’ಇಂಗು’ ರಾಮಠದೇಶದ ಕೊಡುಗೆ !
ಇಂಗು ಅಥವಾ ಹಿಂಗು ಎಂದು ಕರೆಯಲಾಗುವ ಪದಾರ್ಥವೊಂದು ಮೂಲತಃ ಇರಾನ್ - ಪರ್ಷಿಯಾ ಮೂಲದ ಫೆರುಲಾ ತಳಿಗೆ ಸೇರಿದೆ. ಅಸಾಫೋಟಿಡಾ ಎಂದು ಆಂಗ್ಲ ಭಾಷೆಯಲ್ಲಿ ಕರೆಸಿಕೊಳ್ಳುವ ಈ ಪದಾರ್ಥ ಕಚ್ಚಾ ಸ್ಥಿತಿಯಲ್ಲಿದ್ದಾಗ ಕಟುವಾದ, ಅಹಿತಕಾರಿ ವಾಸನೆಯನ್ನು ಹೊಂದಿರುತ್ತದೆ, (ಕೆಟ್ಟ ವಾಸನೆ). ಆದರೆ ಶುದ್ಧೀಕರಿಸಿ ಅಡಿಗೆಯಲ್ಲಿ ಬಳಸಿದಾಗ, ಅದು ಪರಿಮಳವನ್ನು ಬೀರುತ್ತದೆ. ಈ ಮಸಾಲೆ ಪದಾರ್ಥ ಜೀರ್ಣಕ್ರಿಯೆಗೆ ಸಹಕಾರಿಯಾಗಿ, ಆಹಾರದಲ್ಲಿ ವ್ಯಂಜನವಾಗಿ ಹಾಗೂ ಉಪ್ಪಿನಕಾಯಿಗಳಲ್ಲಿಯೂ ಬಳಸಲಾಗುತ್ತದೆ. ಇದರ ವಾಸನೆಯು, ಬೇಯಿಸದಿದ್ದಾಗ ಎಷ್ಟು ಕಟುವಾಗಿರುತ್ತದೆಂದರೆ ಅದನ್ನು ಗಾಳಿ ಆಡದ ಡಬ್ಬದಲ್ಲಿಡಬೇಕಿರುತ್ತದೆ, ಇಲ್ಲದಿದ್ದರೆ ಅದರ ಪರಿಮಳ ಸಮೀಪದ ಇತರ ಮಸಾಲೆ ಪದಾರ್ಥಗಳನ್ನು ಕಲುಷಿತಗೊಳಿಸಬಹುದು. ಆದಾಗ್ಯೂ, ಎಣ್ಣೆ ಅಥವಾ ತುಪ್ಪದಲ್ಲಿ ಬಿಸಿ ಮಾಡಿದಾಗ ಅದರ ವಾಸನೆ ಹಾಗೂ ರುಚಿಯು ಮತ್ತಷ್ಟು ಸೌಮ್ಯವಾಗಿ ಹಾಗೂ ಹಿತಕರವಾಗುತ್ತದೆ.
ಇಂಗು ಮಾನವನ ಅಜೀರ್ಣಕಾರಕ ಬೆಳವಣಿಗೆಯನ್ನು ತಡೆಹಿಡಿದು, ವಾಯುಬಾಧೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇನ್ನು ಇಂಗು ನಾಡಿಕ ಅಂತ ಒಂದಿದೆ. ಅದೂ ಸಹ ಆಯುರ್ವೇದದ ಔಷಧ ತಯಾರಿಕೆಯಲ್ಲಿ ಬಳಸುವ ರಾಳದಂತಹದ್ದು. ಇಂಗು ನಿರ್ಯಾಅಸ ಎಂದು ಸಹ ಈ ಎಂಗನ್ನು ಕರೆಯಲಾಗುತ್ತಿದ್ದು, ಇಂಗು ಪತ್ರ, ಇಂಗುಪರ್ಣಿ ಎಮದೂ ಕರೆಯಲಾಗುತ್ತದೆ.
ಇನ್ನು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಇರಾನಿನಿಂದ ಭಾರತಕ್ಕೆ ತರಲಾಗಿದೆ. ಇವೆರಡೂ ಸಹ ಇರಾನಿಯನ್ನರ ಅತ್ಯಂತ ಪ್ರೀತಿಯ ಭೋಜ್ಯವಸ್ತು. ಇವುಗಳನ್ನು ಆ ಪ್ರದೇಶದಿಂದ ತಂದಿರುವ ಕಾರಣ ಮ್ಲೇಚ್ಛಖಂಡ ಅಥವಾ ನೀಚಭೋಜ್ಯವೆಂದು ಅವುಗಳಿಗೆ ಮಡಿವಂತಿಕೆ ಕಲ್ಪಿಸಲಾಗಿತ್ತು. ಇವೆರಡರಂತೆ ಇಂಗು ಸಹ ಆ ಪ್ರದೇಶದಿಂದಲೇ ಭಾರತವನ್ನು ಪ್ರವೇಶಿಸಿದ್ದರಿಂದ ಅದೂ ಸಹ ಮಡಿವಂತಿಕೆಯಿಂದಾಗಿ ದೂರವೇ ಇತ್ತು.
ಕೆಲವು ಪುರಾಣಗಳಲ್ಲಿ ಇಂಗನ್ನು ನಿಷೇಧಿಸಲಾಗಿದೆ. ಮಹಾಭಾರತದ ವನಪರ್ವದ ನಲೋಪಾಖ್ಯಾನದಲ್ಲಿ ಮ್ಲೇಚ್ಛ ಜಾತಿಯ ಕಾಡುಜನರ ಕುರಿತು ಹೇಳುತ್ತಾ ಅಲ್ಲಿ ತಿಂದುಕ ಇಂಗುದ ಮುಂತಾದ ಮರಗಳಿದ್ದವು ಎಂದು ಹೇಳಲಾಗಿದೆ. ಇದು ಇಂಗುವಿನಂತೆಯೇ ಆಯುರ್ವೇದ ಔಷಧಗಳಿಗೆ ಸಂಬಂಧಿಸಿದ ಪುತ್ರಂಜೀವ Roxburghii ಅಥವಾ Terminalia Catappa ಎನ್ನುವ ಪ್ರಬೇಧದ್ದು.
ಇನ್ನು ಭೀಷ್ಮಪರ್ವದ ೪೨ನೇ ಅಧ್ಯಾಯದಲ್ಲಿಯೂ ಅತ್ಯಂತ ಕೆಟ್ಟ ವಾಸನೆಯ ಇಂಗು ಎನ್ನುವುದಾಗಿ ಬರುತ್ತದೆ. ಭಾಗವತ ಪುರಾಣದ ೪ನೇ ಸ್ಕಂಧದಲ್ಲಿ ಇಂಗಿನ ವಿಷಯ ಬರುತ್ತದೆ. ಹರಿವಂಶದಲ್ಲಿಯೂ ಉಲ್ಲೇಖವಾಗಿದೆ. ಆದರೆ ಇಂಗು ನಿಷೇಧಿತವೆಂದು ಗುರುತಿಸಿಕೊಂಡರೂ ಈರುಳ್ಳಿ ಮತ್ತು ಬೆಳ್ಳುಳ್ಳಿಯಷ್ಟು ದೂಷಣೆಗೆ ಒಳಗಾಗಲಿಲ್ಲ. ಅತ್ರಿಸಂಹಿತೆಯಲ್ಲಿ ಇಂಗು, ಈರುಳ್ಳಿ, ಬೆಳ್ಳುಳ್ಳಿ ಅತಿ ಹೆಚ್ಚು ವರ್ಜ್ಯ ಎನ್ನಿಸಿಕೊಂಡಿದೆ. ಅದೇನೇ ಇರಲಿ, ಇವುಗಳ ಔಷಧೀಯ ಗುಣಗಳನ್ನು ಚರಕ ತನ್ನ ಸಂಹಿತೆಯಲ್ಲಿ ಆರುಸಲ ಪ್ರಸ್ತಾಪಿಸಿದರೆ ಸುಶ್ರುತ ೫೭ ಸಲ ಪ್ರಸ್ತಾಪಿಸಿದ್ದಾನೆ. ಅಲ್ಲದೇ ಹಲವು ಪುರಾತನ ಎಲ್ಲಾ ವೈದ್ಯರು ಗುರುತಿಸಿದ್ದರು. ಕಕ್ಕಾಯನ, ನಾರದ, ಆಂಗೀರಸ, ಕಪಿಲ ಮುಂತಾದ ಮಹರ್ಷಿಗಳು ಔಷಧೀಯ ವಸ್ತುವೆಂದೇ ಇದನ್ನು ಪರಿಗಣಿಸಿದ್ದರು.
ಇಂಗಿನ ಸಮಾನಾರ್ಥಕ ಪದವಾಗಿ ಸಹಸ್ರವೇದಿ,ಜತುಕ, ಬಲ್ಹೀಕ, ಹಿಙ್ಗು, ರಾಮಠ, ಬಾಹ್ಲೀಕ ಬಳಸಲಾಗಿದೆ. ಇನ್ನು ಅಮರದಲ್ಲಿ ಸಹಸ್ರವೇಧಿ ಜತುಕಂ ಬಾಲ್ಹೀಕಂ ಹಿಙ್ಗು ರಾಮಠಮ್ |
ತತ್ಪತ್ರೀ ಕಾರವೀ ಪೃಥ್ವೀ ಬಾಷ್ಪಿಕಾ ಕಬರೀ ಪೃಥುಃ|| ಎಂದು ಬಂದಿದೆ. ಪದಾರ್ಥ ವಿಭಾಗದಲ್ಲಿ ಇದು ಖಾದ್ಯದ ಸ್ಥಾನ ಪಡೆದು ಪ್ರಾಕೃತಿಕ ಖಾದ್ಯವೆನ್ನಿಸಿಕೊಂಡಿದೆ. ರಾಮಠದೇಶದಿಂದ ಬಂದಂತಹ ಸಸ್ಯ ಇದು ಎಂದು ವಾಚಸ್ಪತ್ಯದಲ್ಲಿ ಹೇಳಿದೆ. ಹಾಗಾದರೆ ರಾಮಠ ದೇಶವೆಂದರೆ ಯಾವುದು ? ಗೊತ್ತಿಲ್ಲ.
#ಆಯುರ್ವೇದದಲ್ಲಿ : ಚರಕ ಸಂಹಿತೆಯ ಸೂತ್ರಸ್ಥಾನ ೨೫ರಲ್ಲಿ "ಹಿಂಗು ನಿರ್ಯಾಸಃ ಛೇದನೀಯ ದೀಪನೀಯ ಅನುಲೋಮಿಕ ವಾತ ಕಫ ಪ್ರಶಮನಾನಾಂ" ಎನ್ನುತ್ತದೆ. "ಹಿಂಗೂಷ್ಣಂ ಪಾಚನಂ ರುಚ್ಯಂ ತೀಕ್ಷ್ಣಂ ವಾತ ಬಲಾಸನುತ್ ಶೂಲ ಗುಲ್ಮ ಉದರ ಆನಾಹ ಕೃಮಿಘ್ನಂ ಪಿತ್ಥ ವರ್ಧನಂ" ಎಂದು ದೇಹದಲ್ಲಿನ ಚಯಾಪಚಯ, ಜೀರ್ಣ ಕ್ರಿಯೆಗೆ ಸಹಾಯಕ ಎಂದು ಭಾವಪ್ರಕಾಶ ನಿಘಂಟಿನಲ್ಲಿ ವಿವರಿಸಿದೆ. ಇನ್ನು "ಹೃದ್ಯಂ ಹಿಂಗೂ ಕಟೂಷ್ಣಂ ಚ ಕೃಮಿ ವಾತ ಕಫ ವಿಬಂಧ ಆಧ್ಮಾನ ಶೂಲ ಗುಲ್ಮ ನಾಶಿತ್ವಂ ಚಕ್ಷುಷ್ಯಂ" ಇಂಗು ಸುವಾಸನೆ ಭರಿತವಾಗಿದ್ದು, ವಾತ, ಕಫ, ಹೊಟ್ಟೆನೋವು ಮುಂತಾದವಕ್ಕೆ ಔಷದವಾಗಿದೆ ಎನ್ನುವುದಾಗಿ ರಾಜ ನಿಘಂಟುವಿನಲ್ಲಿ ಹೇಳಿದೆ. ’ಹಿಙ್ಗೂಷ್ಣಂ ಪಾಚನಂ ರುಚ್ಯಂ ತೀಕ್ಷ್ಣಂ ವಾತವಲಾಸಹೃತ್| ರಸೇ ಪಾಕೇ ಚ ಕಟುಕಂ ಸ್ನಿಗ್ಧಞ್ಚ ವಹ್ನಿದೀಪನಮ್ | ಶೂಲಗುಲ್ಮೋದರಾನಾಹಕೃಮಿಘ್ನಂ ಪಿತ್ತವರ್ದ್ಧನಮ್ ||’ ಎಂದು ಭಾವಪ್ರಕಾಶದಲ್ಲಿ ಹೇಳಲಾಗಿದೆ. ಅಂದರೆ ಔಷಧೀಯವಾಗಿ ಸಾಮಾನ್ಯವಾಗಿ ಹೆಚ್ಚಿನ ಕಡೆ ಇದನ್ನು ಬಳಸಿದ್ದು ಕಂಡು ಬರುತ್ತದೆ.
ಹಿಂಗು ವಾತಕಫಾನಾಹ ಶೂಲಘ್ನಂ ಪಿತ್ಥ ಕೋಪನಂ || ಕಟುಪಾಕರಸಂ ರುಚ್ಯಂ ದೀಪನಂ ಪಾಚನಂ ಲಘು - ಅಷ್ಟಾಂಗ ಹೃದಯ ಸೂತ್ರಸ್ಥಾನ ೬ನೇ ಅಧ್ಯಾಯದ ೧೫೨ರಲ್ಲಿ ಬರುತ್ತದೆ.
ಚರಕ ಸಂಹಿತೆಯ ಸೂತ್ರಸ್ಥಾನ ೨೭ರಲ್ಲಿ "ವಾತ ಶ್ಲೇಷ್ಮ ವಿಬಂಧಘ್ನಂ ಕಟೂಷ್ಣಂ ದೀಪನಂ ಲಘು |
ಹಿಂಗು ಶೂಲಪ್ರಶಮನಂ ವಿದ್ಯಾತ್ ಪಾಚನರೋಚನಮ್ || ೨೯೯|| ಎಂದು ವಿವರಿಸಲ್ಪಟ್ಟಿದೆ. ಇಲ್ಲೆಲ್ಲ ಹೇಳುವುದು ಮುಖ್ಯವಾಗಿ ದೇಹದಲ್ಲಿನ ಜೀರ್ಣವ್ಯವಸ್ಥೆ ಸರಿಯಾಗುವಂತೆ, ಮತ್ತು ವಾತ ಕಫ ಪಿತ್ತವೇ ಮೊದಲಾದ ರೋಗಗಳು ನಿವಾರಣೆಯಾಗುತ್ತವೆ ಎಂದು.
ಮಹಾಭಾರತದ ಅನುಶಾಸನಪರ್ವ ೯೧ನೇ ಅಧ್ಯಾಯದಲ್ಲಿ ಒಂದು ಸನ್ನಿವೇಶ ಹೀಗಿದೆ. ನಿಮಿಯೇ, ಇವರೆಲ್ಲರೂ ವಿಶ್ವೇದೇವತೆಗಳು. ಹೀಗೆ ನಿನಗೆ ಸನಾತನರಾದ ವಿಶ್ವೇದೇವತೆಗಳ ಹೆಸರುಗಳನ್ನು ಹೇಳಿದ್ದೇನೆ. ಮಹಾ ಭಾಗ್ಯಶಾಲಿಗಳಾದ ಇವರೆಲ್ಲರೂ ಕಾಲದ ಗತಿಯನ್ನು ತಿಳಿದವರಾಗಿದ್ದಾರೆ. ಈಗ ನಾನು ನಿನಗೆ ಶ್ರಾದ್ಧದಲ್ಲಿ ನಿಷಿದ್ಧವಾದ ವಸ್ತುಗಳನ್ನು ಹೇಳುತ್ತೇನೆ. ಎನ್ನುವ ಮಾತು ಬರುತ್ತದೆ ಅಲ್ಲಿ . . .
ಹಿಂಗುದ್ರವ್ಯೇಷು ಶಾಕೇಷು ಪಲಾಣ್ಡುಂ ಲಸುನಂ ತಥಾ |
ಸೌಭಾಞ್ಜನಃ ಕೋವಿದಾರಸ್ತಥಾ ಗೃಞ್ಜನಕಾದಯಃ || ೩೯ ||
ಪಿತೃಕಾರ್ಯದ ದಿನ ಮತ್ತು ಶ್ರಾದ್ಧದಲ್ಲಿ ಒಗ್ಗರಣೆಹಾಕುವ ಪದಾರ್ಥಗಳಲ್ಲಿ ಹಿಂಗನ್ನು ಉಪಯೋಗಿಸಬಾರದು. ತರಕಾರಿಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ, ನುಗ್ಗೇಕಾಯಿ, ಕೆಂಚನಾಳದ ಕಾಯಿ, ಗಜ್ಜರಿ ಅಥವಾ ಗಾಜಿನ ಗೆಡ್ಡೆ ಮುಂತಾದವನ್ನು ಉಪಯೋಗಿಸಬಾರದು.
ಬೂದುಗುಂಬಳ, ಸೋರೇ ಮುಂತಾದುವು, ಕಪ್ಪುಬಣ್ಣದ ಉಪ್ಪು, ಅಪ್ರೋಕ್ಷಿತವಾದ (ಸಂಸ್ಕಾರಹೀನವಾದ ಅಂದರೆ ತೊಳೆಯದೇ ಇರುವ) ಪದಾರ್ಥಗಳು, ಕಪ್ಪುಜೀರಿಗೆ, ನಿಂಬುಪ್ಪು, ಶೀತಪಾಕೀ ಎಂಬ ತರಕಾರಿ, ಮೊಳಕೆಬಂದಿರುವ ಧಾನ್ಯಗಳು, ಶೃಂಗಾಟಕವೇ ಮೊದಲಾದ ಬಳ್ಳಿಗಳು ಇವುಗಳನ್ನು ಶ್ರಾದ್ಧದಲ್ಲಿ ಉಪಯೋಗಿಸಬಾರದು. ಹೀಗೇ ಅಲ್ಲಿ ಅನೇಕ ಪದಾರ್ಥಗಳನ್ನು ಹೇಳಲಾಗುತ್ತದೆ.
#ಘಮ_ಘಮ_ಇಂಗು
ಕೃಪೆ: ಸದ್ಯೋಜಾತರದ್ದು