March 13, 2023

ಮನುವು ಹೇಳಿದ್ದೇನು - ನಾವು ಅರ್ಥಮಾಡಿಕೊಂಡಿದ್ದೇನು?

ಮನುವು ಸ್ತ್ರೀಯರು ಸ್ವತಂತ್ರರಾಗಿರುವುದನ್ನು ನಿಷೇಧಿಸಿದ್ದಾನೆನ್ನುವ ನಂಬಿಕೆ ಅನೇಕ ಜನ ಸ್ತ್ರೀಯರಲ್ಲಿ ಇದೆ. ಸಂಸ್ಕೃತವನ್ನು ಕಲಿಸಿಕೊಡುವುದು, ಕಲಿತುಕೊಳ್ಳುವುದು ಎರಡೂ ಕಡಿಮೆಯಾಗಿರುವುದರಿಂದ ಅಸತ್ಯವು ಸತ್ಯವಾಗಿ ಚಲಾವಣೆಯಾಗುತ್ತಿದೆ. ಸ್ವಾತಂತ್ರ್ಯ ಮತ್ತು ಸ್ವೇಚ್ಛೆ ಎರಡೂ ಸಮಾನಾರ್ಥಕ ಪದಗಳಲ್ಲ. ಸ್ವಾತಂತ್ರ್ಯವೆಂದರೆ ತನ್ನನ್ನು ತಾನು ಕಾಪಾಡಿಕೊಂಡು, ತನ್ನ ಯೋಗಕ್ಷೇಮಗಳನ್ನು ವಹಿಸಿಕೊಳ್ಳುವುದು. ಸ್ವೇಚ್ಛೆ ಎಂದರೆ ಇಷ್ಟಬಂದಂತೆ ವ್ಯವಹರಿಸುವುದು. ಸ್ವೇಚ್ಛೆ ಎಂದರೆ ವಿಶೃಂಖಲತ್ವ ಅಂದರೆ ಲಂಗು ಲಾಗಮಿಲ್ಲದೆ ಇರುವುದು. ಕೇವಲ ಸ್ತ್ರೀಯರಿಗಷ್ಟೇ ಅಲ್ಲ ಪುರುಷರಿಗೂ ಸಹ ಸ್ವೇಚ್ಛೆಯು ಒಳಿತಾದುದಲ್ಲ. ಅರ್ಹತೆ ಎಂದರೆ ಹಕ್ಕಲ್ಲ, ಅರ್ಹತೆ ಎಂದರೆ ಸಾಮರ್ಥ್ಯ ಎಂದರ್ಥ.

ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ l
ಪುತ್ರಸ್ತು ಸ್ಥಾವಿರ ಭಾವೇ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ll
(ಮನುಸ್ಮೃತಿ ೯-೩)

ಮದುವೆಯಾಗುವವರಗೆ ತಂದೆಯ ಅಧೀನದಲ್ಲಿ, ಮದುವೆಯಾದ ನಂತರ ಪತಿಯ ಅಧೀನದಲ್ಲಿ, ಮುದಿತನದಲ್ಲಿ ಮಗನ ಅಧೀನದಲ್ಲಿ ಗುಲಾಮಳಾಗಿರು. ಅವರ ದಯೆಯಿದ್ದರೆ ಅದು ನಿನ್ನ ಪುಣ್ಯ. ಇಲ್ಲದಿದ್ದರೆ ಅದು ನಿನ್ನ ಕರ್ಮ, ನಿನ್ನ ಹಣೆಬರಹ!  ನಿನಗೆ ಜೀವನದಲ್ಲಿ ಸ್ವತಂತ್ರವಾಗಿ ಇರುವ ಅವಕಾಶವಿಲ್ಲ! ಈ ವಿಧವಾಗಿ ಮನುವೆನ್ನುವ ಮಹಾಧೂರ್ತ ಆದೇಶವಿತ್ತಿದ್ದಾನೆಂದಲ್ಲವೇ ಸ್ತ್ರೀವಾದಿಗಳು, ಮಹಿಳಾಪರ ಸಂಘಟನೆಗಳು ಮತ್ತು ಬುದ್ಧಿಜೀವಿಗಳೆಂದು, ವಿಚಾರವಾದಿಗಳೆಂದು ಕರೆಯಲ್ಪಡುತ್ತಿರುವವರ ಸಂಕಟ? ಅರ್ಥವೇನು, ಅಂತರಾರ್ಥವೇನು ಎನ್ನುವುದನ್ನು ಅರಿಯದೆ, ಅದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಎಲ್ಲಿಂದಲೋ ಹೆಕ್ಕಿ ತಂದು ಮಾತು ಮಾತಿಗೆ "ಸ್ತ್ರೀಯರು ಸ್ವಾತಂತ್ರಕ್ಕೆ ಅರ್ಹರಲ್ಲವೆಂದು" ಅವರು ಉದಾಹರಿಸುವ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎನ್ನುವ ಆ ಒಂದು ಪದಗುಚ್ಛವಿರುವುದು ಮನುಸ್ಮೃತಿಯ ಒಂಬತ್ತನೇ ಅಧ್ಯಾಯದ ಮೂರನೇ ಸಂಖ್ಯೆಯ ಶ್ಲೋಕದಲ್ಲಿ. ಅದರ ಹಿಂದೆಯೇ ಮತ್ತೊಂದು ಶ್ಲೋಕವೂ ಇದೆ -

ಕಾಲೇ ದಾತಾ ಪಿತಾ ವಾಚ್ಯೋ ವಾಚ್ಯಶ್ಚಾನುನಯನೇ ಪತಿಃ l
ಮೃತೇ ಭರ್ತರಿ ಪುತ್ರಸ್ತು ವಾಚ್ಯೋ ಮಾತು ರಕ್ಷಿತಾ ll (ಮನುಸ್ಮೃತಿ ೯-೪)

ಭಾವಾರ್ಥ - ಮದುವೆ ಮಾಡಬೇಕಾದ ವಯಸ್ಸಿನಲ್ಲಿ ಮಗಳಿಗೆ ಮದುವೆ ಮಾಡದೇ ಇದ್ದಲ್ಲಿ ಅದಕ್ಕೆ ತಂದೆಯು ತಪ್ಪಿತಸ್ಥನಾಗುತ್ತಾನೆ. ಹೆಂಡತಿಯನ್ನು ಸುಖವಾಗಿಡದ ಪಕ್ಷದಲ್ಲಿ ಅದಕ್ಕೆ ಗಂಡನೇ ಹೊಣೆ. ಗಂಡ ಮರಣಿಸಿದ ನಂತರ ತಾಯಿಯನ್ನು ಕಾಪಾಡದೇ ಹೋದರೆ ಮಗನಾದವನು ಅಪರಾಧಿ ಎನಿಸಿಕೊಳ್ಳುತ್ತಾನೆ.

ಇದರರ್ಥ ತಂದೆಗೆ, ಗಂಡನಿಗೆ ಮತ್ತು ಮಗನಿಗೆ ಮನುವು ವಹಿಸಿದ್ದು ಯಜಮಾನಿಕೆಯಲ್ಲ ....... ಆದರೆ  ಅದು ಜವಾಬ್ದಾರಿ! ಅವರು ಅದನ್ನು ಸರಿಯಾಗಿ ನಿಭಾಯಿಸದೇ ಇದ್ದರೆ ಅದಕ್ಕೆ ಅವರೇ ಹೊಣೆ ಎಂದು ಮನು ಅವರನ್ನು ಎಚ್ಚರಿಸಿದ್ದಾನೆ. ಹೆಂಗಸೆಂದರೆ ಗಂಡಸಿನ ಕಾಲ ಬಳಿ ಬಿದ್ದಿರಬೇಕಾದ ದಾಸಿ, ಗಂಡಸಾದವನು ಹೇಗೇ ಇದ್ದರೂ, ತನ್ನನ್ನು ಹೇಗೇ ನೋಡಿಕೊಂಡರೂ, ಏನು ಮಾಡಿದರೂ ಹೆಣ್ಣೆಂಬುವವಳು ಅದರ ಕುರಿತು ತುಟಿ ಎರಡು ಮಾಡಬಾರದು ಎಂದು ಹೇಳುವ ಈ ಕಾಲದ ಅನೇಕರಿಗಿರುವಂತೆ ಮನುವಿಗೆ ಮೈಯೆಲ್ಲಾ ದುರಹಂಕಾರವಿದ್ದಿದ್ದರೆ ಅವನು ಮೇಲೆ ತಿಳಿಸಿದಂತಹ ಕಟ್ಟಳೆಯನ್ನು ಮಾಡುತ್ತಿದ್ದಿಲ್ಲ.

ಸಿನಿಮಾಗಳಲ್ಲಿ ಖಳನಾಯಕರು ನಾಯಕಿಯ ಮೇಲೆ ದೌರ್ಜನ್ಯವೆಸಗುತ್ತಿದ್ದರೆ ನಾಯಕ ಆಕೆಯನ್ನು ಕಾಪಾಡಬಹುದು, ಆದರೆ ಸಾಧಾರಣ ಸ್ತ್ರೀಯರನ್ನು ಯಾರೂ ರಕ್ಷಿಸರು. ಆಕೆ ತನ್ನನ್ನು ತಾನೇ ಕಾಪಾಡಿಕೊಳ್ಳಬೇಕು. ಮನುವು "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎನ್ನುವ ಮಾತುಗಳನ್ನು ಯಾವ ಉದ್ದೇಶದಿಂದಲಾದರೂ ಹೇಳಿರಲಿ, ಅದೇ ಮನುವು ಸ್ತ್ರೀಯರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು ಎಂದು ಒತ್ತುಕೊಟ್ಟು ಹೇಳಿರುವ ಈ ಶ್ಲೋಕವನ್ನು ನೋಡಿ -
ಅರಕ್ಷಿತಾಃ ಗೃಹೇ ರುದ್ಧಾಃ ಪುರುಷೈರಾಪ್ತಕಾರಿಭಿಃ l
ಆತ್ಮಾನಮಾತ್ಮನಾ ಯಾಸ್ತು ರಕ್ಷೇಯುಸ್ತಾಃ ಸುರಕ್ಷಿತಾಃ ll
(ಮನುಸ್ಮೃತಿ ೯-೧೩)
ಭಾವಾರ್ಥ: ಮನೆಯಲ್ಲಿ ಆಪ್ತರಾದ ಪುರುಷರ ಮಧ್ಯೆ ಇದ್ದರೂ ಸಹ ಸ್ತ್ರೀಯರು ರಕ್ಷಣೆಯಿಲ್ಲದವರೇ. ಯಾರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲರೋ ಆ ಸ್ತ್ರೀಯರು ಮಾತ್ರ ಸುರಕ್ಷಿತರು.

ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ತ್ರೀಯರು ಸದಾಕಾಲ ಎಚ್ಚರಿಕೆಯಿಂದಿರಬೇಕು. ಈ ವಿಷಯವಾಗಿಯೇ ಮಹರ್ಷಿ ವಾತ್ಸಾಯನನು, ಉತ್ಸವಗಳಿಗೆ ಹಾಗೂ ಇತರೇ ಸ್ಥಳಗಳಿಗೆ ಹೋಗುವಾಗ ಸ್ನೇಹಿತೆಯರ ಜೊತೆ ಕೂಡಿಕೊಂಡು ಹೋಗುವುದು, ಕಡಿಮೆ ಆಭರಣಗಳನ್ನು ಧರಿಸುವುದು, ರಾಜಮಾರ್ಗದಲ್ಲಿ ಹೋಗುವುದು, ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಹೇಳಿದ್ದಾನೆ. (ಪಾಶ್ಚಾತ್ಯ ದೇಶಗಳಲ್ಲಿನ ಆಧುನಿಕರೂ ಸಹ ಇವೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಹೇಳುತ್ತಿದ್ದಾರೆ!). "ನಾಸ್ತಿ ಜಾಗರತೋ ಭಯಮ್ - ಜಾಗ್ರತೆಯಿಂದಿದ್ದರೆ ಭಯವೆಲ್ಲಿಯದು?" ಎನ್ನುವ ಸುಭಾಷಿತವೂ ಇದೆ.

ಎರಡನೆಯದು ಸಮಯಸ್ಪೂರ್ತಿ, ಯಾವುದಾದರೂ ಪ್ರಮಾದ ಪರಿಸ್ಥಿತಿ ಏರ್ಪಟ್ಟಾಗ, "ಅಯ್ಯೋ ಆಪದವುಂಟಾಗಿದೆ, ದೌರ್ಜನ್ಯಕ್ಕೊಳಗಾಗದೇ ಗತ್ಯಂತರವಿಲ್ಲ" ಎಂದು ಪೇಚಾಡುತ್ತಾ ಕುಳಿತುಕೊಳ್ಳುವ ಬದಲು ಪರಿಸ್ಥಿತಿಯಿಂದ ಪಾರಾಗಲು ಮಾರ್ಗಗಳನ್ನು ಅನ್ವೇಷಿಸಬೇಕು. ಎಲ್ಲಕ್ಕಿಂತ ಮುಖ್ಯವಾದುದು ಆತ್ಮವಿಶ್ವಾಸ. ಇಂದು ಪಾಠಶಾಲೆಗಳಲ್ಲಿ, ಮಹಾವಿದ್ಯಾಲಯಗಳಲ್ಲಿ ಪುಸ್ತಕ ಜ್ಞಾನವನ್ನು ಬಿಟ್ಟು ವ್ಯವಹಾರ ಜ್ಞಾನವನ್ನು ವೃದ್ಧಿಗೊಳಿಸುವ ವಿದ್ಯಾವಿಧಾನಗಳೇ ಇಲ್ಲವಾಗಿವೆ! ಕುತಂತ್ರಿ ಅತ್ತೆ-ಸೊಸೆಯಂದಿರಿರುವ ಕಥಾ ಹಂದರವನ್ನು ಹೊಂದಿರುವ ಧಾರಾವಾಹಿಗಳು, ಹೀರೋ ಕೇಂದ್ರಿತ ಕಥೆ, ಕಾದಂಬರಿ ಮತ್ತು ಸಿನಿಮಾಗಳು ಮತ್ತವುಗಳಲ್ಲೆಲ್ಲ ಮಹಿಳೆಯರನ್ನು ಅಬಲೆಯರಾಗಿ ಚಿತ್ರೀಕರಿಸುತ್ತಿದ್ದಾರೆ. ಅಬಲೆ ಎಂದರೆ ಕೇವಲ ಶಾರೀರಿಕವಾಗಿ ಬಲಹೀನಳೆನ್ನುವುದೇ ಹೊರತು ಅಸಮರ್ಥಳು ಅಥವಾ ಕೆಲಸಕ್ಕೆ ಬಾರದವಳು ಎಂದರ್ಥವಲ್ಲ.

ಸಖಾಸುಮ್ಮನೇ ಮನುವು "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದು ಯಾವ ಉದ್ದೇಶದಿಂದ ಹೇಳಿದ್ದಾನೆನ್ನುವುದನ್ನು ಅರ್ಥಮಾಡಿಕೊಳ್ಳದೆ ಅವನನ್ನು ಬೈಯ್ಯುತ್ತಾ ಕೂರದೆ ಅದೇ ಮನವು ಸ್ತ್ರೀಯರು ಜಾಗರೂಕರಾಗಿದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕೆಂದು ಹೇಳಿರುವುದನ್ನು ಮರೆಯದೆ ಅದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. "ಆಕೆ ಅಬಲೆ, ಅವನು ಮೃಗ" ಎನ್ನುವ ಕೆಲಸಕ್ಕೆ ಬಾರದ ನಾನ್ನುಡಿಗಳ ಕುರಿತು ಆಲೋಚಿಸುತ್ತಾ ಕುಳಿತರೆ ಮಹಿಳೆಯರಿಗೇ ನಷ್ಟವುಂಟಾಗುತ್ತದೆ.

ಕಡೆಯದಾಗಿ ಒಂದು ಮುಖ್ಯ ವಿಷಯ. "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎನ್ನುವ ಶ್ಲೋಕವು ಮಹಾಭಾರತಲ್ಲಿನ ಶಾಕುಂತಲೋಪಾಖ್ಯಾನದಲ್ಲಿಯೂ ಇದೆ. ತಂದೆಯ ಅಪ್ಪಣೆಯನ್ನು ಪಡೆಯದೆ ಅವನ ದೃಷ್ಟಿಗೆ ತಾರದೆ ರಹಸ್ಯವಾಗಿ ವಿವಾಹ ಮಾಡಿಕೊಂಡ ಶಕುಂತಲೆಯು ಎಷ್ಟು ಕಷ್ಟಪಡಬೇಕಾಗಿ ಬಂತು ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಸ್ವತಂತ್ರವಾಗಿ ವಿವಾಹ ಮಾಡಿಕೊಳ್ಳುವ ಸ್ತ್ರೀಯರು ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುವ ಆ ಶ್ಲೋಕವು ಇಂದಿನ ಆಧುನಿಕ ಯುವತಿಯರಿಗೂ ಅನ್ವಯವಾಗುತ್ತದೆ.

(ಆಧಾರ: ಶ್ರೀಮತಿ ಪಾಲಂಕಿ ಸತ್ಯ ಅವರು ತೆಲುಗಿನಲ್ಲಿ ಬರೆದ ’ಆಲೋಚನೆಗಳು ಅವಲೋಕನಗಳು ಪುಸ್ತಕದಲ್ಲಿನ  "ಮಹಿಳಾ ಪ್ರಪಂಚದ ಮನೋಭಿಲಾಷೆ" ಎನ್ನುವ ಅಧ್ಯಾಯದಿಂದ ಆಯ್ದ ಲೇಖನ)

March 11, 2023

ದಶಮಾಂಶ ಪದ್ದತಿ

ದಶಮಾಂಶ ಪದ್ದತಿ ಬಗ್ಗೆ ನಮಗೆ ಎಷ್ಟು ಗೊತ್ತು! ಈ ಶ್ಲೋಕವು ಬ್ರಹ್ಮಾಂಡ ಪುರಾಣದಲ್ಲಿದೆ, ಎಂಬ ಮಾಹಿತಿ ಇದೆ.


 ಏಕಂ ದಶ ಶತಂ ಚೈವ ಸಹಸ್ರಮಯುತಂ ತಥಾ |
 ಲಕ್ಷಂ ನಿಯುತಂ ಚೈವ ಕೋಟಿರರ್ಭುದಮೇವ ಚ ||೧||

 ಅರ್ಥ:
 ಒಂದು, ಹತ್ತು, ನೂರು, ಸಾವಿರ,ಹತ್ತು ಸಾವಿರ,ಲಕ್ಷ, ಹತ್ತು ಲಕ್ಷ ಮತ್ತು ಕೋಟಿ ಹೀಗೆಯೇ ಹತ್ತು ಕೋಟಿ

ವೃಂಧ: ಖರ್ವೋ ನಿಖರ್ವಶ್ಚ ಶಂಖ: ಪದ್ಮಂ ಚ ಸಾಗರ: |
ಅಂತ್ಯಂ ಮಧ್ಯಂ ಪರಾರ್ದ್ಧ್ಯಂ ಚ ದಶವೃದ್ಧ್ಯಾ ಯಥಾ ಕ್ರಮಮ್ ||೨||
ಅರ್ಥ:
ವೃಂದ, ಖರ್ವ,ನಿಖರ್ವ,ಶಂಖ, ಪದ್ಮ, ಸಾಗರ, ಅಂತ್ಯ, ಮಧ್ಯ ಮತ್ತು ಪರಾರ್ಧ್ಯ. ಹೀಗೆ ಯಥಾಕ್ರಮವಾಗಿ ಹತ್ತರಿಂದ ಗುಣಿಸಿ ವೃದ್ಧಿಯನ್ನು ಮಾಡಿಕೊಳ್ಳಬೇಕು.

ಅಂದರೆ
ಒಂದು= 1
ಹತ್ತು = 10
ನೂರು = 100
ಸಾವಿರ = 1000
ಹತ್ತು ಸಾವಿರ = 10,000
ಲಕ್ಷ = 1,00,000
ಹತ್ತು ಲಕ್ಷ = 10,00,000
ಕೋಟಿ = 1,00,00,000
ಹತ್ತು ಕೋಟಿ = 10,00,00,000
ವೃಂದ = ನೂರು ಕೋಟಿ = 100,00,00,000
ಖರ್ವ = ಸಾವಿರ ಕೋಟಿ = 1,000,00,00,000
ನಿಖರ್ವ = ಹತ್ತು ಸಾವಿರ ಕೋಟಿ = 10,000,00,00,000
ಶಂಖ = ಲಕ್ಷ ಕೋಟಿ = 1,00,000,00,00,000
ಪದ್ಮ = ಹತ್ತು ಲಕ್ಷ ಕೋಟಿ = 10,00,000,00,00,000
ಸಾಗರ = ಕೋಟಿ ಕೋಟಿ = 1,00,00,000,00,00,000
ಅಂತ್ಯ = ಹತ್ತು ಕೋಟಿ ಕೋಟಿ = 10,00,00,000,00,00,000
ಮಧ್ಯ = ನೂರು ಕೋಟಿ ಕೋಟಿ = 100,0000,000,00,00,000
ಪರಾರ್ಧ್ಯ = ಸಾವಿರ ಕೋಟಿ ಕೋಟಿ = 1,000,00,00,000,00,00,000

1 ರ ಪಕ್ಕ 17 ಸೊನ್ನೆಗಳಿಗೆ ನಿಂತಿದೆ. ಇನ್ನೂ ಮುಂದೂ ಇದೆಯೆಂದು ತಿಳಿದಿದೆ.ವಿವರ ನನಗೆ ಲಭ್ಯವಿಲ್ಲ