August 28, 2022

ರಾಹುಕಾಲ, ಗುಳಿಕ ಕಾಲ ಮತ್ತು ಯಮಗಂಡಕಾಲಗಳ ಮಹತ್ವ

ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡ ಕಾಲಗಳ ಅರ್ಥ ಔಚಿತ್ಯ ಮತ್ತು ಪ್ರಾಮುಖ್ಯತೆ

🌟 ನಮ್ಮ ಹಿಂದೂ ಧರ್ಮದಲ್ಲಿ ಮುಖ್ಯವಾದ ಕೆಲಸ - ಕಾರ್ಯಗಳಿಗೆ ಮತ್ತು ಹಬ್ಬಗಳಾಚರಣೆಗೆ ಮುಹೂರ್ತ ನೋಡುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡ ಪದ್ಧತಿ. ನಮ್ಮವರು ಇಂದಿಗೂ ಹಬ್ಬ, ಮದುವೆ, ಗೃಹಪ್ರವೇಶ, ಮುಂಜಿವೆ ಮುಂತಾದ ಶುಭಕಾರ್ಯಗಳಿಗೆ ಮುಹೂರ್ತ ನೋಡುತ್ತಾರೆ. 

🌟 ಕಾಲಗಳ ಮಹತ್ವ ಗೊತ್ತಿದ್ದವರು ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರುತ್ತಲೇ ಹೋಗುತ್ತಿರುತ್ತಾರೆ. ಸಮಯ ನೋಡಿಕೊಂಡು ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸಾಗುತ್ತವೆ ಎಂಬ ಗುಟ್ಟು ಬಹಳಷ್ಟು ಜನರಿಗೆ ಗೊತ್ತಿಲ್ಲ. 

ರಾಹು ಕಾಲ 

🌟 ಸಾಮಾನ್ಯವಾಗಿ ರಾಹುಕಾಲವು ವಾರದ ಒಂದೊಂದು ದಿನ ಸರಿಸುಮಾರು ಒಂದೇ ಸಮಯದಲ್ಲಿರುತ್ತದೆ.

🌟 ರಾಹುಕಾಲಕ್ಕೆ "ವಿಷಘಳಿಗೆ" ಎಂದು ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮುಖ್ಯವಾದ ಕೆಲಸಗಳಿಗೆ ಹೊರಡದಿರುವುದು ಸೂಕ್ತ. ಏಕೆಂದರೆ ಯಾವ ಉದ್ದೇಶ ಇಟ್ಟುಕೊಂಡು ನಾವು ಈ ವೇಳೆಯಲ್ಲಿ ಹೊರಟಿರುತ್ತೇವೆಯೋ ಅದು ಯಶಸ್ಸಾಗುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೇ ಬಂದಿದೆ. ರಾಹುಕಾಲದಲ್ಲೇನಾದರೂ ಹೋದಿರೆನ್ನಿ, ಆಗಬೇಕಾದ ಕೆಲಸ ಲೇಟಾಗುತ್ತದೆ ಅಥವಾ ಏನಾದರೂ ಅಡೆತಡೆ ಬರುತ್ತದೆ ಇಲ್ಲವೇ ಆಗೋದೇ ಇಲ್ಲ. ಈ ಸಮಯದಲ್ಲಿ ಹಣದ ವ್ಯವಹಾರ ಮಾಡುವುದು ಕೂಡ ಸೂಕ್ತವಲ್ಲ. ಉದಾಹರಣೆಗೆ ಖರೀದಿ, ಸಾಲ ಕೊಡುವುದು-ಪಡೆಯುವುದು, ಮತ್ತಿತರೆ. ಇನ್ನು ಕೆಲವೊಂದು ಮಹತ್ವದ ಮಾತುಕತೆಗಳನ್ನು ಕೂಡ ರಾಹುಕಾಲದಲ್ಲಿ ಮಾಡದಿರುವುದು ಸೂಕ್ತ. ಏಕೆಂದರೆ ಮಾತುಕತೆಯಲ್ಲಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದಿಲ್ಲ.

🌟 ಪ್ರತಿನಿತ್ಯ ಕೇವಲ ಒಂದೂವರೆ ಗಂಟೆಗಳಷ್ಟಿರುವ ರಾಹುಕಾಲವು, ರಾಹುದೋಷ ನಿವಾರಣಾ ಪೂಜೆಗೆ ಮತ್ತು ಮಾತೆ ದುರ್ಗಾದೇವಿಯ ಆರಾಧನೆಗೆ ತುಂಬಾ ಸೂಕ್ತ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ರಾಹುಕಾಲ ನಮಗೆ ಲಾಭವನ್ನೂ ತರುತ್ತದೆ. ಹೇಗೆಂದರೆ ನಮಗೇನಾದರೂ ಕೆಲಸ ಆಗದಿರುವ ಹಾಗೆ ಮಾಡಬೇಕೆಂದರೆ, ತೊಂದರೆಗಳಿಂದ ನಮಗೆ ಖುಷಿಯಾಗಬೇಕೆಂದರೆ ರಾಹುಕಾಲವನ್ನು ಆಯ್ಕೆ ಮಾಡಿಕೊಳ್ಳಬೇಕು. 

ಗುಳಿಕ ಕಾಲ

🌟 ಗುಳಿಕ ಕಾಲವೂ ಕೂಡ ಪ್ರತಿನಿತ್ಯ ವಾರದಲ್ಲೊಂದೊಂದು ದಿನ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 3 ರಿಂದ 4-30ರವರೆಗೆ ಗುಳಿಕ ಕಾಲ. ಆದರೆ, ಉಳಿದ ದಿನ ಬೇರೆ ಬೇರೆ ಸಮಯದಲ್ಲಿರುತ್ತದೆ ಎಂಬುದು ರೋಟರಿ ಗಮನದಲ್ಲಿರಿಸಿಕೊಂಡಿರಬೇಕು. ಈ ಗುಳಿಕ ಕಾಲದ ವಿಶೇಷವೇನೆಂದರೆ ಈ ಸಮಯದಲ್ಲಿ ಮಾಡಿದ ಕೆಲಸ ಕಾರ್ಯಗಳು ಪುನಃ ಮರುಕಳಿಸುತ್ತವೆ ಎಂಬ ನಂಬಿಕೆ ಹಿಂದಿನಿಂದ ಬಂದಿದೆ. 

🌟 ಈ ಸಮಯದಲ್ಲಿಯೇ ಸಾಮಾನ್ಯವಾಗಿ ಗೃಹಪ್ರವೇಶ, ಹೊಸ ವಾಹನ ಮತ್ತು ಬಂಗಾರ ಖರೀದಿ ಮಾಡುತ್ತಾರೆ. ಏಕೆಂದರೆ ಇದರಿಂದ ಮತ್ತೆ ಹೊಸ ಮನೆ ಗೃಹಪ್ರವೇಶ ಮತ್ತು ವಾಹನ, ಬಂಗಾರ ಖರೀದಿ ಯೋಗ ಬರುತ್ತದೆ ಎಂಬ ನಂಬಿಕೆ. 

🌟 ಆದರೆ, ಗುಳಿಕ ಕಾಲದಲ್ಲಿ ಮೃತ ವ್ಯಕ್ತಿಯ ಶರೀರವನ್ನು ಮನೆಯಿಂದ ಮಸಣಕ್ಕೆ ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗೂ ಅಂತ್ಯಕ್ರಿಯೆ ನಡೆಸುವ ಹಾಗಿಲ್ಲ. ಇದಕ್ಕರ್ಥ ನಿಮಗೆ ಗೊತ್ತಾಗಿರಬಹುದು. ಗೊತ್ತಾಗದವರಿಗೆ ಗುಳಿಕ ಕಾಲದಲ್ಲಿ ಮಾಡಿದ ಕೆಲಸ - ಕಾರ್ಯಗಳು ಮರುಕಳಿಸುತ್ತವೆ ಎಂಬುದನ್ನು ನೆನಪಿಸಬೇಕಾಗುತ್ತದೆ

ಯಮಗಂಡ ಕಾಲ

🌟 ಯಮಗಂಡ ಕಾಲವೂ ಪ್ರತಿನಿತ್ಯ ಒಂದೂವರೆ ಗಂಟೆಗಳಷ್ಟಿರುತ್ತದೆ. ರವಿವಾರ ಮಧ್ಯಾಹ್ನ 12-00 ರಿಂದ 1-30 ರವರೆಗೆ. ಉಳಿದ ದಿನಗಳು ಬೇರೆ ಬೇರೆ ಸಮಯದಲ್ಲಿರುತ್ತದೆ. ಇದು ಯಾವುದೇ ಕೆಲಸಗಳನ್ನು ಅಂತ್ಯಗೊಳಿಸಬೇಕೆಂದರೆ ಉತ್ತಮ ಸಮಯ. ಈ ಸಮಯಕ್ಕೆ "ಸಾವಿನ ಸಮಯ" ಎಂದೂ ಕೂಡ ಕರೆಯುತ್ತಾರೆ. ಈ ಸಮಯದಲ್ಲಿ ಮೃತ ಶರೀರದ ಅಂತ್ಯಕ್ರಿಯೆ, ತಿಥಿಯಾಚರಣೆ, ಶೋಕಾಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವ ಹಾಗಿಲ್ಲ. ಮಾಡಿದಿರೆನ್ನಿ. ಆ ಕೆಲಸಕ್ಕೆ "ಎಳ್ಳು ನೀರು ಬಿಟ್ಟಂಗೆ!"

🌟 ಈ ಸಮಯದಲ್ಲಿ ಯಾವುದೇ ಮಾತುಕತೆ, ಹಣದ ವ್ಯವಹಾರ, ಖರೀದಿ ಮಾಡುವ ಹಾಗಿಲ್ಲ. ಮಾಡಲು ಹೋದರೆ ಅದು ಯಶಸ್ಸೂ ಆಗಲ್ಲ, ಅಲ್ಲದೇ ಅದೇ ಕೊನೆಯೂ ಕೂಡ ಆಗುತ್ತದೆ. ಮುಂದೆ ಆ ಯೋಗವೂ ಬರುವುದಿಲ್ಲ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.

🌟 ಅಲ್ಲದೇ ಉಲ್ಲಾಸ, ಉತ್ಸಾಹ ಕಳೆದುಕೊಂಡು ಬೇಸರಪಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ಯಮಗಂಡ ಕಾಲದಲ್ಲಿ ಮುಖ್ಯವಾದ ಕೆಲಸಕ್ಕೆ ಹೋಗುವುದನ್ನು ಮತ್ತು ಮಾತುಕತೆಗಳನ್ನು ತಪ್ಪಿಸಬೇಕು. ಯಾವುದೇ ವಿಷಯವನ್ನಾಗಲಿ ಅದಕ್ಕೊಂದು ಅಂತ್ಯ ಹಾಡಬೇಕೆಂದರೆ ಯಮಗಂಡ ಕಾಲ ಸೂಕ್ತ. 
ವಿಶೇಷ ಸಂದರ್ಭ ದಲ್ಲಿ ಮಾತ್ರ ಗಣನೆಗೆ ತೆಗೆದು ಕೊಳ್ಳಬೇಕು

August 25, 2022

ಭೂಮಿ ಗುಂಡಾಗಿದೆ - ನಕದಾಚನಾಸ್ತಮೇತಿ

 ಈ ಭೂಮಿ ಚಪ್ಪಟೆಯಾಗಿಲ್ಲ ಗುಂಡಾಗಿದೆ. ತನ್ನ ಪಥದಲ್ಲಿ ಸುತ್ತುತ್ತಾ ಇದೆ. ಸೂರ್ಯನಿಗೆ ಒಂದು ಸುತ್ತು ಬರಲು ೩೬೫ ದಿನ ಬೇಕು. ಆ ಒಂದು ಸುತ್ತನ್ನು ಸಂವತ್ಸರ ಎಂದು ಕರೆದು ಜಗತ್ತಿಗೆ ತೋರಿಸಿದ ನಾವು. ಸೂರ್ಯನ ಪಥವನ್ನಾಧರಿಸಿ ಆಯನಗಳನ್ನು ಮಾಡಿಕೊಂಡಿದ್ದೇವೆ. ಮಾಸ ಮತ್ತು ಪಕ್ಷ ತಿಥಿಗಳೊಂದಿಗೆ ಒಂದು ವ್ಯವಸ್ಥೆಯನ್ನು ಮಾಡಿಕೊಂಡವರು ನಾವು ಇದು ಜಗತ್ತಿಗೆ ಕೊಟ್ಟ ಕೊಡುಗೆ ಅನ್ನುವುದು ನನ್ನ ಈ ಬರಹದ ಉದ್ದೇಶವಲ್ಲ. ಆದರೆ, ಬ್ರಾಹ್ಮಣಗಳ ಕಾಲದಲ್ಲಿಯೇ ನಮಗೆ ಭೂಮಿಯ ಚಲನೆ ಮತ್ತು ಆಕಾರದ ಸ್ಪಷ್ಟ ತಿಳಿವು ಇದ್ದದ್ದು ಸ್ಪಷ್ಟವಾಗುವುದು ಐತರೇಯ ಬ್ರಾಹ್ಮಣದ ಈ ಮಂತ್ರದಿಂದ . . .  

ಸವಾ ಏಷ ನಕದಾಚನಾಸ್ತಮೇತಿ ನೋದೇತಿತಂ ಯದಸ್ತಮೇತೀತಿ ಮನ್ಯಂತೇ ಯದಸ್ತಮೇತೀತಿ ಮನ್ಯಂತೇsಹಮೇವ | ತದಂತಮಿತ್ವಾದಾತ್ಮಾನಂ ವಿಪರ್ಯಸ್ಯತೇ ರಾತ್ರೀಮೇವಾವಸ್ತಾತ್ಕುರುತೇಹಃ ಪರಸ್ತಾದಧ ಯದೇನಂ ಪ್ರಾತರುದೇತೀತಿ ಮನ್ಯಂತೇ ರಾತ್ರೇರೇವ ವದಂತಮಿತ್ವಾಧಾಮಾತ್ಮನಂ ವಿಪರ್ಯಸ್ಯತೇsಹರೇ ವಾವಸ್ತಾತ್ಕುರುತೇ ರಾತ್ರೀಂ ಪರಸ್ತಾತ್ ಸವಾ ಏಷ ನ ಕದಾಚನ ನಿಮ್ರೋಚತಿ | ನಹ ವೈ ಕದಾಚನ ನಿಮ್ರೋಚತ್ಯೇ ತಸ್ಯಹ ಸಾಯುಜ್ಯಂ ಸರೂಪತಾಂ ಸಲೋಕತಾಮಶ್ನುತೇ | ಯ ಏವಂ ವೇದ ಯ ಏವಂ ವೇದ || ಐತರೇಯ ಬ್ರಾಹ್ಮಣ ೩:೪:೪೪   

ಸೂರ್ಯ ಯಾವತ್ತೂ ಮುಳುಗಿಲ್ಲ ಮತ್ತು ಮುಳುಗುವುದೂ ಇಲ್ಲ, ಯಾವತ್ತೂ ಉದಯಿಸುವುದೂ ಇಲ್ಲ. ಆದರೆ ಸೂರ್ಯನು ಮರೆಯಾಗುವುದನ್ನೇ ಈ ಜನ ಸೂರ್ಯ ಅಸ್ತಮಿಸಿದ ಎಂದು ತಿಳಿಯುತ್ತಾರೆ. ಆದರೆ ಇದೇ ಸತ್ಯವಲ್ಲ. ಭೂಮಿಯು ತಿರುಗುತ್ತಾ ಒಂದು ಹಂತದ ಕೊನೆಗೆ ಬಂದಾಗ ಈ ಭೂಮಿಯ ಇನ್ನೊಂದು ಪಾರ್ಶದಲ್ಲಿ ಬೆಳಕಾಗಿರುತ್ತದೆ. ಇನ್ನು ಇಲ್ಲಿ ಸಂಪೂರ್ಣ ಕತ್ತಲಾದಾಗ ಅಲ್ಲಿ ಹಗಲಾಗಿರುತ್ತದೆ. ಅದೇ ಇನ್ನೊಂದು ತುದಿಗೆ ಬಂದಾಗ ಇಲ್ಲಿ ಸೂರ್ಯನ ಆಗಮನವಾದಂತೆ ಅನ್ನಿಸಿ ಸೂರ್ಯ ಹುಟ್ಟುತ್ತಾನೆ. ಮತ್ತು ಇನ್ನೊಂದು ತುದಿಯಲ್ಲಿ ಮುಳುಗುತ್ತಾನೆ ಎನ್ನುತ್ತೇವೆ. ಅದೇನೇ ಇರಲಿ ಆ ಕಾಲದ ಜನರಲ್ಲಿದ್ದ ಈ ರೀತಿಯ ಜ್ಞಾನ ನನಗಂತೂ ಆಶ್ಚರ್ಯವೂ ಹೌದು ಹೆಮ್ಮೆಯೂ ಹೌದು. ಐತರೇಯ ಬ್ರಾಹ್ಮಣ ’ನ ಕದಾಚನ ನಿಮ್ರೋಚತಿ’ ಎನ್ನುತ್ತದೆ. ’ಸಾಯುಜ್ಯಂ ಸರೂಪತಾಂ ಸಲೋಕತಾಮಶ್ನುತೇ’ ಎನ್ನುತ್ತಾ ’ಯ ಏವಂ ವೇದ’ ಎಂದು ಸಾರುತ್ತದೆ ಇದುವೆ ಜ್ಞಾನ, ಇದುವೇ ಸತ್ಯ ಎನ್ನುವ ಆ ಮಹರ್ಷಿಯ ಶಕ್ತಿ ಬೆರಗಾಗಿಸುತ್ತದೆ. ಪುರಾಣಗಳು ನವವರ್ಷಗಳ ಕುರಿತಾಗಿ ಪ್ರಸ್ತಾವಿಸುತ್ತವೆ. ಭರತವರ್ಷದಿಂದ ಆರಂಭಿಸಿ ಕಿಂಪುರುಷವರ್ಷ, ಹರಿವರ್ಷ . . . ಕುರುವರ್ಷದ ತನಕದ ಪ್ರಾದೇಶಿಕತೆಯನ್ನು ಹೇಳಲಾಗುತ್ತದೆ. ಇವೆಲ್ಲದರ ಹಿಂದೆ ಇಂತಹ ವೈಜ್ಞಾನಿಕ ಸತ್ಯವನ್ನು ಕಾಣಬಹುದು ನಾವು. ಬ್ರಾಹ್ಮಣಗಳ ಕುರುತಾದ ವಿಷಯ ತಿಳಿದಿರುವುದು ಕಡಿಮೆ ನಾನು. 

#ಬ್ರಾಹ್ಮಣ_ಹಗಲು_ಇರುಳು 
ಸದ್ಯೋಜಾತರು

August 20, 2022

ಪಶುಪತಿ ಅಷ್ಟಕಮ್

ಪಶುಪತಿ ಅಷ್ಟಕವು ಪಶುಪತಿ ದೇವರನ್ನು ಕುರಿತು ಹೇಳುವ ಪ್ರಾರ್ಥನೆ. ನೇಪಾಳ ಮತ್ತು ದಕ್ಷಿಣ ಭಾರತದಲ್ಲಿ ಮಹಾದೇವ ಶಿವನನ್ನು ಪಶುಪತಿನಾಥನ ರೂಪದಲ್ಲಿ ಪೂಜಿಸುತ್ತಾರೆ. ನೇಪಾಳದಲ್ಲಿರುವ ಪಶುಪತಿನಾಥನ ದೇವಾಲಯ ಜಗತ್ತಿನಲ್ಲೇ ಪ್ರಸಿದ್ದವಾದ ಹಿಂದೂ ದೇವಾಲಯ. ಭಕ್ತರು ಪಶುಪತಿ ಅಷ್ಟಕವನ್ನು ತಮ್ಮ ಪಾಪವನ್ನು ನಿವಾರಿಸಿಕೋಳ್ಳಲು ಮತ್ತು ದೇವರ ಕೃಪೆಯಿಂದ ಸಂತೋಷ ಮತ್ತು ಸಂಪತ್ತನ್ನು ಪಡೆಯಲು ಪಠನ ಮಾಡುತ್ತಾರೆ.

ಪಶುಪತಿ ಅಷ್ಟಕದ ಅರ್ಥ ಮತ್ತು ವ್ಯಾಖ್ಯಾನ

ಪಶುಪತೀನ್ದುಪತಿಂ ಧರಣೀಪತಿಂ ಭುಜಗಲೋಕಪತಿಂ ಚ ಸತೀಪತಿಮ್ |
ಪ್ರಣತಭಕ್ತಜನಾರ್ತಿಹರಂ ಪರಂ ಭಜತ ರೇ ಮನುಜಾ ಗಿರಿಜಾಪತಿಮ್ ||೧||
 ೧. ಹೇ ಮನುಜ, ತನ್ನ ನಿಜಭಕ್ತರ ಕಷ್ಟಗಳನ್ನು ನಿವಾರಿಸುವ ಇಂದುಪತಿಯೂ,ಧರಣೀಪತಿಯೂ,ಸಕಲಲೋಕಪತಿಯೂ, ಸತಿಪತಿಯೂ, ಗಿರಿಜಾಪತಿಯೂ ಆದ ಪಶುಪತಿಯನ್ನು ಭಜಿಸು.

ನ ಜನಕೋ ಜನನೀ ನ ಚ ಸೋದರೋ ನ ತನಯೋ ನ ಚ ಭೂರಿಬಲಂ ಕುಲಮ್ | 
ಅವತಿ ಕೋಽಪಿ ನ ಕಾಲವಶಂ ಗತಂ ಭಜತ ರೇ ಮನುಜಾ ಗಿರಿಜಾಪತಿಮ್ ||೨||
೨. ಹೇ ಮನುಜ, ತಂದೆ,ತಾಯಿ,ಸೋದರರು,ಮಕ್ಕಳು ಮತ್ತು ತುಂಬಿದ ಕುಟುಂಬ; ಇವರಾರೂ ನೀನು ಕಾಲವಶವಾಗುವಾಗ ಸಹಾಯಕ್ಕೆ ಬರುವುದಿಲ್ಲ. ಆದ್ದರಿಂದ ಗಿರಿಜಾಪತಿಯನ್ನು ಭಜಿಸು.

ಮುರಜಡಿಣ್ಡಿಮವಾದ್ಯವಿಲಕ್ಷಣಂ ಮಧುರಪಞ್ಚಮನಾದವಿಶಾರದಮ್ |
ಪ್ರಮಥಭೂತಗಣೈರಪಿ ಸೇವಿತಂ ಭಜತ ರೇ ಮನುಜಾ ಗಿರಿಜಾಪತಿಮ್ ||೩||
೩. ಹೇ ಮನುಜ, ಮುರಜ ಡಿಂಡಿಮಗಳಂಥಾ ವಾದ್ಯಗಳನ್ನು ನುಡಿಸುವುದರಲ್ಲಿ ನಿಪುಣನೂ, ಮಧುರವಾದ ಪಂಚಮ ಸ್ವರ ಹಾಡುವುದರಲ್ಲಿ ವಿಶಾರದನೂ ಪ್ರಥಮ ಗಣಗಳಿಂದ ಸೇವಿಸಲ್ಪಡುವವನೂ ಆದ ಗಿರಿಜಾಪತಿಯನ್ನು ಭಜಿಸು.

ಶರಣದಂ ಸುಖದಂ ಶರಣಾನ್ವಿತಂ ಶಿವ ಶಿವೇತಿ ಶಿವೇತಿ ನತಂ ನೃಣಾಮ್ |
ಅಭಯದಂ ಕರುಣಾವರುಣಾಲಯಂ ಭಜತ ರೇ ಮನುಜಾ ಗಿರಿಜಾಪತಿಮ್ ||೪||
 ೪. ಹೇ ಮನುಜ, ಶಿವ-ಶಿವ-ಶಿವ ಎಂದು ಶರಣಾರ್ಥಿಯಾಗಿ ಬಂದ ಜನರಿಗೆ ಆಶ್ರಯ ಮತ್ತು ಸುಖ-ಸಂತೊಷಗಳನ್ನು ಕೊಡುವ ರಕ್ಷಕನೂ, ದಯಾಸಾಗರನೂ ಆದ ಗಿರಿಜಾಪತಿಯನ್ನು ಭಜಿಸು.

ನರಶಿರೋರಚಿತಂ ಮಣಿಕುಣ್ಡಲಂ ಭುಜಗಹಾರಮುದಂ ವೃಷಭಧ್ವಜಮ್ |
ಚಿತಿರಜೋಧವಲೀಕೃತವಿಗ್ರಹಂ ಭಜತ ರೇ ಮನುಜಾ ಗಿರಿಜಾಪತಿಮ್ ||೫||
೫. ಹೇ ಮನುಜ, ನರ ರುಂಡಮಾಲನೂ, ಸರ್ಪ ಕುಂಡಲ ಧಾರಿಯೂ, ಸರ್ಪಹಾರ  ಶೋಭಿತನೂ, ವೃಷಭದ್ವಜನೂ, ಚಿತಾಭಸ್ಮಧರನೂ ಆದ ಗಿರಿಜಾಪತಿಯನ್ನು ಸದಾ ಭಜಿಸು.

ಮಖವಿನಾಶಕರಂ ಶಿಶಿಶೇಖರಂ ಸತತಮಧ್ವರಭಾಜಿಫಲಪ್ರದಮ್ | 
ಪ್ರಳಯದಗ್ಧಸುರಾಸುರಮಾನವಂ ಭಜತ ರೇ ಮನುಜಾ ಗಿರಿಜಾಪತಿಮ್ ||೬||
೬.  ಹೇ ಮನುಜ,ದಕ್ಷಯಘ್ನ ವಿನಾಶಕನೂ, ಚಂದ್ರಶೇಖರನೂ, ಯಘ್ನಕರ್ತ್ರುಗಳಿಗೆ ಸದಾ ವರದಾಯಕನೂ, ಪ್ರಳಯಕಾಲದಲ್ಲಿ ಸುರ ನರ ದಾನವರನ್ನೆಲ್ಲರನ್ನೂ ದಹಿಸುವಂಥಾ   ಗಿರಿಜಾಪತಿಯನ್ನು ಸದಾ ಭಜಿಸು.

ಮದಮಪಾಸ್ಯ ಚಿರಂ ಹೃದಿ ಸಂಸ್ಥಿತಂ ಮರಣಜನ್ಮಜರಾಮಯಪೀಡಿತಮ್ |
ಜಗದುದೀಕ್ಷ್ಯ ಸಮೀಪಭಯಾಕುಲಂ ಭಜತ ರೇ ಮನುಜಾ ಗಿರಿಜಾಪತಿಮ್ ||೭||
 ೭.  ಹೇ ಮನುಜ,ದೀರ್ಘಕಾಲ ಹ್ರದಯದೋಳಗೆ ಕುಳಿತಿದ್ದ ನಿನ್ನ ಮದವು,ಈ ಜಗತ್ತಿನಲ್ಲಾಗುವ ಹುಟ್ಟು,ಮುಪ್ಪು,ಸಾವುಗಳನ್ನು ಹತ್ತಿರದಿಂದ ನೋಡಿ ಭಯಪೀಡಿತನಾಗಿ ಓಡುವ ಸಮಯದಲ್ಲಿ ಗಿರಿಜಾಪತಿಯನ್ನು ಭಜಿಸು.

ಹರಿವಿರಞ್ಚಿಸುರಾಧಿಪಪೂಜಿತಂ ಯಮಜನೇಶಧನೇಶನಮಸ್ಕೄತಮ್ | 
ತ್ರಿನಯನಂ ಭುವನತ್ರಿತಯಾಧಿಪಂ ಭಜತ ರೇ ಮನುಜಾ ಗಿರಿಜಾಪತಿಮ್ ||೮||
೮. ಹೇ ಮನುಜ, ವಿಷ್ನು, ಭ್ರಹ್ಮ, ಇಂದ್ರರಿಂದ ಪೂಜಿಸಲ್ಪಡುವ, ಯಮ, ವರುಣ, ಕುಬೇರರಿಂದ ಸ್ತುತಿಸಲ್ಪಡುವ, ತ್ರಿನೇತ್ರಗಳಿಂದ ಹತ್ತಿರದಲ್ಲಿ ಭಯಾನಕವಾಗಿ ತೊರುವ ಗಿರಿಜಾಪತಿಯನ್ನು ಸದಾ ಭಜಿಸು.

ಪಶುಪತೇರಿದಮಷ್ಟಕಮದ್ಭುತಂ ವಿರಚಿತಂ ಪೃಥಿವೀಪತಿಸೂರಿಣಾ |
ಪಠತಿ ಸಂಶ್ರೃಣುತೇ ಮನುಜಃ ಸದಾ ಶಿವಪುರೀಂ ವಸತೇ ಲಭತೇ ಮುದಮ್ ||೯||
9.ಯಾವ ಮಾನವನು ಮಹಾರಾಜ ಸೂರಿ ರಚಿತವಾದ ಈ ಅದ್ಭುತವಾದ ಪಶುಪತಿ ಅಷ್ಟಕವನ್ನು ಪಠಿಸುವನೋ ಅಥವಾ ಕೆಳುವನೋ ಅವನು, ಸದಾ ಶಿವಪುರಿಯಲ್ಲಿ ವಾಸಿಸುವ ಸೌಭಾಗ್ಯವನ್ನು ಹೊಂದುತ್ತಾನೆ.
ಇತಿ ಶ್ರೀಪಶುಪತ್ಯಷ್ಟಕಮ್ ಸಂಪೂರ್ಣಮ್
ಸಂಗ್ರಹ: ವೇ ಚನ್ನೇಶ ಶಾಸ್ತ್ರಿಗಳು

August 17, 2022

ಕುಬೇರ ಮತ್ತು ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್

ಕುವೇರ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವವನೇ ಕುಬೇರ ಎಂದೂ ಸಹ ಕರೆಯಲ್ಪಡುತ್ತಾನೆ. ಈತ ವಿಶ್ರವಸನೆಂಬ ಬ್ರಹ್ಮನಿಗೆ ಹುಟ್ಟಿದವನು. ಅದಕ್ಕಾಗಿ ವೈಶ್ರವಣ ಎಮದೂ ಕರೆಯಲಾಗುತ್ತದೆ. ಕುಬೇರ ಎಂದು ಕೆಲವು ಕಡೆಗಳಲ್ಲಿ ಹೇಳಿದರೆ, ಮಹಾಭಾರತದ ವನಪರ್ವದಲ್ಲಿ ಪುಲಸ್ತ್ಯ ಮಹರ್ಷಿಗೆ ಗೋ ಎಂಬಾಕೆಯಲ್ಲಿ ಜನಿಸಿದವನು ಎಂದು ಹೇಳಲಾಗಿದೆ. ಈತನನ್ನು ಉತ್ತರ ದಿಕ್ಕಿಗೆ ಅಧಿಪತಿ ಎಂದು ಹೇಳಲಾಗುತ್ತದೆ. ಆದುದರಿಂದ ಈತನನ್ನು ಸೋಮನೆನ್ನುವ ಇನ್ನೊಂದು ಹೆಸರಿನಿಂದ ಸಹ ಕರೆಯಲಾಗುತ್ತದೆ. ಅದೇ ಕಾರಣಕ್ಕೆ ಉತ್ತರಾಶಾಪತಿ ಎಂದೂ ಹೇಳುತ್ತಾರೆ. ಸಂಪತ್ತಿನ ಒಡೆಯನಾದುದರಿಂದ ಧನಪತಿ, ಅಥವಾ ಧನಾಧಿಪ ಎಂದು ಕರೆಯಲಾಗುತ್ತದೆ. ವಿತ್ತೇಶ, ಅರ್ಥಪತಿ ಮತ್ತು ಶ್ರೀದಃ ಎಂದರೂ ಇದೇ ಕುಬೇರ. ಇಳಾವಿಲನ ಮಗನಾದ್ದರಿಂದ ಏಳಾವಿಲ ಅಥವಾ ಐಡಾವಿಲ ಎಂದೂ ಕರೆಯುತ್ತಾರೆ. ಇನ್ನು ಯಕ್ಷರಿಗೆ ಅಧಿಪತಿಯಾಗಿದ್ದರಿಂದ ಯಕ್ಷೇಶ ಎನ್ನಲಾಗುತ್ತದೆ. ನಲಕೂಬರನೆಂಬ ಮಗನನ್ನು ಹೊಂದಿದ್ದ ಈತ ಅಲಕಾನಗರವನ್ನು ಆಳುತ್ತಿದ್ದ ಎನ್ನುವುದು ಪುರಾಣಗಳಿಂದ ತಿಳಿದು ಬರುತ್ತದೆ. ಈತನ ಪತ್ನಿಯನ್ನು ಋದ್ಧಿ ಎಂದು ಕೆಲವೆಡೆ ಹೇಳಿದ್ದರೆ, ಈತನ ಮಡದಿಯನ್ನು ಭದ್ರೆ ಎನ್ನುವುದಾಗಿ ಮಹಾಭಾರತದ ಆದಿಪರ್ವದಲ್ಲಿ ಹೇಳಲಾಗಿದೆ. ಕುಬೇರನಿಗೂ ಮುಚುಕುಂದನಿಗೂ ನಡೆದ ಕ್ಷತ್ರಿಯ ಧರ್ಮದ ಸಂವಾದ ಈ ಹಿಂದೆ ನಾನು ಬರೆದಾಗಿದೆ. ಈತ ಲಂಕೆಯನ್ನು ಆಳುತ್ತಿದ್ದ, ಆಗ ಈತನ ಮಲತಾಯಿ ಮಕ್ಕಳಾದ ರಾವಣ ಕುಂಭಕರ್ಣರೇ ಮೊದಲಾದವರು ಇವನನ್ನು ಯುದ್ಧದಲ್ಲಿ ಸೋಲಿಸಿ ಲಂಕೆಯನ್ನೂ ಮತ್ತು ಈತನಲ್ಲಿದ್ದ ಪುಷ್ಪಕ ವಿಮಾನವನ್ನು ಕಸಿದುಕೊಂಡು ಕಳಿಸಿದ್ದು ರಾಮಾಯಣದಲ್ಲಿ ಮತ್ತು ದೇವೀಭಾಗವತದಲ್ಲಿ ಸಿಗುತ್ತದೆ. ಹೀಗೇ ಇವಿಷ್ಟೂ ಪುರಾಣಗಳಲ್ಲಿಯಾದರೆ ವೇದಗಳಲ್ಲಿ ಕುಬೇರನ ಹೆಸರು ನೇರವಾಗಿ ಪ್ರಸ್ತಾಪಿಸಿದಂತಿಲ್ಲ. ಶತಪಥಬ್ರಾಹ್ಮಣದಲ್ಲಿ ಕುಬೇರನ ಹೆಸರು ಕಾಣಿಸಿಕೊಳ್ಳುತ್ತದೆ. ಆದರೆ ಕುಬೇರ ಅನ್ನುವ ಹೆಸರಿಲ್ಲದಿದ್ದರೂ ದೇವಸಖ ಎನ್ನುವ ಹೆಸರಿನಿಂದ ಸ್ತುತಿಸಲ್ಪಟ್ಟದ್ದು ನೋಡಬಹುದು.

ಓಂ ಉಪೈತು ಮಾಂ ದೇವಸಖಃ ಕೀರ್ತಿಶ್ಚ ಮಣಿನಾ ಸಹ |
ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ || ಎನ್ನುವ ಈ ಮಂತ್ರದಲ್ಲಿ ದೇವಸಖಃ ಎಂದಿರುವುದು ಇದೇ ಕುಬೇರನನ್ನು. ಕುಬೇರನ ಮಂತ್ರಿಯೇ ಮಣಿಭದ್ರ ಎನ್ನುವವನು. ಈ ಕುಬೇರನ ಅಭಿಮಾನಿ ದೇವತೆ ಕೀರ್ತಿ ಎನ್ನುವುದು ಭಾಷ್ಯಕಾರರ ಅಭಿಮತ. ಈ ಮಂತ್ರದ ಭಾವಾರ್ಥವನ್ನು ನೋಡುವುದಾದರೆ, ಹೇ ದೇವಿಯೇ ಮಹಾದೇವನ ಮಿತ್ರನಾದ ದೇವಸಖನೆಂದು ಕರೆಯಲ್ಪಡುವ ಕುಬೇರನೂ, ಮತ್ತು ಕೀರ್ತಿಗೆ ಅಭಿಮಾನಿ ದೇವತೆಯಾದ ದಕ್ಷಕನ್ಯೆಯೂ, ಕುಬೇರನ ಕೋಶಾಧ್ಯಕ್ಷನಾದ ಮಣಿಭದ್ರನೆಂಬವನ ಜೊತೆ ನನಗೆ ಅನುಗ್ರಹ ಮಾಡುವುದಕ್ಕಾಗಿ ನನ್ನ ಸಮೀಪಕ್ಕೆ ಬರಲಿ ಎನ್ನುವುದಾಗಿ ಆನಂದ ಋಷಿ ಕೇಳಿಕೊಳ್ಳುತ್ತಾನೆ. ಈ ರಾಷ್ಟ್ರದಲ್ಲಿ ನಾನು ಜನಿಸಿರುವುದೇ ನಿನ್ನ ಅನುಗ್ರಹ ಸಂಪಾದನೆಗಾಗಿ. ಆದುದರಿಂದ ನನಗೆ ಕುಬೇರನು ಅತ್ಯುನ್ನತವಾದ ಕೀರ್ತಿ ಮತ್ತು ಐಶ್ವರ್ಯದೊಡನೆ ಸುಖ ಮತ್ತು ಭೋಗವಸ್ತುಗಳನ್ನು ನೀಡಲಿ ಎನ್ನುವ ಆಶಯ ವ್ಯಕ್ತಪಡಿಸಿದ್ದಾನೆ.
ಹಿಂದೊಮ್ಮೆ ಕುಬೇರನು ಉಗ್ರವಾದ ತಪ್ಪಸ್ಸನ್ನು ಆಚರಿಸುತ್ತಾನೆ. ತಪಸ್ಸಿಗೆ ಮೆಚ್ಚಿ ಪರಮೇಶ್ವರ ಪ್ರತ್ಯಕ್ಷನಾಗುತ್ತಾನೆ. ಈತನ ತಪಸ್ಸಿಗೆ ಮೆಚ್ಚಿ ಸಂಪತ್ತಿನ ಒಡತಿಯಾದ ಲಕ್ಷ್ಮಿಯನ್ನು ಕುಬೇರನ ವಶದಲ್ಲಿರುವಂತೆ ಅನುಗ್ರಹಿಸುತ್ತಾನೆ. ಮುಂದೆ ಕುಬೇರನ ಗೃಹದಲ್ಲಿ ಲಕ್ಷ್ಮೀ ಸದಾ ವಾಸಮಾಡುತ್ತಾಳೆ. ಈ ಕಾರಣಕ್ಕಾಗಿಯೇ, ಅಂದರೆ ಲಕ್ಷ್ಮಿಯ ಅನುಗ್ರಹ ಬೇಕಿದ್ದರೆ ಈ ಮಂತ್ರ ಪಠಣಮಾಡಿ ಅನುಗ್ರಹ ಪಡೆದುಕೊಳ್ಳಬೇಕು. ಕುಬೇರನ ಪ್ರಾರ್ಥನೆಯಿಂದ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಎಂದು ಈಶಾನ ಸಂಹಿತೆ ಹೇಳುತ್ತದೆ. 

’ಕೀರ್ತಿಶ್ಚ ಮಣಿನಾ ಸಹ’ ಎನ್ನುವ ಈ ಭಾಗದ ಕುರಿತಾಗಿ ಭಾಷ್ಯಕಾರರಲ್ಲಿ ಎರಡು ಅರ್ಥಗಳಿದ್ದು ಮಣಿ ಎನ್ನುವುದು ಸಂಪತ್ತೂ ಆಗಬಹುದು ಅಥವಾ ಕುಬೇರನ ಕೋಶಾಧ್ಯಕ್ಷನೂ ಆಗಬಹುದು. ಎರಡೂ ಭಾವ ಒಂದೇ. ಇನ್ನು ಕೀರ್ತಿ ಎನ್ನುವವಳು ಯಶಸ್ಸಿನ ಅಭಿಮಾನ ದೇವತೆ. ಕೀರ್ತಿ ಎನ್ನುವುದು ಯಶಸ್ಸಿನ ದೇವತೆ ಮಾತ್ರವಲ್ಲ ಲಕ್ಷ್ಮಿಯ ಒಂದು ಶಕ್ತಿಯ ವಿಧವೂ ಹೌದು ಆದುದರಿಂದಲೇ ’ಉಪೈತು ಮಾಂ’ ನನ್ನನ್ನು ಸಮೀಪಿಸಲಿ ಮತ್ತು ’ಕೀರ್ತಿಮೃದ್ಧಿಂ ದದಾತು ಮೇ’ ನನಗೆ ಯಶಸ್ಸು, ಕೀರ್ತಿ ಮತ್ತು ಇವೆರಡರ ಜೊತೆಗೆ ಸಂಪತ್ತು ಸಹ ದೊರಕಲಿ ಎನ್ನುವುದು ಋಷಿಯ ಕೋರಿಕೆ. ಈಗ ಸಹ ಈ ಪರಿಸ್ಥಿತಿ ಭಿನ್ನವಾಗಿಲ್ಲ ಅನ್ನಿಸುತ್ತದೆ. ಕೀರ್ತಿ ಮತ್ತು ಯಶಸ್ಸುಗಳೆಲ್ಲ ಶ್ರೀಮಂತರನ್ನೇ ಆಶ್ರಯಿಸುತ್ತವೆ. ಬಡವ ಇನ್ನೂ ಬಡವನಾಗುತ್ತಾ ಇರುತ್ತಾನೆ. ಯಶಸ್ಸು ಕೀರ್ತಿ ಎಲ್ಲ ದೂರದ ಮಾತಾಗಿರುತ್ತದೆ. ಇನ್ನು ಬಡತನವಿದ್ದೂ ಯಾವುದೋ ಕೀರ್ತಿಗಳಿಸಿಕೊಂಡರೂ ಅದು ನಗಣ್ಯವೆನ್ನಿಸಿಬಿಡುತ್ತದೆ. ಬಡವನನ್ನು ಕಂಡರೆ ಶ್ರೀಮಂತರು ಮಾತ್ರವಲ್ಲ ಬಂಧು ಬಾಂಧವರೆಲ್ಲ ದೂರ ಸರಿಯುತ್ತಾರೆ. ಆತನ ವಿದ್ಯೆ ಸಹ ಆತನ ಬಡತನ ನೀಗಿಸುವುದಿಲ್ಲ. ಬಡವನ ಮನೆಯ ಕುಬೇರ ಸಹ ಲಕ್ಷ್ಮೀರಹಿತನಾಗಿರುತ್ತಾನೆ. ಅದೇನೇ ಇರಲಿ ಈ ಮಂತ್ರದಂತೆ ರಾತ್ರಿಯಲ್ಲಿ ಈ ಋಕ್ಕಿನ ಪಠಣದಿಂದ ಅಷ್ಟೈಶ್ವರ್ಯಗಳ ಜೊತೆಗೆ ಸಿದ್ಧಿ ಋದ್ಧಿ ಉಂಟಾಗುತ್ತದಂತೆ. ಪ್ರಾದುರ್ಭೂತೋsಸ್ಮಿ ರಾಷ್ಟ್ರೇsಸ್ಮಿನ್! ಈ ಜನ್ಮ ಇಂತಹ ಉನ್ನತ ಧ್ಯೇಯ ಹೊಂದಿದ ರಾಷ್ಟ್ರದಲ್ಲಾಗಿದೆ. ಅದುವೇ ನಮ್ಮ ಭಾಗ್ಯ! ಅದುವೇ ಸಂಪತ್ತು.
Sadyojath 
#ದೇವಸಖಃ_ಕುಬೇರ

August 6, 2022

ಸಂಬಂಧಗಳು ಕಾಣೆಯಾಗಲಿವೆ..

ನಿಮಗೆ ಗೊತ್ತಾ ?
ಮುಂದೆ ಬರುವ ವರ್ಷಗಳಲ್ಲಿ ನಮ್ಮ ಮನೆಗಳಿಂದ ಕೆಲವು ಸಂಬಂಧಗಳು ಕಾಣೆಯಾಗಲಿವೆ.
(ಈಗಾಗಲೇ ಕೆಲವು ಮನೆಗಳಲ್ಲಿ ಕಾಣೆಯಾಗಿದೆ)

ಅಣ್ಣ - ಅತ್ತಿಗೆ

ಮೈದುನ - ನೆಗೆಣ್ಣಿ (ಓರಗಿತ್ತಿ)

ಚಿಕ್ಕಪ್ಪ - ಚಿಕ್ಕಮ್ಮ

ಸೋದರತ್ತೆ - ಮಾವ

ಮಾಮ - ಮಾಮಿ

ಸೋದರಳಿಯ - ಸೊಸೆ 

ಇತ್ಯಾದಿ ಸಂಬಂಧಗಳು ನಮ್ಮ ಮನೆಗಳಿಂದ ಶಾಶ್ವತವಾಗಿ ಕಾಣೆಯಾಗಲಿವೆ.

ಈಗಾಗಲೇ ಬರೀ ಎರಡು - ಎರಡೂವರೆ ಜನರ ಕುಟುಂಬಗಳು ಮಾತ್ರ ನಿಮಗೆ ನೋಡಲು ಸಿಗ್ತಾ ಇವೆ. ಪರಿಸ್ಥಿತಿ ನಾನು ಹೇಳುವುದಕ್ಕಿಂತ ಹೆಚ್ಚಾಗಿ ಇನ್ನೂ ಕೆಡಲಿದೆ

ಅಮ್ಮನ ಸ್ಥಾನದಲ್ಲಿ ನಿಂತು ನಮ್ಮನ್ನು ನೋಡಿಕೊಳ್ಳುವ ಪ್ರೀತಿಯ ಅಕ್ಕ ಇರಲ್ಲ,

ನಾನಿದ್ದೇನೆ ಅಂತ ಹೆಗಲ ಮೇಲೆ ಕೈ ಹಾಕಿ ಧೈರ್ಯ ಕೊಡುವ ಅಣ್ಣ ಇರಲ್ಲ,

ಕಾಟ ಕೊಡುವ ಚಿಕ್ಕ ತಮ್ಮ ಇರಲ್ಲ,

ಮನೆಯಲ್ಲಿ ಮಗುವಂತೆ ನೋಡಿಕೊಳ್ಳುವ ಅತ್ತಿಗೆ ಇರಲ್ಲ,

ರಾತ್ರಿ ತಡವಾಗಿ ಬಂದು ಅಪ್ಪನಿಗೆ ಅಣ್ಣನಿಗೆ ಹೇಳಬೇಡ ಅಂತ ಕಾಟ ಕೊಡುವ ಮೈದುನ ಇರಲ್ಲ,

ಅತ್ತಿಗೆ ಮಾಡಿದ್ದನ್ನು ಕಿವಿ ಚುಚ್ಚುವ ನಾದಿನಿ ಇರಲ್ಲ,

ವರನಿಗೆ ಅಣ್ಣ, ತಮ್ಮ, ಅಕ್ಕ, ತಂಗಿ ಇರದ ಮನೆ ಹುಡುಕುವ ಕಷ್ಟ ಮಗಳ ಅಪ್ಪ ಅಮ್ಮನಿಗೆ ಇರಲ್ಲ,

ಒಬ್ಬಳೇ ಮಗಳು ಸೊಸೆಯಾಗಿ ಬರಲಿಲ್ಲ ಅಂದ್ರೆ ನಮ್ಮ ಬಡ್ಡಿಮಗನಿಗೆ ಎಲ್ಲಾ ಆಸ್ತಿ ಸಿಗಲ್ಲ ಅಂತ ಚಿಂತೆ ಮಾಡುವ ಅಗತ್ಯ ಇರಲ್ಲ,

ಸೊಸೆ ಯಾವಾಗಲೂ ಒಬ್ಬಂಟಿಯೇ,

ಅವಳಿಗೆ ಕಾಟ ಕೊಡುವ ನಾದಿನಿ ಎಲ್ಲಿ?

ಪ್ರತಿಯೊಂದರಲ್ಲೂ ಪೈಪೋಟಿ ಕೊಡುವ ಓರಗಿತ್ತಿ ಎಲ್ಲಿ?

ತವರಿನಲ್ಲಿ ಅಪ್ಪ ಅಮ್ಮ ಯಾವಾಗಲೂ ಒಬ್ಬಂಟಿಗಳೇ,

ರಾಖಿ ಕಟ್ಟಲು ಊರಿನಿಂದ ತಪ್ಪದೇ ಬರುತ್ತೇನೆಂದು ಹೇಳುವ ಅಣ್ಣ ತಮ್ಮ ಎಲ್ಲಿ?

ತನ್ನ ಮಗನಿಗೆ ಹೆಚ್ಚು ಮಾರ್ಕ್ಸು ಬಂತೆಂದು ಅಪ್ಪನ ಹತ್ತಿರ ಫಿಟ್ಟಿಂಗು ಇಡುವ ಸೋದರತ್ತೆ ಎಲ್ಲಿ?

ಮೊದಲು ಹೇಳಿದಂತೆ ಕೆಲವೇ ವರ್ಷಗಳಲ್ಲಿ ಈ ಸಮಯ ಬರ್ತಾ ಇದೆ.

ಈಗ ನಡೆಯುತ್ತಾ ಇರುವ "ಒಂದೇ ಮಗು ಸಾಕಪ್ಪಾ, ಅದನ್ನೇ ಒಳ್ಳೆ ಶಾಲೆಗೆ ಕಳಿಸಿ, ಚೆನ್ನಾಗಿ ಓದಿಸಿದರೆ ಬದುಕು ಸಾರ್ಥಕ" ಅನ್ನೋ ಗ್ರೇಟ್ ಇಂಡಿಯನ್ ಫ್ಯಾಷನ್ ಈಗ ಮನೆ ಮನೆಯಲ್ಲಿ ಜನಪ್ರಿಯ ಆಗಿದೆ. ಅದರೊಟ್ಟಿಗೆ ಬರೀ ನಾನು, ನನ್ನದು, ನಾನು ಮಾತ್ರ ಅನ್ನೋ ಮನೋಭಾವ ವ್ಯಾಪಕವಾಗಿ ಹಬ್ಬುತ್ತಾ ಇದೆಯಾ ಅಥವಾ ಈಗಾಗಲೇ ಮನೆ ಮನೆಗಳನ್ನು ತಲುಪಿದೆಯಾ?

ಕುಟುಂಬಗಳು, ಸಂಬಂಧಗಳು ನಾಶ ಆಗ್ತಾ ಇವೆ.

ಇಬ್ಬರೇ ಮಕ್ಕಳು ಇರುವ ಕುಟುಂಬಗಳೂ ಕಡಿಮೆ ಆಗ್ತಾ ಇವೆ 

ಮೊದಲು ಚಿಕ್ಕ ಚಿಕ್ಕ ಮನೆಗಳಲ್ಲೂ ಸಹ ಕೂಡು ಕುಟುಂಬಗಳು, ದೊಡ್ಡ ಪರಿವಾರಗಳು ಆರಾಮಾಗಿ ನಗ್ತಾ ನಗ್ತಾ ಜೀವನ ನಡೆಸಿದ್ದು ಹೌದಲ್ವಾ? ಈಗ ದೊಡ್ಡ ದೊಡ್ಡ ಮನೆಗಳಲ್ಲಿ ಎರಡೂವರೆ ಮೂವರು ಜನ ಇರುವುದೇ ಒಂದು ದೊಡ್ಡಸ್ತಿಕೆ ಆಗಿಬಿಟ್ಟಿದೆ.

ನಾವು ನಮಗೆ ಸಾಕಲು ಕಷ್ಟ ಆಗುತ್ತೆ ಅಂತ ಒಂದೇ ಮಗು ಹೆತ್ತು ಮುಂದೆ (ನಾವಿಬ್ಬರೂ ಹೋದ ಮೇಲೆ) ಅದಕ್ಕೆ ಕಷ್ಟ ಸುಖ ಹೇಳಿಕೊಳ್ಳಲು ಒಬ್ಬರೂ ಇಲ್ಲದಂತೆ ಮಾಡ್ತಾ ಇದೀವಿ ಅಂತ ನಮಗೆ ಅನ್ನಿಸೋಲ್ವಾ?
 
ಹೀಗೆ ಅನ್ನಿಸದೇ ಇರೋರು ಕೆಲವರು ಜನಸಂಖ್ಯೆ ನಿಯಂತ್ರಣ ಕಾನೂನು ಯಾವಾಗ ಬರುತ್ತೆ? ನಮ್ಮ ಪರ್ಸಂಟೇಜು ಕಡಿಮೆ ಆಗ್ತಾ ಇದೆ ಅಂತ ಕೇಳ್ತಾ ಇದ್ದಾರಂತೆ.
ಜಂಗಮಾಮೃತ 
ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ