ಜಗತ್ತಿನ ಯಾವ ದೇಶವೂ ತನ್ನ ಪರಂಪರೆಯನ್ನು. ಪ್ರಾಚೀನತೆಯನ್ನು ಮತ್ತು ಕಾಲಮಾನವನ್ನು ನೆಯುತ್ತಿರಲಿಕ್ಕಿಲ್ಲ. ಆದರೆ ನಮ್ಮ ಮಣ್ನಿನ ಗುಣವೇ ಹಾಗೆ ನಾವು ಕಾರ್ಯಾರಂಭಕ್ಕು ಮೊದಲು ಪರಂಪರೆಯನ್ನು ನೆನೆಯುವುದು ಕೃತಜ್ಞತೆಯ ಪ್ರತೀಕವೂ ಹೌದು, ನಮ್ಮ ಸಂಸ್ಕೃತಿಯೂ ಹೌದು. ಅದೇ ದೇಶ ಭಕ್ತಿ!
ನಮ್ಮ ಪ್ರಾಚೀನರಿಗೆ ಇದ್ದ ಆಸ್ಥೆ ಅಪಾರವಾದದ್ದು. ಮುಂದಿನ ಪೀಳಿಗೆಯವರಿಗೆ ತಮ್ಮ ಪರಂಪರೆಯನ್ನು ಬಿಟ್ಟುಕೊಡುವಲ್ಲಿ ಕೊಟ್ಟ ಕೊಡುಗೆ ಅಪಾರ. ಅಂತವುಗಳಲ್ಲಿ ವಿಶೇಷ ಶುಭ ಸಂದರ್ಭಗಳಲ್ಲಿನ ಮಹಾ ಸಂಕಲ್ಪ ಒಂದು. ಪ್ರಾಚೀನ ಕಾಲದಿಂದ ಇಂದಿನ ತನಕವೂ ಬಂದ ಈ ಮಹಾ ಸಂಕಲ್ಪವು ಶುಭಸಮಾರಂಭಗಳಾದ ವಿವಾಹಗಳೇ ಮೊದಲಾದ ಎಲ್ಲಾ ಶುಭಸಮಾರಂಭಗಳಲ್ಲಿ ಈ ನೆಲದ ಎಲ್ಲಾ ವರ್ಗದವರೂ ಮಹಾಸಂಕಲ್ಪವನ್ನು ಅನುಸರಿಸುತ್ತಾರೆ. ಇಂತಹ ಮಹಾ ಸಂಕಲ್ಪದ ಉದ್ದೇಶವೇ ನಮ್ಮ ಈ ಪುಣ್ಯ ಭೂಮಿಯ ಸ್ಮರಣೆ ಮತ್ತು ನಾವು ಅದಕ್ಕೆ ಕೊಡುವ ಗೌರವ. ಅಂದರೆ ನಮ್ಮ ರಾಷ್ಟ್ರ ಭಕ್ತಿಯ ನಿವೇದನೆ. ಈ ಮಹಾಸಂಕಲ್ಪದಿಂದ ನಾವು ವಾಸಿಸುವ ಭೂಮಿಯನ್ನು ದೈವತ್ವಕ್ಕೇರಿಸಿಕೊಂಡಿದ್ದೇವೆ. ನಮ್ಮ ಋಷಿಗಳು, ಪೂರ್ವಜರು ಈ ನೆಲದ ಭೌಗೋಳಿಕ ಪರಿಸರದ ಮತ್ತು ಕಾಲಮಾನದ ಸ್ಮರಣೆಯನ್ನು ಸ್ಮರಿಸುವುದರ ಜೊತೆಗೆ ನಮ್ಮ ಪ್ರಾಚೀನರ ಸ್ಮರಣೆಯನ್ನು ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಮಾಡುತ್ತಿರಲಿ ಎನ್ನುವ ಮಹತ್ವಾಕಾಂಕ್ಷೆ ಹೊಂದಿದ್ದರು. ಪ್ರಾಚೀನರ ಸಾಧನೆಯನ್ನು ಆಧುನಿಕ ಸಂಶೋದನೆ ಮತ್ತು ಸಾಧನೆಗಳ ಜೊತೆಗೆ ಮುಂದುವರೆಸಲಿ ಎನ್ನುವ ಆಶೆ ಅವರದ್ದಾಗಿತ್ತು. ಅಂದರೆ ನಮ್ಮ ಪಾರಂಪರಿಕ ಸಾಲಿನಲ್ಲಿಯೇ ಉಳಿದು ನಮ್ಮ ವಂಶವನ್ನು ಸ್ಮರಿಸಲಿ ಎನ್ನುವ ಉದ್ದೇಶವಾಗಿತ್ತು. ಆದರೆ ಇಂದು ನಾವು ನಮ್ಮ ಪೂರ್ವಜರಲ್ಲಿದ್ದ ದೇಶಭಕ್ತಿಯ ನೂರರಲ್ಲಿ ಒಂದು ಗುಣದಷ್ಟೂ ಸಹ ಹೊಂದಿಲ್ಲದಿರುವುದು ವಿಷಾದನೀಯ. ನಾವೇನಾದರೂ ಅವರ ಸಾಲಿನಲ್ಲಿಯೇ ಮುಂದುವರಿದಿದ್ದರೆ ನಮ್ಮ ಪ್ರಾಚೀನರು ನಮಗೆ ಕೊಟ್ಟ ಕಾಲಮಾನ ಮತ್ತು ಸಂಸ್ಕೃತಿಯ ಪ್ರಾಚೀನತೆ ಸುಲಭವಾಗಿ ಸಿಗುತ್ತಿತ್ತು. ಆದರೆ ನಾವು ವಿದೇಶೀ ವಿದ್ವಾಂಸರು ನೀಡಿದ ಕಾಲ್ಪನಿಕ ಲೆಕ್ಕಾಚಾರದ ಹೊಂದಾಣಿಕೆಯನ್ನೇ ಸತ್ಯವೆಂದು ಭ್ರಮಿಸಿ ಅದನ್ನೇ ನಮ್ಮ ಹಿಂದಿನ ಕಾಲಮಾನ ಮತ್ತು ಮುಂದಿನ ಕಾಲಮಾನವೆಂದು ತಪ್ಪಾಗಿ ಗಣಿಸುತ್ತಿದ್ದೇವೆ. ವಿದೇಶೀ ಪ್ರಭಾವದಿಂದ ಪ್ರಾಚೀನರ ಬದುಕನ್ನು ಅರಿಯುವ ಗೊಡವೆಗೆ ನಾವು ಹೋಗಲೇ ಇಲ್ಲ. ಪರಮಾತ್ಮನ ಅಸ್ತಿತ್ವದ ಬ್ರಹ್ಮಾಂಡದಲ್ಲಿ ಭಾರತ ಒಂದು ನಿರ್ದಿಷ್ಟ ಪ್ರದೇಶವನ್ನು ಹೊಂದಿದ್ದರೂ ಭರತವರ್ಷ ಎನ್ನುವ ಹೆಸರಿನಿಂದ ಕರೆಸಿಕೊಂಡಿದೆ. ಮಹಾಸಂಕಲ್ಪದಲ್ಲಿ ಪರಮಾತ್ಮನ ಸೃಷ್ಟಿಯ ಹದಿನಾಲ್ಕು ಲೋಕಗಳನ್ನು ನಾವು ಸ್ಮರಿಸಿಕೊಳ್ಳಬೇಕಿತ್ತು ಆದರೆ ಇಂದು ಆ ಅಂಶಗಳೆಲ್ಲ ಬಿಟ್ಟು ಹೋಗಿದ್ದು, ಭರತವರ್ಷ ಮತ್ತು ಭರತಖಂಡ ಮಾತ್ರವೇ ಉಳಿದುಕೊಂಡಿದೆ.
ಅಷ್ಟದಿಕ್ಪಾಲಕರು, ಅವರ ವಾಸಸ್ಥಾನಗಳು, ಈ ಭೂಮಿಯ ಮೇಲೆ ಇರುವ ಸಪ್ತದ್ವೀಪಗಳು, ಅಖಂಡ ಭೂಗೋಲದ ನವ ಖಂಡಗಳು, ನವವರ್ಷಗಳೊಂದಿಗೆ ಇಲ್ಲಿನ ಪರಿಸರದ ಪರ್ವತಗಳನ್ನು ಮತ್ತು ಈ ಭರತವರ್ಷದಲ್ಲಿನ ಪವಿತ್ರ ನದಿಗಳ ಸ್ಮರಣೆ, ಈ ಪವಿತ್ರ ಭೂಮಿಯನ್ನು ಆಳಿದ ಹಿಂದಿನ ಮತ್ತು ಇಂದಿನ ಚಕ್ರವರ್ತಿಗಳ ಸ್ಮರಣೆಯನ್ನು ಮಹಾಸಂಕಲ್ಪದಲ್ಲಿ ನೆನೆಸಿಕೊಳ್ಳುವುದು ನಮ್ಮ ಸ್ಮೃತಿಪಟಲದಲ್ಲಿ ನಮ್ಮ ದೇಶದ ಬಗೆಗಿನ ಭಕ್ತಿ ಭಾವ ಸದಾ ಜಾಗ್ರತವಾಗಿ ನೆಲೆಗೊಳ್ಳಲಿ ಎಂದು. ನಾವು ಮಹಾಸಂಕಲ್ಪದಲ್ಲಿ ಭರತ ಎಂದು ಸಂಕಲ್ಪಿಸಿಕೊಂಡಾಗ ಅದು ಭರತವರ್ಷ ಎನ್ನುವುದು ಸ್ಪಷ್ಟವಾಗುತ್ತದೆ. ಇದರ ಜೊತೆಗೆ ನಾವು ಕಲ್ಪಗಳನ್ನು, ಮನ್ವಂತರ ಮತ್ತು ಮನುಗಳನ್ನು, ಅವತಾರಗಳನ್ನು ಮತ್ತು ಪ್ರಸ್ತುತ ಶಖೆಯ ಜೊತೆ ದಿನಚರಿ(ಸಂವತ್ಸರ, ಋತು, ಮಾಸ, ಪಕ್ಷ, ತಿಥಿ, ನಕ್ಷತ್ರ, ವಾರ) ಹೇಳಿ ಅಂತಿಮ ಗೊಳಿಸುತ್ತಾ ಮುಂದಿನ ವಿಧಿಗಳನ್ನು ಆರಂಭಿಸುವುದು ಮಹಾಸಂಕಲ್ಪಕ್ಕಿರುವ ಮಹತ್ವ ಗೊತ್ತಾಗುತ್ತದೆ. ಅಥವಾ ಮುಂದಿನ ಪವಿತ್ರ ಕಾರ್ಯವನ್ನು ನಿರ್ಧರಿಸುತ್ತದೆ. ಇಂತಹ ಮಹೋನ್ನತ ಸಂಪ್ರದಾಯವನ್ನು ನಾವು ಕಾಲಾನುಕಾಲಕ್ಕೆ ಪರಂಪರೆಯಿಂದ ಪರಂಪರೆಗೆ ಕೈ ಬಿಡುತ್ತಾ ಬಂದಿದ್ದೇವೆ. ಜಗತ್ತಿನ ಯಾವ ದೇಶವೂ ಸಹ ಇಂತಹ ಸಂಪ್ರದಾಯ ಹೊಂದಿರುವುದು ಸಿಗಲಾರದು. ಬ್ರಹ್ಮನಿಂದ ಅಥವಾ ಜಗತ್ತಿನ ಸೃಷ್ಟಿಯಿಂದ ಇಂದಿನ ತನಕದ ಮರು ನೆನಪನ್ನು ವಿಶೇಷ ಸಂದರ್ಭ ಮತ್ತು ನಿತ್ಯ ಸಂಕಲ್ಪಗಳಲ್ಲಿ ಮಾಡುವುದರಿಂದ ನಮ್ಮ ಸಂಸ್ಕೃತಿಯನ್ನು ಸಂಸ್ಕಾರವನ್ನು ಜೀವಂತ ಇಟ್ಟಂತಾಗುತ್ತದೆ. ಇಂತಹ ಪವಿತ್ರ ಸಂಸ್ಕಾರವನ್ನು, ಪರಂಪರೆಯನ್ನು ಕೊಟ್ಟ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ನಮ್ಮ ಪ್ರಾಚೀನರ ಇತಿಹಾಸವನ್ನು ನಾವು ನೆನೆಯಲು ಮಾಡಿಕೊಂಡ ವ್ಯವಸ್ಥೆ ನಮ್ಮ ಪ್ರಾಚೀನತೆಯನ್ನು ಜೀವಂತವಿಡುತ್ತದೆ ಎನ್ನಬಹುದು. ಇವುಗಳು ಇಂದು ಗೇಲಿಗೆ ಒಳಗಾಗಿವೆ. ಪ್ರಾಚೀನತೆಯಿಂದ ಕ್ರಮೇಣ ಇವುಗಳ ಸ್ವರೂಪ ಬದಲಾಗಿದೆ ನಾವು ನಿತ್ಯ ಸಂಕಲ್ಪವನ್ನೇ ವಿಶೇಷ ಸಂಕಲ್ಪಗಳಲ್ಲಿ ಬಳಸಿ ಮಹಾಸಂಕಲ್ಪದ ಸ್ವರೂಪ ನಿತ್ಯಸಂಕಲ್ಪದ ರೂಪಕ್ಕೆ ಜಾರಿದೆ. ಪರಂಪರೆಯಿಂದ ಬಂದಿರುವುದನ್ನು ಉಳಿಸಿಕೊಂಡು ಬರಬೇಕಾದದ್ದು ನಮ್ಮೆಲ್ಲರ ಹೊಣೆ ಆದರೆ ಆಧುನಿಕತೆಯ ಭರಾಟೆ, ದಿನದಿಂದ ದಿನಕ್ಕೆ ಮನುಷ್ಯರ ಜೀವನ ಶೈಲಿಯ ಬದಲಾವಣೆ, ಕೆಲಸದ ಒತ್ತಡ. ಸಾಮಾಜಿಕ ಜಾಲತಾಣಗಳ ಅತೀ ವ್ಯಾಮೋಹ ಮುಂದೊಂದು ದಿನ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನೆ ಸೀಮಿತಗೊಳಿಸಬಹುದೇನೋ ಅನ್ನಿಸುತ್ತದೆ.
ಸದ್ಯೋಜಾತ
#ಪ್ರಾಚೀನ_ವರ್ತಮಾನ