ವೇದ ವೇದಾಂತೋಕ್ತ ವೀರಭದ್ರ
ರುದ್ರಪುತ್ರನಾದ ವೀರಭದ್ರನು ವೇದವಾಹ್ಮಯದಲ್ಲಿ ಕಾಣಿಸಿಕೊಂಡವರಲ್ಲಿ ಒಬ್ಬನು. ತನ್ನ ತಂದೆಯ ಸಾಂಸ್ಕೃತಿಕ ಕ್ರಾಂತಿಯನ್ನು ಮುಂದುವರಿಸಿಕೊಂಡು ವಿಜಯ ದತ್ತ ಸಾಗಿದಾತ, ವಿಶ್ವಮಾನವ ನಿಲವಿಗೆ ನಿಲುಕದಾತ. ಮಾನವೀಯ ಮೌಲ್ಯವನ್ನು ಮನವರಿಕೆ ಮಾಡಿಕೊಂಡು ಅದನ್ನು ಪ್ರಯೋಗದಲ್ಲಿ ತಂದಾತ, ವಿಶ್ವವಿಶಾಲ ಹೃದಯಿ ಸಕಲ ಜೀವದಯಾಮಯಿ, ಶಿವ ಪಾರಮ್ಯಕ್ಕಾಗಿ ಹೋರಾಡಿದಾತ. ಆತನ ಜೀವನ ಶಿವತ್ವಕ್ಕಾಗಿ ಶಿವನಿಗಾಗಿ ಮೀಸಲಾಗಿತ್ತು.
“ಸ ವೀರೋ ದಕ್ಷ ಸಾದನೋ ವಿಯಸ್ತಂಭ ರೋದಸೀ"
-ಋಗ್ವೇದ
ದಕ್ಷನನ್ನು ಶಿಕ್ಷಿಸಿದ ಆ ವೀರಭದ್ರನು ಭೂಮ್ಯಾಕಾಶಗಳನ್ನು ಸ್ತಂಭಿಸಿದನು.
“ ನಮಃ ಶೂರಾಯ ಚಾವಭಿಂದತೇ ಚ ”
-ಯಜುರ್ವೇದ
'ದಕ್ಷಯಜ್ಞದಲ್ಲಿ ಭಾಗವಹಿಸಿದವರ ಶಿರಚ್ಛೇದನ ಮಾಡಿದ ಶೂರನಾದ ವೀರೇಶನಿಗೆ ನಮಸ್ಕಾರ!' "ಅಪಾವೃಣೋ: ಶರಭಾಯ ಋಷಿಬಂಧವೇ" ಋಷಿಬಂಧುವಾದ ಶರಭಾವತಾರವನ್ನು ಓಲೈಸುವೆ ಎಂದು ಅದೇ ಋಗ್ವೇದ ತನ್ನ ಒಲವನ್ನು ತೋರಿದೆ. ವೀರಾವತಾರ ಶರಭಾವತಾರಗಳ ನಿರೂಪಣದೊಡನೆ 'ವಿಯಸ್ತಂಭ ರೋದಸೀ' ಎಂಬುದರಿಂದ ಆತನ ವಿಶ್ವ ವಿಕ್ರಮತ್ವವನ್ನೂ ವ್ಯಾಪ್ತಿತ್ವವನ್ನೂ ಉಗ್ಗಡಿಸಲಾಗಿದೆ.
ಇವಲ್ಲದೆ ವೀರೇಶನಿಗೆ ಮೀಸಲಾದ ' ಶರಭೋಪನಿಷತ್' ಒಂದಿದೆ. ಇದು ನೂರೆಂಟು ಉಪನಿಷತ್ತುಗಳಲ್ಲಿ ಐವತ್ತೆರಡನೆಯದು. ಇದರಲ್ಲಿ ವೀರೇಶನ ವೈಶಿಷ್ಟ್ಯ ವರ್ಣನೆ ಇಂತಿದೆ:
"ಅಥ ಹೈನಂ ಪೈಪ್ಪಲಾದೋ ಬ್ರಹ್ಮಾಣಮುವಾಚ ಭೋ ಭಗವನ್
ಬ್ರಹ್ಮವಿಷ್ಣುರುದ್ರಾಣಾಂ ಮಧ್ಯೆ ಕೋ ವಾ ಅಧಿಕತರೋ
ಧೈಯಃ ಸ್ಯಾತ್ತತ್ತ್ವಮೇವ ನೋ ಬ್ರೂಹೀತಿ |
ತನ್ನೈ ಸ ಹೋವಾಚ ಪಿತಾಮಹಶ್ಚ ಹೇ ಪೈಪ್ಪಲಾದ ಶೃಣು ವಾಕ್ಯಮೇತತ್ |"
ಪೈಪ್ಪಲಾದಮುನಿ ತಾನೊಮ್ಮೆ ಬ್ರಹ್ಮನನ್ನು ಬ್ರಹ್ಮ ವಿಷ್ಣು ರುದ್ರರ ಮಧ್ಯದಲ್ಲಿ ಮುಮ್ಮಿಗಿಲಾಗಿ ಧ್ಯೇಯನು ಯಾವನೆಂದು ಕೇಳುವನು. ಅದಕ್ಕೆ ಆತನಿಗೆ ಪಿತಾಮಹನು ಹೀಗೆ ಹೇಳುವನು :
ಸ ಏಕಃ ಶ್ರೇಷ್ಠಶ್ಚ ಸರ್ವಶಾಸ್ತಾ ಸ ಏವ ವರಿಷ್ಠಶ್ಚ |
ಯೋ ಘೋರಂ ವೇಷಮಾಸ್ಥಾಯ ಶರಭಾಖ್ಯಂ ಮಹೇಶ್ವರಃ |
ನೃಸಿಂಹಂ ಲೋಕಹಂತಾರಂ ಸಂಜಘಾನ ಮಹಾಬಲಃ || ೪ ||
ಹರಿಂ ಹರಂತಂ ಪಾದಾಭ್ಯಾಮನುಯಾಂತಿ ಸುರೇಶ್ವರಾಃ | ಮಾವಧೀಃ ಪುರುಷಂ ವಿಷ್ಣುಂ ವಿಕ್ರಮಸ್ವ ಮಹಾನಸಿ || ೫ ||
ಕೃಪಯಾ ಭಗವಾನ್ವಿಷ್ಣುಂ ವಿದದಾರ ನಖ್ಯೆಃ ಖರೈಃ |
ಚರ್ಮಾಂಬರೋ ಮಹಾವೀರೋ ವೀರಭದ್ರೋ ಬಭೂವ ಹ || ೬ ||
ಸ ಏಕೋ ರುದ್ರೋ ಧೈಯಃ ಸರ್ವೇಷಾಂ ಸರ್ವಸಿದ್ಧಯೇ |
ಯೋ ಬ್ರಹ್ಮಣಃ ಪಂಚವಕ್ರಹಂತಾ ತನ್ನೈ ರುದ್ರಾಯ ನಮೋ ಅಸ್ತು || ೭ ||
ಭಯಂಕರವಾದ ವೇಷವನ್ನು ತೊಟ್ಟು ನಿಂತ ಶರಭನೆಂಬ ಮಹಾಬಲವುಳ್ಳ ಮಹೇಶ್ವರನು ಲೋಕದ ಜನರನ್ನು ಕೊಂದು ತಿನ್ನುವ ನರಸಿಂಹನನ್ನು ಕೊಲ್ಲುವನು. ನರಸಿಂಹಾವತಾರ ನಾಲ್ಕನೆಯದು. ಮತ್ಸ, ಕೂರ್ಮ, ವರಾಹಾವತಾರಗಳು ಅದರ ಹಿಂದಿನವು. ವರಾಹ ಜನ್ಮದಿಂದ ನರಸಿಂಹ ಜನ್ಮಕ್ಕೆ ಬರುವಲ್ಲಿ ಪ್ರಾಕೃತಿಕ ಸರ್ಜನ ಸಹಜಕತೆಯಿದೆಯೇನೋ ? ಈ ದೃಷ್ಟಿಯಿಂದಲೂ ಕಾಲಮಾನ ಪುರಾತನವಾಗಿಯೇ ನಿಲ್ಲುತ್ತದೆ. ನರಸಿಂಹ ಲೋಕಹಂತಾರ ಎಂಬುದನ್ನು ನೆನೆಯಬೇಕು. ರಕ್ತಮಾಂಸಗಳನ್ನು ತಿನ್ನುವ ಚಟವುಳ್ಳ ನೃಸಿಂಹನನ್ನು ಶರಭನು ಕೊಲ್ಲುವನು. ಮತ್ತು ಆತನ ತೊಗಲನ್ನೆ ಉಡುಗೆಯನ್ನಾಗಿಸಿಕೊಳ್ಳುವನು. ಆತನೇ ಮಹಾವೀರನಾದ ವೀರಭದ್ರನು. ಆತನೊಬ್ಬನೆ ಶ್ರೇಷ್ಠನು, ವರಿಷ್ಠನು; ಸರ್ವಶಾಸಕನು. ಆತನನ್ನು 'ಶರಭರುದ್ರ'ನೆಂದು ಹೇಳುವರು, ಆತನೇ ಸರ್ವಸಿದ್ದಿಗಾಗಿ ಸರ್ವರಿಗೆ ಧ್ಯೇಯನಾಗಿದ್ದಾನೆ. ಅಹಂಕಾರಿಯಾದ ಬ್ರಹ್ಮನ ಐಯ್ದನೆಯ ಮೊಗ(ತಲೆ)ವನ್ನು ಕತ್ತರಿಸಿದಾತನು ಆತನೆ! ಆತನಿಗೆ ನಮಸ್ಕಾರ !
ಕೃಪೆ: ಚಿಗುರಿಟ್ಟ ಚಿಂತನ
ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ