವ ಗ್ರಹಗಳ ಮಹರ್ದಶೆ ಅಂತರ್ದಶೆಗಳು ಅಶುಭ ಫಲ ಕೊಡುವವು ಎಂಬುದನ್ನು ನೋಡೋಣ..


೧. ಸೂರ್ಯನು ಗೋಚಾರಿಯಿಂದ ೧-೪-೮-೧೨ನೆಯವನಾಗಿ ಬಂದಾಗ ಶಾರೀರಿಕ ಪೀಡೆ ಕೊಡುವನು.


೨. ಚಂದ್ರನು ಗೋಚಾರಿಯಿಂದ ೪-೬-೮-೧೨ ನೆಯವನಾಗಿ ಬಂದಾಗ ವ್ಯಾಕುಲತೆ, ಶಾರೀರಿಕ ಪೀಡೆ, ಶತೃಪೀಡೆ, ಭಯ, ಭೀತಿ, ಮಾನಸಿಕವಾಗಿ ಉದಾಸೀನತೆ, ಅಸಮಾಧಾನದ ಪ್ರವೃತ್ತಿ ಉಂಟು ಮಾಡುತ್ತಾನೆ.


೩. ಕುಜನು ಗೋಚಾರಿಯಿಂದ ೧-೪-೮-೧೨ ನೆಯವನಾಗಿ ಬಂದಾಗ ಶಾರೀರಿಕ ಪೀಡೆ, ಶತೃಪೀಡೆ, ವಾಹನದ ಅಪಘಾತ, ಅಗ್ನಿಭಯ, ಚೋರಭಯ ಮೊದಲಾದ ಅಶುಭ ಫಲಗಳನ್ನು ಕೊಡುತ್ತಾನೆ.


೪. ಬುಧನು ಗೋಚಾರಿಯಿಂದ ೪-೬-೮-೧೨ ನೆಯವನಾಗಿ ಬಂದಾಗ ಶತೃವೃದ್ಧಿ, ರೋಗಬಾಧೆ, ಶಾರೀರಿಕ ಪೀಡೆ ಕೊಡುತ್ತಾನೆ.


೫. ಗುರುವು ಗೋಚಾರಿಯಿಂದ ೪-೬-೮-೧೨ ನೆಯವನಾಗಿ ಬಂದಾಗ ಶಾರೀರಿಕ ಪೀಡೆ, ರೋಗ ವೃದ್ಧಿ, ಚಿಂತಾತುರತೆ, ವ್ಯಾಕುಲತೆ ಮೊದಲಾದ ಅಶುಭ ಫಲಗಳನ್ನು ಕೊಡುತ್ತಾನೆ.


೬. ಶುಕ್ರನು ೩-೪-೬-೮ ನೆಯವನಾಗಿ ಬಂದಾಗ ರೋಗವೃದ್ಧಿ, ಶತೃಪೀಡೆ, ಶಾರೀರಿಕ ಪೀಡೆ ಮೊದಲಾದ ಅಶುಭ ಫಲಗಳನ್ನು ಕೊಡುತ್ತಾನೆ. 


೭. ಶನಿಯು ೧-೨-೪-೫-೮-೧೨ ನೆಯವನಾಗಿ ಬಂದಾಗ ಶಾರೀರಿಕ ಪೀಡೆ, ಶತೃಪೀಡೆ, ರೋಗವೃದ್ಧಿ ಮೊದಲಾದ ಅಶುಭ ಫಲಗಳು ಸಂಭವ.


೮. ರಾಹುವಿನ ಗೋಚಾರೀ ಫಲಗಳು ಕುಜನಂತೆ ದೊರೆಯುತ್ತವೆ.


೯. ಕೇತುವಿನ ಗೋಚಾರೀ ಫಲಗಳು ಶನಿಯಂತೆ ದೊರೆಯುತ್ತವೆ.

👉ಜಂಗಮಾಮೃತ ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಹಿರೇಕೆರೂರ.✍️

ಬ್ರಾಹ್ಮಣ ಅಂದರೆ ಏನು?

 *ಬ್ರಾಹ್ಮಣ* ಅಂದರೆ ಏನು ಎಂಬುದನ್ನು ಪರೀಕ್ಷಿಸೋಣ..


*ಅದು ಒಂದು ಜೀವವೆ?* *ಅಥವಾ ಅದು ಶರೀರವೆ?*

ಇಲ್ಲಾ

 *ಅದೊಂದು ವರ್ಗವೆ? ಜ್ಞಾನವೆ? ಕರ್ಮವೆ? ಅಥವಾ ಅದೊಂದು ಧಾರ್ಮಿಕ ಕ್ರಿಯೆಯೆ?* *ಯಾವುದನ್ನು ಬ್ರಾಹ್ಮಣ ಎನ್ನುತ್ತೇವೆ ??* ನೋಡೋಣ...


*ಜೀವವು ಬ್ರಾಹ್ಮಣವೆ?*


 ಎಂದು ಪ್ರಾರಂಭಿಸಿದರೆ ಉತ್ತರ ಅಲ್ಲ ಎಂದಾಗುತ್ತದೆ.


ಯಾಕೆಂದರೆ ಪೂರ್ವಜನ್ಮ ಹಾಗೂ ಪುನರ್ಜನ್ಮಗಳಲ್ಲಿ ಅದೇ ಜೀವ ಮುಂದುವರಿಯುತ್ತದೆ. ಪ್ರಾರಬ್ಧ ಕರ್ಮದಿಂದ ಕೆಲವೊಮ್ಮೆ  ವಿಭಿನ್ನ ಪ್ರಾಣಿ ಪಕ್ಷಿಗಳಾಗಿಯೂ ಅದೇ ಜೀವ ಮುಂದುವರಿಯುವುದರಿಂದ ಜೀವ ಎಂಬುದು ಬ್ರಾಹ್ಮಣ ಅಲ್ಲ.


*ಹಾಗಾದರೆ ದೇಹ ಬ್ರಾಹ್ಮಣವೆ?*


 ಅಲ್ಲ, ಅದು ಪಂಚಭೂತಗಳಿಂದ ಮಾಡಲ್ಪಟ್ಟು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಎಲ್ಲ ಮಾನವರಿಗೂ ಅದು ಸಮಾನವಾಗಿರುವುದರಿಂದ ದೇಹ ಬ್ರಾಹ್ಮಣ ಅಲ್ಲ.


*ಹಾಗಾದರೆ ಜಾತಿ ಬ್ರಾಹ್ಮಣವೆ?* ಅಲ್ಲ,


 ಏಕೆಂದರೆ ಅನೇಕ ಋಷಿಗಳು ಬೇರೆ ಬೇರೆ ಜಾತಿಯಿಂದ ಹುಟ್ಟಿದವರಾಗಿದ್ದಾರೆ. ಋಷ್ಯಶೃಂಗನು ಜಿಂಕೆಯಿಂದ, ಕೌಶಿಕನು ಕುಶ (ಗರಿಕೆ) ಹುಲ್ಲಿನಿಂದ, ಜಂಬೂಕನು ನರಿಯಿಂದ ವಾಲ್ಮೀಕಿಯು ಹುತ್ತದಿಂದ, ವ್ಯಾಸನು ಮೀನುಗಾರನ ಮಗಳಿಂದ, ಗೌತಮನು ಮೊಲದಿಂದ ವಸಿಷ್ಠನು ಊರ್ವಶಿಯಿಂದ, ಅಗಸ್ತ್ಯನು ನೀರಿನ ಕುಂಭದಿಂದ ಹೀಗೆ ಅನೇಕ ಋಷಿಗಳು ಎಲ್ಲೆಲ್ಲೊ ಹೇಗೋ ಜನಿಸಿದರು. ಆದರೆ ಅವರು ತಮ್ಮ ಆಧ್ಯಾತ್ಮಿಕ ಸಾಧನೆಗಳಿಂದ ಮಹಾಜ್ಞಾನಿಗಳಾಗಿ ದಿವ್ಯೋಪದೇಶ ಮಾಡುವ ಸಂತರಾದರು. ಆದ್ದರಿಂದ ಜಾತಿ ಬ್ರಾಹ್ಮಣವಲ್ಲ.


*ಜ್ಞಾನ ಬ್ರಾಹ್ಮಣವೆ?*


 ಅಲ್ಲ ಎಷ್ಟೋ ಕ್ಷತ್ರಿಯರೂ ಕೂಡ ದಿವ್ಯಜ್ಞಾನ ಪಾರಂಗತರಾಗಿದ್ದಾರೆ. ಉದಾಹರಣೆಗೆ *ಜನಕಾದಿ ರಾಜರು* ಆದ್ದರಿಂದ ಜ್ಞಾನವೂ ಬ್ರಾಹ್ಮಣವಲ್ಲ.


*ಹಾಗಾದರೆ ಕರ್ಮ ಬ್ರಾಹ್ಮಣವೆ?* 


 ಅಲ್ಲ, ಏಕೆಂದರೆ ಹಿಂದಿನ ಜನ್ಮದ ಫಲವನ್ನು ಈ ಜನ್ಮದಲ್ಲಿ ಅನುಭವಿಸುತ್ತೇವೆ. ಅದನ್ನು ಪ್ರಾರಬ್ಧ ಕರ್ಮ ಎನ್ನಲಾಗುತ್ತದೆ. ಹಿಂದಿನ, ಈಗಿನ ಕರ್ಮಫಲಗಳು ಮುಂದಿನ ಜನ್ಮಕ್ಕೆ ಸಾಗಿಬರುತ್ತವೆ. ಅವನ್ನು ಸಂಚಿತ ಎನ್ನುತ್ತೇವೆ. ಎಲ್ಲರಿಗೂ ಕರ್ಮ ಒಂದೇ ಆಗಿರುತ್ತದೆ. ಅವರು ಇಂದು ಮಾಡುವ ಕಾರ್ಯ ಪ್ರಾರಾಬ್ಧ ಹಾಗೂ ಸಂಚಿತ ಕರ್ಮಗಳ ಫಲವಾಗಿರುತ್ತದೆ. ಅದ್ದರಿಂದ ಕರ್ಮ ಬ್ರಾಹ್ಮಣವಲ್ಲ.


ಹಾಗಾದರೆ, *ಧಾರ್ಮಿಕ ಕಾರ್ಯಗಳನ್ನು ಮಾಡುವವನು ಬ್ರಾಹ್ಮಣನೆ?* ಅಲ್ಲ, ಎಷ್ಟೋ ಕ್ಷತ್ರಿಯರು ಚಿನ್ನವನ್ನು ದಾನವಾಗಿ ನೀಡುತ್ತಾರೆ. ಆದ್ದರಿಂದ ಅವರು ಸತ್ಕಾರ್ಯ ಮಾಡಿದಂತಾಗುತ್ತದೆ. ಅ ಸತ್ಕಾರ್ಯವೇ ಬ್ರಾಹ್ಮಣ ವಾಗುವುದಿಲ್ಲವಲ್ಲವೇ..


ಹಾಗಾದರೆ *ನಿಜವಾಗಿಯೂ ಬ್ರಾಹ್ಮಣನಾರು?* 

ಯಾರು ತನ್ನ ಆತ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುತ್ತಾನೋ ಅವನೇ *ಬ್ರಾಹ್ಮಣ.*


 *ಯಾರು ತನ್ನ ಆತ್ಮವನ್ನು ಅಂಗೈಯೊಳಗಣ ಅಂಜೂರವನ್ನು ಕಾಣುವಂತೆ ಕಾಣುವನೋ, ಯಾರಿಗೆ ಹಸಿವು, ನೀರಡಿಕೆ, ದುಃಖ, ಗೊಂದಲ, ವೃದ್ಧಾಪ್ಯ ಮತ್ತು ಸಾವಿನ ಭೀತಿ ಇರುವುದಿಲ್ಲವೊ, ಯಾರಿಗೆ ಸತ್ಯ, ಜ್ಞಾನ, ಆನಂದ ಮತ್ತು ಚಿರಂತನ ಭಾವಗಳ ಅರಿವಿದೆಯೋ, ಯಾರಿಗೆ ಜಡ ಮತ್ತು ಸೂಕ್ಷ್ಮ ವಸ್ತುಗಳ ಒಳಗೆ ಮತ್ತು ಹೊರಗೆ ವ್ಯಾಪಿಸಿರುವ ಆಕಾಶವನ್ನು ಮತ್ತು ತರ್ಕಾತೀತವಾದ ಸತ್ಯವನ್ನು ತನ್ನ ಅಂತಃ ಶಕ್ತಿಯಿಂದ ಕಾಣುವನೋ ಅವನು ಬ್ರಾಹ್ಮಣ*


*ಯಾರು ಭೌತಿಕ ಜಗತ್ತಿನ ಆಸೆ ಆಮಿಷಗಳನ್ನು ಶಮ, ದಮ, ಉಪ್ರತಿ, ತಿತಿಕ್ಷ, ಸಮಾಧಾನ ಮತ್ತು ಶ್ರದ್ಧೆಗಳ ಮೂಲಕ ಗೆದ್ದಿರುವನೋ ಅವನು ಬ್ರಾಹ್ಮಣ*


ವೇದಗಳು, ಸ್ಮೃತಿಗಳು, ಇತಿಹಾಸ ಮತ್ತು ಪುರಾಣಗಳು ಅದನ್ನೇ ಹೇಳುತ್ತವೆ. ಮಾನವನು ತನ್ನ ಆತ್ಮವನ್ನು ಸತ್ – ಚಿತ್ – ಆನಂದ ಸ್ಥಿತಿಯಲ್ಲಿ ಧ್ಯಾನಿಸಬೇಕು.


 ಅದೇ ಅದ್ವೈತ ಸಿದ್ಧಾಂತ ಎಂದು ವಜ್ರಸೂಚಿಕೋಪನಿಷತ್ತು ಹೇಳುತ್ತದೆ.

                    

               ಸಂಗ್ರಹ 👉ಧರ್ಮಭಾರತಿ ಪತ್ರಿಕೆ.