June 25, 2024

ದೇವಿ ಅಪರಾಧ ಕ್ಷಮಾಪಣ ಸ್ತೋತ್ರ (ಶ್ರೀಮದ್‌ ಶಂಕರಾಚಾರ್ಯರು) ದ ರಾ ಬೇಂದ್ರೆ

ಮಂತ್ರವರಿಯೆ, ನಾ ಯಂತ್ರವರಿಯೆ ನಾನರಿಯೆ ನಿನ್ನ ಸ್ತುತಿಯಾ।
ಆಹ್ವಾನವರಿಯೆ, ನಾ ಧ್ಯಾನವರಿಯೆ, ನಾನರಿಯೆ ಶ್ರುತಿಯ ಕಥೆಯಾ ||
ಮುದ್ರೆಗಿದ್ರೆಗಳ ಅರಿಯೆ ನಾನು, ಕೂಸಾಗಿ ತೆರೆವೆ ಬಾಯಿ |
ನಿನ್ನ ಅನುಸರಣ ಕ್ಲೇಶ ಹರಣ ಇದನೊಂದೆ ಬಲ್ಲೆ ತಾಯಿ || 1

ಗೊತ್ತಿಲ್ಲ ವಿಧಿಯು, ಮೈಗಳ್ಳ ನಾನು, ಕೈಯ್ಯಲ್ಲಿ ಕಾಸು ಇಲ್ಲ |
ನಡೆಯಲಾರೆ ಒಳಗಾಗಿ, ಚರಣ ಕೈಬಿಟ್ಟು ಜಾರಿತಲ್ಲ ||
ಕ್ಷಮಿಸು ಜನನಿ ಶಿವೆ ಸಕಲರನ್ನು ನೀ ಕೃಪೆಯದೋರಿ ಕಾಯಿ |
ಹುಟ್ಟಬಹುದಲಾ ಕೆಟ್ಟಮಗುವು ; ಇರಲಾಸ ಕೆಟ್ಟ ತಾಯಿ ||2

ನಿನ್ನ ಪುತ್ರರೆಷ್ಟೆಷ್ಟೋ ಸರಲರೆನಿಸಿಹರು ಭೂಮಿಯಲ್ಲಿ |
ವಿರಲ-ತರಲ, ಸ್ಥಿರವಿರಲೆ ಆರೆ ನಾನವರ ಸೀಮೆಯಲ್ಲಿ ||
ಬಿಡಬೇಡ ಕೈಯ ಅದು ತಕ್ಕುದಲ್ಲ ಕೇಳವ್ವ ಶಿವನ ಜಾಯೆ।
ಕೆಟ್ಟ ಮಗುವು ಹೋ ಹುಟ್ಟಬಹುದು ಇರಬಹುದೆ ಕೆಟ್ಟ ತಾಯಿ ||3

ಜಗಜ್ಜನನಿ ನನ್ನಿಂದ ನಿನ್ನ ಪದಸೇವೆಯಾಗಲಿಲ್ಲ ।
ದೇವಿ ನಿನ್ನ ಸಲುವಾಗಿ ನನ್ನ ಹಣ ವೆಚ್ಚವಾಗಲಿಲ್ಲ ||
ಇಷ್ಟಾದರೂನು ಆ ಸ್ನೇಹಕಣೆಯೆ ಮಮತಾಸ್ವರೂಪ ಮಾಯೆ
ಕೆಟ್ಟ ಮಗುವು ಹುಟ್ಟಾನು ಕೆಟ್ಟವಳು ಆಹಳೆ ಇವಳೆ ತಾಯೆ? ॥4

ಎಷ್ಟಂತ ಪೂಜೆ, ಎಷ್ಟೆಂತ ಸೇವೆ ದೇವರನೆ ಬಿಟ್ಟು ಕೊಟ್ಟೆ |
ಎಂಬತ್ತರಾಚೆ ಇಳಿವಯಸು ಬಂತು ನಿನ್ನಲ್ಲಿ ದೃಷ್ಟಿ ನೆಟ್ಟೆ ||
ಓ ತಾಯಿ ನಿನ್ನ ಕೃಪೆ ಸಾಕು ಉಳಿದವರು ಹಿಡಿಯಲೆನ್ನ ಬಿಡಲಿ |
ಆಧಾರವಿರದೆ ನಾನಾರ ನಂಬಿ ಈ ಬಗೆಯ ಮೊರೆಯನಿಡಲಿ ||5

ಓ ಅಪರ್ಣೆ ಆ ಕರ್ಣಗಳಲಿ ಬಿದ್ದಿರಲು ನಿನ್ನ ನಾಮ | 
ಬಾಯಿಬಡಕ ನಾಯಡಗತಿಂಬ ಜನವಾಣಿ ಅಮೃತಧಾಮ ||
ರಂಕ ಕೂಡ ಆತಂಕವಿರದೆ ತಾ ಕೋಟಿ ಕನಕ ಪಡೆವ |
ಜನನಿ ನಿನ್ನ ಜಪ ಮಹಿಮೆಯರಿಯದವ ಹೌದು ತೀರ ಬಡವ ll6

ಮೈಯ ತುಂಬ ಸುಡುಗಾಡ ಬೂದಿ, ವಿಷದೂಟ ಬಯಲನುಟ್ಟ |
ಜಡೆಯ ಕಟ್ಟಿ, ಹಾವನ್ನು ತೊಟ್ಟು ಪಶುಪತಿಯೆ ಆಗಿಬಿಟ್ಟ ||
ತಲೆಯಬುರಡೆ ಕೈಯಲ್ಲಿ, ಭೂತಗಣ ಸುತ್ತಿಕೊಂಡೆ ಇರುವ |
ನಿನ್ನ ಕೈಯ ಹಿಡಿದಿರುವ ಪುಣ್ಯದಲಿ ಈಶನಾಗಿ ಮೆರೆವ ||7

ಮೋಕ್ಷದಾಸೆ ನನಗಿಲ್ಲ ವೈಭವದ ಆಸೆಯಿಲ್ಲ ನೆವಕೆ |
ವಿಜ್ಞಾನದಾಸೆ ಸುಖದಾಸೆ ಕೂಡ ಇನಿಸಿಲ್ಲ ಇಂಥ ಸ್ತವಕೆ ||
ಅಂತೆ ನಿನ್ನ ಬೇಡುವೆನು ನಾನು ಆಮರಣ ತಪಿಸುತಿರಲಿ |
ಓ ಭವಾನಿ ರುದ್ರಾಣಿ ಶಿವಶಿವೇ ಎಂದು ಜಪಿಸುತಿರಲಿ ||8

ವಿವಿಧವಾದ ಉಪಚಾರದಿಂದ ಆರಾಧನೆಯನು ಮಾಡೆ |
ಒಣ ಒಣಕು ಮಾತು ಬರಿ ಚಿಂತೆಯಾತು ನಿನ್ನವನು ಎಂದು ನೋಡೆ ||
ಓ ಶ್ಯಾಮೆ ನೀನೆ ನನ್ನಲ್ಲಿ ಕರುಣೆಯಲಿ ಕರಗಿ ನೋಡುತಿರುವೆ |
ಅದು ನಿನಗೆ ಸಹಜ, ಇದು ನನಗೆ ಸಹಜ, ಕರುಣೆಯನೆ ಬೇಡುತಿರುವೆ ||9

ಆಪತ್ತಿನಲ್ಲಿ ನಾ ಮಗ್ನನಾಗಿ ಸ್ಮರಿಸುವೆನು ನಿನ್ನನೊಂದೇ |
ಹೇ ದುರ್ಗೆ ನೀನು ಕಾರುಣ್ಯಪೂರ್ಣೆ ನಿನ್ನೆಡೆಗೆ ಅಂತೆ ಬಂದೆ ||
ಇದು ಢೋಂಗು, ಡಂಭ ಬರಿದೆಂದು ತಿಳಿಯದಿರು ಭಾವ ಸಹಜ ತೆರನೇ |
ಹಸಿವೆ ನೀರಡಿಕೆಯಿಂದ ಬಳಲಿದವ ತಾಯಿಯೆಡೆಗೆ ಬರನೇ? ॥10

ಜಗದಂಬೆ, ಬೇರೆ ವೈಚಿತ್ರ್ಯ ಬೇಕೆ? ಕರುಣೆಯಲಿ ಮಾಡು ಎಲ್ಲ |
ಅಪರಾಧವೆಷ್ಟೆ ಮಾಡಿದರು ಮಗುವು, ತಾಯೇನೂ ಬಿಡುವದಿಲ್ಲ ||
ಪಾಪಘ್ನಿ ನಿನ್ನ ಸಮರಿಲ್ಲ, ಪಾಪದಲಿ ನನಗೆ ಇಲ್ಲ ಜೋಡು |
ಮಹದೇವಿ ಏನು ನಾ ಹೇಳಬೇಕೆ? ಸರಿ ತಿಳಿದ ಹಾಗೆ ಮಾಡು ||11||


ಶ್ರೀಮದ್ ಶಂಕರಾಚಾರ್ಯರ ಸ್ತೋತ್ರದ ಭಾವಾನುವಾದ. 🖋 ದ ರಾ ಬೇಂದ್ರೆ