February 14, 2010
ಸರ್ವ೦ ಶಿವಮಯ೦
ಅಧ್ಯಾತ್ಮ ಮತ್ತು ಮಾಧ್ಯಮ
ಮನುಷ್ಯನ ಪರಮೋಚ್ಛ ಗುರಿ ಎಂದರೆ ನೆಮ್ಮದಿಯಿಂದ ಇರುವುದು, ಸುಖವಾಗಿ ಬಾಳುವುದು, ಜೀವನದಲ್ಲಿ ಆದಷ್ಟು ಕಡಿಮೆ ದುಃಖ ಪಡುವುದು, ದುಃಖಕ್ಕೆ ಮಣಿಯದೆ ಅದನ್ನು ಎದುರಿಸುವ ಮನಸ್ಥಿತಿಯನ್ನ ತಳೆಯುವುದು. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ, ಈ ಸುಖ ದುಃಖ - ಎರಡನ್ನೂ ಆದಷ್ಟರ ಮಟ್ಟಿಗೆ ಸಮವಾಗಿ ಕಾಣುವುದು. ಸಾಧ್ಯವಾದರೆ "ದುಃಖಕ್ಕೆ ಏನು ಮೂಲ ಕಾರಣ?" - ಅಂತ ಹುಡುಕುವುದಕ್ಕೆ ಪ್ರಯತ್ನ ಪಡುವುದು. ಆ ದುಃಖದ ಮೂಲಕ್ಕೆ ತಾನು ವಶ ಆಗದೇ ಇರುವ ಹಾಗೆ, ಇರುವುದಕ್ಕೆ ಪ್ರಯತ್ನಪಡುವುದು. ಶಮ, ದಮ, ನಿಗ್ರಹ, ಸಹನೆ, ದಯೆ - ಇತ್ಯಾದಿಗಳ ನೆರವಿನಿಂದ ಬಾಳಿನಲ್ಲಿ ಶಾಂತಿಯನ್ನ ಪಡೆಯುವುದು. ಯಾವುದೇ ಕಾಲ ಇರಲಿ, ಯಾವುದೇ ದೇಶ ಇರಲಿ, ಯಾವುದೇ ಜನಾಂಗ ಇರಲಿ - ಹೆಚ್ಚು ಕಡಿಮೆ ಜಗತ್ತಿನ ಎಲ್ಲಾ ಕಡೆ, ಲಾಗಾಯ್ತಿನಿಂದ ಇಂದಿನವರೆಗೂ ಸಾಮಾನ್ಯವಾಗಿ ಎಲ್ಲರ ಜೀವನದ ಮುಖ್ಯ ಉದ್ದೇಶ ಇದೇ - ಅಂತ ಧೈರ್ಯವಾಗಿ ಹೇಳಬಹುದು.
ಲೌಕಿಕ ವ್ಯವಹಾರಕ್ಕೆ ನೇರವಾಗಿ ಸಂಬಂಧಪಡದ, ಭಾವನೆಗಳಿಗೆ ಯೋಚನೆಗಳಿಗೆ, ಚಿಂತನೆಗಳಿಗೆ ಏನಾದರೊಂದು ಹೆಸರಿಟ್ಟು, ಕರೆಯಬೇಕು ಎಂದರೆ - ನಮಗೆ ಥಟ್ಟನೆ ಹೊಳೆಯುವ ಒಂದು ಜನಪ್ರಿಯ ಪದ "ಅಧ್ಯಾತ್ಮ". ಈ ಪದಕ್ಕೆ ಏನೇನೋ ವಿಶೇಷ ಅರ್ಥಗಳ ಪ್ರಭಾವಲಯ ಹಮ್ಮಿ, ಹರಡಿಕೊಂಡಿದ್ದರೂ, ನಾನೀಗ ಹೇಳಿದ್ದು ಅದರ ಒಂದು ಸುಲಭ ಸರಳ ಅರ್ಥ. "ಅಧ್ಯಾತ್ಮ" ಅಂದರೆ ಏನು? ಅದು ಆತ್ಮನಿಗೆ ಸಂಬAಧಪಟ್ಟಿದ್ದು, ಆತ್ಮವನ್ನು ಕುರಿತದ್ದು - ಅಂತ. ಅಗೋಚರವಾದ ಯಾವುದೋ ಒಂದು ಶಕ್ತಿ ಈ ಇಡೀ ಪ್ರಪಂಚವನ್ನ ಮತ್ತು ನಮ್ಮನ್ನು ನಿಯಂತ್ರಿಸುತ್ತಿದೆಯಲ್ಲ, ಅದಕ್ಕೂ ನಮಗೂ ಇರೋ ಸಂಬAಧದ ಬಗ್ಗೆ ವಿಚಾರ ಮಾಡುವ ಚರ್ಚೆಗೆ ಸಂಬAಧಪಟ್ಟದ್ದು. ಈ ವಿಚಾರದಲ್ಲಿ ಬೇಕಾಗಿರೋ ತಿಳುವಳಿಕೆಗೆ ಸಂಬAಧಪಟ್ಟದ್ದು - ಹೀಗೆ ಈ ಅಧ್ಯಾತ್ಮ ಅನ್ನೋ ಪದಕ್ಕೆ ಇನ್ನೂ ಹೆಚ್ಚಿನ ಅರ್ಥವನ್ನ ಕೋಶಗಳು ಕೊಡುತ್ತವೆ. ಸಾಮಾನ್ಯರ ಬಾಯಲ್ಲಿ ಅಧ್ಯಾತ್ಮ ಅಂದರೆ ದೇವರು ದಿಂಡರ ಸಮಾಚಾರ ಅಂತ ಸಹ ಆಗಿ - ಹೋಗಿಬಿಡುವ ಅಪಾಯವೂ ಇದೆ. ಇರಲಿ, ಆತ್ಮಕ್ಕೆ ಸಂಬAಧಪಟ್ಟಿದ್ದು, ಜೀವಾತ್ಮ ಮತ್ತು ಪರಮಾತ್ಮ ಇವೆರಡರ ಸಂಬAಧ, ಆ ಪರಮಾತ್ಮನಲ್ಲಿ ನಾವು ಇಟ್ಟುಕೊಳ್ಳುವ ನಂಬಿಕೆ, ಗೌರವ, ಶ್ರದ್ಧೆ, ಭಕ್ತಿ, ಪೂಜೆ, ಆರಾಧನೆ, ತಪಸ್ಸು ಕೊನೆಗೆ ಎಲ್ಲದರಿಂದ ಬಿಡುಗಡೆ, ಮುಕ್ತಿ ಆ ಪರಮಾತ್ಮನ ಬಳಿಯೇ ಹೋಗಿ ಸೇರಿಬಿಡುವುದು, ಇಲ್ಲವೇ ಇನ್ನೂ ಕೆಲವರ ಪ್ರಕಾರ ಆ ಭಗವಂತನಲ್ಲಿಯೇ ಒಂದಾಗಿ ಬಿಡುವುದು - ಇತ್ಯಾದಿ ವಿಚಾರಗಳು ಇವೆಯಲ್ಲ, ಅವುಗಳ ಚಿಂತನ, ಮಂಥನ ಈ ಅಧ್ಯಾತ್ಮದ ಒಳ ತಿರುಳು.
ಇದು ಬಹಳ ಗಹನ, ಬಹಳ ಗೂಢ, ನಿಗೂಢ, "ಇನ್ನೇನು ತಿಳಿದುಹೋಯಿತು", "ಓಹೋ ತಿಳಿದುಹೋಯಿತು" - ಅನ್ನುವಷ್ಟು ಸುಲಭ. ಹಾಗೇನೇ, ಏನೂ ಗೊತ್ತಾಗುತ್ತಿಲ್ಲವಲ್ಲ ಅನ್ನುವ ಕೊರಗು, ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಯದೇ ಹೋಗುವಷ್ಟು ಜಟಿಲ, ಕ್ಲಿಷ್ಟ, ಮಾತಿಗೆ ಮೀರಿದ ಅಭಿವ್ಯಕ್ತಿಯ ಗಡಿಯಾಚೆ ಇರುವ ಅನುಭವಕ್ಕೆ ಸಂಬAಧಿಸಿದವು ಇಲ್ಲಿನ ಲಹರಿಗಳು.
ಅಧ್ಯಾತ್ಮ ಎಂಬುದರ ಕೇಂದ್ರಬಿಂದು ದೇವರು. "ದೇವರೆಂಬುದದೇನು ಕಗ್ಗತ್ತಲ ಗವಿಯೇ? ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ? ಜೀವ ಜಡರೂಪ ಪ್ರಪಂಚವನ್ ಆವುದೋ ಆವರಿಸಿಕೊಂಡುA ಒಳನೆರದುಂ ಇಹುದಂತೆ, ಭಾವಕೆ ಒಳಪಡದಂತೆ, ಅಳತೆಗೆ ಅಳವಡದಂತೆ! ಏನದು ವಿಶೇಷ? ಇಹುದೋ ಇಲ್ಲವೋ ತಿಳಿಯಗೊಡದ ಒಂದು ವಸ್ತು ನಿಜಮಹಿಮೆಯಿಂ ಜಗವಾಗಿ ಜೀವವೇಷದಲಿ ವಿಹರಿಪುದು; ಅದು ಒಳ್ಳಿತು ಎಂಬುದು ನಿಸದವಾದೊಡೆ, ಸತ್ಯವಾದೊಡೆ, ನಿಶ್ಚಯವಾದೊಡೆ" - ಆ ಗಹನತತ್ತ÷್ವವನ್ನ ಅದೆಷ್ಟೇ ಕಗ್ಗಂಟಾಗಿರಲಿ, ಬಿಡಿ ಬಿಡಿಸಿ ತಿಳಿದುಕೊಳ್ಳಲು ಪ್ರಯತ್ನ ಪಡುವುದೇ ಈ ಅಧ್ಯಾತ್ಮದ ಹೆಗ್ಗುರಿ.
**********************
ಇನ್ನೊಂದು ವಿಶಿಷ್ಟ ಹೆಸರನ್ನ ಇಲ್ಲಿ ಬಳಸತೊಡಗುತ್ತೇವೆ ಅದೇ ಅನುಭಾವ. ಅಧ್ಯಾತ್ಮದ ತುತ್ತತುದಿಯನ್ನ, ಎತ್ತರದ ಮೇರುಶಿಖರವನ್ನ ಏರಿದವರು ಈ ಅನುಭಾವಿಗಳು. ಶ್ರೀ ರಾಮಕೃಷ್ಣ ಪರಮಹಂಸರು ಅನುಭಾವಿಗಳ ಪರಂಪರೆಯಲ್ಲಿ ಬಹುಮುಖ್ಯರು. ಭಾರತದ, ಅಷ್ಟೇಕೆ ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ದಾರ್ಶನಿಕರ, ಅನುಭಾವಿಗಳ ಒಂದು ವಿಶಾಲ ತಾರಾನಿವಹವೇ ವಿಜೃಂಭಿಸುತ್ತಿದೆ. ಅಧ್ಯಾತ್ಮದ ಹಾದಿಯಲ್ಲಿ ಮುನ್ನಡೆದು, ತಾವು ಕ೦ಡುಕೊಂಡ ಬೆಳಕನ್ನ ದಾರಿಯುದ್ದಕ್ಕೂ ಚೆಲ್ಲುತ್ತ, ಆ ಜಾಡಿನಲ್ಲಿ ಸಾಗುತ್ತೇವೆನ್ನುವವರಿಗೆ ಕೈದೀವಿಗೆಯಾಗಿ ನಿಂತಿರುವವರು ಹಲವಾರು ಮಂದಿ ಮನುಕುಲೋದ್ಧಾರಕರು; ವ್ಯಾಸ, ವಾಲ್ಮೀಕಿಗಳಂಥ ಕವಿ ದಾರ್ಶನಿಕರು, ಬುದ್ಧ, ಯೇಸು, ಮೊಹಮ್ಮದ್ ಮೊದಲಾದ ಪ್ರವಾದಿಗಳು; ಬಸವ, ಅಲ್ಲಮ, ಮಹಾದೇವಿ ಅಕ್ಕ - ಮುಂತಾದ ಶಿವ ಶರಣ - ಶರಣೆಯರು; ಭಕ್ತಿ ಪಂಥದ ಲಲ್ಲ, ಮೀರಾ, ಆಂಡಾಳ್, ಕಬೀರ್ ಮೊದಲಾದ ಸಂತರು; ಪುರಂದರ, ಕನಕ ಮುಂತಾದ ದಾಸವರೇಣ್ಯರು - ಇವರೆಲ್ಲ ನಮ್ಮ ಕಣ್ಣಮುಂದೆ ಹಾದು ಹೋಗುತ್ತಾರೆ.
ಆ ನೋ ಭದ್ರಾಃ ಕ್ರತವೋ ಯನ್ತು ವಿಶ್ವತಃ ||’
ನಾವು ಕಿಟಕಿ ಬಾಗಿಲುಗಳನ್ನ ತೆರೆದಿಟ್ಟಿದ್ದೇವೆ; ಒಳ್ಳೆಯ ಬೆಳಕು ನಮಗೆ ವಿಶ್ವದ ಎಲ್ಲ ಕಡೆಯಿಂದ ಬರಲಿ!’
ಎಂಬುದು ನಮ್ಮ ಹಾರೈಕೆ.
ಇಲ್ಲದೆಲ್ಲದರಿಂದ ನಿಜವಾಗಿ ಇರುವೆಡೆಗೆ,
ಇರುಳು ಕಗ್ಗತ್ತಿಲಿನಿಂದ ಬೆಳ್ಳಿ ಬೆಳಕಿನ ಕಡೆಗೆ,
ಅಳಿವು ಮುಳಿವಿಂದ ಚಿರ ಇರವಿನ ಸುಳಿವೆಡೆಗೆ, ತಿಳಿವಿನೆಡೆಗೆ -
ಬಾ ನನ್ನ ಕೊಂಡೊಯ್ಯು, ಓ ಗುರುವೇ, ದೇವ! - ೧
ಎಂಬ ಶಾಂತಿ ಮಂತ್ರವನ್ನು ಜಪಿಸುವುದು ನಮ್ಮ ಪ್ರವೃತ್ತಿ. ಇರುವುದೊಂದೇ ದಾರಿ ವೈಕುಂಠಕೆ - "ನ ಅನ್ಯ ಪಂಥಾಃ ವಿದ್ಯತೇ ಅಯನಾಯ" - ೨. ಈ ಅಧ್ಯಾತ್ಮದ ಹಾದಿಯಲ್ಲಿ ನಾವು ಸಾಗೋಣ. "ಸ್ವಸ್ತಿ ಪಂಥಾA ಅನುಚರೇಮ ಸೂರ್ಯ ಚಂದ್ರಮಸೌ ಇವ | ಪುನರ್ ದದತಾ ಅಘ್ನತಾ ಜಾನತಾ ಸಂ ಗಮೇಮಹಿ" - ೩
**********************
ಈಗ ಮಾಧ್ಯಮದ ಕಡೆ ಸ್ವಲ್ಪ ವಿಚಾರ ಮಾಡೋಣ. ಈ ಆನಂದ, ಹರ್ಷ, ಉಲ್ಲಾಸ, ಸಂತೋಷ ಇತ್ಯಾದಿಗಳು ಇವೆಯಲ್ಲ ಇವೆಲ್ಲ ಅನುಭವಿಸಿ ತಿಳಿಯಬೇಕಾದ ಸುಖದ ಬೇರೆ ಬೇರೆ ರೂಪಗಳು ಅಷ್ಟೆ. ಮಾತಿನಲ್ಲಿ ಹೇಳುವುದಕ್ಕಾಗಲಿ, ಕೇಳಿ ತಿಳಿದುಕೊಳ್ಳುವುದಕ್ಕಾಗಲಿ, ಬರೆದು ಚಿತ್ರಿಸುವುದಕ್ಕಾಗಲಿ, ನೋಡಿ ಗ್ರಹಿಸುವುದಕ್ಕಾಗಲಿ ಸಾಧ್ಯವಾಗದ್ದು, ಅಳತೆಗೆ ಅಳವಡದ್ದು. ಆದರೂ ಇದಕ್ಕೆ ಸಂಬಂಧಿಸಿದ ಮುಖ್ಯ ಹೊರನೋಟಗಳನ್ನ ಸ್ವಲ್ಪ ಸೂಚಿಸಲು ಸಾಧ್ಯವಿದೆ. ತಾನು ಅರ್ಥಮಾಡಿಕೊಂಡುದನ್ನ, ತನಗೆ ತಿಳಿದುದನ್ನ, ತಾನು ಅನುಭವಿಸಿದುದನ್ನ ಕೇಳುಗರಿಗೆ ಅರ್ಥವಾಗುವ ರೀತಿಯಲ್ಲಿ ಮನದಟ್ಟು ಮಾಡುವ ರೀತಿಯಲ್ಲಿ ಸಮಯೋಚಿತವಾಗಿ ವ್ಯಕ್ತಪಡಿಸುವುದು ಒಂದು ಕಲೆ. ಇದೇ ಅಭಿವ್ಯಕ್ತಿ, ಇದೇ ಸಂವಹನ. ಇದೇ ಕಮ್ಯೂನಿಕೇಷನ್, ಇದೇ ಮಾಧ್ಯಮ.
ಬಹಳ ಬಹಳ ದಿನಗಳ ಹಿಂದೆ, ಯಜ್ಞ ಯಾಗಾದಿಗಳನ್ನ ನಡೆಸಿ ಮುಗಿಸಿದ ನಂತರ, ಅಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಅವರಲೊಬ್ಬ ಮಹರ್ಷಿಯೋ, ಪುರಾಣಿಕನೋ ಜನರನ್ನು ಉದ್ದೇಶಿಸಿ ಪ್ರವಚನ ಮಾಡುತ್ತಿದ್ದುದು ಉಂಟು. ಇದೇ ಬ್ರಹ್ಮೋದ್ಯ ಪದ್ಧತಿ ಬೇರೆ ಬೇರೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಕೊನೆಯಲ್ಲೂ ನಡೆಯುತ್ತಿತ್ತು. ಗುರುವನ್ನು ಅರಸಿ ಹೋಗುತ್ತಿದ್ದ ಶಿಷ್ಯವೃಂದಕ್ಕೆ ಗುರುಕುಲವಾಸದಲ್ಲಿ ಬೋಧನೆ ಅವ್ಯಾಹತವಾಗಿ ಸಾಗುತ್ತಿತ್ತು. ಎಷ್ಟೋ ಬಾರಿ ತಂದೆಯೇ ಮಗನಿಗೆ ಗುರುವಾಗಿದ್ದುಂಟು. ತಾನು ತಿಳಿದುಕೊಂಡಿದ್ದನೆಲ್ಲ ಗುರು ಶಿಷ್ಯನಿಗೆ ಧಾರೆಯೆರೆಯುತ್ತಿದ್ದರು. ಗುರುಶಿಷ್ಯರ ಸಂವಾದ ಉಪನಿಷತ್ತುಗಳಲ್ಲಿ ಹಲವೆಡೆ ಬರುತ್ತದೆ. ವೇದಗಳಲ್ಲೂ ಈ ರೀತಿ ಪರಸ್ಪರ ಸಂವಾದ ಮಾತುಕತೆ ಚರ್ಚೆಗಳ ನಿದರ್ಶನ ಹಲವೆಡೆ ಇವೆ. ಅಧ್ಯಾತ್ಮಕ್ಕೆ ಸಂಬAಧಪಟ್ಟ ವಿಚಾರಗಳು ಮೌಖಿಕವಾಗಿ ಹೀಗೆ ಬಾಯಿಂದ ಕಿವಿಗೆ ಹರಡುತ್ತಿದ್ದ ಆ ಶ್ರುತಿಗಳ ಕಾಲದಲ್ಲಿ ಈ ಮಾಧ್ಯಮ ಒಂದು ಶಿಸ್ತಿಗೆ ಒಳಪಟ್ಟಿತ್ತು. ಕೇಳಿದ್ದನ್ನು ಮನನ ಮಾಡಿಕೊಂಡು, ಬಾಯಿಪಾಠ ಮಾಡಿಕೊಂಡು, ಉಳಿಸಿಕೊಂಡು ಇನ್ನೊಬ್ಬರಿಗೆ ಹೇಳುವ ಈ ಪ್ರಕ್ರಿಯೆಯಲ್ಲಿ ಏನೂ ತಪ್ಪಾಗಬಾರದು ಎಂಬ ಕಾರಣಕ್ಕೆ ಪದಪಾಠ, ಘನಪಾಠ, ಜಠಪಾಠ, ಇತ್ಯಾದಿ ಮೂಲವನ್ನ ಬೇರೆ ಬೇರೆ ರೀತಿಯಲ್ಲಿ ಹೇಳುವ ಕ್ರಮಗಳನ್ನ ಬಳಕೆಗೆ ತಂದಿದ್ದರು. ಹೀಗಾಗಿ ಆ ಶ್ರುತಿಗಳ ಕಾಲಮಾನದಲ್ಲಿ ವೇದಗಳ ಜ್ಞಾನರಾಶಿ ಯಥಾವತ್ತಾಗಿ ನೆನ್ನೆಮೊನ್ನೆಯವರೆಗೂ ಉಳಿದು ಬರಲು ಸಾಧ್ಯವಾಯಿತು.
Pಚಿಡಿಣ ೧ | Pಚಿಡಿಣ ೨ |
ಜನವರಿ ೦೧, ೨೦೦೯ ರಂದು ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದಲ್ಲಿ "ವಿವೇಕಪ್ರಭ" ಪತ್ರಿಕೆಯ ದಶಮಾನೋತ್ಸವದ ಸಂದರ್ಭದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾಡಿದ ಉಪನ್ಯಾಸ
ಶಿಕಾರಿಪುರ ಹರಿಹರೇಶ್ವರ,
ನಂ. ೪, ೩ ನೇ ಮುಖ್ಯರಸ್ರೆ, ೫ ನೇ ಕ್ರಾಸ್,
ಸರಸ್ವತೀಪುರಂ, ಮೈಸೂರು - ೫೭೦ ೦೦೯
ದೂರವಾಣಿ: ೦೮೨೧ - ೨೫ ೪೪ ೮೪೧
"ಅಮೆರಿಕನ್ನಡ" ದ ಶಿಕಾರಿಪುರ ಹರಿಹರೇಶ್ವರ ಎಂದು ಸಾಹಿತ್ಯಾಭಿಮಾನಿಗಳಿಗೆ ಪರಿಚಿತರಾಗಿರುವ ಹರಿ ಅವರು ಅಮೆರಿಕಾದಲ್ಲಿ ಸುಮಾರು ಮೂವತ್ತು ವರುಷ ಕಾಲ ಇದ್ದು, ಕನ್ನಡದ ಕೆಲಸದಲ್ಲಿ ತೊಡಗಿದ್ದು, ಈಗ ಭಾರತಕ್ಕೆ ಮರಳಿ ಬಂದಿರುವವರು; ಕರ್ನಾಟಕ ಸರ್ಕಾರದ (೧೯೯೯ ರ) ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರು. ಅಮೆರಿಕಾದಲ್ಲಿ ಪ್ರಧಾನ ಸಂಪಾದಕರಾಗಿ ಸಾಹಿತ್ಯ ದ್ವೆöÊಮಾಸಿಕ ಪತ್ರಿಕೆ ಅಮೆರಿಕನ್ನಡವನ್ನು ನಡೆಸಿದವರು, ಅಲ್ಲಿನ ಕನ್ನಡಿಗರನ್ನು ಸಂಘಟಿಸಿದವರು. ಹ್ಯೂಸ್ಟನ್ ಟೆಕ್ಸಾಸ್‌ನ ಅಕ್ಕ - ವಿಶ್ವಕನ್ನಡ ಸಮ್ಮೇಳನ (೨೦೦೦) ರ ಸಮ್ಮೇಳನ ಸ್ಮರಣ ಸ೦ಚಿಕೆ, ಮತ್ತು ದರ್ಶನ ಉದ್ಗçಂಥ, ಚಿತ್ರಭಾನು (ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟ ಸಾಹಿತ್ಯ ವಾರ್ಷಿಕ - ೨೦೦೨); ತುರಾಯಿ (ಮಿಸ್ಸೌರಿ ಕನ್ನಡ ಸಂಘ "ಸಂಗಮ" ದ ಕನ್ನಡ ಸಮ್ಮೇಳನ ಸ್ಮರಣಸಂಚಿಕೆ - ೧೯೯೦); ತ್ರಿವೇಣಿ ವಾಹಿನಿ (ಡೆಲವೇರ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ ರಾಜ್ಯಗಳ ಕನ್ನಡ ಸಂಘ, ತ್ರಿವೇಣಿಯ ಮಾಸಿಕ ವಾರ್ತಾಪತ್ರ; ೧೯೮೧ - ೮೩) - ಮುಂತಾದವುಗಳ ಪ್ರಧಾನ ಸಂಪಾದಕರಾಗಿದ್ದವರು. ಭಾರತದಲ್ಲಿದ್ದುಕೊಂಡೇ ವಿದೇಶದ ಕನ್ನಡ ಸಂಘಗಳೊAದಿಗೆ ಸಂಪರ್ಕವಿಟ್ಟುಕೊAಡು ಅಲ್ಲಿನ ಕನ್ನಡಿಗರ ಸಾಹಿತ್ಯಾಸಕ್ತರಿಗೆ ನೆರವನ್ನೀಯುತ್ತಿರುವವರು. ಅಮೆರಿಕಾದ ಮತ್ತು ಕರ್ನಾಟಕದ ವಿವಿಧ ಕನ್ನಡಕೂಟಗಳಿಂದ, ಸಂಘಸAಸ್ಥೆಗಳ ಪ್ರಶಸ್ತಿಗಳಿಂದ ಪುರಸ್ಕöÈತರು. ವಿದೇಶದ ಮತ್ತು ಭಾರತದ ಸಾಹಿತ್ಯ ಪತ್ರಿಕೆಗಳಲ್ಲಿ, ಅ೦ತರ್‌ಜಾಲ ಪತ್ರಿಕೆಗಳಲ್ಲಿ ಸಂಶೋಧನಾತ್ಮಕ ವೈಚಾರಿಕ ಲೇಖನಗಳನ್ನು ಬರೆಯುತ್ತಿರುವವರು: ರಾಂಟ್‌ಜೆನ್ (೧೯೭೬) - ವೈಜ್ಞಾನಿಕ ಸಾಹಿತ್ಯ; ಮಾತಿನ ಮಂಟಪ (೨೦೦೨) ಮತ್ತು ಮಾತಿನ ಚಪ್ಪರ (೨೦೦೫) - ವೈಚಾರಿಕ ಸಂಶೋಧನಾ ಪ್ರಬಂಧ ಸಂಕಲನಗಳು; ಕನ್ನಡ ಉಳಿಸಿ ಬೆಳೆಸುವ ಬಗೆ (೨೦೦೫) - ವೈಚಾರಿಕ ಪ್ರಬಂಧ ಸಂಕಲನ; ವಿದೇಶಕ್ಕೆ ಬಂದವರು (೨೦೦೩, ೨೦೦೫) - ಕವನ ಸಂಕಲನ; ಕನ್ನಡದಲ್ಲಿ ಸತ್ಯನಾರಾಯಣ ಪೂಜೆ (೨೦೦೬) - ವೇದಮಂತ್ರಗಳ ಕನ್ನಡ ಪದ್ಯಾನುವಾದ ಮಂಜರಿ; ಗುಬ್ಬಚ್ಚಿ - ಒಂದು ಭಾಷಾ ವೈಜ್ಞಾನಿಕ ಅಧ್ಯಯನ (೨೦೦೮); ಬೈಬಲ್‌ನಲ್ಲಿ ಜಾನ್‌ನ ಸುವಾರ್ತೆ (೨೦೦೮) - ಒಂದು ತೌಲನಿಕ ಅಧ್ಯಯನ; ಸಂವಹನ ಕಾವ್ಯ - ೨೦೦೮ (ಮೈಸೂರು ಪ್ರದೇಶದ ಕವಿಗಳ ಪ್ರಾತಿನಿಧಿಕ ಕವನಸಂಕಲನ) - ಇವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು.