July 12, 2023

ವೀರಶೈವ ಗೋತ್ರ ಪುರುಷ ಶ್ರೀ ವೀರಭದ್ರೇಶ್ವರ

    ಮೂಲತಃ ವೀರಭದ್ರನು ಶಿವಸಂಸ್ಕೃತಿಯ ಮೂಲಪುರುಷ. ಅಂತೆಯೇ ಶಿವನ ಪೂಜಕರೆಲ್ಲರಿಗೂ ಆರಾಧ್ಯ ದೈವ. ಹಾಗೆಯೆ ವೀರಭದ್ರನು ವೀರಶೈವನು. ವೀರಶೈವನೆಂದರೆ ಲಿಂಗಾಯತ. ಲಿಂಗವನ್ನು ಶರೀರದಮೇಲೆ ಧರಿಸಿದವನೇ ವೀರಶೈವ ಲಿಂಗಾಯತ. ಸ್ಕಂದ ಪುರಾಣದಲ್ಲಿ ಜಡೆಯಲ್ಲಿ (ಶಿರದಲ್ಲಿ) ಲಿಂಗವನ್ನು ಧರಿಸಿದವ ವೀರಭದ್ರ ಎಂದು ಹೇಳಿದೆ. ಹರಪ್ಪ ಮೊಹೆಂಜೋದಾರೋದಲ್ಲಿ ಸಿಕ್ಕ ಶಿಲ್ಪದಲ್ಲಿ ಪಶುಪತಿಯ ಪ್ರತಿಮೆ ಇದ್ದು ಅದರ ತಲೆಯಲ್ಲಿ  ಲಿಂಗವಿದೆ. ರಾಘವಾಂಕನು ವೀರಭದ್ರನನ್ನು ‘ನಿಡುಜಡೆ ಮುಡಿ ನಡುನೆತ್ತಿಯ ಲಿಂಗಂ’ ಎಂದು ವರ್ಣಿಸಿದ್ದಾನೆ. ಸ್ಕಂದ ಪುರಾಣದಲ್ಲಿ ‘ಲಿಂಗಾಂಕಿತ ಜಟಾಧರಂ’ ಎಂದು ವರ್ಣಿಸಿದೆ. ಪಶುಪತಿ ಎಂದರೆ ಶಿವ, ರುದ್ರ. ಶಿವನ ಮಾನಸಪುತ್ರ ರುದ್ರನ ಪುತ್ರನಾದ ವೀರಭದ್ರನೂ ಸಿಂಧೂ ಸಂಸ್ಕೃತಿಯ ದ್ರಾವಿಡ ಜನಾಂಗದ ಶ್ರೇಷ್ಠ ಪುರುಷ. ವೀರಭದ್ರನ ಪರಂಪರೆ ಸಂಪ್ರದಾಯಗಳು ಬಹು ಪ್ರಾಚೀನ ಕಾಲದಿಂದಲೇ ನಡೆದುಕೊಂಡು ಬಂದಿರುವುದು ಈ ದೇಶದಲ್ಲಿ ಅಷ್ಟೇ ಅಲ್ಲ ನೇಪಾಳ ಮುಂತಾದ ನೆರೆಯ ರಾಷ್ಟ್ರಗಳಲ್ಲಿಯೂ ಇದೆ. ವೀರಶೈವ ಪಂಚಪೀಠಗಳು ಪ್ರಾಚೀನ ವೀರಭದ್ರ ಸಂಸ್ಕೃತಿಯನ್ನು ಅಳವಡಿಸಿಕೊಂಡು ಇಂದಿಗೂ ಪಾಲಿಸಿಕೊಂಡುಬಂದಿವೆ. ಬಾಳೆಹೊನ್ನೂರಿನ ರಂಭಾಪುರಿ ಪೀಠದ ಗೋತ್ರಪುರುಷ ವೀರಭದ್ರನಾಗಿದ್ದಾನೆ. ಅಲ್ಲಿ ವೀರಭದ್ರನ ಪೂಜೆಯಿಲ್ಲದೆ ಯಾವ ವಿಶಿಷ್ಟ ಕಾರ್ಯಕ್ರಮಗಳೂ ಜರುಗುವುದಿಲ್ಲ. ರಂಭಾಪುರಿ ಪೀಠದ ಗೋತ್ರಪುರುಷ ವೀರಭದ್ರನಾಗಿದ್ದಾನೆ. ಕೇದಾರ ಪೀಠದ ಜಗದ್ಗುರುಗಳು ಪೀಠಾರೋಹಣ ಮಾಡುವಾಗ ವೀರಭದ್ರನ ಪೂಜೆ ಮಾಡಿಯೇ ಮುಂದಿನ ಕಾರ್ಯಕ್ರಮಗಳನ್ನು ನೆರವೇರಿಸುತ್ತಾರೆ. ವೀರಭದ್ರನನ್ನು ಮನೆ ದೇವರೆಂದು ಅಸಂಖ್ಯಾತ ಭಕ್ತರು ಪೂಜಿಸುತ್ತಾರೆ. ಆದ್ದರಿಂದ ಮನೆಮನೆಗಳಲ್ಲಿಯೂ ಕೂಡ ಯಾವುದೇ ಶುಭಕಾರ್ಯವಿದ್ದರೂ ವೀರಭದ್ರನ ಪೂಜೆ ಆಗಲೇ ಬೇಕು. ಮದುವೆ ಮುನ್ನಾದಿನ ಗುಗ್ಗಳ ಪೂಜೆಯನ್ನು ಅತ್ಯಂತ ಕಟ್ಟು ನಿಟ್ಟಾಗಿ ಸಾಂಪ್ರದಾಯಿಕವಾಗಿ ಇಂದಿಗೂ ತಪ್ಪದೇ ಆಚರಿಸುತ್ತಾರೆ. ಇವೆಲ್ಲವೂ ವೀರಭದ್ರನ ಸಂಸ್ಕೃತಿ ಆಚರಣೆಗಳು ಅನೂಚಾನವಾಗಿ ನಡೆದುಕೊಂಡು ಬಂದುದಕ್ಕೆ ಸಾಕ್ಷಿಯಾಗಿವೆ.

     ವೀರಭದ್ರನ ಉಲ್ಲೇಖ ಕ್ರಿ.ಶ. ನಾಲ್ಕನೆಯ ಶತಮಾನದಷ್ಟು ಹಳೆಯ ಕಾಲದಲ್ಲಿ ಮುಳಬಾಗಿಲು ಮುಡಿಯನೂರು ತಾಮ್ರ ಶಾಸನದಲ್ಲಿ ಸಿಗುತ್ತದೆ. ವೀರಶೈವ ಗಣಂಗಳನ್ನು ಮಂಡ್ಯಜಿಲ್ಲೆ ಮರಡೀಪುರ (1280) ಶಾಸನ ಹೆಸರಿಸಿದ್ದು ಅದರಲ್ಲಿ ಪ್ರಾಚೀನ ಕಾಲದ ಬಾಳಾಕ್ಷರ, ಅಕ್ಷರೇಶ್ವರ, ನಂದೀನಾಥ, ನಂದಿ, ಮಹಾಕಾಳ, ಬೃಂಗಿನಾಥ, ಮುಂತಾದ ಗಣಂಗಳ ಸ್ಥಾನದಲ್ಲಿ ವೀರಭದ್ರನನ್ನು ಹೆಸರಿಸಿದ್ದು ವಿಶೇಷವಾಗಿದೆ. ಇದರಿಂದ ವೀರಭದ್ರ ಐತಿಹಾಸಿಕ ವೀರಪುರುಷ ಅಷ್ಟೇ ಅಲ್ಲ, ಅವನು ಗಣಾಚಾರಿ, ವೀರಮಾಹೇಶ್ವರ ಎಂದು ತಿಳಿದುಬರುತ್ತದೆ.  
ವೀರಭದ್ರನ ದಕ್ಷ ಸಂಹಾರ ಪ್ರಸಂಗ ವೀರಭದ್ರನ ಅನೇಕ ಗುಣಗಳನ್ನು ವ್ಯಕ್ತಪಡಿಸುತ್ತದೆ. ತಂದೆ ಮತ್ತು ಹಿರಿಯರ ಆಜ್ಞಾಪಾಲಕನಾಗಿ, ದುಷ್ಟರನ್ನು ತಕ್ಕರೀತಿಯಲ್ಲಿ ದಂಡಿಸಿದ ವೀರನಾಗಿ, ಯುದ್ಧವೀರನಾಗಿ ಜನಾಂಗ ಸಾಮರಸ್ಯಕ್ಕಾಗಿ ಶ್ರಮಿಸಿದ ತಂದೆ ರುದ್ರನ ಕಾರ್ಯವನ್ನು ವಿಫಲ ಮಾಡುತ್ತಿರುವ ಗರ್ವಿಷ್ಠರನ್ನು ಶಿಕ್ಷಿಸಿ ಪಾಠ ಕಲಿಸಿದವನಾಗಿ,  ಯಜ್ಞ ಸಂಸ್ಕೃತಿಯ ವಿನಾಶಕನಾಗಿ, ದಕ್ಷನ ಪತ್ನಿಯ ಮೊರೆಗೆ ಕರುಣೆತೋರಿದ ಕರುಣಾಮೂರ್ತಿಯಾಗಿ, ಶೌರ್ಯ ಮತ್ತು ಶುಭಮಂಗಲಗಳ ಸಾಕಾರಮೂರ್ತಿಯಾಗಿ ಕಂಗೊಳಿಸಿದ್ದಾನೆ. ವೀರ ಮತ್ತು ಭದ್ರ ಎಂಬ ಹೆಸರಿನಲ್ಲಿಯೇ ಈ ಅರ್ಥವಂತಿಕೆ ಅಡಗಿರುವುದನ್ನು ಕಾಣಬಹುದು. ಅನ್ಯಾಯವನ್ನು ಎಂದಿಗೂ ಸಹಿಸಿಕೊಳ್ಳದೆ ಅದನ್ನು ಪ್ರತಿಭಟಿಸಿ “ವೀರ’ತನವನ್ನು ಮೆರೆಯಬೇಕೆಂಬುದು, ಜೊತೆಗೆ “ವೀರ’’ ಗುಣವನ್ನು ಮಂಗಲ’ಕ್ಕಾಗಿ , “ಭದ್ರ”ತೆಗಾಗಿ ಉಪಯೋಗಿಸುವುದೇ “ವೀರ”ತ್ವದ ಸರಿಯಾದ ಲಕ್ಷಣ ಎಂಬುದನ್ನೂ “ವೀರಭದ್ರ” ಎಂಬ ಪದ ಸಾರುತ್ತದೆ.

      ಪ್ರಾಗೈತಿಹಾಸಿಕ ವೀರಭದ್ರನನ್ನು ಅವನ ವೈಶಿಷ್ಟ್ಯವನ್ನು ಕಣ್ಣ ಮುಂದೆ ಕಟ್ಟುವಂತೆ ಅಕ್ಷರಲೋಕ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹಿಡಿದಿಟ್ಟಿದ್ದರೆ, ಚಿತ್ರ ಪ್ರಪಂಚ ವೈವಿಧ್ಯಮಯವಾದ ಚಿತ್ರವಿಚಿತ್ರವಾಗಿ ಚಿತ್ರಿಸಿದೆ. ಜನಪದರು ತಮ್ಮ ಸಹಜವಾದ ಹಾಡು, ಒಡಪು, ಬಯಲಾಟ, ಮಾಧ್ಯಮಗಳಲ್ಲಿ ಅಷ್ಟೇ ಅಲ್ಲ ನಿತ್ಯಾಚರಣೆಗಳಲ್ಲಿಯೂ ವೀರಭದ್ರ ಸಂಸ್ಕೃತಿಯನ್ನು ಜೀವಂತವಾಗಿ ಇಟ್ಟಿದ್ದಾರೆ. ಕಲಾವಿದರು, ಶಿಲ್ಪಿಗಳು, ಶಾಸನರಚಕರು ವೀರಭದ್ರನನ್ನು ತಮ್ಮದೇ ಆದ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ವೀರಭದ್ರನನ್ನು ಕಂಡರಿಸಿದ್ದಾರೆ. ಇದರಿಂದ ವೀರಭದ್ರನು ಬರೀ ಮೂರ್ತಿಯೆಂದು ಸ್ಥಾವರವೆಂದು ಪೂಜೆಗೊಳ್ಳುವುದಿಲ್ಲ ಜನಮನದ ನಿತ್ಯಬದುಕಿನ ಶಕ್ತಿದೇವನಾಗಿ ಜಂಗಮಸ್ವರೂಪನಾಗಿದ್ದಾನೆ. ಬುಡುಗ-ಬೇಡ ಜಂಗಮರೆಂಬ ಆಂಧ್ರದ ವೀರಶೈವರು ಶ್ರೀ ವೀರಭದ್ರಸ್ವಾಮಿಯ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ವಿಶೇಷವಾಗಿದೆ. ಇವರು ಜಂಗಂ ಕಥೆಯನ್ನು ಹೇಳುತ್ತಾರೆ. ಶ್ರೀ ವೀರಭದ್ರ ಸಂಪ್ರದಾಯದಲ್ಲಿ ಅಗ್ನಿಕುಂಡ ಮಾಡಿ ಅಗ್ನಿಯನ್ನು ತುಳಿಯುವ ದಕ್ಷಯಜ್ಞ ನಾಶದ ಆಚರಣೆಯನ್ನು ಬುಡುಗ, ಬೇಡಜಂಗಮರು ಈಗಲೂ ಆಂಧ್ರದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಅವರು ದೊಡ್ಡದಾದ ಖಡ್ಗವೊಂದನ್ನು ಹಿಡಿದುಕೊಂಡು ದಕ್ಷಯಜ್ಞವನ್ನು ಕೆಡಿಸುವ ವೀರ ಒಡಪುಗಳನ್ನು ಜೋರಾಗಿ ಕೂಗುತ್ತಾ ಚೂಪಾದ ಶೂಲಗಳನ್ನು ನಾಲಿಗೆಯಲ್ಲಿ, ದೇಹದ ಮೇಲೆ ಚುಚ್ಚಿಕೊಳ್ಳುತ್ತಾ ದೊಡ್ಡದಾದ ಅಗ್ನಿಕುಂಡವನ್ನು ಹಾರುತ್ತ ಕುಂಡದ ಆಚೆ ಬದಿಯಲ್ಲಿ ಇಟ್ಟ ದಕ್ಷನ ಮೂರ್ತಿಯನ್ನು ಕತ್ತರಿಸಿ ಹಾಕುತ್ತಾರೆ. ಆಂಧ್ರದ ಹತ್ತಕ್ಕೂ ಹೆಚ್ಚಿನ ಸಂಖ್ಯೆಯ ಜಿಲ್ಲೆಗಳಲ್ಲಿ ಈ  ಜಂಗಮರು ವೀರಭದ್ರಾಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಜಂಗಮರು ವೀರಭದ್ರ ಆಚರಣೆಯನ್ನು ಆಚರಿಸುವಾಗ ಹೇಳುವ ಒಡಪುಗಳಲ್ಲಿನ ವಿಷಯ ರಾಚೋಟಿ ವೀರಭದ್ರೇಶನಿಗೆ ಹೆಚ್ಚು ಅನ್ವಯವಾಗುತ್ತವೆ. ಅವರ ಒಡಪುಗಳಲ್ಲಿರುವ “ಸುರರಾತಿಭಂಗಾ”, “ಸೌಜನ್ಯರತ್ನಾಕರಾ”, “ಶ್ಯಾಮ ಮಹಾದಿವ್ಯವೇಷಾ”, “ಭಕ್ತಾಪೋಷಾ”, “ದಯಾವಾರ್ಥಿ” ಎಂಬ ಶಬ್ದಗಳನ್ನು ನೋಡಿದರೆ - ರಾಚೋಟಿ ವೀರಭದ್ರಸ್ವಾಮಿಯ ಸೌಮ್ಯ ರೂಪವನ್ನೇ ವರ್ಣಿಸುತ್ತಿರುವಂತೆ ತೋರುತ್ತದೆ. ಖಡ್ಗವನ್ನು ಹಿಡಿದು ವೀರಾವೇಶದಿಂದ ದಕ್ಷನ ಸಂಹಾರ ಮಾಡಿದರೂ ವೀರೇಶನು ಸೌಮ್ಯನೂ, ಭಕ್ತಾನುಗ್ರಹಿಯೂ ಎಂಬುದನ್ನು ತೋರಿಸುತ್ತಾರೆ. ರಾಚೋಟಿ ಹೊರತಾಗಿ ಅನ್ಯ ಭಾಗಗಳಲ್ಲಿ ವಿಶೇಷವಾಗಿ ವೀರ ರೌದ್ರಾವತಾರವೇ ಹೆಚ್ಚು. ಸೌಮ್ಯ ವೀರೇಶನ ವರ್ಣನೆ ತೀರ ಕಡಿಮೆ. ರಾಚೋಟಿ ವೀರಭದ್ರಸ್ವಾಮಿ ಸಂಪೂರ್ಣಾನಂದ ಪೂರ್ಣನೂ ಸಂತೃಪ್ತಿ ಸಮಾಧಾನ ಶಾಂತ ಚಿತ್ತನೂ ಆಗಿ ಕಂಗೊಳಿಸಿದ್ದಾನೆ. ಯಜ್ಞನಾಶದ ನಂತರ ಸಕಲರಿಗೂ ಸನ್ಮಂಗಳನ್ನು ಉಂಟು ಮಾಡುವುದಕ್ಕಾಗಿ ಭಕ್ತಾನುರಾಗಿ ಸಂಪ್ರೀತಿಯಿಂದ ರಾಚೋಟಿಯಲ್ಲಿ ನೆಲೆಸಿದ್ದು ವಿಶೇಷವಾಗಿದೆ. ಅಂತೆಯೇ ರಾಚೋಟಿ ವೀರಭದ್ರಸ್ವಾಮಿಗೆ ನಾಲ್ಕು ಕೈಗಳಿಲ್ಲ. ಕಾಲು ಮುಂದಿಟ್ಟಿಲ್ಲ. ರುಂಡ ಮಾಲೆಯಿಲ್ಲ. ಕೈಯಲ್ಲಿ ಖಡ್ಗವೊಂದನ್ನು ಬಿಟ್ಟರೆ ತ್ರಿಶೂಲಾದಿ ಅಸ್ತ್ರಗಳು ಇಲ್ಲ. ಅಂತೆಯೆ ದಕ್ಷ ಬ್ರಹ್ಮನು ಕೂಡ ಶ್ರೀ ವೀರಭದ್ರಸ್ವಾಮಿಯ ಕಾಲ ಬಳಿ ಕೆಳಗೆ ಭಕ್ತಿಯಿಂದ ಕುರಿದಲೆಯವನಾಗಿ ಕೈಮುಗಿದು ಕುಳಿತಿದ್ದಾನೆ.
 ದೇವಸ್ಥಾನಗಳಲ್ಲಿ ಪೂಜೆಗೊಳ್ಳುವ ವೀರಭದ್ರನ ಪ್ರತಿಮೆಯನ್ನೇ ತೆಗೆದುಕೊಂಡರೆ ಅವನು ಬೇರೆ ದೇವರುಗಳಂತೆ ಮೂರ್ತಿಗೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಖಡ್ಗ ತ್ರಿಶೂಲ ಮುಂತಾದ ಆಯುಧಗಳು, ರುಂಡಮಾಲೆ, ಶಿರದಲ್ಲಿ ವ್ಯಾಳಾಸುರ ಶಿರೋಭೂಷಣ, ಆಭರಣಗಳು, ಇವಲ್ಲದೆ ವೀರಭದ್ರನು ವಿಶಿಷ್ಟರೀತಿಯಲ್ಲಿ ನಿಂತ ಭಂಗಿ, (ಸಾಮಾನ್ಯವಾಗಿ ದೇವರುಗಳು ಕುಳಿತ ಭಂಗಿಯಲ್ಲಿರುತ್ತವೆ ಇಲ್ಲವೆ ನೇರವಾಗಿ ನಿಂತಭಂಗಿಯಲ್ಲಿ ಇರುತ್ತವೆ) ಇವೆಲ್ಲವೂ ವೀರಭದ್ರನ ವೀರಾಗ್ರ ರೀತಿ ಮತ್ತು ಅದ್ಭುತ ಶಕ್ತಿ ಸಂಕೇತಗಳಾಗಿ ತೋರುತ್ತವೆ. ವೀರಭದ್ರನ ಇನ್ನೊಂದು ವಿಶೇಷವೆಂದರೆ ವೀರಗುಣವಷ್ಟೇ ಅಲ್ಲ ಅವನಲ್ಲಿ ಭದ್ರತ್ವ ಅಂದರೆ ರಕ್ಷಣೆಮಾಡುವವನ ಆತ್ಮವಿಶ್ವಾಸ ಮತ್ತು ವೀರತ್ವದಲ್ಲೂ ಶಾಂತತ್ವ ಶುಭತ್ವಗಳ ಸಮ್ಮಿಳಿತವಾಗಿರುವುದು. ಈ ಬಗೆಯ ಬಹು ಅರ್ಥವುಳ್ಳ ಮೂರ್ತಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪರೂಪವೆಂದೇ ಹೇಳಬೇಕು. ಇನ್ನು ತಾಮ್ರ ಬೆಳ್ಳಿ ಬಂಗಾರ ಮುಂತಾದ ಲೋಹಗಳಲ್ಲಿ ವೀರಭದ್ರನನ್ನು ಮೂರ್ತಿಗೊಳಿಸಿ, ಫಲಕಗೊಳಿಸಿ ಮನೆಯ ಜಗುಲಿ, ಮಾಡುಗಳಲ್ಲಿ, ಪುರವಂತರ ಎದೆಯಲ್ಲಿ, ಕೊರಳಿನಲ್ಲಿ, ಪಲ್ಲಕ್ಕಿಯಲ್ಲಿ ಇಟ್ಟು ಪ್ರದರ್ಶಿಸುವ ಪೂಜಿಸುವ ಭಕ್ತರಿಗೂ ಲೆಕ್ಕವಿಲ್ಲ. 

        ವೀರಭದ್ರನ ಒಡಪುಗಳಲ್ಲಿ `ಆಹಾಹಾ ಸರ್ಪಾ' ಎಂಬ ಮಾತು ಬರುತ್ತದೆ. ವೀರಭದ್ರ ಸರ್ಪಕುಲ ಅಂದರೆ ನಾಗಕುಲದವ. ನಾಗರು ದ್ರಾವಿಡ ಪಣಿಯರು. (ಪಣಿ=ಫಣಿ, ನಾಗರಹೆಡೆ) (ವೀರಪಣಿ+ಜ = ವೀರಬಣಿಜರು ಎಂದರೆ ವೀರಬಣಜಿಗರು, ವೀರಬಣಂಜುಗಳು ಪ್ರಾಯಃ ವೀರಭದ್ರನ ನಾಗಕುಲಕ್ಕೆ ಸಂಬಂಧಿಸಿದ ದ್ರಾವಿಡರು. ಶೂರರಾದ ಇವರು ಪರ್ವತ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಅಲೆದು ಜನರಿಗೆ ಬೇಕಾದ ವಸ್ತುಗಳನ್ನು ಒದಗಿಸುತ್ತಿದ್ದರು. ಅಂತೆಯೆ ಇವರು ಮುಂದೆ ಪಣಿ+ಕ = ವಣಿಕ ಪಣಿ+ಜ ವಣಿಜ, ವಾಣಿಜ್ಯ (ವ್ಯಾಪಾರಿ) ಮಾಡುವವರೆನಿಸಿರಬೇಕು. ಇಂದಿಗೂ ಬಹಳಷ್ಟು ಬಣಜಿಗರಿಗೆ ವೀರಭದ್ರನು ಮನೆದೇವರಾಗಿ ಇರುವುದನ್ನು ಕಾಣಬಹುದು) ಶಿವನು ರೌದ್ರಾವತಾರ ತಾಳಿ ರುದ್ರನೆನಿಸಿದ, ಅವನು ರುದ್ರಾವತಾರಿಯಾದಾಗ ಹುಟ್ಟಿದವನೇ ವೀರಭದ್ರ. ಕರ್ನಾಟಕದ ಕೆಲವು ವೀರಭದ್ರ ಶಿಲ್ಪಗಳಲ್ಲಿ ವೀರಭದ್ರನು ಕೈಯಲ್ಲಿ ನಾಗರಹಾವನ್ನು ಹಿಡಿದ ದೃಶ್ಯವನ್ನು ಕಾಣಬಹುದು.
ವೀರಭದ್ರನನ್ನು ವೀರಮಾಹೇಶ್ವರ ಎಂದು ವೀರಾಗಮ ವರ್ಣಿಸಿದೆ-
`ವೀರಮಾಹೇಶ್ವರಾಚಾರ ವೀರಭದ್ರಾಯತೇ ನಮ:
ಆಶೇಷ ಪ್ರಮಥಾಚಾರ ಗುರೂಣಾಂ ಗುರವೇ ನಮ:’
 ಎಂಬ ಶ್ಲೋಕದಲ್ಲಿ ವೀರಭದ್ರ ವೀರಮಾಹೇಶ್ವರನಷ್ಟೇ ಅಲ್ಲ ಅವರೆಲ್ಲರಿಗೂ ಗುರು ಎಂದೂ ಅಂಥ ಗುರುವಿನ ಗುರುವಿಗೆ ನಮಸ್ಕಾರ ಎಂದೂ ಹೇಳಿದೆ. ವೀರಶೈವರಲ್ಲಿ ಜಂಗಮರಿಗೆ ವೀರಮಾಹೇಶ್ವರ ಎಂಬ ಪದದ ಬಳಕೆ ವೀರಭದ್ರನಿಂದ ಬಂದಿರಬಹುದನೋ ಎನಿಸುತ್ತದೆ. 

      12ನೇ ಶತಮಾನದ ಉರಿಲಿಂಗಪೆದ್ದಿ ಒಬ್ಬ ಶ್ರೇಷ್ಠ ದಲಿತ ಶಿವಶರಣ. ಅವನು ವೇದಾಗಮಗಳನ್ನೂ ಆಳವಾಗಿ ಅಭ್ಯಾಸಮಾಡಿದವನು. ಅವನು ವೀರಭದ್ರನನ್ನು ಶ್ರೇಷ್ಠ ಸದ್ಭಕ್ತ ಶಿವಶರಣರ ಸಾಲಿನಲ್ಲಿಟ್ಟು ಗೌರವದಿಂದ ಸ್ಮರಿಸಿದ್ದಾನೆ. ಕೆಲವು ಶರಣರು ವೀರಭದ್ರನನ್ನು ಪೂಜಿಸುವುದ್ಯಾಕೆ ? ಎಂದು ಪ್ರಶ್ನಿಸಿರಬಹುದು. ಅದಕ್ಕೆ ಉತ್ತರವಾಗಿ ಉರಿಲಿಂಗಪೆದ್ದಿ ಸುದೀರ್ಘವಾದ ವಿವರಣೆಯನ್ನು ಉದಾಹರಣೆಗಳನ್ನು ನೀಡಿ  ‘ಮಹಾಶರಣರಪ್ಪ ನಂದೀಶ್ವರ ವೀರಭದ್ರ ಮೊದಲಾದ ಮಹಾಗಣಂಗಳಿಗೆ ಸದ್ಭಕ್ತಿಯ ಮಾಡಿ ತಪ್ಪ ಪರಿಹರಿಸಿಕೊಂಡು ಸದ್ಭಕ್ತರಾದರು’ ನೀವೇಕೆ ಇವರಲ್ಲಿ ಅವಿಶ್ವಾಸ ಮಾಡಿ ಕೆಡುತ್ತೀರಿ ? ಎಂದು ಕೇಳುತ್ತಾನೆ. (ವಚನಸಂಖ್ಯೆ 1596) ಇಲ್ಲಿ ಉರಿಲಿಂಗಪೆದ್ದಿ ಬಹು ಸ್ವಾರಸ್ಯಕರವಾಗಿ ವೀರಭದ್ರಾದಿ ಗಣಗಳ ಬಗ್ಗೆ ಹೇಳುತ್ತಾನೆ. ಸಂದೇಹ ಬೇಡ, ಪುರಾತನ ಶರಣರು ಶಿವನ ಗಣಂಗಳಲ್ಲಿ ಸದ್ಭಕ್ತಿಯನ್ನು ಮಾಡಿ ಮುಕ್ತಿಯನ್ನು ಪಡೆದಿದ್ದಾರೆ. ನೀವೂ ಕೂಡ ನಂಬಿರಿ, ವಿಶ್ವಾಸದಿಂದ ಅವರಲ್ಲಿ ಭಕ್ತಿ ಮಾಡಿರಿ ದಿಟವೋ ಸೆಟೆಯೋ ಎಂಬ ಸಂಶಯದಲ್ಲಿ ಬೀಳಬೇಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುವ ವಚನ ಇದಾಗಿದೆ. ಸ್ವಾರಸ್ಯವೆಂದರೆ ಚೆನ್ನಬಸವಣ್ಣ ಮುಂತಾದ ಕೆಲವು ಶರಣರು ಏಕದೇವೋಪಾಸನೆಯ ನಿಷ್ಠೆಯನ್ನು ಎತ್ತಿಹಿಡಿಯುವುದಕ್ಕಾಗಿ ಹೇಳಿದ ವಚನಗಳಲ್ಲಿ ಬೇರೆ ದೇವತೆಗಳನ್ನು ಹೆಸರಿಸುವಾಗ ವೀರಭದ್ರನ ಹೆಸರನ್ನೂ ಸೇರಿಸಿದ್ದಾರೆ. ಇದರಿಂದ ಲಿಂಗವನ್ನಲ್ಲದೆ ಬೇರೇನನ್ನೂ ಪೂಜಿಸಬಾರದೆಂಬುದು ಅಲ್ಲಿನ ಅರ್ಥ. ಇದು ಬಾಹ್ಯದೃಷ್ಟಿಯಲ್ಲಿ ಸರಿಯಾದರೂ ವೀರಭದ್ರನೇ ಲಿಂಗವಾಗಿರುವುದರಿಂದ ವೀರಭದ್ರನ ಪೂಜೆಯೂ ಲಿಂಗಪೂಜೆಯೇ ಆಗುತ್ತದೆ. ಶಿವನೇ ತನ್ನ ಜಡೆಮುಡಿಯಿಂದ ವೀರಭದ್ರನನನ್ನು ಸೃಷ್ಟಿಮಾಡಿ ಉಗ್ರರೂಪತಾಳಿ ದಕ್ಷಬ್ರಹ್ಮನ ಸಂಹಾರಮಾಡಿದ್ದು ಇದಕ್ಕೆ ಉದಾಹರಣೆಯಾಗಿದೆ. ಇದನ್ನು ಬಸವಣ್ಣನವರೂ ತಮ್ಮ ವಚನಗಳಲ್ಲಿ ಸ್ಪಷ್ಟೀಕರಿಸಿದ್ದಾರೆ. 

“ಕೂಡಲಸಂಗಮ ದೇವನು ದಕ್ಷನ ಕೆಡಿಸಿದುದ ಮರೆದಿರಲ್ಲಾ”

“ವಿಷವಟ್ಟಟಿಸುಡುವಲ್ಲಿ ವೀರಭದ್ರ ಬಡಿವಲ್ಲಿ
ಕೂಡಲ ಸಂಗಯ್ಯಂಗೆ ಶರಣೆಂದು ಮೊರೆಯಿಟ್ಟರೆಲ್ಲರು”

"ದಕ್ಷಯಾಗವ ನಡೆಸಲೆಂದು ಅಜಮುಖ್ಯರಾದ
ಸುರರೆಲ್ಲ ನೆರೆದು ಬಂದ ಬಾಯ ನೋಡಾ. 
ಬಾಯ ತಪ್ಪಿಸಿ ಉಣಬಂದ ದೈವದ 
ಬೆಂದ ಬಾಯ ನೋಡಾ. 
ಉಣ್ಣದೆ ಉಡದೆ ಹೊಗೆಯ 
ಕೈಯಲಿ ಸತ್ತ ಅಣ್ಣಗಳ ಕೇಡ ನೋಡಾ ಕೂಡಲಸಂಗಮದೇವಾ"

"ಅಂದಾ ತ್ರಿಪುರವನುರುಹಿದಾತ ವೀರ, 
ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ, 
ಕಡುಗಲಿ ನರಸಿಂಹನನುಗಿದಾತ ವೀರ, 
ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ,"

ಬಸವಣ್ಣನವರ ವಚನಗಳಲ್ಲಿ ವೀರಭದ್ರನು ಯಜ್ಞಸಂಸ್ಕೃತಿಯನ್ನು ನಾಶಮಾಡುವಲ್ಲಿ ವಹಿಸಿದ ವೀರೋಚಿತ ಕಾರ್ಯದ ಪ್ರಶಂಸೆಯನ್ನು ಕಾಣುತ್ತೇವೆ. ವೀರಶೈವವನ್ನು ವಿರೋಧಿಗಳಿಂದ ರಕ್ಷಿಸಿದ ಬಗೆಯನ್ನು ಬಸವಣ್ಣನವರು ಎತ್ತಿ ಹಿಡಿದಿದ್ದಾರೆ. ಅಲ್ಲದೆ ವೀರಭದ್ರನನ್ನು ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಪ್ರಶಂಸಿಸಿದ್ದಾರೆ.
ಹೀಗೆ ವೀರಭದ್ರನ ಚರಿತ್ರೆ ಮಹತ್ವ ಬಹು ಪ್ರಾಚೀನ ಕಾಲದಿಂದಲೇ ಸಾಗಿ ಬಂದಿದೆ. ಭಕ್ತರ ಹೃದಯದ ಕಣ್ಮಣಿಯಾಗಿ ಅವರ ಕಷ್ಟಪರಿಹಾರಕನಾಗಿ ಇಷ್ಟಾರ್ಥಗಳನ್ನು ನೆರವೇರಿಸುತ್ತ ಬಂದ ವೀರಭದ್ರನ ಜಯಂತಿಯನ್ನು ಪ್ರತಿವರ್ಷ ಭಾದ್ರಪದ ಮಾಸದ ಮೊದಲನೆಯ ಮಂಗಳವಾರ  ಆಚರಿಸಲಾಗುತ್ತಿದೆ. ಅಂದು ವೀರಭದ್ರನ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ಆ ಶುಭದಿನದಂದು ವೀರಭದ್ರನ ಸ್ಮರಣೆ ಆರಾಧನೆ ಮಾಡಿ ಪುನೀತರಾಗೋಣ.

 --ಡಾ.ಸಂಗಮೇಶ ಸವದತ್ತಿಮಠ

ಧರ್ಮದಿಂದ ಗಳಿಸಬೇಕು

*ಅಲಬ್ಧಮೀಹೇದ್ಧರ್ಮೇಣ* 

*ಲಬ್ಧಂ ಯತ್ನೇನ ಪಾಲಯೇತ್ |*
*ಪಾಲಿತಂ ವರ್ಧಯೇನ್ನಿತ್ಯಂ* 

*ವೃದ್ಧಂ ಪಾತ್ರೇಷು ನಿಕ್ಷಿಪೇತ್ ||*
_(ಮಹರ್ಷಿಯಾಜ್ಞವಲ್ಕ್ಯವಚನ)_

_*(ಧರ್ಮೇಣ)* ಧರ್ಮದಿಂದ, *(ಅಲಬ್ಧಮ್)* ಈಗಾಗಲೇ ಲಭಿಸದಿರುವ ಹೊಸದನ್ನು, *(ಈಹೇತ್)* ಸಂಪಾದಿಸಲು ತೊಡಗಬೇಕು. *(ಲಬ್ಧಮ್)* ಸಂಪಾದಿಸಿದ್ದನ್ನು, *(ಯತ್ನೇನ)* ಪ್ರಯತ್ನಪೂರ್ವಕವಾಗಿ, *(ಪಾಲಯೇತ್)* ರಕ್ಷಿಸಬೇಕು. *(ಪಾಲಿತಮ್)* ರಕ್ಷಿಸಿದ್ದನ್ನು, *(ನಿತ್ಯಂ ವರ್ಧಯೇತ್)* ದಿನವೂ / ಯಾವಾಗಲೂ ನ್ಯಾಯಮಾರ್ಗದಲ್ಲಿ ಹೆಚ್ಚಿಸಬೇಕು. *(ವೃದ್ಧಮ್)* ಹಾಗೆ ಹೆಚ್ಚಿಸಿದ್ದನ್ನು, *(ಪಾತ್ರೇಷು)* ಯೋಗ್ಯರಲ್ಲಿ / ಪಾತ್ರರಲ್ಲಿ, *(ನಿಕ್ಷಿಪೇತ್)* ಹಂಚಬೇಕು._

_ಸಂಪಾದನೆಗೆ ಧರ್ಮಮಾರ್ಗವೆಂದರೆ ನ್ಯಾಯವಾದ ದುಡಿತ. ಯಾವುದು ನ್ಯಾಯ, ಯಾವುದು ಅನ್ಯಾಯವೆಂದು ಪ್ರತಿಯೊಬ್ಬನ ಅಂತಃಸಾಕ್ಷಿಗೂ ತಿಳಿದಿರುತ್ತದೆ. ಆದರೆ ಕಾಮ ಕ್ರೋಧಗಳ ಉಲ್ಬಣತೆಯಿಂದ ತಪ್ಪನ್ನೆಸಗುತ್ತಾನೆ. ಒಟ್ಟಿನಲ್ಲಿ ಇನ್ನೊಬ್ಬರ ಹಿತಕ್ಕೆ ಧಕ್ಕೆಯಾಗದಿರುವ ಮಾರ್ಗ ನ್ಯಾಯವೆಂಬುದು ಸಾಮಾನ್ಯ ನಿಯಮ._

_ಸಂಪಾದನೆ, ವರ್ಧನೆ, ವಿನಿಯೋಗ- ಇವಿಷ್ಟು ಧರ್ಮಮೂಲವಾಗಿರಬೇಕು ಎಂಬುದು ನೀತಿಯ ತಿರುಳು. ಮೊದಲನೆಯದಾದ ಸಂಪಾದನೆಯಲ್ಲಿ ಅಧರ್ಮ ಇಣುಕಿತೆಂದರೆ ಉಳಿದವುಗಳಿಗೆ ಅದರ ಅಂಟು ತಪ್ಪಿದ್ದಲ್ಲ. ಸಾಲದ ಸಂಪಾದನೆ ದುಡಿತದಿಂದ ಬಂದ್ದಲ್ಲ. ಕೆಲವು ಸಂದರ್ಭಗಳಲ್ಲಿ ಸಾಲ ಅನಿವಾರ್ಯವಾದರೂ ಅದರ ಪಾಲನೆ ಮೊದಲಾದ ಮೂರು ಹೇಗೆ ನಡೆಯುತ್ತವೆ ಎಂಬುದರ ಮೇಲೆ ಅದರ ಮೌಲ್ಯ ನಿಂತಿರುತ್ತದೆ. ಇದು ವ್ಯಕ್ತಿಗೆ ಅನ್ವಯಿಸುವಂತೆ ರಾಷ್ಟ್ರಕ್ಕೂ ಅನ್ವಯಿಸುತ್ತದೆ. *ಉತ್ತಮಂ ಸ್ವಾರ್ಜಿತಂ ವಿತ್ತಮ್*. ತಾನೇ ನ್ಯಾಯಯುತ ದುಡಿಮೆಯಿಂದ ಸಂಪಾದಿಸಿದ ಹಣವೇ ಉತ್ತಮ._

_ಸಂಪಾದಿಸಿದರೆ ಕರ್ತವ್ಯ ಮುಗಿಯಲಿಲ್ಲ. ಅದನ್ನು ರಕ್ಷಿಸಿ ಬೆಳೆಸಬೇಕು. ಆಮೇಲೆ
*ವೃದ್ಧಂ ಪಾತ್ರೇಷು ನಿಕ್ಷಿಪೇತ್*- "ಯೋಗ್ಯಪಾತ್ರದಲ್ಲಿ ಅದನ್ನು ಹಂಚಬೇಕು." ಸಂಪಾದನೆಗೆ ವಿನಿಯೋಗದಲ್ಲಿ ಮುಕ್ತಾಯ. *ಆದಾನಂ ಹಿ ವಿಸರ್ಗಾಯ* -- ಸಂಪಾದನೆ / ಸ್ವೀಕಾರವು ಕೊಡುವುದಕ್ಕೇ ಆಗಿದೆ. ಇದು ಒಂದು ನಿಯಮ._

_ಮೇಲಿನ ಶ್ಲೋಕದಲ್ಲಿನ ವಿಷಯ, ವಿದ್ಯೆಗೂ ಸಂಬಂಧಿಸುತ್ತದೆ. ವಿದ್ಯೆಯನ್ನು ಸಂಪಾದಿಸಿ, ರಕ್ಷಿಸಿ, ಬೆಳೆಸಿ, ಅರ್ಹನಾದ ಶಿಷ್ಯನಿಗೆ ಬೋಧಿಸಬೇಕು. ಉಪಾಧ್ಯಾಯನಲ್ಲದವನೂ ತನ್ನ ವಿದ್ಯೆಗೆ ಅನುಗುಣವಾಗಿ ಜನೋಪಯುಕ್ತ ಕಾರ್ಯವನ್ನು ಮಾಡಿದರೆ ಸಾಲವನ್ನು / ಋಷಿಋಣವನ್ನು ತೀರಿಸಿದಂತೆ._

_ಹಣವನ್ನು ಬಿಟ್ಟರೆ ಪ್ರಿಯವಾದದ್ದು ಕೀರ್ತಿ. ಧನಪಿಶಾಚಕ್ಕಿಂತ ಕೀರ್ತಿಶನಿಯ ಕಾಟ ಹೆಚ್ಚಿನದು. ಭೃಷ್ಟಾಚಾರದಿಂದ ಹಣವನ್ನು ಸೇರಿಸಿದಂತೆ ದುಷ್ಟಾಚಾರದಿಂದ ಕೀರ್ತಿಯನ್ನು ಗಳಿಸಿದವರೂ ಉಂಟು. ಹಣವನ್ನು ಮನುಷ್ಯನು ಬಚ್ಚಿಡುತ್ತಾನೆ, ಕೀರ್ತಿಯನ್ನು ಮಾತ್ರ ಎಲ್ಲೆಲ್ಲಿಯೂ ಹಂಚಲು ಆಶಿಸುತ್ತಾನೆ. ವಿದ್ಯೆ, ಧನ, ಕೀರ್ತಿ- ಯಾವುದೇ ಆಗಲಿ ಆರ್ಜನೆಯ ಮಾರ್ಗ ಶುದ್ಧವಾದರೆ ಉಳಿದವೂ ಶುದ್ಧವಾಗಿರುತ್ತವೆ._

_ಇಲ್ಲದಿದ್ದರೆ, *"ದಾನಂ ಭೋಗೋ ನಾಶಸ್ತಿಸ್ರೋ, ಗತಯೋ ಭವನ್ತಿ ವಿತ್ತಸ್ಯ | ಯೋ  ದದಾತಿ ನ ಭುಙ್ಕ್ತೇ, ತಸ್ಯ ತೃತೀಯಾ ಗತಿರ್ಭವತಿ ||"* — ಅಂದರೆ, ಹಣಕ್ಕೆ ದಾನ, ಭೋಗ, ನಾಶವೆಂದು ೩ ವಿಧದ ಗತಿಯಿರುವುದು. ಯಾರು ಇತರರಿಗೆ ದಾನವೂ ಮಾಡದೆ, ತಾನೂ ಭೋಗಿಸದಿರುವನೋ ಅಂಥವರ ಹಣಕ್ಕೆ ನಾಶವೆಂಬ ೩ನೇ ಗತಿಯಾಗುತ್ತದೆ. ಹಾಗಾಗಿ ಸೋಮಾರಿಯಾಗದೇ, ಧರ್ಮಮಾರ್ಗದಲ್ಲಿ ಹೆಚ್ಚು ಸಂಪಾದಿಸಬೇಕು. ಹಾಗೆ ಸಂಪಾದಿಸಿದ್ದನ್ನು ನ್ಯಾಯಯುತವಾಗಿ, ಜಾಗರೂಕತೆಯಿಂದ ಉಳಿಸಿ ಬೆಳೆಸಬೇಕು. ಬೆಳೆಸಿದ್ದರ ಒಂದು ಭಾಗವನ್ನು ಯೋಗ್ಯರಿಗೆ ಹಂಚಬೇಕು ಎಂಬುದಿದರ ಸಂದೇಶ.