May 16, 2022

ವನಸುಮದೊಳೆನ್ನ ಜೀವನವು ವಿಕಸಿಸುವಂತೆ

ವನಸುಮದೊಳೆನ್ನ ಜೀವನವು
ವಿಕಸಿಸುವಂತೆ
ಮನವನನುಗೊಳಿಸು ಗುರುವೇ, ಹೇ ದೇವ ||

ಕಾನನದಿ ಮಲ್ಲಿಗೆಯು,
ಮೌನದಿಂ ಬಿರಿದು ನಿಜ-
ಸೌರಭವ ಸೂಸಿ ನಲವಿಂ
ತಾನ್ ಎಲೆಯ ಪಿಂತಿರ್ದು
ದೀನತೆಯ ತೋರಿ ಅಭಿಮಾನವನು ತೊರೆದು
ಕೃತಕೃತ್ಯತೆಯ ಪಡೆವಂತೆ
ಮನವನನುಗೊಳಿಸು ಗುರುವೇ, ಹೇ ದೇವ ||

ಉಪಕಾರಿ ನಾನು ಎನ್-
ಉಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾದಪದಂತೆ
ನೈಜಮಾದೊಲ್ಪಿನಿಂ ಬಾಲ್ವವೊಲು
ಮನವನನುಗೊಳಿಸು ಗುರುವೇ, ಹೇ ದೇವ ||


    ಡಿವಿಜಿಯವರು ತಮ್ಮ ಬದುಕು ವನಸುಮದಂತೆ ಇರಬೇಕೆಂದು ಪ್ರಾರ್ಥಿಸುತ್ತಾರೆ. ವನಸುಮ ಎಂದರೆ ಕಾಡಿನಲ್ಲಿ ಎಲೆಯ ಮರೆಯಲ್ಲಿ ಅರಳುವ ಹೂವಿನಂತೆ ಇರಬೇಕೆನ್ನುವುದು ಅವರ ಆಶಯ. ವನಸುಮ ಅಹಂಕಾರ ಪಡದೇ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಅಹಂಕಾರ ಅಭಿವ್ಯಕ್ತವಾಗುತ್ತಿರುತ್ತದೆ. ಸದಾ ಕಾಲ ಜನ ನನ್ನನ್ನು ಗುರುತಿಸಲಿ, ನನ್ನ ಬಗ್ಗೆ ಮಾತನಾಡಲಿ ಎಂಬ ಬಯಕೆಯನ್ನು ಹೊಂದಿರುತ್ತದೆ. ಆದರೆ ವನಸುಮ ಅಂತಹದ್ಯಾವ ಆಶೆಯಿಲ್ಲ. 'ಹೇ ಮನಸ್ಸೆ! ನೀನು ವನಸುಮದಂತೆ ಜೀವಿಸು'ಎನ್ನುತ್ತಾರೆ ಡಿ.ವಿ.ಜಿ.


ಯಾವಾಗ ಆಸಕ್ತವಾದ ಮನಸ್ಸು ಹೀಗೆ ಯೋಚಿಸಲು ಆರಂಭಿಸುತ್ತದೆಯೋ ಆಗ ಬದುಕು ಸಾರ್ಥಕವಾಗುತ್ತದೆ. ಮನಸ್ಸು ಒಂದನ್ನು ಇಷ್ಟಪಟ್ಟರೆ, ಖಂಡಿತ ಬೇರೆಯದನ್ನು ದ್ವೇಷಿಸುತ್ತದೆ. ಇದ್ದದ್ದನ್ನು ಇದ್ದಂತೆ ಸ್ವೀಕರಿಸುವ ಕಲೆಯನ್ನು ನಾವು ರೂಢಿಮಾಡಿಕೊಳ್ಳಬೇಕು. ಈ ಜಗತ್ತು ಒಂದೇ ರೀತಿ ಇಲ್ಲ. ಮರದಲ್ಲಿರುವ ಪ್ರತಿಯೊಂದು ಎಲೆಯೂ ಸಹ ಒಂದಕ್ಕಿಂತಲೂ ಮತ್ತೊಂದು ಭಿನ್ನವಾಗಿದೆ. ಒಂದೇ ತಂದೆತಾಯಿಯ ಮಕ್ಕಳಲ್ಲೂ ವಿರುದ್ಧ ಸ್ವಭಾವದ ಗುಣಗಳಿರುತ್ತವೆ. ಯಾರೂ ಯಾರನ್ನೂ ಬದಲಾಯಿಸಲು ಸಾಧ್ಯವಿಲ್ಲ. ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ವನಸುಮದಂತೆ ಆಲೋಚಿಸಿದ ಹೊರತು ಬದುಕು ಧನ್ಯವಾಗುವುದಿಲ್ಲ.

ಜನರು ನಮ್ಮನ್ನು ಹೊಗಳಲಿ ಅಥವಾ ತೆಗಳಲಿ ಬದುಕಿನಲ್ಲೊಂದು ಗುರಿಯನ್ನಿಟ್ಟುಕೊಂಡು ಜೀವಿಸಬೇಕು. ನಮ್ಮ ಬದುಕು ಇತರರನ್ನು ಪ್ರೇರೇಪಿಸುವಂತಿರಬೇಕು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ಈ ನಿಯಮವನ್ನೇ ಪಾಲಿಸುತ್ತಿವೆ. ಆದರೆ ಮನುಷ್ಯ ಮಾತ್ರ ಅಹಂಕಾರಕ್ಕೆ ಬಲಿಪಶುವಾಗಿದ್ದಾನೆ.

ಜನರನ್ನು ಮೆಚ್ಚಿಸಲಿಕ್ಕೆ ಆಗುವುದಿಲ್ಲ.ಜನಮನ್ನಣೆಯ ಬೆನ್ನಟ್ಟಿ ಸಾಗಿದರೆ ದುಃಖ ಖಂಡಿತ. ನಮ್ಮ ಕರ್ತವ್ಯವನ್ನು ನಾವು ಮಾಡುತ್ತಾ ಸಾಗಬೇಕು. ಸ್ವಾಮೀ ಚಿನ್ಮಯಾನಂದರು 'ಮಕ್ಕಳು ನಮ್ಮ ಮುಖಾಂತರ ಜಗತ್ತಿಗೆ ಬಂದಿದ್ದಾರೆ. ಅವರು ನಮಗೆ ಸೇರಿದವರಲ್ಲ' ಎಂದಿದ್ದಾರೆ. ಪ್ರಾಣಿ ಹಾಗೂ ಪಕ್ಷಿಗಳು ಇದೇರೀತಿ ಜೀವಿಸುತ್ತಿವೆ. ಆದರೆ ನಾವು 'ನನ್ನ ಮಗ', 'ನನ್ನ ಮಗಳು' ಎಂದು ಹೆಮ್ಮೆ ಪಡುತ್ತೇವೆ. ಮುಂದೆ ಅದುವೇ ದುಃಖಕ್ಕೆ ಕಾರಣವಾಗುತ್ತದೆ.ಶ್ರೀರಾಮನನ್ನು ನಿಂದಿಸುವವರೂ ಇದ್ದಾರೆ. ಶ್ರೀರಾಮನನ್ನು ಪೂಜಿಸುವವರೂ ಇದ್ದಾರೆ. ಶ್ರೀರಾಮನ ದೃಷ್ಟಿಯಲ್ಲಿ ಪೂಜಿಸುವವರು ಹಾಗೂ ನಿಂದಿಸುವವರು ಒಂದೇ ಸಮಾನರು.

ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದ ಕೊನೆಯಲ್ಲಿ ತಪ್ಪನ್ನು ತಿದ್ದಿಕೊಳ್ಳಲು ಸಿದ್ಧರಿದ್ದರೆ ಬದುಕು ಆನಂದಮಯವಾಗುತ್ತದೆ ಎನ್ನುತ್ತಾರೆ.

'ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು ನಿಜ ಸೌರಭವ ಸೂಸಿನಲವಿಂ' ಎನ್ನುವಂತೆ ಪ್ರಪಂಚದಲ್ಲಿನ ಪ್ರತಿಯೊಂದು ವಸ್ತುವು ಮೌನವಾಗಿಯೇ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಆದರೆ ಮನುಷ್ಯನಲ್ಲಿ ಮಾತ್ರ ಸ್ವಾರ್ಥ ತುಂಬಿ ತುಳುಕುತ್ತಿದೆ. ಈ ಅಂಶವನ್ನೇ ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೀಗೆನ್ನುತ್ತಾರೆ.

ಇಳೆಯಿಂದ ಮೊಳಕೆಯೊಗವಂದು ತಮಟೆಗಳಿಲ್ಲ
ಫಲಮಾಗುವಂದುತುತ್ತೂರಿದನಿಯಿಲ್ಲ|
ಬೆಳಕೀವ ಸೂರ್ಯ-ಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

ನಾನು, ನನ್ನಿಂದ, ನಾನೇ ಎಂಬ ಶಬ್ದಗಳು ನಮ್ಮ ಶತ್ರುಗಳು. ನಾನು ಕಲಿಸಿದೆ, ನನ್ನ ಶಿಷ್ಯರು, ಇವು ಕೇವಲ ಅಹಂಕಾರದ ಮಾತುಗಳು. ಕಲಿಸುವ ಗುರುವಿಗಿಂತ ಕಲಿಯುವ ಶಿಷ್ಯನೇ ಮುಖ್ಯ. ಗುರುವು ತಾನು 'ಗುರು' ಎಂದರೆ ಅದು ಅಹಂಕಾರ. ಗುರುವಿನ ಅಸ್ತಿತ್ವ ಕೇವಲ ಶಿಷ್ಯನಿಗೆ ಮಾತ್ರ. ಹೇಗೆ ನಾನು ನನ್ನ ಮಗನಿಗೆ ಮಾತ್ರ ಅಪ್ಪನೋ, ನಾನು ನನ್ನ ಹೆಂಡತಿಗಷ್ಟೇ ಗಂಡನೋ ಹಾಗೇ ಶಿಷ್ಯನಿಗೆ ಅಷ್ಟೇ ಗುರು ಮೀಸಲಾಗಿದ್ದಾನೆ. ನಾವು ಮೌನವನ್ನು ಆಶ್ರಯಿಸಿದರೆ ಬದುಕು ಆನಂದಮಯವಾಗುತ್ತದೆ. ನಿಜದಲ್ಲಿ ಮೌನವೇಆನಂದ. ಮೌನಿಗಳಾಗಿ ಪ್ರಕೃತಿಗೆ ಸುಗಂಧವನ್ನು ಹರಡೋಣ.

ಜೀವನದಲ್ಲಿ ಮನಸ್ಸು ಪ್ರಶಾಂತವಾಗಿದ್ದಾಗ ಮಾತ್ರ ನಮಗೆ ಕೃತಕೃತ್ಯತೆಯ ಭಾವ ಆವಿರ್ಭವಿಸುತ್ತದೆ. ಮಾಡಬೇಕಾದುದನ್ನುತೃಪ್ತಿಯಿಂದ ಮಾಡಿ ಮುಗಿಸಿದ ಭಾವವೇ ಈ ಕೃತಕೃತ್ಯತೆ. ಮಗುವನ್ನು ಬೆಳೆಸಿ ದೊಡ್ಡದನ್ನಾಗಿಸಿ, ತನ್ನ ಕಾಲಮೇಲೆ ತಾನು ನಿಲ್ಲುವಂತೆ ಮಾಡಿದಾಗತಾಯಿ ಕೃತಕೃತ್ಯಳು. ಇದೇ ಭಾವವನ್ನು ಪ್ರಪಂಚದಲ್ಲಿನಎಲ್ಲಜೀವ ಜಂತುಗಳು ಪಾಲಿಸಿ ಕೃತಕೃತ್ಯತೆಯನ್ನು ಹೊಂದಿವೆ.'ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ' ನಮ್ಮ ಬದುಕಿಗೆ ವನಸುಮವು ಆದರ್ಶವಾಗಬೇಕು. ಆ ಕಾಡಿನ ಹೂವು ಎಲೆಯ ಹಿಂದಿದ್ದರೂ ದಾರಿಹೋಕರಿಗೆ ಪರಿಮಳವನ್ನು ಬೀರುತ್ತದೆ. ತಾನು ಅವರಿಗೆ ಕಾಣದಿದ್ದರೂ, ಅಹಂಕಾರವನ್ನು ತೊರೆದ ಹೂವು ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುತ್ತದೆ. ನಾವು ನಮ್ಮ ಬದುಕಿನಲ್ಲಿ ಈ ರೀತಿಯಲ್ಲಿ ಜೀವಿಸಿದ ವ್ಯಕ್ತಿಗಳನ್ನು ಗುರುತಿಸಬೇಕು. ತಾಯಿಯೂ ಸಹ ಇದೇ ಜಾತಿಗೆ ಸೇರಿದವಳಾಗುತ್ತಾಳೆ. ಜಗತ್ತಿನ ಪ್ರತಿಯೊಬ್ಬನೂ ಸಹ ಈ ರೀತಿ ಆಲೋಚಿಸಿದರೆ, ಅವರಿರುವ ಜಾಗ ಆನಂದದ ತಾಣವಾಗುತ್ತದೆ. ಎಲ್ಲರೂ ಭಗವಂತನ ಸ್ವರೂಪವೇ ಎಂಬ ಭಾವವು ನಮ್ಮ ಹೃದಯದಲ್ಲಿ ಮೂಡಿದಾಗ, ನಮ್ಮ ಅಜ್ಞಾನದ ನಿಮಿತ್ತದಿಂದ ಹುಟ್ಟಿದ ಭೇದ ಬುದ್ಧಿಯು ನಾಶವಾಗುತ್ತದೆ. ಭೇದವನ್ನುಕಾಣುವುದು ಸ್ವಾಭಾವಿಕ. ಅದನ್ನು ಮೀರುವುದೇ ಸಾಧನೆ.
ಕೃಪೆ- ವಿಜಯಕರ್ನಾಟಕ

May 13, 2022

ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡಬಾರದೇ?

 ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? 

ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ? 😨

ಮನುಷ್ಯನು ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಿಸಬೇಕಾಗುತ್ತದೆ .

ಅವು 
೧) *ಮಲಿನ ಷೋಡಶ* 
೨) *ಮಧ್ಯಮ ಷೋಡಶ* 
೩) *ಉತ್ತಮ ಷೋಡಶ*
 ಎಂಬುದಾಗಿ ಮೂರು ವಿಭಾಗಗಳು .

*ಸ್ಥಾನೇ ದ್ವಾರೇ ಅರ್ಧಮಾರ್ಗೇ ಚ ಚಿತಾಯಾಂ ಶವ ಹಸ್ತಕೇ|*
*ಅಸ್ಥಿ ಸಂಚಯನೇ ಷಷ್ಠೋ ದಶಪಿಂಡಾ ದಶಾನ್ಹಿಕಾ||*

ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ *ಮಲಿನ ಷೋಡಶ* ಎಂದು ಹೆಸರು .


*ಪ್ರಥಮಂ ವಿಷ್ಣವೇ ದದ್ಯಾದ್ವಿತೀಯಂ ಶ್ರೀಶಿವಾಯ ಚ|*
*ಯಾಮ್ಯಾಯ ಪರಿವಾರಾಯ ತೃತೀಯಂ ಪಿಂಡಮುತ್ಸೃಜೇತ್||*
*ಚತುರ್ಥಂ ಸೋಮರಾಜಾಯ ಹವ್ಯವಾಹಾಯ ಪಂಚಮಮ್|*
*ಕವ್ಯವಾಹಾಯ ಷಷ್ಠಂ ಚ ದದ್ಯಾತ್ಕಾಲಾಯ ಸಪ್ತಮಮ್ ||*
*ರುದ್ರಾಯ ಚಾಷ್ಟಮಂ ದದ್ಯಾನ್ನವಮಂ ಪುರುಷಾಯ ಚ|*
*ಪ್ರೇತಾಯ ದಶಮಂ ಚೆವೈಕಾದಶಂ ವಿಷ್ಣವೇ ನಮಃ||*
*ದ್ವಾದಶಂ ಬ್ರಹ್ಮಣೇ ದದ್ಯಾದ್ವಿಷ್ಣವೇ ಚ ತ್ರಯೋದಶಮ್|*
*ಚತುರ್ದಶಂ ಶಿವಾಯೈವ ಯಮಾಯ ದಶಪಂಚಕಮ್||*
*ದದ್ಯಾತ್ಪುರುಷಾಯೈವ ಪಿಂಡಂ ಷೋಡಶಕಂ ಖಗ|*
*ಮಧ್ಯಂ ಷೋಡಶಕಂ ಪ್ರಾಹುರೇತತ್ತತ್ತ್ವವಿದೋ ಜನಾಃ||*
ಮೊದಲನೆಯ ಪಿಂಡವನ್ನು ವಿಷ್ಣುವಿಗೆ , ಎರಡನೆಯದನ್ನು ಶಿವನಿಗೆ , ಮೂರನೆಯದನ್ನು ಯಮನ ಕುಟುಂಬದವರಿಗೆ , ನಾಲ್ಕನೆಯದನ್ನು ಚಂದ್ರನಿಗೆ , ಐದನೆಯದನ್ನು ಅಗ್ನಿಗೆ , ಆರನೆಯದನ್ನು ಕವ್ಯವಾಹನಿಗೆ , ಏಳನೆಯದನ್ನು ಕಾಲನಿಗೆ , ಎಂಟನೆಯದನ್ನು ರುದ್ರನಿಗೆ , ಒಂಬತ್ತನೆಯದನ್ನು ಪರಮ ಪುರುಷನಿಗೆ , ಹತ್ತನೆಯದನ್ನು ಪ್ರೇತಕ್ಕೆ , ಹನ್ನೊಂದನೆಯದನ್ನು ವಿಷ್ಣುವಿಗೆ , ಹನ್ನೆರಡನೆಯದನ್ನು ಬ್ರಹ್ಮನಿಗೆ , ಹದಿಮೂರನೆಯದನ್ನು ವಿಷ್ಣುವಿಗೆ , ಹದಿನಾಲ್ಕನೆಯದನ್ನು ಶಿವನಿಗೆ , ಹದಿನೈದನೆಯದನ್ನು ಯಮನಿಗೆ , ಮತ್ತು ಹದಿನಾರನೆಯದನ್ನು ತತ್ಪುರುಷನಿಗೆ ಕೊಡಬೇಕು. ಹೀಗೆ ಹದಿನಾರು ಪಿಂಡದಾನಗಳು *ಮಧ್ಯಮ ಷೋಡಶ* ಎನಿಸಿಕೊಳ್ಳುವವು .


*ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |*
*ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||*
*ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|*
*ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||*

ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) 1 . ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು . 

ಇವುಗಳು *ಉತ್ತಮ ಷೋಡಶ* ಎಂದು ಕರೆಸಿಕೊಳ್ಳುವವು .

ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ *ಸೌಮ್ಯ* ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ *ಉತ್ತಮ ಷೋಡಶ* ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ . 

ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ .

 ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು .

ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ *ಮಮ ಸಮಸ್ತ ಪಿತೃಣಾಂ ನಿರತಿಶಯ ಸಾನಂದ ಬ್ರಹ್ಮಲೋಕ ಅವಾಪ್ತ್ಯರ್ಥಂ .......* ಎಂಬಲ್ಲಿ ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ . 

ಹೀಗಾಗಿ ಕನ್ಯಾದಾನ ಮಾತ್ರ ಬರ್ತದೆ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವುದಿಲ್ಲಾ ,

 ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡು ಮಗನ ಮದುವೆಯಾಗಲಿ , ಮುಂಜಿಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .

ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ  ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ 

May 7, 2022

ಗಡಿಯಾರ ಕದ್ದ ವಿದ್ಯಾರ್ಥಿ

ಈ ಕತೆ... ಯಾಕೋ ಇಷ್ಟ ಆಯ್ತು... ನಿಮಗೂ ಹೇಳೋಣ ಅಂತ....

ಒಂದು ಕ್ಲಾಸ್ ರೂಮ್ ನಲ್ಲಿ ಸುಮಾರು ವಿದ್ಯಾರ್ಥಿಗಳಿದ್ದರು. ಅವರಲ್ಲಿ ಒಬ್ಬ ಎದ್ದು ನಿಂತು ಪ್ರೊಫೆಸರ್ ಗೆ ಹೇಳಿದ ಸರ್ ನನ್ನ ತಂದೆ ನನ್ನ ಜನ್ಮ ದಿನಕ್ಕೆ ಒಂದು ದುಬಾರಿ ಗಡಿಯಾರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಈ  5 ನಿಮಿಷದ ಬ್ರೇಕ್ ನಲ್ಲಿ ಅದನ್ನು ಇಲ್ಲಿಯೇ ಬಿಟ್ಟು ಹೊರಗೆ ಹೋಗಿದ್ದೆ, ಬಂದು ನೋಡಿದರೆ ಕಾಣುತ್ತಿಲ್ಲ. ಆಗ ಪ್ರೊಫೆಸರ್ ವಿಚಾರ ಮಾಡಲಾಗಿ ಈ ಹುಡುಗ ಹೊರಗೆ ಹೋಗಿ ಒಳಗೆ ಬರುವವರೆಗೆ ಕ್ಲಾಸ್ ರೂಮ್ ಒಳಗಿರುವ ಯಾವನೋ ಒಬ್ಬ ಕದ್ದಿರುತ್ತಾನೆ ಎಂದು ಊಹಿಸಿದರು.

ಎಲ್ಲಾ ವಿದ್ಯಾರ್ಥಿಗಳಿಗೆ ಎದ್ದು ನಿಲ್ಲಿಸಿ ತಮ್ಮ ತಮ್ಮ ಕರ್ಚೀಫಿನಿಂದ ತಮ್ಮ ಕಣ್ಣುಗಳನ್ನು ಕಟ್ಟಿಕೊಳ್ಳಲು ತಿಳಿಸಿದರು. ಒಬ್ಬೊಬ್ಬರನ್ನು  ಮೈಮುಟ್ಟಿ ಹುಡುಕುತ್ತಾ ಬಂದಾಗ ಒಬ್ಬನ ಜೇಬಿನಲ್ಲಿ ಅದು ಸಿಕ್ಕಿತು. ಅದನ್ನು ಕಳೆದುಕೊಂಡ ವಿದ್ಯಾರ್ಥಿಗೆ ಒಪ್ಪಿಸಿ, ಎಲ್ಲರಿಗೂ ಕಣ್ಣಿನ ಬಟ್ಟೆ  ತೆಗೆಯಲು ತಿಳಿಸಿದರು. ಎಂದಿನಂತೆ ಪಾಠ ಮುಂದುವರೆಯಿತು.

ಆದರೆ ಗಡಿಯಾರ ಕದ್ದ ವಿದ್ಯಾರ್ಥಿಯ ಮನದಲ್ಲಿ ಭಯ, ಆತಂಕ ಶುರುವಾಗಿತ್ತು. ಇಂದೋ ನಾಳೆಯೋ ನಾನು ಕಳ್ಳ ಎಂದು ಎಲ್ಲರ ಮುಂದೆ ಬಹಿರಂಗವಾಗಿ ವಿಷಯ ತಿಳಿಸುತ್ತಾರೆ. ಆಗ ನನ್ನ ಗತಿ ಏನಾಗಬೇಕು ಎಂದು ಆತಂಕದಿಂದಲೇ ಕ್ಲಾಸಿಗೆ ಬರುತ್ತಿದ್ದ. ಹೀಗೆ ದಿನಗಳು ಕಳೆದು, ತಿಂಗಳುಗಳು ಕಳೆದು, ವರ್ಷವೇ ಕಳೆದು ಹೋಯಿತು. ಆ ವಿಷಯ ಯಾರಿಗೂ ಗೊತ್ತಾಗಲಿಲ್ಲ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಮುಗಿಸಿ ಕಾಲೇಜಿನಿಂದ ನಿರ್ಗಮಿಸಿ ಹೋದರು. 

ಹಲವು ವರ್ಷಗಳ ನಂತರ ಗಡಿಯಾರ ಕದ್ದ ವಿದ್ಯಾರ್ಥಿ ದೊಡ್ಡ ಬಿಸಿನೆಸ್ ಮ್ಯಾನ್ ಆಗಿ ಒಳ್ಳೆಯ ಹೆಸರು ಮಾಡಿದ್ದ. ಮುಂದೆ ಒಂದು ದಿನ ಆ ಕಾಲೇಜಿನ ವಿದ್ಯಾರ್ಥಿಗಳ ರಿಯೂನಿಯನ್ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಅದೇ ಹುಡುಗ ಕಾಲೇಜಿಗೆ ಬಂದ. ಆತ ನೇರವಾಗಿ ಅದೇ ಪ್ರೊಫೆಸರ್ ಹತ್ತಿರ ಬಂದು ಕಾಲಿಗೆ ನಮಸ್ಕರಿಸಿ ಚಿಕ್ಕ ದನಿಯಲ್ಲಿ ಹೇಳಿದ ಸರ್ ಇಂದು ನಾನು ಜೀವಂತವಾಗಿರಲು ನೀವೇ ಕಾರಣ. ನನ್ನ ಇವತ್ತಿನ ಈ ಸಾಧನೆಗೆ ನೀವು ಮಾತ್ರ ಕಾರಣ. ಆಗ ಆ ಪ್ರೊಫೆಸರ್ ಆಶ್ಚರ್ಯಚಕಿತರಾಗಿ ನಾನು ಹೇಗೆ ಕಾರಣ ಮಗು ಎಂದರು. 

ಸರ್ ಅಂದು ನಾನು ಆ ಗಡಿಯಾರವನ್ನು ಕದ್ದ ವಿಷಯ ನೀವು ಯಾರಿಗೂ ಹೇಳಲಿಲ್ಲ ಬಹಿರಂಗಪಡಿಸಲಿಲ್ಲ. ನನ್ನ ಹೆಸರು ಬಹಿರಂಗವಾದ ದಿನ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದ್ದೆ. ಅದೆಷ್ಟು ದಿನ ಕಳೆದರೂ ನೀವು ಈ ವಿಷಯವನ್ನು ಬಹಿರಂಗಪಡಿಸಲಿಲ್ಲ. ಆದ್ದರಿಂದ ನಾನು ಅಂದೇ ನಿರ್ಧರಿಸಿದೆ. ಇನ್ನು ಜೀವನದಲ್ಲಿ ನಿಯತ್ತಾಗಿ ಬದುಕಬೇಕೆಂದು. ಈ ನನ್ನ ಬದಲಾವಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು ನೀವೇ. ಆದ್ದರಿಂದ ನೀವೇ ನನ್ನ ದೇವರು ಎಂದ.

ಪ್ರೊಫೆಸರ್ ಆಶ್ಚರ್ಯಚಕಿತರಾಗಿ ಹೌದೇ! ಆ ವಿದ್ಯಾರ್ಥಿ ನೀನೆಯೋ?  ನನಗೂ ಗೊತ್ತಿರಲಿಲ್ಲ ಎಂದರು. ಆ ದಿನ ನಾನು ಎಲ್ಲಾ ವಿದ್ಯಾರ್ಥಿಗಳ ಕಣ್ಣನ್ನು ಕಟ್ಟಿಸಿ, ನಾನು ಕೂಡ ನನ್ನ ಕಣ್ಣುಗಳನ್ನು ಕಟ್ಟಿಕೊಂಡಿದ್ದೆ. ಏಕೆಂದರೆ ಕದ್ದಿರುವ ವಿದ್ಯಾರ್ಥಿ ಯಾರೇ ಆಗಿರಲಿ, ಅವನು ನನ್ನ ವಿದ್ಯಾರ್ಥಿಯೇ. ನನ್ನ ದೃಷ್ಟಿಕೋನದಲ್ಲಿ ನನ್ನ ಯಾವ ವಿದ್ಯಾರ್ಥಿಯೂ ಕೆಳಮಟ್ಟದಲ್ಲಿ ಗುರುತಿಸಿಕೊಳ್ಳಬಾರದು. ಹೀಗಾಗಿ ನನಗೂ ಇವತ್ತೇ ತಿಳಿಯಿತು ಆ ವಿದ್ಯಾರ್ಥಿ ನೀನೇ ಎಂದು. 

ಎದುರಿಗೆ ನಿಂತ ವಿದ್ಯಾರ್ಥಿಯ ಕಣ್ಣಾಲೆಗಳು ತುಂಬಿ ಹರಿಯತೊಡಗಿತ್ತು. ಮತ್ತೊಮ್ಮೆ ಗುರುಗಳ ಪಾದಕ್ಕೆ ಹಣೆ ಮುಟ್ಟಿ ನಮಸ್ಕರಿಸಿ ಈ ನಿಮ್ಮ ಕ್ಷಮಾ ಗುಣದಿಂದ ನಾನು ಮತ್ತೆ ಮನುಷ್ಯನಾಗಿರುವೆ ಎಂದ. 
                    
ಇಂದಿನ ಯುಗದಲ್ಲಿ ಪ್ರತಿ ವ್ಯಕ್ತಿಯೂ ಇನ್ನೊಬ್ಬರ ತಪ್ಪುಗಳನ್ನು ಹುಡುಕಿ ಎತ್ತಿತೋರಿಸುವ ಕಾರ್ಯದಲ್ಲಿಯೇ ಮಗ್ನನಾಗಿರುತ್ತಾನೆ.

1) ಪರಿವಾರದಲ್ಲಿ ಅಣ್ಣ-ತಮ್ಮಂದಿರ, ಅಪ್ಪ-ಅಮ್ಮಂದಿರ, ಮಕ್ಕಳ, ಹೆಂಡತಿಯ ತಪ್ಪುಗಳು.
2) ಕೆಲಸದಲ್ಲಿ ಹಿರಿಯ ಅಧಿಕಾರಿಯ, ಸಹೋದ್ಯೋಗಿಯ ತಪ್ಪುಗಳು.
3) ಸಮಾಜದ, ಸರಕಾರಗಳ ತಪ್ಪುಗಳು.
4) ಮುಖ ಪುಸ್ತಕದಲ್ಲಂತೂ ಹಗಲು ರಾತ್ರಿ ಕೆಲವರ ಕೆಲಸವೇ ಇದು.

-- ಯಾರೋ ಒಬ್ಬ ತಿಳಿದೋ ತಿಳಿಯದೆಯೋ ತಪ್ಪು ಮಾಡಿದ್ದು ಗೊತ್ತಾದಲ್ಲಿ ಅವರನ್ನು ಕ್ಷಮಿಸಿಬಿಡಿ. ಅವನಿಗೆ ಅಥವಾ ಅವಳಿಗೆ ತನ್ನ ಆತ್ಮ ಗೌರವ (self-respect) ಉಳಿಸಿಕೊಳ್ಳಲು ಒಂದು ಅವಕಾಶ ಮಾಡಿಕೊಡಿ.

-- ತಪ್ಪಿತಸ್ಥ ಎಂದು ತಿಳಿದ ಮೇಲೂ ತನ್ನನ್ನು ತಾನು ಸುಧಾರಿಸಿಕೊಳ್ಳಲು ಒಂದು ಅವಕಾಶ ಕೊಟ್ಟು ಸುಮ್ಮನಾಗಿ ಬಿಡಿ. ಅವನು ಅಥವಾ ಅವಳು ಮುಖ ಮೇಲೆತ್ತಿ ಬದುಕಲು ಒಂದು ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ.

ಇಂದಿನ ಯುಗದ ತಪ್ಪು ಹುಡುಕುವವರ ಮಧ್ಯೆ "ಕ್ಷಮಿಸುವ ಒಳ್ಳೆಯ ಮನಸುಗಳು" ನಾವಾಗೋಣ.