August 15, 2023

ಅನ್ನದಾನದ ಫಲ

"ಅನ್ನದಾನಕ್ಕೆ ಸಮನಾದ ದಾನವು ಹಿಂದೆಯೂ ಇರಲಿಲ್ಲ ಮುಂದೆಯೂ ಇರುವುದಿಲ್ಲ" - ಪದ್ಮ ಪುರಾಣ

ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿ ಅವರಿವರ ಮನೆಯ ಕಸಮುಸರೆ ತೊಳೆದು ತಂದುದರಲ್ಲಿ ಮನೆಗೆ ಬಂದವರಿಗೆ ದಾನ ಮಾಡಿ, ಉಳಿದುದನ್ನು ಇಬ್ಬರೂ ತಿನ್ನುತ್ತಿದ್ದರು.

ಒಂದೊಂದು ದಿನ ಬಹಳ ಮಂದಿ ಭಿಕ್ಷೆಗೆ ಬಂದರೆ ಮಗನಿಗಷ್ಟು ಇಟ್ಟು ತನ್ನ ಪಾಲಿನ ಅನ್ನವನ್ನೂ ದಾನ ಮಾಡುತ್ತಿದ್ದಳು. ಮಗ ಹೀಗೇ ಬೆಳೆದು ದೊಡ್ಡವನಾದ. ವಯಸ್ಸಿಗೆ ಬಂದ. ತಾಯಿ ಬರೇ ಅನ್ನದಾನವೊಂದನ್ನು ಬಿಟ್ಟಿದ್ದರೆ ಅವರು ದೊಡ್ಡ ಶ್ರೀಮಂತರಾಗಬೇಕಿತ್ತು. ಆಗಲಿಲ್ಲ. ತಾಯಿ ಹೀಗೇಕೆ ಮಾಡುತ್ತಿರಬಹುದೆಂದು ಮಗನಿಗೆ ಯೋಚನೆಯಾಯಿತು.

ಒಂದು ದಿನ ಮಗ,ತಾಯಿ, ಇದೇಕೆ ಹೀಗೆ ಅನ್ನದಾನ ಮಾಡುತ್ತೀ? ಒಂದೊಂದು ದಿನ ನೀನೇ ಉಪವಾಸವಿದ್ದು ಬೇರೆಯವರಿಗೆ ಅನ್ನದಾನ ಮಾಡುತ್ತೀ, ಅನ್ನದಾನವೊಂದನ್ನು ಬಿಟ್ಟಿದ್ದರೆ, ನಾವು ಎಷ್ಟೊಂದು ಶ್ರೀಮಂತರಾಗುತ್ತಿದ್ದೆವು. ಅದೇನು ಅನ್ನದಾನದ ಮಹತ್ವ? ಹೇಳು’ ಎಂದ. ಅದಕ್ಕೆ ತಾಯಿ,

‘ಮಗೂ, ದಾನಗಳಲ್ಲಿ ಅನ್ನದಾನವೇ ಹೆಚ್ಚಿನದು. ಬಡತನ ಶ್ರೀಮಂತಿಕೆ ಕೊನೆತನಕ ಇರುವುದಿಲ್ಲ. ಆದರೆ ಅನ್ನದಾನದ ಪುಣ್ಯ ಕೊನೆತನಕ ಇರುವಂಥಾದ್ದು’ ಎಂದಳು. ‘ಆ ಪುಣ್ಯ ಯಾವುದು?’ ಪ್ರಶ್ನಿಸಿದ ಮಗ. ‘ಅದನ್ನು ಹೇಳುವುದು ನಮ್ಮಂಥ ನರಮನುಷ್ಯರಿಂದ ಹೇಗಾದೀತು? ಅದು ಶಿವನಿಗೆ ಗೊತ್ತು. ಅವನನ್ನೇ ಹೋಗಿ ಕೇಳು’ ಎಂದು ತಾಯಿ ಹೇಳಿದಳು.

ಸರಿ, ಅದರಂತೆ ಮಗ ತಾಯಿಯ ಅಪ್ಪಣೆ ಪಡೆದುಕೊಂಡು ಶಿವನ ಬಳಿಗೆ ಹೊರಟ. ಹೋಗುತ್ತ ಹೋಗುತ್ತ ದೊಡ್ಡದೊಂದು ಅಡವಿ ಬಂತು. ಅಲ್ಲಿ ಗಿಡಮರ ದಟ್ಟವಾಗಿ ಬೆಳೆದಿದ್ದವು. ಇವನು ಬೆಟ್ಟ ಹತ್ತಿ ಇಳಿಯುವಷ್ಟರಲ್ಲಿ, ಸಂಜೆಯಾಯಿತು. ಮುಂದೆ ಏನು ಮಾಡಬೇಕೆಂದು ಹೊಳೆಯದಾಯಿತು. ಆಗ ಅಲ್ಲಿಗೊಬ್ಬ ಬೇಡ ಬಂದ. ಈ ಹುಡುಗನನ್ನು ನೋಡಿ ಅವನಿಗೆ ಕರುಣೆ ಬಂತು. ಹೀಗೇ ಬಿಟ್ಟರೆ ಹುಡುಗ ಹುಲಿ ಸಿಂಹಗಳ ಬಾಯಿಗೆ ಬೀಳುತ್ತಾನೆಂದುಕೊಂಡು,

‘ಏ ಹುಡುಗಾ, ಸಂಜೆ ಸಮಯದಲ್ಲಿ ಹೀಗೆ ಕಾಡಿನಲ್ಲಿ, ಅಡ್ಡಾಡಿದರೆ ಏನು ಗತಿಯಾದೀತು? ಇದು ಹುಲಿ-ಸಿಂಹಗಳಿರುವ ಸ್ಥಳ. ಇಂದು ರಾತ್ರಿ ನಮ್ಮ ಗುಡಿಸಿನಲ್ಲಿದ್ದು ನಾಳೆ ಹೋದೀಯಂತೆ ಬಾ’ ಅಂದ. ಹುಡುಗನಿಗೂ ಅಷ್ಟೇ ಬೇಕಾಗಿತ್ತು. ಬೇಡನೊಂದಿಗೆ ಹೋದ. ಗುಡಿಸಿಲಿಗೆ ಹೋಗಿ ಬೇಡ ಹೆಂಡತಿಗೆ ಹೇಳಿದ. ‘ಅಲೆದಾಡುತ್ತಿದ್ದ, ನಾನೇ ಕರೆದು ತಂದೆ. ಇಂದಿದ್ದು ನಾಳೆ ಹೋಗುತ್ತಾನೆ. ಹಸಿದಿದ್ದಾನು, ಇವನಿಗೆ ಹಣ್ಣು ಹಾಲು ಕೊಡು.’

ಅವಳು ‘ಅದೆಲ್ಲಾ ನನ್ನಿಂದ ಆಗದು. ಬೇಕಿದ್ದರೆ ನಿನ್ನ ಪಾಲಿನ ಹಣ್ಣು ಹಾಲು ಕೊಡು. ಇಲ್ಲದಿದ್ದರೆ ಬಿಡು’ ಎಂದಳು. ಬೇಡ ತನ್ನ ಪಾಲಿನ ಹಣ್ಣು, ಹಾಲು ಕೊಟ್ಟ. ‘ಹುಡುಗಾ, ದಣಿದಿದ್ದೀಯಪ್ಪ, ಮಲಗು’ ಅಂದು ಕರುಣೆಯಿಂದ ಹುಡುಗನ ಕಾಲು ತಿಕ್ಕಿದ. ಹಾಸಿಗೆ ಹಾಸಿ ಮಲಗಿಸಿದ.

ತನಗೆ ಮಲಗಲು ಸ್ಥಳ ಇರದದ್ದರಿಂದ ಬಾಗಿಲ ಹೊರಗೆ ಕಾಲು ಚಾಚಿ ಒಳಗೆ ತಲೆಯಿಟ್ಟು ಬಾಗಿಲು ತೆರೆದೇ ಮಲಗಿದ. ಆದರೆ ರಾತ್ರಿ ಹುಲಿ ಬಂದು ಹೊರಗರ್ಧ ಒಳಗರ್ಧ ಮಲಗಿದ್ದ ಬೇಡನನ್ನು ಕೊಂದು ತಿಂದುಹಾಕಿತು. ರಕ್ತದ ರುಚಿ ಹತ್ತಿ ಒಳಗೆ ಹೋಗಿ ಅವನ ಹೆಂಡತಿಯನ್ನೂ ತಿಂದು ಹಾಕಿತು. ಹೊಟ್ಟೆ ತುಂಬಿದ ಹುಲಿ ಆ ಹುಡುಗನನ್ನು ನೋಡದೆ ಹಾಗೇ ಹೋಯಿತು. ಮುಂಜಾನೆ ಇವನೆದ್ದು ನೋಡಿದರೆ ಇಬ್ಬರ ಎಲುಬುಗಳನ್ನು ಬಿಟ್ಟು ಬೇರೇನೂ ಇರಲಿಲ್ಲ. ಪಾಪ ಬಹಳ ಅನ್ಯಾಯವಾಯಿತೆಂದು ಹಳಹಳಸಿ ಮತ್ತೆ ಪ್ರಯಾಣ ಮಾಡಿದ.

ದಾರಿಯಲ್ಲಿ ಒಬ್ಬ ರಾಜ ತಲೆಯ ಮೇಲೆ ಕೈ ಹೊತ್ತು ಕೂತಿದ್ದ. ಇವನನ್ನು ನೋಡಿ ‘ಹುಡುಗಾ, ಎಲ್ಲಿ ಹೊರಟಿರುವೆ?’ ಅಂದ. ‘ಒಂದು ಪ್ರಶ್ನೆಯಿದೆ. ಅದನ್ನು ಕೇಳಲು ಶಿವನ ಬಳಿಗೆ ಹೋಗುತ್ತಿದ್ದೇನೆ’ ಎಂದ. ‘ಹಾಗಿದ್ದರೆ ನನ್ನದೂ ಒಂದು ಪ್ರಶ್ನೆ ಇದೆ. ಕೇಳಿಕೊಂಡು ಬರುತ್ತೀಯಾ?’ ಎಂದ ರಾಜ.

‘ಏನದು?’

‘ಕೋಟಿ ಹಣ ಖರ್ಚು ಮಾಡಿ ಒಂದು ಕೆರೆ ಕಟ್ಟಿಸಿದೆ. ತಟ್ಟಂತ ಒಂದು ಹನಿ ನೀರಿಲ್ಲ. ಯಾಕೆಂದು ಕೇಳಿಕೊಂಡು ಬರುತ್ತೀಯಾ’. ಆಗಲೆಂದು ಹುಡುಗ ಮುಂದೆ ಹೊರಟ. ಮುಂದೆ ಹೋಗುವಷ್ಟರಲ್ಲಿ ಒಬ್ಬ ಕುಂಟ ಕುಳಿತಿದ್ದ. ಅವನೂ, ‘ತಮ್ಮಾ, ನನ್ನ ಕುಂಟುತನಕ್ಕೆ ಏನು ಕಾರಣವೆಂದು ಕೇಳಿಕೊಂಡು ಬಾ’ ಅಂದ. ಆಗಲೆಂದು ಹುಡುಗ ಮುಂದೆ ಹೊರಟ.

ಮುಂದೆ ದಾರಿಯಲ್ಲಿ ಒಂದು ಹುತ್ತ ಸಿಕ್ಕಿತು. ಅದರಲ್ಲಿ ಅರ್ಧ ಒಳಗೂ ಸಿಕ್ಕಿಕೊಂಡು ಹಿಂದಕ್ಕೂ ಮುಂದಕ್ಕೂ ಚಲಿಸಲಾರದ ಒಂದು ಸರ್ಪವಿತ್ತು. ಅದಕ್ಕೂ ತನ್ನ ಪ್ರಯಾಣದ ಉದ್ದೇಶ ಹೇಳಿದ. ಅದು ‘ನನ್ನ ಇಂಥ ಸ್ಥಿತಿಗೆ ಏನು ಕಾರಣ ಕೇಳಿಕೊಂಡು ಬಾ’ ಎಂದಿತು. ಹುಡುಗ ಆಗಲೆಂದು ಹೇಳಿ ಮುಂದಕ್ಕೆ ಹೊರಟ.

ಹೋದ, ಹೋದ. ಸೀದಾ ಕೈಲಾಸ ಪರ್ವತಕ್ಕೇ ಹೋದ. ಅಲ್ಲಿ ಶಿವ ಪಾರ್ವತಿ ಕುಳಿತಿದ್ದರು. ಹೋಗಿ ನಮಸ್ಕರಿಸಿದ. ‘ಶಂಭೋ, ಅನ್ನದಾನದ ಪುಣ್ಯ ಏನು? ಹೇಳಬೇಕು’ ಎಂದ. ಅದಕ್ಕೆ ಶಿವನು,

‘ನೋಡು ಮಗು, ನೇಪಾಳ ದೇಶದ ರಾಜನ ಹೆಂಡತಿ ಗರ್ಭವತಿಯಾಗಿದ್ದಾಳೆ. ನೀನು ಹೋಗಿ ನಾನು ಕೊಟ್ಟ ಪ್ರಸಾದ ಕೊಡು. ಹಡೆಯುತ್ತಾಳೆ. ಹುಟ್ಟಿದ ಆ ಕೂಸನ್ನು ಕೇಳಿದರೆ ಅದು ನಿನಗೆ ಅನ್ನದಾನದ ಪುಣ್ಯ ಏನೆನ್ನುವುದನ್ನು ಹೇಳುತ್ತದೆ’ ಎಂದ.

ಹಾಗೆಯೇ ರಾಜನ ಕೆರೆಯಲ್ಲಿ ನೀರು ಬೀಳದಿರುವ ಕಾರಣ ಕೇಳಿದ. ಅದಕ್ಕೆ ಶಿವನು ಹೇಳಿದ –‘ರಾಜನಿಗೆ ಬೆಳೆದ ಒಬ್ಬ ಮಗಳಿದ್ದಾಳೆ. ಅವಳನ್ನು ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದೆ.’

‘ಹಾಗೆ ಕುಂಟನ ಕಾಲು ಯಾಕೆ ಹೋಗಿವೆ?’ ‘ತನಗೆ ತಿಳಿದ ವಿದ್ಯೆಯನ್ನು ಆತ ಯಾರಿಗಾದರೂ ಯೋಗ್ಯನಿಗೆ ದಾನ ಮಾಡಿದರೆ ಹೋದ ಕಾಲು ಬರುತ್ತವೆ.’

‘ಸರ್ಪವೊಂದು ಹುತ್ತದ ಒಳಗೂ ಹೋಗದೆ ಹೊರಗೂ ಬರಲಾರದೆ ಸಿಕ್ಕಿಕೊಂಡಿದೆಯಲ್ಲ. ಏನು ಕಾರಣ?’ ‘ತನ್ನ ನೆತ್ತಿಯ ರತ್ನವನ್ನು ಯಾರಾದರೂ ಯೋಗ್ಯನಿಗೆ ದಾನ ಮಾಡದಲ್ಲಿ ಅದು ಸರಿದಾಡಬಹುದು.’ – ಹೀಗೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೇಳಿಕೊಂಡು ಶಿವಪಾರ್ವತಿಯರಿಗೆ ನಮಸ್ಕರಿಸಿ, ಪ್ರಸಾದ ತೆಗೆದುಕೊಂಡು ತಿರುಗಿ ಬಂದ.

ಬರುವಾಗ ದಾರಿಯಲ್ಲಿ ಮೊದಲು ಸರ್ಪ ಸಿಕ್ಕಿತು. ‘ಹುಡುಗಾ, ಕೇಳಿದೆಯಾ ನನ್ನ ಪ್ರಶ್ನೆ?’ ಎಂದಿತು. ‘ಹೌದು ಕೇಳಿದೆ. ನಿನ್ನ ನೆತ್ತಿಯಲ್ಲೊಂದು ರತ್ನ ಇದೆಯಂತೆ. ಅದನ್ನು ಯೋಗ್ಯನಿಗೆ ದಾನ ಮಾಡಿದರೆ ನೀನು ಸರಿದಾಡಬಹುದಂತೆ’ ಎಂದ. ‘ಹಾಗಿದ್ದರೆ ಇಕೊ, ನಿನಗೇ ಅದನ್ನು ದಾನ ಮಾಡುತ್ತೇನೆ. ತಕೋ’ ಎಂದು ತನ್ನ ನೆತ್ತಿಯ ರತ್ನವನ್ನು ಹುಡುಗನಿಗೆ ಕೊಟ್ಟಿತು. ಆ ಕೂಡಲೇ ಅದಕ್ಕೆ ಸರಿದಾಡುವ ಶಕ್ತಿ ಬಂದು, ಆನಂದದಿಂದ ಹೆಡೆ ತೆಗೆದು ಆಡಲಾರಂಭಿಸಿತು. ಹುಡುಗ ಮತ್ತೆ ತನ್ನ ದಾರಿ ಹಿಡಿದ.

ಮುಂದೆ ಬರುವಷ್ಟರಲ್ಲಿ ಕುಂಟ ಸಿಕ್ಕಿದ. ‘ಹುಡುಗಾ, ನನ್ನ ಪ್ರಶ್ನೆ ಕೇಳಿದೆಯಾ?’ ಎಂದು ಕೇಳಿದ. ‘ಕೇಳಿದೆ. ನಿನ್ನ ಹತ್ತಿರ ಇರುವ ವಿದ್ಯೆಯನ್ನೆಲ್ಲ ಒಬ್ಬ ಯೋಗ್ಯನಿಗೆ ದಾನ ಮಾಡಿದರೆ ನಿನ್ನ ಕಾಲು ಬರುತ್ತವಂತೆ.’’ ಎಂದ ಹುಡುಗ. ‘ಹಾಗಿದ್ದರೆ ನಿನ್ನಂತ ಯೋಗ್ಯ ಯಾರಿದ್ದಾರು? ಇಕೊ, ನನಗೆ ಗೊತ್ತಿರುವ ವಿದ್ಯೆಯನ್ನು ನಿನಗೆ ದಾನ ಮಾಡುತ್ತೇನೆ.’ – ಎಂದು ಹೇಳಿ ಕುಂಟ ತನ್ನ ಅರವತ್ತ ನಾಲ್ಕು ವಿದ್ಯೆಗಳನ್ನೆಲ್ಲ ಇವನಿಗೆ ಧಾರೆಯೆರದ. ಅವನಿಗೆ ಕಾಲು ಬಂದವು. ಆನಂದದಿಂದ ಕುಣಿದಾಡಿದ. ಹುಡುಗ ಮತ್ತೆ ತನ್ನ ದಾರಿಯನ್ನು ಹಿಡಿದು ಹೊರಟ.

ಇನ್ನಷ್ಟು ಮುಂದೆ ಬಂದ. ತಲೆಯ ಮೇಲೆ ಕೈ ಹೊತ್ತಿದ್ದ ರಾಜ ಸಿಕ್ಕಿದ. ಇವನನ್ನು ಕಂಡೊಡನೆ ‘ಹುಡುಗಾ, ನನ್ನ ಮಾತನ್ನು ಕೇಳಿದೆಯಾ?’ ಎಂದ. ‘ಹೌದು, ಕೇಳಿದೆ. ನಿನ್ನ ಬೆಳೆದ ಮಗಳನ್ನು ಒಬ್ಬ ಯೋಗ್ಯ ವರನಿಗೆ ಕೊಟ್ಟು ಮದುವೆ ಮಾಡಿದರೆ ಕೆರೆಯಲ್ಲಿ ನೀರು ತುಂಬುತ್ತದಂತೆ’. ‘ನಿನಗಿಂತ ಯೋಗ್ಯ ವರ ಇನ್ನಾರಿದ್ದಾರು! ಬಾ’ ಎಂದು ಹೇಳಿ ರಾಜ ತನ್ನ ಮಗಳನ್ನು ಆ ಹುಡುಗನಿಗೆ ಮದುವೆ ಮಾಡಿಕೊಟ್ಟ. ಬೆಳಗಾಗುವಷ್ಟರಲ್ಲಿ ಕೆರೆ ನೀರಿನಿಂದ ತುಂಬಿ ತುಳುಕಲಾರಂಭಿಸಿತು.

ಹುಡುಗ ಹೆಂಡತಿಯನ್ನು ಕರೆದುಕೊಂಡು ನೇಪಾಳ ದೇಶಕ್ಕೆ ಬಂದ. ಆ ದೇಶದ ರಾಜನ ಹೆಂಡತಿ ದಿನ ತುಂಬಿದ್ದರೂ ಹಡೆಯಲಾರದೆ ಸಂಕಟ ಪಡುತ್ತಿದ್ದಳು. ಹುಡುಗ ಹೋಗಿ ಶಿವನ ಪ್ರಸಾದ ಕೊಟ್ಟ. ಅವಳು ಆ ಕ್ಷಣವೇ ಬಂಗಾರದಂಥ ಮಗನನ್ನು ಹಡೆದಳು. ‘ಆ ಕೂಸಿಗೊಂದು ಪ್ರಶ್ನೆ ಕೇಳಬೇಕಾಗಿದೆ. ದರ್ಬಾರಿಗೆ ತರಿಸಬೇಕು’ ಎಂದು ಹುಡುಗ ಹೇಳಿದ. ಎಲ್ಲರಿಗೂ ಆಶ್ಚರ್ಯವಾಯಿತು. ಆದರೂ ಕೂಸನ್ನು ದರ್ಬಾರಿಗೆ ತಂದು ಬಂಗಾರದ ತಟ್ಟೆಯಲ್ಲಿಟ್ಟರು. ಹುಡುಗ ಹೇಳಿದ –

‘ಮಗು, ಶಿವ ನನ್ನನ್ನು ನಿನ್ನ ಬಳಿ ಕಳಿಸಿದ್ದಾನೆ. ಅನ್ನದಾನದ ಪುಣ್ಯ ಯಾವುದು?’ ಈ ಮಾತನ್ನು ಕೇಳಿ ತಟ್ಟೆಯಲ್ಲಿದ್ದ ಮಗು ಪಕ ಪಕ ನಕ್ಕು ಮಾತಾಡಿತು. ‘ಅಯ್ಯ, ಶಿವನನ್ನು ಕಂಡು ಬಂದರೂ ನಿನಗೆ ಈ ವಿಚಾರ ತಿಳಿಯಲಿಲ್ಲವೆ? ನೀನು ಶಿವನನ್ನು ಕಾಣುವುದಕ್ಕೆ ಹೊರಟಿದ್ದಿ. ಅಡವಿಯಲ್ಲಿ ದಾರಿ ತಪ್ಪಿ ಅಲೆದಾಡುತ್ತಿದ್ದಿ. ಆಗ ಒಬ್ಬ ಬೇಡ ಬಂದು ನಿನ್ನನ್ನು ತನ್ನ ಗುಡಿಸಿಲಿಗೆ ಕರೆದೊಯ್ದು ಹಣ್ಣು ಹಾಲು ಕೊಟ್ಟದ್ದು ನೆನಪಿದೆಯೆ?’

‘ಹೌದು.’

‘ಹಾಗೆ ಮಾಡಿದ ಬೇಡ ನಾನೇ. ಅಂದೆ ನನ್ನನ್ನೂ ನನ್ನ ಹೆಂಡತಿಯನ್ನೂ ಹುಲಿ ತಿಂದಿತು; ಅನ್ನದಾನ ಮಾಡಿದ್ದಕ್ಕೆ ನಾನಿಂದು ರಾಜಕುಮಾರನಾಗಿ ಹುಟ್ಟಿದ್ದೇನೆ. ನನ್ನ ಹೆಂಡತಿ ಅಂದು ನಿನಗೆ ಅನ್ನ ಕೊಡಲು ಒಪ್ಪಲಿಲ್ಲ. ಹೀಗೆ ಮಾಡಿದ ಅವಳು ಇದೇ ಊರಿನಲ್ಲಿ ಹಂದಿಯಾಗಿ ಹುಟ್ಟಿದ್ದಾಳೆ. ಬೇಕಾದರೆ ಹೋಗಿ ನೋಡು’ ಎಂದು ಆ ಮಗು ಹೇಳಿತು.

ಆಗ ಈ ಹುಡುಗ ತಿರುಗಿ ತನ್ನ ತಾಯಿಯ ಬಳಿಗೆ ಬಂದು ತಾನೂ ಅನ್ನದಾನ ಮಾಡುತ್ತ ಸುಖದಿಂದ ಇದ್ದ.

 ಶಿವಾರ್ಪಣಮಸ್ತು

(ಸತ್ಸಂಗ ಸಂಗ್ರಹ)

July 12, 2023

ವೀರಶೈವ ಗೋತ್ರ ಪುರುಷ ಶ್ರೀ ವೀರಭದ್ರೇಶ್ವರ

    ಮೂಲತಃ ವೀರಭದ್ರನು ಶಿವಸಂಸ್ಕೃತಿಯ ಮೂಲಪುರುಷ. ಅಂತೆಯೇ ಶಿವನ ಪೂಜಕರೆಲ್ಲರಿಗೂ ಆರಾಧ್ಯ ದೈವ. ಹಾಗೆಯೆ ವೀರಭದ್ರನು ವೀರಶೈವನು. ವೀರಶೈವನೆಂದರೆ ಲಿಂಗಾಯತ. ಲಿಂಗವನ್ನು ಶರೀರದಮೇಲೆ ಧರಿಸಿದವನೇ ವೀರಶೈವ ಲಿಂಗಾಯತ. ಸ್ಕಂದ ಪುರಾಣದಲ್ಲಿ ಜಡೆಯಲ್ಲಿ (ಶಿರದಲ್ಲಿ) ಲಿಂಗವನ್ನು ಧರಿಸಿದವ ವೀರಭದ್ರ ಎಂದು ಹೇಳಿದೆ. ಹರಪ್ಪ ಮೊಹೆಂಜೋದಾರೋದಲ್ಲಿ ಸಿಕ್ಕ ಶಿಲ್ಪದಲ್ಲಿ ಪಶುಪತಿಯ ಪ್ರತಿಮೆ ಇದ್ದು ಅದರ ತಲೆಯಲ್ಲಿ  ಲಿಂಗವಿದೆ. ರಾಘವಾಂಕನು ವೀರಭದ್ರನನ್ನು ‘ನಿಡುಜಡೆ ಮುಡಿ ನಡುನೆತ್ತಿಯ ಲಿಂಗಂ’ ಎಂದು ವರ್ಣಿಸಿದ್ದಾನೆ. ಸ್ಕಂದ ಪುರಾಣದಲ್ಲಿ ‘ಲಿಂಗಾಂಕಿತ ಜಟಾಧರಂ’ ಎಂದು ವರ್ಣಿಸಿದೆ. ಪಶುಪತಿ ಎಂದರೆ ಶಿವ, ರುದ್ರ. ಶಿವನ ಮಾನಸಪುತ್ರ ರುದ್ರನ ಪುತ್ರನಾದ ವೀರಭದ್ರನೂ ಸಿಂಧೂ ಸಂಸ್ಕೃತಿಯ ದ್ರಾವಿಡ ಜನಾಂಗದ ಶ್ರೇಷ್ಠ ಪುರುಷ. ವೀರಭದ್ರನ ಪರಂಪರೆ ಸಂಪ್ರದಾಯಗಳು ಬಹು ಪ್ರಾಚೀನ ಕಾಲದಿಂದಲೇ ನಡೆದುಕೊಂಡು ಬಂದಿರುವುದು ಈ ದೇಶದಲ್ಲಿ ಅಷ್ಟೇ ಅಲ್ಲ ನೇಪಾಳ ಮುಂತಾದ ನೆರೆಯ ರಾಷ್ಟ್ರಗಳಲ್ಲಿಯೂ ಇದೆ. ವೀರಶೈವ ಪಂಚಪೀಠಗಳು ಪ್ರಾಚೀನ ವೀರಭದ್ರ ಸಂಸ್ಕೃತಿಯನ್ನು ಅಳವಡಿಸಿಕೊಂಡು ಇಂದಿಗೂ ಪಾಲಿಸಿಕೊಂಡುಬಂದಿವೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಗೋತ್ರಪುರುಷ ವೀರಭದ್ರನಾಗಿದ್ದಾನೆ. ಅಲ್ಲಿ ವೀರಭದ್ರನ ಪೂಜೆಯಿಲ್ಲದೆ ಯಾವ ವಿಶಿಷ್ಟ ಕಾರ್ಯಕ್ರಮಗಳೂ ಜರುಗುವುದಿಲ್ಲ. ರಂಭಾಪುರಿ ಪೀಠದ ಗೋತ್ರಪುರುಷ ವೀರಭದ್ರನಾಗಿದ್ದಾನೆ. ಕೇದಾರ ಪೀಠದ ಜಗದ್ಗುರುಗಳು ಪೀಠಾರೋಹಣ ಮಾಡುವಾಗ ವೀರಭದ್ರನ ಪೂಜೆ ಮಾಡಿಯೇ ಮುಂದಿನ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ವೀರಭದ್ರನನ್ನು ಮನೆ ದೇವರೆಂದು ಅಸಂಖ್ಯಾತ ಭಕ್ತರು ಪೂಜಿಸುತ್ತಾರೆ. ಆದ್ದರಿಂದ ಮನೆಮನೆಗಳಲ್ಲಿಯೂ ಕೂಡ ಯಾವುದೇ ಶುಭಕಾರ್ಯವಿದ್ದರೂ ವೀರಭದ್ರನ ಪೂಜೆ ಆಗಲೇ ಬೇಕು. ಮದುವೆ ಮುನ್ನಾದಿನ ಗುಗ್ಗಳ ಪೂಜೆಯನ್ನು ಅತ್ಯಂತ ಕಟ್ಟು ನಿಟ್ಟಾಗಿ ಸಾಂಪ್ರದಾಯಿಕವಾಗಿ ಇಂದಿಗೂ ತಪ್ಪದೇ ಆಚರಿಸುತ್ತಾರೆ. ಇವೆಲ್ಲವೂ ವೀರಭದ್ರನ ಸಂಸ್ಕೃತಿ ಆಚರಣೆಗಳು ಅನೂಚಾನವಾಗಿ ನಡೆದುಕೊಂಡು ಬಂದುದಕ್ಕೆ ಸಾಕ್ಷಿಯಾಗಿವೆ.

     ವೀರಭದ್ರನ ಉಲ್ಲೇಖ ಕ್ರಿ.ಶ. ನಾಲ್ಕನೆಯ ಶತಮಾನದಷ್ಟು ಹಳೆಯ ಕಾಲದಲ್ಲಿ ಮುಳಬಾಗಿಲು ಮುಡಿಯನೂರು ತಾಮ್ರ ಶಾಸನದಲ್ಲಿ ಸಿಗುತ್ತದೆ. ವೀರಶೈವ ಗಣಂಗಳನ್ನು ಮಂಡ್ಯಜಿಲ್ಲೆ ಮರಡೀಪುರ (1280) ಶಾಸನ ಹೆಸರಿಸಿದ್ದು ಅದರಲ್ಲಿ ಪ್ರಾಚೀನ ಕಾಲದ ಬಾಳಾಕ್ಷರ, ಅಕ್ಷರೇಶ್ವರ, ನಂದೀನಾಥ, ನಂದಿ, ಮಹಾಕಾಳ, ಬೃಂಗಿನಾಥ, ಮುಂತಾದ ಗಣಂಗಳ ಸ್ಥಾನದಲ್ಲಿ ವೀರಭದ್ರನನ್ನು ಹೆಸರಿಸಿದ್ದು ವಿಶೇಷವಾಗಿದೆ. ಇದರಿಂದ ವೀರಭದ್ರ ಐತಿಹಾಸಿಕ ವೀರಪುರುಷ ಅಷ್ಟೇ ಅಲ್ಲ, ಅವನು ಗಣಾಚಾರಿ, ವೀರಮಾಹೇಶ್ವರ ಎಂದು ತಿಳಿದುಬರುತ್ತದೆ.  
ವೀರಭದ್ರನ ದಕ್ಷ ಸಂಹಾರ ಪ್ರಸಂಗ ವೀರಭದ್ರನ ಅನೇಕ ಗುಣಗಳನ್ನು ವ್ಯಕ್ತಪಡಿಸುತ್ತದೆ. ತಂದೆ ಮತ್ತು ಹಿರಿಯರ ಆಜ್ಞಾಪಾಲಕನಾಗಿ, ದುಷ್ಟರನ್ನು ತಕ್ಕರೀತಿಯಲ್ಲಿ ದಂಡಿಸಿದ ವೀರನಾಗಿ, ಯುದ್ಧವೀರನಾಗಿ ಜನಾಂಗ ಸಾಮರಸ್ಯಕ್ಕಾಗಿ ಶ್ರಮಿಸಿದ ತಂದೆ ರುದ್ರನ ಕಾರ್ಯವನ್ನು ವಿಫಲ ಮಾಡುತ್ತಿರುವ ಗರ್ವಿಷ್ಠರನ್ನು ಶಿಕ್ಷಿಸಿ ಪಾಠ ಕಲಿಸಿದವನಾಗಿ,  ಯಜ್ಞ ಸಂಸ್ಕೃತಿಯ ವಿನಾಶಕನಾಗಿ, ದಕ್ಷನ ಪತ್ನಿಯ ಮೊರೆಗೆ ಕರುಣೆತೋರಿದ ಕರುಣಾಮೂರ್ತಿಯಾಗಿ, ಶೌರ್ಯ ಮತ್ತು ಶುಭಮಂಗಲಗಳ ಸಾಕಾರಮೂರ್ತಿಯಾಗಿ ಕಂಗೊಳಿಸಿದ್ದಾನೆ. ವೀರ ಮತ್ತು ಭದ್ರ ಎಂಬ ಹೆಸರಿನಲ್ಲಿಯೇ ಈ ಅರ್ಥವಂತಿಕೆ ಅಡಗಿರುವುದನ್ನು ಕಾಣಬಹುದು. ಅನ್ಯಾಯವನ್ನು ಎಂದಿಗೂ ಸಹಿಸಿಕೊಳ್ಳದೆ ಅದನ್ನು ಪ್ರತಿಭಟಿಸಿ “ವೀರ’ತನವನ್ನು ಮೆರೆಯಬೇಕೆಂಬುದು, ಜೊತೆಗೆ “ವೀರ’’ ಗುಣವನ್ನು ಮಂಗಲ’ಕ್ಕಾಗಿ , “ಭದ್ರ”ತೆಗಾಗಿ ಉಪಯೋಗಿಸುವುದೇ “ವೀರ”ತ್ವದ ಸರಿಯಾದ ಲಕ್ಷಣ ಎಂಬುದನ್ನೂ “ವೀರಭದ್ರ” ಎಂಬ ಪದ ಸಾರುತ್ತದೆ.

      ಪ್ರಾಗೈತಿಹಾಸಿಕ ವೀರಭದ್ರನನ್ನು ಅವನ ವೈಶಿಷ್ಟ್ಯವನ್ನು ಕಣ್ಣ ಮುಂದೆ ಕಟ್ಟುವಂತೆ ಅಕ್ಷರಲೋಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹಿಡಿದಿಟ್ಟಿದ್ದರೆ, ಚಿತ್ರ ಪ್ರಪಂಚ ವೈವಿಧ್ಯಮಯವಾದ ಚಿತ್ರವಿಚಿತ್ರವಾಗಿ ಚಿತ್ರಿಸಿದೆ. ಜನಪದರು ತಮ್ಮ ಸಹಜವಾದ ಹಾಡು, ಒಡಪು, ಬಯಲಾಟ, ಮಾಧ್ಯಮಗಳಲ್ಲಿ ಅಷ್ಟೇ ಅಲ್ಲ ನಿತ್ಯಾಚರಣೆಗಳಲ್ಲಿಯೂ ವೀರಭದ್ರ ಸಂಸ್ಕೃತಿಯನ್ನು ಜೀವಂತವಾಗಿ ಇಟ್ಟಿದ್ದಾರೆ. ಕಲಾವಿದರು, ಶಿಲ್ಪಿಗಳು, ಶಾಸನರಚಕರು ವೀರಭದ್ರನನ್ನು ತಮ್ಮದೇ ಆದ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ವೀರಭದ್ರನನ್ನು ಕಂಡರಿಸಿದ್ದಾರೆ. ಇದರಿಂದ ವೀರಭದ್ರನು ಬರೀ ಮೂರ್ತಿಯೆಂದು ಸ್ಥಾವರವೆಂದು ಪೂಜೆಗೊಳ್ಳುವುದಿಲ್ಲ ಜನಮನದ ನಿತ್ಯಬದುಕಿನ ಶಕ್ತಿದೇವನಾಗಿ ಜಂಗಮಸ್ವರೂಪನಾಗಿದ್ದಾನೆ. ಬುಡುಗ-ಬೇಡ ಜಂಗಮರೆಂಬ ಆಂಧ್ರದ ವೀರಶೈವರು ಶ್ರೀ ವೀರಭದ್ರಸ್ವಾಮಿಯ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ವಿಶೇಷವಾಗಿದೆ. ಇವರು ಜಂಗಂ ಕಥೆಯನ್ನು ಹೇಳುತ್ತಾರೆ. ಶ್ರೀ ವೀರಭದ್ರ ಸಂಪ್ರದಾಯದಲ್ಲಿ ಅಗ್ನಿಕುಂಡ ಮಾಡಿ ಅಗ್ನಿಯನ್ನು ತುಳಿಯುವ ದಕ್ಷಯಜ್ಞ ನಾಶದ ಆಚರಣೆಯನ್ನು ಬುಡುಗ, ಬೇಡಜಂಗಮರು ಈಗಲೂ ಆಂಧ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಅವರು ದೊಡ್ಡದಾದ ಖಡ್ಗವೊಂದನ್ನು ಹಿಡಿದುಕೊಂಡು ದಕ್ಷಯಜ್ಞವನ್ನು ಕೆಡಿಸುವ ವೀರ ಒಡಪುಗಳನ್ನು ಜೋರಾಗಿ ಕೂಗುತ್ತಾ ಚೂಪಾದ ಶೂಲಗಳನ್ನು ನಾಲಿಗೆಯಲ್ಲಿ, ದೇಹದ ಮೇಲೆ ಚುಚ್ಚಿಕೊಳ್ಳುತ್ತಾ ದೊಡ್ಡದಾದ ಅಗ್ನಿಕುಂಡವನ್ನು ಹಾರುತ್ತ ಕುಂಡದ ಆಚೆ ಬದಿಯಲ್ಲಿ ಇಟ್ಟ ದಕ್ಷನ ಮೂರ್ತಿಯನ್ನು ಕತ್ತರಿಸಿ ಹಾಕುತ್ತಾರೆ. ಆಂಧ್ರದ ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಜಿಲ್ಲೆಗಳಲ್ಲಿ ಈ  ಜಂಗಮರು ವೀರಭದ್ರಾಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಜಂಗಮರು ವೀರಭದ್ರ ಆಚರಣೆಯನ್ನು ಆಚರಿಸುವಾಗ ಹೇಳುವ ಒಡಪುಗಳಲ್ಲಿನ ವಿಷಯ ರಾಚೋಟಿ ವೀರಭದ್ರೇಶನಿಗೆ ಹೆಚ್ಚು ಅನ್ವಯವಾಗುತ್ತವೆ. ಅವರ ಒಡಪುಗಳಲ್ಲಿರುವ “ಸುರರಾತಿಭಂಗಾ”, “ಸೌಜನ್ಯರತ್ನಾಕರಾ”, “ಶ್ಯಾಮ ಮಹಾದಿವ್ಯವೇಷಾ”, “ಭಕ್ತಾಪೋಷಾ”, “ದಯಾವಾರ್ಥಿ” ಎಂಬ ಶಬ್ದಗಳನ್ನು ನೋಡಿದರೆ - ರಾಚೋಟಿ ವೀರಭದ್ರಸ್ವಾಮಿಯ ಸೌಮ್ಯ ರೂಪವನ್ನೇ ವರ್ಣಿಸುತ್ತಿರುವಂತೆ ತೋರುತ್ತದೆ. ಖಡ್ಗವನ್ನು ಹಿಡಿದು ವೀರಾವೇಶದಿಂದ ದಕ್ಷನ ಸಂಹಾರ ಮಾಡಿದರೂ ವೀರೇಶನು ಸೌಮ್ಯನೂ, ಭಕ್ತಾನುಗ್ರಹಿಯೂ ಎಂಬುದನ್ನು ತೋರಿಸುತ್ತಾರೆ. ರಾಚೋಟಿ ಹೊರತಾಗಿ ಅನ್ಯ ಭಾಗಗಳಲ್ಲಿ ವಿಶೇಷವಾಗಿ ವೀರ ರೌದ್ರಾವತಾರವೇ ಹೆಚ್ಚು. ಸೌಮ್ಯ ವೀರೇಶನ ವರ್ಣನೆ ತೀರ ಕಡಿಮೆ. ರಾಚೋಟಿ ವೀರಭದ್ರಸ್ವಾಮಿ ಸಂಪೂರ್ಣಾನಂದ ಪೂರ್ಣನೂ ಸಂತೃಪ್ತಿ ಸಮಾಧಾನ ಶಾಂತ ಚಿತ್ತನೂ ಆಗಿ ಕಂಗೊಳಿಸಿದ್ದಾನೆ. ಯಜ್ಞನಾಶದ ನಂತರ ಸಕಲರಿಗೂ ಸನ್ಮಂಗಳನ್ನು ಉಂಟು ಮಾಡುವುದಕ್ಕಾಗಿ ಭಕ್ತಾನುರಾಗಿ ಸಂಪ್ರೀತಿಯಿಂದ ರಾಚೋಟಿಯಲ್ಲಿ ನೆಲೆಸಿದ್ದು ವಿಶೇಷವಾಗಿದೆ. ಅಂತೆಯೇ ರಾಚೋಟಿ ವೀರಭದ್ರಸ್ವಾಮಿಗೆ ನಾಲ್ಕು ಕೈಗಳಿಲ್ಲ. ಕಾಲು ಮುಂದಿಟ್ಟಿಲ್ಲ. ರುಂಡ ಮಾಲೆಯಿಲ್ಲ. ಕೈಯಲ್ಲಿ ಖಡ್ಗವೊಂದನ್ನು ಬಿಟ್ಟರೆ ತ್ರಿಶೂಲಾದಿ ಅಸ್ತ್ರಗಳು ಇಲ್ಲ. ಅಂತೆಯೆ ದಕ್ಷ ಬ್ರಹ್ಮನು ಕೂಡ ಶ್ರೀ ವೀರಭದ್ರಸ್ವಾಮಿಯ ಕಾಲ ಬಳಿ ಕೆಳಗೆ ಭಕ್ತಿಯಿಂದ ಕುರಿದಲೆಯವನಾಗಿ ಕೈಮುಗಿದು ಕುಳಿತಿದ್ದಾನೆ.
 ದೇವಸ್ಥಾನಗಳಲ್ಲಿ ಪೂಜೆಗೊಳ್ಳುವ ವೀರಭದ್ರನ ಪ್ರತಿಮೆಯನ್ನೇ ತೆಗೆದುಕೊಂಡರೆ ಅವನು ಬೇರೆ ದೇವರುಗಳಂತೆ ಮೂರ್ತಿಗೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಖಡ್ಗ ತ್ರಿಶೂಲ ಮುಂತಾದ ಆಯುಧಗಳು, ರುಂಡಮಾಲೆ, ಶಿರದಲ್ಲಿ ವ್ಯಾಳಾಸುರ ಶಿರೋಭೂಷಣ, ಆಭರಣಗಳು, ಇವಲ್ಲದೆ ವೀರಭದ್ರನು ವಿಶಿಷ್ಟರೀತಿಯಲ್ಲಿ ನಿಂತ ಭಂಗಿ, (ಸಾಮಾನ್ಯವಾಗಿ ದೇವರುಗಳು ಕುಳಿತ ಭಂಗಿಯಲ್ಲಿರುತ್ತವೆ ಇಲ್ಲವೆ ನೇರವಾಗಿ ನಿಂತಭಂಗಿಯಲ್ಲಿ ಇರುತ್ತವೆ) ಇವೆಲ್ಲವೂ ವೀರಭದ್ರನ ವೀರಾಗ್ರ ರೀತಿ ಮತ್ತು ಅದ್ಭುತ ಶಕ್ತಿ ಸಂಕೇತಗಳಾಗಿ ತೋರುತ್ತವೆ. ವೀರಭದ್ರನ ಇನ್ನೊಂದು ವಿಶೇಷವೆಂದರೆ ವೀರಗುಣವಷ್ಟೇ ಅಲ್ಲ ಅವನಲ್ಲಿ ಭದ್ರತ್ವ ಅಂದರೆ ರಕ್ಷಣೆಮಾಡುವವನ ಆತ್ಮವಿಶ್ವಾಸ ಮತ್ತು ವೀರತ್ವದಲ್ಲೂ ಶಾಂತತ್ವ ಶುಭತ್ವಗಳ ಸಮ್ಮಿಳಿತವಾಗಿರುವುದು. ಈ ಬಗೆಯ ಬಹು ಅರ್ಥವುಳ್ಳ ಮೂರ್ತಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪರೂಪವೆಂದೇ ಹೇಳಬೇಕು. ಇನ್ನು ತಾಮ್ರ ಬೆಳ್ಳಿ ಬಂಗಾರ ಮುಂತಾದ ಲೋಹಗಳಲ್ಲಿ ವೀರಭದ್ರನನ್ನು ಮೂರ್ತಿಗೊಳಿಸಿ, ಫಲಕಗೊಳಿಸಿ ಮನೆಯ ಜಗುಲಿ, ಮಾಡುಗಳಲ್ಲಿ, ಪುರವಂತರ ಎದೆಯಲ್ಲಿ, ಕೊರಳಿನಲ್ಲಿ, ಪಲ್ಲಕ್ಕಿಯಲ್ಲಿ ಇಟ್ಟು ಪ್ರದರ್ಶಿಸುವ ಪೂಜಿಸುವ ಭಕ್ತರಿಗೂ ಲೆಕ್ಕವಿಲ್ಲ. 

        ವೀರಭದ್ರನ ಒಡಪುಗಳಲ್ಲಿ `ಆಹಾಹಾ ಸರ್ಪಾ' ಎಂಬ ಮಾತು ಬರುತ್ತದೆ. ವೀರಭದ್ರ ಸರ್ಪಕುಲ ಅಂದರೆ ನಾಗಕುಲದವ. ನಾಗರು ದ್ರಾವಿಡ ಪಣಿಯರು. (ಪಣಿ=ಫಣಿ, ನಾಗರಹೆಡೆ) (ವೀರಪಣಿ+ಜ = ವೀರಬಣಿಜರು ಎಂದರೆ ವೀರಬಣಜಿಗರು, ವೀರಬಣಂಜುಗಳು ಪ್ರಾಯಃ ವೀರಭದ್ರನ ನಾಗಕುಲಕ್ಕೆ ಸಂಬಂಧಿಸಿದ ದ್ರಾವಿಡರು. ಶೂರರಾದ ಇವರು ಪರ್ವತ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಅಲೆದು ಜನರಿಗೆ ಬೇಕಾದ ವಸ್ತುಗಳನ್ನು ಒದಗಿಸುತ್ತಿದ್ದರು. ಅಂತೆಯೆ ಇವರು ಮುಂದೆ ಪಣಿ+ಕ = ವಣಿಕ ಪಣಿ+ಜ ವಣಿಜ, ವಾಣಿಜ್ಯ (ವ್ಯಾಪಾರಿ) ಮಾಡುವವರೆನಿಸಿರಬೇಕು. ಇಂದಿಗೂ ಬಹಳಷ್ಟು ಬಣಜಿಗರಿಗೆ ವೀರಭದ್ರನು ಮನೆದೇವರಾಗಿ ಇರುವುದನ್ನು ಕಾಣಬಹುದು) ಶಿವನು ರೌದ್ರಾವತಾರ ತಾಳಿ ರುದ್ರನೆನಿಸಿದ, ಅವನು ರುದ್ರಾವತಾರಿಯಾದಾಗ ಹುಟ್ಟಿದವನೇ ವೀರಭದ್ರ. ಕರ್ನಾಟಕದ ಕೆಲವು ವೀರಭದ್ರ ಶಿಲ್ಪಗಳಲ್ಲಿ ವೀರಭದ್ರನು ಕೈಯಲ್ಲಿ ನಾಗರಹಾವನ್ನು ಹಿಡಿದ ದೃಶ್ಯವನ್ನು ಕಾಣಬಹುದು.
ವೀರಭದ್ರನನ್ನು ವೀರಮಾಹೇಶ್ವರ ಎಂದು ವೀರಾಗಮ ವರ್ಣಿಸಿದೆ-
`ವೀರಮಾಹೇಶ್ವರಾಚಾರ ವೀರಭದ್ರಾಯತೇ ನಮ:
ಆಶೇಷ ಪ್ರಮಥಾಚಾರ ಗುರೂಣಾಂ ಗುರವೇ ನಮ:’
 ಎಂಬ ಶ್ಲೋಕದಲ್ಲಿ ವೀರಭದ್ರ ವೀರಮಾಹೇಶ್ವರನಷ್ಟೇ ಅಲ್ಲ ಅವರೆಲ್ಲರಿಗೂ ಗುರು ಎಂದೂ ಅಂಥ ಗುರುವಿನ ಗುರುವಿಗೆ ನಮಸ್ಕಾರ ಎಂದೂ ಹೇಳಿದೆ. ವೀರಶೈವರಲ್ಲಿ ಜಂಗಮರಿಗೆ ವೀರಮಾಹೇಶ್ವರ ಎಂಬ ಪದದ ಬಳಕೆ ವೀರಭದ್ರನಿಂದ ಬಂದಿರಬಹುದನೋ ಎನಿಸುತ್ತದೆ. 

      12ನೇ ಶತಮಾನದ ಉರಿಲಿಂಗಪೆದ್ದಿ ಒಬ್ಬ ಶ್ರೇಷ್ಠ ದಲಿತ ಶಿವಶರಣ. ಅವನು ವೇದಾಗಮಗಳನ್ನೂ ಆಳವಾಗಿ ಅಭ್ಯಾಸಮಾಡಿದವನು. ಅವನು ವೀರಭದ್ರನನ್ನು ಶ್ರೇಷ್ಠ ಸದ್ಭಕ್ತ ಶಿವಶರಣರ ಸಾಲಿನಲ್ಲಿಟ್ಟು ಗೌರವದಿಂದ ಸ್ಮರಿಸಿದ್ದಾನೆ. ಕೆಲವು ಶರಣರು ವೀರಭದ್ರನನ್ನು ಪೂಜಿಸುವುದ್ಯಾಕೆ ? ಎಂದು ಪ್ರಶ್ನಿಸಿರಬಹುದು. ಅದಕ್ಕೆ ಉತ್ತರವಾಗಿ ಉರಿಲಿಂಗಪೆದ್ದಿ ಸುದೀರ್ಘವಾದ ವಿವರಣೆಯನ್ನು ಉದಾಹರಣೆಗಳನ್ನು ನೀಡಿ  ‘ಮಹಾಶರಣರಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು’ ನೀವೇಕೆ ಇವರಲ್ಲಿ ಅವಿಶ್ವಾಸ ಮಾಡಿ ಕೆಡುತ್ತೀರಿ ? ಎಂದು ಕೇಳುತ್ತಾನೆ. (ವಚನಸಂಖ್ಯೆ 1596) ಇಲ್ಲಿ ಉರಿಲಿಂಗಪೆದ್ದಿ ಬಹು ಸ್ವಾರಸ್ಯಕರವಾಗಿ ವೀರಭದ್ರಾದಿ ಗಣಗಳ ಬಗ್ಗೆ ಹೇಳುತ್ತಾನೆ. ಸಂದೇಹ ಬೇಡ, ಪುರಾತನ ಶರಣರು ಶಿವನ ಗಣಂಗಳಲ್ಲಿ ಸದ್ಭಕ್ತಿಯನ್ನು ಮಾಡಿ ಮುಕ್ತಿಯನ್ನು ಪಡೆದಿದ್ದಾರೆ. ನೀವೂ ಕೂಡ ನಂಬಿರಿ, ವಿಶ್ವಾಸದಿಂದ ಅವರಲ್ಲಿ ಭಕ್ತಿ ಮಾಡಿರಿ ದಿಟವೋ ಸೆಟೆಯೋ ಎಂಬ ಸಂಶಯದಲ್ಲಿ ಬೀಳಬೇಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುವ ವಚನ ಇದಾಗಿದೆ. ಸ್ವಾರಸ್ಯವೆಂದರೆ ಚೆನ್ನಬಸವಣ್ಣ ಮುಂತಾದ ಕೆಲವು ಶರಣರು ಏಕದೇವೋಪಾಸನೆಯ ನಿಷ್ಠೆಯನ್ನು ಎತ್ತಿಹಿಡಿಯುವುದಕ್ಕಾಗಿ ಹೇಳಿದ ವಚನಗಳಲ್ಲಿ ಬೇರೆ ದೇವತೆಗಳನ್ನು ಹೆಸರಿಸುವಾಗ ವೀರಭದ್ರನ ಹೆಸರನ್ನೂ ಸೇರಿಸಿದ್ದಾರೆ. ಇದರಿಂದ ಲಿಂಗವನ್ನಲ್ಲದೆ ಬೇರೇನನ್ನೂ ಪೂಜಿಸಬಾರದೆಂಬುದು ಅಲ್ಲಿನ ಅರ್ಥ. ಇದು ಬಾಹ್ಯದೃಷ್ಟಿಯಲ್ಲಿ ಸರಿಯಾದರೂ ವೀರಭದ್ರನೇ ಲಿಂಗವಾಗಿರುವುದರಿಂದ ವೀರಭದ್ರನ ಪೂಜೆಯೂ ಲಿಂಗಪೂಜೆಯೇ ಆಗುತ್ತದೆ. ಶಿವನೇ ತನ್ನ ಜಡೆಮುಡಿಯಿಂದ ವೀರಭದ್ರನನನ್ನು ಸೃಷ್ಟಿಮಾಡಿ ಉಗ್ರರೂಪತಾಳಿ ದಕ್ಷಬ್ರಹ್ಮನ ಸಂಹಾರಮಾಡಿದ್ದು ಇದಕ್ಕೆ ಉದಾಹರಣೆಯಾಗಿದೆ. ಇದನ್ನು ಬಸವಣ್ಣನವರೂ ತಮ್ಮ ವಚನಗಳಲ್ಲಿ ಸ್ಪಷ್ಟೀಕರಿಸಿದ್ದಾರೆ. 

“ಕೂಡಲಸಂಗಮ ದೇವನು ದಕ್ಷನ ಕೆಡಿಸಿದುದ ಮರೆದಿರಲ್ಲಾ”

“ವಿಷವಟ್ಟಟಿಸುಡುವಲ್ಲಿ ವೀರಭದ್ರ ಬಡಿವಲ್ಲಿ
ಕೂಡಲ ಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು”

"ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ
ಸುರರೆಲ್ಲ ನೆರೆದು ಬಂದ ಬಾಯ ನೋಡಾ. 
ಬಾಯ ತಪ್ಪಿಸಿ ಉಣಬಂದ ದೈವದ 
ಬೆಂದ ಬಾಯ ನೋಡಾ. 
ಉಣ್ಣದೆ ಉಡದೆ ಹೊಗೆಯ 
ಕೈಯಲಿ ಸತ್ತ ಅಣ್ಣಗಳ ಕೇಡ ನೋಡಾ ಕೂಡಲಸಂಗಮದೇವಾ"

"ಅಂದಾ ತ್ರಿಪುರವನುರುಹಿದಾತ ವೀರ, 
ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ, 
ಕಡುಗಲಿ ನರಸಿಂಹನನುಗಿದಾತ ವೀರ, 
ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ,"

ಬಸವಣ್ಣನವರ ವಚನಗಳಲ್ಲಿ ವೀರಭದ್ರನು ಯಜ್ಞಸಂಸ್ಕೃತಿಯನ್ನು ನಾಶಮಾಡುವಲ್ಲಿ ವಹಿಸಿದ ವೀರೋಚಿತ ಕಾರ್ಯದ ಪ್ರಶಂಸೆಯನ್ನು ಕಾಣುತ್ತೇವೆ. ವೀರಶೈವವನ್ನು ವಿರೋಧಿಗಳಿಂದ ರಕ್ಷಿಸಿದ ಬಗೆಯನ್ನು ಬಸವಣ್ಣನವರು ಎತ್ತಿ ಹಿಡಿದಿದ್ದಾರೆ. ಅಲ್ಲದೆ ವೀರಭದ್ರನನ್ನು ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಪ್ರಶಂಸಿಸಿದ್ದಾರೆ.
ಹೀಗೆ ವೀರಭದ್ರನ ಚರಿತ್ರೆ ಮಹತ್ವ ಬಹು ಪ್ರಾಚೀನ ಕಾಲದಿಂದಲೇ ಸಾಗಿ ಬಂದಿದೆ. ಭಕ್ತರ ಹೃದಯದ ಕಣ್ಮಣಿಯಾಗಿ ಅವರ ಕಷ್ಟಪರಿಹಾರಕನಾಗಿ ಇಷ್ಟಾರ್ಥಗಳನ್ನು ನೆರವೇರಿಸುತ್ತ ಬಂದ ವೀರಭದ್ರನ ಜಯಂತಿಯನ್ನು ಪ್ರತಿವರ್ಷ ಭಾದ್ರಪದ ಮಾಸದ ಮೊದಲನೆಯ ಮಂಗಳವಾರ  ಆಚರಿಸಲಾಗುತ್ತಿದೆ. ಅಂದು ವೀರಭದ್ರನ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ಆ ಶುಭದಿನದಂದು ವೀರಭದ್ರನ ಸ್ಮರಣೆ ಆರಾಧನೆ ಮಾಡಿ ಪುನೀತರಾಗೋಣ.

 --ಡಾ.ಸಂಗಮೇಶ ಸವದತ್ತಿಮಠ

ಧರ್ಮದಿಂದ ಗಳಿಸಬೇಕು

*ಅಲಬ್ಧಮೀಹೇದ್ಧರ್ಮೇಣ* 

*ಲಬ್ಧಂ ಯತ್ನೇನ ಪಾಲಯೇತ್ |*
*ಪಾಲಿತಂ ವರ್ಧಯೇನ್ನಿತ್ಯಂ* 

*ವೃದ್ಧಂ ಪಾತ್ರೇಷು ನಿಕ್ಷಿಪೇತ್ ||*
_(ಮಹರ್ಷಿಯಾಜ್ಞವಲ್ಕ್ಯವಚನ)_

_*(ಧರ್ಮೇಣ)* ಧರ್ಮದಿಂದ, *(ಅಲಬ್ಧಮ್)* ಈಗಾಗಲೇ ಲಭಿಸದಿರುವ ಹೊಸದನ್ನು, *(ಈಹೇತ್)* ಸಂಪಾದಿಸಲು ತೊಡಗಬೇಕು. *(ಲಬ್ಧಮ್)* ಸಂಪಾದಿಸಿದ್ದನ್ನು, *(ಯತ್ನೇನ)* ಪ್ರಯತ್ನಪೂರ್ವಕವಾಗಿ, *(ಪಾಲಯೇತ್)* ರಕ್ಷಿಸಬೇಕು. *(ಪಾಲಿತಮ್)* ರಕ್ಷಿಸಿದ್ದನ್ನು, *(ನಿತ್ಯಂ ವರ್ಧಯೇತ್)* ದಿನವೂ / ಯಾವಾಗಲೂ ನ್ಯಾಯಮಾರ್ಗದಲ್ಲಿ ಹೆಚ್ಚಿಸಬೇಕು. *(ವೃದ್ಧಮ್)* ಹಾಗೆ ಹೆಚ್ಚಿಸಿದ್ದನ್ನು, *(ಪಾತ್ರೇಷು)* ಯೋಗ್ಯರಲ್ಲಿ / ಪಾತ್ರರಲ್ಲಿ, *(ನಿಕ್ಷಿಪೇತ್)* ಹಂಚಬೇಕು._

_ಸಂಪಾದನೆಗೆ ಧರ್ಮಮಾರ್ಗವೆಂದರೆ ನ್ಯಾಯವಾದ ದುಡಿತ. ಯಾವುದು ನ್ಯಾಯ, ಯಾವುದು ಅನ್ಯಾಯವೆಂದು ಪ್ರತಿಯೊಬ್ಬನ ಅಂತಃಸಾಕ್ಷಿಗೂ ತಿಳಿದಿರುತ್ತದೆ. ಆದರೆ ಕಾಮ ಕ್ರೋಧಗಳ ಉಲ್ಬಣತೆಯಿಂದ ತಪ್ಪನ್ನೆಸಗುತ್ತಾನೆ. ಒಟ್ಟಿನಲ್ಲಿ ಇನ್ನೊಬ್ಬರ ಹಿತಕ್ಕೆ ಧಕ್ಕೆಯಾಗದಿರುವ ಮಾರ್ಗ ನ್ಯಾಯವೆಂಬುದು ಸಾಮಾನ್ಯ ನಿಯಮ._

_ಸಂಪಾದನೆ, ವರ್ಧನೆ, ವಿನಿಯೋಗ- ಇವಿಷ್ಟು ಧರ್ಮಮೂಲವಾಗಿರಬೇಕು ಎಂಬುದು ನೀತಿಯ ತಿರುಳು. ಮೊದಲನೆಯದಾದ ಸಂಪಾದನೆಯಲ್ಲಿ ಅಧರ್ಮ ಇಣುಕಿತೆಂದರೆ ಉಳಿದವುಗಳಿಗೆ ಅದರ ಅಂಟು ತಪ್ಪಿದ್ದಲ್ಲ. ಸಾಲದ ಸಂಪಾದನೆ ದುಡಿತದಿಂದ ಬಂದ್ದಲ್ಲ. ಕೆಲವು ಸಂದರ್ಭಗಳಲ್ಲಿ ಸಾಲ ಅನಿವಾರ್ಯವಾದರೂ ಅದರ ಪಾಲನೆ ಮೊದಲಾದ ಮೂರು ಹೇಗೆ ನಡೆಯುತ್ತವೆ ಎಂಬುದರ ಮೇಲೆ ಅದರ ಮೌಲ್ಯ ನಿಂತಿರುತ್ತದೆ. ಇದು ವ್ಯಕ್ತಿಗೆ ಅನ್ವಯಿಸುವಂತೆ ರಾಷ್ಟ್ರಕ್ಕೂ ಅನ್ವಯಿಸುತ್ತದೆ. *ಉತ್ತಮಂ ಸ್ವಾರ್ಜಿತಂ ವಿತ್ತಮ್*. ತಾನೇ ನ್ಯಾಯಯುತ ದುಡಿಮೆಯಿಂದ ಸಂಪಾದಿಸಿದ ಹಣವೇ ಉತ್ತಮ._

_ಸಂಪಾದಿಸಿದರೆ ಕರ್ತವ್ಯ ಮುಗಿಯಲಿಲ್ಲ. ಅದನ್ನು ರಕ್ಷಿಸಿ ಬೆಳೆಸಬೇಕು. ಆಮೇಲೆ
*ವೃದ್ಧಂ ಪಾತ್ರೇಷು ನಿಕ್ಷಿಪೇತ್*- "ಯೋಗ್ಯಪಾತ್ರದಲ್ಲಿ ಅದನ್ನು ಹಂಚಬೇಕು." ಸಂಪಾದನೆಗೆ ವಿನಿಯೋಗದಲ್ಲಿ ಮುಕ್ತಾಯ. *ಆದಾನಂ ಹಿ ವಿಸರ್ಗಾಯ* -- ಸಂಪಾದನೆ / ಸ್ವೀಕಾರವು ಕೊಡುವುದಕ್ಕೇ ಆಗಿದೆ. ಇದು ಒಂದು ನಿಯಮ._

_ಮೇಲಿನ ಶ್ಲೋಕದಲ್ಲಿನ ವಿಷಯ, ವಿದ್ಯೆಗೂ ಸಂಬಂಧಿಸುತ್ತದೆ. ವಿದ್ಯೆಯನ್ನು ಸಂಪಾದಿಸಿ, ರಕ್ಷಿಸಿ, ಬೆಳೆಸಿ, ಅರ್ಹನಾದ ಶಿಷ್ಯನಿಗೆ ಬೋಧಿಸಬೇಕು. ಉಪಾಧ್ಯಾಯನಲ್ಲದವನೂ ತನ್ನ ವಿದ್ಯೆಗೆ ಅನುಗುಣವಾಗಿ ಜನೋಪಯುಕ್ತ ಕಾರ್ಯವನ್ನು ಮಾಡಿದರೆ ಸಾಲವನ್ನು / ಋಷಿಋಣವನ್ನು ತೀರಿಸಿದಂತೆ._

_ಹಣವನ್ನು ಬಿಟ್ಟರೆ ಪ್ರಿಯವಾದದ್ದು ಕೀರ್ತಿ. ಧನಪಿಶಾಚಕ್ಕಿಂತ ಕೀರ್ತಿಶನಿಯ ಕಾಟ ಹೆಚ್ಚಿನದು. ಭೃಷ್ಟಾಚಾರದಿಂದ ಹಣವನ್ನು ಸೇರಿಸಿದಂತೆ ದುಷ್ಟಾಚಾರದಿಂದ ಕೀರ್ತಿಯನ್ನು ಗಳಿಸಿದವರೂ ಉಂಟು. ಹಣವನ್ನು ಮನುಷ್ಯನು ಬಚ್ಚಿಡುತ್ತಾನೆ, ಕೀರ್ತಿಯನ್ನು ಮಾತ್ರ ಎಲ್ಲೆಲ್ಲಿಯೂ ಹಂಚಲು ಆಶಿಸುತ್ತಾನೆ. ವಿದ್ಯೆ, ಧನ, ಕೀರ್ತಿ- ಯಾವುದೇ ಆಗಲಿ ಆರ್ಜನೆಯ ಮಾರ್ಗ ಶುದ್ಧವಾದರೆ ಉಳಿದವೂ ಶುದ್ಧವಾಗಿರುತ್ತವೆ._

_ಇಲ್ಲದಿದ್ದರೆ, *"ದಾನಂ ಭೋಗೋ ನಾಶಸ್ತಿಸ್ರೋ, ಗತಯೋ ಭವನ್ತಿ ವಿತ್ತಸ್ಯ | ಯೋ  ದದಾತಿ ನ ಭುಙ್ಕ್ತೇ, ತಸ್ಯ ತೃತೀಯಾ ಗತಿರ್ಭವತಿ ||"* — ಅಂದರೆ, ಹಣಕ್ಕೆ ದಾನ, ಭೋಗ, ನಾಶವೆಂದು ೩ ವಿಧದ ಗತಿಯಿರುವುದು. ಯಾರು ಇತರರಿಗೆ ದಾನವೂ ಮಾಡದೆ, ತಾನೂ ಭೋಗಿಸದಿರುವನೋ ಅಂಥವರ ಹಣಕ್ಕೆ ನಾಶವೆಂಬ ೩ನೇ ಗತಿಯಾಗುತ್ತದೆ. ಹಾಗಾಗಿ ಸೋಮಾರಿಯಾಗದೇ, ಧರ್ಮಮಾರ್ಗದಲ್ಲಿ ಹೆಚ್ಚು ಸಂಪಾದಿಸಬೇಕು. ಹಾಗೆ ಸಂಪಾದಿಸಿದ್ದನ್ನು ನ್ಯಾಯಯುತವಾಗಿ, ಜಾಗರೂಕತೆಯಿಂದ ಉಳಿಸಿ ಬೆಳೆಸಬೇಕು. ಬೆಳೆಸಿದ್ದರ ಒಂದು ಭಾಗವನ್ನು ಯೋಗ್ಯರಿಗೆ ಹಂಚಬೇಕು ಎಂಬುದಿದರ ಸಂದೇಶ.

April 1, 2023

ಮಹಾಸಂಕಲ್ಪ

ಜಗತ್ತಿನ ಯಾವ ದೇಶವೂ ತನ್ನ ಪರಂಪರೆಯನ್ನು. ಪ್ರಾಚೀನತೆಯನ್ನು ಮತ್ತು ಕಾಲಮಾನವನ್ನು ನೆಯುತ್ತಿರಲಿಕ್ಕಿಲ್ಲ. ಆದರೆ ನಮ್ಮ ಮಣ್ನಿನ ಗುಣವೇ ಹಾಗೆ ನಾವು ಕಾರ್ಯಾರಂಭಕ್ಕು ಮೊದಲು ಪರಂಪರೆಯನ್ನು ನೆನೆಯುವುದು ಕೃತಜ್ಞತೆಯ ಪ್ರತೀಕವೂ ಹೌದು, ನಮ್ಮ ಸಂಸ್ಕೃತಿಯೂ ಹೌದು. ಅದೇ ದೇಶ ಭಕ್ತಿ!

  ನಮ್ಮ ಪ್ರಾಚೀನರಿಗೆ ಇದ್ದ ಆಸ್ಥೆ ಅಪಾರವಾದದ್ದು. ಮುಂದಿನ ಪೀಳಿಗೆಯವರಿಗೆ ತಮ್ಮ ಪರಂಪರೆಯನ್ನು ಬಿಟ್ಟುಕೊಡುವಲ್ಲಿ ಕೊಟ್ಟ ಕೊಡುಗೆ ಅಪಾರ. ಅಂತವುಗಳಲ್ಲಿ ವಿಶೇಷ ಶುಭ ಸಂದರ್ಭಗಳಲ್ಲಿನ ಮಹಾ ಸಂಕಲ್ಪ ಒಂದು. ಪ್ರಾಚೀನ ಕಾಲದಿಂದ ಇಂದಿನ ತನಕವೂ ಬಂದ ಈ ಮಹಾ ಸಂಕಲ್ಪವು ಶುಭಸಮಾರಂಭಗಳಾದ ವಿವಾಹಗಳೇ ಮೊದಲಾದ ಎಲ್ಲಾ ಶುಭಸಮಾರಂಭಗಳಲ್ಲಿ ಈ ನೆಲದ ಎಲ್ಲಾ ವರ್ಗದವರೂ ಮಹಾಸಂಕಲ್ಪವನ್ನು ಅನುಸರಿಸುತ್ತಾರೆ. ಇಂತಹ ಮಹಾ ಸಂಕಲ್ಪದ ಉದ್ದೇಶವೇ ನಮ್ಮ ಈ ಪುಣ್ಯ ಭೂಮಿಯ ಸ್ಮರಣೆ ಮತ್ತು ನಾವು ಅದಕ್ಕೆ ಕೊಡುವ ಗೌರವ. ಅಂದರೆ ನಮ್ಮ ರಾಷ್ಟ್ರ ಭಕ್ತಿಯ ನಿವೇದನೆ. ಈ ಮಹಾಸಂಕಲ್ಪದಿಂದ ನಾವು ವಾಸಿಸುವ ಭೂಮಿಯನ್ನು ದೈವತ್ವಕ್ಕೇರಿಸಿಕೊಂಡಿದ್ದೇವೆ. ನಮ್ಮ ಋಷಿಗಳು, ಪೂರ್ವಜರು ಈ ನೆಲದ ಭೌಗೋಳಿಕ ಪರಿಸರದ ಮತ್ತು ಕಾಲಮಾನದ ಸ್ಮರಣೆಯನ್ನು ಸ್ಮರಿಸುವುದರ ಜೊತೆಗೆ ನಮ್ಮ ಪ್ರಾಚೀನರ ಸ್ಮರಣೆಯನ್ನು ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಮಾಡುತ್ತಿರಲಿ ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದರು. ಪ್ರಾಚೀನರ ಸಾಧನೆಯನ್ನು ಆಧುನಿಕ ಸಂಶೋದನೆ ಮತ್ತು ಸಾಧನೆಗಳ ಜೊತೆಗೆ ಮುಂದುವರೆಸಲಿ ಎನ್ನುವ ಆಶೆ ಅವರದ್ದಾಗಿತ್ತು. ಅಂದರೆ ನಮ್ಮ ಪಾರಂಪರಿಕ ಸಾಲಿನಲ್ಲಿಯೇ ಉಳಿದು ನಮ್ಮ ವಂಶವನ್ನು ಸ್ಮರಿಸಲಿ ಎನ್ನುವ ಉದ್ದೇಶವಾಗಿತ್ತು. ಆದರೆ ಇಂದು ನಾವು ನಮ್ಮ ಪೂರ್ವಜರಲ್ಲಿದ್ದ ದೇಶಭಕ್ತಿಯ ನೂರರಲ್ಲಿ ಒಂದು ಗುಣದಷ್ಟೂ ಸಹ ಹೊಂದಿಲ್ಲದಿರುವುದು ವಿಷಾದನೀಯ. ನಾವೇನಾದರೂ ಅವರ ಸಾಲಿನಲ್ಲಿಯೇ ಮುಂದುವರಿದಿದ್ದರೆ ನಮ್ಮ ಪ್ರಾಚೀನರು ನಮಗೆ ಕೊಟ್ಟ ಕಾಲಮಾನ ಮತ್ತು ಸಂಸ್ಕೃತಿಯ ಪ್ರಾಚೀನತೆ ಸುಲಭವಾಗಿ ಸಿಗುತ್ತಿತ್ತು. ಆದರೆ ನಾವು ವಿದೇಶೀ ವಿದ್ವಾಂಸರು ನೀಡಿದ ಕಾಲ್ಪನಿಕ ಲೆಕ್ಕಾಚಾರದ ಹೊಂದಾಣಿಕೆಯನ್ನೇ ಸತ್ಯವೆಂದು ಭ್ರಮಿಸಿ ಅದನ್ನೇ ನಮ್ಮ ಹಿಂದಿನ ಕಾಲಮಾನ ಮತ್ತು ಮುಂದಿನ ಕಾಲಮಾನವೆಂದು ತಪ್ಪಾಗಿ ಗಣಿಸುತ್ತಿದ್ದೇವೆ. ವಿದೇಶೀ ಪ್ರಭಾವದಿಂದ ಪ್ರಾಚೀನರ ಬದುಕನ್ನು ಅರಿಯುವ ಗೊಡವೆಗೆ ನಾವು ಹೋಗಲೇ ಇಲ್ಲ. ಪರಮಾತ್ಮನ ಅಸ್ತಿತ್ವದ ಬ್ರಹ್ಮಾಂಡದಲ್ಲಿ ಭಾರತ ಒಂದು ನಿರ್ದಿಷ್ಟ ಪ್ರದೇಶವನ್ನು ಹೊಂದಿದ್ದರೂ ಭರತವರ್ಷ ಎನ್ನುವ ಹೆಸರಿನಿಂದ ಕರೆಸಿಕೊಂಡಿದೆ. ಮಹಾಸಂಕಲ್ಪದಲ್ಲಿ ಪರಮಾತ್ಮನ ಸೃಷ್ಟಿಯ ಹದಿನಾಲ್ಕು ಲೋಕಗಳನ್ನು ನಾವು ಸ್ಮರಿಸಿಕೊಳ್ಳಬೇಕಿತ್ತು ಆದರೆ ಇಂದು ಆ ಅಂಶಗಳೆಲ್ಲ ಬಿಟ್ಟು ಹೋಗಿದ್ದು, ಭರತವರ್ಷ ಮತ್ತು ಭರತಖಂಡ ಮಾತ್ರವೇ ಉಳಿದುಕೊಂಡಿದೆ. 

ಅಷ್ಟದಿಕ್ಪಾಲಕರು, ಅವರ ವಾಸಸ್ಥಾನಗಳು, ಈ ಭೂಮಿಯ ಮೇಲೆ ಇರುವ ಸಪ್ತದ್ವೀಪಗಳು, ಅಖಂಡ ಭೂಗೋಲದ ನವ ಖಂಡಗಳು, ನವವರ್ಷಗಳೊಂದಿಗೆ ಇಲ್ಲಿನ ಪರಿಸರದ ಪರ್ವತಗಳನ್ನು ಮತ್ತು ಈ ಭರತವರ್ಷದಲ್ಲಿನ ಪವಿತ್ರ ನದಿಗಳ ಸ್ಮರಣೆ, ಈ ಪವಿತ್ರ ಭೂಮಿಯನ್ನು ಆಳಿದ ಹಿಂದಿನ ಮತ್ತು ಇಂದಿನ ಚಕ್ರವರ್ತಿಗಳ ಸ್ಮರಣೆಯನ್ನು ಮಹಾಸಂಕಲ್ಪದಲ್ಲಿ ನೆನೆಸಿಕೊಳ್ಳುವುದು ನಮ್ಮ ಸ್ಮೃತಿಪಟಲದಲ್ಲಿ ನಮ್ಮ ದೇಶದ ಬಗೆಗಿನ ಭಕ್ತಿ ಭಾವ ಸದಾ ಜಾಗ್ರತವಾಗಿ ನೆಲೆಗೊಳ್ಳಲಿ ಎಂದು. ನಾವು ಮಹಾಸಂಕಲ್ಪದಲ್ಲಿ ಭರತ ಎಂದು ಸಂಕಲ್ಪಿಸಿಕೊಂಡಾಗ ಅದು ಭರತವರ್ಷ ಎನ್ನುವುದು ಸ್ಪಷ್ಟವಾಗುತ್ತದೆ. ಇದರ ಜೊತೆಗೆ ನಾವು ಕಲ್ಪಗಳನ್ನು, ಮನ್ವಂತರ ಮತ್ತು ಮನುಗಳನ್ನು, ಅವತಾರಗಳನ್ನು ಮತ್ತು ಪ್ರಸ್ತುತ ಶಖೆಯ ಜೊತೆ ದಿನಚರಿ(ಸಂವತ್ಸರ, ಋತು, ಮಾಸ, ಪಕ್ಷ, ತಿಥಿ, ನಕ್ಷತ್ರ, ವಾರ) ಹೇಳಿ ಅಂತಿಮ ಗೊಳಿಸುತ್ತಾ ಮುಂದಿನ ವಿಧಿಗಳನ್ನು ಆರಂಭಿಸುವುದು ಮಹಾಸಂಕಲ್ಪಕ್ಕಿರುವ ಮಹತ್ವ ಗೊತ್ತಾಗುತ್ತದೆ. ಅಥವಾ ಮುಂದಿನ ಪವಿತ್ರ ಕಾರ್ಯವನ್ನು ನಿರ್ಧರಿಸುತ್ತದೆ. ಇಂತಹ ಮಹೋನ್ನತ ಸಂಪ್ರದಾಯವನ್ನು ನಾವು ಕಾಲಾನುಕಾಲಕ್ಕೆ ಪರಂಪರೆಯಿಂದ ಪರಂಪರೆಗೆ ಕೈ ಬಿಡುತ್ತಾ ಬಂದಿದ್ದೇವೆ. ಜಗತ್ತಿನ ಯಾವ ದೇಶವೂ ಸಹ ಇಂತಹ ಸಂಪ್ರದಾಯ ಹೊಂದಿರುವುದು ಸಿಗಲಾರದು. ಬ್ರಹ್ಮನಿಂದ ಅಥವಾ ಜಗತ್ತಿನ ಸೃಷ್ಟಿಯಿಂದ ಇಂದಿನ ತನಕದ ಮರು ನೆನಪನ್ನು ವಿಶೇಷ ಸಂದರ್ಭ ಮತ್ತು ನಿತ್ಯ ಸಂಕಲ್ಪಗಳಲ್ಲಿ ಮಾಡುವುದರಿಂದ ನಮ್ಮ ಸಂಸ್ಕೃತಿಯನ್ನು ಸಂಸ್ಕಾರವನ್ನು ಜೀವಂತ ಇಟ್ಟಂತಾಗುತ್ತದೆ. ಇಂತಹ ಪವಿತ್ರ ಸಂಸ್ಕಾರವನ್ನು, ಪರಂಪರೆಯನ್ನು ಕೊಟ್ಟ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ನಮ್ಮ ಪ್ರಾಚೀನರ ಇತಿಹಾಸವನ್ನು ನಾವು ನೆನೆಯಲು ಮಾಡಿಕೊಂಡ ವ್ಯವಸ್ಥೆ ನಮ್ಮ ಪ್ರಾಚೀನತೆಯನ್ನು ಜೀವಂತವಿಡುತ್ತದೆ ಎನ್ನಬಹುದು. ಇವುಗಳು ಇಂದು ಗೇಲಿಗೆ ಒಳಗಾಗಿವೆ. ಪ್ರಾಚೀನತೆಯಿಂದ ಕ್ರಮೇಣ ಇವುಗಳ ಸ್ವರೂಪ ಬದಲಾಗಿದೆ ನಾವು ನಿತ್ಯ ಸಂಕಲ್ಪವನ್ನೇ ವಿಶೇಷ ಸಂಕಲ್ಪಗಳಲ್ಲಿ ಬಳಸಿ ಮಹಾಸಂಕಲ್ಪದ ಸ್ವರೂಪ ನಿತ್ಯಸಂಕಲ್ಪದ ರೂಪಕ್ಕೆ ಜಾರಿದೆ. ಪರಂಪರೆಯಿಂದ ಬಂದಿರುವುದನ್ನು ಉಳಿಸಿಕೊಂಡು ಬರಬೇಕಾದದ್ದು ನಮ್ಮೆಲ್ಲರ ಹೊಣೆ ಆದರೆ ಆಧುನಿಕತೆಯ ಭರಾಟೆ, ದಿನದಿಂದ ದಿನಕ್ಕೆ ಮನುಷ್ಯರ ಜೀವನ ಶೈಲಿಯ ಬದಲಾವಣೆ, ಕೆಲಸದ ಒತ್ತಡ. ಸಾಮಾಜಿಕ ಜಾಲತಾಣಗಳ ಅತೀ ವ್ಯಾಮೋಹ ಮುಂದೊಂದು ದಿನ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನೆ ಸೀಮಿತಗೊಳಿಸಬಹುದೇನೋ ಅನ್ನಿಸುತ್ತದೆ. 
ಸದ್ಯೋಜಾತ 
#ಪ್ರಾಚೀನ_ವರ್ತಮಾನ

March 13, 2023

ಮನುವು ಹೇಳಿದ್ದೇನು - ನಾವು ಅರ್ಥಮಾಡಿಕೊಂಡಿದ್ದೇನು?

ಮನುವು ಸ್ತ್ರೀಯರು ಸ್ವತಂತ್ರರಾಗಿರುವುದನ್ನು ನಿಷೇಧಿಸಿದ್ದಾನೆನ್ನುವ ನಂಬಿಕೆ ಅನೇಕ ಜನ ಸ್ತ್ರೀಯರಲ್ಲಿ ಇದೆ. ಸಂಸ್ಕೃತವನ್ನು ಕಲಿಸಿಕೊಡುವುದು, ಕಲಿತುಕೊಳ್ಳುವುದು ಎರಡೂ ಕಡಿಮೆಯಾಗಿರುವುದರಿಂದ ಅಸತ್ಯವು ಸತ್ಯವಾಗಿ ಚಲಾವಣೆಯಾಗುತ್ತಿದೆ. ಸ್ವಾತಂತ್ರ್ಯ ಮತ್ತು ಸ್ವೇಚ್ಛೆ ಎರಡೂ ಸಮಾನಾರ್ಥಕ ಪದಗಳಲ್ಲ. ಸ್ವಾತಂತ್ರ್ಯವೆಂದರೆ ತನ್ನನ್ನು ತಾನು ಕಾಪಾಡಿಕೊಂಡು, ತನ್ನ ಯೋಗಕ್ಷೇಮಗಳನ್ನು ವಹಿಸಿಕೊಳ್ಳುವುದು. ಸ್ವೇಚ್ಛೆ ಎಂದರೆ ಇಷ್ಟಬಂದಂತೆ ವ್ಯವಹರಿಸುವುದು. ಸ್ವೇಚ್ಛೆ ಎಂದರೆ ವಿಶೃಂಖಲತ್ವ ಅಂದರೆ ಲಂಗು ಲಾಗಮಿಲ್ಲದೆ ಇರುವುದು. ಕೇವಲ ಸ್ತ್ರೀಯರಿಗಷ್ಟೇ ಅಲ್ಲ ಪುರುಷರಿಗೂ ಸಹ ಸ್ವೇಚ್ಛೆಯು ಒಳಿತಾದುದಲ್ಲ. ಅರ್ಹತೆ ಎಂದರೆ ಹಕ್ಕಲ್ಲ, ಅರ್ಹತೆ ಎಂದರೆ ಸಾಮರ್ಥ್ಯ ಎಂದರ್ಥ.

ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ l
ಪುತ್ರಸ್ತು ಸ್ಥಾವಿರ ಭಾವೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ll
(ಮನುಸ್ಮೃತಿ ೯-೩)

ಮದುವೆಯಾಗುವವರಗೆ ತಂದೆಯ ಅಧೀನದಲ್ಲಿ, ಮದುವೆಯಾದ ನಂತರ ಪತಿಯ ಅಧೀನದಲ್ಲಿ, ಮುದಿತನದಲ್ಲಿ ಮಗನ ಅಧೀನದಲ್ಲಿ ಗುಲಾಮಳಾಗಿರು. ಅವರ ದಯೆಯಿದ್ದರೆ ಅದು ನಿನ್ನ ಪುಣ್ಯ. ಇಲ್ಲದಿದ್ದರೆ ಅದು ನಿನ್ನ ಕರ್ಮ, ನಿನ್ನ ಹಣೆಬರಹ!  ನಿನಗೆ ಜೀವನದಲ್ಲಿ ಸ್ವತಂತ್ರವಾಗಿ ಇರುವ ಅವಕಾಶವಿಲ್ಲ! ಈ ವಿಧವಾಗಿ ಮನುವೆನ್ನುವ ಮಹಾಧೂರ್ತ ಆದೇಶವಿತ್ತಿದ್ದಾನೆಂದಲ್ಲವೇ ಸ್ತ್ರೀವಾದಿಗಳು, ಮಹಿಳಾಪರ ಸಂಘಟನೆಗಳು ಮತ್ತು ಬುದ್ಧಿಜೀವಿಗಳೆಂದು, ವಿಚಾರವಾದಿಗಳೆಂದು ಕರೆಯಲ್ಪಡುತ್ತಿರುವವರ ಸಂಕಟ? ಅರ್ಥವೇನು, ಅಂತರಾರ್ಥವೇನು ಎನ್ನುವುದನ್ನು ಅರಿಯದೆ, ಅದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಎಲ್ಲಿಂದಲೋ ಹೆಕ್ಕಿ ತಂದು ಮಾತು ಮಾತಿಗೆ "ಸ್ತ್ರೀಯರು ಸ್ವಾತಂತ್ರಕ್ಕೆ ಅರ್ಹರಲ್ಲವೆಂದು" ಅವರು ಉದಾಹರಿಸುವ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎನ್ನುವ ಆ ಒಂದು ಪದಗುಚ್ಛವಿರುವುದು ಮನುಸ್ಮೃತಿಯ ಒಂಬತ್ತನೇ ಅಧ್ಯಾಯದ ಮೂರನೇ ಸಂಖ್ಯೆಯ ಶ್ಲೋಕದಲ್ಲಿ. ಅದರ ಹಿಂದೆಯೇ ಮತ್ತೊಂದು ಶ್ಲೋಕವೂ ಇದೆ -

ಕಾಲೇ ದಾತಾ ಪಿತಾ ವಾಚ್ಯೋ ವಾಚ್ಯಶ್ಚಾನುನಯನೇ ಪತಿಃ l
ಮೃತೇ ಭರ್ತರಿ ಪುತ್ರಸ್ತು ವಾಚ್ಯೋ ಮಾತು ರಕ್ಷಿತಾ ll (ಮನುಸ್ಮೃತಿ ೯-೪)

ಭಾವಾರ್ಥ - ಮದುವೆ ಮಾಡಬೇಕಾದ ವಯಸ್ಸಿನಲ್ಲಿ ಮಗಳಿಗೆ ಮದುವೆ ಮಾಡದೇ ಇದ್ದಲ್ಲಿ ಅದಕ್ಕೆ ತಂದೆಯು ತಪ್ಪಿತಸ್ಥನಾಗುತ್ತಾನೆ. ಹೆಂಡತಿಯನ್ನು ಸುಖವಾಗಿಡದ ಪಕ್ಷದಲ್ಲಿ ಅದಕ್ಕೆ ಗಂಡನೇ ಹೊಣೆ. ಗಂಡ ಮರಣಿಸಿದ ನಂತರ ತಾಯಿಯನ್ನು ಕಾಪಾಡದೇ ಹೋದರೆ ಮಗನಾದವನು ಅಪರಾಧಿ ಎನಿಸಿಕೊಳ್ಳುತ್ತಾನೆ.

ಇದರರ್ಥ ತಂದೆಗೆ, ಗಂಡನಿಗೆ ಮತ್ತು ಮಗನಿಗೆ ಮನುವು ವಹಿಸಿದ್ದು ಯಜಮಾನಿಕೆಯಲ್ಲ ....... ಆದರೆ  ಅದು ಜವಾಬ್ದಾರಿ! ಅವರು ಅದನ್ನು ಸರಿಯಾಗಿ ನಿಭಾಯಿಸದೇ ಇದ್ದರೆ ಅದಕ್ಕೆ ಅವರೇ ಹೊಣೆ ಎಂದು ಮನು ಅವರನ್ನು ಎಚ್ಚರಿಸಿದ್ದಾನೆ. ಹೆಂಗಸೆಂದರೆ ಗಂಡಸಿನ ಕಾಲ ಬಳಿ ಬಿದ್ದಿರಬೇಕಾದ ದಾಸಿ, ಗಂಡಸಾದವನು ಹೇಗೇ ಇದ್ದರೂ, ತನ್ನನ್ನು ಹೇಗೇ ನೋಡಿಕೊಂಡರೂ, ಏನು ಮಾಡಿದರೂ ಹೆಣ್ಣೆಂಬುವವಳು ಅದರ ಕುರಿತು ತುಟಿ ಎರಡು ಮಾಡಬಾರದು ಎಂದು ಹೇಳುವ ಈ ಕಾಲದ ಅನೇಕರಿಗಿರುವಂತೆ ಮನುವಿಗೆ ಮೈಯೆಲ್ಲಾ ದುರಹಂಕಾರವಿದ್ದಿದ್ದರೆ ಅವನು ಮೇಲೆ ತಿಳಿಸಿದಂತಹ ಕಟ್ಟಳೆಯನ್ನು ಮಾಡುತ್ತಿದ್ದಿಲ್ಲ.

ಸಿನಿಮಾಗಳಲ್ಲಿ ಖಳನಾಯಕರು ನಾಯಕಿಯ ಮೇಲೆ ದೌರ್ಜನ್ಯವೆಸಗುತ್ತಿದ್ದರೆ ನಾಯಕ ಆಕೆಯನ್ನು ಕಾಪಾಡಬಹುದು, ಆದರೆ ಸಾಧಾರಣ ಸ್ತ್ರೀಯರನ್ನು ಯಾರೂ ರಕ್ಷಿಸರು. ಆಕೆ ತನ್ನನ್ನು ತಾನೇ ಕಾಪಾಡಿಕೊಳ್ಳಬೇಕು. ಮನುವು "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎನ್ನುವ ಮಾತುಗಳನ್ನು ಯಾವ ಉದ್ದೇಶದಿಂದಲಾದರೂ ಹೇಳಿರಲಿ, ಅದೇ ಮನುವು ಸ್ತ್ರೀಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು ಎಂದು ಒತ್ತುಕೊಟ್ಟು ಹೇಳಿರುವ ಈ ಶ್ಲೋಕವನ್ನು ನೋಡಿ -
ಅರಕ್ಷಿತಾಃ ಗೃಹೇ ರುದ್ಧಾಃ ಪುರುಷೈರಾಪ್ತಕಾರಿಭಿಃ l
ಆತ್ಮಾನಮಾತ್ಮನಾ ಯಾಸ್ತು ರಕ್ಷೇಯುಸ್ತಾಃ ಸುರಕ್ಷಿತಾಃ ll
(ಮನುಸ್ಮೃತಿ ೯-೧೩)
ಭಾವಾರ್ಥ: ಮನೆಯಲ್ಲಿ ಆಪ್ತರಾದ ಪುರುಷರ ಮಧ್ಯೆ ಇದ್ದರೂ ಸಹ ಸ್ತ್ರೀಯರು ರಕ್ಷಣೆಯಿಲ್ಲದವರೇ. ಯಾರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರೋ ಆ ಸ್ತ್ರೀಯರು ಮಾತ್ರ ಸುರಕ್ಷಿತರು.

ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ತ್ರೀಯರು ಸದಾಕಾಲ ಎಚ್ಚರಿಕೆಯಿಂದಿರಬೇಕು. ಈ ವಿಷಯವಾಗಿಯೇ ಮಹರ್ಷಿ ವಾತ್ಸಾಯನನು, ಉತ್ಸವಗಳಿಗೆ ಹಾಗೂ ಇತರೇ ಸ್ಥಳಗಳಿಗೆ ಹೋಗುವಾಗ ಸ್ನೇಹಿತೆಯರ ಜೊತೆ ಕೂಡಿಕೊಂಡು ಹೋಗುವುದು, ಕಡಿಮೆ ಆಭರಣಗಳನ್ನು ಧರಿಸುವುದು, ರಾಜಮಾರ್ಗದಲ್ಲಿ ಹೋಗುವುದು, ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಹೇಳಿದ್ದಾನೆ. (ಪಾಶ್ಚಾತ್ಯ ದೇಶಗಳಲ್ಲಿನ ಆಧುನಿಕರೂ ಸಹ ಇವೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಹೇಳುತ್ತಿದ್ದಾರೆ!). "ನಾಸ್ತಿ ಜಾಗರತೋ ಭಯಮ್ - ಜಾಗ್ರತೆಯಿಂದಿದ್ದರೆ ಭಯವೆಲ್ಲಿಯದು?" ಎನ್ನುವ ಸುಭಾಷಿತವೂ ಇದೆ.

ಎರಡನೆಯದು ಸಮಯಸ್ಪೂರ್ತಿ, ಯಾವುದಾದರೂ ಪ್ರಮಾದ ಪರಿಸ್ಥಿತಿ ಏರ್ಪಟ್ಟಾಗ, "ಅಯ್ಯೋ ಆಪದವುಂಟಾಗಿದೆ, ದೌರ್ಜನ್ಯಕ್ಕೊಳಗಾಗದೇ ಗತ್ಯಂತರವಿಲ್ಲ" ಎಂದು ಪೇಚಾಡುತ್ತಾ ಕುಳಿತುಕೊಳ್ಳುವ ಬದಲು ಪರಿಸ್ಥಿತಿಯಿಂದ ಪಾರಾಗಲು ಮಾರ್ಗಗಳನ್ನು ಅನ್ವೇಷಿಸಬೇಕು. ಎಲ್ಲಕ್ಕಿಂತ ಮುಖ್ಯವಾದುದು ಆತ್ಮವಿಶ್ವಾಸ. ಇಂದು ಪಾಠಶಾಲೆಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಪುಸ್ತಕ ಜ್ಞಾನವನ್ನು ಬಿಟ್ಟು ವ್ಯವಹಾರ ಜ್ಞಾನವನ್ನು ವೃದ್ಧಿಗೊಳಿಸುವ ವಿದ್ಯಾವಿಧಾನಗಳೇ ಇಲ್ಲವಾಗಿವೆ! ಕುತಂತ್ರಿ ಅತ್ತೆ-ಸೊಸೆಯಂದಿರಿರುವ ಕಥಾ ಹಂದರವನ್ನು ಹೊಂದಿರುವ ಧಾರಾವಾಹಿಗಳು, ಹೀರೋ ಕೇಂದ್ರಿತ ಕಥೆ, ಕಾದಂಬರಿ ಮತ್ತು ಸಿನಿಮಾಗಳು ಮತ್ತವುಗಳಲ್ಲೆಲ್ಲ ಮಹಿಳೆಯರನ್ನು ಅಬಲೆಯರಾಗಿ ಚಿತ್ರೀಕರಿಸುತ್ತಿದ್ದಾರೆ. ಅಬಲೆ ಎಂದರೆ ಕೇವಲ ಶಾರೀರಿಕವಾಗಿ ಬಲಹೀನಳೆನ್ನುವುದೇ ಹೊರತು ಅಸಮರ್ಥಳು ಅಥವಾ ಕೆಲಸಕ್ಕೆ ಬಾರದವಳು ಎಂದರ್ಥವಲ್ಲ.

ಸಖಾಸುಮ್ಮನೇ ಮನುವು "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದು ಯಾವ ಉದ್ದೇಶದಿಂದ ಹೇಳಿದ್ದಾನೆನ್ನುವುದನ್ನು ಅರ್ಥಮಾಡಿಕೊಳ್ಳದೆ ಅವನನ್ನು ಬೈಯ್ಯುತ್ತಾ ಕೂರದೆ ಅದೇ ಮನವು ಸ್ತ್ರೀಯರು ಜಾಗರೂಕರಾಗಿದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು ಹೇಳಿರುವುದನ್ನು ಮರೆಯದೆ ಅದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. "ಆಕೆ ಅಬಲೆ, ಅವನು ಮೃಗ" ಎನ್ನುವ ಕೆಲಸಕ್ಕೆ ಬಾರದ ನಾನ್ನುಡಿಗಳ ಕುರಿತು ಆಲೋಚಿಸುತ್ತಾ ಕುಳಿತರೆ ಮಹಿಳೆಯರಿಗೇ ನಷ್ಟವುಂಟಾಗುತ್ತದೆ.

ಕಡೆಯದಾಗಿ ಒಂದು ಮುಖ್ಯ ವಿಷಯ. "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎನ್ನುವ ಶ್ಲೋಕವು ಮಹಾಭಾರತಲ್ಲಿನ ಶಾಕುಂತಲೋಪಾಖ್ಯಾನದಲ್ಲಿಯೂ ಇದೆ. ತಂದೆಯ ಅಪ್ಪಣೆಯನ್ನು ಪಡೆಯದೆ ಅವನ ದೃಷ್ಟಿಗೆ ತಾರದೆ ರಹಸ್ಯವಾಗಿ ವಿವಾಹ ಮಾಡಿಕೊಂಡ ಶಕುಂತಲೆಯು ಎಷ್ಟು ಕಷ್ಟಪಡಬೇಕಾಗಿ ಬಂತು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಸ್ವತಂತ್ರವಾಗಿ ವಿವಾಹ ಮಾಡಿಕೊಳ್ಳುವ ಸ್ತ್ರೀಯರು ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುವ ಆ ಶ್ಲೋಕವು ಇಂದಿನ ಆಧುನಿಕ ಯುವತಿಯರಿಗೂ ಅನ್ವಯವಾಗುತ್ತದೆ.

(ಆಧಾರ: ಶ್ರೀಮತಿ ಪಾಲಂಕಿ ಸತ್ಯ ಅವರು ತೆಲುಗಿನಲ್ಲಿ ಬರೆದ ’ಆಲೋಚನೆಗಳು ಅವಲೋಕನಗಳು ಪುಸ್ತಕದಲ್ಲಿನ  "ಮಹಿಳಾ ಪ್ರಪಂಚದ ಮನೋಭಿಲಾಷೆ" ಎನ್ನುವ ಅಧ್ಯಾಯದಿಂದ ಆಯ್ದ ಲೇಖನ)

March 11, 2023

ದಶಮಾಂಶ ಪದ್ದತಿ

ದಶಮಾಂಶ ಪದ್ದತಿ ಬಗ್ಗೆ ನಮಗೆ ಎಷ್ಟು ಗೊತ್ತು! ಈ ಶ್ಲೋಕವು ಬ್ರಹ್ಮಾಂಡ ಪುರಾಣದಲ್ಲಿದೆ, ಎಂಬ ಮಾಹಿತಿ ಇದೆ.


 ಏಕಂ ದಶ ಶತಂ ಚೈವ ಸಹಸ್ರಮಯುತಂ ತಥಾ |
 ಲಕ್ಷಂ ನಿಯುತಂ ಚೈವ ಕೋಟಿರರ್ಭುದಮೇವ ಚ ||೧||

 ಅರ್ಥ:
 ಒಂದು, ಹತ್ತು, ನೂರು, ಸಾವಿರ,ಹತ್ತು ಸಾವಿರ,ಲಕ್ಷ, ಹತ್ತು ಲಕ್ಷ ಮತ್ತು ಕೋಟಿ ಹೀಗೆಯೇ ಹತ್ತು ಕೋಟಿ

ವೃಂಧ: ಖರ್ವೋ ನಿಖರ್ವಶ್ಚ ಶಂಖ: ಪದ್ಮಂ ಚ ಸಾಗರ: |
ಅಂತ್ಯಂ ಮಧ್ಯಂ ಪರಾರ್ದ್ಧ್ಯಂ ಚ ದಶವೃದ್ಧ್ಯಾ ಯಥಾ ಕ್ರಮಮ್ ||೨||
ಅರ್ಥ:
ವೃಂದ, ಖರ್ವ,ನಿಖರ್ವ,ಶಂಖ, ಪದ್ಮ, ಸಾಗರ, ಅಂತ್ಯ, ಮಧ್ಯ ಮತ್ತು ಪರಾರ್ಧ್ಯ. ಹೀಗೆ ಯಥಾಕ್ರಮವಾಗಿ ಹತ್ತರಿಂದ ಗುಣಿಸಿ ವೃದ್ಧಿಯನ್ನು ಮಾಡಿಕೊಳ್ಳಬೇಕು.

ಅಂದರೆ
ಒಂದು= 1
ಹತ್ತು = 10
ನೂರು = 100
ಸಾವಿರ = 1000
ಹತ್ತು ಸಾವಿರ = 10,000
ಲಕ್ಷ = 1,00,000
ಹತ್ತು ಲಕ್ಷ = 10,00,000
ಕೋಟಿ = 1,00,00,000
ಹತ್ತು ಕೋಟಿ = 10,00,00,000
ವೃಂದ = ನೂರು ಕೋಟಿ = 100,00,00,000
ಖರ್ವ = ಸಾವಿರ ಕೋಟಿ = 1,000,00,00,000
ನಿಖರ್ವ = ಹತ್ತು ಸಾವಿರ ಕೋಟಿ = 10,000,00,00,000
ಶಂಖ = ಲಕ್ಷ ಕೋಟಿ = 1,00,000,00,00,000
ಪದ್ಮ = ಹತ್ತು ಲಕ್ಷ ಕೋಟಿ = 10,00,000,00,00,000
ಸಾಗರ = ಕೋಟಿ ಕೋಟಿ = 1,00,00,000,00,00,000
ಅಂತ್ಯ = ಹತ್ತು ಕೋಟಿ ಕೋಟಿ = 10,00,00,000,00,00,000
ಮಧ್ಯ = ನೂರು ಕೋಟಿ ಕೋಟಿ = 100,0000,000,00,00,000
ಪರಾರ್ಧ್ಯ = ಸಾವಿರ ಕೋಟಿ ಕೋಟಿ = 1,000,00,00,000,00,00,000

1 ರ ಪಕ್ಕ 17 ಸೊನ್ನೆಗಳಿಗೆ ನಿಂತಿದೆ. ಇನ್ನೂ ಮುಂದೂ ಇದೆಯೆಂದು ತಿಳಿದಿದೆ.ವಿವರ ನನಗೆ ಲಭ್ಯವಿಲ್ಲ

January 15, 2023

ಗೋ ಸಾವಿತ್ರಿ ಸ್ತೋತ್ರ

नारायणं नमस्कृत्य देवीं त्रिभुवनेश्वरीम्।
गोसावित्रीं प्रवक्ष्यामि व्यासेनोक्तं सनातनीम्॥ १॥

यस्य श्रवणमात्रेण सर्वपापैः प्रमुच्यते।
गवां निःश्वसितं वेदाः सषडंगपदक्रमाः॥ २॥

शीक्षा व्याकरणं छंदो निरुक्तं ज्योतिषं तथा।
एतासामग्रशृंगेषु इंद्रविष्णू स्वयंस्थितौ॥ ३॥

शिरो ब्रह्मा गुरुः स्कंधे ललाटे वृषभध्वजः।
कर्णयोरश्विनौ देवौ चक्षुषोः शशिभास्करौ॥ ४॥

दंष्ट्रेषु मरुतो देवा जिह्वायां च सरस्वती।
कंठे च वरुणो देवो हृदये हव्यवाहनः॥ ५॥

उदरे पृथिवी देवी सशैलवनकानना।
ककुदि द्यौः सनक्षत्रा पृष्ठे वैवस्वतो यमः॥ ६॥

ऊर्वोस्तु वसवो देवा वायुर्जङ्गे समाश्रितः।
आदित्यस्त्वाश्रितो वाले साध्याः सर्वाङ्गसंधिषु॥ ७॥

अपाने सर्वतीर्थानि गोमूत्रे जाह्नवी स्वयम्।
धृतिः पुष्टिर्महालक्ष्मीर्गोमये संस्थिताः सदा॥ ८॥

नासिकायां च श्रीदेवी ज्येष्ठा वसति भामिनी।
चत्वारः सागराः पूर्णा गवां ह्येव पयोधरे॥ ९॥

खुरमध्येषु गंधर्वाः खुराग्रे पन्नगाः श्रिताः।
खुराणां पश्चिमे भागे ह्यप्सराणां गणाः स्मृताः॥१०॥

श्रोणीतस्तेषु पितरो रोमलांगूलमाश्रिताः।
ऋषयो रोमकूपेषु चर्मण्येव प्रजापतिः॥ ११॥

हुंकारे चतुरो वेदा हुंशब्दे च प्रजापतिः।
एवं विष्णुमयं गात्रं तासां गोप्ता स केशवः॥ १२॥

गवां दृष्ट्वा नमस्कृत्य कृत्वा चैव प्रदक्षिणम्।
प्रदक्षिणीकृता तेन सप्तद्वीपा वसुंधरा॥ १३॥

कामदोग्ध्री स्वयं कामदोग्धा सन्निहिता मता।
गोग्रासस्य विशेषोऽस्ति हस्तसंपूर्णमात्रतः॥ १४॥

शतब्राह्मणभुक्तेन सममाहुर्युधिष्ठिर।
य इदं पठते नित्यं शृणुयाद्वा समाहितः॥ १५॥

ब्राह्मणो लभते विद्यां क्षत्रियो राज्यमश्नुते।
वैश्यो धनसमृद्धः स्याच्चूद्रः पापात् प्रमुच्यते॥ १६॥

गर्भीणी जनयेत् पुत्रं कन्या भर्तारमाप्नुयात्।
सायं प्रातस्तु पठतां शांतिस्वस्त्ययनं महत्॥ १७॥

अहोरात्रकृतैः पापैस्तत्क्षणात् परिमुच्यते।
फलं तु गोसहस्रस्येत्युक्तं हि ब्रह्मणा पुरा॥ १८॥

गावो मे ह्यग्रतः संतु गावो मे संतु पृष्ठतः।
गावो मे हृदये संतु गवां मध्ये वसाम्यहम्॥ १९॥

सुरभिर्वैष्णवी माता नित्यं विष्णुपदे स्थिता।
गोग्रासं तु मया दत्तं सुरभिः प्रतिगृह्यताम्॥ २०॥

गावो मे मातरः सर्वाः सर्वे मे पितरो वृषाः।
ग्रासमुष्टिं मया दत्तं सुरभिः प्रतिगृह्यताम्॥ २१॥

फलानां गोसहस्रस्य प्रदद्याद्ब्राह्मणोत्तमे।
सर्वतीर्थाधिकं पुण्यमित्युक्तं ब्रह्मणा पुरा॥ २२॥

॥ इति श्रीमन्महाभारते भीष्मयुधिष्ठिरसंवादे
गोसावित्रीस्तोत्रम्॥

January 12, 2023

ಪುರುಷ ಸೂಕ್ತ

ಪುರುಷ ಸೂಕ್ತ ದ ಬಗ್ಗೆ ಕೇಳಿದ್ದೀರಾ? ಆಲಿಸಿದ್ದೀರಾ...?
ನಿಮ್ಮ ಉತ್ತರ "ಹೌದು" ಎಂದಾದರೆ ನಿಮಗೆ ನನ್ನ ಪ್ರಥಮ ನಮಸ್ಕಾರ. ಮುಂದಿನ ಪ್ರಶ್ನೆ, ಪುರುಷ ಸೂಕ್ತದ ಬಗ್ಗೆ ನಿಮಗೆ ತಿಳಿದಿದೆಯೇ?
ಇಲ್ಲ ಅಂದರೂ ತಪ್ಪಾಗಲಾರದು. "ಹೌದು" ಎಂದರೆ ಮಾತ್ರ "ನಿಮಗೆ ತಿಳಿದಿದ್ದೇನು?" ಎಂಬ ಕುತೂಹಲ ನನಗೂ ಇದೆ. ಪುರುಷ ಸೂಕ್ತ ಆಲಿಸಲು, ಎಷ್ಟು ಹಿತ ಅಲ್ಲವೇ? ಅದರಲ್ಲಿನ ಶ್ಲೋಕಗಳ ಉಚ್ಚಾರಣೆಯೇ ಹಾಗೆ. ಯಾವುದೋ ಲೋಕದಿಂದ ಬಂದಂತಹ ದನಿ ಇದ್ದಂತೆ ಅನ್ನಿಸುತ್ತದೆ. ಸರಿ..ಈಗ ಕಿವಿ ನಿಮಿರಿಸಿ, ಕಣ್ಣು ಅಗಲಿಸಿ ಮುಂದೆ ಹೇಳುವುದನ್ನು ಗಮನಿಸಿ.
ಸನಾತನ ಲೋಕದ ನಮ್ಮ *ಪುರುಷ ಸೂಕ್ತ* ವಿಜ್ಞಾನದೊಂದಿಗೆ ನೇರ ಸಂಪರ್ಕ ಹೊಂದಿದೆ... ಬೆರಗಾಗದಿರಿ.

ಆವತ್ತು ಅಂದರೆ ಸುಮಾರು ಇಪ್ಪತ್ತು ವರುಷದ ಹಿಂದೆ, ಒಬ್ಬ ಸಾಮಾನ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಸಮುದ್ರದ ತೀರದಲ್ಲಿ ಮಲಗಿಕೊಂಡು ಆಕಾಶವನ್ನು ನೋಡುತ್ತಾ ನಕ್ಷತ್ರಗಳನ್ನು ಎಣಿಸುತ್ತಿದ್ದರು. ಅವರಿಗೆ ಆಗ ಇದ್ದ ಯೋಚನೆ ಒಂದೇ.
ವೇದ, ಉಪನಿಷತ್ತಿನಲ್ಲಿ ಹೇಳುವುದೆಲ್ಲ ನಿಜವೇ.?

ನೋಡಿ, ಈ ಜಗತ್ತಿನಲ್ಲಿ ಮಕ್ಕಳು ಕೆಲವು ಬಾರಿ ಕೇಳುವ ಪ್ರಶ್ನೆಗೆ ಉತ್ತರ ಕೊಟ್ಟರೆ ಏನಾಗುತ್ತದೆ, ಕೊಡದಿದ್ದರೆ ಏನಾಗುತ್ತದೆ ಎಂದು ಯೋಚಿಸಿದ್ದೀರಾ?. ಹೋಗಲಿ ಬಿಡಿ. ಮುಂದಿನದನ್ನು ನೋಡೋಣ.

ಅದೇ ರೀತಿ ಆ ಸಮಯಕ್ಕೆ
ಆ ಇಂಜಿನಿಯರ್ಗೆ ಕಾಡುತ್ತಿದ್ದ ವಿಚಾರ..."ನಾವು ತಿಳಿದಿರುವಂತಹ ವೇದ ಮತ್ತಿತರ ಸಂಪ್ರದಾಯಗಳು ನಿಜವೇ ಅಥವಾ ಸುಳ್ಳೇ?
ಇದು ಅತಿ ದೊಡ್ಡ ಜಿಜ್ಞಾಸೆ. ಯಾರೂ ಉತ್ತರ ಕೊಡಲು ಸಿದ್ದರಿಲ್ಲ. ಹಾರಿಕೆಯ ಉತ್ತರ ಯಾರೂ ಕೂಡ ಕೊಟ್ಟಾರು...!
ಮೈಯೆಲ್ಲ ಝುಮ್ ಅನ್ನಿಸುತ್ತೆ. ಮುಂದೆ ಅವರ ಮನಸ್ಸನ್ನು ಕೊರೆಯುತ್ತಿದ್ದಿದ್ದು ಒಂದೇ. ಅದು ಏನೆಂದರೆ ನಾವು ಪುರುಷಸೂಕ್ತ ಪಠಿಸುವಾಗ ಬರುವ ಎರಡು ಶ್ಲೋಕಗಳು ಮತ್ತು ಅವುಗಳ ಮರ್ಮವೇನು?. ಅವರೆಡರಲ್ಲಿ ಒಂದು..
"ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | ಬಾಹೂ ರಾ'ಜನ್ಯಃ' ಕೃತಃ |
ಊರೂ ತದ'ಸ್ಯ ಯದ್ವೈಶ್ಯಃ' | ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||"

ಅದರ ಸರಳ ಅರ್ಥ ಯಾವುದೇ ನಿಘಂಟು ತಗೊಂಡು ನೋಡಿದರೆ, ನಾರಾಯಣನ ಮುಖದಿಂದ ಬ್ರಾಹ್ಮಣ ಬಂದ ಅಂತ ಪ್ರಾರಂಭವಾಗುತ್ತದೆ.
ಇವರಿಗೆ ಆಶ್ಚರ್ಯ ಆಗೋಯ್ತು.
ನಾರಾಯಣನ ಮುಖದಿಂದ ಬ್ರಾಹ್ಮಣನೇ?. ನಮಗೆ ಗೊತ್ತಿರುವ ಪ್ರಕಾರ ಮುಖದಿಂದ ಮನುಷ್ಯ
ಬರಲು ಸಾಧ್ಯವೇ?. ಸಾಧ್ಯವೇ ಇಲ್ಲ
ಇದರಲ್ಲಿ ಏನೋ ಮರ್ಮ ಆಡಗಿರ ಬೇಕು ಎಂದು ಅವರ ಒಳ ಮನಸ್ಸು ಹೇಳುತ್ತಿತ್ತು. ಹಾಗಾಗಿ ಅವರು ಈ ಅನರ್ಥವನ್ನು ಒಪ್ಪಿ ಕೊಳ್ಳಲಿಲ್ಲ. ಹಾಗೆಂದು ಸುಮ್ಮನೆ ಕೂರುವ ಜಾಯಮಾನ ಅವರದಲ್ಲ. ಬೇಕಾದಷ್ಟು ಜನ ಸಂಸ್ಕೃತ ಪಂಡಿತರನ್ನು ಭೇಟಿಯಾದರು. ಆದರೆ ಸಮಾಧಾನಕರ ಉತ್ತರ ಸಿಗಲಿಲ್ಲ. ಆಗ ಇನ್ನೊಂದು ಶ್ಲೋಕದ ಬಗ್ಗೆ ಕೂಡಾ ಯೋಚನೆ ಶುರು ಮಾಡಿದರು. ಏನದು? ಏನದರ ಅರ್ಥ?. "ದೇವತೆಗಳು ನಾರಾಯಣನ ಪ್ರೀತಿಗೋಸ್ಕರ ಒಂದು ಹೋಮ ಮಾಡಿದರು. ಆಗ ಆ ನಾರಾಯಣನನ್ನು ಒಂದು ಪಶುವಂತೆ ಒಂದು ಕಂಬಕ್ಕೆ ಕಟ್ಟಿ ತುಂಡು ತುಂಡು ಮಾಡಿ ಯಜ್ಞಕ್ಕೆ ಸಮರ್ಪಿಸುವುದು" ಅಂತ. ಇವರ ಯೋಚನೆಗೆ ಅನ್ನಿಸಿದ್ದು.. "ಹಾಗೆ ಮಾಡಿದರೆ ಅದು ಪ್ರೀತಿ ಆಗಲು ಸಾಧ್ಯವೇ ಇಲ್ಲ. ಇದರಲ್ಲಿ ಕೂಡಾ ಏನೋ ಮರ್ಮವಿದೆ" ಎಂದು ಭಾವಿಸಿದರು. ಸತತವಾಗಿ ಅವರು ಇದರ ಗೂಢಾರ್ಥದ ಬಗ್ಗೆಯೇ ಯೋಚಿಸುತ್ತಾ, ತಲೆ ಕೆಡಿಸಿಕೊಂಡು ಹಿಮಾಲಯಕ್ಕೂ ಹೋದರು. ಅಲ್ಲಿ ಹಲವಾರು ಋಷಿ ಮುನಿಗಳು ಸಿಕ್ಕಿದರು. ಆದರೆ ಅಲ್ಲಿ ಕೂಡ ಅವರಿಗೆ ಸರಿಯಾದ ಉತ್ತರ ಯಾರಿಂದಲೂ
ಲಭಿಸಲಿಲ್ಲ. ಆದರೂ ಅವರು ಧೃತಿ ಗೆಡಲಿಲ್ಲ. ಮುಂದೆ ಅಲ್ಲಿಂದ ಅವರು ಉತ್ತರ ಅರಸುತ್ತಾ ಕಾಶಿಗೆ ಬಂದರು. ಅಲ್ಲಿ ಒಬ್ಬ ಗುರುವನ್ನು ಭೇಟಿಯಾದರು. ಗುರುಗಳು ಇವರನ್ನು ಉದ್ದೇಶಿಸಿ ಹೇಳಿದರು "ಮಗೂ.. ನಿನ್ನ ಪ್ರಶ್ನೆ ಸರಿಯಾಗಿದೆ". ಆಮೇಲೆ ಮುಂದುವರೆದು ಹೇಳಿದರು "ನಿನಗೆ ನನ್ನ ಆಶೀರ್ವಾದ ಇದೆ. ನೀನು ನಿನ್ನ ಜಿಜ್ಞಾಸೆಯ ಮೇಲೆ ಹೆಚ್ಚಿನ ಕೆಲಸ ಮಾಡು" ಎಂದು ಅವರ ತಲೆಯ ಮೇಲೆ ಕೈ ಇಟ್ಟರು. ಅಷ್ಟೇ...ಪ್ರಪಂಚಕ್ಕೆ ಹೊಸ ಆವಿಷ್ಕಾರದ ಬಗ್ಗೆ ಯೋಚನೆಗಳು ಪುಂಖಾನು ಪುಂಖವಾಗಿ ಅನಾವರಣ ಗೊಂಡವು. ಅಂದ ಹಾಗೆ ಈ ಇಂಜಿನಿಯರ್ ಯಾರು ತಿಳಿಯಿತೇ..
ಪ್ರೊ. ಸತೀಶ್ಚಂದ್ರ  ಅಂತ ಅವರ ಹೆಸರು.

ಪುರುಷಸೂಕ್ತದಲ್ಲಿ ಒಟ್ಟು ಇಪ್ಪತ್ತನಾಲ್ಕು ಶ್ಲೋಕಗಳು ಕಾಣಿಸುತ್ತದೆ. ಮೊದಲನೆಯ 16 ಲೋಕಗಳಿಗೆ ಪೂರ್ವ ನಾರಾಯಣ ಅಂತಲೂ ಮುಂದಿನ ಎಂಟು ಶ್ಲೋಕಗಳು ಉತ್ತರ ನಾರಾಯಣ ಎಂದು ಗುರುತಿಸಲ್ಪಡುತ್ತವೆ. ಪೂರ್ವ ನಾರಾಯಣದ 16 ಶ್ಲೋಕಗಳಿಗೆ ವಿವರಣೆ ಕೊಟ್ಟು ಪ್ರೊ.ಸತೀಶ್ಚಂದ್ರ ಅವರು
ಭಾಷಾಂತರಿಸಿ ಇಟ್ಟಿದ್ದಾರೆ. ಇದು ಏನೆಂದರೆ *Coded word for Generation of Electricity from Purusha Sukta*.
ಇದು encrypted technology. ಹತ್ತು ಸಾವಿರ ವರುಷಗಳ ಹಿಂದೆ ಮಹಾಮುನಿಗಳು code ಮಾಡಿ encrypt ಮಾಡಿರುವಂತಹ ಮಹಾ ಶ್ಲೋಕಗಳು. ಆ technology ಯನ್ನು decode ಮಾಡ ಬೇಕಿದ್ದರೆ ಪಂಚೇಂದ್ರಿಯಗಳನ್ನು ಗಟ್ಟಿಯಾಗಿ ಹಿಡಿದು ಕೊಳ್ಳ ಬೇಕಾಗುತ್ತದೆ. ಅದಕ್ಕೆ ಪೂರ್ವ ತಯಾರಿಯಾಗಿ "ಧ್ಯಾನ" ಮಾಡಬೇಕು. "ಛಲ ಬಿಡದ ತ್ರಿವಿಕ್ರಮರಾದ ಪ್ರೊ. ಸತೀಶ್ಚಂದ್ರ" ರಿಗೆ ಆ ಕಾರ್ಯ ಸಿದ್ಧಿ ಆಯಿತು. ಆ ಸಿಧ್ಧಿಯ ಫಲವೇ ಅವರು ಕಂಡು ಹಿಡಿದ 2 ಯಂತ್ರಗಳು. ಕಂಡುಹಿಡಿದ ಆ ಎರಡು ಯಂತ್ರಗಳಿಗೆ ಮೂಲಾಧಾರ *ಪುರುಷಸೂಕ್ತ*. ಅದು ವಿದ್ಯುತ್ ಎಂದರೆ ಕೇಳರಿಯದ ಕಾಲದಲ್ಲಿ ಬರೆದಿಟ್ಟ ಶ್ಲೋಕ ರೂಪದ ಟೆಕ್ನಾಲಜಿ.
ಯಾವ ಇಂಧನವೂ ಇಲ್ಲದೆ ವಿದ್ಯುತ್ ಶಕ್ತಿ ತಯಾರಿಸಲು ಸಾಧ್ಯವೇ ಅಂತ ಎಲ್ಲರೂ ಪ್ರಶ್ನಿಸಿದರು. ಇನ್ನು ಕೆಲವರು ಇವರನ್ನು ಹುಚ್ಚ ಅಂತಾನೂ ಹೇಳಿದರು. ಆಗ ಅವರ ತಾಯಿ ಹೇಳಿದರು.. "ನೀನು ಯೋಚನೆ ಮಾಡುವ ದಾರಿ ಸರಿಯಾದ ಪಥದಲ್ಲಿದೆ". ಅದಕ್ಕೇ, ನಾವು ಯಾವಾಗಲೂ ಹೇಳುತ್ತೇವೆ "ತಾಯಿ ಸರಿಯಾದ ದಾರಿಯೇ ತೋರಿಸುತ್ತಾಳೆ" ಎಂದು. ಮುಂದೆ ಅವರು ಒಂದು ಯಂತ್ರವನ್ನು ಕಂಡು ಹಿಡಿದರು. ಆಶ್ಚರ್ಯ ಕಣ್ರೀ...
ಯಂತ್ರದ ಪ್ರತಿಯೊಂದು nut, bolt ಅಥವಾ ಯಾವುದೇ part, ಪುರುಷಸೂಕ್ತದಲ್ಲಿ ಉಲ್ಲೇಖಿಸಿದಂತೆಯೇ, ಅವರು ಆರ್ಥೈಸಿ ಕೊಂಡಂತೆಯೇ ಮಾಡಿದರು. ಇನ್ನೂ ಆಶ್ಚರ್ಯ...!
ಪುರುಷ ಸೂಕ್ತದಲ್ಲಿ ಉಲ್ಲೇಖಿಸಿದಂತೆಯೇ ಯಂತ್ರದ ಒಂದೊಂದು ಭಾಗದ size, spacing ನ ವಿವರಗಳು ಕೂಡಾ ಡಿಕೋಡಿಂಗ್ ಮಾಡಿಯೇ ತಯಾರಿಸಿದ್ದು. ಈ ಯಂತ್ರವನ್ನು ಕರ್ನಾಟಕ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಬಹುಮಾನವಾಗಿ ಕೊಟ್ಟರು. ಆದರೆ ಕೇಂದ್ರ ಸರಕಾರ ಇದನ್ನು ಒಪ್ಪಲಿಲ್ಲ.
ವಿಶೇಷ ಏನೆಂದರೆ ಅದೇ ಸಮಯಕ್ಕೆ ನಾಸಾದಿಂದ ಬಂದ 21 ಎಂಜಿನಿಯರ್ಗಳು ಈ ಯಂತ್ರವನ್ನು ನೋಡಿ ಅವಾಕ್ಕಾದರು. 21 ಜನ ಎಂಜಿನಿಯರ್ಸ್ ಇವರ ಮುಂದೆ ಆಸಕ್ತಿಯಿಂದ ಬಂದು ಕುಳಿತುಕೊಂಡರು. ಒಂದೊಂದು ಚಿಕ್ಕ ಚಿಕ್ಕ ಮಾತನ್ನು ಕೂಡ ಆಲಿಸಿದರು...ಒಂದಲ್ಲ, ಎರಡಲ್ಲ ಬರೋಬ್ಬರಿ ಇಪ್ಪತ್ತು ದಿನ ಗಮನವಿಟ್ಟು ಆಲಿಸಿದರು. ಪ್ರಶ್ನೆ ಸುರಿದು ಉತ್ತರ ಪಡೆದು ಕೊಂಡರು. ಆಶ್ಚರ್ಯವಲ್ಲವೇ? ಈವತ್ತು ಇದು *ಜಾಯಿಂಟ್ ಟೆಕ್ನಾಲಜಿ ಹಾಗೆಯೇ ಪೇಟೆಂಟ್* ರೂಪದಲ್ಲಿ ಹೊರಗೆ ಬಂದಿದೆ. ಅದಕ್ಕೆ Power Generation from Purusha Sukta ಎಂಬ ಹೆಸರು ಕೂಡ ಬಂತು. ಇದರ ಬಗ್ಗೆ ಕುತೂಹಲಗೊಂಡು ಈ ಟೆಕ್ನಾಲಜಿ ಬಗ್ಗೆ ಪೂರ್ತಿ ತಿಳಿಯಲು ಒಬ್ಬ ಸೈಂಟಿಸ್ಟ್ ಮುಂದೆ ಬಂದರು. ಅವರು ಮೇಡಂ ಕ್ಯೂರಿ ಅವರ ಮೊಮ್ಮಗಳು ಸೋಫಿ ಹಾರ್ಬರ್ರ್. ಈ ಟೆಕ್ನಾಲಜಿ ಪರಿವೀಕ್ಷಣೆ ಮಾಡಿದಾಗ ಆಕೆಗೆ ತುಂಬಾ ಆಶ್ಚರ್ಯ ಕಾದಿತ್ತು. ಆಕೆ ಹುಟ್ಟಾ ಕ್ರಿಶ್ಚಿಯನ್. ಆದರೆ ನಮ್ಮ ಪುರುಷ ಸೂಕ್ತವನ್ನು ಅದ್ಭುತವಾಗಿ ಗಟ ಗಟ ಅಂತ ನೀರು ಕುಡಿದಂತೆ ಮನದಟ್ಟು ಮಾಡಿಕೊಂಡಿದ್ದರು. ಅವರು ಅದರ ಬಗ್ಗೆ 24 ಗಂಟೆ ಬೇಕಾದರೂ ಉಪನ್ಯಾಸ ಕೊಡುವಷ್ಟು ಜ್ಞಾನ ಅರ್ಜಿಸಿದ್ದರು. ಅದು ನಮ್ಮ ಧರ್ಮದ ವೈಶಿಷ್ಟತೆ. ಅದು ನಮ್ಮ ಧರ್ಮದ ಬಗ್ಗೆ ಇರತಕ್ಕಂತ ಅನನ್ಯ ಪ್ರೀತಿ.

ಇದನ್ನು ಶ್ರೀ ನರೇಂದ್ರ ಮೋದಿಯವರಿಗೆ ಅದೊಮ್ಮೆ ವಿವರಿಸಿದಾಗ ಅವರು ಭಕ್ತಿಯಿಂದ ದೊಡ್ಡ ನಮಸ್ಕಾರ ಹಾಕಿದರು. ಅಲ್ಲದೆ ಕೂಡಲೇ ಗುಜರಾತಿನಲ್ಲಿ ಇಂತಹ ಒಂದು ಪವರ್ ಜನರೇಶನ್ ಪ್ಲಾಂಟ್ ಮಾಡಬೇಕು ಎಂದು ಸೂಚಿಸಿ, ನಿಮಗೆ ದುಡ್ಡು ಅಥವಾ ಇನ್ನೇನು ಬೇಕು ಅಂತ ಕೇಳಿದರು. ಆದರೆ ಆ ಮಹಾನ್ ಎಂಜಿನಿಯರ್ ಸತೀಶ್ಚಂದ್ರರವರು ನಮಗೆ ಬರೀ ಒಪ್ಪಿಗೆ ಕೊಟ್ಟರೆ ಸಾಕು ಎಂದರಷ್ಟೇ. ಮೋದಿಯವರು ತಕ್ಷಣ ಸಹಿ ಹಾಕಿ ಒಪ್ಪಿಗೆ ಪತ್ರ ಕೊಟ್ಟರು. ಈಗ ಗುಜರಾತಿನಲ್ಲಿ ಪುರುಷ ಸೂಕ್ತದ ಪ್ರಕಾರ decoded version ಆದ ಪವರ್ ಜನರೇಶನ್ ಘಟಕ ಪ್ರಾರಂಭವಾಗಿದೆ. ಸತೀಶ್ಚಂದ್ರರವರು ಹೇಳಿ ಕೊಳ್ಳುತ್ತಾರೆ, ನಮ್ಮ ಬಳಿ ನಿಜವಾಗಿಯೂ ದುಡ್ಡಿರಲಿಲ್ಲ.

ನೋಡಿ...ಈ ಟೆಕ್ನಾಲಜಿ ಆವಿಷ್ಕಾರ ಮಾಡಿದ್ದು ಬ್ರಾಹ್ಮಣ, ಇದನ್ನು ಪೂರ್ತಿಯಾಗಿ ಅನುಭವಿಸಿ ಮೆಚ್ಚಿದ್ದು ಒಬ್ಬ ಕ್ರಿಶ್ಚಿಯನ್, ಆದರೆ ಇದಕ್ಕೆ ಬಂಡವಾಳ ಸುರಿಯುತ್ತಿರುವವ ಮಲೇಷ್ಯಾದ ರಾಜ. ಅದೂ ಎಷ್ಟು ಗೊತ್ತೇ..ಬರೋಬ್ಬರಿ ಒಂದು ಬಿಲಿಯನ್ ಡಾಲರ್, ಬಡ್ಡಿರಹಿತ ಹಣ. ಇದನ್ನು ನೋಡಿ ಅಮೆರಿಕದ ವಿಜ್ಞಾನಿಗಳಿಗೆ ಹುಚ್ಚು ಹಿಡಿದು ಬಿಡ್ತು. ಈ ಟೆಕ್ನಾಲಜಿಯಲ್ಲಿ ಹೆಚ್ಚಿನ ಸಂಶೋಧನೆ ಮಾಡಿ
ಅವರು ಬಂದು ಹೇಳುತ್ತಾರೆ.. "ಇದನ್ನು ಪೂರ್ತಿಯಾಗಿ ನಾವು ಅನಲೈಸ್ ಮಾಡಿದ್ದೇವೆ. ಅದರಂತೆ ಇದರಲ್ಲಿ ಲೋವೆಸ್ಟ್ ವೋಲ್ಟೇಜ್ ಎಷ್ಟು, ಹಾಗೆಯೇ ಹೈಯೆಸ್ಟ್ ವೋಲ್ಟೇಜ್ ಎಷ್ಟು ಅಂತ ನಾವು ಸಂಶೋಧನೆ ಮಾಡಿದ್ದೇವೆ" ಎನ್ನುತ್ತಾರೆ. ಈಗ ಪ್ರೊಫೆಸರ್ ಸತೀಶ್ಚಂದ್ ಗೊಳ್ ಅಂತ ನಕ್ಕುಬಿಟ್ಟರು. ರೀ.. ಗಂಟೆಗಟ್ಟಲೆ ಸೂಪರ್ ಕಂಪ್ಯೂಟರ್ ಇಟ್ಟುಕೊಂಡು ಲೆಕ್ಕ ಮಾಡಬೇಕಾಗಿಲ್ಲ ಇದೆಲ್ಲ. ಎಲ್ಲವೂ ಇಲ್ಲಿ "ನಮ್ಮ ಪುರುಷಸೂಕ್ತದಲ್ಲಿ" ಸಿಧ್ಧವಾಗಿಯೇ ಇದೆ. ಮುಂದೆ.. ಎಷ್ಟನೇ ಶ್ಲೋಕದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ ಎಂದು ಕರಾರುವಕ್ಕಾಗಿ ಹೇಳುತ್ತಾರೆ. ಅದರಂತೆ
ಸಪ್ತಾಸ್ಯಾ'ಸನ್-ಪರಿಧಯಃ' | ತ್ರಿಃ ಸಪ್ತ ಸಮಿಧಃ' ಕೃತಾಃ |

ಅದರ ಅರ್ಥ ಏನು ಅಂದರೆ
7x7x7 (seven cube) ಅಂದರೆ ಎಷ್ಟು 343 ಅಲ್ವೇ?. ಅದೇ ಲೋವೆಸ್ಟ್ ವೋಲ್ಟೇಜ್. ನೋಡಿ, ನಮ್ಮ ಹಿಂದಿನ ಕಾಲದವರು ಎಲ್ಲ ಬರೆದಿಟ್ಟಿದ್ದಾರೆ. ಅದೇ ರೀತಿ ಹೈಯೆಸ್ಟ್ ವೋಲ್ಟೇಜ್ 3x7 into the power of 21 ಬರ್ಕೊಳ್ಳಿ 1400 ಅಂದ್ರು. ಲೆಕ್ಕ ಹಾಕಿಕೊಳ್ಳಿ ಏನು calculation.? ಏನು precision?. ಮತ್ತೆ ಅಂದ್ರು ಈ ಶ್ಲೋಕದಲ್ಲಿ ವಿದ್ಯುತ್ ಶಕ್ತಿ ತಯಾರಿಕೆ ಸಮಯದಲ್ಲಿ ಇರಬೇಕಾದ step up ಮತ್ತು step down ಅಂತ ಏನು ಹೇಳ್ತಾರೆ ಅದು ಕೂಡ ಸೇರಿದೆ ಅಂತಾರೆ. ಎಲ್ಲರಿಗೂ ಹುಚ್ಚು ಹಿಡಿದು ಬಿಡ್ತು. ಪ್ರೊ.ಸತೀಶ್ಚಂದ್ರರವರು ಏನು ಹೇಳುತ್ತಿದ್ದಾರೆ ಅಂತ ಎಲ್ಲರೂ ಹುಬ್ಬು ಎಗರಿಸಿ ಕೇಳಿಸಿ ಕೊಳ್ಳುತ್ತಿದ್ದರು..

ಈಗ, ಪುನಃ ಸ್ವಲ್ಪ ಹಿಂದೆ ಹೋಗೋಣ..
ಆವಾಗಲೇ ಪುರುಷ ಸೂಕ್ತದ ಈ ಕೆಳಗಿನ ಶ್ಲೋಕದ ಬಗ್ಗೆ ಜಿಜ್ಞಾಸೆ ನಡೆದಿತ್ತು.
"ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್ | ಬಾಹೂ ರಾ'ಜನ್ಯಃ' ಕೃತಃ |
ಊರೂ ತದ'ಸ್ಯ ಯದ್ವೈಶ್ಯಃ' | ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||
ಇಲ್ಲೇ ಕಸಿವಿಸಿ ಆಗುವುದು. ಯಾಕೆಂದರೆ ಇದು ಉತ್ತರ. ಇದರ ಪ್ರಶ್ನೆ ಬೇಕಾದರೆ ಈ ಶ್ಲೋಕದ ಹಿಂದಿನ ಶ್ಲೋಕ ಗಮನಿಸಬೇಕು. ಯಾಕೆಂದರೆ ಈಗ ನೋಡಿದ್ದು ಅಪೂರ್ಣ ಮತ್ತು ಈಗಾಗಲೇ ಹೇಳಿದಂತೆ ಅದು ಉತ್ತರ ಮಾತ್ರ. ಹಾಗಾದರೆ ಪ್ರಶ್ನೆ ಯಾವುದು? ಹಿಂದಿನ ಶ್ಲೋಕ ಗಮನಿಸೋಣ.

ಮುಖಂ ಕಿಮ'ಸ್ಯ ಕೌ ಬಾಹೂ | ಕಾವೂರೂ ಪಾದಾ'ವುಚ್ಯೇತೇ ||

ಅದರ ಅರ್ಥ..
ಮುಖಂ ಕಿಮ'ಸ್ಯ ಅಂದರೆ ಇಲ್ಲಿ ಮುಖ್ಯ ಹುದ್ದೆ ಯಾರೂ ನಿಭಾಯಿಸ ಬೇಕು ಅಂತ. ಅದರ ಉತ್ತರ.. *ಬ್ರಾಹ್ಮಣೋ''ಽಸ್ಯ ಮುಖ'ಮಾಸೀತ್*
ಅಂದರೆ ಬ್ರಾಹ್ಮಣ ಇದರ ಮುಖ್ಯ ಹೊಣೆ ಹೊರಬೇಕು. ಆದರೆ ಜಾತಿಯಲ್ಲಿ ಬ್ರಾಹ್ಮಣ ಆಗಬೇಕಿಲ್ಲ. ಪಂಡಿತ, ಜ್ಞಾನಿ ಬುದ್ಧಿವಂತ ಆಗಿರಬೇಕು ಎಂದು ಅರ್ಥ.
ಹಾಗೆಯೇ *ಕೌ ಬಾಹೂ*..
ಬಾಹು ಅಂದರೆ ಶಕ್ತಿವಂತ ಇನ್ನೊಂದರ್ಥ ಕ್ಷತ್ರಿಯ ಅಂತ. ಹಾಗಾದರೆ ವ್ಯವಸ್ಥಾಪಕನಾಗಿ ಕ್ಷತ್ರಿಯ, ಸಾಮರ್ಥ್ಯ ಉಳ್ಳವನು, ಸೇನಾಧಿಪತಿಯ ತರಹ ಇರ ಬೇಕಾದವನು ಎಂದು ಅರ್ಥ.
ಮುಂದೆ..
*ಊರೂ ತದ'ಸ್ಯ ಯದ್ವೈಶ್ಯಃ*
ವೈಶ್ಯ ಅಂದರೆ, ವ್ಯವಹಾರ ತಜ್ಞ. ಅಂದರೆ ವ್ಯವಹಾರ ನೋಡಿ ಕೊಳ್ಳಲು ವೈಶ್ಯ ಬೇಕು ಎಂದರ್ಥ.
*'ಪದ್ಭ್ಯಾಗ್^ಮ್ ಶೂದ್ರೋ ಅ'ಜಾಯತಃ ||*
ಶೂದ್ರೋ ಅ'ಜಾಯತಃ..
ಇಲ್ಲಿ ಶೂದ್ರ ಅಂದರೆ ಈಗಿನ ಕಾಲದ ವಿಂಗಡಣೆಯಂತೆ
ಎಸ್ಸಿ ಎಸ್ಟಿಅಲ್ಲ. ಬದಲಿಗೆ ಕೆಳ ಸ್ತರದಲ್ಲಿ ಕೆಲಸ ಮಾಡುವವರು ಅನ್ನುವ ಅರ್ಥ. ಹಾಗಾಗಿ ಕೆಳಸ್ತರದ ಕೆಲಸಕ್ಕೆ (ಕಾರ್ಮಿಕರು), ಯಾರು ಸೂಕ್ತ ಅಂತ ಅನ್ನುವುದನ್ನು ಹೇಳುತ್ತೆ.
ಹೀಗೆ ಪ್ರತಿಯೊಂದು ವಿಷಯವೂ ಕೂಲಂಕಷವಾಗಿ ಪುರುಷ ಸೂಕ್ತದಲ್ಲಿ ನಮೂದಾಗಿದೆ.
*ಉಸ್ಸಪ್ಪಾ* ಅನ್ನಿಸಿತೆ..?
ಪ್ರಾಯೋಗಿಕವಾಗಿ
ಬೆಂಗಳೂರಿನ ಸ್ಯಾಟಲೈಟ್ ಟೌನ್ ನ 50 ಎಕರೆ ಜಾಗದಲ್ಲಿ
ಪರೀಕ್ಷಾ ಪ್ಲಾಂಟ್
ವಿರಾಜಮಾನವಾಗಿದೆ. ಇಲ್ಲಿ 4000 MW ವಿಧ್ಯುತ್ ಶಕ್ತಿ ತಯಾರಿಸುವ ಉದ್ದೇಶ ಹೊಂದಿದೆ. ಇದೇ ರೀತಿ ಗುಜರಾತ್ ನಲ್ಲಿ ಪ್ರಾರಂಭವಾದ ಪ್ಲಾಂಟ್ ನ ಹೆಸರು Agragami Bharatiya Power Pvt.Ltd., (ABPPL). No ಇದನ್ನು ಪೋಲೆಂಡ್, ಜರ್ಮನಿ, ಕೆನಡಾ ಮತ್ತು ಯುಕೆ, ಹೀಗೆ ನಾಲ್ಕು ದೇಶದಲ್ಲಿ ಒಂದೇ ಬಾರಿಗೆ ಆರಂಭಿಸುತ್ತಿದ್ದಾರೆ.
ಶಾಕ್ ಆಯ್ತೇ..?
*ಆಗಬೇಕು ಅಂತಲೇ ಬರೆದಿದ್ದು.*

January 9, 2023

ದೇವರಿಗೆ ಬಾಳೆ ಹಣ್ಣು ಮತ್ತು ತೆಂಗಿನಕಾಯಿ ಯಾಕೆ ಶ್ರೇಷ್ಟ ನೈವೇದ್ಯ. ?

ದೇವಸ್ಥಾನಕ್ಕೆ ಹೋಗವಾಗ ಬಾಳೆಹಣ್ಣು ಮತ್ತೆ ತೆಂಗಿನಕಾಯಿ ಯಾಕೆ ತೆಗೆದುಕೊಂಡು  ಹೋಗುತ್ತೇವೆ ?

ದೇವರಿಗೆ ಇದೇ ಹಣ್ಣು ಮತ್ತು ತೆಂಗಿನಕಾಯಿ ಶ್ರೇಷ್ಠ ಏಕೆ?

ಬೇರೆ ಯಾವ ಹಣ್ಣನ್ನು ಯಾಕೆ ನಾವು ತೆಗೆದುಕೊಂಡು ಹೋಗುವುದಿಲ್ಲ .

ಪೂಜೆಗಳಲ್ಲಿ ಹೂವು ನೈವೇದ್ಯದ ಪದಾರ್ಥಗಳು, ಪತ್ರೆಗಳಲ್ಲಿ ಕೂಡ ಭಿನ್ನತೆಯಿರುವಾಗ ಎಲ್ಲಾ ದೇವರಿಗೂ ಬಾಳೆ ಹಣ್ಣು ನಿವೇದಿಸುತ್ತಾರೆ ಹಾಗೆಯೇ
ತೆಂಗಿನಕಾಯಿ ಒಡೆದು ಮಂಗಳಾರತಿ ಬೆಳಗುತ್ತಾರೆ ಇವೆರಡರ ವೈಶಿಷ್ಟ್ಯ ಏನು?

ಹೆಚ್ಚಾಗಿ ನಾವು ಒಂದು ಹಣ್ಣನ್ನೂ ತಿಂದು ಬೀಜವನ್ನು ಎಸೆದಾಗ ಅಥವಾ ಪಕ್ಷಿ, ಮೃಗಗಳ ಮೂಲಕ ಎಲ್ಲಿಯಾದರೂ ಬಿದ್ದಾಗ ಅವು ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ.

ಆದರೆ ಬಾಳೆಹಣ್ಣನ್ನು ಸುಲಿದು ಸಿಪ್ಪೆಯಾಗಿ ಅಥವಾ ಇಡೀ ಬಾಳೆಹಣ್ಣನ್ನೇ ಹಾಗೇ ಎಸೆದರು ಅದು ಮತ್ತೆ ಬೆಳೆಯುವುದಿಲ್ಲ.
ತೆಂಗಿನಕಾಯಿಯೂ ಅಷ್ಟೆ ಒಮ್ಮೆ ಒಡೆದರೆ ಅದರಿಂದ ಗಿಡ ಹುಟ್ಟುವುದಿಲ್ಲ .

ಹಾಗೆಯೇ ಈ ಜನ್ಮವನ್ನು ಮುಗಿಸಿಬಿಟ್ಟರೆ ಮತ್ತೆ ಜನ್ಮವಿಲ್ಲದ ಮುಕ್ತಿಯನ್ನು ಭಗವಂತನಲ್ಲಿ ಬೇಡುವುದಕ್ಕಾಗಿಯೇ ಇವೆರಡನ್ನೂ ನೈವೇದ್ಯ ಮಾಡುವ ಪದ್ದತಿಯನ್ನು ನಮ್ಮ ಹಿರಿಯರು ಮಾಡಿರುವರು.ನಮ್ಮ ಹಿರಿಯರು ಏನೇ ಮಾಡಲಿ ಅದಕ್ಕೊಂದು ಅರ್ಥವಿರುತ್ತದೆ.

ಅಷ್ಟೇ ಅಲ್ಲ ಬಾಳೆ ಮರದ ಕಂದೇ ಇನ್ನೊಂದು ಮರವಾಗುತ್ತೆ;ಉಪಯೋಗಿಸದ ತೆಂಗು ಇಡೀ ಕಾಯಿಯಿಂದಲೇ ಬೆಳೆಯುತ್ತದೆ. ಅರ್ಥಾತ್ ಎಂಜಲಿನಿಂದ ಬೆಳೆಯುವುದಿಲ್ಲ.

ಪರಿಶುದ್ಧವಾದ ಪದಾರ್ಥಗಳೇ ದೇವರಿಗೆ ಅರ್ಪಿಸಲು ಯೋಗ್ಯ ಎಂಬ ತತ್ವವು ಇದರಲ್ಲಿದೆ.

ಇನ್ನೂ ಹೇಳಬೇಕೆಂದರೆ ಬಾಳೆ ಮತ್ತು ತೆಂಗಿನ ಮರದ ಎಲ್ಲಾ ಭಾಗಗಳು ವ್ಯರ್ಥವಾಗದೆ ಉಪಯುಕ್ತವಾಗಿವೆ, ಹಾಗೆಯೇ ಬೇರೆಯವರಿಗೆ ಸಹಾಯ ಮಾಡುವುದೇ ನಮ್ಮ ಜನ್ಮಕ್ಕೆ ಸಫಲತೆ ನೀಡುವುದು.

ತೆಂಗಿನ ಕಾಯಿಯನ್ನು ದೇವರ ಮುಂದೆ ಒಡೆದರೆ ನಮ್ಮ ಪಾಪ ಕರ್ಮ ದೋಷ ವೂ ಕೂಡ ಪರಿಹಾರ ಆಗುತ್ತದೆ ಎಂಬ ನಂಬಿಕೆ ಇದೆ ಹಾಗೆಯೇ ಆ ಶಕ್ತಿ ತೆಂಗಿನಕಾಯಿಗೆ ಇದೆ.ಅದಕ್ಕೆ ಇದನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ.

 ನಮ್ಮ ಸಂಪ್ರದಾಯದಲ್ಲಿ  ಇಷ್ಟೊಂದು ಅರ್ಥವಿರುವುದು ನಮ್ಮ ಭಾರತದ ಪರಂಪರೆಯ ಘನತೆಗೆ ಸಾಕ್ಷಿಯಾಗಿದೆ.