July 20, 2022

ಬೇಡಜಂಗಮ - ಪಕ್ಷಿನೋಟ

ವಂಶಪಾರಂಪರ್ಯ ಧಾರ್ಮಿಕ ಭಿಕ್ಷುಕರು
"ಜಂಗಮ-ಸ್ಪಷ್ಟನೆ"

ಜಂಗಮ ಎಂದರೆ ಸಂಚರಿಸುವ ವಸ್ತು ಎಂದರ್ಥ. ಒಂದೇ ಸ್ಥಳದಲ್ಲಿ ಸ್ಥಿರವಾಗಿರುವ ಎಂಬರ್ಥ ಕೊಡುವ ಸ್ಥಾವರ ಶಬ್ದಕ್ಕೆ ವಿರುದ್ಧವಾದ ಶಬ್ದವಿದು. ಹೆಚ್ಚಾಗಿ ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತ ವೀರಶೈವ-ಲಿಂಗಾಯತ ತತ್ವನೀತಿ, ಆಚಾರ, ಧರ್ಮವನ್ನು ಇತರರಿಗೂ ಬೋಧಿಸುವ ಹಾಗೂ ಅವರ ಆಚಾರ ವಿಚಾರಗಳನ್ನು ಪರಿಶೀಲಿಸುವ ಧಾರ್ಮಿಕ ವ್ಯಕ್ತಿಯನ್ನು ಜಂಗಮ ಎಂದು ಕರೆಯಲಾಗುತ್ತದೆ. ಜಂಗಮ ಎಂದರೆ ಒಬ್ಬ ವ್ಯಕ್ತಿಯಲ್ಲ, ಧರ್ಮ ಮತ್ತು ನೀತಿ ಬೋಧಿಸುವ ಕಾರ್ಯನಿರತ ವ್ಯಕ್ತಿಗಳ ಒಂದು ಗುಂಪು ಅಥವಾ ಒಂದ ವರ್ಗ. ವೀರಶೈವ-ಲಿಂಗಾಯತ ಧರ್ಮ, ಗ್ರಂಥ ಸಾಹಿತ್ಯಗಳಲ್ಲಿ ಮಾತ್ರ ಈ ಜನಾಂಗವನ್ನು ಉದ್ಧೇಶಿಸಿ ಜಂಗಮ ಎಂಬ ಪದಬಳಕೆ ಆಗಿದೆಯೇ ಹೊರತು, ವೈಷ್ಣವ ಧರ್ಮದ ಬೇರಾಗಿ, ಬಾವಾಜಿ, ಬಾಳಾಸಂತ, ಹಗಲು ವೇಷಗಾರರು, ಬಯಲು ವೇಷಗಾರ ಉಪಾಸಕರಿಗಾಗಲೀ ಅಥವಾ ಇನ್ನಿತರ ಯಾವುದೇ ಧರ್ಮ ಜನಾಂಗದವರಿಗಾಗಲಿ, ಅಲೆಮಾರಿ ದಾರಿಹೋಕ, ಭಿಕ್ಷುಕ ವರ್ಗದವರಿಗಾಗಲಿ, ಬೆಟ್ಟದ ತಾಣದಲ್ಲಿ ಬೇಟೆಯಾಡಿ ಬದುಕುತ್ತಿರುವ ಬೇಡರಿಗಾಗಲಿ, ಚಾಪೆ ನೇಯುವವರು ಹಾಗೂ ಕಣಿ ಹೇಳುವ ಬುಡಕಟ್ಟು ಜನಾಂಗದವರಿಗಾಗಲಿ ಜಂಗಮರು ಎಂಬ ಪದಬಳಕೆ ಯಾವ ಧರ್ಮ, ಗ್ರಂಥಗಳಲ್ಲಿ ಉಲ್ಲೇಖ ಕಾಣಸಿಗುವುದಿಲ್ಲ.


*ಬೇಡಜಂಗಮ, ಬುಡ್ಗಜಂಗಮ, ಮಾಲಜಂಗಮ*

ಆಂಥ್ರೋಪಲಾಜಿಕಲ್ ಸರ್ವೆ ಇಂಡಿಯಾದವರ ಪೀಪಲ್ ಆಫ್ ಇಂಡಿಯಾ ನ್ಯಾಷನಲ್ ಸಿರೀಸ್ (ಆಲ್ ಕಮ್ಯೂನಿಟೀಸ್), ಭಾಗ-3 ಮಾರ್ಚ 1991 ರ ಪುಟ 762-766 ರಲ್ಲಿ ಬೇಡಜಂಗಮ, ಬುಡ್ಗಜಂಗಮ, ಮಾಲಜಂಗಮ ಜಾತಿಗಳೆಲ್ಲವೂ ಮೂಲತಃ ವೀರಶೈವ ಧರ್ಮದ ಅನುಯಾಯಿಗಳಾದ ಜಂಗಮರ ಕುಲಕಸುಬಿನ ವಿವಿಧ ಪಂಗಡಗಳೆಂದು ಪ್ರಕಟಿಸಿರುತ್ತಾರೆ. ಹೈದ್ರಾಬಾದ್ ರಾಜ್ಯಕ್ಕೆ ಸಂಬಂಧಿಸಿದಂತೆ ಬೇಡ (ಬುಡ್ಗ) ಜಂಗಮ, ಮಾಲಜಂಗಮರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಿ, ಭಾರತ ಸರ್ಕಾರ ದಿ ಕಾನ್ಸ್ಟಿಟ್ಯೂಷನ್ (ಷೆಡ್ಯೂಲ್ಸ್ ಕ್ಯಾಸ್ಟ್) ಆದೇಶ 1950 ಹೊರಡಿಸಿರುತ್ತದೆ. ಹೈದ್ರಾಬಾದ್, ಉಸ್ಮಾನಾಬಾದ್ ಪ್ರದೇಶಗಳನ್ನು ಹಾಗೂ ಕನ್ನಡ ಭಾಷೆ ಪ್ರಭಾವದ ಜಿಲ್ಲೆಗಳಾದ ಬೀದರ, ಕಲಬುರಗಿ, ರಾಯಚೂರು ಪ್ರದೇಶಗಳನ್ನು ಅನುಕ್ರಮವಾಗಿ ಮಹಾರಾಷ್ಟ್ರ ಮತ್ತು ಮೈಸೂರು ರಾಜ್ಯಕ್ಕೆ 1956 ರಲ್ಲಿ ರಾಜ್ಯಗಳು ಪುನರ್ ರಚನೆಯ ಸಮಯದಲ್ಲಿ ವರ್ಗಾಯಿಸಿ ದಿ ಷೆಡ್ಯೂಲ್ ಕ್ಯಾಸ್ಟ್ ಮತ್ತು ಷೆಡ್ಯೂಲ್ಡ್ ಟ್ರೈಬ್ಸ್ ಲಿಸ್ಟ್ (ಮಾಡಿಫಿಕೇಶನ್) ಆರ್ಡರ್ 1956 ರನ್ನು ಈ ಜಾತಿಗಳೊಂದಿಗೆ ಆಯಾ ಜಿಲ್ಲೆಗಳಿಗೆ ನಿರ್ಭಂದಿಸಿ ಆದೇಶ ಹೊರಡಿಸಿರುತ್ತದೆ. ಈ ರಾಜ್ಯಗಳ ಭಾಷೆ, ಸಂಸ್ಕೃತಿ, ಸಂಪ್ರದಾಯಗಳು ಈ ಜನಾಂಗದವರ ಮೇಲೆ ಪ್ರಭಾವ ಬೀರಿದ್ದು, ತನ್ನ ಎಲ್ಲ ಕಸುಬುಗಳಿಗೆ ವೀರಶೈವ-ಲಿಂಗಾಯದಿಂದ ಪ್ರತಿಫಲ ಪಡೆಯುವುದು, ಸಾಮಾನ್ಯವಾಗಿ ಆಯಾ ವರ್ಷದ ಫಸಲಿನ ಕಾಲದಲ್ಲಿ ಆಗಿರುವುದರಿಂದ, 1936ರ ಮರಾಠಿ ಭಾಷಾ ಶಬ್ದ ಕೋಶದಲ್ಲಿ ಬೇಡ ಎಂದರೆ ವರ್ಷಾಚೆ ಠರಾವಿಕ್ ದೇಣಗಿ (ವಾರ್ಷಿಕ ನಿಗದಿತ ದೇಣಿಗೆ) ಎಂದು ಪ್ರಕಟಿಸಲಾಗಿದೆ. 1956 ರಲ್ಲಿ ಶ್ರೀ ಅನಿಲ್ ಕೆ. ಚಂದ, ಅಧ್ಯಕ್ಷರು, ಜಂಟಿ ಸಮಿತಿಯ ಪರಿಶೀಲನೆ ನಂತರ ಬೇಡಜಂಗಮ, ಬುಡ್ಗಜಂಗಮ ಮತ್ತು ಮಾಲಜಂಗಮ ಜಾತಿಗಳಿಗೆ ವಿಧಿಸಲಾಗಿದ್ದ ಜಿಲ್ಲಾ ಸಮೀತಿಯನ್ನು ತೆಗೆದುಹಾಕಿ, ದಿ ಷೆಡ್ಯೂಲ್ಡ್ ಕ್ಯಾಸ್ಟ್ ಮತ್ತು ಷೆಡ್ಯೂಲ್ಡ್ ಟ್ರೈಬ್ಸ್ ಆರ್ಡರ್ಸ್ (ಅಮೆಂಡ್ಮೆಂಟ್) ಆಕ್ಟ್ 1976 ರನ್ನು ಹೊರಡಿಸಲಾಗಿರುತ್ತದೆ. ಕರ್ನಾಟಕ ಗೆಜೆಟಿಯರ್ ರವರ ಕೋರಿಕೆ ಮೇರೆಗೆ ಸಲ್ಲಿಸಿದ್ದ ತಮ್ಮ ಅಧ್ಯಯನ ವರದಿಯಲ್ಲಿ ಹಾಗೂ ಭಾರತ ಸರ್ಕಾರದ ಆಂಥ್ರೋಪಲಾಜಿಕಲ್ ಸರ್ವೆ ಆಫ್ ಇಂಡಿಯಾದವರು 1993 ನೇ ಇಸವಿಯಲ್ಲಿ ಪ್ರಕಟಿಸಲಾಗಿದ್ದ ದಿ ಷೆಡ್ಯೂಲ್ಡ್ ಕ್ಯಾಸ್ಟ್ ಪುಸ್ತಕದ ಪುಟ 205 ರಿಂದ 207 ರಲ್ಲಿ ಮತ್ತು 2004 ರ ಇಸವಿಯಲ್ಲಿ ಮಹಾರಾಷ್ಟ್ರ ರಾಜ್ಯಕ್ಕೆ ಸಂಬಂಧಪಟ್ಟಂತೆ ಪ್ರಕಟಿಸಲ್ಪಟ್ಟ ಪುಸ್ತಕದ ಪುಟ 179 ರಿಂದ 183ರ ವರದಿಯಲ್ಲಿ ವಂಶಪಾರಂಪರ್ಯ ಭಿಕ್ಷಾ ವೃತ್ತಿ, ಕುಲಕಸಬು ಮಾಡುತ್ತಿರುವ ಸಾಮಾನ್ಯ ಜಂಗಮರೇ ಬೇಡಜಂಗಮರೆಂದು ಖಚಿತ ಪಡಿಸಿರುತ್ತಾರೆ.


*ಕಾಯಕ ಆಧಾರಿತ ಜಾತಿಗಳು*

ಜಾತಿಗಳ ಹುಟ್ಟು ಹಿಂದೂ ವರ್ಣಾಶ್ರಮದಲ್ಲಿ ವಂಶಪಾರಂಪರ್ಯ ವೃತ್ತಿ ಅಥವಾ ಕುಲಕಸುಬಿನಿಂದ ನಿರ್ಧಾರವಾಗುವುದು ಎಂಬುದು ಸರ್ವವಿಧಿತ ಮತ್ತು ಕಾನೂನು ಬದ್ಧವಾಗಿರುತ್ತದೆ. ಕುರುಬ, ಕುಂಬಾರ, ಸಮಗಾರ, ಕೊರವ ಇತ್ಯಾದಿ ಜಾತಿಗಳ ಹುಟ್ಟು ಆಹಾ ಜಾತಿಗಳ ಕುಲಕಸುಬಿನಿಂದಲೇ ಆಗಿರುತ್ತದೆ. ಅಂತೆಯೇ ಶತ-ಶತಮಾನಗಳಿಂದ ಭಿಕ್ಷಾ ವೃತ್ತಿಯ ಅಡಿಯಲ್ಲಿ ಬೇಡಜಂಗಮನಾಗಿ ಜೀವನಸಾಗಿಸಬೇಕೆಂದು ವೀರಶೈವ ಧರ್ಮ ವಿಧಿಸಿದ-ಹೇರಿರುವ ಕಟ್ಟಳೆಯಲ್ಲಿ, ವೀರಶೈವ-ಲಿಂಗಾಯತರ ಲಿಂಗಧೀಕ್ಷೆ, ಮದುವೆ, ಶವಂಸ್ಕಾರ ಮುಂತಾದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಾ, ರಾಜಾಶ್ರಯವಿಲ್ಲದ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿನ ಆಲಸಿಗಳನ್ನು, ವ್ಯವನಿಗಳನ್ನು, ಕಳ್ಳರುಗಳನ್ನು, ಕೊಲೆಗಡುಕರುಗಳನ್ನು ಹಾಗೂ ದುರಾಚಾರಿಗಳನ್ನು ಸದಾಚಾರಿ ಸಂಪನ್ನರಾಗಿ ಬಾಳುವಂತೆ ಮಾಡಲು ಒಂದಕ್ಕಿಂತ ಒಂದು ಕಠಿಣ ಹಾಗೂ ಘೋರ ಕಾಯಕಗಳಾದ ಗಂಟೆಕಾಯಕ, ತೆಕ್ಕೆಕಾಯಕ, ಮುಳ್ಳಾವಿಗೆ ಕಾಯಕ ಹಾಗೂ ಶಸ್ತ್ರದ ಕಾಯಕಗಳ ಮೂಲಕ ಯಾರೋ ಮಾಡಿದ ಪಾಪದ ಕೆಲಸ ಕಾರ್ಯಗಳಿಗೆ ತಮ್ಮನ್ನು ತಾವೇ ದಂಡಿಸಿಕೊಂಡು, ಅನಿವಾರ್ಯದ ಸಂದರ್ಭದಲ್ಲಿ ಸತ್ಯಾಗ್ರಾಹಿಯಂತೆ ಕೊರಳನ್ನೆ ಕತ್ತರಿಸಿ ಪ್ರಾಣತ್ಯಾಗ ಮಾಡುತ್ತ ಸಮಾಜ ಸುಧಾರಣೆ ಕೆಲಸಗಳನ್ನು ನೆವೇರಿಸಿ ಕೊಳ್ಳುತ್ತಿದ್ದ ಜಂಗಮರುಗಳ ನಿಸ್ವಾರ್ಥ ಸೇವೆಗೆ ಪ್ರತಿಫಲವಾಗಿ ದಾನ, ದತ್ತು ಮತ್ತು ದೇಣಿಗೆ ನೀಡುವ ಪದ್ಧತಿ-ಸಂಪ್ರದಾಯ ಪ್ರಚಲಿತದಲ್ಲಿತ್ತು. ಮಠಮಾನ್ಯಗಳಲ್ಲಿ ನಿರಾಶ್ರಿತರುಗಳಿಗೆ ವಿದ್ಯಾದಾನ ಮಾಡುವುದಲ್ಲದೆ ಅವರ ದೈನಂದಿನ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಕೈಯಲ್ಲಿ ಬೆತ್ತ, ಜೋಳಿಗೆ ಹಿಡಿದು ಕಾಲಿಗೆ ಜಂಗನ್ನು ಕಟ್ಟಿಕೊಂಡು ಮನೆಮನೆಗೆ ತಿರುಗಿ ಕಂತೆ ಭಿಕ್ಷೆ, ಕಾಳಿನ ಭಿಕ್ಷೆ ಮಾಡುತ್ತ ನಿಸ್ವಾರ್ಥ ಜೀವನ ಸಾಗಿಸುತ್ತಿರುವ ಬೇಡುವ ಜಂಗಮ ಮರಾಠಿ ಜನರುಗಳ ಸಂಪರ್ಕದಲ್ಲಿ ಬೇಡಜಂಗಮ ಎಂದು ನಾಮಾಂಕಿತವಾಗಿರುವುದು ಒಂದು ವಾಸ್ತವಿಕಾಂಶವಾಗಿರುತ್ತದೆ. ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ವೀರಶೈವ-ಲಿಂಗಾಯತ ಧರ್ಮದ ಅನುಯಾಯಿಗಳಾದ ಜಂಗಮರು ಶಿವನ ತ್ರಿಶೂಲ, ಡಮರುಗವನ್ನು ಹಿಡಿದು ಬೇಡುವವರನ್ನು ಬುಡ್ಗಜಂಗಮರೆಂದು ರುದ್ರಾಕ್ಷಿ ಮಾಲೆ ಧರಿಸಿ, ಕೈಯಲ್ಲಿ ಗಂಟೆ, ಜೋಳಿಗೆ ಹಿಡಿದು, ಮಾಲಾಜಾತಿಯವರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತ ಭಿಕ್ಷೆ ಮಾಡುವವರನ್ನು ಮಾಲಜಂಗಮರೆಂದು ಕರೆಯುವ ವಾಡಿಕೆ ಆಯಾ ಪ್ರದೇಶಗಳಲ್ಲಿದೆ. 1961 ರಲ್ಲಿ ಭಾರತ ಜನಗಣತಿ ನಿರ್ದೇಶನಾಲಯದ ಎಥ್ನೋಗ್ರಾಫಿಕ್ ವರದಿಯಲ್ಲಿ ಮಾಲಾಜಂಗಮರ ಬಗ್ಗೆ ವರದಿ ಸಲ್ಲಿಸಿದ್ದು, ಅವರು ವೀರಶೈವ-ಲಿಂಗಾಯತ ಧರ್ಮದ ಅನುಯಾಯಿಗಳಾಗಿದ್ದು, ಮಾಲಜಾತಿಯವರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿಕೊಡುತ್ತಿದ್ದ ಸಾಮಾನ್ಯ ಜಂಗಮರೇ ಮಾಲಾಜಂಗಮರೆಂದು ಕರೆಯಲ್ಪಡುತ್ತಾರೆಂದು ಸ್ಪಷ್ಟವಾಗಿ ವಿವರಿಸಿದೆ.


*ಬೇಡಜಂಗಮರು ವೀರಶೈವ-ಲಿಂಗಾಯತ ಧರ್ಮದ ಅನುಯಾಯಿಗಳು*

ರಾಜ್ಯ ಸರ್ಕಾರದ ಅಧಿಕೃತ ಇಲಾಖೆ ಕರ್ನಾಟಕ ಗೆಜೆಟಿಯರ್ ರವರು ಬೇಡಜಂಗಮರ ಬಗ್ಗೆ ಸರ್ಕಾರಕ್ಕೆ ದಿ: 28-08-1986 ರಂದು ಸಲ್ಲಿಸಿರುವ ಸಮೀಕ್ಷಾ ವರದಿಯಲ್ಲಿ ಹಾಗೂ ಭಾರತ ಸರ್ಕಾರದ ಆಂಥ್ರೋಪಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಪ್ರಕಟಿಸಿರುವ ದಿ ಷೆಡ್ಯೂಲ್ಡ್ ಕ್ಯಾಸ್ಟ್ ಪುಸ್ತಕದ ಪುಟ 205 ರಿಂದ 207 ರಲ್ಲಿ ತಿಳಿಸಿರುವ ಬೇಡಜಂಗಮರ ಪದ್ಧತಿ-ಸಂಪ್ರದಾಯ, ಆಚಾರ-ವಿಚಾರಗಳು, ವೀರಶೈವ-ಲಿಂಗಾಯತ ಧರ್ಮದ ಅನುಯಾಯಿಗಳಾಗಿದ್ದು, ಶೈವ ಪರಂಪರೆಗೆ ಒಳಪಡುವ ಜಂಗಮರ ಗುಣಲಕ್ಷಣಗಳನ್ನೇ ಪ್ರತಿಪಾದಿಸಿರುವುದರಿಂದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಬೇಡಜಂಗಮರು ವೀರಶೈವ-ಲಿಂಗಾಯತ ಧರ್ಮದ ಅನುಯಾಯಿಗಳಾಗಿರುತ್ತಾರೆಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ..


*ಚಾರಿತ್ರಿಕ ಪ್ರಾಚೀನ ದಾಖಲೆ*

ಇಂದಿನ ಶಿವಮೊಗ್ಗ ಜಿಲ್ಲೆಯಲ್ಲಿರುವ ಶ್ರೀ ಅಲ್ಲಮಪ್ರಭು ಜನ್ಮಸ್ಥಳವಾದ ಬಳ್ಳೆಗಾವಿಯ ಶಿಲಾಶಾಸನದಲ್ಲಿ ಕ್ರಿ.ಶ. 1070 ರಲ್ಲಿ ಚಾಲುಕ್ಯರ ದೊರೆ ವಿಜಯದತ್ತನ ರಾಣಿ ಲಜ್ಜಾದೇವಿಯು ವೀರಶೈವ ಧರ್ಮದ ಜಂಗಮರ ಬಗ್ಗೆ ಬರೆಯುತ್ತ ಯಾಚಕಜಂಗಮರೆಂದು ಅಂದರೆ ಬೇಡುವ ಜಂಗಮರೆಂದು ಉಲ್ಲೇಖ ಮಾಡಿರುತ್ತಾರೆ. ಈ ಜನಾಂಗವು ವೀರಶೈವ ಧರ್ಮದ ಅನುಯಾಯಿಗಳಾಗಿದ್ದರಿಂದ, ವೀರಶೈವ ಧರ್ಮದ ಮೇಲೆ ಬೀರಿರುವ ಕನ್ನಡ ಭಾಷೆ ಹಾಗೂ ಸಾಹಿತ್ಯದ ಪ್ರಭಾವವು ಈ ಜನಾಂಗದವರ ಮೇಲೆ ಬಿದ್ದಿರುತ್ತದೆ. ಕಾರಣ ಬೇಡಜಂಗಮ ಎಂದರೆ ಬೇಡುವ ಜಂಗಮ ಎಂದರ್ಥ. ಬೇಡುವ ಜಂಗಮ, ಬೇಡಜಂಗಮರಲ್ಲಿ ವ ಕಾರದ ಲೋಪವೇ ಹೊರತು, ಅರ್ಥ ವ್ಯತ್ಯಾಸವಿಲ್ಲ. ಬಳಕೆಯಲ್ಲಿನ ರೀತಿ ಅಷ್ಟೆ. ಬೇಡುವ ಜಂಗಮ ಕ್ರೀಯಾ ವಿಶ್ಲೇಷಣ ಪದವಾಗಿದ್ದು, ಈ ಜನಾಂಗದ ನಾಮವಿಶ್ಲೇಷಣ ಪದವು ಬೇಡಜಂಗಮವಾಗಿರುತ್ತದೆ.


*ಧಾರ್ಮಿಕತೆ, ಸಾಮಾಜಿಕತೆಗಳ ಅಂತರ*

ಅನೇಕರು ಭಾವಿಸಿರುವಂತೆ ಜಂಗಮರು ’ಧಾರ್ಮಿಕ ದೃಷ್ಟಿ’ಯಲ್ಲಿ ಗುರುವರ್ಗಕ್ಕೆ ಸೇರಿದ್ದು, ಅವರುಗಳು ಶ್ರೇಷ್ಠರಾಗಿರುವುದು ಒಂದು ಸಂಪ್ರದಾಯ ಅಥವಾ ಧಾರ್ಮಿಕ ಪದ್ಧತಿ ಮಾತ್ರವಾಗಿರುತ್ತದೆ. ಆದರೆ, ಜಂಗಮರ ಸಾಮಾಜಿಕ ಸ್ಥಾನಮಾನವು, ಅವರುಗಳ ಆರ್ಥಿಕ ಮತ್ತು ಶೈಕ್ಷಣಿಕತೆಯ ಸ್ಥಾನಮಾನಕ್ಕೆ ನೇರವಾಗಿ ಅವಲಂಬಿಸಿದ್ದು, ಅವರುಗಳು ’ಭಿಕ್ಷಾವೃತ್ತಿ’ ಕಾಯಕದ ಜೊತೆಜೊತೆಗೆ ’ಶವಸಂಸ್ಕಾರ’ವನ್ನು ನೆರವೇರಿಸಿಕೊಡುವ ಕೆಳಮಟ್ಟದ ಪದ್ಧತಿ-ಸಂಪ್ರದಾಯ ಮತ್ತು ಕರ್ತವ್ಯದ ಮೇಲೆ ಅವಲಂಬಿತವಾಗಿರುತ್ತದೆ. ಸಂಪ್ರದಾಯದಡಿಯಲ್ಲಿನ ’ಧಾರ್ಮಿಕ ಸ್ಥಾನಮಾನ’ಕ್ಕೂ ’ಸಾಮಾಜಿಕತೆಯ ಸ್ಥಾನಮಾನ’ಕ್ಕೂ ಬಹಳ ಅಂತರ ವ್ಯತ್ಯಾಸಗಳಿದ್ದು, ಜಂಗಮರ ಸಾಮಾಜಿಕ ಸ್ಥಾನಮಾನದ ಬಗ್ಗೆ ತಪ್ಪು ಕಲ್ಪನೆ ಹೊಂದಲು ಕಾರಣವಾಗಿದೆ. ಉದಾಹರಣೆಗೆ, ಉತ್ತರ ಕರ್ನಾಟಕದಲ್ಲಿನ ಬಸವಿ ಸಂಪ್ರದಾಯದ ಅಡಿಯಲ್ಲಿ ರೇಣಿಕದೇವಿಯನ್ನು ಹೊತ್ತು ತರುವ ಮಹಿಳೆಯನ್ನು ’ಧಾರ್ಮಿಕ ದೃಷ್ಟಿ’ ಕೋನದಲ್ಲಿ ರೇಣುಕದೇವಿ-ಎಲ್ಲಮ್ಮನ ಸ್ವರೂಪದವಳೆಂದು ಪರಿಗಣಿಸಿ, ಭಕ್ತಿ ಪೂರ್ವಕವಾಗಿ ನಮಸ್ಕರಿಸುವುದಲ್ಲದೆ, ಆರ್ಥಿಕದಿಂದ ಮತ್ತು ಶೈಕ್ಷಣಿಕತೆಯಿಂದ ಹಿಂದುಳಿದಿರುವ ಆ ಮಹಿಳೆಯನ್ನು ಸಾಮಾಜಿಕವಾಗಿಯೂ ಹಿಂದುಳಿದವಳೆಂದು ಪರಿಗಣಿಸಿ ಸರ್ಕಾರದಿಂದ ಅನೇಕ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆದು ಫಲಾನುಭವಿಯಾಗಿರುವುದು ಸತ್ಯ ಮತ್ತು ವಾಸ್ತವಿಕಾಂಶವಲ್ಲವೇ?


*ಸ್ವಾತಂತ್ರ್ಯದ ಪೂರ್ವದಲ್ಲಿನ ’ಜಂಗಮ’ರ ಸ್ಥಿತಿ-ಗತಿಗಳು*

ಕ್ರಿ.ಶ 1840 ರಲ್ಲಿಯೇ ಶ್ರೀ ಸಿ.ಪಿ.ಬ್ರೌನ್ರವರು ಬರೆದ ಕ್ರೀಡ್, ಕಸ್ಟಮ್ಸ್ ಅಂಡ್ ಲಿಟರೇಚರ್ ಆಫ್ ಜಂಗಮಾಸ್ ಎಂಬ ತಮ್ಮ ಪ್ರಬಂಧದ ಪುಟ 175 ರಲಿ ’ಜಂಗಮ’ರು ಕಡುಬಡವರು, ಶಿಕ್ಷಣಕ್ಕಾಗಿ ಸ್ವಲ್ಪ ಹಣವನ್ನು ಕಟ್ಟಲು ಕೂಡ ಅಸಾಯಕರು, ಮೇಲ್ವರ್ಗದ ಬ್ರಾಹ್ಮಣರುಗಳಿಂದ ಧಾರ್ಮಿಕ ಹಾಗು ಸಾಮಾಜಿಕ ಕಾರ್ಯಕ್ರಮಗಳಿಂದ ಬಹಿಷ್ಕರಿಸಲ್ಪಟ್ಟಿರುವವರೆಂದು ಹಾಗೂ ಹಿಂದುಳಿದವರಾಗಿರುತ್ತಾರೆಂದು ಸ್ಪಷ್ಟವಾಗಿ ತಿಳಿಸಿರುತ್ತಾರೆ. ಮೈಸೂರು ಸರ್ಕಾರದ 1871 ರ ಜನಗಣತಿಯ ವರದಿಯಲ್ಲಿ ವೀರಶೈವ ಧರ್ಮದ ಸಾಮಾನ್ಯ ’ಜಂಗಮ’ರನ್ನು ಅಂದಿನ ವರದಿಯಲ್ಲಿ ’ರೇಣುಕ ಜಂಗಮ’ ಹಾಗೂ ವಿರಕ್ತ (ಲಿಂಗಾಯತ)ರೆಂದು ವರ್ಗೀಕರಿಸಿ, ’ಭಿಕ್ಷುಕ’ ವರ್ಗದ ಶೀರ್ಷಿಕೆಯಲ್ಲಿ ಇನ್ನಿತರ 37 ಸಾಮಾನ್ಯ ಭಿಕ್ಷುಕ ಜಾತಿಗಳೊಂದಿಗೆ ಸೇರಿಸಿರುತ್ತದೆ. 1881 ರ ಮೈಸೂರು ಜನಗಣತಿ ವರದಿಯಲ್ಲಿ ’ಹಿಂದೂ ಲಾ’ ಪ್ರಕಾರ ವೀರಶೈವ-ಲಿಂಗಾಯಿತ ಜನಾಂಗದವರನ್ನು ’ಶೂದ್ರ’ರೆಂದು ಪರಿಗಣಿಸಿರುತ್ತದೆ. ಇಸ್ಲಾಂ ಧರ್ಮದಲ್ಲಿನ ’ದರ್ವೇಶ್’ ಜನಾಂಗದವರನ್ನು ’ಧಾರ್ಮಿಕ ಭಿಕ್ಷುಕ’ರುಗಳೆಂದು ಗುರುತಿಸಿದ ಹಿನ್ನೆಲೆಯಲ್ಲಿಯೇ, ಹಿಂದಿನ ಹೈದ್ರಾಬಾದ್ ಪ್ರಾಂತ್ಯದ ನಿಜಾಮ್ ಆಡಳಿತ ಸರ್ಕಾರವು ಇವರಿಗೆ ಸರಿಸಮಾನರಾದ ’ಜಂಗಮ’ರನ್ನು ಸಹ 1901 ರಲ್ಲಿಯೇ ’ಕೆಳದರ್ಜೆ ಧಾರ್ಮಿಕ ಭಿಕ್ಷುಕ’ದವರೆಂದು ವರ್ಗೀಕರಿಸಿ, ಅವರ ಜನಸಂಖ್ಯೆ 62,111 ಎಂದು ಪ್ರಕಟಿಸಿರುತ್ತದೆ. 1921 ರ ಅಂದಿನ ’ದಿ ಡಿಪ್ರಸ್ಡ್ ಕ್ಲಾಸ್’ (ದಲಿತ, ದುರ್ಬಲ ವರ್ಗ) ದ ಪಟ್ಟಿಯಲ್ಲಿ ’ಜಂಗಮ’ರನ್ನು ಇನ್ನಿತರೆ 34 ಕೆಳದರ್ಜೆ ಜಾತಿಗಳೊಂದಿಗೆ ಸೇರಿಸಿ, ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ನಿಜಾಮ ಸರ್ಕಾರವು ಅಂದಿನ ದಲಿತ ಪಟ್ಟಿಯಲ್ಲಿ ಸೇರಿಸಿ, ಅನುವು ಮಾಡಿಕೊಟ್ಟಿರುವುದನ್ನು ಸ್ವಾತಂತ್ರ್ಯದ ಪೂರ್ವದಲ್ಲಿನ ಈ ದಾಖಲೆಯಿಂದ ಕಂಡು ಬರುತ್ತದೆ. ಅಂತೆಯೇ, 1949 ನೇ ಇಸವಿಯಲ್ಲಿ ನಿಜಾಮರ ಆಳ್ವಿಕೆ ಅಂತ್ಯಗೊಂಡು ಜಾರಿಯಲ್ಲಿದ್ದ ಮಿಲಿಟರಿ ಸರ್ಕಾರದ ಅವಧಿಯಲ್ಲಿ ಹೊರಡಿಸಲಾಗಿದ್ದ ಹೈದರಾಬಾದ್ ಸಂಸ್ಥಾನದ ಮಂದಿರಗಳಲ್ಲಿ ಹರಿಜನರ ಪ್ರವೇಶದ ನಿರ್ಭಂಧ, 1358 ಫಸಲಿ ಹಾಗೂ ಹೈದರಾಬಾದ್ ಹರಿಜನರ (ಸಾಮಾಜಿಕ ದೌರ್ಬಲ್ಯ ನಿವಾರಣೆ) ನಿರ್ಭಂಧ, 1358 ಫಸಲಿ ಇವುಗಳಲ್ಲಿ ನೀಡಲಾಗಿರುವ ’ಹರಿಜನ’ ಡೆಫನೆಷನ್ ಪ್ರಕಾರ ಜಂಗಮರು ಸಹ ಹರಿಜನರಂತೆ ಪೂಜಾ ಮಂದಿರಗಳಲ್ಲಿ ಪ್ರವೇಶಿಸಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಕೊಡುವುದರಿಂದ ಮೇಲ್ವರ್ಗದ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ವರ್ಗದವರುಗಳಿಂದ ಬಹಿಷ್ಕರಿಸಲ್ಪಟ್ಟು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದರೆಂಬುದರ ಬಗ್ಗೆ ಈ ದಾಖಲೆಗಳೇ ಸ್ವಯಂ ವೇದ್ಯವಾಗಿರುತ್ತವೆ.


*ದಲಿತವರ್ಗ ಮತ್ತು ಪರಿಶಿಷ್ಟ ಜಾತಿ ಪರಿಕಲ್ಪನೆ-ಅರ್ಥ*

ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಮತಾಧಿಕಾರ ಸಮಿತಿ (ಇಂಡಿಯನ್ ಪ್ರೆಂಚಾಯಿಸ್ ಕಮಿಟಿ) ಗೆ ಸಲ್ಲಿಸಿದ ವರದಿಯ ಪುಟ 209 ರಲ್ಲಿ ತಿಳಿಸಿರುವಂತೆ, ಎಲ್ಲ ದಲಿತ ವರ್ಗ (ಡಿಪ್ರೆಸ್ಟ್ ಕ್ಲಾಸ್) ದವರು ಅಸ್ಪೃಶ್ಯರಲ್ಲ. ಆದಾಗ್ಯೂ ಎಲ್ಲ ಅಸ್ಪೃಶ್ಯರು ದಲಿತ ವರ್ಗಕ್ಕೆ ಸೇರಿರುತ್ತಾರೆ. ಹೀಗಾಗಿ ಸ್ಪೃಶ್ಯರು ಕೂಡ ದಲಿತ ವರ್ಗಕ್ಕೆ ಸೇರಿರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಂತೆಯೇ, ಶ್ರೇಷ್ಠ ವಿದ್ವಾಂಸರಾದ ಹಾಗೂ ದಿ ಪಾಲಿಸಿ ಆಫ್ ದಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಟುವರಸ್ಡ್ ದಿ ಡಿಪ್ರೆಸ್ಡ್ ಕ್ಲಾಸ್ ಅಂಡ್ ಹಿಸ್ಟಾರಿಕಲ್ ಸ್ಟೇಟಜಿ ಎಂಬ ಗ್ರಂಥದ ಲೇಖಕರಾದ ಶ್ರೀ ಲೇಲ್ಹಾಡೆಸ್ಕಿನ್ರವರ ಪ್ರಕಾರ ದಲಿತ ವರ್ಗದ ಅಂತಿಮ ಪಟ್ಟಿ ಪೂರ್ಣವಾದಾಗ ಪ್ರಾರಂಭದಲ್ಲಿದ್ದ ಅಸ್ಪೃಶ್ಯತೆಯ ಅಳತೆಗೋಲನ್ನು ಬದಿಗೊತ್ತಿ ಸ್ಪೃಶ್ಯರನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತ ಸರ್ಕಾರದ ಪರಿಶಿಷ್ಟ ಜಾತಿ ಪಟ್ಟಿಯು ಅಸ್ಪೃಶ್ಯ ಮತ್ತು ಸ್ಪೃಶ್ಯ ಜಾತಿಗಳನ್ನೊಳಗೊಂಡಿದ್ದು, ಸ್ವಾತಂತ್ರ್ಯದ ಪೂರ್ವದಲ್ಲಿಯೇ ಡಾ.ಅಂಬೇಡ್ಕರ್ ಅವರೂ ಸೇರಿದಂತೆ ಹಲವಾರು ರಾಷ್ಟ್ರ ಮಟ್ಟದ ಧುರೀಣರು ಸಮಗ್ರ ಚರ್ಚೆ ನಡೆಸಿದ ನಂತರ, ಯಾವುದೇ ಒಂದು ಜಾತಿಯು ಕೀಳು ಜಾತಿ ಅಥವಾ ಮೇಲು ಜಾತಿ ಎಂಬುದಾಗಿ ತೋರಿಸದಿರುವಂತಹ ಪದಬಳಕೆಯಾದ ಪರಿಶಿಷ್ಟ ಜಾತಿ, ಅನುಸೂಚಿತ ಜಾತಿ ಅಂದರೆ ಪರಿಶಿಷ್ಟದಲ್ಲಿ ಸೂಚಿಸಲ್ಪಟ್ಟ ಜಾತಿಗಳ ಒಂದು ಪಟ್ಟಿ ಎಂಬುದಾಗಿ ಭಾರತ ಸಂವಿಧಾನದಲ್ಲಿ ಅಳವಡಿಸಲು ಸಮ್ಮತಿಸಿದ್ದರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಎಂಬ ಮೂರು ಅಳತೆಗೋಲಿನಿಂದ ಜಾತಿಗಳ ಹಿಂದುಳಿದಿರುವಿಕೆಯನ್ನು ಗುರುತಿಸಿ, ಪರಿಶಿಷ್ಟ ಜಾತಿಯಲ್ಲಿ ಸೇರಿಸಲಾಗಿದೆ ವಿನಃ ಧಾರ್ಮಿಕ ಅಳತೆಗೋಲನ್ನು ಪರಿಗಣಿಸಲಾಗಿರುವುದಿಲ್ಲ. ಭಾರತ ಸರ್ಕಾರವು ಈ ಹಿನ್ನೆಲೆಯಲ್ಲಿಯೇ ’ಬೇಡಜಂಗಮ’ ಜಾತಿಯನ್ನು 1976 ರ ಪರಿಶಿಷ್ಟ ಜಾತಿ ಪಟ್ಟಿಯ ಕ್ರ.ಸಂ. 19 ರಲ್ಲಿ ಸೇರಿಸಿರುವುದು ಒಂದು ವಾಸ್ತವಿಕಾಂಶವಾಗಿರುತ್ತದೆ.


*ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪು*

ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲವು ದಿನಾಂಕ: 27-01-1995 ರಂದು ಸಮಾಜದ ರಿಟ್ ಪ್ರಕರಣ ಸಂಖ್ಯೆ: 18012/89 ರಲ್ಲಿ ’ಬೇಡಜಂಗಮ’ರ ಬಗ್ಗೆ ಐತಿಹಾಸಿಕ ತೀರ್ಪನ್ನು ನೀಡಿ, ರಾಜ್ಯ ಸರ್ಕಾರವು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮಾಧುರಿ ಪಾಟೀಲ್ರವರ ಪ್ರಕರಣದಲ್ಲಿ ನೀಡಿರುವ ಮಾರ್ಗಸೂಚಿ ಅಡಿಯಲ್ಲಿ 3 ಅಧಿಕಾರಿಗಳುಳ್ಳ ರಾಜ್ಯ ಮಟ್ಟದ ಜಾತಿ ಪರಿಶೀಲನಾ ಸಮಿತಿಯನ್ನು ರಚಿಸಬೇಕೆಂದು ಹಾಗೂ ಈ ಸಮಿತಿ ಮತ್ತು ಸಂಬಂಧಪಟ್ಟ ಇನ್ನಿತರ ಅಧಿಕಾರಿಗಳು ರಾಜ್ಯ ಸರ್ಕಾರವು ದಿನಾಂಕ: 22-07-1978, 05-08-1978 ಹಾಗೂ 18-01-1995 ರಂದು ಹೊರಡಿಸಿರುವ ಈ ಮೂರು ಸುತ್ತೋಲೆಗಳಿಂದ ಬಾಧಿತವಾಗದೆ, ಪ್ರಭಾವಿತರಾಗದೇ, ಅವುಗಳಲ್ಲಿನ ಯಾವುದೇ ಸೂಚನೆಗಳನ್ನು ಅನುಸರಿಸದೆ ವಿವಿಧ ಹಂತದಲ್ಲಿರುವ ’ಬೇಡಜಂಗಮ’ ಪ್ರಕರಣಗಳೆಲ್ಲವನ್ನು ಇತ್ಯರ್ಥ ಪಡಿಸತಕ್ಕದೆಂದು ಆಜ್ಞಾಪಿಸಿದೆ. ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲವು ಬೇಡಜಂಗಮ ಪರಿಶಿಷ್ಟ ಜಾತಿ ಪ್ರಕರಣಕ್ಕೆ ಸಂಬಂಧಪಟ್ಟ ಮತ್ತೊಂದು ರಿಟ್ ಪ್ರಕರಣ ಸಂಖ್ಯೆ: 1897/1989 ಕುಲಕರ್ಣಿ ಎಂ.ಗೀತಾರವರ ಪ್ರಕರಣದಲ್ಲಿ ರಾಜ್ಯ ಸರ್ಕಾರವು ದಿನಾಂಕ: 22-07-1978, 05-08-1978 ರಂದು ಹೊರಡಿಸಿದ ಸುತ್ತೋಲೆಗಳನ್ನು ಸಂವಿಧಾನ ಬಾಹಿರ, ಕಾನೂನು ಬಾಹಿರ ಹಾಗೂ ಅಧಿಕಾರ ವ್ಯಾಪ್ತಿಗೆ ಮೀರಿದ್ದು ಎಂದು ತೀರ್ಮಾನಿಸಿ, ಅವುಗಳನ್ನು ಅಸಿಂಧು ಎಂದು ಘೋಷಿಸಿರುತ್ತದೆ. ಮುಂದುವರೆದು ಮಾನ್ಯ ನ್ಯಾಯಾಲವು ಎಲ್ಲಾ ಜಂಗಮರುಗಳು ಪರಿಶಿಷ್ಟ ಜಾತಿಯವರಲ್ಲದಿರಬಹುದು, ಆದರೆ, ಬೇಡಜಂಗಮ, ಬುಡ್ಗಜಂಗಮರುಗಳು ಜಂಗಮರಲ್ಲಿಯೇ ಇದ್ದು, ಅವರುಗಳು ಲಿಂಗಾಯತ ಪಂತದವರಾಗಿದ್ದಾಗ್ಯೂ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿಯೇ ಬರುತ್ತಾರೆ ಎಂಬುದಾಗಿ ಭಾರತ ಸಂವಿಧಾನದಲ್ಲಿನ ಆರ್ಟಿಕಲ್ 25, 51ಕೆ, 341 ಹಾಗೂ 16(4) ರಲ್ಲಿ ಅಡಕವಾಗಿರುವ ಸಂವಿಧಾನ ನಿಯಮಗಳ ರೀತ್ಯಾ ಪ್ರಕರಣವನ್ನು ಪರಿಗಣಿಸಿ, ಕಾನೂನುಬದ್ಧ ಅಭಿಪ್ರಾಯವನ್ನು ಹೊರಡಿಸಿರುತ್ತದೆ.


ಮೇಲ್ಕಂಡ ಮಾನ್ಯ ಉಚ್ಛ ನ್ಯಾಯಾಲಯದ ಎರಡು ರಿಟ್ ಪ್ರಕರಣಗಳಲ್ಲಿನ, ಕಾನೂನುಬದ್ಧ ಅಂಶಗಳ ಬಗ್ಗೆ ಅಂತಿಮ ತೀರ್ಪು ಹೊರಪಡುವ ಮುಂಚಿತವೇ, ಮಾನ್ಯ ಸರ್ವೋಚ್ಛ ನ್ಯಾಯಾಲಯವು ಶ್ರೀ ಪ್ರಭುದೇವ ಮಲ್ಲಿಕಾರ್ಜುನಯ್ಯರವರಿಗೆ ಸಂಬಂಧಪಟ್ಟಂತೆ ಹೊರಡಿಸಿರುವ ತೀರ್ಪು, ಸದರಿಯವರಿಗೆ ಸಂಬಂಧಪಟ್ಟ ವೈಯಕ್ತಿಕ ದಾಖಲೆ ಮತ್ತು ಸಾಕ್ಷ್ಯಾಧಾರ ಅಡಿಯಲ್ಲಿ ಹೊರಡಿಸಿರುವ ತೀರ್ಪು ಪ್ರಕರಣವಾಗಿದ್ದು, ಈ ತೀರ್ಪು ಭಾರತ ಸಂವಿಧಾನದ ಆರ್ಟಿಕಲ್ 141 ರ ಅಡಿಯಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಅನೇಕ ತೀರ್ಪುಗಳಲ್ಲಿ ಹೊರಡಿಸಲಾಗಿರುವ ಸ್ಪಷ್ಟೀಕರಣಗಳ ರೀತ್ಯಾ ಈ ತೀರ್ಪು ಇತರರಿಗೆ ನೇರವಾಗಿ ಅನ್ವಯಿಸುವುದಿಲ್ಲ ಹಾಗು ಬಂಧನಕಾರಕವಾಗುವುದಿಲ್ಲ.


*ರಾಜ್ಯ ಸರ್ಕಾರದ ಆದೇಶಗಳು*

ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಮ್ಮ ಸಮಾಜದ ಪ್ರಕರಣದಲ್ಲಿ ಹೊರಡಿಸಿದ ತೀರ್ಪಿಗೆ ಅನುಗುಣವಾಗಿ ರಾಜ್ಯ ಸರ್ಕಾರವು ದಿನಾಂಕ: 08-09-1995 ರಂದು ಮತ್ತು 12-09-1995 ರಂದು ಆದೇಶಗಳನ್ನು ಹೊರಡಿಸಿ ರಾಜ್ಯ ಮಟ್ಟದ ಜಾತಿ ಪರಿಶೀಲನಾ ಸಮಿತಿ ರಿಚಿಸಿ, ದಿನಾಂಕ: 05-10-1995 ರಂದು ಮತ್ತೊಂದು ಸುತ್ತೋಲೆಯನ್ನು ಹೊರಡಿಸಿ, ಮೇಲೆ ತಿಳಿಸಿದ 1978 ರ ಸುತ್ತೋಲೆಗಳಲ್ಲಿ ಪರಿಶಿಷ್ಟ ಜಾತಿಯ ಬೇಡಜಂಗಮರು, ಬುಡ್ಗಜಂಗಮರುಗಳು ವೀರಶೈವ (ಲಿಂಗಾಯತ) ಕೋಮಿಗೆ ಸೇರಿದವರಲ್ಲವೆಂಬ ಸೂಚನೆಯನ್ನು ಹಾಗೂ 1995 ರ ಸುತ್ತೋಲೆಯಲ್ಲಿ ಆಂಥ್ರೋಪಲಾಜಿಕಲ್ ಸರ್ವೆ ಆಫ್ ಇಂಡಿಯಾರವರ ಜೀವನ ರೀತಿಗಳನ್ನು ವಿವರಿಸಿ ಇವರ ಮಾತೃಭಾಷೆ ತೆಲುಗು, ಇವರು ಮಾಂಸಹಾರಿಗಳು, ಮಾದಕ ಪಾನೀಯಗಳನ್ನು ಸೇವಿಸುವವರು, ಚಾಪೆನೇಯುವವರು, ವೈಷ್ಣವ ಉಪಾಸಕರೆಂದು ತಿಳಿಸಿರುವ ಸೂಚನೆಗಳನ್ನು ಯಾವುದೇ ಪ್ರಾಧಿಕಾರ ಅಥವಾ ಅಧಿಕಾರಿಗಳು ಅನುಸರಿಸಕೂಡದೆಂದು ಸ್ಪಷ್ಟ ಆದೇಶ ನೀಡಿದೆ. ರಾಜ್ಯದಲ್ಲಿನ ಬೇಡಜಂಗಮರುಗಳ ಸಂಘಟನೆಯನ್ನು ಬಲಪಡಿಸುವ ದೃಷ್ಟಿಕೋನದಲ್ಲಿ ದಿನಾಂಕ: 18-04-2010 ರಂದು ಶ್ರೀ ಸಂಗಮನಾಥ, ಕೂಡಲಸಂಗಮ ಕ್ಷೇತ್ರದಲ್ಲಿ ನ-ಬೂತೋ, ನ-ಭವಿಷ್ಯತೆ ಎಂಬಂತೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ನಮ್ಮ ಸಮಾಜ ಬಾಂಧವರುಗಳು ಸೇರಿ ರಾಜ್ಯ ಮಟ್ಟದ ಬೇಡಜಂಗಮ ಬೃಹತ್ ಸಂಘಟನಾ ಸಮಾವೇಶವನ್ನು ಹಾಗೂ ತದನಂತರ ಸುಮಾರು 40 ಪೂಜ್ಯಶ್ರೀಗಳು ಮತ್ತು ಸಮಾಜದ ಪದಾಧಿಕಾರಿಗಳ ಜೊತೆಗೆ ನ್ಯೂ-ಡೆಲ್ಲಿಗೆ ಹೋಗಿ ಶ್ರೀ ಬೂಟಾಸಿಂಗ್, ರಾಷ್ಟ್ರೀಯ ಚೇರ್ಮನ್, ಪರಿಶಿಷ್ಟ ಜಾತಿಗಳ ಆಯೋಗ ಇವರನ್ನು ದಿನಾಂಕ: 10-05-2010 ರಂದು ಭೇಟಿ ಮಾಡಿ ಸಮಾಜದಿಂದ ಮನವಿಯನ್ನು ಸಲ್ಲಿಸಿರುವುದಲ್ಲದೆ, ಸಚಿವರಿಗೂ, ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೂ ಮತ್ತು ಮಾನ್ಯ ಆಯುಕ್ತರಿಗೂ, ಪರಿಶಿಷ್ಟ ಜಾತಿ ಪ್ರಮಾನ ಪತ್ರವನ್ನು ಕೊಡುವ ಬಗ್ಗೆ ಹಾಗೂ ಸಂವಿಧಾನಬದ್ಧ ಹಕ್ಕನ್ನು ರಕ್ಷಿಸುವ ಬಗ್ಗೆ ಕೋರಲಾಗಿರುತ್ತದೆ.


*ಪರ್ಯಾಯ ಪದಬಳಕೆ*

ಯಾವುದೇ ಒಂದು ಸಾಹಿತ್ಯ, ಐತಿಹಾಸಿಕ ದಾಖಲೆಗಳಿಲ್ಲದೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ನಾನಾ ಭಾಷೆಗಳ ಪ್ರಭಾವದಲ್ಲಿ ಅನೇಕ ಸ್ಥಳಗಳ, ಪದಾರ್ಥಗಳ, ಜಾತಿಗಳ ಹೆಸರುಗಳು ಕಾಲಕಾಲಕ್ಕೆ ಬದಲಾವಣೆ ಹೊಂದಿ ಪರ್ಯಾಯ ಪದಗಳು ಹುಟ್ಟಿರುವಂತೆ, ಬೆಂದಕಾಳೂರನ್ನು ಬೆಂಗಳೂರೆಂದು, ಗುಲ್ಬರ್ಗಾವನ್ನು ಕಲಬುರಗಿ ಎಂದು, ಹಳೆ ಮೈಸೂರು ಭಾಗದಲ್ಲಿ ಕರೆಯಲ್ಪಡುವ ಸಿಹಿತಿಂಡಿ ಕೇಶರಿಬಾರ್ನ್ನು ಉತ್ತರ ಕರ್ನಾಟಕದಲ್ಲಿ ಶಿರಾ ಎಂದು, ಹೊಲೆ, ಮಾದಿಗ ಜನಾಂಗದವರನ್ನು ಆದಿಕರ್ನಾಟಕ, ಆದಿಜಾಂಭವ ಹಾಗೂ ಇತ್ತಿಚಿಗೆ ನಿಯೋಬುದ್ದಿಷ್ಟ್ ಎಂದು ಕಾಲಕಾಲಕ್ಕೆ ಪರ್ಯಾಯ ಪದಗಳಿಂದ ಕರೆಯಲಾಗುತ್ತಿದ್ದಂತೆ, ಪರಿಶಿಷ್ಟ ಜಾತಿ ಆದೇಶ 1950, 1956 ಮತ್ತು 1976 ರ ಪಟ್ಟಿಯಲ್ಲಿನ ಭೋವಿ ಪರಿಶಿಷ್ಟ ಜಾತಿಯನ್ನು ವಡ್ಡ, ವಡ್ಡರ್, ಭೋಯಿ ಹಾಗೂ ಬೋವಿ ಎಂಬ ಪರ್ಯಾಯ ಪದಗಳಿಂದ ಸಂಬೋಧಿಸಿ ಕರೆಯುವ ದಿಸೆಯಲ್ಲಿ ಕೈಗೊಳ್ಳಲಾದ ಸಂವಿಧಾನಬದ್ಧ ಪ್ರಕ್ರೀಯೆ ನಿಟ್ಟಿನಲ್ಲಿಯೇ ಬೇಡ(ಬುಡ್ಗ)ಜಂಗಮ ಜಾತಿಗೆ ಸಮಾನಾಂತರ ಪರ್ಯಾಯ ಪದಗಳಾದ ಜಂಗಮ, ಸ್ವಾಮಿ, ಅಯ್ಯಗಳು ಇವೇ ಮುಂತಾದ ಗ್ರಾಮೀಣ ಭಾಷೆಯಿಂದ ಕರೆಯಲ್ಪಡುವ ಪದಗಳನ್ನು ಕುರಿತು ಸಂವಿಧಾನಿಕ ಪ್ರಕ್ರೀಯೆ ಕೈಗೊಳ್ಳುವುದು ಪ್ರಸ್ತುತ ಕಾನೂನು ಬದ್ಧ ಕ್ರಮವಾಗಿದ್ದು, ಈ ಬಗ್ಗೆ ಮಾನ್ಯ ಸವೋಚ್ಛ ನ್ಯಾಯಾಲಯದ ಪಂಚ-ಸದಸ್ಯ ಪೀಠವು ಮಹಾರಾಷ್ಟ್ರ-ವಿ-ಮಿಲಿಂದ್ ರವರುಗಳಿಗೆ ಸಂಬಂಧಿಸಿದ ಪ್ರಕಟಿತ ತೀರ್ಪು ಎಐಆರ್ 2001 ಎಸ್.ಸಿ 393 ರಲ್ಲಿ ನಿಗದಿಪಡಿಸಲಾಗಿರುವ ಮಾರ್ಗಸೂಚಿ ಪ್ರಕಾರವೇ ನಮ್ಮ ಸಮಾಜ ಬಾಂಧವರುಗಳು ಕಾನೂನಾತ್ಮಕ ಕ್ರಮ ಜರುಗಿಸುವುದು ರಾಜ್ಯದೆಲ್ಲೆಡೆಯ ’ಬೇಡಜಂಗಮ’ರುಗಳ ಒಟ್ಟಾರೆ ಹಿತಾಸಕ್ತಿಗೆ ಪೂರಕವಾಗಿರುತ್ತದೆ.


ಪ್ರಸ್ತುತ ’ಬೇಡಜಂಗಮ’ ಪರಿಶಿಷ್ಟ ಜಾತಿ ಕುರಿತು ದಾಖಲೆ ಆಧಾರಗಳ ಬಗ್ಗೆ ಅರಿವಿಲ್ಲದೆ ಪ್ರಸ್ತುತ ಅನಗತ್ಯವಾಗಿ ಜರುಗುತ್ತಿರುವ ವಾದ ವಿವಾದಗಳು ಕೇವಲ ವೈಯಕ್ತಿಕ ಮತ್ತು ಸ್ವ-ಹಿತಾಸಕ್ತಿಯುಳ್ಳ ಕೆಲವರಿಂದ ಮಾತ್ರ ಎನ್ನುವುದು ದುರಾದೃಷ್ಟಕರ ಸಂಗತಿಯಾಗಿದೆ. ಕೆಲವರು ಸ್ವಾರ್ಥಸಾಧನೆಗೋಸ್ಕರ ಪ್ರತಿಭಟನೆ, ವಾದ-ವಿವಾದಗಳನ್ನು ಸೃಷ್ಟಿ ಮಾಡುತ್ತಾ ‘ಬೇಡಜಂಗಮ’ರುಗಳನ್ನು ಜಾತಿರಹಿತ ಹಾಗೂ ಕುಲಕಸಬು, ವೃತ್ತಿರಹಿತ ಪದವಾದ ’ವೀರಶೈವ ಜಂಗಮ’ರು ಅಥವಾ ’ಲಿಂಗಾಯತ ಜಂಗಮ’ರು ಎಂಬುದಾಗಿ ಕರೆದು, ಸಂವಿಧಾನಬದ್ಧ ಹಕ್ಕುಗಳಿಂದ ವಂಚಿಸುವುದು ಯಾವ ನ್ಯಾಯ? ಇನ್ನಾದರೂ ಸ್ವ-ಧಾರ್ಮೀಯರು ವಿಚಾರವಂತರು, ವಾಸ್ತವಿಕತೆಯನ್ನು ಅರಿತು ಮನಬಂದಂತೆ ಆರೋಪ ಮಾಡುವುದನ್ನು ಹಾಗೂ ಹೇಳಿಕೆ ನೀಡುವುದನ್ನು ಮೇಲ್ಕಂಡ ಮಾಹಿತಿ, ದಾಖಲೆ ಮತ್ತು ಸಾಕ್ಷ್ಯಾಧಾರದ ಅಡಿಯಲ್ಲಿ ನಿಲ್ಲಿಸುವರೆಂದು ನಾವುಗಳು ಅಪೇಕ್ಷಿಸುತ್ತೇವೆ.

*ಕೃಪೆ*
ವಿಷಯ ಸಂಗ್ರಹ ಮತ್ತು ಸಂಕಲನ:
*ಮಾನ್ಯಶ್ರೀ ಜಿ.ಎಂ.ವಿಶ್ವನಾಥಸ್ವಾಮಿ*
ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿಗಳು ಹಾಗೂ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿಗಳು, ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟ, ಬೆಂಗಳೂರು

July 11, 2022

ಜನನಾತ್ ಪೂರ್ವ ಗರ್ಭದಾರಣ ಕಾಲ

ನಿಖರ ಭವಿಷ್ಯವನ್ನು ಈ ಲೆಕ್ಕಾಚಾರದಿಂದ ಮಾತ್ರ ತಿಳಿಯಬಹುದು. 
ಮಾಂದಿ ಸ್ಥಿತಿ-ಶನಿ ಸ್ಥಿತಿ= ಉಳಿದ ಅಂಶ.
ಲಗ್ನ ಸ್ಪುಟ-ನವಮ ಸ್ಪಟ= ಉಳಿದ ಅಂಶ.
ಈ ಎರಡು ಅಂಶಗಳಿಗೆ ಚಂದ್ರ ಭುಕ್ತಾಂಶ ಸೇರಿಸಿದಾಗ ಬರುವ ಮಾಸ- ದಿನ- ಸಮಯವೇ ಜನನಾತ್ ಪೂರ್ವ ಗರ್ಭ ಧಾರಣಾ ಕಾಲ.
ಈ ಲೆಕ್ಕಾಚಾರ ಮಾಡುವವನೇ ನಿಜವಾದ ಜ್ಯೋತಿಷಿ. ಒಂದು ಕ್ಷಣದಲ್ಲಿ ಟಿವಿ ಪರದೆಯಲ್ಲಿ ಕಾಣಿಸಿಕೊಂಡು ಹೇಳುವಂತದ್ದಲ್ಲ ಇದು. ಒಂದು ಸೆಕುಂಡು ಆಚೆ ಈಚೆಯಾದರೂ ಭವಿಷ್ಯ ವ್ಯತ್ಯಾಸವಾದೀತು.
ಜನನವನ್ನು ನಿರ್ಧರಿಸುವುದು ಮಾಂದಿ. ಮರಣ ನಿರ್ಧರಿಸುವುದು ಶನಿ. ಇದಕ್ಕೇ ಶನಿಯನ್ನೇ ಯಮಾಗ್ರಜ ಎಂದಿದ್ದಾರೆ
ಯಾರೋ ಟಿವಿ ನೋಡಿಕೊಂಡು ಮಹರ್ಷಿ,ಬ್ರಹ್ಮಾಂಡ,ಮಾನವಗುರು,ದೇವ ಮಾನವ,ದೇವರ್ಷಿಗಳೇ ಜ್ಯೋತಿಷ್ಯರು ಎಂದುಕೊಂಡರೆ ಯಾರೇನು ಮಾಡಲಿ?
ಅದು ಅವರವರ ಭ್ರಮೆಯಷ್ಟೆ.
ಪ್ರಕಾಶ್ ಅಮ್ಮಣ್ಣಾಯ