February 21, 2025

ಶೋಷಣೆಯ ಇನ್ನೊಂದು ಮುಖ - ಮಹಿಳಾವಾದ

ಮಹಿಳಾವಾದ ಇಂದು ಜಗತ್ತಿನಾದ್ಯಂತ ವಿಚಾರವಂತರ ಗಮನ ಸೆಳೆಯುತ್ತಿದೆ. ಪುರುಷ ಪ್ರಧಾನವಾದ ಸಮಾಜ ನಾರಿಯನ್ನು ಅತ್ಯಂತ ಕೀಳು ಭಾವನೆಯಿಂದ ನೋಡುತ್ತಿದೆ, ಆಕೆಯ ಶೋಷಣೆ ನಡೆಯುತ್ತಿದೆ, ದಬ್ಬಾಳಿಕೆ, ಅತ್ಯಾ ಚಾರ, ಬಲಾತ್ಕಾರ ಮುಂತಾದವುಗಳಿಂದಾಗಿ ಆಕೆಯ ಬಾಳು ಬರೀ ಗೋಳು, ಅದರಲ್ಲೂ ಭಾರತದಂತಹ ರಾಷ್ಟ್ರಗಳಲ್ಲಿ ನಾರಿಯನ್ನು ಸುಡುತ್ತಾರೆ, ಆಕೆಯ ಕೇಶ ಮುಂಡನ ಮಾಡುತ್ತಾರೆ, ಆಕೆ ಜೀತದಾಳಾಗಿ ಅಡುಗೆ ಮನೆಯ ನಾಲ್ಕು ಗೋಡೆಗಳೊಳಗೆ ಬಂಧಿಸಲ್ಪಟ್ಟಿದ್ದಾಳೆ, ಭಾರತೀಯ ಧರ್ಮಶಾಸ್ತ್ರ ಆಕೆಯನ್ನು ಎರಡನೆಯ ದರ್ಜೆಯ ಪ್ರಜೆಯಾಗಿ ಪರಿಗಣಿಸುತ್ತದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

ಹೌದೇ ? ಹಾಗಾದರೆ ಇಂತಹ ಉಸಿರು ಕಟ್ಟುವ ವಾತಾವರಣದಲ್ಲಿಯೂ ಭಾರತದಲ್ಲಿ ಮಹಿಳೆಯರು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ರಾಜ್ಯಪಾಲರುಗಳು, ನ್ಯಾಯಾಧೀಶರುಗಳು, ವೈದ್ಯರು, ವಿಜ್ಞಾನಿಗಳು, ತಂತ್ರಜ್ಞಾನಿಗಳು, ಕಲೆಗಾರರು, ಕವಯಿತ್ರಿಗಳು ಆಗಿ ಬೆಳೆದಿದ್ದಾರಲ್ಲ, ಅದು ಹೇಗೆ ಸಾಧ್ಯವಾಯಿತು ? ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಂತಹ ಪ್ರಭಾವಶಾಲಿ ಲಲನಾಮಣಿಗಳನ್ನು ಕೊಟ್ಟ ದೇಶ ಬೇರೆ ಯಾವುದಿದೆ ?

ಹಾಗಾದರೆ ಶೋಷಣೆ ಎಂಬುದು ಅರ್ಥಹೀನವಾದ ಮಾತೇ ? ಶೋಷಣೆಯೇನಾದರೂ ಇದ್ದರೂ ಅದು ಆಕೆ ನಾರಿಯಾದುದರಿಂದ ಪುರುಷ ಸಮಾಜ ಆಕೆಯ ಮೇಲೆ ಮಾಡಿದ ಶೋಷಣೆಯಲ್ಲ. ಧರ್ಮ ಪ್ರೇರಿತವಾದ ಶೋಷಣೆಯೂ ಅಲ್ಲ. ಸಂಪ್ರದಾಯದಿಂದಾಗಿ ಬೆಳೆದು ಬಂದ ಅತ್ಯಾಚಾರವಲ್ಲ.

ಸಾಮಾನ್ಯವಾಗಿ ಶೋಷಣೆಗೊಳಗಾಗುವವರು ಇದ್ದರೆ ಅಲ್ಲಿ ಶೋಷಣೆ ನಡೆಯುತ್ತದೆ. ಗಂಡು ಹೆಣ್ಣಿನ ಶೋಷಣೆ ಮಾಡಬಹುದು, ಹೆಣ್ಣು ಗಂಡಿನ ಶೋಷಣೆ ಮಾಡಬಹುದು, ಉಳ್ಳವರು ಇಲ್ಲದವರ ಶೋಷಣೆ ಮಾಡಬಹುದು, ಸಶಕ್ತರು ನಿರ್ಬಲರ ಶೋಷಣೆ ಮಾಡಬಹುದು, ಪ್ರಭಾವಶಾಲಿಗಳು ಪ್ರಭಾವಶಾಲಿಗಳಲ್ಲದವರ ಶೋಷಣೆ ಮಾಡಬಹುದು, ಮೇಲಧಿಕಾರಿಗಳು ಕೆಳಅಧಿಕಾರಿಗಳ ಶೋಷಣೆ ಮಾಡಬಹುದು, ದೊಡ್ಡವರು ಚಿಕ್ಕವರ ಶೋಷಣೆ ಮಾಡಬಹುದು, ಚಿಕ್ಕವರು ದೊಡ್ಡವರ ಶೋಷಣೆ ಮಾಡಬಹುದು. ಯಾರು ಯಾವ ಪರಿಸ್ಥಿತಿಯಲ್ಲಿ ಯಾರ ಶೋಷಣೆ ಮಾಡುತ್ತಾರೆ ಎಂಬುದನ್ನು ನಾವು ವಿಶ್ಲೇಷಣೆ ಮಾಡಬೇಕು. ಅದಕ್ಕೆ ಧರ್ಮ ಕಾರಣವಾಗುವುದಿಲ್ಲ, ಸಂಪ್ರದಾಯ ಕಾರಣವಾಗುವುದಿಲ್ಲ, ಜಾತಿಭೇದ ಕಾರಣವಾಗುವುದಿಲ್ಲ. ಒಂದು ನಿಶ್ಚಿತ ಪರಿಸ್ಥಿತಿ ಕಾರಣವಾಗುತ್ತದೆ. ಗಂಡಸರು ಹೆಂಗಸರ ಶೋಷಣೆ ಮಾಡಿದಂತೆಯೇ ಹೆಂಗಸರು ಗಂಡಸರ ಶೋಷಣೆ ಮಾಡುವುದಿಲ್ಲವೇ ? ಹೆಂಗಸರೇ ಹೆಂಗಸರ ಶೋಷಣೆ ಮಾಡುವುದಿಲ್ಲವೇ ?

ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತದೆ ಎಂಬುದಕ್ಕೆ ಪ್ರಜ್ಞಾವಂತರು ಕೊಡುವ ಉದಾಹರಣೆಯೆಂದರೆ ಸತೀ ಸಹ ಗಮನ ಪದ್ಧತಿ, ಬಾಲ್ಯವಿವಾಹ, ವಿದ್ಯಾಹೀನತೆ, ವರದಕ್ಷಿಣೆ, ವಿಧವಾ ಮುಂಡನ ಇತ್ಯಾದಿ. ಇತ್ಯಾದಿ. ಇದಕ್ಕೆ ಕಾರಣ ಆಯಾ ಕಾಲದ ರಾಜಕೀಯ ಸಾಮಾಜಿಕ ಅನಿವಾರ್ಯತೆಗಳು, ಧರ್ಮವಲ್ಲ. ಸತೀ ಪದ್ದತಿಗೆ ಧರ್ಮದ ಅನುಮತಿಯಿಲ್ಲ. ಮಧ್ಯಕಾಲದ ವಿದೇಶೀ ಆಕ್ರಮಣಕಾರರು ಗಂಡಂದಿರನ್ನು ಕೊಂದು ಹೆಂಡತಿಯರ ಮಾನಭಂಗಕ್ಕೆ ಯತ್ನಿಸಿದಾಗ ಅವರಿಂದ ಶೋಷಣೆಗೊಳಗಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಂಡು ಪತಿಯನ್ನು ಸೇರುವುದು ಲೇಸು ಎಂಬ ದೃಢ ಸಂಕಲ್ಪದಿಂದ ಹೆಂಗಸರೇ ಚಿತೆಯನ್ನೇರಿ ಪ್ರಾಣತ್ಯಾಗ ಮಾಡಿ ಬೆಳೆಸಿದ ಸಂಪ್ರದಾಯ. ಅದಕ್ಕಿಂತ ಹಿಂದೆ ಆ ಸಂಪ್ರದಾಯವಿರಲಿಲ್ಲ. ಪಾಂಡುರಾಜ ಮಡಿದಾಗ ಮಾದ್ರಿ ಚಿತೆಯೇರಿದ್ದು ತನ್ನಿಂದಾಗಿ ತನ್ನ ಗಂಡ ಪ್ರಾಣತ್ಯಾಗ ಮಾಡಬೇಕಾಯಿತು ಎಂಬ ಪಶ್ಚಾತ್ತಾಪದಿಂದ. ಕುಂತಿ ಚಿತೆಯೇರಲಿಲ್ಲ. ಮಧ್ಯಕಾಲದ ರಾಜಕೀಯ ಪರಿಸ್ಥಿತಿಯಿಂದಾಗಿ ಸ್ವ-ಇಚ್ಛೆಯಿಂದ ಚಿತೆಗೇರಿ ಬೆಳೆಸಿದ ಈ ಸಂಪ್ರದಾಯ ದೇಶದ ಕೆಲವು ಭಾಗಗಳಲ್ಲಿ ಕಾಲಕ್ರಮೇಣ ಬೆಳೆಯತೊಡಗಿತು. ಮತ್ತೆ ಜನ ಪ್ರಜ್ಞಾವಂತರಾದಾಗ ಈ ಪದ್ಧತಿಗೆ ವಿದಾಯ ಹೇಳಿದರು. ಈಗಂತೂ ಇದೊಂದು ಅನವಶ್ಯಕ ಚರ್ಚೆ.

ಬಾಲ್ಯವಿವಾಹವೂ ಇಂತಹ ಕಾರಣಗಳಿಂದಾಗಿ ಹುಟ್ಟಿಕೊಂಡಿತು. ಪ್ರಾಚೀನ ಕಾಲದಲ್ಲಿ ಯುವಕರು ವಿದ್ಯಾವಂತೆಯರಾದ ಯುವತಿಯರನ್ನು ಮದುವೆಯಾಗಲು ಇಚ್ಛಿಸುತಿದ್ದರು ಎಂಬುದಕ್ಕೆ ಅಥರ್ವ ವೇದದ 'ಬ್ರಹ್ಮಚರ್ಯೇಣ ಕನ್ಯಾ ಯುವಾನಂ ವಿಂದತೇ ಪತಿಂ' ಎಂಬ ಮಾತು ಆಧಾರ. ಬೃಹದಾರಣ್ಯಕ ಉಪನಿಷತ್ತಿನಲ್ಲಿ 'ಅಥಯ ಇಚ್ಛೇತ್ ದುಹಿತಾ ಮೇ ಪಂಡಿತಾ ಜಾಯೇತ' ಎಂದು ಹೇಳಿದಂತೆ ಅಂದಿನ ತಂದೆ ತಾಯಿಗಳು ಪಂಡಿತೆಯರಾದ ಪುತ್ರಿಯರನ್ನು ಪಡೆಯಲಿಚ್ಛಿಸುತ್ತಿದ್ದರು. ವಿದ್ಯಾವಂತ ಪ್ರಜ್ಞಾವಂತ ಹೆಣ್ಣಿನಿಂದ ಎರಡೂ ಕುಲದ ಉದ್ಧಾರವಾಗುತ್ತದೆ ಎಂಬುದನ್ನು ಅವರು ಗಮನಿಸಿದ್ದರು. ವೇದ ಮಂತ್ರಗಳನ್ನು ಕಂಡು ಹಿಡಿದವರು ಗಂಡಸು ಋಷಿಗಳು ಮಾತ್ರವಲ್ಲ. 'ಇಪ್ಪತ್ತೇಳು ವಿದುಷಿಯರಾದ ಮಂತ್ರದ್ರಷ್ಟಾರ ಬ್ರಹ್ಮವಾದಿನಿಯರ ಉಲ್ಲೇಖ ವೇದದಲ್ಲಿದೆ. ಶಂಕರಾಚಾರ್ಯರಿಗೂ ಮಂಡನ ಮಿಶ್ರರಿಗೂ ವಿದ್ವತ್ ಸದಸ್ಸಿನಲ್ಲಿ ನಡೆದ ವಾಗ್ವಾದದಲ್ಲಿ ನಿರ್ಣಾಯಕ ತೀರ್ಪುಗಾರಳಾಗಿ ಅಧ್ಯಕ್ಷ ಸ್ಥಾನದಲ್ಲಿ ಆಸೀನಳಾದವಳು ಮಂಡನ ಮಿಶ್ರರ ವಿದುಷಿ ಪತ್ನಿ.

ವರದಕ್ಷಿಣೆಯೂ ಧರ್ಮಸಮ್ಮತವಾದ ಆಚರಣೆಯಲ್ಲ. ಆಧುನಿಕ ಕಾಲದಲ್ಲಿ ಧನವಂತರು ಬೆಳೆಸಿಕೊಂಡು ಬಂದ ಸಂಪ್ರದಾಯ. ಇಂತಹ ಪದ್ಧತಿ ಒಮ್ಮೆ ಪ್ರಚಾರಕ್ಕೆ ಬಂದರೆ ಜನ ಅದರಿಂದ ಆದಷ್ಟು ಹೆಚ್ಚಿಗೆ ಪ್ರಯೋಜನ ಪಡೆಯಬಯಸುತ್ತಾರೆ. ಸಮಾಜ ಬಯಸಿದರೆ ಈ ಅನಿಷ್ಟ ಪದ್ಧತಿಯನ್ನು ನಿವಾರಿಸುವುದು ಕಷ್ಟದ ಕೆಲಸವಲ್ಲ. ಇದರ ಪ್ರಯೋಜನ ಪಡೆಯಲಿಕ್ಕಾಗಿ ಹೆಣ್ಣಿನ ಶೋಷಣೆ ಮಾಡುವುದರಲ್ಲಿ ಗಂಡಸಿನ ಪಾಲಿನ ತಪ್ಪಿಗಿಂತ ಹೆಂಗಸರ ಪಾಲಿನ ತಪ್ಪು ಹೆಚ್ಚು ಎನಿಸುತ್ತದೆ. ವರದಕ್ಷಿಣೆ ತಾರದಿದ್ದುದಕ್ಕಾಗಿ ಹುಡುಗಿಗೆ ಹಿಂಸೆ ಕೊಡುವುದರಲ್ಲಿ ಅತ್ತೆ ನಾದಿನಿಯರದ್ದು ಸಿಂಹಪಾಲು ಎಂದು ಹೇಳಬಹುದು.

ಚಲನಚಿತ್ರ, ದೂರದರ್ಶನ, ವೃತ್ತಪತ್ರಿಕೆ ಮುಂತಾದ ಮಾಧ್ಯಮಗಳಲ್ಲಿ ಹೆಣ್ಣಿನ ಶೋಷಣೆಯಾಗುವುದಕ್ಕೆ ಹೆಣ್ಣೆ ಕಾರಣ ಎನ್ನಬಹುದು. ಅರೆ ನಗ್ನಸ್ಥಿತಿಯಲ್ಲಿ ತಾನು ದೇಹ ಪ್ರದರ್ಶನ ಮಾಡುವುದಿಲ್ಲ ಎಂದು ಮಹಿಳೆ ನಿರ್ಧರಿಸಿದರೆ ಯಾರೂ ಆಕೆಯನ್ನು ಬಲಾತ್ಕರಿಸಲಾರರು. ಇಲ್ಲಿ ಮಹಿಳೆ ತನ್ನ ಸ್ವಾರ್ಥಕ್ಕಾಗಿ ತನ್ನ ಶೋಷಣೆ ತಾನೇ ಮಾಡಿಕೊಳ್ಳುತ್ತಾಳೆ. ಆಕೆ ಅಶ್ಲೀಲತೆಯ ದಾರಿ ಹಿಡಿಯಲಿಕ್ಕೆ ಆಕೆಯನ್ನು ಪ್ರೋತ್ಸಾಹಿಸುವವಳು ಇನ್ನೊಬ್ಬ ಮಹಿಳೆಯೇ ಆಗಿರುತ್ತಾಳೆ ಎಂಬುದೂ ಸತ್ಯ. ಹಾಗಾದರೆ ಪುರುಷನೇ ಮಹಿಳೆಯ -ಶೋಷಣೆಗೆ ಕಾರಣನು ಎಂದು ಹೇಳುವುದು ಎಷ್ಟು ಸತ್ಯ ?

ತುಳುವಿನಲ್ಲಿ ಒಂದು ಗಾದೆಯಿದೆ. ಸ್ವಲ್ಪ ಅಶ್ಲೀಲವಾದರೂ ಚಿಂತನಯೋಗ್ಯ. 'ತುತುದೀ ಕುಂಟು ಗಟ್ಟಿ ಉಂಡಡ ಬತ್ತೀ ಮಿಂಡೆ ದಾನೆ ಮಲ್ಪರೆ ಸಾಧ್ಯ ?' ಉಟ್ಟುಕೊಂಡ ಸೀರೆ ಗಟ್ಟಿಯಿದ್ದರೆ ಅಟ್ಟಿಕೊಂಡು ಬಂದ ವಿಟ ಏನು ಮಾಡಲಿಕ್ಕೆ ಸಾಧ್ಯ ? ತುಳು ಪಾಡ್ದನಗಳಲ್ಲಿ ತನ್ನ ಮಾನರಕ್ಷಣೆ ತಾನೇ ಮಾಡಿಕೊಂಡ ದಿಟ್ಟ ಮಹಿಳೆಯರ ಕತೆಗಳಿವೆ. ಶೋಷಣೆ ಮಾಡ ಬಯಸುವವರನ್ನು ಮೆಟ್ಟಿ ನಿಲ್ಲುವ ವೀರ ರಮಣಿಯರ ಉಲ್ಲೇಖವಿದೆ. ಸಿರಿ, ನಾಗಸಿರಿ, ಪರತಿ ಮಂಗಣೆ ಮುಂತಾದವರ ವೀರಗಾಥೆಗಳಿವೆ. ಆಕೆ ತನ್ನ ಶೀಲ ರಕ್ಷಣೆ ಮಾಡಿಕೊಳ್ಳುವವಳಾದರೆ ಯಾರೂ ಆಕೆಯ ಶೋಷಣೆ ಮಾಡಲಾಗದು. ಅಶೋಕ ವನದಲ್ಲಿ ಸೀತೆಯ ಮಾನ ರಕ್ಷಣೆ ಮಾಡಿದ್ದು ಯಾರು ? ಶ್ರೀರಾಮನೇ ? ಹನುಮಂತನೇ ? ಲಕ್ಷ್ಮಣನೇ ? ವಿಭೀಷಣನೇ ? ಯಾರೂ ಅಲ್ಲ. ಸೀತೆಯ ರಕ್ಷಣೆ ಮಾಡಿದ್ದು ಸೀತೆಯೇ.

ವಿಧವಾ ಮುಂಡನ ಪದ್ಧತಿ ಪ್ರಚಾರಕ್ಕೆ ಬಂದದ್ದೂ ಭಾರತದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕೆ ಬಂದ ಮೇಲೆ ಬೌದ್ಧ ಸನ್ಯಾಸಿನಿಯರಂತೆ ಇವರೂ ತ್ಯಾಗ ವೈರಾಗ್ಯದ ಜೀವನ ನಡೆಸುವಂತಾಗಬೇಕು, ಗಂಡಸರು ಆಕೆಯ ಶೀಲಭಂಗಕ್ಕೆ ಪ್ರಯತ್ನಿಸುವಂತೆ ಆಗಬಾರದು ಎಂಬ ದೃಷ್ಟಿಯಿಂದ. ಈಗ ಅದೂ ಮಾಯವಾಗುತ್ತಿದೆ. ಏಕೆಂದರೆ ನಮ್ಮ ಧರ್ಮ ಸಂಪ್ರದಾಯಗಳು ನಿಂತ ನೀರಿನ ಹಾಗಲ್ಲ. ಕಾಲಕಾಲಕ್ಕೆ ಕಾಲಧರ್ಮಕ್ಕನುಗುಣವಾಗಿ ಸಂಪ್ರದಾಯ - ಆಚರಣೆಗಳು ಬದಲಾಗುತ್ತಲೇ ಬರುತ್ತವೆ.

ಹೀಗಾಗಿ ನಾವು ಯಾವುದೋ ಒಂದು ಕಾಲಘಟ್ಟದಲ್ಲಿ ಯಾವನೋ ಒಬ್ಬ ಧರ್ಮಶಾಸ್ತ್ರ - ಪಂಡಿತ ಒಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರೆ ಅದನ್ನೇ ಆಧಾರವಾಗಿಟ್ಟುಕೊಂಡು ಹಿಂದೂ ಧರ್ಮದಲ್ಲಿ ಹಾಗೆ ಹೀಗೆ ಎನ್ನುವಂತಿಲ್ಲ. ಧರ್ಮಶಾಸ್ತ್ರಕಾರರು ಹಲವಾರು ಮಂದಿ ಆಗಿಹೋಗಿದ್ದಾರೆ. ಆಯಾ ಕಾಲಧರ್ಮಕ್ಕನುಸಾರವಾಗಿ ತಮ್ಮ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಒಬ್ಬರು ಹೇಳಿದ್ದಕ್ಕೂ ಇನ್ನೊಬ್ಬರು ಹೇಳಿದ್ದಕ್ಕೂ ವ್ಯತ್ಯಾಸವಿದೆ. ಒಬ್ಬರು ಹೇಳಿದ್ದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಇನ್ನೊಬ್ಬರು ಹೇಳಿದ್ದಿದೆ. ಮನು, ಯಾಜ್ಞವಲ್ಕ, ಗೌತಮ, ಕೌಟಿಲ್ಯ, ಅಶ್ವಲಾಯನ, ಬೋಧಾಯನ ಮುಂತಾದವರಲ್ಲಿ ಅಭಿಪ್ರಾಯ ಭೇದಗಳಿವೆ. ಆಯಾ ಕಾಲಘಟ್ಟಗಳಲ್ಲಿ ರಾಜರುಗಳೂ ವಿದ್ವಾಂಸರುಗಳೂ ಸಾರ್ವಜನಿಕರೂ ವಿಮರ್ಶೆಮಾಡಿ ತಮ್ಮ ಕಾಲಕ್ಕೆ ಹೊಂದಿಕೆಯಾಗುವಂತಹ ನಿಯಮಗಳನ್ನೂ ಸಂಪ್ರದಾಯಗಳನ್ನೂ ನೀತಿ ಸಂಹಿತೆಗಳನ್ನೂ ರೂಪಿಸಿಕೊಂಡು ಬಂದಿದ್ದಾರೆ. ಹೀಗಾಗಿ ಒಬ್ಬನ ಅಭಿಪ್ರಾಯವನ್ನು ಎತ್ತಿ ಹಿಡಿದು ನಮ್ಮ ಸಂಸ್ಕೃತಿಯೇ ಹೀಗೆ ಎಂದು ತೀರ್ಪು ಕೊಡುವುದು ಸರಿಯಲ್ಲ. ಎಲ್ಲರ ಅಭಿಪ್ರಾಯಗಳನ್ನೂ ಕ್ರೋಢೀಕರಿಸಿ ನಮ್ಮ ಕಾಲ ಧರ್ಮಕ್ಕನುಸಾರವಾಗಿ ನಮ್ಮದೇ ಆದ ನೀತಿ ಸಂಹಿತೆಯನ್ನು ಬೆಳೆಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ, ಹಾಗೆ ನಡೆದುಕೊಂಡು ಬಂದು ನಮ್ಮ ಸಂಸ್ಕೃತಿ ಪರಿವರ್ತನಶೀಲವಾಗಿ ಮುಂದುವರಿಯುತ್ತಿದೆ.

ಕೆಲವೊಮ್ಮೆ ನಾವು ನಮ್ಮ ಪೂರ್ವಜರ ಅಭಿಪ್ರಾಯಗಳನ್ನು ತಪ್ಪಾಗಿ ಅರ್ಥಮಾಡಿ ಕೊಳ್ಳುವುದೂ ಇದೆ. 'ಮನು ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ' ಎಂದು ಹೇಳಿದ್ದಕ್ಕೆ ನಾವು ಸಾಕಷ್ಟು ಅಪಾರ್ಥ ಕಲ್ಪಿಸಿದ್ದೇವೆ. ಹೆಂಗಸರಿಗೆ ಸ್ವಾತಂತ್ರ್ಯ ಕೊಡಬಾರದು, ಆಕೆಯ ಶೋಷಣೆ ಮಾಡಬೇಕು ಎಂಬರ್ಥದಲ್ಲಿ ಅವನು ಬರೆದೇ ಇಲ್ಲ. ಆಕೆಗೆ ಕೆಲವು ನೈಸರ್ಗಿಕವಾದ ದೌರ್ಬಲ್ಯಗಳಿವೆ. ಸ್ವತಂತ್ರಳಾಗಿ ಇನ್ನೊಬ್ಬರ ಸಹಾಯವಿಲ್ಲದೆ ಬದುಕಲು ಕೆಲವು ಅಡಚಣೆಗಳಿವೆ. ಆದ್ದರಿಂದ ಬಾಲ್ಯಕಾಲದಲ್ಲಿ ಆಕೆಗೆ ತಂದೆ ರಕ್ಷಣೆ ಕೊಡಬೇಕು, ತಾರುಣ್ಯದಲ್ಲಿ ಗಂಡ ರಕ್ಷಣೆ ಕೊಡಬೇಕು, ವೃದ್ಧಾಪ್ಯದಲ್ಲಿ ಮಕ್ಕಳ ಸಹಾಯ ಬೇಕು ಎಂದು ನಾರಿಯರ ಬಗ್ಗೆ ಅತ್ಯಂತ ಅನುಕಂಪದ ಮಾತುಗಳನ್ನು ಹೇಳಿದ್ದಾನೆ. ನಮ್ಮ ನಾರಿಯರು ಮನುವಿಗೆ ಕೃತಜ್ಞರಾಗಿರಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಾಲ್ಯದಲ್ಲಿ ಹುಡುಗಿಯರಿಗೆ ತಂದೆ ತಾಯಿಗಳ ರಕ್ಷಣೆಯಿಲ್ಲದೆ ಪ್ರೌಢಶಾಲಾ ಮಟ್ಟದಲ್ಲಿಯೇ ತಪ್ಪುದಾರಿ ಹಿಡಿದು ಗರ್ಭಿಣಿಯರಾಗಿ ಆ ಪ್ರಿಯತಮನಿಂದ ಪರಿತ್ಯಕ್ತಳಾಗಿ ಮಗುವನ್ನು ಪಡೆದು 'ಸಿಂಗಲ್ ಮದರ್' ಆಗಿ ಪಡಬಾರದ ಪಾಡು ಪಡುತ್ತಾಳೆ. ತಾರುಣ್ಯದಲ್ಲಿ ಗಂಡನ ರಕ್ಷಣೆಯಿಲ್ಲದೆ ಅತ್ಯಾಚಾರಕ್ಕೊಳಗಾಗಿ ಮಾನಸಿಕ ವೇದನೆಗೊಳಗಾಗುತ್ತಾಳೆ. ವೃದ್ಧಾಪ್ಯದಲ್ಲಿ ಮಕ್ಕಳ ರಕ್ಷಣೆಯಿಲ್ಲದೆ ವೃದ್ಧಾಶ್ರಮದಲ್ಲಿ ಮಕ್ಕಳ ವಾತ್ಸಲ್ಯದಿಂದ ವಂಚಿತರಾಗಿ ಅನಾಥ ಪ್ರಜ್ಞೆಯಿಂದ ದೈಹಿಕ ಮಾನಸಿಕ ದುಃಖಗಳಿಗೊಳಗಾಗಿ ಯಾತನೆ ಪಡುತ್ತಾಳೆ. ನಮ್ಮ ಮಹಿಳೆಯರು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಅಲ್ಲಿಯ ಬಾಲಕಿಯರ, ತರುಣಿಯರ ಹಾಗೂ ಮುದುಕಿಯರ ಮೂಕ ವೇದನೆಗಳನ್ನು ವಿಶ್ಲೇಷಿಸಿದರೆ ಮನುವಿನ ಮೇಲಣ ಅವರ ಗೌರವ ಖಂಡಿತ ಹೆಚ್ಚಾಗುತ್ತದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ 'ಎಲ್ಲಿ ನಾರಿಯರು ಗೌರವದಿಂದ ಪೂಜಿಸಲ್ಪಡುತ್ತಾರೋ ಅಲ್ಲಿ ದೇವರ ಸಾನ್ನಿಧ್ಯವಿದೆ' ಎಂಬ ಮುತ್ತಿನಂತಹ ಮಾತನ್ನು ಹೇಳಿದ ಮನು ಹೆಂಗಸರ ಶೋಷಣೆ ಮಾಡಿ ಎಂಬರ್ಥದಲ್ಲಿ ಹೇಳಿಯಾನೇ ? ಶೋಷಣೆಯ ಅರ್ಥದಲ್ಲಿ ಹೇಳಿದ್ದರೆ 'ರಕ್ಷತಿ' ಎಂಬ ಶಬ್ದ ಉಪಯೋಗಿಸುತ್ತಿದ್ದನೇ ?

ನಾರಿಗೆ ನಮ್ಮ ಸಮಾಜ ಕೊಟ್ಟಷ್ಟು ಸ್ಥಾನಮಾನ ಪ್ರಪಂಚದ ಯಾವ ನಾಗರಿಕತೆಯೂ ಕೊಡಲಿಲ್ಲ. ನಾವು ಹೆಣ್ಣನ್ನು ಕಾಣುವುದು 'ಮಾತೆ' ಯಾಗಿ, 'ದೇವಿ'ಯಾಗಿ. ಅಪವಾದಗಳಿರಬಹುದು. ಅದು ವೈಯಕ್ತಿಕ ನೆಲೆಯಲ್ಲಿ ಕೆಲವರಿಂದ ಆಗಿರಬಹುದು. ಅದಕ್ಕೆ ನಮ್ಮ ಸಂಸ್ಕೃತಿ ಕಾರಣವಲ್ಲ. ಹೆಣ್ಣನ್ನು ಬಿಟ್ಟು ಗಂಡು ಯಾವ ಧಾರ್ಮಿಕ ಆಚರಣೆಯನ್ನೂ ಮಾಡುವಂತಿಲ್ಲ. ಯಾವ ಸಾಮಾಜಿಕ ಕಾರ್ಯವೂ ಆಕೆಯಿಲ್ಲದೆ ನಡೆಯುವಂತಿಲ್ಲ, ಯಾವ ಹಬ್ಬಹರಿದಿನವೂ ಅವಳಿಲ್ಲದೆ ನಡೆಯುವುದಿಲ್ಲ. ವಿಷ್ಣುವಿಗೆ ಜಗತ್ತಿನ ಪಾಲನೆ ಪೋಷಣೆ ಮಾಡಬೇಕಾದರೆ ಹಣ ಬೇಕಲ್ಲವೇ ? ಅದನ್ನು ಕೊಡುವವಳು ಅವನ ಪತ್ನಿ ಲಕ್ಷ್ಮಿ. ಬ್ರಹ್ಮನ ಸೃಜನಶೀಲತೆ ಸೃಷ್ಟಿಕಾರ್ಯಕ್ಕೆ ಬೇಕು ಬುದ್ಧಿಶಕ್ತಿ. ಅದಕ್ಕೆ ಬೇಕು ವಿದ್ಯಾಧಿದೇವತೆಯಾದ ಸರಸ್ವತಿ. ಶಿವನಿಗೆ ಧ್ವಂಸ ಮಾಡಲು ಬೇಕು ಶಕ್ತಿ. ಅದಕ್ಕಾಗಿ ಶಕ್ತಿ ಪ್ರತಿರೂಪಳಾದ ಪಾರ್ವತಿ ಬೇಕು. ಲಕ್ಷ್ಮಿ ಸರಸ್ವತಿ ಪಾರ್ವತಿಯರಿಲ್ಲದೆ ನಮ್ಮ ತ್ರಿಮೂರ್ತಿಗಳಿಂದ ಏನೂ ಮಾಡಲಿಕ್ಕಾಗುವುದಿಲ್ಲ. ಗಂಡು ಹೆಣ್ಣು ವಾಗರ್ಥದಂತೆ ಕೂಡಿದಾಗ ಎಲ್ಲ ಸಾಧ್ಯವಾಗುತ್ತದೆ. ಪ್ರಕೃತಿ-ಪುರುಷರ ಮಿಲನದಿಂದ ಜಗತ್ತು ನಡೆಯುತ್ತದೆ. ಅಲ್ಲಿ ಶೋಷಣೆಯಿಲ್ಲ, ಸಮಾನತೆಯಿದೆ.

ಡಾ। ಸುಶೀಲಾ ಪಿ. ಉಪಾಧ್ಯಾಯ

ಸ್ವಾರ್ಥದ ಪರಿಧಿಯಲ್ಲಿ ಸ್ತ್ರೀ

     ಎಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎನ್ನುವುದು ವೇದಗಳ ಕಾಲದಿಂದಲೂ ಕೇಳಿ ಬಂದ ಮಾತು. ಈ ಮಾತು ಎಲ್ಲಾ ಕಡೆಗೂ ಅನ್ವಯಿಸುತ್ತದೆ. ಮನೆ, ಕುಟುಂಬ, ಸಮಾಜ ಎಲ್ಲಿಯೇ ಆಗಲಿ ಸ್ತ್ರೀ ಗೌರವಿಸಲ್ಪಡುವಲ್ಲಿ ಸುಖ-ಶಾಂತಿ ಸಮಾಧಾನಗಳು ನೆಲೆಸಿರುತ್ತವೆ.

    ಎಲ್ಲಾ ಸ್ಥಾನಗಳಿಗಿಂತಲೂ ಪೂಜನೀಯ ಸ್ಥಾನ ಮಾತೆಯದು. ತಾಯಿ ಎನ್ನುವ ಪದವೇ ಅತ್ಯಂತ ಆದರಣೀಯವಾದುದು. ತಾಯ್ತನದ ಹಿರಿಮೆಯನ್ನು ತನ್ನ ಮಕ್ಕಳಿಗೆ ಮಾತ್ರ ಸೀಮಿತಗೊಳಿಸದೆ, ಈ ಮಾತೃವಾತ್ಸಲ್ಯವೆಂಬ ಮಹಾಪೂರದ ಕೆಲವು ಹನಿಗಳನ್ನಾದರೂ ಎಲ್ಲಾ ಮಕ್ಕಳಿಗೂ ಹಂಚುವಂತಾಗಬೇಕು. ತನ್ನ ಮಗುವಿಗೆ ಸ್ವಲ್ಪ ನೋವಾದರೂ ಕಣ್ಣೀರಿಡುವ ತಾಯಿಗೆ ಅದೇ ವಯಸ್ಸಿನ ಇನ್ನೊಂದು ಮಗು ತನ್ನ ಮನೆಯಲ್ಲಿ ಬೆಳಗ್ಗಿನಿಂದ ಸಾಯಂಕಾಲದವರೆಗೆ ದುಡಿದು ಸ್ವಲ್ಪ ಆರಾಮವಾಗಿ ಕುಳಿತರೆ ಸಹಿಸಲಾಗುವುದಿಲ್ಲ. ತನ್ನ ಮಗು ಒಂದು ಹೊತ್ತಿನ ಊಟ ಬಿಟ್ಟರೆ ಸಂಕಟಪಡುವ ತಾಯಿ, ಇಡೀ ದಿನ ಉಪವಾಸ ದ್ದ ಇನ್ನೊಂದು ಮಗು ಮನೆ ಬಾಗಿಲಿಗೆ ಬಂದು ಅನ್ನ ಬೇಡಿದರೆ ನೀಡುವಂತಹ ಔದಾರ್ಯ ತೋರುವುದಿಲ್ಲ. ಮಾತೃವಾತ್ಸಲ್ಯ ಎನ್ನುವುದು ತನ್ನ ಮಕ್ಕಳಿಗೆ ಮಾತ್ರ ಎನ್ನುವ ಸಂಕುಚಿತ ಭಾವನೆಯನ್ನು ಬಿಟ್ಟು ಹೃದಯ ವೈಶಾಲ್ಯ ಬೆಳೆಸಿಕೊಂಡರೆ  ʼಮಾತೆʼ ಎನ್ನುವ ಪದಕ್ಕೆ ಅರ್ಥ ಗೌರವ ನೀಡಿದಂತಾಗುತ್ತದೆ.

    ಕುಟುಂಬ ವರ್ಗ, ಬಂಧು ಬಾಂಧವ, ಸ್ನೇಹಿತರ ಜೊತೆಗಿನ ಸಂಬಂಧ ಸೌಹಾರ್ದಯುತವಾಗಿಸಿಕೊಳ್ಳುವಲ್ಲಿ ಸ್ತ್ರೀಯ ಪಾತ್ರ ಮಹತ್ತರವಾದುದು. ರಕ್ತ ಸಂಬಂಧ, ಭಾವನಾತ್ಮಕ ಸಂಬಂಧ, ವ್ಯಾವಹಾರಿಕ ಸಂಬಂಧಗಳೇ ಆಗಲಿ ಅವುಗಳನ್ನು ಮಧುರವಾಗಿಸಿಕೊಳ್ಳುವಲ್ಲಿ ಹೆಣ್ಣಿನ ಹೊಣೆಗಾರಿಕೆ ಹೆಚ್ಚಿನದಾಗಿರುತ್ತದೆ. ಯಾವುದೇ ಮನೆಗೆ ಹೋಗಿ, ಅಲ್ಲಿನ ಗೃಹಿಣಿ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ ನಮ್ಮ ಮನಸ್ಸಿಗೆ ಆನಂದವಾಗುತ್ತದೆ. ಇನ್ನೊಮ್ಮೆ ಅವರಲ್ಲಿಗೆ ಹೋಗೋಣ, ಅವರ ಜೊತೆ ಬಾಂಧವ್ಯ ಇರಿಸಿಕೊಳ್ಳೋಣ ಎನಿಸುತ್ತದೆ. ನಮ್ಮ ನ್ಯೂಕ್ಲಿಯಸ್ ಫ್ಯಾಮಿಲಿ ಬಿಟ್ಟರೆ ಬೇರೆ ಯಾರ ಅಗತ್ಯವೂ ನಮಗಿಲ್ಲ ಎನ್ನುವ ಭಾವನೆ ಪ್ರಧಾನವಾಗಿ, ನಮಗೆ ಔಪಚಾರಿಕ ಸ್ವಾಗತ .ದೊರೆತರೆ, ಇನ್ನೊಮ್ಮೆ ಅಲ್ಲಿಗೆ ಹೋಗುವ ಮನಸ್ಸಾಗದು. ಪರಸ್ತ್ರೀ ವ್ಯಾಮೋಹ ಕುಡಿತದಂತಹ ಕೆಟ್ಟ ಚಾಳಿಗಳನ್ನು ಬಿಡಿಸಲು ಕಷ್ಟವಾದರೂ ಪುರುಷರ ಇನ್ನಾವುದೇ ಅವಗುಣಗಳನ್ನು ತಿದ್ದಬಹುದು. ಪ್ರತಿಯೊಬ್ಬ ಪುರುಷನ ಯಶಸ್ಸಿ ಹಿಂದೆ ಸ್ತ್ರೀಯಿದ್ದಾಳೆ ಎನ್ನುವ ಹಾಗೆ ಪುರುಷರ ದೌರ್ಬಲ್ಯಗಳ ಹಿಂದೆಯೂ ಸ್ತ್ರೀಯ ಕೈವಾಡವಿದೆ. ಕೈ ಹಿಡಿದವನನ್ನು ಕೇವಲ ತನ್ನ ಸ್ವಾರ್ಥಕ್ಕಾಗಿ ತನ್ನ ಕೈಗೊಂಬೆಯಂತೆ ಬಳಸಿ ಕೊಳ್ಳದೆ ತನಗೂ ಸಮಾಜಕ್ಕೂ ಬೇಕಾದ ಯೋಗ್ಯ ವ್ಯಕ್ತಿಯನ್ನಾಗಿ ರೂಪಿಸಬೇಕು.

    ಶೋಷಣೆಯ ಬಗ್ಗೆ ಹೇಳುವುದಾದರೆ ಪುರುಷರಿಗಿಂತ ಹೆಚ್ಚಾಗಿ ಹೆಣ್ಣು ಹೆಣ್ಣಿನಿಂದಲೇ ಶೋಷಿಸಲ್ಪಡುತ್ತಾಳೆ. ಗಂಡ ಕೊಡುವ ಹಿಂಸೆಗಿಂತಲೂ, ಅತ್ತೆ-ನಾದಿನಿಯವರಿಂದ ಕಿರುಕುಳ ಅನುಭವಿಸುವವರ ಸಂಖ್ಯೆ ಅಧಿಕವಾಗಿರುತ್ತದೆ. ತನ್ನ ಮಗಳ ವಯಸ್ಸಿನ ಕೆಲವೊಮ್ಮೆ ಅದಕ್ಕಿಂತಲೂ ಚಿಕ್ಕ ವಯಸ್ಸಿನ ಹುಡುಗಿ ಮನೆಗೆ ಸೊಸೆಯಾಗಿ ಬಂದಾಗ ಅವಳಿಗೆ ಆ ಮನೆಯಲ್ಲಿ ಸಿಗುವ ಸ್ಥಾನ ಮಾತ್ರ ಎರಡನೇ ದರ್ಜೆಯದು. ತನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಅಳಿಯನನ್ನು 'ದೇವರಂತವನು'' ಎಂದು ಹೊಗಳುವ ತಾಯಿ ಅದೇ ಅನುರಾಗವನ್ನು ತನ್ನ ಮಗ ವ್ಯಕ್ತಪಡಿಸಿದರೆ ''ಹೆಂಡತಿಯ ಗುಲಾಮ'" ಎಂದು ಜರೆಯುತ್ತಾಳೆ. ಇಂತಹ ಮನೋಭಾವನೆ ಖಂಡಿತ ಬದಲಾವಣೆಯಾಗಬೇಕು.

    ಬಸ್ಸಿನಲ್ಲಿ ಪ್ರಯಾಣ ಮಾಡುವಾಗ, ಎಳೆಯ ಕಂದಮ್ಮಗಳನ್ನು ಎತ್ತಿಕೊಂಡ ತಾಯಂದಿರೋ, ತುಂಬು ಗರ್ಭಿಣಿಯರೋ, ಕೈಕಾಲು ನಡುಗುವ ಮುದುಕಿಯರೋ ನಿಲ್ಲಲಾರದೆ ಕಷ್ಟಪಡುತ್ತಿರುವಾಗ ಆರಾಮವಾಗಿ ಸೀಟಿನಲ್ಲಿ ಕುಳಿತ ಹೆಂಗಳೆಯರ ಹೆಂಗರುಳಿಗೆ ಥಟ್ಟನೇ ಸೀಟು ಬಿಟ್ಟು ಕೊಡುವ ಮನಸ್ಸಾಗುವುದಿಲ್ಲ. ನೂರಕ್ಕೆ ಎಪ್ಪತ್ತೈದರಷ್ಟು ಪುರುಷರೇ ಎದ್ದು ಸೀಟು ಬಿಟ್ಟು ಕೊಡುತ್ತಾರೆ.

    ಭಾರತ ಸುಂದರಿ, ಲೋಕ ಸುಂದರಿ, ವಿಶ್ವ ಸುಂದರಿ ಕಿರೀಟಗಳನ್ನು ತಮ್ಮದಾಗಿಸಿಕೊಳ್ಳಲು ಉನ್ನತ ಮೌಲ್ಯಗಳ ಬಗ್ಗೆ ಮಧುರವಾಗಿ ಉಲಿಯುವ ಸುಂದರಿಯರಿಗಿಂತ, ತನ್ನ ಪ್ರಾಣವನ್ನು ಲೆಕ್ಕಿಸದೆ ಸಮಯ ಪ್ರಜ್ಞೆಯಿಂದ ಅನೇಕರ ಪ್ರಾಣ ರಕ್ಷಿಸಿದ ಗಗನ ಸಖಿ, ಎರಡು ವರ್ಷಗಳ ಹಿಂದಿನ ಗಂಗಾನದಿಯ ದೋಣಿ ದುರಂತದಲ್ಲಿ ತನ್ನ ಜೀವದ ಹಂಗು ತೊರೆದು ತನ್ನ ಸೆರಗು ಹಾಸಿ ಐದಾರು ಜನರನ್ನು ದಡಕ್ಕೆಳೆದು ಬದುಕಿಸಿದ ಕರ್ನಾಟಕದ ಮಹಿಳೆ ಅಭಿನಂದನೀಯರು. ಮೌಲ್ಯಗಳನ್ನು ಮೆಚ್ಚಿಕೊಳ್ಳುವ ಬದಲು ಕಿಂಚಿತ್ತಾದರೂ ಆಚರಣೆಯಲ್ಲಿ ತರುವ ಪ್ರಯತ್ನವಾಗಬೇಕು.

    ಪ್ರೀತಿ ಹೆಣ್ಣಿನಿಂದ ಹುಟ್ಟುತ್ತದೆ. ಕರುಣೆಯು ಹೆಣ್ಣಿನಲ್ಲಿ ಮನೆ ಮಾಡಿರುತ್ತದೆ. ತ್ಯಾಗವೇ ಹೆಣ್ಣಿನ ಉಸಿರು. ಅದಕ್ಕಾಗಿ ಓ ಹೆಣ್ಣೆ ನಿನ್ನ ಜನನಕ್ಕಾಗಿ ಹೆಮ್ಮೆ ಪಡು" ಎಂದು ಒಂದು ಸುಭಾಷಿತದಲ್ಲಿದೆ. ಪ್ರೀತಿ, ದಯೆ, ಕರುಣೆ, ಅನುಕಂಪ ಎನ್ನುವ ಎಲ್ಲಾ ಉದಾತ್ತ ಗುಣಗಳನ್ನು ತನಗೆ ಮತ್ತು ತನ್ನ ಕುಟುಂಬಕ್ಕೆ ಮಾತ್ರ ಮೀಸಲಾಗಿಟ್ಟು ಇತರರ ಜೊತೆಗೆ ತದ್ವಿರುದ್ದವಾಗಿ ವರ್ತಿಸುವವರಿದ್ದಾರೆ.

    ಸ್ತ್ರೀ ತನ್ನ ಈ ಸ್ವಾರ್ಥದ ಪರಿಧಿಯಿಂದ ಹೊರಬಂದು ವೇದಗಳ ಕಾಲದಿಂದಲೂ ತನಗೆ ನೀಡಿದ ಪೂಜನೀಯ ಸ್ಥಾನವನ್ನು ಉಳಿಸಿಕೊಳ್ಳುವಂತಾಗಲಿ.

 ಅನಸೂಯ ಜೆ. ರೈ


February 5, 2025

ಆಹಾರ ಮತ್ತು ಆತ್ಮದ ಸಂಬಂಧ

    ಕಾಲದಲ್ಲಿ, ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬ ಸರಳ ಮನುಷ್ಯ ವಾಸಿಸುತ್ತಿದ್ದ. ಅವನು ಪ್ರತಿದಿನ ಬೆಳಗ್ಗೆ ಎದ್ದು, ತನ್ನ ತೋಟದಿಂದ ತಾಜಾ ತರಕಾರಿಗಳನ್ನು ಕೊಯ್ದು, ಅದನ್ನು ಕೈಯಲ್ಲಿ ಹಿಡಿದು, ಮನೆಯಲ್ಲಿ ಸರಳವಾದ ಊಟ ಮಾಡುತ್ತಿದ್ದ. ಅವನು ಊಟ ಮಾಡುವಾಗ, ಪ್ರತಿ ಬೆರಳು ಆಹಾರವನ್ನು ಸ್ಪರ್ಶಿಸುವಾಗ, ಅವನಿಗೆ ಅನುಭವವಾಗುತ್ತಿತ್ತು, ಆಹಾರವು ಅವನ ದೇಹಕ್ಕೆ ಪೋಷಣೆ ನೀಡುತ್ತಿದೆ ಎಂಬುದಕ್ಕಿಂತ ಹೆಚ್ಚಾಗಿ, ಅದು ಅವನ ಆತ್ಮಕ್ಕೆ ಶಾಂತಿ ನೀಡುತ್ತಿದೆ.

ಒಮ್ಮೆ, ಅವನ ಹಳ್ಳಿಗೆ ಒಬ್ಬ ವಿದೇಶಿಯೊಬ್ಬ ಬಂದ. ಅವನು ಚಮಚ ಮತ್ತು ಫೋರ್ಕ್ ಬಳಸಿ ಊಟ ಮಾಡುತ್ತಿದ್ದ. ಗ್ರಾಮಸ್ಥರು ಅವನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಆ ವಿದೇಶಿಯು ಚಮಚ ಮತ್ತು ಫೋರ್ಕ್ ಬಳಸುವುದು ಏಕೆ ಎಂದು ಕೇಳಿದಾಗ, ಗ್ರಾಮಸ್ಥನು, “ಕೈಗಳಿಂದ ತಿನ್ನುವುದು ನಮ್ಮ ಸಂಸ್ಕೃತಿ. ಕೈಗಳು ಆಹಾರವನ್ನು ಪವಿತ್ರಗೊಳಿಸುತ್ತವೆ ಮತ್ತು ನಮ್ಮ ಆತ್ಮಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುತ್ತವೆ.” ಎಂದು ಹೇಳಿದ.

ವಿದೇಶಿಯು ಇದನ್ನು ಕೇಳಿ ಆಶ್ಚರ್ಯಚಕಿತನಾದ. ಅವನು ಕುತೂಹಲದಿಂದ ಗ್ರಾಮಸ್ಥನೊಂದಿಗೆ ಊಟ ಮಾಡಲು ಕುಳಿತ. ಅವನು ಕೈಗಳಿಂದ ಊಟ ಮಾಡಿದಾಗ, ಅವನಿಗೆ ಒಂದು ವಿಚಿತ್ರವಾದ ಅನುಭವವಾಯಿತು. ಆಹಾರವು ಅವನ ದೇಹಕ್ಕೆ ಮಾತ್ರವಲ್ಲ, ಅವನ ಮನಸ್ಸಿಗೂ ಶಾಂತಿ ನೀಡುತ್ತಿದೆ ಎಂದು ಅವನಿಗೆ ಅನಿಸಿತು.

ಅವನು ಮನೆಗೆ ಹೋದ ನಂತರ, ಅವನು ಈ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲು ಪ್ರಾರಂಭಿಸಿದ. ಅವನು “ನಮ್ಮ ಕೈಗಳಲ್ಲಿ ಐದು ಅಂಶಗಳ ಶಕ್ತಿ ಇರುತ್ತದೆ. ಅದು ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ. ಈ ಅಂಶಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುತ್ತವೆ” ಎಂದುಬಕಂಡುಕೊಂಡ.

ಅವನು ತನ್ನ ದೇಶಕ್ಕೆ ಹಿಂದಿರುಗಿದಾಗ, ಅವನು ತನ್ನ ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಕೈಗಳಿಂದ ತಿನ್ನುವ ಬಗ್ಗೆ ಹೇಳಿದ. ಅವರೆಲ್ಲರೂ ಇದನ್ನು ಪ್ರಯತ್ನಿಸಿ ನೋಡಿದರು ಮತ್ತು ಅವರಿಗೆ ಇದು ತುಂಬಾ ಇಷ್ಟವಾಯಿತು. ಇಂದಿಗೂ, ಅನೇಕ ಜನರು ಕೈಗಳಿಂದ ತಿನ್ನುವುದನ್ನು ಮುಂದುವರಿಸುತ್ತಾರೆ. ಏಕೆಂದರೆ ಅವರಿಗೆ ಗೊತ್ತು, ಕೈಗಳು ಆಹಾರಕ್ಕಿಂತ ಹೆಚ್ಚಾಗಿ, ನಮ್ಮ ಆತ್ಮಕ್ಕೆ ಸಂಪರ್ಕ ಕಲ್ಪಿಸುತ್ತವೆ.

ನೀತಿ :– ಕೈಗಳಿಂದ ತಿನ್ನುವುದು ಕೇವಲ ಆಹಾರವನ್ನು ಸೇವಿಸುವ ವಿಧಾನವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮದ ಭಾಗವಾಗ. ಕೈಗಳು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಕೈಗಳಿಂದ ತಿನ್ನುವುದರಿಂದ ಆಹಾರವನ್ನು ಹೆಚ್ಚು ಆನಂದಿಸಬಹುದು. ಆದ್ದರಿಂದ ನಮ್ಮ ಪೂರ್ವಜರ ಸಂಸ್ಕೃತಿಯಲ್ಲಿ ಅನೇಕ ವಿಶೇಷ ವಿಷಯಗಳಿವೆ, ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.