ಮೊತ್ತಮೊದಲ ಕೆರೆಯ ನಿರ್ಮಾಣ ಹೇಗೆ ಆಯ್ತು?
============================
ಸಂಸ್ಕೃತ ಜ್ಞಾನಸಾಗರದಲ್ಲಿ ಅದಕ್ಕೂ ಒಂದು ಸುಂದರ ಕಥೆ ಇದೆ!
ಲಾವಕಶ್ಚ ವರಾಹಶ್ಚ ಮಹಿಷಃ ಕುಂಜರಸ್ತಥಾ...
ಕರ್ತಾ ಕಾರಯಿತಾ ಚೈವ ಷಡೇತೇ ಸಮಭಾಗಿನಃ ||
ಒಂದು ಗುಬ್ಬಿಯು (ಲಾವಕ = ಗುಬ್ಬಿ) ತನ್ನ ಕೊಕ್ಕಿನಿಂದ ಮಣ್ಣನ್ನು ಅಗೆದಾಗ ಅಲ್ಲಿ ಚಿಕ್ಕದೊಂದು ಗುಳಿ ಉಂಟಾಯ್ತು, ಅಲ್ಲಿ ಮಳೆನೀರು ತುಂಬಿತು. ಗುಬ್ಬಿ ಅದರಲ್ಲಿ ಸ್ನಾನ ಮಾಡಿತು. ಆಮೇಲೆ ಒಂದು ಹಂದಿ (ವರಾಹ = ಹಂದಿ) ಅಲ್ಲಿಗೆ ಬಂದು ಆ ಗುಳಿಯನ್ನು ತನ್ನ ಮೂತಿಯಿಂದ ಕೊರೆದು ಮತ್ತಷ್ಟು ದೊಡ್ಡದಾಗಿಸಿತು, ಕೆಸರಿನಲ್ಲಿ ಹೊರಳಾಡಿತು, ಖುಷಿಪಟ್ಟಿತು. ಅದಾದಮೇಲೆ ಅಲ್ಲಿಗೆ ಒಂದು ಕಾಡುಕೋಣ (ಮಹಿಷ = ಕೋಣ) ಬಂತು. ನೀರು ತುಂಬಿದ ಹೊಂಡದಲ್ಲಿ ಸ್ವಚ್ಛಂದವಾಗಿ ಮಲಗಿ ಮುದಗೊಂಡಿತು. ಕೊನೆಗೆ ಒಂದು ಆನೆ (ಕುಂಜರ = ಆನೆ) ಆ ಹೊಂಡಕ್ಕಿಳಿದು ಅದನ್ನು ಮತ್ತೂ ದೊಡ್ಡದಾಗಿಸಿತು. ತುಂಬಿದ ನೀರನ್ನು ತನ್ನ ಸೊಂಡಿಲಿನಿಂದ ಮೈಮೇಲೆಲ್ಲ ಸಿಂಪಡಿಸಿಕೊಂಡು ಸಂತಸಪಟ್ಟಿತು. ಇವೆಲ್ಲ ಪ್ರಾಣಿಗಳು ಆರೀತಿ ನೀರಿನಾಟ ಆಡುತ್ತಿರುವುದನ್ನು ಆ ರಾಜ್ಯದ ರಾಜ ಮತ್ತು ಮಂತ್ರಿ ಅಲ್ಲೆಲ್ಲೋ ವಾಯುವಿಹಾರಕ್ಕೆಂದು ಹೋದವರು ಗಮನಿಸಿದರು. ರಾಜನಿಗೆ ಅನಿಸಿತು: "ಹೌದಲ್ವಾ! ಈ ನೀರಿನ ಹೊಂಡಕ್ಕೆ ಮೆಟ್ಟಲುಗಳನ್ನು ಮತ್ತು ಸುತ್ತಲೂ ಕಟ್ಟೆಯನ್ನು ಕಟ್ಟಿಸಿದರೆ ತುಂಬ ಚೆನ್ನಾಗಿರುತ್ತದೆ. ಪ್ರಜೆಗಳಿಗೂ ಅನುಕೂಲವಾಗುತ್ತದೆ." ಒಡನೆಯೇ ರಾಜನು ಮಂತ್ರಿಗೆ ಆದೇಶವಿತ್ತನು. ಕಟ್ಟೆ ಕಟ್ಟುವ ಕಾಮಗಾರಿಯು ಮಂತ್ರಿಯ ಉಸ್ತುವಾರಿಯಲ್ಲಿ ನಡೆಯಿತು. ಸುಂದರವಾದ ಕೆರೆಯ ನಿರ್ಮಾಣವಾಯ್ತು.
ಆದರೆ, "ನಾನೇ ಈ ಕೆರೆಯನ್ನು ನಿರ್ಮಿಸಿದ್ದು" ಎಂದು ರಾಜ ಹೇಳಿಕೊಳ್ಳಬಹುದೇ? ಖಂಡಿತ ಇಲ್ಲ. ಅವನೇನಿದ್ದರೂ ಮಂತ್ರಿಯ ಮೂಲಕ, ಕೆಲಸಗಾರರ ಮೂಲಕ ಆ ಕೆರೆಯನ್ನು ಮಾಡಿಸಿದವನು (ಕಾರಯಿತಾ) ಅಷ್ಟೇ. ಹಾಗಾದರೆ ಮಂತ್ರಿ ಮತ್ತು ಕೆಲಸಗಾರರು "ನಾವೇ ಈ ಕೆರೆಯ ನಿರ್ಮಾತೃರು" ಎನ್ನಬಹುದೇ? ಇಲ್ಲ. ಅವರು ಕಟ್ಟೆ ಮತ್ತು ಮೆಟ್ಟಲುಗಳನ್ನು ಕಟ್ಟಿದವರು, ಆಮೂಲಕ ಕರ್ತಾ ಎನಿಸಿಕೊಂಡವರು ಹೌದಾದರೂ ಅಲ್ಲಿ ನೀರಿನ ಹೊಂಡ ಮೊದಲೇ ಇತ್ತು ಅಲ್ಲವೇ? ಹಾಗಾಗಿ ಕೆರೆ ನಿರ್ಮಾಣದ ಶ್ರೇಯಸ್ಸಿನಲ್ಲಿ ರಾಜನಿಗೆ, ಮಂತ್ರಿ/ಕೆಲಸಗಾರರಿಗೆ, ಆನೆಗೆ, ಕೋಣಕ್ಕೆ, ಹಂದಿಗೆ, ಮತ್ತು ಗುಬ್ಬಿಗೆ - ಹೀಗೆ ಆರಕ್ಕೂ ಸಮಪಾಲು ಇದೆ.
ಪ್ರಪಂಚದಲ್ಲಿ ಎಲ್ಲ ವಿಚಾರಗಳೂ ಹೀಗೆಯೇ. "ನಾನೇ ಮಾಡಿದ್ದು, ನನ್ನಿಂದಲೇ ಎಲ್ಲ ಆದದ್ದು" ಎಂಬ ಅಹಂಕಾರ ಸಲ್ಲದು. ಗುಬ್ಬಿಯಂತಹ ಚಿಕ್ಕ ಜೀವಿಯಿಂದ ಹಿಡಿದು, ಆನೆಯಂತಹ ಬೃಹದ್ಗಾತ್ರದ ಜೀವಿಗಳ ಕೊಡುಗೆ, ಸಹಕಾರ ಎಲ್ಲದರಲ್ಲೂ ಎಲ್ಲ ಕಡೆಯೂ ಇರುತ್ತದೆ. ಒಂದು ಸಾಧನೆಯಲ್ಲಿ, ಅದರ ಯಶಸ್ಸಿನಲ್ಲಿ, ಮತ್ತು ಅದರ ಪ್ರಯೋಜನದಲ್ಲಿ ಅವರೆಲ್ಲರೂ ಸಮಭಾಗಿಗಳಾಗುತ್ತಾರೆ.
"ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್"