October 15, 2025

ವೇದಗಳಲ್ಲಿ ವೀರಭದ್ರ

ವೇದ ವೇದಾಂತೋಕ್ತ ವೀರಭದ್ರ
ರುದ್ರಪುತ್ರನಾದ ವೀರಭದ್ರನು ವೇದವಾಹ್ಮಯದಲ್ಲಿ ಕಾಣಿಸಿಕೊಂಡವರಲ್ಲಿ ಒಬ್ಬನು. ತನ್ನ ತಂದೆಯ ಸಾಂಸ್ಕೃತಿಕ ಕ್ರಾಂತಿಯನ್ನು ಮುಂದುವರಿಸಿಕೊಂಡು ವಿಜಯ ದತ್ತ ಸಾಗಿದಾತ, ವಿಶ್ವಮಾನವ ನಿಲವಿಗೆ ನಿಲುಕದಾತ. ಮಾನವೀಯ ಮೌಲ್ಯವನ್ನು ಮನವರಿಕೆ ಮಾಡಿಕೊಂಡು ಅದನ್ನು ಪ್ರಯೋಗದಲ್ಲಿ ತಂದಾತ, ವಿಶ್ವವಿಶಾಲ ಹೃದಯಿ ಸಕಲ ಜೀವದಯಾಮಯಿ, ಶಿವ ಪಾರಮ್ಯಕ್ಕಾಗಿ ಹೋರಾಡಿದಾತ. ಆತನ ಜೀವನ ಶಿವತ್ವಕ್ಕಾಗಿ ಶಿವನಿಗಾಗಿ ಮೀಸಲಾಗಿತ್ತು.

“ಸ ವೀರೋ ದಕ್ಷ ಸಾದನೋ ವಿಯಸ್ತಂಭ ರೋದಸೀ"
                                                 -ಋಗ್ವೇದ

ದಕ್ಷನನ್ನು ಶಿಕ್ಷಿಸಿದ ಆ ವೀರಭದ್ರನು ಭೂಮ್ಯಾಕಾಶಗಳನ್ನು ಸ್ತಂಭಿಸಿದನು.

“ ನಮಃ ಶೂರಾಯ ಚಾವಭಿಂದತೇ ಚ ”
                                     -ಯಜುರ್ವೇದ

'ದಕ್ಷಯಜ್ಞದಲ್ಲಿ ಭಾಗವಹಿಸಿದವರ ಶಿರಚ್ಛೇದನ ಮಾಡಿದ ಶೂರನಾದ ವೀರೇಶನಿಗೆ ನಮಸ್ಕಾರ!' "ಅಪಾವೃಣೋ: ಶರಭಾಯ ಋಷಿಬಂಧವೇ" ಋಷಿಬಂಧುವಾದ ಶರಭಾವತಾರವನ್ನು ಓಲೈಸುವೆ ಎಂದು ಅದೇ ಋಗ್ವೇದ ತನ್ನ ಒಲವನ್ನು ತೋರಿದೆ. ವೀರಾವತಾರ ಶರಭಾವತಾರಗಳ ನಿರೂಪಣದೊಡನೆ 'ವಿಯಸ್ತಂಭ ರೋದಸೀ' ಎಂಬುದರಿಂದ ಆತನ ವಿಶ್ವ ವಿಕ್ರಮತ್ವವನ್ನೂ ವ್ಯಾಪ್ತಿತ್ವವನ್ನೂ ಉಗ್ಗಡಿಸಲಾಗಿದೆ.

ಇವಲ್ಲದೆ ವೀರೇಶನಿಗೆ ಮೀಸಲಾದ ' ಶರಭೋಪನಿಷತ್' ಒಂದಿದೆ. ಇದು ನೂರೆಂಟು ಉಪನಿಷತ್ತುಗಳಲ್ಲಿ ಐವತ್ತೆರಡನೆಯದು. ಇದರಲ್ಲಿ ವೀರೇಶನ ವೈಶಿಷ್ಟ್ಯ ವರ್ಣನೆ ಇಂತಿದೆ:

"ಅಥ ಹೈನಂ ಪೈಪ್ಪಲಾದೋ ಬ್ರಹ್ಮಾಣಮುವಾಚ ಭೋ ಭಗವನ್
ಬ್ರಹ್ಮವಿಷ್ಣುರುದ್ರಾಣಾಂ ಮಧ್ಯೆ ಕೋ ವಾ ಅಧಿಕತರೋ
ಧೈಯಃ ಸ್ಯಾತ್ತತ್ತ್ವಮೇವ ನೋ ಬ್ರೂಹೀತಿ |
ತನ್ನೈ ಸ ಹೋವಾಚ ಪಿತಾಮಹಶ್ಚ ಹೇ ಪೈಪ್ಪಲಾದ ಶೃಣು ವಾಕ್ಯಮೇತತ್ |"

ಪೈಪ್ಪಲಾದಮುನಿ ತಾನೊಮ್ಮೆ ಬ್ರಹ್ಮನನ್ನು ಬ್ರಹ್ಮ ವಿಷ್ಣು ರುದ್ರರ ಮಧ್ಯದಲ್ಲಿ ಮುಮ್ಮಿಗಿಲಾಗಿ ಧ್ಯೇಯನು ಯಾವನೆಂದು ಕೇಳುವನು. ಅದಕ್ಕೆ ಆತನಿಗೆ ಪಿತಾಮಹನು ಹೀಗೆ ಹೇಳುವನು :

ಸ ಏಕಃ ಶ್ರೇಷ್ಠಶ್ಚ ಸರ್ವಶಾಸ್ತಾ ಸ ಏವ ವರಿಷ್ಠಶ್ಚ |
ಯೋ ಘೋರಂ ವೇಷಮಾಸ್ಥಾಯ ಶರಭಾಖ್ಯಂ ಮಹೇಶ್ವರಃ |
ನೃಸಿಂಹಂ ಲೋಕಹಂತಾರಂ ಸಂಜಘಾನ ಮಹಾಬಲಃ || ೪ ||

ಹರಿಂ ಹರಂತಂ ಪಾದಾಭ್ಯಾಮನುಯಾಂತಿ ಸುರೇಶ್ವರಾಃ | ಮಾವಧೀಃ ಪುರುಷಂ ವಿಷ್ಣುಂ ವಿಕ್ರಮಸ್ವ ಮಹಾನಸಿ || ೫ ||

ಕೃಪಯಾ ಭಗವಾನ್ವಿಷ್ಣುಂ ವಿದದಾರ ನಖ್ಯೆಃ ಖರೈಃ |
ಚರ್ಮಾಂಬರೋ ಮಹಾವೀರೋ ವೀರಭದ್ರೋ ಬಭೂವ ಹ || ೬ ||

ಸ ಏಕೋ ರುದ್ರೋ ಧೈಯಃ ಸರ್ವೇಷಾಂ ಸರ್ವಸಿದ್ಧಯೇ |
ಯೋ ಬ್ರಹ್ಮಣಃ ಪಂಚವಕ್ರಹಂತಾ ತನ್ನೈ ರುದ್ರಾಯ ನಮೋ ಅಸ್ತು || ೭ ||

ಭಯಂಕರವಾದ ವೇಷವನ್ನು ತೊಟ್ಟು ನಿಂತ ಶರಭನೆಂಬ ಮಹಾಬಲವುಳ್ಳ ಮಹೇಶ್ವರನು ಲೋಕದ ಜನರನ್ನು ಕೊಂದು ತಿನ್ನುವ ನರಸಿಂಹನನ್ನು ಕೊಲ್ಲುವನು. ನರಸಿಂಹಾವತಾರ ನಾಲ್ಕನೆಯದು. ಮತ್ಸ, ಕೂರ್ಮ, ವರಾಹಾವತಾರಗಳು ಅದರ ಹಿಂದಿನವು. ವರಾಹ ಜನ್ಮದಿಂದ ನರಸಿಂಹ ಜನ್ಮಕ್ಕೆ ಬರುವಲ್ಲಿ ಪ್ರಾಕೃತಿಕ ಸರ್ಜನ ಸಹಜಕತೆಯಿದೆಯೇನೋ ? ಈ ದೃಷ್ಟಿಯಿಂದಲೂ ಕಾಲಮಾನ ಪುರಾತನವಾಗಿಯೇ ನಿಲ್ಲುತ್ತದೆ. ನರಸಿಂಹ ಲೋಕಹಂತಾರ ಎಂಬುದನ್ನು ನೆನೆಯಬೇಕು.  ರಕ್ತಮಾಂಸಗಳನ್ನು ತಿನ್ನುವ ಚಟವುಳ್ಳ ನೃಸಿಂಹನನ್ನು ಶರಭನು ಕೊಲ್ಲುವನು. ಮತ್ತು ಆತನ ತೊಗಲನ್ನೆ ಉಡುಗೆಯನ್ನಾಗಿಸಿಕೊಳ್ಳುವನು. ಆತನೇ ಮಹಾವೀರನಾದ ವೀರಭದ್ರನು. ಆತನೊಬ್ಬನೆ ಶ್ರೇಷ್ಠನು, ವರಿಷ್ಠನು; ಸರ್ವಶಾಸಕನು. ಆತನನ್ನು 'ಶರಭರುದ್ರ'ನೆಂದು ಹೇಳುವರು, ಆತನೇ ಸರ್ವಸಿದ್ದಿಗಾಗಿ ಸರ್ವರಿಗೆ ಧ್ಯೇಯನಾಗಿದ್ದಾನೆ. ಅಹಂಕಾರಿಯಾದ ಬ್ರಹ್ಮನ ಐಯ್ದನೆಯ ಮೊಗ(ತಲೆ)ವನ್ನು ಕತ್ತರಿಸಿದಾತನು ಆತನೆ! ಆತನಿಗೆ ನಮಸ್ಕಾರ ! 

ಕೃಪೆ: ಚಿಗುರಿಟ್ಟ ಚಿಂತನ 
ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ

October 4, 2025

ನಾಗಕುಲ ರಕ್ಷಿಸಿದ ಮಾನಸಾದೇವಿ

ಶಿವ ಪಾರ್ವತಿಗೆ 3 ಜನ ಹೆಣ್ಣು ಮಕ್ಕಳು..

1 : ಮೊದಲ ಮಗಳು  "ಅಶೋಕ ಸುಂದರಿ"
2 : ಎರೆಡನೆಯವಳು  "ಜ್ಯೋತಿ"
3 :ಮೂರನೇ ಮಗಳು "ಮಾನಸ" 

ಇದರಲ್ಲಿ ಮಾನಸದೇವಿ ಪಾತ್ರವು ತುಂಬಾ ಮುಖ್ಯವಾದದ್ದು ಹಾಗೂ ಮನಸದೇವಿಯು ತುಂಬಾ ಕಷ್ಟವನ್ನು ಪಡಬೇಕಾದ ಸಂಧರ್ಭ ಕೂಡ ಇತ್ತು..

ಮಾನಸ ದೇವಿಯು 2 ಉದ್ದೇಶವನ್ನು ಪೂರ್ಣಗೊಳಿಸಲು ಜನ್ಮ ತಾಳಿದವಳು 

1) ಒಂದನೇಯ ಉದ್ದೇಶ..
 ಸಮುದ್ರ ಮಂಥನದ ಹಾಲಹಲ ವಿಷವನ್ನು ಶಿವ ಸೇವಿಸಿದಾಗ ಆ ವಿಷದ ಪ್ರಭಾವವನ್ನು ಕಡಿಮೆ ಮಾಡಲು..

2) ಎರೆಡನೆ ಉದ್ದೇಶ.. 
ದ್ವಾಪರಯುಗದ ಮಹಾಭಾರತದ ಜನಮೇಜಯನ ನಾಗಬಲಿ ಯಜ್ಞವನ್ನು ನಿಲ್ಲಿಸಿ. ಇಡಿ ನಾಗಲೋಕದ ನಾಗಗಳನ್ನು ರಕ್ಷಣೆ ಮಾಡುವ ಉದ್ದೇಶ.

ಮಾನಸದೇವಿಯ ಜನ್ಮದ ಬಗ್ಗೆ ತಿಳಿಯೋಣ ಈಗ

ಸಮುದ್ರ ಮಂಥನದಲ್ಲಿ ಬಂದಂತಹ ಭಯಂಕರ ಹಾಲಹಲ ವಿಷವು ಸ್ರಷ್ಟಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಆ ವಿಷವನ್ನು ಶಿವನು ತನ್ನೊಳೋಗೆ ಸೇವಿಸುತ್ತಾನೆ..
ಪಾರ್ವತಿ ದೇವಿಯು ಆ ವಿಷವು ಶಿವನ ಗಂಟಲಿನಲ್ಲಿ ನಿಲ್ಲುವ ಹಾಗೆ ಮಾಡುತ್ತಾಳೆ. ಆದರೂ ಕೂಡ ಆ ವಿಷವು ಶಿವನ ಮೇಲೆ ತುಂಬಾ ನೋವಿನ ಪರಿಣಾಮ ಬೀರುತ್ತಾ ಇರುತ್ತದೆ..

 "ಕಶ್ಯಪ ಋಷಿ"
ಇದನ್ನು ಅರ್ಥ ಮಾಡಿ ಕೊಂಡಂತ " ಕಶ್ಯಪ ಋಷಿ "
ಒಂದು ಯಜ್ಞವನ್ನು ಮಾಡುತ್ತಾರೆ. ಶಿವನ ಕಷ್ಟ ದೂರ ಮಾಡಬೇಕು ಎಂದು ಯಜ್ಞವನ್ನು ಮಾಡುತ್ತಾ ಮನಸ್ಸಿನಲ್ಲಿ ಮಾನಸಿಕ ಕಲ್ಪನೆಯನ್ನು ಮಾಡುತ್ತಾರೆ. ಕಶ್ಯಪ ಋಷಿಯ ಮಾನಸಿಕ ಕಲ್ಪನೆಯಿಂದ ಒಂದು ಸುಂದರವಾದ ಯುವತಿಯ ವಿಗ್ರಹವು ರಚನೆ ಆಗುತ್ತದೆ.

ಶಿವನ ತೇಜಸ್ಸಿನಿಂದ ಸುಬ್ರಹ್ಮಣ್ಯ ಸ್ವಾಮಿಯ ಜನ್ಮವಾಗುವ ಸಮಯದಲ್ಲಿ ಅದರ ಒಂದು ಭಾಗ ತೇಜಸ್ಸು ಹೋಗಿ..
ಕಶ್ಯಪ ಋಷಿಯ ಮಾನಸಿಕ ಕಲ್ಪನೆಯಿಂದ ರಚನೆಯಾದ ಆ ವಿಗ್ರಹದ ಒಳಗೆ ಆ ತೇಜಸ್ಸು ಹೋಗಿ ಸೇರಿಕೊಂಡು ಆ ವಿಗ್ರಹಕ್ಕೆ ಜೀವ ಬರುತ್ತದೆ..

ನಂತರ ಆ ಹುಡುಗಿಯು ಕಶ್ಯಪ ಋಷಿಗೆ ನಮಸ್ಕರಿಸಿ ಋಷಿವರ್ಯ ನಾನು ಯಾರು ನನ್ನ ಜನ್ಮ ಯಾವ ಉದ್ದೇಶಕ್ಕಾಗಿ ಆಗಿದೆ ತಿಳಿಸಿ ಎನ್ನುತ್ತಾಳೆ..

ದೇವಿ ನಿಮ್ಮ ಜನ್ಮವು ಶಿವನ ಕೃಪೆಯಿಂದ ಆಗಿದೆ. ಶಿವನ ತೇಜಸ್ಸಿನಿಂದ ನಿಮ್ಮ ಜನ್ಮವಾಗಿದೆ ಹಾಗಾಗಿ ನೀವು ಶಿವನ ಪುತ್ರಿ..
ಹಾಗೆ ಶಿವನ ಕೃಪೆಯಿಂದ ನೀವು ನನ್ನ ಮಾನಸಿಕ ಕಲ್ಪನೆಯ ವಿಗ್ರಹ ರೂಪದಲ್ಲಿ ರಚನೆಯಾದ ಕಾರಣ ನಿಮ್ಮ ಹೆಸರು
 " ಮಾನಸ " ಎಂದು ಕಶ್ಯಪ ಋಷಿ ಹೇಳುತ್ತಾರೆ. 

ಋಷಿವರ್ಯ ನೀವು ನನ್ನ ಹೆಸರನ್ನು ನೀಡಿದಕ್ಕೆ ತುಂಬಾ ಧನ್ಯವಾದಗಳು ಹಾಗೆ ನನ್ನ ಜನ್ಮದ ಉದ್ದೇಶವನ್ನು ಕೂಡ ತಿಳಿಸಿ ನನ್ನನ್ನು ಮಾರ್ಗದರ್ಶನ ಮಾಡಿ ಎಂದು ಮಾನಸದೇವಿಯು ಕೇಳಿ ಕೊಳ್ಳುತ್ತಾಳೆ..

ದೇವಿ ಮಾನಸ ನಿಮ್ಮ ಜೀವನದ ಉದ್ದೇಶ ಸಮಯ ಬಂದಾಗ ನಿಮಗೆ ತಿಳಿಯುತ್ತದೆ.. ತಪಸ್ಸು ನಿಮ್ಮನ್ನು ನಿಮ್ಮ ಜೀವನದ ಉದ್ದೇಶದ ಕಡೆಗೆ ಕರೆದುಕೊಂಡು ಹೋಗುತ್ತದೆ ತಪಸ್ಸನ್ನು ಆಚರಿಸಿ ಎಂದು ಋಷಿ ಕಶ್ಯಪ ಹೇಳುತ್ತಾರೆ..

ಋಷಿ ಕಶ್ಯಪರು ಹೇಳಿದ ಹಾಗೆ ಮಾನಸ ದೇವಿಯು ತಪಸ್ಸು ಮಾಡುತ್ತಾಳೆ ಆ ತಪಸ್ಸಿನ ಫಲವಾಗಿ ಶಿವನು ಪ್ರತ್ಯಕ್ಷವಾಗಿ ಮಾನಸದೇವಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಕೈಲಾಸದಲ್ಲಿ ಮನಸದೇವಿಯು ತನ್ನ ತಾಯಿಯಾದ ಪಾರ್ವತಿಯನ್ನು ಭೇಟಿ ಆಗಿ ಸಂತೋಷದಿಂದ ಇರುತ್ತಾಳೆ 

ನಂತರ ಸಮುದ್ರ ಮಂಥನದ ಸಮಯದಲ್ಲಿ ಅದರಿಂದ ಬಂದಂತ ಹಾಲಹಲವಿಷವನ್ನು ಶಿವನು ಸೇವಿಸಿದಾಗ ಆ ವಿಷವು ಶಿವನ ಮೇಲೆ ಘೋರವಾಗಿ ಕೆಟ್ಟ ಪರಿಣಾಮ ಬೀರುತ್ತಾ ಇರುತ್ತದೆ..

ಅಮ್ಮ..ಏನಿದು ವಾತಾವರಣದಲ್ಲಿ ಯಾಕಿಷ್ಟು ಬದಲಾವಣೆ ಆಗುತ್ತಿದೆ ಎಂದು ಮಾನಸದೇವಿ ಪಾರ್ವತಿಯ ಬಳಿ ಕೇಳುತ್ತಾಳೆ..
ಪುತ್ರಿ.. ನಿನ್ನ ತಂದೆ ಮಹಾದೇವನ ಗಂಟಲಿನಲ್ಲಿ ಇರುವ ಹಾಲಹಲ ವಿಷವು ಅವರಿಗೆ ತುಂಬಾ ಕಷ್ಟವನ್ನು ಕೊಡುತ್ತಿದೆ ಹಾಗಾಗಿ ವಾತಾವರಣದಲ್ಲಿಯೂ ಈ ರೀತಿ ಬದಲಾವಣೆಗಳು ಆಗುತ್ತಿವೆ ಎಂದು ಪಾರ್ವತಿ ದೇವಿ ಹೇಳುತ್ತಾಳೆ..

 ( ಮಾನಸದೇವಿಯು ಶಿವನ ವಿಷದ ಪ್ರಭಾವವನ್ನು ಕಡಿಮೆ ಮಾಡುವ ಸಂಧರ್ಭ.)

ಆಗ ಮಾನಸದೇವಿಗೆ ತನ್ನ ಜೀವನದ ಉದ್ದೇಶವು ಅರ್ಥ ವಾಗುತ್ತದೆ.. ಏಕೆಂದರೆ ಅವಳು ಋಷಿ ಕಶ್ಯಪರ ಹತ್ತಿರ ತನ್ನ ಜೀವನದ ಉದ್ದೇಶ ಕೇಳಿದಾಗ..
  ಆಗ ಅವರು " ಜಗತ್ತಿನ ಕಷ್ಟ ಹರಿಸುವವನ ಕಷ್ಟವನ್ನು ನೀನು ಹರಿಸಬೇಕು ಎಂದು ಹೇಳಿದ್ದರು "..
ಹಾಗಾಗಿ ಮಾನಸದೇವಿಗೆ ಅರ್ಥ ವಾಗುತ್ತದೆ. ಈಗ ನಾನೆ ಶಿವನ ಕಷ್ಟವನ್ನು ದೂರ ಮಾಡಬೇಕು ನನ್ನ ಜೀವನದ ಉದ್ದೇಶ ಪೂರ್ಣ ಗೊಳಿಸಬೇಕು ಎಂದು.

ಮಾನಸದೇವಿಯು ಕೂಡಲೇ ಶಿವನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಮಂಡಿಯೂರಿ ಕುಳಿತುಕೊಂಡು ಶಿವನ ಗಂಟಲಿನಲ್ಲಿ ಶಿವನಿಗೆ ನೋವನ್ನು ಕೊಡುತ್ತಿರುವ ಹಾಲಹಲದ ವಿಷದ ಪ್ರಭಾವವನ್ನು ತನ್ನೊಳೋಗೆ ಹೀರಿಕೊಳ್ಳುತ್ತಾಳೆ. ಶಿವನ ಹಾಲಹಲದ ವಿಷದ ಪ್ರಭಾವವನ್ನು ಕೇವಲ ಅವರ ಮಗಳಾದ ಮಾನಸ ದೇವಿಗೆ ಮಾತ್ರ ಸಹಿಸಿಕೊಳ್ಳಲು ಸಾಧ್ಯವಾಗಿತ್ತು ಹಾಗಾಗಿ ಅವಳು ಆ ವಿಷದ ಪ್ರಭಾವವೆಲ್ಲ ತನ್ನೊಳೋಗೆ ತೆಗೆದುಕೊಳ್ಳುತ್ತಾಳೆ.

ತಾಯಿಯರ ಕಷ್ಟವನ್ನು ದೂರ ಮಾಡುವ ಸಾಮರ್ಥ್ಯ ಕೇವಲ ಸಂತಾನಕ್ಕೆ ಮಾತ್ರ ಇರುತ್ತದೆ ಎಂದು ಶಿವ ಹಾಗೂ ಪಾರ್ವತಿ ಮಾನಸದೇವಿಯನ್ನು ತುಂಬಾ ಹೆಮ್ಮೆಯಿಂದ ಹೋಗುಳುತ್ತಾರೆ

ಬ್ರಹ್ಮದೇವ ಹಾಗೂ ವಿಷ್ಣು ದೇವ
ಮಾನಸದೇವಿಗೆ  " ವಿಷಹರಿ "  ಎಂಬ ಹೆಸರನ್ನು ಯಾಕೆ ಕೊಟ್ಟರು ಅಂತ ನೋಡಿ..

ದೇವಿ ಮಾನಸ..ಹಾಲಹಲ ವಿಷವನ್ನು ಕೇವಲ ಶಿವನು ಮಾತ್ರ ಸೇವಿಸಬಲ್ಲರು ಅಂತಹ ವಿಷವನ್ನು ನೀವು ಸೇವಿಸಿ ಶಿವನ ಕಷ್ಟವನ್ನು ದೂರ ಮಾಡಿದ್ದೀರಾ. ಹಾಗಾಗಿ ಇನ್ನುಮುಂದೆ ಇಡಿ ಜಗತ್ತು ನಿಮ್ಮನ್ನು  "ವಿಷಹರಿ" ಎಂದು ಗುರುತಿಸುತ್ತಾರೆ ಎಂದು ಬ್ರಹ್ಮದೇವನು ಮಾನಸದೇವಿಗೆ "ವಿಷಹರಿ" ಎಂಬ ಹೆಸರನ್ನು ಕೊಟ್ಟು ವರದಾನ ಕೊಡುತ್ತಾರೆ..

ದೇವಿ ಮಾನಸ..ಇನ್ನುಮುಂದೆ ಭಕ್ತರ ಮೇಲೆ ನಿಮ್ಮ ದ್ರಷ್ಟಿ ಬಿದ್ದರೆ ಆ ಭಕ್ತರು ಎಲ್ಲ ರೀತಿಯ ಭಯಂಕರ ವಿಷದಿಂದ ಮುಕ್ತಾರಾಗುತ್ತಾರೆ ಎಂದು " ವಿಷ್ಣುದೇವ" ಕೂಡ ಮಾನಸದೇವಿಗೆ ವರವನ್ನು ಕೊಡುತ್ತಾನೆ.. 

ಈ ರೀತಿ ಮಾನಸದೇವಿಯು ಶಿವನನ್ನು ಹಾಲಹಲ ವಿಷದ ಪ್ರಭಾವದಿಂದ ಮುಕ್ತಗೊಳಿಸಿ.. ತನ್ನ ಜೀವನದ ಮೊದಲ ಉದ್ದೇಶವನ್ನು ಪೂರ್ಣಗೊಳಿಸುತ್ತಾಳೆ.

ಈಗ ಮಾನಸದೇವಿ ಜೀವನದ 2 ನೇಯ ಉದ್ದೇಶ ಬಗ್ಗೆ ತಿಳಿಯೋಣ ಬನ್ನಿ..

ನಂತರ ಶಿವನು ಮಾನಸದೇವಿಯ ಹತ್ತಿರ ಮಗಳೇ ನೀನು ಈಗ ನಿನ್ನ ಜೀವನದ ಇನ್ನೊಂದು ಮಹಾನ್ ಉದ್ದೇಶವನ್ನು ಪೂರ್ಣಗೊಳಿಸಬೇಕಾಗಿದೆ..ಎಂದು ಶಿವನು ಹೇಳುತ್ತಾನೆ..

ಸರಿ ಪಿತಾಶ್ರೀ ಈಗ ನಾನು ಏನು ಮಾಡಬೇಕು ಮಾರ್ಗದರ್ಶನ ಮಾಡಿ ಎಂದು ಮಾನಸದೇವಿ ಹೇಳುತ್ತಾಳೆ. 

ಮಗಳೇ ಮಾನಸ ನಾನು ನಿನಗೆ ಕೃಷ್ಣನ ಮಂತ್ರ ಹೇಳುತ್ತೇನೆ ನೀನು ಪುಷ್ಕರಕ್ಕೆ ಹೋಗಿ ಈ ಕೃಷ್ಣ ಮಂತ್ರ ಹೇಳುತ್ತಾ ತಪಸ್ಸು ಮಾಡು. ನಿನ್ನ ಜೀವನದ 2 ನೇಯ ಉದ್ದೇಶ ನಿನಗೆ ತಿಳಿಯುತ್ತದೆ ಎಂದು ಶಿವನು ಹೇಳುತ್ತಾನೆ. 

ಮಾನಸದೇವಿಯು ಸ್ವಲ್ಪ ಕೂಡ ತಡ ಮಾಡದೆ ಪುಷ್ಕರಕ್ಕೆ ಹೋಗಿ ಕೃಷ್ಣನ ವಿಗ್ರಹಕ್ಕೆ ಹೂವನ್ನು ಅರ್ಪಿಸಿ ಕೃಷ್ಣನ ಮಂತ್ರ ಹೇಳುತ್ತಾ ತಪಸ್ಸು ಮಾಡುತ್ತಾಳೆ.

ಈಕಡೆ ಕೈಲಾಸದಲ್ಲಿ ಶಿವ ಪಾರ್ವತಿ ಇಬ್ಬರು ಮಾನಸದೇವಿಯ ಮದುವೆಯ ಬಗ್ಗೆ ಮಾತಾಡಿ ಕೊಳ್ಳುತ್ತಾರೆ. ನಮ್ಮ ಮಗಳ ವಿವಾಹಕ್ಕೆ ವರ ಯಾರು ಎಂದು ಪಾರ್ವತಿ ಕೇಳುತ್ತಾಳೆ ಆಗ ಶಿವನು ಋಷಿ "ಜರಾತ್ಕಾರುವಿನ" ಜೊತೆ ನಮ್ಮ ಮಗಳ ಜೊತೆ ಆಗುತ್ತದೆ ಪಾರ್ವತಿ..
ಮಾನಸ ಋಷಿ ಜರತ್ಕಾರುವನ್ನು ಮದುವೆ ಆದಮೇಲೆಯೆ ನಾಗಕುಲದ ರಕ್ಷಣೆ ಆಗುತ್ತದೆ ಎಂದು ಶಿವ ಹೇಳುತ್ತಾನೆ. ಮತ್ತೇಕೆ ತಡ ಸ್ವಾಮಿ. ಆದಷ್ಟು ಬೇಗ ಇಬ್ಬರಿಗೂ ಮದುವೆ ಮಾಡಿಸೋಣ ಎಂದು ಪಾರ್ವತಿ ಹೇಳುತ್ತಾಳೆ.

ಶಿವನು ಕೂಡಲೇ ತನ್ನ ಕೊರಳಿನಲ್ಲಿ ಇರುವ ನಾಗಗಳ ರಾಜನಾದ ವಾಸುಕಿ ನಾಗನ ಹತ್ತಿರ ನೀನು ಈಗ ಮಾನಸದೇವಿಗೆ ಅಣ್ಣನ ಸ್ಥಾನದಲ್ಲಿ ನಿಂತುಕೊಂಡು ಋಷಿ ಜಾರತ್ಕಾರು ಬಳಿ ಹೋಗಿ ಮದುವೆ ಪ್ರಸ್ತಾಪವನ್ನು ತಿಳಿಸಬೇಕು ಎಂದು ಹೇಳುತ್ತಾನೆ..

ನಾಗಗಳ ರಾಜನದ ವಾಸುಕಿ  ಶಿವನ ಗಣಗಳ ಜೊತೆಗೆ ಋಷಿ ಜರಾತ್ಕಾರು ಆಶ್ರಮಕ್ಕೆ ಹೋಗುತ್ತಾರೆ..
ಋಷಿ ಜರತ್ಕಾರು ನಿಮಗೆ ಪ್ರಣಾಮಗಳು. ನಾನು ಇಲ್ಲಿಗೆ ನನ್ನ ತಂಗಿ ಮಾನಸಳ ಮದುವೆ ಪ್ರಸ್ತಾಪವನ್ನು ತಂದಿದ್ದೇನೆ.. ನನ್ನ ತಂಗಿ ಮಾನಸ ಮಹಾನ್ ತಪಸ್ವಿನೀ ಹಾಗು ಶಿವ ಪಾರ್ವತಿಯ ಮಗಳು ನೀವು ಈಗ ದಯಮಾಡಿ ಈ ಮದುವೆ ಪ್ರಸ್ತಾಪವನ್ನು ಸ್ವೀಕರಿಸಿ ನನ್ನ ತಂಗಿ ಮಾನಸಳನ್ನು ಮದುವೆ ಆಗಬೇಕಾಗಿದೆ ವಿನಂತಿಸುತ್ತೇವೆ ಎಂದು ವಾಸುಕಿ ನಾಗ ಕೇಳುತ್ತಾನೆ.

ನಾಗರಾಜ ವಾಸುಕಿ ದಯಮಾಡಿ ಕ್ಷಮಿಸಿ, ನಾನು ಶಿವನ ಭಕ್ತ ಕೇವಲ ಶಿವನ ಪೂಜೆ ಮಾಡುತ್ತೇನೆ ಹಾಗೂ ಸಂಸಾರ ಜೀವನದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೇನೆ ಹಾಗಾಗಿ ನಾನು ಯಾರನ್ನು ಮದುವೆ ಆಗಲಾರೆ ಎಂದು ಋಷಿ ಜರತ್ಕಾರು ಹೇಳುತ್ತಾನೆ..
ಆದರೂ ಒತ್ತಾಯ ಮಾಡಿದ ಕಾರಣ ಮದುವೆಗೆ ಒಪ್ಪುತ್ತಾನೆ ಆದರೆ 3 ಷರತ್ತು ಹಾಕುತ್ತಾನೆ.
ಷರತ್ತು ಒಂದು : ನಾನು ಮದುವೆ ಆಗುವ ಹುಡುಗಿಯ ಹೆಸರು ನನ್ನ ಹೆಸರೇ ಆಗಿರಬೇಕು ಅಂದರೆ ಜರಾತ್ಕರು ಅಂತಾನೆ ಆಗಿರಬೇಕು.

ಷರತ್ತು ಎರೆಡು : ನಾನು ಮದುವೆ ಆದಮೇಲೆ ನಾನು ನನ್ನ ಪತಿಧರ್ಮವನ್ನು ನಿಭಾಯಿಸುವಿದಿಲ್ಲ ಪತ್ನಿ ಅಂತ ಅವಳನ್ನು ಪೋಷಣೆ ಮಾಡುವುದಿಲ್ಲ..

ಷರತ್ತು ಮೂರು : ನಾನು ಮದುವೆ ಆದಮೇಲೆ ನನ್ನ ಪತ್ನಿ ಆದವಳು ನನ್ನ ಎಲ್ಲ ಕೆಲಸಗಳನ್ನು ಮಾಡಬೇಕು ಒಂದು ಚೂರು ತಪ್ಪು ಆದರೂ ಕೂಡ ನಾನು ಅವಳನ್ನು ಬಿಟ್ಟು ಬಿಡುತ್ತೇನೆ ಎಂದು ಋಷಿ ಜರತ್ಕಾರು ಹೇಳುತ್ತಾನೆ..

ಇಂತಹ ಷರತ್ತುಗಳನ್ನು ಕೇಳಿ ನಾಗಗಳ ರಾಜನಾದ ವಾಸುಕಿಗೆ ತುಂಬಾ ದುಃಖ ಆಗುತ್ತದೆ. ಈ ಎಲ್ಲ ವಿಚಾರವನ್ನು ಅವನು ಮಾನಸದೇವಿಯ ಬಳಿ ಹೇಳುತ್ತಾನೆ..

ಆಗ ಮಾನಸದೇವಿಗೂ ತುಂಬಾ ಆಘಾತವಾಗುತ್ತದೆ. ಯಾವ ಗಂಡನಾದವನು ಕೂಡ ಇಂತಹ ಷರತ್ತುಗಳನ್ನು ಹಾಕುವುದಿಲ್ಲ.. ಇಂತಹ ಷರತ್ತುಗಳನ್ನು ಹಾಕುವ ಗಂಡನನ್ನು ಕೂಡ ಯಾವುದೇ ಸ್ತ್ರೀ ಮದುವೆ ಆಗುವುದಿಲ್ಲ. ನಾನು ಕೂಡ ಈ ಮದುವೆ ಆಗುವುದಿಲ್ಲ ಎಂದು ಮಾನಸದೇವಿ ಹೇಳುತ್ತಾಳೆ..

ಆಗ ಅಲ್ಲಿಗೆ ಎಲ್ಲ ದೇವತೆಗಳು ಹಾಗೂ ಋಷಿ ಕಶ್ಯಪ ಬರುತ್ತಾರೆ.. ದೇವಿ ಮಾನಸ ದಯಮಾಡಿ ನೀವು ಈ ಮದುವೆ ಆಗಲೇ ಬೇಕು. ಜನಮೇಜಯ ರಾಜನು ಇಡಿ ನಾಗಲೋಕದ ನಾಗಗಳನ್ನು ಬಲಿ ಕೊಡಲು ಯಜ್ಞವನ್ನು ಮಾಡಲು ನಿರ್ಧಾರ ಮಾಡಿದ್ದಾನೆ.. ಒಂದು ವೇಳೆ ನೀವು ಜರತ್ಕಾರುವನ್ನು ಮದುವೆ ಆಗದೆ ಹೋದರೆ.. ಎಲ್ಲ ನಾಗವಂಶವು ಜನಮೇಜಯನ ಯಜ್ಞ ಕುಂಡದ ಒಳಗೆ ಬಿದ್ದು ಸುಟ್ಟು ಭಸ್ಮವಾಗಿ  ಇಡಿ ನಾಗಕುಲ ನಾಶವಾಗುತ್ತದೆ ಎಂದು ಋಷಿ ಕಶ್ಯಪ ಹೇಳುತ್ತಾರೆ.

ಆಧಿಶೇಷ ನಾಗನು ಕೂಡ ಅಲ್ಲಿಗೆ ಬಂದು ಬೇಡಿಕೊಳ್ಳುತ್ತಾನೆ. ದೇವಿ ಮಾನಸ ನೀವು ಮದುವೆಗೆ ಒಪ್ಪದೇ ಇದ್ದರೆ ಶಿವನ ಕೊರಳಲ್ಲಿ ಇರುವ ವಾಸುಕಿಯು ಇರುವುದಿಲ್ಲ ಹಾಗೆ ವಿಷ್ಣುವಿನ ಹಾಸಿಗೆಯಾಗಿ ನಾನು ಕೂಡ ಇರುವುದಿಲ್ಲ ಒಂದೇ ಒಂದು ನಾಗಗಳು ಉಳಿಯುವುದಿಲ್ಲ ದಯಮಾಡಿ ಮದುವೆಗೆ ಒಪ್ಪಿಕೊಳ್ಳಿ ಎಂದು ಎಲ್ಲರೂ ಬೇಡಿಕೊಳ್ಳುತ್ತಾರೆ..

ಚಿಂತಿಸಬೇಡಿ ನಾಗಗಳು ನಾಶವಾಗಿ ನಾಗಲೋಕ ಅಂತ್ಯವಾಗಲು ನಾನು ಬಿಡುವುದಿಲ್ಲ. ಋಷಿ ಕಶ್ಯಪರೇ ನಿಮ್ಮ ಮಾನಸಿಕ ಕಲ್ಪನೆಯಿಂದ ನಾನು ವಿಗ್ರಹ ರೂಪದಲ್ಲಿ ಜನಿಸಿದ್ದೆ ಹಾಗಾಗಿ.. ನೀವು ಮತ್ತು ನಿಮ್ಮ ಪತ್ನಿಯಾದ ದೇವಿ ಕದ್ರು ನೀವಿಬ್ಬರು ನನಗೆ ತಂದೆ ತಾಯಿಯ ಸಮಾನ. ಹಾಗಾಗಿ ನೀವು ಮತ್ತು ಮಾತೆ ಕದ್ರು ಸೇರಿ ನನ್ನ ಕನ್ಯಾಧಾನ ಮಾಡಿಸಿ ಮದುವೆ ಮಾಡಿ ಎಂದು ಮಾನಸದೇವಿ ಹೇಳುತ್ತಾಳೆ. ನಂತರ ಅದೇ ರೀತಿ ಮಾನಸದೇವಿ ಹಾಗೂ ಋಷಿ ಜರತ್ಕಾರುವಿನ ಮದುವೆ ಅದ್ಧುರಿಯಾಗಿ ನಡಿಯುತ್ತದೆ..

ಮದುವೆ ಆದಮೇಲೆ ಮಾನಸದೇವಿ ತುಂಬಾ ಕಷ್ಟ ಪಡಬೇಕಾಗುತ್ತದೆ.. ಏಕೆಂದರೆ ಅವಳ ಗಂಡ ಜರತ್ಕಾರು ಬೇಕು ಅಂತಾನೆ ಕೆಲಸಗಳನ್ನು ಕೊಡುತ್ತಿದ್ದ ಆದರೆ ಅವನು ಅವಳಿಗೆ ನೋವು ಆಗಬೇಕು ಎಂದು ಹಾಗೆ ಮಾಡುತ್ತ ಇರಲಿಲ್ಲ ಬದಲಿಗೆ ಮಾನಸ ಏನಾದರೂ ಕೆಲಸದಲ್ಲಿ ಚಿಕ್ಕ ತಪ್ಪು ಮಾಡಲಿ ಅದೇ ನೆಪ ಇಟ್ಟುಕೊಂಡು ಸಂಸಾರ ಜೀವನ ಬಿಟ್ಟು ಹೋಗಬಹುದು ಎಂದು ಜರತ್ಕಾರುವಿನ ಯೋಚನೆ ಆಗಿತ್ತು..

ಆದರೆ ಮಾನಸದೇವಿ ಒಂದೇ ಒಂದು ತಪ್ಪು ಕೂಡ ಮಾಡುತ್ತಿರಲಿಲ್ಲ.. ಗಂಡ ಹೇಳಿದ ಎಲ್ಲ ಕೆಲಸವನ್ನು ಮಾಡುತ್ತಿದ್ದಳು.. ಜರತ್ಕಾರುವಿಗೆ ಮಾನಸದೇವಿಯ ಒಂದೇ ಒಂದು ತಪ್ಪು ಕೂಡ ಸಿಗುತ್ತಿರಲಿಲ್ಲ ಅಷ್ಟರ ಮಟ್ಟಿಗೆ ಮಾನಸದೇವಿಯು ಜರತ್ಕಾರುವಿನ ಸೇವೆ ಮಾಡುತ್ತಿದ್ದಳು 

ಹೀಗೆ ಸ್ವಲ್ಪ ದಿನಗಳು ಆದ ನಂತರ 
ಒಂದು ದಿನ ಜರಾತ್ಕಾರು ಹೇಳುತ್ತಾನೆ ದೇವಿ ಮಾನಸ ನಾನು ನಿಮ್ಮ ತೊಡೆಯ ಮೇಲೆ ನಿದ್ರೆ ಮಾಡುತ್ತೇನೆ ಎಂದು ಮಲಗುತ್ತಾನೆ..
    ಋಷಿ ಜರತ್ಕಾರುವಿಗೆ  ತಿಳಿದಿತ್ತು ನಾನು ದಿನನಿತ್ಯ ಸೂರ್ಯ ಮುಳುಗುವ ವೇಳೆ ಸಂಧ್ಯಾವಂದನೆ ಮಾಡುತ್ತೇನೆ 
ಹಾಗಾಗಿ ದೇವಿ ಮಾನಸ ಖಂಡಿತ ನನ್ನನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ ಅವಳು ಎಬ್ಬಿಸಿದ ಕೂಡಲೇ ನೀವು ನನ್ನ ನಿದ್ರೆ ಹಾಳು ಮಾಡಿ ನನ್ನ ಷರತ್ತು ಮುರಿದ್ದಿದ್ದೀರಾ ಎಂದು ನಾನು ಸಂಸಾರ ಜೀವನವನ್ನು ಮುರಿದುಕೊಂಡು ಬಿಟ್ಟು ಹೋಗಬಹುದು ಅಂತ ಜರಾತ್ಕಾರು ಯೋಚನೆ ಮಾಡುತ್ತಾನೆ 

ಅದೇ ಪ್ರಕಾರ ಮಾನಸ ಅವನನ್ನು ನಿದ್ರೆಯಿಂದ ಎಬ್ಬಿಸುತ್ತಾಳೆ ಕೂಡಲೇ ಜರಾತ್ಕಾರು ಅವಳನ್ನು ಬಿಟ್ಟು ಹೊರಡಲು ಸಿದ್ದನಗುತ್ತಾನೆ ಆದರೆ ಮಾನಸದೇವಿ ಸ್ವಲ್ಪ ಕೂಡ ಬೇಸರ ಪಟ್ಟು ಕೊಳ್ಳುವುದಿಲ್ಲ ಗಂಡನ ಮಾತಿಗೆ ಎದುರು ಮಾತಾಡದೆ ಸುಮ್ಮನೆ ಆಗುತ್ತಾಳೆ ಏನನ್ನು ಪ್ರಶ್ನೆ ಮಾಡುವುದಿಲ್ಲ..

ಸ್ವಾಮಿ ನೀವು ನಿಮ್ಮ ಷರತ್ತಿನ ಪ್ರಕಾರ ನನ್ನನ್ನು ಬಿಟ್ಟು ಸಂಸಾರ ಜೀವನದಿಂದ ಮುಕ್ತರಾಗಬಹುದು ಎಂದು ಹೇಳುತ್ತಾಳೆ.. ಆಗ ಋಷಿ ಜರಾಕಾರುವಿಗೆ ತುಂಬಾ ದುಃಖ ಆಗುತ್ತದೆ ತನ್ನ ಹೆಂಡತಿ ಮಾನಸಳ ಪ್ರೀತಿ ತ್ಯಾಗ ಎಂತದ್ದು ಎಂದು ಅವನು ಅರಿತುಕೊಂಡು ಮತ್ತೆ ಮಾನಸ ದೇವಿಯ ಜೊತೆ ಸಂತೋಷದ ಜೀವನ ನಡೆಸುತ್ತಾನೆ 

 ( ಮಹಾಭಾರತದ ಜನಮೇಜಯನ ನಾಗಬಲಿ ಯಜ್ಞವನ್ನು ನಿಲ್ಲಿಸುವ ಸಮಯ..)

ಋಷಿ ಜರಾತ್ಕಾರು ಹಾಗೂ ಮಾನಸದೇವಿಗೆ ಒಬ್ಬ ಮಗ ಜನಿಸುತ್ತಾನೆ.. ಇವನಿಗೆ " ಆಸ್ತಿಕ " ಎಂದು ನಾಮಕರಣ ಮಾಡುತ್ತಾರೆ..ನಂತರ ಅವನು ದೊಡ್ಡವನಗುತ್ತಾನೆ..

ಪುತ್ರ " ಆಸ್ತಿಕ " ನೀನು ಈಗ ಜನಮೇಜಯ ರಾಜನ ನಾಗಬಲಿ ಯಜ್ಞವನ್ನು ನಿಲ್ಲಿಸಿ ನಾಗಗಳ ರಕ್ಷಣೆ ಮಾಡಬೇಕು. ನನ್ನ ಜೀವನದ ಎರೆಡನೆ ಉದ್ದೇಶವನ್ನು ಪೂರ್ಣಗೊಳಿಸು ಮಗನೆ ಎಂದು ಮಾನಸದೇವಿ ಹೇಳುತ್ತಾಳೆ..

ಅದೇ ಪ್ರಕಾರ ಆಸ್ತಿಕ ಋಷಿಯು ಜನಮೇಜಯ ರಾಜನ ಯಜ್ಞ ನಡೆಯುವ ಸ್ಥಳಕ್ಕೆ ಹೋಗಿ ರಾಜನನ್ನು ಮಾತಿನಲ್ಲಿ ಕಟ್ಟಿಹಾಕಿ ನಾಗಬಲಿ ಯಜ್ಞವನ್ನು ನಿಲ್ಲಿಸುತ್ತಾನೆ..

ಈ ರೀತಿ ಮಾನಸದೇವಿಯು ತನ್ನ ಜೀವನದ ಎರೆಡನೆ ಉದ್ದೇಶವನ್ನು ಪೂರ್ಣಗೊಳಿಸುತ್ತಾಳೆ.

ಇಡಿ ನಾಗಲೋಕವೇ ಮಾನಸದೇವಿಗೆ ತಲೆ ಭಾಗುತ್ತದೆ. ಈ ರೀತಿ ಮಾನಸದೇವಿಯು ನಾಗಲೋಕಕ್ಕು ಹಾಗೂ ಎಲ್ಲ ನಾಗಗಳಿಗೂ ಮಾತೆ ಆಗುತ್ತಾಳೆ. ಹಾಗೂ ಇವಳ ಪುತ್ರನಾದ ಆಸ್ತಿಕ ಋಷಿಯ ಹೆಸರು ಹೇಳಿದರೇ ಅಥವಾ ಆಸ್ತಿಕ ಅಂತ ಮನೆಯ ಗೋಡೆಯಲ್ಲಿ ಬರೆದರೆ ಯಾವ ವಿಷದ ಹಾವುಗಳು ಜಂತುಗಳು ಬರುವುದಿಲ್ಲ. ಹಾಗೂ ಮಾನಸ ದೇವಿಯ ನಾಮಸ್ಮರಣೆ ಮಾಡಿದರೆ ಯಾವುದೇ ವಿಷದ ಹಾವುಗಳು ಜಂತುಗಳು ತೊಂದರೆ ಕೊಡುವುದಿಲ್ಲ.

ನಾಗರ ಪಂಚಮಿ ಸಮಯದಲ್ಲಿ ಈಶಾನ್ಯ ಭಾರತದ ಕಡೆಗೆ ಹೆಚ್ಚಾಗಿ ಮಾನಸದೇವಿಯನ್ನು ಹೆಚ್ಚಾಗಿ ಪೂಜೆ ಮಾಡುತ್ತಾರೆ..

ಮಾನಸದೇವಿಯ ವಾಹನ ಬಾತುಕೋಳಿ ಅವಳು ಕೈಯಲ್ಲಿ ನಾಗಗಳನ್ನು & ಕಮಲದ ಹೂವನ್ನು ಹಿಡಿದು ಭಕ್ತರನ್ನು ಹರಸುತ್ತಾಳೆ..

ನಾಗಲೋಕ.. ಹಾಗೂ ಇಡಿ ನಾಗವಂಶವನ್ನು ರಕ್ಷಣೆ ಮಾಡಿದ ಕಾರಣ.. ಇಡಿ ನಾಗಲೋಕ ಹಾಗೂ ಎಲ್ಲ ನಾಗಗಳು ಯಾವಾಗಲು.. ಮಾನಸದೇವಿ ಹಾಗೂ ಅವಳ ಮಗನಾದ ಆಸ್ತಿಕ ಋಷಿಗೆ ಚಿರಋಣಿ ಆಗಿ ಇರುತ್ತವೆ..

ಈಗ ಮಳೆಗಾಲದಲ್ಲಿ ಹೆಚ್ಚಾಗಿ ಭಕ್ತಾದಿಗಳು ಮಾನಸದೇವಿಯನ್ನು ಪೂಜಿಸುತ್ತಾರೆ..

✍️ : ಅಶ್ವಿನಿ ಶೆಟ್ಟಿ..

October 2, 2025

ನಮಸ್ಕಾರ ‌ಮಾಡುವುದರಿಂದ ಏನು ಫಲ?

ಮಾರ್ಕಂಡೇಯ ಮುನಿಗಳು ದೀರ್ಘಾಯುಷಿ ಯಾದುದರ ಬಗೆಗಿನ ಹಲವು ಕಥೆಗಳಲ್ಲಿ ಇದು ಒಂದು.

ಮೃಕಂಡು ಮನಿಗಳ ಮಗನಿಗೆ  9 ವರ್ಷಕ್ಕೆ ಮರಣ ಯೋಗ ಇತ್ತು. ಏಳನೇ ವರ್ಷಕ್ಕೆ ಉಪನಯನ ಮಾಡಿದ ಮುನಿಗಳು ಮಗನಿಗೆ ಹೀಗೆಂದರು.
"ಮಗು ಸಾತ್ವಿಕರು ಹಿರಿಯರು ಕಂಡಲ್ಲಿ ನಮಸ್ಕಾರ ಮಾಡು ಅವರ ಆಶೀರ್ವಾದವನ್ನು ಪಡೆದುಕೋ."

*ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ| ಚತ್ವಾರಿ ತಸ್ಯ ವರ್ಧಂತೇ ಆಯುಃ ಪ್ರಜ್ಞಾ ಯಶೋ ಬಲಂ*॥
ನಮಸ್ಕಾರ ಮಾಡುವುದರಿಂದ; ಜ್ಞಾನ ವೃದ್ಧರ ಸೇವೆಯಲ್ಲಿ ನಿರತರಾದವರಿಗೆ ಆಯುಷ್ಯ ಪ್ರಜ್ಞೆ ಯಶಸ್ಸು ಬಲಗಳು ವೃದ್ಧಿಯಾಗುತ್ತವೆ.

ಬಾಲಕ ಮಾರ್ಕಂಡೇಯ ಹಾಗೆಯೇ ಮಾಡಿದ.
ತನ್ನ ಆಶ್ರಮದ ಮಾರ್ಗದಲ್ಲಿ ಬಂದ ಎಲ್ಲಾ ಹಿರಿಯ ಜ್ಞಾನಿಗಳ ಪಾದಕ್ಕೆ ಅಭಿವಾದನ ಮಾಡಿ ನಮಿಸುತ್ತಿದ್ದ. ದೀರ್ಘಾಯುಷ್ಮಾನ್ ಭವ ಎಂಬ ಆಶೀರ್ವಾದಗಳನ್ನು ಪಡೆದು ಹಿಂತಿರುಗುತ್ತಿದ್ದ.
ಆಶ್ರಮದ ಮಾರ್ಗದಲ್ಲಿ ಬಂದಂತಹ ಸಪ್ತಋಷಿ ಗಳಿಗೂ ಕೂಡ ಬಾಲಕನು ಅಭಿವಾದನ ಮಾಡಿದ. ದೈವ ಸಂಕಲ್ಪದಂತೆ ಪೂರ್ವಾಪರಗಳನ್ನು ಆಲೋಚನೆ ಮಾಡದೆ ಸಪ್ತಋಷಿಗಳು ಬಾಲಕ ಮಾರ್ಕಂಡೇಯನಿಗೆ ದೀರ್ಘಾಯುಷ್ಯ ದ ವರವನ್ನಿತ್ತರು.
ಜ್ಞಾನಿಗಳ ಸಜ್ಜನರ ಮುಖದಿಂದ ಹೊರಟ ಮಾತುಗಳು ಕೂಡ ಸುಳ್ಳಾಗಲು ಪರಮಾತ್ಮ ಬಿಡುವುದಿಲ್ಲ.
ಕಾಲ ಕಳೆಯಿತು. 
ನಿತ್ಯ ನಿರಂತರ ಪರಮ ಶಿವನನ್ನು ಆರಾಧಿಸುತ್ತಿದ್ದ ಬಾಲಕ ಮಾರ್ಕಂಡೇಯನ ಜೀವ ಒಯ್ಯಲು ಯಮದೂತರು ಬಂದರು ಅವರಿಗೆ ಬಾಲಕನನ್ನು ಸ್ಪರ್ಶಿಸಲು ಆಗಲಿಲ್ಲ. ಮಹಿಷ ವಾಹನ ನಾಗಿ ಯಮನೇ ಬಂದರೂ ಕೂಡ ಪ್ರಯೋಜನವಾಗಲಿಲ್ಲ. ಬಾಲಕನ ಸುತ್ತ ಆವರಿಸಿದ್ದ ಆಶೀರ್ವಾದದ ಕವಚವನ್ನು ಛೇದಿಸಲು ಸಾಧ್ಯವಾಗಲಿಲ್ಲ. ಶಿವ ಭಕ್ತ ಮಾರ್ಕಂಡೇಯನ ಆಯುಷ್ಯವನ್ನು ಸಪ್ತ ಕಲ್ಪದ ತನಕ ತಿದ್ದಿ ಬಿಡುವಂತೆ ಯಮಧರ್ಮರಾಜನಿಗೆ ಪರಶಿವನು ಸೂಚಿಸುತ್ತಾನೆ.
ಮಾರ್ಕಂಡೇಯ ಋಷಿಗಳನ್ನು ಸ್ಮರಿಸುವವನಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ.
ಹಿರಿಯರು ಬಂದಾಗ ಎದ್ದು ನಿಲ್ಲುವುದು ಕರ್ತವ್ಯ ದೊಡ್ಡವರು ಸನಿಹದಿಂದ ಸಾಗುತ್ತಿದ್ದಾಗಲೂ ಎದ್ದು ನಿಲ್ಲದವನ ಆಯುಷ್ಯಕ್ಕೆ ಪೆಟ್ಟಿದೆ.
*ಊರ್ದ್ವಂ ಪ್ರಾಣ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ*
ಹಿರಿಯರು ಸನಿಹದಿಂದ ಸಾಗುತ್ತಿದ್ದಾಗ ಕಿರಿಯರ ಪ್ರಾಣಶಕ್ತಿ ತಾನಾಗಿ ಮೇಲಕ್ಕೆ ಚಿಮ್ಮುತ್ತದೆ. ಆಗ ಎದ್ದು ನಿಂತಲ್ಲಿ ಅದು ಶಾಂತವಾಗಿ ಶರೀರದಲ್ಲಿಯೇ ನೆಲೆಯಾಗುತ್ತದೆ ಇಲ್ಲವಾದರೆ ಆಯುಷ್ಯ ಕ್ಷೀಣ ವಾಗುತ್ತದೆ.
ಗುರು-ಹಿರಿಯರನ್ನು ತಂದೆತಾಯಿಗಳನ್ನು ಜ್ಞಾನಿಗಳನ್ನು ಗೌರವಿಸುವುದರಿಂದ ; ನಮಸ್ಕರಿಸುವುದರಿಂದ ನಮಗೆ ಸರ್ವ ಸೌಭಾಗ್ಯಗಳು ಲಭಿಸುತ್ತವೆ.
ನಮಸ್ಕಾರ ಮಾಡುವುದರಿಂದ ಆಯುಷ್ಯ ವೃದ್ಧಿಯಾಗುತ್ತದೆ.
ಸಂಗ್ರಹ: ಪ್ರಶಾಂತಭಟ್ ಕೋಟೇಶ್ವರ

ಕಾಶ್ಮೀರಪುರವಾಸಿನಿ ಶಾರದಾ ದೇವಿ

ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ !!!

ಕಾಶ್ಮೀರಪುರವಾಸಿನಿಯಾದ ಶಾರದಾ ದೇವಿಯನ್ನು ಅಭಿನಮಿಸುವ ಈ ಶ್ಲೋಕವನ್ನು ಬಾಲ್ಯದಲ್ಲಿ ನಾವು ಕರ್ನಾಟಕದ ಯಾವುದೋ ಮೂಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿ ಕುಳಿತು ನಿತ್ಯ ಪಠಿಸುತ್ತಿದ್ದೆವು! ನಾವೆಂದರೇನು, ಪ್ರತಿಯೊಬ್ಬ ಸನಾತನ ಭಾರತೀಯನೂ ಈ ಶ್ಲೋಕವನ್ನು ಪಠಿಸಿದವನೇ! ಕರ್ನಾಟಕವೇನು, ಭಾರತವರ್ಷದ ಉದ್ದಗಲವೆಷ್ಟೋ ಈ ಶ್ಲೋಕದ ವ್ಯಾಪ್ತಿಯಷ್ಟು!

ಹೌದು! ಕಾಶ್ಮೀರದ ಶಾರದೆಯ ವ್ಯಾಪ್ತಿ ಕಾಶ್ಮೀರಮಾತ್ರವಲ್ಲ, ಸಮಸ್ತ ಭಾರತ ದೇಶ!
ಕಾಶ್ಮೀರವಂತೂ ಶಾರದಾಮಯ! 

ಒಂದು ಕಾಲದಲ್ಲಿ ಕಾಶ್ಮೀರವನ್ನು ಶಾರದಾ ದೇಶವೆಂದೇ ಕರೆಯುತ್ತಿದ್ದರು. ಅಲ್ಲಿಯ ಲಿಪಿಯ ಹೆಸರು ಶಾರದಾ! ಶಾರದಾ ಮಂದಿರವಿರುವ ಗ್ರಾಮಕ್ಕೆ ಆಗಲೂ, ಈಗಲೂ – ಅದು ಪಾಕಿಸ್ತಾನದ ವಶವಾದ ಬಳಿಕವೂ – ಶಾರದಾಗ್ರಾಮವೆಂದೇ ಹೆಸರು! ಸಮ್ಮುಖದಲ್ಲಿರುವ ಪರ್ವತಶಿಖರವೊಂದನ್ನು ಈಗಲೂ ಶಾರದೀ ಎಂದು ಕರೆಯುತ್ತಾರೆ.

ಆ ಊರಿನಲ್ಲಿ ಈಗ ಉಳಿದುಕೊಂಡಿರುವುದು ಶತಮಾನಗಳ ಹಿಂದೆ ಮತಪರಿವರ್ತನೆಗೊಳಗಾದ ಮುಸಲ್ಮಾನರು ಮಾತ್ರ. ಆದರೆ ಇಂದಿಗೂ ಅವರು ಆಣೆ ಹಾಕುವುದು, ಪ್ರಮಾಣ ಮಾಡುವುದು ತಾಯಿ ಶಾರದೆಯ ಹೆಸರಿನಲ್ಲಿ!

ಕಾಶ್ಮೀರದ ಮೂಲ ಜನಾಂಗವನ್ನು ಕಾಶ್ಮೀರಿ ಪಂಡಿತರು ಎಂದೇ ಕರೆಯುತ್ತಾರೆ. ಪಾಂಡಿತ್ಯವು ವಿದ್ಯೆಯಿಂದ‌; ವಿದ್ಯೆಯು ಶಾರದೆಯಿಂದ. ಕಾಶ್ಮೀರಿ ಪಂಡಿತರು ಎಂಬ ಅಭಿಧಾನವು ಆ ಜನಾಂಗಕ್ಕೆ ಶಾರದಾನುಗ್ರಹ!
ನಿಮಗೆ ಗೊತ್ತೇ? ಒಂದು ಕಾಲದಲ್ಲಿ, ಒಂದಿಡೀ ಜನಾಂಗದಲ್ಲಿ ಜ್ಞಾನಿಯಲ್ಲದ ಒಬ್ಬನೇ ಒಬ್ಬ ಮನುಷ್ಯನಿರಲಿಲ್ಲ! ಆದುದರಿಂದಲೇ ಆ ಜನಾಂಗವೇ ಪಂಡಿತರು ಎಂದು ಕರೆಯಲ್ಪಟ್ಟಿತು. ಒಂದು ಕಾಲದಲ್ಲಿ, ಅಖಂಡ ಭರತಖಂಡದಲ್ಲಿ ವಿದ್ಯೆಯ ಪರಮೋಚ್ಚ ಪರೀಕ್ಷೆಯಾಗುತ್ತಿದ್ದುದು ಕಾಶ್ಮೀರದಲ್ಲಿ. ಅಲ್ಲಿ ಸೈ ಎನಿಸಿಕೊಂಡರೆ ಅವನು ನಿಜವಾದ ಪಂಡಿತ! ಅಲ್ಲಿಯವರೆಗೆ ಅವನ ಪಾಂಡಿತ್ಯ ಪೂರ್ಣವಲ್ಲ.
ವಿದ್ಯಾಸಾಮ್ರಾಜ್ಯವಾಗಿತ್ತು ಕಾಶ್ಮೀರ!

ಭಾರತವು ದೇವಸ್ಥಾನವಾದರೆ ಅದರ ಶಿಖರ ಕಾಶ್ಮೀರ.ಕಾಶ್ಮೀರವು ಭಾರತದ ಶಿಖರವಾದರೆ ಅದರ ಕಲಶವು ಶಾರದಾಪೀಠ! ನಾವು-ನೀವಿರುವ ಈ ಕಾಲದ ದೌರ್ಭಾಗ್ಯವೆಂದರೆ ಭಾರತದ ಕಲಶವೆನಿಸಿದ ಶಾರದಾಮಂದಿರಕ್ಕೆ ಇಂದು ಕಲಶವಿರಲಿ, ಛಾವಣಿಯೇ ಇಲ್ಲ! ಸಮಸ್ತ ಭಾರತೀಯರ ಹೃದಯಮಂದಿರದಲ್ಲಿ ವಿದ್ಯಾಮೂರ್ತಿಯಾಗಿ ಪೂಜಿಸಲ್ಪಡುವ ಶಾರದೆಯ ಮೂಲ ಮಂದಿರದಲ್ಲಿ ಮೂರ್ತಿಯೇ ಇಲ್ಲ! ಇನ್ನು ಪೂಜೆಯೆಲ್ಲಿ!? ಮೋಟು ಗೋಡೆಗಳ, ಮುರುಕು ಪೀಠದ, ಭಗ್ನಾವಶೇಷಗಳ ಇಂದಿನ ಶಾರದಾಪೀಠದ ದುರಂತದೃಶ್ಯವನ್ನು ನೋಡಿ, ಕರಗಿ-ಮರುಗದಿದ್ದರೆ ನೀವು ಭಾರತೀಯರೇ ಅಲ್ಲ!

ಕೇವಲ ಮಂದಿರಮಾತ್ರದಲ್ಲಲ್ಲ, ಶಾರದೆಯು ಕಾಶ್ಮೀರದ ಅಸಂಖ್ಯ ಪಂಡಿತರ ಮಸ್ತಿಷ್ಕಗಳಲ್ಲಿ, ಮುಖಗಳಲ್ಲಿ ವಿದ್ಯಾವಾಹಿನಿಯಾಗಿ ವಿರಾಜಿಸುತ್ತಿದ್ದಳು.
ಈಗ ಕಾಲ ಬದಲಾಗತೊಡಗಿದೆ. ಅಥವಾ ಕಾಶ್ಮೀರಿ ಪಂಡಿತರ ಎಡೆಬಿಡದ ಹೋರಾಟಗಳು ಕಾಲವನ್ನು ಬದಲಾಯಿಸುತ್ತಿವೆ. ಶಾರದಾಪೀಠದ ಮತ್ತು ಕಾಶ್ಮೀರಿ ಪಂಡಿತರ ದುರವಸ್ಥೆಗೆ ಪ್ರಧಾನ ಕಾರಣವಾದ ಪಾಕಿಸ್ಥಾನವು ಇತ್ತೀಚೆಗೆ ಶಾರದಾದರ್ಶನಕ್ಕೆ ಅವಕಾಶ ನೀಡುವ ಮಾತಾಡುತ್ತಿದೆ! ಮಾತ್ರವಲ್ಲ, ಯಾತ್ರಿಗಳ ಅನುಕೂಲಕ್ಕಾಗಿ, ಶಾರದಾಗ್ರಾಮದ ಪರಿಸರದಲ್ಲಿ ರಸ್ತೆಯೇ ಮೊದಲಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನು ಮಾಡುವುದಾಗಿಯೂ ಪ್ರಕಟಿಸಿದೆ. ಈಗಿನ ಜಮ್ಮು-ಕಾಶ್ಮೀರ ಸರಕಾರವು ಶಾರದಾಯಾತ್ರೆಗೆ ತನ್ನ ಬೆಂಬಲವನ್ನು ಸಾರ್ವಜನಿಕವಾಗಿಯೇ ಘೋಷಿಸಿದೆ.

ಇನ್ನು ಶಾರದಾ ಗ್ರಾಮದ ಮುಸಲ್ಮಾನರು; 
ಅವರೊಂದು ವಿಸ್ಮಯ!

ಶಾರದಾಪೀಠದ ಪುನರುಜ್ಜೀವನ ಅವರ ತವಕ; ಕಾಶ್ಮೀರೀ ಪಂಡಿತರ ಶಾರದಾಯಾತ್ರೆಗೆ ಅವರು ಪೂರಕ. ನಂಬಲಸಾಧ್ಯವಾದ ಸಂಗತಿಯೆಂದರೆ ಇತ್ತೀಚೆಗೆ ಶಾರದಾಮಂದಿರದಲ್ಲಿ ಬಹುಕಾಲದ ಬಳಿಕ ಪೂಜೆಯೊಂದು ನಡೆಯಿತು! ಆ ಪೂಜೆಯನ್ನು ನೆರವೇರಿಸಿದವರು ಶಾರದಾ ಗ್ರಾಮದ ಮುಸಲ್ಮಾನರು! ಅವರು ಮೊದಲು ಮೂರ್ತಿಯಿದ್ದ ಸ್ಥಳದಲ್ಲಿ ಪುಷ್ಪಗಳಿಂದ ಪೂಜೆ ನಡೆಸಿದ್ದಾರೆ; ಗರ್ಭಗುಡಿಯ ಗೋಡೆಯಲ್ಲಿ ಶಾರದಾ ದೇವಿಯ ಭಾವಚಿತ್ರವನ್ನು ಪ್ರತಿಷ್ಠಾಪಿಸಿದ್ದಾರೆ; ಪುಷ್ಪಪ್ರಸಾದವನ್ನೂ ಮತ್ತು ಶಾರದಾಭೂಮಿಯ ಮಂಗಲಮಯವಾದ ಮಣ್ಣನ್ನೂ ಪಂಡಿತರುಗಳಿಗೆ ಅಂಚೆಯ ಮೂಲಕ ಕಳುಹಿಸಿದ್ದಾರೆ!

ಗಮನಿಸಿ; ಇವೆಲ್ಲವನ್ನೂ ಪರಮಪ್ರೇಮದಿಂದ ನೆರವೇರಿಸಿದವರು ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದಲ್ಲಿ ವಾಸಿಸುವ ಮುಸಲ್ಮಾನರು! ಇಂದು ಅವರ ಬದುಕು ಇಸ್ಲಾಂ ಮತದಲ್ಲಿ; ಅವರಿರುವ ಊರು ಪಾಕಿಸ್ತಾನದ ವಶದಲ್ಲಿ! 

ಸಾಕಾರ ದೇವರ ಪೂಜೆಯನ್ನು ಅತ್ಯುಗ್ರವಾಗಿ ವಿರೋಧಿಸುವ ಮುಸಲ್ಮಾನರು, ಪಾಕಿಸ್ತಾನದ ಅಂಕೆಗೊಳಪಟ್ಟ ಪ್ರದೇಶದಲ್ಲಿ, ಅದೂ ಉಗ್ರಗಾಮಿಗಳ ಹಾವಳಿಯ ನಡುವೆ ಪುಷ್ಪಗಳಿಂದ ಶಾರದಾಪೀಠಕ್ಕೆ ಪೂಜೆಗೈದು, ಪ್ರಸಾದ ಕಳುಹಿಸಿದರೆಂಬುದನ್ನು ನಂಬಲಾಗದು! 

ಆದರೆ ಸ್ವತಃ ಕಾಶ್ಮೀರಿ ಪಂಡಿತರ ನಿಯೋಗವೇ ನಮ್ಮನ್ನು ಭೇಟಿಯಾಗಿ, ಪ್ರಸಾದವಿತ್ತು, ಪುಷ್ಪಪೂಜೆಯ ಭಾವಚಿತ್ರವನ್ನೂ, ಮತ್ತು ಪಾಕಿಸ್ತಾನದಿಂದ ಪಂಡಿತರಿಗೆ ಬಂದ, ಅಲ್ಲಿಯ ಮೊಹರಿರುವ ಲಕೋಟೆಯನ್ನೂ ತೋರಿಸಿದಾಗ ನಂಬಲೇಬೇಕಾಯಿತು!

ಕಾಶ್ಮೀರದ ಶಾರದೆಯ ಪ್ರಸಾದ ಪುಷ್ಪಗಳು, ಶಾರದಾ ಗ್ರಾಮದ ಮಣ್ಣು ನಮ್ಮ ಮಠದಲ್ಲಿದೆಯೆಂಬುದು ವಿಖ್ಯಾತ-ವ್ಯಾಖ್ಯಾನಸಿಂಹಾಸನವು ನಮ್ಮಲ್ಲಿದೆಯೆಂಬಷ್ಟೇ ಹೆಮ್ಮೆ ನಮಗೆ!

ಶಂಕರರಿಗೂ ಶಾರದೆಗೂ ಅವಿನಾಭಾವದ ಸಂಬಂಧ!
ಕಾಶ್ಮೀರಪುರವಾಸಿನಿಯ ಸನ್ನಿಧಿಯಲ್ಲಿಯೇ ಅಲ್ಲವೇ ಆದಿ ಶಂಕರರು ಸರ್ವಜ್ಞಪೀಠವನ್ನೇರಿ ಜಗದ್ಗುರುವೆನಿಸಿಕೊಂಡಿದ್ದು! 

ದಕ್ಷಿಣ ದೇಶದ ಯಾರೊಬ್ಬ ಪಂಡಿತನೂ ಆವರೆಗೆ ಅರಿವಿನ ಆ ಎತ್ತರವನ್ನು ಏರದ ಕಾರಣ ಶಾರದಾ ಪೀಠದ ದಕ್ಷಿಣದ್ವಾರವೇ ಅಂದಿನವರೆಗೆ ತೆರೆದಿರಲಿಲ್ಲ! ಶಂಕರರು ತಮ್ಮ ವಿದ್ವತ್ತಿನಿಂದ ಕಾಶ್ಮೀರದ ಪಂಡಿತಮಂಡಲವನ್ನು ಮಂತ್ರಮುಗ್ಧಗೊಳಿಸಿ, ದಕ್ಷಿಣದ್ವಾರವನ್ನು ತೆರೆಯಿಸಿ, ಒಳ ಪ್ರವೇಶಿಸಿದರು! 

ಶಸ್ತ್ರದಿಂದಲ್ಲ, ಶಾಸ್ತ್ರದಿಂದ ಅವರು ಜ್ಞಾನಸಾಮ್ರಾಜ್ಯದ ಆ ಮಹಾರಾಜಧಾನಿಯನ್ನು ಗೆದ್ದು, ಸರ್ವಜ್ಞಪೀಠವನ್ನೇರಿದರು! 

ಅಷ್ಟು ಮಾತ್ರವಲ್ಲ, ಅಲ್ಲಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಿ, ಶಾರದೆಗೆ ನೈಜಪೂಜೆ ಸಲ್ಲಿಸಿದರು!

ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ | 
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ||

ಮೂಲ: ಶ್ರೀ ರಾಮಚಂದ್ರಾಪುರ ಮಠ

ಗಂಡನ ಎಡ ಭಾಗದಲ್ಲಿ ಹೆಂಡತಿ

ಗೃಹಸ್ಥನು ಮಾಡುವ ಸಕಲ ಸತ್ಕಾರ್ಯಗಳಲ್ಲಿ ಹೆಂಡತಿ ಗಂಡನ ಎಡ ಭಾಗದಲ್ಲಿರಬೇಕು. ದೇವರಿಗೆ ಅಭಿಷೇಕ, ಪುರಾಣ ಶ್ರವಣ, ದಾನ- ಧರ್ಮಾದಿಗಳನ್ನು ಮಾಡುವಾಗ, ದಂಪತಿ ಸ್ನಾನ ಮಾಡುವಾಗ, ಶಯನ ಸಮಯದಲ್ಲಿ ಹೆಂಡತಿ ಗಂಡನ ಎಡ ಭಾಗದಲ್ಲಿರಬೇಕು.

ಅದೇ ಕನ್ಯಾದಾನ, ದೇವ ಪ್ರತಿಷ್ಠೆ, ಯಜ್ಞ ಕಾರ್ಯಗಳಲ್ಲಿ ತೊಡಗಿದಾಗ ಹೆಂಡತಿ ಗಂಡನ ಬಲ ಭಾಗದಲ್ಲಿರಬೇಕು.

ಈಶ್ವರನು ತನ್ನ ಬಲ ಭಾಗದಿಂದ ಪುರುಷನನ್ನೂ, ಎಡ ಭಾಗದಿಂದ ಸ್ತ್ರೀಯನ್ನು ಸೃಷ್ಟಿಸಿದನು. ಪ್ರತಿ ವ್ಯಕ್ತಿಯ ದೇಹದ ಬಲ ಭಾಗದಲ್ಲಿ ಸೂರ್ಯ/ ಪಿಂಗಳ (ಗಂಡು) ನಾಡಿಯೂ, ಎಡ ಭಾಗದಲ್ಲಿ ಚಂದ್ರ/ ಇಡಾ (ಹೆಣ್ಣು), ಮಧ್ಯದಲ್ಲಿ ಆಜ್ಞಾ ಚಕ್ರದಿಂದ ಮೂಲಾಧಾರದ ವರೆಗೆ ಸುಶುಮ್ನಾ ನಾಡಿಗಳಿರುತ್ತದೆ. ಹಾಗಾಗಿ ನಾವೆಲ್ಲಾ ಅರ್ಧನಾರೀಶ್ವರರೇ. ಯಾರಿಗೆ ಯಾವ ನಾಡಿ ಹೆಚ್ಚು ಪ್ರಚೋದನೆ ಆಗಿರುವುದೋ ಅವರ ಗುಣಗಳು ಅದೇ ರೀತಿ ಇರುತ್ತದೆ. ಮನುಷ್ಯರಿಗೆ ಹೃದಯ ಎಡ ಭಾಗದಲ್ಲಿ ಇರುವುದರಿಂದ ಚಲನಶಕ್ತಿ ಅದೇ ಭಾಗದಿಂದ ಉತ್ಪನ್ನ ಆಗುವುದರಿಂದ ಎಡ ಭಾಗಕ್ಕೆ ಹಾಗೂ ಹೆಂಡತಿಗೆ ಜೀವನದಲ್ಲಿ ವಿಶೇಷ ಸ್ಥಾನವಿದೆ.