June 2, 2025

ಶನಿಯ ಕಾಲು ಮುರಿದ ಋಷಿಪುತ್ರ ಪಿಪ್ಪಲಾದ

(ನಾವೆಲ್ಲಾ‌ಸಾಮಾನ್ಯವಾಗಿ ಹೇಳುವ ಶ್ರೀಶನೈಶ್ಚರ ಮಂತ್ರ ಸ್ತೋತ್ರಕ್ಕೆ ಕಾರಣರಾದ ಪಿಪ್ಪಲಾದ ಋಷಿಗಳ ಕುರಿತು ಮಾಹಿತಿ ಇಲ್ಲಿದೆ )
ಒಮ್ಮೆ ರಾಜನ ಪಾಪಕರ್ಮ, ದುರಾಡಳಿತ, ಅಹಂಕಾರ, ಅಧರ್ಮದ ಆಚರಣೆಯಿಂದ ಇಡೀ ರಾಜ್ಯವೇ ನಾಶವಾಯಿತು. ಮಳೆ-ಬೆಳೆ ಇಲ್ಲದೇ ಬರಗಾಲ ಎದುರಾಯಿತು. ಕಳ್ಳರು, ದರೋಡೆಕೋರರು ಹೆಚ್ಚಾದರು. ದನಕರುಗಳು ಪ್ರಾಣಬಿಟ್ಟವು. ಪ್ರಜೆಗಳು ನೀರು ಆಹಾರವಿಲ್ಲದೆ ಪರಿತಪಿಸುವಂತಾಯಿತು. 

ಕಾಡುಪ್ರಾಣಿಗಳು ನಗರವನ್ನು ಹೊಕ್ಕವು. ಇಲಿ-ಹೆಗ್ಗಣಗಳ ಕಾಟ ಹೆಚ್ಚಾಯಿತು. ರಾಜ್ಯ ದುರ್ಭಿಕ್ಷವಾಯಿತು. ಜನರು ಜೀವ ಉಳಿಸಿಕೊಳ್ಳುಲು ಗುಳೆ ಹೋಗಲು ಆರಂಭಿಸಿದರು.

ಆ ರಾಜ್ಯದಲ್ಲಿ ಕೌಷಿಕೃಷಿಗಳೂ ಇದ್ದರು. ದುರ್ಭಿಕ್ಷಕಾಲ ಆದ್ದರಿಂದ ಅವರಿಗೆ ಇನ್ನೂ ಉಪನಯನವಾಗದ ಪುಟ್ಟ ಮಗ ಮತ್ತು ಪತ್ನಿಯ ಹಸಿವನ್ನು ನೀಗಿಸಲು  ಋಷಿಗೆ ಸಾಧ್ಯವಾಗಲಿಲ್ಲ, ದೇಶಾಂತರ ಹೊರಟರು.

ಮುಂದೆ ಸಾಗಿದಂತೆ ಕಷ್ಟಗಳ ಸರಮಾಲೆಯೇ ಎದುರಾಯಿತು. ಮಾರ್ಗಮಧ್ಯದಲ್ಲಿಯೇ ಮಗನನ್ನು ಬಿಟ್ಟು ಹೆಂಡತಿಯೊಂದಿಗೆ ಮತ್ತಷ್ಟು ಮುಂದೆ ಹೋದರು ಆದರೆ ಅವರಿಗೆ ಜೊತೆಯಾಗಿ ಮುಂದೆ ಸಾಗಲು ಆಗಲಿಲ್ಲ, ಪುನಃ ಪ್ರಯತ್ನಿಸಿದರು ಮತ್ತೂ ವಿಫಲರಾದರು. 

ಕೊನೆಗೆ ತಮ್ಮ‌ ಜೀವ ಉಳಿಸಿಕೊಳ್ಳುವದಕ್ಕಾಗಿ ಅವಳನ್ನೂ ತ್ಯಜಿಸಿ ಮುನ್ನಡೆದರು.
ದುರ್ದೈವದಿಂದ ತಂದೆ-ತಾಯಿ ಇದ್ದೂ  ಅನಾಥನಾದ ಬಾಲಕ ಕೆಲಹೊತ್ತು ಅಳುತ್ತಾ ಅಲ್ಲಿಯೇ ಕುಳಿತ.
ಹಸಿವಿನಿಂದ ದಿಕ್ಕುತೋಚದಂತಾಗಿ ದೂರದವರೆಗೆ ದೃಷ್ಟಿನೆಟ್ಟು ಚಿಂತಿಸಿದ. ಎಲ್ಲಿ ನೋಡಿದರೂ ಹನಿ ನೀರಿಲ್ಲ, ಸಸ್ಯಗಳು, ಹಣ್ಣು, ಗೆಡ್ಡೆ-ಗೆಣಸು ಯಾವದೂ ಕಾಣಲಿಲ್ಲಿ. 

ಒಣಗಿನಿಂತ ಮರಗಳು ಹೆದರಿಕೆ ಹುಟ್ಟಿಸುತ್ತಿದ್ದವು. ಆ ಪುಟ್ಟ ಮಗು ವಿಚಲಿತನಾಗದೇ, ಸೋಲದೇ, ಹತಾಶನಾಗದೇ ತನ್ನಲ್ಲಿನ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ ಸ್ವಲ್ಪ ಮುಂದೆ ನಡೆದ.

ಅದೃಷ್ಟವಶಾತ್ ಅಲ್ಲಿ ಒಂದು ಅರಳಿ ಮರ ಕಂಡಿತು, ಸಮೀಪದಲ್ಲಿಯೇ ಒಂದು ಬಾವಿಯೂ ಇತ್ತು. ಹಸಿವಿನಿಂದ ಅರಳಿ ಹಣ್ಣುಗಳನ್ನೇ ತಿಂದ, ಬಾವಿ ನೀರು ಕುಡಿದ. ನಂತರ ಅದನ್ನೇ ರೂಢಿಮಾಡಿಕೊಂಡ.

ಮುಂದೆ ಅಲ್ಲಿಯೇ ಒಂದು ಆಶ್ರಮ ಕಟ್ಟಿಕೊಂಡ. ತನಗೆ ತಿಳಿಯದೇ ಇದ್ದರೂ ಆತ ಘೋರ ತಪಸ್ಸನ್ನು ಆಚರಿಸುತ್ತಿದ್ದ. 
ಒಮ್ಮೆ ದೇವರ್ಷಿ ನಾರದರು ಸಂಚರಿಸುತ್ತಾ ಅಲ್ಲಿಗೆ ಬಂದರು.
ಕಷ್ಟಕ್ಕೆ ಗುರಿಯಾಗಿ, ಕಠಿಣ ತಪಸ್ಸು ಆಚರಿಸುತ್ತಿದ್ದ ಮಗುವಿನ ಮೇಲೆ ಕರುಣೆಯಿಂದ ಆತನ ಉಪನಯನ ಸಂಸ್ಕಾರದ ಮೌಂಜಿಬಂಧನ, ಉಪವೀತ ಧಾರಣೆಯನ್ನು ಮಾಡಿದರು. 
ವೇದಾಧ್ಯಯನದ ಕ್ರಮಗಳನ್ನು ಆ ಬಾಲಕನಿಗೆ ತಿಳಿಸಿದರು. ಅತ್ಯಂತ ಶ್ರೇಷ್ಠವಾದ "ಒಂ ನಮೋ ಭಗವತೇ ವಾಸುದೇವಾಯ" ಎಂಬ ಶ್ರೀವಿಷ್ಣುದ್ವಾದಶಾಕ್ಷರ ಮಂತ್ರದ ಉಪದೇಶವನ್ನು ಮಾಡಿದರು.
ಆ ಋಷಿಪುತ್ರ ಅದೇ ಅರಳಿ ಮರದ ಹಣ್ಣು ತಿನ್ನುತ್ತಾ, ಬಾವಿಯ ನೀರು ಕುಡಿಯುತ್ತಾ ನಾರದರು ಉಪದೇಶಿಸಿದ ಶ್ರೀವಿಷ್ಣುಮಂತ್ರ ಜಪಿಸುತ್ತಾ ಧ್ಯಾನಮಗ್ನನಾದ. 
ಆ ಬಾಲಕನ ತಪಸ್ಸಿಗೆ ಮೆಚ್ಚಿ ಶ್ರೀಮನ್ನಾರಾಯಣನು ಕಮಲದಂಥ ದೇಹಕಾಂತಿ, ಪೀತಾಂಬರ ಉಟ್ಟು, ಕರಗಳಲ್ಲಿ ಶಂಖ,ಚಕ್ರ,ಗದಾ,ಪದ್ಮ ಧರಿಸಿ, ಗರುಡವಾಹನನಾಗಿ ಆ ಬಾಲತಪಸ್ವಿಗೆ ಪ್ರತ್ಯಕ್ಷನಾದ. 
ಪ್ರತ್ಯಕ್ಷನಾದ ಭಗವಂತನು ಸಂತೋಷದಿಂದ "ಋಷಿಪುತ್ರನೇ ನಿನಗೆ ಯಾವ ವರ ಬೇಕು ಕೇಳು, ಕೊಡುತ್ತೇನೆ" ಎಂದನು. 

ತಪೋನಿರತನಾಗಿದ್ದ ಬಾಲಕ ತಕ್ಷಣ ನಾರದರನ್ನು ನೋಡಿ, ಗುರುಗಳಾದ ನಾರದರ ಅಪ್ಪಣೆಯ ಮೇರೆಗೆ " ಪರಮಾತ್ಮನೇ ನನಗೆ ವಿದ್ಯೆಯನ್ನು, ಜ್ಞಾನವನ್ನು ಕೊಡು" ಎಂದು ಕೇಳಿಕೊಂಡ. 
ಆಗ ಭಗವಂತ ಆತನಿಗೆ ದಿವ್ಯಜ್ಞಾನವನ್ನೂ, ಯೋಗಸಿದ್ಧಿಯನ್ನು ಕೊಟ್ಟು ಮಾಯವಾದನು.
ನಂತರ ಆ ಬಾಲಕನು "ದೇವಋಷಿ ನಾರದರೆ, ನೀವು ದೈವಸ್ವರೂಪರಾಗಿ ಬಂದು ಕರುಣೆಯಿಂದ ಉಪನಯನ ಮಾಡಿ, ಉಪದೇಶ ಮಾಡಿ ನನ್ನನ್ನು ಬದುಕಿಸಿದ್ದೀರಿ. 
ತಾವು ಎಲ್ಲವನ್ನೂ ಬಲ್ಲವರು. ಇಲ್ಲಿಯವರೆಗೆ ನನಗೆ ಯಾವ ಗ್ರಹದೋಷವಿತ್ತು, ಯಾವ ದೇವರ ಅವಕೃಪೆಗೆ ಒಳಗಾಗಿದ್ದೆ, 

ನನ್ನ ತಂದೆ-ತಾಯಿಯಿಂದ ದೂರಾಗಿ ಇಷ್ಟು ಕಷ್ಟಪಡುವ ಅವಸ್ಥೆ ಯಾಕೆ ಬಂತು, ನಾನು ಬಾಲ್ಯದಲ್ಲಿ ಅನುಭವಿಸಿದ ಯಾತನೆಗೆ ಯಾರು ಕಾರಣರು. ದಯವಿಟ್ಟು ತಿಳಿಸಿ" ಎಂದು ಕೇಳಿಕೊಂಡ.

ಆಗ ನಾರದರು
"ಸೂರ್ಯದೇವನ ಮಗನಾದ ಶನೈಶ್ಚರ ಈ ಎಲ್ಲ ತೊಂದರೆಗಳಿಗೆ ಕಾರಣ. ಆ ಗ್ರಹದೇವತೆಯು ಬಹಳ ಕ್ರೂರಿ, ಮಹಾ ಅಹಂಕಾರಿ, ಆತ ಸೂರ್ಯನಂತೆ ಪ್ರಕಾಶಮಾನನಾಗಿ ಅಂತರಿಕ್ಷದಲ್ಲಿ ಇದ್ದಾನೆ. ಆತನಿಗೆ ವಿಶಿಷ್ಠ ಸ್ಥಾನವಿದೆ. 
ನಿಮ್ಮ ರಾಜ್ಯ ದುರ್ಭಿಕ್ಷವಾಗಲೂ ಆತನೇ ಕಾರಣ, ಆತ ದೇವತೆಗಳಿಗೂ ಪೀಡಿಸುತ್ತಾನೆ" ಎಂದು ಹೇಳಿದರು.
ಸ್ವತಃ ಭಗವಂತನ ಕೃಪಗೆ ಪಾತ್ರನಾದ, ತಪಃಶಕ್ತಿ, ಯೋಗಬಲಯುಳ್ಳ ಆ ಋಷಿಪುತ್ರ ಸಿಟ್ಟಿನಿಂದ ಅಂತರಿಕ್ಷವನ್ನೊಮ್ಮೆ ದಿಟ್ಟಿಸಿ ನೋಡಿದ. 
ಅಪಾರ ತೇಜಸ್ಸಿನಿಂದ ಹೊಳೆಯುತ್ತಿದ್ದ, ಗರ್ವದಿಂದ ಮೆರೆಯುತ್ತಿದ್ದ ಶನಿಯನ್ನು ತಕ್ಷಣ ಕೆಳಕ್ಕೆ ಕೆಡವಿದ! ಆಕಾಶದಿಂದ  ಬೀಳಿಸಿದ!! ಶನಿಯ ಅಹಂಕಾರವನ್ನೇ ಮುರಿದ.

ಆ ಋಷಿಯೇ ಪಿಪ್ಪಲಾದ, ಅರಳಿ ಮರದ ಹಣ್ಣು ತಿಂದು ತಪಸ್ಸು ಮಾಡಿದ್ದರಿಂದ ಅವರಿದೆ ಪಿಪ್ಪಲಾದ ಎಂಬ ಹೆಸರು ಬಂದಿತು.
ಸಿಟ್ಟಿನ ಭರದಲ್ಲಿ ಪಿಪ್ಪಲಾದ ಶನಿದೇವರನ್ನೇ ಕೆಳಗೆ ಇಳಿಯುವಂತೆ ಮಾಡಿದ್ದ. 
ಆ ಬಾಲ ಋಷಿಯ ತಪಸ್ಸಿಗೆ ಮೆಚ್ಚಿ ಗ್ರಹದೇವತೆಯಾದ ಶನೈಶ್ಚರನೂ ಕೂಡ ಅಭಯವನ್ನು ಕೊಡುತ್ತಾನೆ.
ಆಗ ಪಿಪ್ಪಲಾದ ಋಷಿಗಳು ಶನಿದೇವರ ಸ್ತೋತ್ರವನ್ನು ಮಾಡುತ್ತಾರೆ  

ಅದೇ "ಕೋಣಸ್ಥ ಪಿಂಗಲೋ ಬಭ್ರುಃ" ಎಂಬ ಸ್ತೋತ್ರ 

ಎಲ್ಲರೂ ಪಿಪ್ಪಲಾದ ಋಷಿ ಪ್ರಣೀತ ಸ್ತೋತ್ರ ಮಾಡೋಣ. 

June 1, 2025

ಶಿವವಾಸ

ರುದ್ರಾಭಿಷೇಕವನ್ನು ಯಾವಾಗ ಮಾಡಬೇಕು?
ರುದ್ರಾಭಿಷೇಕವನ್ನು  ಶಿವವಾಸವನ್ನು ನೋಡಿಕೊಂಡು ಮಾಡಬೇಕು. 
ರುದ್ರಾಭಿಷೇಕ, ಶಿವಪೂಜೆ/ಅರ್ಚನೆ, ಅನುಷ್ಠಾನ, ಮಹಾಮೃತ್ಯುಂಜಯ ಪೂಜೆ ಹೀಗೆ ಶಿವನಿಗೆ ಸಂಬಂಧಿಸಿದ ಪೂಜೆಗಳನ್ನು ಶಿವವಾಸವಿರುವ ದಿವಸ ಮಾಡಿದರೆ, ಅದು ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕಾಗಿಯೇ ಹೆಚ್ಚಿನ ಲಾಭ ಪಡೆಯಬೇಕಾದರೆ ಪೂಜೆ ಮಾಡುವ ದಿನದಂದು ಶಿವನು ವಾಸಿಸುವ ಸ್ಥಳವನ್ನು ನೋಡಬೇಕು. ಶಿವವಾಸವನ್ನು ಪಂಚಾಂಗದಲ್ಲಿ ಗಣಿತಕ್ರಮದಿಂದ ತಿಳಿದುಕೊಳ್ಳಬಹುದು. ಆ ದಿನದಂದು ಮಾಡಿದಾಗ ಭಗವಂತ‌ನು ನಿಮ್ಮ ಸಂಕಲ್ಪವನ್ನು ಈಡೇರಿಸುತ್ತಾನೆ. 

ಕೈಲಾಸೇ ಲಭತೇ ಸೌಖ್ಯಂ ಗೌರ್ಯಾ ಚ ಸುಖ ಸಂಪದಃ|
ವೃಷಭೇsಭೀಷ್ಟ ಸಿದ್ಧಿಃಸ್ಯಾತ್ ಸಭಾಯಾಮ್ ಸಂತಾಪಕಾರಿಣಿ||
ಭೋಜನೇ ಚ ಭವೇತ್ ಪೀಡಾ ಕ್ರೀಡಾಯಾಂ ಕಷ್ಟಮೇವಚ |
ಶ್ಮಶಾನೇ ಮರಣಂ ಜ್ಞೇಯಂ ಫಲವೇವಂ ವಿಚಾರಯೇತ್||

• _ಯಾವ ಸಮಯದಲ್ಲಿ ಮಾಡಬೇಕು?_
ಶಿವನು ಕೈಲಾಸದಲ್ಲಿರುವ ದಿನ, ಶಿವನು ಗೌರಿಯ ಪಕ್ಕದಲ್ಲಿರುವಾಗ, ಶಿವನು ನಂದಿಯ ಮೇಲೆ ಕುಳಿತಿರುವ ಸಮಯದಲ್ಲಿ ಮಾಡುವುದರಿಂದ ಶುಭ ಫಲ ದೊರೆಯುವುದು.

• _ಯಾವ ಸಮಯದಲ್ಲಿ ಮಾಡಬಾರದು?_
ಶಿವನು ಭೋಜನ ಮಾಡುತ್ತಿರುವಾಗ, ಕ್ರೀಡೆಯಲ್ಲಿರುವಾಗ, ಸ್ಮಶಾನದಲ್ಲಿರುವಾಗ, ಶಿವನು ಕೈಲಾಸದಲ್ಲಿ ಶಿವಗಣ ಸಭೆಯಲ್ಲಿರುವಾಗ ಮಾಡಿದರೆ ಅಶುಭ ಫಲ ದೊರೆಯುವುದು. 
• _ಈ ಕೆಳಗಿನ ಸಮಯದಲ್ಲಿ ಶಿವವಾಸವನ್ನು ಗಣನೆಗೆ ತೆಗೆದುಕೊಳ್ಳಬಾರದು._ 
1. ​ಯಾವುದೇ ಜ್ಯೋತಿರ್ಲಿಂಗದಲ್ಲಿ ಮಾಡುವ ರುದ್ರಾಭಿಷೇಕಕ್ಕಾಗಿ ಮುಹೂರ್ತ/ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
2. ​ಶ್ರಾವಣ ಮಾಸದಲ್ಲಿ ರುದ್ರಾಭಿಷೇಕಕ್ಕಾಗಿ ಮುಹೂರ್ತ/ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
3. ​ಸೋಮವಾರ, ಪ್ರದೋಷ, ಶಿವರಾತ್ರಿಯಂದು ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
4. ​ಜ್ಯೋತಿರ್ಲಿಂಗ ಪ್ರದೇಶದಲ್ಲಿ ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
5. ​ಮಾನಸ ಪೂಜೆಯಲ್ಲಿ ಶಿವವಾಸಗಳನ್ನು ನೋಡುವ ಅಗತ್ಯವಿಲ್ಲ.
6. ​ಸಾರ್ವಜನಿಕ ಕಲ್ಯಾಣಕ್ಕಾಗಿ ಮಾಡುವ ವಿಶೇಷ ಶಿವಸಾಧನೆಗಳಲ್ಲಿಯೂ ಶಿವವಾಸಗಳ ಅಗತ್ಯವಿಲ್ಲ.
7. ಪ್ರತಿನಿತ್ಯ ಅಭಿಷೇಕವಾಗುವ ದೇವರಿಗೆ ಶಿವವಾಸ ನೋಡುವ ಅಗತ್ಯವಿಲ್ಲ.
ಸಂ: ವೇ ಶ್ರೀ ಚನ್ನೇಶ ಶಾಸ್ತ್ರಿಗಳು ಮಠದ ಹಿರೇಕೆರೂರ(ಹೊಸಹಳ್ಳಿ)